ADVERTISEMENT

ಗುರುವೇ ನಮಃ ಗುರುವೇನು ಮಹಾ!: ಅವರೆಲ್ಲ ಜನತೆಯ ಸಂತರು

ರಹಮತ್ ತರೀಕೆರೆ
Published 20 ಮಾರ್ಚ್ 2021, 19:31 IST
Last Updated 20 ಮಾರ್ಚ್ 2021, 19:31 IST
ಸಿದ್ಧಾರೂಢರು, ಶಿಶುನಾಳರು, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗಪ್ಪ ಅವರು ಒಟ್ಟಿಗೆ ಕೂತಿರುವ ಚಿತ್ರಪಟ
ಸಿದ್ಧಾರೂಢರು, ಶಿಶುನಾಳರು, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗಪ್ಪ ಅವರು ಒಟ್ಟಿಗೆ ಕೂತಿರುವ ಚಿತ್ರಪಟ   

ಜನರೆದೆಯಲ್ಲಿ ಅಕ್ಷರದ ಬೀಜ ಬಿತ್ತುತ್ತಾ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಮಠಗಳು ಈಗ ಜಾತಿಯ ವಿಷಬೀಜಕ್ಕೆ ನೀರೆರೆಯುತ್ತಿವೆ. ರಾಜಕಾರಣದ ಕೇಂದ್ರಗಳಾಗಿರುವ ಮಠಗಳ ನೈತಿಕತೆ ದಿವಾಳಿ ಎದ್ದಿದೆ. ಇದಕ್ಕೆಲ್ಲ ಯಾರು ಹೊಣೆ? ಜನರೇ? ರಾಜಕಾರಣಿಗಳೇ? ಮಠದ ಸ್ವಾಮಿಗಳೇ?

ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ
ತಾನಂಗೈಲಿ ಪ್ರಾಣಗಳ ಹಿಡಿಯಬೇಕು.
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು
-ಬೇಂದ್ರೆ

ಸಮಾಜಗಳು ಗೊಂದಲ-ಬಿಕ್ಕಟ್ಟುಗಳಲ್ಲಿ ಹಾಯುವಾಗ ಪರಿಹಾರಕ್ಕಾಗಿ ಹಲವು ಹೊರದಾರಿಗಳನ್ನೂ ತಡಕಾಡುತ್ತಿರುತ್ತವೆ. ಅದರಲ್ಲೂ ವಿನಾಶಕಾರಿ ಯುದ್ಧಗಳ ಹೊತ್ತಲ್ಲಿ, ಮತಧರ್ಮ ಭಾಷೆಗಳು ಜನರನ್ನು ಸೀಳುವಾಗ, ಪ್ರಭುತ್ವಗಳು ಸರ್ವಾಧಿಕಾರದತ್ತ ಚಲಿಸುವಾಗ, ಧರ್ಮಗಳು ಅಧಃಪತನಗೊಂಡಾಗ, ಆರ್ಥಿಕ ಅಸಮಾನತೆ ಅತಿಯಾಗಿದ್ದಾಗ, ಇಂತಹ ತಡಕಾಟ ತೀವ್ರವಾಗುತ್ತದೆ. ಆಗ ನೊಂದವರ ಪರವಾಗಿ ನಿಲ್ಲಬಲ್ಲ, ಎಲ್ಲರನ್ನೂ ಒಳಗೊಂಡು ನಾಡನ್ನು ಕಟ್ಟಬಲ್ಲ, ಕಹಿಯಾದ ಸತ್ಯವನ್ನು ಹಿಂಜರಿಯದೆ ಹೇಳಬಲ್ಲ, ಅಧಿಕಾರಸ್ಥರ ಜತೆ ನಿಷ್ಠುರ ಕಟ್ಟಿಕೊಳ್ಳಬಲ್ಲ ದನಿಗಳು ಹುಟ್ಟಿಕೊಳ್ಳುತ್ತವೆ. ಸಮಾಜಗಳು ಒಂದೇ ಸತ್ಯದತ್ತ ಮುಖ ಮಾಡಿದ್ದಾಗ, ಭಿನ್ನಸತ್ಯದ ಕಡೆ ಮುಖ ಮಾಡಿಸಬಲ್ಲ ವ್ಯಕ್ತಿತ್ವ ಅಥವಾ ತತ್ವಗಳು ಸೃಷ್ಟಿಯಾಗುತ್ತವೆ. ಹೀಗೆ ಭಿನ್ನಮತೀಯ ಸತ್ಯ ದಿಟ್ಟವಾಗಿ ಹೇಳುವ ಪರಂಪರೆಯನ್ನು ಆರಂಭಿಸಿದ್ದು ಬುದ್ಧಗುರು. ಅವನ ಜಾಡಿನಲ್ಲಿ ಗೋರಖನಾಥ, ಅಲ್ಲಮ, ತುಕಾರಾಮ್, ಕಬೀರ, ಲಲ್ಲಾದೇವಿ, ಸೂಫಿ ಸರ್ಮದ್, ಕಡಕೋಳ ಮಡಿವಾಳಪ್ಪ, ಕೈವಾರ ನಾರೇಯಣ, ಬಿಜಾಪುರದ ಅಮೀನುದ್ದೀನ್ ಚಿಸ್ತಿ, ಸಿದ್ಧಾರೂಢರು, ರಾಮಕೃಷ್ಣ ಪರಮಹಂಸ, ಗುಡೇಕಲ್ ಅಲ್ಲಿಪೀರಾ, ಮುಕಂದೂರುಸ್ವಾಮಿ, ಸಾಲಗುಂದಿ ಗುರುಪೀರಾ ಖಾದ್ರಿ, ಹಂಪಿಯ ಸದಾಶಿವಯೋಗಿ-ಮುಂತಾದ ಗುರುಗಳು ಬಂದರು. ಭಾರತದಲ್ಲಿ ಈ ಗುರು ಪರಂಪರೆಯು ಸಮಾಜದ ಅಂತಃಸಾಕ್ಷಿಯನ್ನು ತನ್ನದೇ ಪರಿಯಲ್ಲಿ ಜೀವಂತವಾಗಿರಿಸುವ ಕೆಲಸವನ್ನು ಉದ್ದಕ್ಕೂ ನಿಭಾಯಿಸಿಕೊಂಡು ಬಂದಿದೆ.

