ADVERTISEMENT

ಸುಳ್ಳಿನ ನಿಜವಾದ ಪುರಾಣ

ನಡಹಳ್ಳಿ ವಂಸತ್‌
Published 5 ಜೂನ್ 2021, 19:30 IST
Last Updated 5 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುರಾಣಗಳು ಸುಳ್ಳು ಎಂದು ಇಲ್ಲಿ ಹೇಳುತ್ತಿಲ್ಲ. ಇದು ಸುಳ್ಳಿನ ಕುರಿತಾದ ಪುರಾಣ!

ಮನುಷ್ಯ ಯಾವಾಗಿನಿಂದ ಸುಳ್ಳು ಹೇಳುವುದನ್ನು ಕಲಿತಿರಬಹುದು ಎನ್ನುವ ಪ್ರಶ್ನೆ ಎಲ್ಲರಿಗೂ ಅಸಂಬದ್ಧ ಎನ್ನಿಸಿದರೂ ಉತ್ತರ ಯಾರಲ್ಲಿಯೂ ಇಲ್ಲ! ವಿಕಾಸವಾದದಲ್ಲಿಯೂ ಇದರ ಬಗೆಗೆ ಚರ್ಚೆಯಾದಂತಿಲ್ಲ! ಹಾಗಾಗಿ ನಾವೇ ಮಾನವಶಾಸ್ತ್ರಜ್ಞರಾಗಿ ಯೋಚಿಸೋಣ. ಪ್ರಾಣಿ ಪ್ರಪಂಚದಲ್ಲಿಯೂ ಸುಳ್ಳುಗಳು ಇವೆ. ಆತ್ಮರಕ್ಷಣೆಗೆ, ಆಹಾರ ಸಂಪಾದನೆಗೆ ಮತ್ತು ಸಂಗಾತಿಯ ಓಲೈಕೆಗೆ ದೇಹದ ಬಣ್ಣ, ವಾಸನೆಗಳನ್ನು ಬದಲಾಯಿಸುವುದು, ಭಿನ್ನ ಧ್ವನಿಗಳಲ್ಲಿ ಉಲಿಯುವುದು, ಸತ್ತಂತೆ ನಟಿಸುವುದು, ಇಲ್ಲದ ಬಲವನ್ನು ಪ್ರದರ್ಶಿಸುವುದು-ಹೀಗೆ ವಿಧವಿಧವಾದ ತಂತ್ರಗಳನ್ನು ಪ್ರಾಣಿಪಕ್ಷಿ ಕ್ರಿಮಿಕೀಟಗಳು ಬಳಸುತ್ತವೆ.

ವಯಸ್ಸಿನಿಂದ ನಿತ್ರಾಣಗೊಂಡು ಓಡಲಾಗದ ಹುಲಿ ಸತ್ತಂತೆ ನಿಶ್ಚಲವಾಗಿ ಮಲಗಿ ಜಿಂಕೆ ಹೈನಾಗಳನ್ನು ಆಕರ್ಷಿಸಿ ಅವು ಹತ್ತಿರ ಬಂದ ಕೂಡಲೇ ಆಕ್ರಮಣ ಮಾಡುತ್ತದೆ. ಆಮೆ ದುರ್ವಾಸನೆಯ ಹೂಸನ್ನು ಬಿಟ್ಟು ಶತ್ರುಗಳನ್ನು ಓಡಿಸಲು ಪ್ರಯತ್ನಿಸುತ್ತದೆ! ಹಿಂದಿನಿಂದ ಬಾಲವನ್ನು ಹಿಡಿದು ಆಕ್ರಮಣ ಮಾಡಲು ಪ್ರಯತ್ನಿಸಿದಾಗ ಹಲ್ಲಿ ಬಾಲವನ್ನೇ ಕಳಚಿಕೊಂಡು ತಪ್ಪಿಸಿಕೊಳ್ಳುತ್ತದೆ. ಇವೆಲ್ಲವೂ ಒಂದು ರೀತಿಯ ಸುಳ್ಳುಗಳೇ. ಹಾಗಿದ್ದರೂ ಈ ಸುಳ್ಳುಗಳು ಸೀಮಿತ ಉದ್ದೇಶಕ್ಕಾಗಿ ಮಾತ್ರ ಇರುತ್ತವೆ ಮತ್ತು ಸಾಂದರ್ಭಿಕವಾಗಿರುತ್ತವೆ. ಉಳಿದಂತೆ ಪ್ರಾಣಿಪಕ್ಷಿಗಳು ಕ್ರಿಮಿಕೀಟಗಳು ಸುಳ್ಳು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ, ಸಂವಹನಕ್ಕೆ ಅವು ದೇಹಭಾಷೆಯನ್ನು ಮಾತ್ರ ಬಳಸುತ್ತವೆ. ದೇಹಭಾಷೆಯಲ್ಲಿ ಸುಳ್ಳುಗಳನ್ನು ಹೇಳುವುದು ಸುಲಭವಲ್ಲ. ಆದರೆ, ಮಾತನಾಡುವ ಮತ್ತು ಬರೆಯುವ ಭಾಷೆ ಬಳಸುವ ಮಾನವ ಮಾತ್ರ ಅತ್ಯಂತ ನವಿರಾದ ಸುಳ್ಳುಗಳನ್ನು ಹೇಳುತ್ತಾನೆ. ಅಂದರೆ ಭಾಷೆಯ ಉಗಮವಾದಾಗಿನಿಂದಲೇ ಮಾನವನ ಸುಳ್ಳುಗಾರಿಕೆಯ ಕಲೆಯೂ ಪ್ರಾರಂಭವಾಗಿರಬಹುದೇ? ಮುಂದೊಂದು ದಿನ ಮಾನವಶಾಸ್ತ್ರಜ್ಞರು ಇದರ ಬಗೆಗೆ ಸಂಶೋಧನೆ ಮಾಡಬಹುದು!

