ADVERTISEMENT

ಚಳಿಗಾಲಕ್ಕೆ ಲಿಪ್‌ ಬಾಮ್ ಆಯ್ಕೆ ಸೂಕ್ತವಾಗಿರಲಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 20:30 IST
Last Updated 6 ಡಿಸೆಂಬರ್ 2019, 20:30 IST
   

ಚಳಿಗಾಲ ಈಗಷ್ಟೇ ಆರಂಭವಾಗಿದೆ.ಚಳಿ ಹೆಚ್ಚಾದಂತೆ ಮೈಕೈ ಹಾಗೂ ಮುಖದ ಚರ್ಮವು ಒಡೆಯಲು ಆರಂಭಿಸುತ್ತದೆ. ಅದರಲ್ಲೂ ಕೋಮಲ ತುಟಿಗಳಲ್ಲಿ ಬಿರುಕು ಮೂಡುವುದು, ರಕ್ತ ಸೋರುವುದು, ಸಿಪ್ಪೆ ಏಳುವುದು ಹೆಚ್ಚು. ತುಟಿಗಳ ಸೌಂದರ್ಯ ಕಾಪಾಡಿಕೊಳ್ಳಲು ಲಿಪ್‌ ಬಾಮ್‌ಗಳ ಮೊರೆ ಹೋಗುವುದು ಸಾಮಾನ್ಯ ಸಂಗತಿ. ಆದರೆಅವುಗಳ ಆಯ್ಕೆ ಹೇಗಿರಬೇಕು? ಬಳಕೆ ಹೇಗೆ ಮಾಡಬೇಕು ಎಂಬುದು ಬಹಳ ಮುಖ್ಯ.

ತುಟಿಗಳು ತೆಳುವಾದ ಚರ್ಮದಿಂದ ಕೂಡಿರುವ ಕಾರಣ ಸೂರ್ಯನ ಶಾಖದಿಂದ, ಧೂಳಿನಿಂದ ಹಾಗೂ ಚಳಿಗೆ ಬೇಗ ದುರ್ಬಲಗೊಳ್ಳುತ್ತವೆ. ಇಂತಹ ಸಮಸ್ಯೆಗಳಿಂದ ತುಟಿಗಳು ಸುರಕ್ಷಿತವಾಗಿರಲು ಕೆಲವು ಲಿಪ್‌ ಬಾಮ್‌ ಬಳಸುತ್ತೇವೆ. ಅವುಗಳನ್ನು ಬಳಸಿದರೂ ಕೂಡ ತುಟಿಗಳು ಹಾಗೆಯೇ ಇರುತ್ತವೆ. ಅವುಗಳ ಬಳಕೆ ಮತ್ತು ಉಪಯೋಗಗಳ ಕೆಲವು ಟಿಪ್ಸ್‌ ಇಲ್ಲಿವೆ.

ಇವುಗಳ ಅಭ್ಯಾಸ ಬೇಡ

ADVERTISEMENT

ತುಟಿಗಳನ್ನು ಜೋರಾಗಿ ಉಜ್ಜುವುದು ಹಾಗೂ ನಾಲಿಗೆಯಿಂದ ತೇವ ಮಾಡುವುದರಿಂದ ತುಟಿಗಳು ಬೇಗ ದುರ್ಬಲಗೊಳ್ಳುತ್ತವೆ. ಇವುಗಳಿಂದ ಆದಷ್ಟು ದೂರವಿರಬೇಕು. ಚಳಿಗೆ ತುಟಿಗಳ ಸಿಪ್ಪೆ ಏಳುತ್ತದೆ. ಅವು ಒಣಗುವ ಸಮಯದಲ್ಲಿ ತುಟಿಗಳ ತ್ವಚೆ ಬಿಗಿಯಾಗಿ ಹಾಗೂ ಬೆಳ್ಳಗೆ ಕಾಣುವುದು ಸಹಜ. ಸಿಪ್ಪೆಯನ್ನು ಕಚ್ಚಿಕೊಳ್ಳುವುದರಿಂದ ಹಾಗೂ ಕೀಳುವುದರಿಂದ ತುಟಿಗಳಿಗೆ ಗಾಯವಾಗುತ್ತದೆ. ಗಾಯಗೊಂಡ ತುಟಿಗಳು ಚಳಿಗಾಲದಲ್ಲಿ ಬೇಗ ಒಣಗುವುದಿಲ್ಲ. ಹೀಗಾಗಿ ಈ ದುರಭ್ಯಾಸಗಳಿಂದ ದೂರವಿದ್ದಷ್ಟೂ ತುಟಿಗಳನ್ನು ರಕ್ಷಣೆ ಮಾಡಬಹುದು.

ಲಿಪ್‌ ಬಾಮ್‌ ಬಳಕೆ ಹೇಗೆ?