ADVERTISEMENT

ಸಾಮಾನ್ಯವಾಗಿ ನಾವು ನಮ್ಮ ವೈಚಾರಿಕ ಪ್ರಜ್ಞೆಯ ಪರಂಪರೆಯನ್ನು ಕಟ್ಟಿಕೊಳ್ಳುವಾಗ ಮೂರು ಮೂಲಗಳಿಗೆ ಹೋಗುತ್ತೇವೆ. ಒಂದು- ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದ ಆಧುನಿಕ ಸಿದ್ಧಾಂತಿಗಳ ಚಿಂತನೆ ಮತ್ತು ಕ್ರಿಯಾಶೀಲತೆಗಳು. ಎರಡು- ಪಶ್ಚಿಮದಿಂದ ಬಂದ ಆಧುನಿಕತೆ, ಆಧುನಿಕ ಶಿಕ್ಷಣ, ವಿಚಾರವಾದ, ವಿಜ್ಞಾನ, ತಂತ್ರಜ್ಞಾನಗಳು. ಮೂರು- ಟ್ಯಾಗೋರ್, ಕುವೆಂಪು, ಕಾರಂತ, ತೇಜಸ್ವಿ, ಲಂಕೇಶ್ ಮುಂತಾದ ಆಧುನಿಕ ಲೇಖಕರು. ಆದರೆ ದಾರ್ಶನಿಕರೂ ಅನುಭಾವಿಗಳೂ ಆಧ್ಯಾತ್ಮಿಕ ಚಿಂತಕರೂ ಇರುವ ಸ್ಥಳೀಯ ಗುರುಪರಂಪರೆಯತ್ತ ಅಷ್ಟಾಗಿ ಹೋಗುವುದಿಲ್ಲ. ವಾಸ್ತವವಾಗಿ ಈ ಗುರುಪರಂಪರೆಯು ಆಧುನಿಕ ಶಿಕ್ಷಣ, ಚಳವಳಿ, ಸಿದ್ಧಾಂತಗಳ ನಿಲುಕಿನಾಚೆಗಿರುವ ವಿಶಾಲ ಸಮುದಾಯಗಳ ವೈಚಾರಿಕತೆಯ ಬುನಾದಿಯಾಗಿದೆ.