ADVERTISEMENT

ಸುಳ್ಳಿನ ಉಗಮದ ಕಥೆಗಾಗಿ ‘ಇನ್ವೆನ್ಷನ್ ಆಫ್ ಲೈಯಿಂಗ್’ ಎನ್ನುವ ತಮಾಷೆಯ ಇಂಗ್ಲಿಷ್ ಚಿತ್ರ ನೋಡಬಹುದು. ಜನರಿಗೆ ಸುಳ್ಳೇ ಗೊತ್ತಿರದಿದ್ದ ಕಾಲವದು. ನಿಘಂಟುಗಳಲ್ಲಿ ಅಂತಹ ಶಬ್ದವೂ ಇರಲಿಲ್ಲ. ಕಥಾನಾಯಕ ಮಧ್ಯವಯಸ್ಸಿನ ಅನಾಕರ್ಷಕ ವಿಫಲ ಚಿತ್ರಕಥೆಗಾರ. ಬಾಡಿಗೆ ಕಟ್ಟದಿದ್ದರೆ ಮನೆ ಖಾಲಿ ಮಾಡಬೇಕಾದ ದುಃಸ್ಥಿತಿಯಲ್ಲಿ ಬ್ಯಾಂಕಿನ ಖಾತೆಯಲ್ಲಿ ಇರುವಷ್ಟು ಹಣ ತೆಗೆಯಲು ಹೋಗುತ್ತಾನೆ. ಆ ದಿನ ಬ್ಯಾಂಕಿನ ಯಂತ್ರಗಳು ಕೆಟ್ಟು ಹೋಗಿದ್ದರಿಂದ, ನಿಮ್ಮ ಖಾತೆಯಲ್ಲಿ ಎಷ್ಟು ಹಣವಿತ್ತು ಎಂದು ಗುಮಾಸ್ತೆ ಕೇಳುತ್ತಾಳೆ. ಅವನ ಖಾತೆಯಲ್ಲಿ ಕೆಲವೇ ಡಾಲರ್‌ ಇತ್ತೆಂದು ಅವನಿಗೂ ಗೊತ್ತಿತ್ತು. ಆದರೆ ತನ್ನ ದುಃಸ್ಥಿತಿಯನ್ನು ನೆನೆಸಿಕೊಂಡು ತಾನು ಕೊಡಬೇಕಾದ ಬಾಡಿಗೆ ಬಾಕಿ ಹಣವಾದ 800 ಡಾಲರ್‌ಗಳಿತ್ತು ಎಂದು ಸುಳ್ಳು ಹೇಳುತ್ತಾನೆ.