ಇಲ್ಲಿ ಗುರುಗಳು ಎಂದರೆ ಜಾತಿ ಹಿತಾಸಕ್ತಿಗಾಗಿ ತುಡಿವ, ಆಳುವ ಪ್ರಭುತ್ವದ ಭಾಗವಾಗುವ, ಉಳ್ಳವರ ನೆಮ್ಮದಿಗಾಗಿ ತವಕಿಸುವ ಧಾರ್ಮಿಕ ನಾಯಕರಲ್ಲ; ಧ್ಯಾನ, ಸಾಧನೆ, ಜ್ಞಾನಾರ್ಜನೆ ಮತ್ತು ಸಮಾಜ ಸುಧಾರಣೆಗಳ ನೆಲೆಯಲ್ಲಿ ಸಾಮಾನ್ಯ ಜನರ ಭಾಗವಾಗಿದ್ದ ಬೀದಿಸಂತರು. ನೆಮ್ಮದಿಯ ಸಮಾಜ ಕಟ್ಟುವ ಆಶಯವುಳ್ಳ ಇವರು ಜಾತಿ ಉಪಜಾತಿ ಮತಧರ್ಮಗಳಿಗೆ ಸೀಮಿತಗೊಂಡವರಲ್ಲ; ಸಾಂಸ್ಥಿಕ ಧರ್ಮಗಳಿಗೂ ಸೇರಿದವರಲ್ಲ; ವಿಶ್ವಮಾನವ ತತ್ವದವರು. ಇವರ ದಾರ್ಶನಿಕ ತತ್ವಗಳು ಸಾಂಸ್ಥಿಕ ಧರ್ಮಗಳ ಎದುರಾಳಿತನದಲ್ಲೇ ರೂಪುಗೊಂಡವು. ಸಾಂಸ್ಥಿಕ ಧರ್ಮಗಳು ತಮ್ಮ ಆಧ್ಯಾತ್ಮಿಕ ಆಯಾಮ ಕಳೆದುಕೊಂಡಾಗ, ಆಳುವವರ ಕಾಲೊರಸೊ ಕರವಸ್ತ್ರಗಳೊ ಆಗಿಬಿಡುತ್ತವೆ. ಆಗ ಅವುಗಳ ಭಾಗವಾಗಿರುವ ದರ್ಶನಗಳೂ ಸಂಕುಚಿತಗೊಳ್ಳುತ್ತವೆ. ಪ್ರಭುತ್ವಗಳು ಸಮತೋಲನ ಕಳೆದುಕೊಂಡಾಗ ಧರ್ಮ ಮತ್ತು ದರ್ಶನಗಳು ತಮ್ಮಲ್ಲಿರುವ ಸಾತ್ವಿಕ ಕಸುವಿನಿಂದ ಅದನ್ನು ತಿದ್ದಬೇಕು. ಆದರೆ ಈ ಇವು ಸ್ವತಃ ಅಧಿಕಾರಸ್ಥ ರಾಜಕಾರಣದ ಪಂಕದಲ್ಲಿ ಸಿಲುಕಿರುತ್ತವೆ.

ಇಂತಹ ಸನ್ನಿವೇಶದಲ್ಲೆಲ್ಲ ಜನತೆಯ ಸಂತರು, ತಮ್ಮ ದಾರ್ಶನಿಕ ತತ್ವಗಳನ್ನು ಕಾದುಕೊಂಡಿದ್ದಾರೆ; ದೀಕ್ಷೆ, ಸಾಧನೆ ಮತ್ತು ಜ್ಞಾನಗಳು ಮತಧರ್ಮದ ಶುಷ್ಕ ಆಚರಣೆಗಳಾಗದಂತೆ ಎಚ್ಚರವಹಿಸಿ, ಅವು ತಿಳಿವನ್ನರಸಿ ಬರುವ ಎಲ್ಲರಿಗೂ ದಕ್ಕುವಂತೆ ಮುಕ್ತವಾಗಿಡಲು ಯತ್ನಿಸಿದ್ದಾರೆ. ಅವರ ಈ ಜಾತ್ಯತೀತ ನಿಲುವೇ ಸಾಂಸ್ಥಿಕ ಧರ್ಮಗಳನ್ನು ಮತ್ತು ಅಲ್ಲಿರುವ ಯಾಂತ್ರಿಕ ಕಂದಾಚಾರಗಳನ್ನು ತೀಕ್ಷ್ಣವಾಗಿ ವಿಮರ್ಶಿಸಲು ಕಸುವನ್ನು ಒದಗಿಸಿದೆ.

ಧರ್ಮಗಳ ನಡುವಣ ದ್ವೇಷಾಸೂಯೆಗಳನ್ನು ವ್ಯರ್ಥವೆಂದು ಹೇಳುವ ಎಚ್ಚರ ಕೊಟ್ಟಿತು. ದೀಕ್ಷೆ, ಸಾಧನೆ, ಜ್ಞಾನಗಳ ಅಧಿಕಾರವು ಎಲ್ಲ ಮನುಷ್ಯರಿಗೂ ಇದೆಯೆಂದು ಘೋಷಿಸಿದ ಕೂಡಲೇ ಮೊದಲು ನಿರಾಕರಣೆಗೊಳ್ಳುವುದು ಜಾತಿ, ವರ್ಗ ಹಾಗೂ ಧರ್ಮದ ತರತಮಗಳು. ಎಂತಲೇ ಈ ಜನತೆಯ ಸಂತರಿಗೆ ಎಲ್ಲ ಜಾತಿ ಮತ ವರ್ಗಗಳಿಂದ ಬಂದ ಶಿಷ್ಯರಿದ್ದಾರೆ. ಈ ಒಳಗೊಳ್ಳುವ ತತ್ವದ ಇನ್ನೊಂದು ಮುಖವೇ ನಿರ್ದಿಷ್ಟ ಜಾತಿಯವರು ಮಾತ್ರ ಜ್ಞಾನದ ಮೇಲೆ ಹಕ್ಕು ಸ್ಥಾಪನೆ ಮಾಡುವುದನ್ನು ಒಪ್ಪದಿರುವುದು. ಸಿದ್ಧಾರೂಢರು ಉಪನಿಷತ್ತುಗಳ ವ್ಯಾಖ್ಯಾನಕ್ಕೆ ಎಲ್ಲ ಜಾತಿಯವರಿಗೂ ಅಧಿಕಾರವುಂಟು ಎಂದು ಪ್ರತಿಪಾದಿಸುವ ಪ್ರಸಂಗಗಳನ್ನು ಗಮನಿಸಬೇಕು. ಜಾತಿಮತಗಳಿಂದ ಜನರನ್ನೂ ಅರಿವನ್ನೂ ಒಟ್ಟಿಗೆ ಬಿಡುಗಡೆಗೊಳಿಸುವ ಉಪಕ್ರಮವಿದು. ಈ ಹಿನ್ನೆಲೆಯಲ್ಲಿ ಕೆಲವು ಮಠಗಳು ದಲಿತರನ್ನು ಉತ್ತರಾಧಿಕಾರಿಯಾಗಿ ಪಡೆದುಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬೇಕು.

ಪ್ರಭುತ್ವದ ಜತೆ ಸಂತರು ಇರಿಸಿಕೊಳ್ಳುವ ನಂಟುಗಳು ಯಾವಾಗಲೂ ನಿರ್ಣಾಯಕ. ದೊರೆತನದೊಟ್ಟಿಗೆ ಅದು ತಬ್ಬಲಿಗಳ ಪರವಾಗಿದ್ದಾಗ ಅದರೊಟ್ಟಿಗೆ ನಿಲ್ಲುವುದಕ್ಕೂ, ದಮನಕಾರಿಯಾಗಿದ್ದಾಗ ನಿಲ್ಲುವುದಕ್ಕೂ ಫರಕಿದೆ. ಪ್ರಭುತ್ವ ಪ್ರಜಾಪೀಡಕವಾಗಿದ್ದಾಗ ರಾಜಗುರು ಆಗುವುದೆಂದರೆ, ಅದರ ದೌಷ್ಟ್ಯದ ಹೊಣೆಯನ್ನು ತಾನೂ ಹೊತ್ತುಕೊಳ್ಳುವುದೇ ಆಗಿದೆ. ಪ್ರಭುತ್ವದ ಭಾಗವಾಗುವ ಧರ್ಮ ಮತ್ತು ದರ್ಶನಗಳಿಗೆ ಮಲಿನಗೊಳ್ಳುವ ಸಾಧ್ಯತೆ ಹೆಚ್ಚು. ಅನೇಕ ಸಂತರು ಪ್ರಭುತ್ವ ಕೊಡಮಾಡುವ ಪದವಿ ಮತ್ತು ದತ್ತಿದಾನಗಳನ್ನು ನಿರಾಕರಿಸಿದ್ದನ್ನು ಇಲ್ಲಿ ಕಾಣಿಸಬೇಕು.