ಅಷ್ಟರಲ್ಲಿ ಯಂತ್ರಗಳು ಸರಿಯಾಗಿ ಇವನ ಖಾತೆಯಲ್ಲಿ ಅತ್ಯಂತ ಕಡಿಮೆ ಹಣವಿದೆ ಎಂದು ತಿಳಿದಮೇಲೂ ಸುಳ್ಳಿನ ಕಲ್ಪನೆಯೇ ಇಲ್ಲದ ಗುಮಾಸ್ತೆ ಯಂತ್ರಗಳದ್ದೇ ತಪ್ಪಿರಬೇಕು ಎಂದು ಇವನನ್ನೇ ನಂಬಿ 800 ಡಾಲರ್ ಕೊಟ್ಟು ಕಳಿಸುತ್ತಾಳೆ! ಹೀಗೆ ಹೊಸದೇನನ್ನೋ ಕಂಡುಹಿಡಿದ ಖುಷಿಯಲ್ಲಿ ಅವನು ಸ್ನೇಹಿತರಿಗೆ ಸುಳ್ಳಿನ ಬಗೆಗೆ ವಿವರಿಸಲು ಯತ್ನಿಸಿ ಸೋಲುತ್ತಾನೆ. ಕೊನೆಗೆ ಸುಳ್ಳಿನ ಆಧಾರದ ಮೇಲೆ ಅದ್ಭುತ ಚಿತ್ರಕಥೆಯೊಂದನ್ನು ರಚಿಸಿ ಹಣ ಗಳಿಸುತ್ತಾನೆ. ಸುಳ್ಳಿನಿಂದ ಜನರನ್ನು ಖುಷಿಪಡಿಸಬಹುದು ಎಂದು ತಿಳಿದಾಗ ಅದು ಅಷ್ಟೇನೂ ಕೆಟ್ಟದಿರಲಾರದು ಎಂದುಕೊಳ್ಳುತ್ತಾನೆ. ಆದರೆ ಪ್ರೀತಿಸುವ ಹುಡುಗಿಗೆ ಮಾತ್ರ ಸುಳ್ಳು ಹೇಳುವುದನ್ನು ಇಷ್ಟಪಡದೆಯೇ ಅವಳನ್ನು ಗೆಲ್ಲುತ್ತಾನೆ.

ಸುಳ್ಳು ಮಾನವ ಕುಲಕ್ಕೆ ಹೊಸದೇನಲ್ಲ. ಸತ್ಯದ ಮೌಲ್ಯವನ್ನು ಹೊಗಳಲು ಪ್ರಾರಂಭಿಸಿದಾಗಲೇ ಸುಳ್ಳಿನ ಯುಗ ಪ್ರಾರಂಭವಾಗಿತ್ತು ಎಂದು ತೀರ್ಮಾನಿಸುವುದು ಸುಲಭ. ಸತ್ಯದ ತಲೆಯ ಮೇಲೆ ಹೊಡೆದಂತಹ ಸುಳ್ಳುಗಳನ್ನು ಹೇಳುವುದನ್ನು ಕರಗತ ಮಾಡಿಕೊಂಡ ಮೇಲೆ ಮಾನವನಿಗೆ ಅದರ ಬಗೆಗೆ ಪಾಪಪ್ರಜ್ಞೆ ಕಾಡಿರಲೇಬೇಕು. ಹಾಗಾಗಿಯೇ ಸತ್ಯದ ಮಹಿಮೆಯನ್ನು ಸಾರುವ ಕಥೆಗಳು, ಗಾದೆಗಳು, ನಾಣ್ಣುಡಿಗಳು ಹುಟ್ಟಿಕೊಂಡವು. ಸತ್ಯಹರಿಶ್ಚಂದ್ರನ ಕಥೆ, ಗೋವಿನ ಹಾಡು ನಮ್ಮ ಸಂಸ್ಕೃತಿಯಲ್ಲಿ ಕಾಣುವ ಕೆಲವು ಉದಾಹರಣೆಗಳು. ಈ ರೀತಿಯ ಕಥೆಗಳು ಎಲ್ಲಾ ಸಂಸ್ಕೃತಿಗಳಲ್ಲಿಯೂ ಇರಲೇಬೇಕು. ಏಕೆಂದರೆ, ದೇಶ ಭಾಷೆ ಬಣ್ಣ ಊಟ ದಿರಿಸುಗಳು ಬದಲಾದರೂ ಸಮಾನವಾದ ಅಂತರಂಗದ ತುಡಿತ, ಜಿಜ್ಞಾಸೆಗಳು ಎಲ್ಲಾ ಮಾನವರಲ್ಲಿಯೂ ಕಂಡುಬರುತ್ತವೆ.