ಬಾಲಲೀಲಾ ಮಹಾಂತಯೋಗಿಗಳು, ಸಿದ್ಧೇಶ್ವರ ಸ್ವಾಮಿಗಳು ಇಂತಹವರು. ಆದಿಲಶಾಹಿ ಆಳ್ವಿಕೆಯಲ್ಲಿ ಕೆಲವು ಸೂಫಿಗಳು ರಾಜಗುರುಗಳಾಗಿ ಮೆರೆಯುತ್ತಿರುವಾಗ, ಪ್ರಭುತ್ವದ ಸಹವಾಸವೇ ಬೇಡವೆಂದು ಅರಮನೆಯಿಂದ ದೂರ ಉಳಿದವರಲ್ಲಿ ಅಮೀನುದ್ದೀನ್ ಚಿಸ್ತಿ ಒಬ್ಬರು. ಬಹಮನಿಗಳ ಕಾಲದಲ್ಲಿ ಜ್ಯಾನುದ್ದೀನ್ ಚಿಸ್ತಿ, ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವವರೆಗೆ ಆಸ್ಥಾನಕ್ಕೆ ಬರುವುದಿಲ್ಲ ಎಂದು ಸುಲ್ತಾನನ ಆಹ್ವಾನವನ್ನು ತಿರಸ್ಕರಿಸುವುದುಂಟು. ಜಿಡ್ಡು ಕೃಷ್ಣಮೂರ್ತಿಯವರು ಕೂಡ ತಮ್ಮ ನಿಷ್ಠುರವಾದ ತಾತ್ವಿಕ ಭಿನ್ನಮತಗಳನ್ನು ಪ್ರಧಾನಿ ನೆಹರೂ ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಜನತೆಯ ಸಂತರು, ತಮ್ಮನ್ನು ವೈಯಕ್ತಿಕ ವಿಮೋಚನೆಯ ಧ್ಯಾನ ಸಾಧನೆಗಳಿಗೆ ಸೀಮಿತ ಮಾಡಿಕೊಂಡವರಲ್ಲ. ಜರೂರಿ ಬಿದ್ದಾಗ ಸಾರ್ವಜನಿಕ ಆಂದೋಲನಗಳಲ್ಲೂ ಧುಮುಕಿದವರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸೂಫಿಗಳನ್ನು ಒಳಗೊಂಡಂತೆ ಭಾರತದ ಅನೇಕ ಸಂತರು ಭಾಗವಹಿಸಿದರು. ಕರ್ನಾಟಕದ ಏಕೀಕರಣ, ಧಾರ್ಮಿಕ ಸಾಮರಸ್ಯದ ಹೋರಾಟ, ಭಾಷಾ ಚಳವಳಿಗಳಲ್ಲಿ ಕೂಡ, ಅನೇಕ ಗುರುಮಠಗಳು ಪಾಲುಗೊಂಡವು. ಗಾಂಧಿಯವರಿಂದ ಗಾಢವಾಗಿ ಪ್ರಭಾವಿತರಾಗಿದ್ದ ಇಂಚಗೇರಿ ಪರಂಪರೆಯ ಮುರಗೋಡ ಮಹದೇವಪ್ಪನವರು ಎಷ್ಟೋ ವರ್ಷ ಸೆರೆವಾಸ ಅನುಭವಿಸಿದರು. ದಲಿತರಿಗೆ ಭೂಮಿ ದೊರಕಿಸಲು ಭೂಮಾಲೀಕರ ಎದುರು ನಿಂತರು. ನಮ್ಮ ತಲೆಮಾರು ಕಂಡಂತೆ, ಗದುಗಿನ ತೋಂಟದಾರ್ಯರು ಕನ್ನಡಪರ, ಕೋಮುಸಾಮರಸ್ಯ ಹಾಗೂ ಪೋಸ್ಕೊ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಿದರು. ಪ್ರಜಾಪ್ರಭುತ್ವವು ಕಾಲಕಾಲಕ್ಕೆ ನಡೆಯುವ ಚುನಾವಣೆಗಳಿಂದಲ್ಲ, ಪ್ರಜೆಗಳ ಸಾತ್ವಿಕ ಪ್ರತಿರೋಧದಿಂದ ರೂಪುಗೊಳ್ಳುತ್ತದೆ. ಜನರು ಮಾಡುವ ನ್ಯಾಯಬದ್ಧ ಹೋರಾಟಗಳಿಗೆ ಆಧ್ಯಾತ್ಮಿಕ ಗುರುಗಳು-ಧಾರ್ಮಿಕ ನಾಯಕರು, ತಮ್ಮ ದನಿಗಳನ್ನು ಜೋಡಿಸಿರುವರು.