ಸತ್ಯವನ್ನು ವೈಭವೀಕರಿಸುವ ಭರದಲ್ಲಿ ಅಸತ್ಯಗಳನ್ನು ಇಂತಹ ಕಥೆಗಳಿಗೆ ಆಧಾರವಾಗಿ ಬಳಸಲಾಯಿತು. ಅತ್ಯಂತ ಜನಪ್ರಿಯ ಗೋವಿನ ಹಾಡನ್ನೇ ನೋಡಿ. ಹುಲಿ ಹಸುವನ್ನು ತಿನ್ನುವುದು ಅಥವಾ ಹಸು ಹೇಗಾದರೂ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುವುದು ಪ್ರಕೃತಿ ನಿಯಮ. ಆದರೆ ಕೈಗೆ ಸಿಕ್ಕಿದ ಹಸುವನ್ನು ತಿನ್ನದೆ ಬಿಡುವುದು, ತಪ್ಪಿಸಿಕೊಂಡು ಹೋಗುವ ಹಸು ಮತ್ತೆ ಬಲಿಯಾಗಲು ಬರುವುದು ಮತ್ತು ಹುಲಿ ತನ್ನ ಸಹಜಸ್ವಭಾವವನ್ನೇ ಕ್ರೌರ್ಯವೆಂದುಕೊಳ್ಳುತ್ತಾ ನೊಂದುಕೊಂಡು ಹಾರಿ ಪ್ರಾಣ ಬಿಡುವುದು- ಇವು ಸೃಷ್ಟಿಯ ಅಸತ್ಯಗಳು. ಅಸತ್ಯಗಳ ಮೂಲಕ ಸತ್ಯದ ಮೌಲ್ಯವನ್ನು ಹೇಳುವುದಾದರೂ ಹೇಗೆ?

ಅಗತ್ಯವಿದ್ದಾಗಲೆಲ್ಲಾ ಸುಳ್ಳಿಗೆ ಮೊರೆಹೋಗುವ ಮಾನವನ ಸಹಜಸ್ವಭಾವ ಒಂದುಕಡೆಯಾದರೆ ಸುಳ್ಳನ್ನಾಡುವ ಬಗೆಗಿನ ತನ್ನ ಪಾಪಪ್ರಜ್ಞೆ ಇನ್ನೊಂದು ಕಡೆ-ಈ ಎರಡರ ಹೋರಾಟದಲ್ಲಿ ಸತ್ಯ ಸುಳ್ಳುಗಳಿಗೆ ದೊಡ್ಡದೊಡ್ಡ ಬೌದ್ಧಿಕ ವ್ಯಾಖ್ಯೆಗಳನ್ನು ಕಟ್ಟಲಾಯಿತು. ಸುಳ್ಳು ಹೇಳುವುದು ಅಂತಹ ಪಾಪವೇನಲ್ಲ, ಆದರೆ ಅದರಿಂದ ಯಾರಿಗೂ ಹಾನಿಯಾಗಬಾರದು ಎನ್ನುವ ರೀತಿಯ ತಾತ್ವಿಕ ಸಮರ್ಥನೆಗಳು ಹುಟ್ಟಿಕೊಂಡವು. ‘ಸತ್ಯಂ ಭ್ರೂಯಾತ್ ಪ್ರಿಯಂ ಭ್ರೂಯಾತ್, ನ ಭ್ರೂಯಾತ್ ಸತ್ಯಮಪ್ರಿಯಂ’ (ಸತ್ಯವನ್ನು ಹೇಳು, ಪ್ರಿಯವಾದದ್ದನ್ನು ಹೇಳು. ಅಪ್ರಿಯವಾದ ಸತ್ಯಗಳನ್ನು ಹೇಳಬೇಡ) ಎನ್ನುವ ಶ್ಲೋಕಕ್ಕೆ ಆಧಾರವಾಗಿ ಕಥೆಯೊಂದಿದೆ. ಕಥೆಯ ಸಂದರ್ಭವನ್ನು ಮರೆತು ನಾವೆಲ್ಲಾ ಯಾವಾಗಲೂ ಸುಳ್ಳುಗಳನ್ನು ಹೇಳಲು ಈ ಶ್ಲೋಕವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ! ಇಷ್ಟವಿಲ್ಲದ ಸತ್ಯ ಪ್ರಿಯವಾಗಿರಲು ಸಾಧ್ಯವೇ ಎನ್ನುವುದನ್ನು ಬುದ್ಧಿವಂತಿಕೆಯಿಂದ ಮರೆಮಾಚುತ್ತೇವೆ.