ಭಾರತದ ವಿಶಿಷ್ಟತೆ ಇರುವುದೇ ಹಲವು ವಿಚಾರಧಾರೆ ಧರ್ಮ ಭಾಷೆ ಹಾಗೂ ಸಂಸ್ಕೃತಿಗಳನ್ನು ಇಟ್ಟುಕೊಂಡು ಬದುಕುತ್ತಿರುವುದರಲ್ಲಿ. ಈ ವೈವಿಧ್ಯವೇ ವಿವೇಕದ ನಿಭಾವಣೆಯಿಲ್ಲದೆ ಆತ್ಮಘಾತುಕ ಘರ್ಷಣೆಗಳಿಗೂ ಕಾರಣವಾಗುತ್ತ ಬಂದಿದೆ. ಇಂತಹ ತಿಕ್ಕಾಟಗಳು ಏರ್ಪಟ್ಟಾಗ ‘ಪರವಿಚಾರಮುಮಂ ಧರ್ಮಮುಮಂ’ ಸಹಿಸುವ ನೀತಿ ಅನುಸರಿಸಬೇಕೆಂದು‘ಕವಿರಾಜಮಾರ್ಗ’ವು ಶತಮಾನಗಳ ಹಿಂದೆಯೇ ಷರಾ ಬರೆದಿದೆ. ವಿಭಿನ್ನ ಧರ್ಮ ಮತ್ತು ದಾರ್ಶನಿಕ ಧಾರೆಗಳು ತಮ್ಮ ಭಿನ್ನಮತಗಳ ಜತೆ ಪರಸ್ಪರ ಸಂವಾದಿಸುವ ಮತ್ತು ಕಲಿವ ಗುಣ ಮಹತ್ವದ್ದು. ಈ ಗುಣವು ಮೂಲಭೂತವಾದದ ಸೋಂಕಿನ ಮತ್ತು ರಾಜಕೀಯಕರಣಗೊಂಡ ಸಾಂಸ್ಥಿಕ ಧರ್ಮಗಳಲ್ಲಿ ಕಡಿಮೆ. ಈ ಹಿನ್ನೆಲೆಯಲ್ಲಿ ವಿಭಿನ್ನ ದಾರ್ಶನಿಕ ಹಿನ್ನೆಲೆಯಿಂದ ಬಂದ ಸಿದ್ಧಾರೂಢರೂ, ಶಿಶುನಾಳರೂ ಗರಗದ ಮಡಿವಾಳಪ್ಪನವರೂ ನವಲಗುಂದದ ನಾಗಲಿಂಗಪ್ಪನವರೂ ಒಟ್ಟಿಗೆ ಕೂತಿರುವ ಜನಪ್ರಿಯ ಚಿತ್ರಪಟವು ಒಂದು ಪ್ರತೀಕದಂತೆ ತೋರುತ್ತದೆ. ಸೂಫಿಗಳು ಹಾಗೂ ರಮಣ ಮಹರ್ಷಿಗಳು ‘ಅನ್ಯವೆಂಬುದು ವಾಸ್ತವದಲ್ಲಿ ಇಲ್ಲ, ಇದ್ದರೆ ಅದು ನಮ್ಮ ಸೃಷ್ಟಿ’ ಎನ್ನುತ್ತಿದ್ದರು. ಇದೇ ತತ್ವವು ‘ತನ್ನಂತೆ ಸರ್ವಜೀವರ ಮನ್ನಿಸಿ ಮೂಕಾದ ಬಳಿಕ ಇನ್ನೇನಿನ್ನೇನೂ’ ಎಂಬ ಕಡಕೋಳದ ಮಡಿವಾಳಪ್ಪನವರ ಹೇಳಿಕೆಯು ಪ್ರತಿಫಲಿಸುತ್ತದೆ. ಆಧ್ಯಾತ್ಮಿಕ ಸಾಧನೆಯಲ್ಲಿ ವಿಶಿಷ್ಟ ಅರ್ಥವುಳ್ಳ ಈ ಹೇಳಿಕೆಗೆ, ಭಾರತದಲ್ಲಿ ಧರ್ಮ ಜಾತಿ ಭಾಷೆಯ ಹೆಸರಲ್ಲಿ ಅನ್ಯವನ್ನು ಸೃಷ್ಟಿಸಿಕೊಳ್ಳುವುದು ತಪ್ಪೆಂಬ ಸಾಮಾಜಿಕ ದನಿಯೂ ಇದೆ. ಸಾಂಪ್ರದಾಯಿಕ ಮತಧರ್ಮಗಳ ಸಮಸ್ಯೆಯೆಂದರೆ, ಅನ್ಯವನ್ನು ವ್ಯಾಖ್ಯಾನಿಸುವ ಮೂಲಕವೇ ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು. ಈ ನತದೃಷ್ಟ ವಿಧಾನವು ಜನರನ್ನು ವಿಂಗಡಿಸುವ ದೂರೀಕರಿಸುವ ಮತ್ತು ದ್ವೇಷಿಸುವ ಮನೋಧರ್ಮಕ್ಕೆ ಪೀಠಿಕೆ ಹಾಕುತ್ತದೆ. ಒಂದು ವ್ಯವಸ್ಥಿತ ಸಿದ್ಧಾಂತವಾಗಿ ರಾಜಕಾರಣವನ್ನು ಪ್ರವೇಶಿಸುತ್ತದೆ. ಇದರ ಫಲವಾಗಿ ಸಮಾಜಗಳು ರಣಭೂಮಿಗಳಾಗುತ್ತವೆ. ದೇಶ ಹಿಂದುಳಿಯುತ್ತದೆ.

ಚರಿತ್ರೆಯಲ್ಲಿ ಅರಿವು, ಪ್ರೀತಿ, ಮೈತ್ರಿ, ಆಹಾರ, ನೀರು, ಸೂರು, ಸಂಪತ್ತುಗಳನ್ನು ಎಲ್ಲರ ಜತೆ ಹಂಚಿಕೊಂಡು ಬದುಕುವ ತತ್ವವನ್ನು ಸಮಾಜದಲ್ಲಿ ನೆಲೆಗೊಳಿಸುವ ಕೆಲಸವನ್ನು ಕೇವಲ ಜನತೆಯ ಗುರುಪರಂಪರೆಗಳು ಮಾಡಲಿಲ್ಲ. ರಾಜಕಾರಣ, ಚಳವಳಿ, ಸಮಾಜಸುಧಾರಣೆ ಹಾಗೂ ಕಲೆಯ ಕ್ಷೇತ್ರಗಳಲ್ಲಿ ಮೂಡಿದ ಇತರೆ ಧೀಮಂತರೂ ಕೈಗೊಂಡರು. ಪ್ರಭುತ್ವಕ್ಕೆ ನಿಷ್ಠುರ ಸತ್ಯಗಳನ್ನು ಹೇಳಬಲ್ಲವರಾಗಿದ್ದ ಗಾಂಧಿ ಮೂಲತಃ ರಾಜಕೀಯ ಕಾರ್ಯಕರ್ತರಾಗಿದ್ದರು. ಸಮಾಜಕ್ಕೆ ಉರಿಯ ನಾಲಗೆಯಿಂದ ಕಹಿಸತ್ಯ ಹೇಳಬಲ್ಲವರಾಗಿದ್ದ ಅಂಬೇಡ್ಕರ್, ಚಳವಳಿಗಾರ ಮತ್ತು ಪ್ರಖರ ವಿದ್ವಾಂಸ ಆಗಿದ್ದರು. ಇಂಗ್ಲೆಂಡಿನ ಪದವೀಧರರೂ ವಕೀಲರೂ ಆಗಿದ್ದ ಗಾಂಧಿ, ತಮ್ಮ ಜೀವಿತ ಕಾಲದಲ್ಲಿ ‘ಸಬರಮತಿಯ ಸಂತ’ರಾಗಿ ರೂಪಾಂತರಗೊಂಡರು. ಅಮೆರಿಕ-ಇಂಗ್ಲೆಂಡುಗಳಲ್ಲಿ ಅಭ್ಯಾಸ ಮಾಡಿದ್ದ ಅಂಬೇಡ್ಕರ್, ಧಮ್ಮದೀಕ್ಷೆ ಪಡೆದ ಬಳಿಕ ಸ್ವತಃ ಭಿಕ್ಷುವಾದರು. ಇವರಂತೆಯೇ, ದಲಿತರ ಏಳಿಗೆಗಾಗಿ ತನ್ನ ಜಾತ್ಯಸ್ಥರಿಂದ ಬಹಿಷ್ಕಾರಕ್ಕೆ ಒಳಗಾದ ಕುದ್ಮುಲ್ ರಂಗರಾಯರು; ಅಪಮಾನಿತ ಸಮುದಾಯವನ್ನು ಆಧ್ಯಾತ್ಮಿಕ ಮತ್ತು ಸಮಾಜಸುಧಾರಣೆಯ ಪಥದಲ್ಲಿ ಕರೆದುಕೊಂಡು ಹೋದ ನಾರಾಯಣ ಗುರುಗಳು ನಮ್ಮ ಕಾಲದ ಜನತೆಯ ಸಂತರು.