ಎಷ್ಟೇ ಸತ್ಯನಾರಾಯಣ ವ್ರತಗಳನ್ನು ಮಾಡಲಿ, ಗೋವಿನ ಹಾಡನ್ನು ಪಠಿಸಲಿ, ಬೇರೆಯವರಿಗೆಲ್ಲಾ ಸತ್ಯದ ಬಗೆಗೆ ಉಪದೇಶ ಮಾಡಲಿ, ಸತ್ಯವಾದ ವಿಷಯವೆಂದರೆ ನಾವೆಲ್ಲಾ ನಮ್ಮನಮ್ಮ ಅನುಕೂಲಕ್ಕಾಗಿ ಸುಳ್ಳನ್ನು ಹೇಳುತ್ತೇವೆ! ಅಂತಹ ಸುಳ್ಳನ್ನು ಹೇಳುವುದು ಏಕೆ ಅನಿವಾರ್ಯವಾಗಿತ್ತು ಎಂದು ಯಾರೂ ಕೇಳದಿದ್ದರೂ ನಮ್ಮೊಳಗೆ ಸಮರ್ಥಿಸಿಕೊಳ್ಳುತ್ತಾ ನಾವೆಂತಹ ಸತ್ಯವಂತರೆಂದು ನಮ್ಮನ್ನು ನಾವೇ ಸುಳ್ಳೇ ನಂಬಿಸಿಕೊಳ್ಳುತ್ತೇವೆ! ಹೊರಗಡೆ ಹೊರಟಾಗ ತಾನೂ ಬರುತ್ತೇನೆಂದು ಹಟ ಹಿಡಿಯುವ ಮಗುವಿಗೆ, ಡಾಕ್ಟರ್ ಹತ್ರ ಹೋಗುತ್ತೇನೆ, ನೀನು ಬಂದ್ರೆ ಚುಚ್ಚಿ ಕೊಡ್ತಾರೆ ಎಂದು ನಂಬಿಸಿ ಹೋಗುವುದು ನಮ್ಮ ದೃಷ್ಟಿಯಲ್ಲಿ ಸುಳ್ಳಲ್ಲ.

ಗೋವಿನ ಕಥೆಯನ್ನು ನಿತ್ಯವೂ ಕೇಳಿದ ಮೇಲೆಯೂ ದೊಡ್ಡವರ ಇಂತಹ ನವಿರಾದ ಸುಳ್ಳುಗಳನ್ನು ಗುರುತಿಸುತ್ತಾ ಬರುವ ಮಗು ಅವರವರ ಅನುಕೂಲಕ್ಕೆ ತಕ್ಕಂತೆ ಸುಳ್ಳುಗಳನ್ನು ಹೇಳುವುದು ಸತ್ಯವನ್ನು ಹೇಳುವುದಕ್ಕೆ ಸಮಾನ ಎನ್ನುವುದನ್ನು ಕಲಿಯುತ್ತದೆ! ಕೆಲವೊಮ್ಮೆ ಸುಳ್ಳನ್ನು ಹೇಳಿ ಏನನ್ನಾದರೂ ಸಾಧಿಸಿಕೊಂಡು ಬಂದಾಗ, ಎಷ್ಟು ಚೂಟಿ ನೋಡು ಎನ್ನುವ ಹೊಗಳಿಕೆಯೂ ಮಗುವಿಗೆ ಸಿಕ್ಕಿರಬಹುದು. ಆದರೆ ನಿಧಾನವಾಗಿ ಮಗು ತನ್ನ ಅನುಕೂಲಕ್ಕಾಗಿ ನಮಗೇ ಸುಳ್ಳುಗಳನ್ನು ಹೇಳತೊಡಗಿದಾಗ ಕೆಂಡಾಮಂಡಲವಾಗಿ ನಾವೇ ಹೇಳದಿರುವ ಸತ್ಯದ ಬಗೆಗಿನ ಭಾಷಣವನ್ನು ಮುಂದುವರೆಸುತ್ತೇವೆ.

ಸುಳ್ಳನ್ನು ಆಡಬಾರದು ಸತ್ಯವನ್ನೇ ಹೇಳಬೇಕು ಎನ್ನುವುದನ್ನು ಸಾರಲು ಕಥೆ ಗಾದೆ ಮುಂತಾದವುಗಳು ಏಕೆ ಬೇಕು? ಎಲ್ಲರೂ ಎಲ್ಲಾ ಸಂದರ್ಭಗಳಲ್ಲಿಯೂ ಗಾಂಧೀಜಿಯಂತೆ ಸತ್ಯವನ್ನು ಹೇಳತೊಡಗಿದರೆ ಸಾಕು. ಇನ್ನೆರಡು ಶತಮಾನಗಳ ನಂತರವಾದರೂ ಸುಳ್ಳು ಎನ್ನುವ ಶಬ್ದ ನಿಘಂಟಿನಿಂದ ಮಾಯವಾಗಬಹುದು. ಆಗ ‘ಇನ್ವೆನ್ಷನ್ ಆಫ್ ಲೈಯಿಂಗ್’ ಚಿತ್ರವನ್ನು ನಿಷೇಧಿಸಿದರಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.