ಜನತೆಯ ಸಂತರ ಲಕ್ಷಣವೆಂದರೆ, ಸಮಾಜವು ಕಷ್ಟದಲ್ಲಿ ಗೊಂದಲದಲ್ಲಿ ಸಿಲುಕಿಕೊಂಡಾಗ ತಳಮಳಿಸುವುದು. ಜನರನ್ನು ಅರ್ಥಪೂರ್ಣ ಪ್ರತಿರೋಧಕ್ಕೆ ಪ್ರೇರಿಸುವುದು. ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರು ಸದನದಲ್ಲಿ ಮಾಡಿರುವ ಭಾಷಣಗಳು, ರಾಜಕೀಯ ಪ್ರಜ್ಞೆಯ ಸಂತನ ವಾಣಿಗಳಂತೆ ತೋರುತ್ತವೆ. ಅವರನ್ನು ಕುರಿತ ಅಡಿಗರ ಕವನದ ಹೆಸರು ‘ಶಾಂತವೇರಿಯ ಅಶಾಂತಸಂತ’ ಎಂದಿರುವುದು ಮಾರ್ಮಿಕ. ಸಾರ್ವಜನಿಕ ಪಾರ್ಕುಗಳನ್ನು ಸೈಟುಗಳಾಗಿ ಮಾಡಬೇಕೆಂದು ಪ್ರಸ್ತಾವವನ್ನು ತಂದ ತಮ್ಮ ಸಹೋದ್ಯೋಗಿಗೆ, ತಾಳ್ಮೆ ಕಳೆದುಕೊಂಡ ದೇವರಾಜ ಅರಸರು ಕೋಲು ತೆಗೆದುಕೊಂಡು ಹೊಡೆಯುವ ಸನ್ನಿವೇಶವೊಂದಿದೆ. ಅದು ನನಗೆ ರಾಜಕಾರಣಿಯೊಳಗಿನ ಸಂತನ ಸಾತ್ವಿಕ ಸಿಟ್ಟಿನ ರೂಪಕವಾಗಿ ಕಂಡಿದೆ.

ಯಾವುದೇ ದುರಿತ ಕಾಲದಲ್ಲಿ, ಪ್ರಜ್ಞಾವಂತ ನಾಗರಿಕ ಸಮಾಜವು ತನ್ನನ್ನು ಉದ್ಧರಿಸುವ ಸಂತರ, ನಾಯಕರ ತತ್ವ ಮತ್ತು ನಾಯಕತ್ವಗಳಿಗೆ ಕಾಯುತ್ತ ಕೂರುವುದಿಲ್ಲ. ಅದು ತನಗೆ ಬೇಕಾದ ನಾಯಕತ್ವ ಮತ್ತು ಬಿಡುಗಡೆಯ ತತ್ವಗಳನ್ನು ಸ್ವತಃ ಹುಟ್ಟಿಸಿಕೊಳ್ಳುವ ಪ್ರಬುದ್ಧತೆಯನ್ನೂ ಪ್ರಕಟಿಸುತ್ತಿರುತ್ತದೆ. ಇದು ಸಮಾಜವೇ ಸಂತತನ ಮತ್ತು ನಾಯಕತ್ವವನ್ನು ಪಡೆಯುವ ಪ್ರಕ್ರಿಯೆ. ಇದುವೇ ನಾವು ಕಟ್ಟಿಕೊಂಡಿರುವ ಧರ್ಮದರ್ಶನ, ಪ್ರಜಾಪ್ರಭುತ್ವ, ಕುಟುಂಬ ಚಳವಳಿಗಳಿಗೆ ಇತ್ಯಾದಿ ಸಂಸ್ಥೆಗಳಿಗೆ ಮನುಷ್ಯತ್ವವನ್ನು ಊಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.