ರಾತ್ರಿಯಾಗಲಿ ಅಥವಾ ಹಗಲಾಗಿರಲಿ ಊಟದ ನಂತರ ತುಟಿಗಳಿಗೆ ಲಿಪ್‌ ಬಾಮ್‌ ಲೇಪಿಸಿಕೊಳ್ಳುವುದು ಉತ್ತಮ. ಹೊರಗಡೆ ಹೋಗುವಾಗ ಲಿಪ್‌ ಬಾಮ್‌ ಲೇಪಿಸಿಕೊಳ್ಳಬಹುದು. ಆದರೆ ಧೂಳು ತಾಕದಂತೆ ತುಟಿಗಳನ್ನು ಕಾಪಾಡಿಕೊಳ್ಳಬೇಕು. ತುಟಿಗಳಿಗೆ ಲಿಪ್‌ ಬಾಮ್‌ ಲೇಪಿಸಿದ ನಂತರ ಊಟ, ತಿಂಡಿ, ಮಾಡುವುದರಿಂದ ಲಿಪ್‌ ಬಾಮ್‌ ಆಹಾರದೊಂದಿಗೆ ಹೊಟ್ಟೆ ಸೇರುತ್ತದೆ. ಹೀಗಾಗಿ ಊಟದ ನಂತರ ಲೇಪಿಸಿಕೊಳ್ಳುವುದು ಉತ್ತಮ. ಲೇಪಿಸುವ ಮೊದಲು ತುಟಿಗಳಿಗೆ ಅಂಟಿರುವ ಆಹಾರ ಹಾಗೂ ಧೂಳನ್ನು ಬಿಸಿ ನೀರಿನಿಂದ ತೊಳೆದು ಲೇಪಿಸಿದರೆ ತುಟಿಗಳು ಸೀಳು ಬರುವುದಿಲ್ಲ.

ಒಮ್ಮೆ ತುಟಿಗಳಿಗೆ ಲಿಪ್‌ ಬಾಮ್‌ ಲೇಪಿಸಿದ ನಂತರ ಅದರ ಮೇಲೆ ಮತ್ತೆ ಲೇಪಿಸುವುದರಿಂದ ತುಟಿಗಳ ಮಧ್ಯೆ ಧೂಳು ಸೇರಿ ದುರ್ಬಲಗೊಳ್ಳುತ್ತವೆ. ಒಂದು ಬಾರಿ ಲೇಪಿಸಿದ ನಂತರ ಮತ್ತೆ ಅದನ್ನು ಬಿಸಿ ನೀರಿನಿಂದ ತೊಳೆದು ಹಚ್ಚುವುದು ಉತ್ತಮ. ತುಟಿಗಳು ಮೃದುವಾಗಿ, ಸುಂದರವಾಗಿ ಕಾಣಲಿ ಎಂದು ಹೆಚ್ಚಾಗಿ ಲಿಪ್‌ ಬಾಮ್‌ ಲೇಪಿಸುವುದು ಸರಿಯಲ್ಲ. ದಿನಕ್ಕೆ ಎರಡು ಅಥವಾ ಮೂರು ಬಾರಿ ಮಿತವಾಗಿ ಹಚ್ಚಿದರೆ ಸಾಕು.

ಆಯ್ಕೆ ಹೀಗಿರಲಿ

ಲಿಪ್‌ ಬಾಮ್‌ ಆಯ್ಕೆ ಮಾಡುವಾಗ ನೈಸರ್ಗಿಕವಾಗಿರುವ ಹಾಗೂ ರಾಸಾಯನಿಕ ಮುಕ್ತವಾಗಿರುವುದನ್ನು ಅರಿತು ಆಯ್ಕೆ ಮಾಡಿ. ಹೆಚ್ಚು ಪರಿಮಳ ಹೊಂದಿರುವ ಲಿಪ್‌ ಬಾಮ್‌ಗಳನ್ನು ಬಳಸುವುದರಿಂದ ತುಟಿಗಳಿಗೆ ಅಲರ್ಜಿ ಉಂಟು ಮಾಡುತ್ತವೆ. ಕೆಲವು ಲಿಪ್‌ ಬಾಮ್‌ಗಳು ಮೊದಲು ಬಳಸಿದಾಗ ತುಟಿಗಳು ಮೃದುವಾದರೂ ದಿನ ಕಳೆದಂತೆ ಒರಟು ಹಾಗೂ ತುರಿಕೆ ಉಂಟು ಮಾಡುತ್ತವೆ. ಅಂತಹ ಲಿಪ್‌ ಬಾಮ್‌ಗಳನ್ನು ಬಳಸದೆ ಕೈ ಬಿಡುವುದು ಉತ್ತಮ. ಆಯ್ಕೆ ಮಾಡುವಾಗ ಲಿಪ್‌ ಬಾಮ್‌ ಪರಿಮಳ ನೋಡಿ ಅಥವಾ ಗಾತ್ರ ನೋಡಿ ಆಯ್ಕೆ ಮಾಡುವುದು ಸೂಕ್ತವಲ್ಲ. ಅವುಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸಿ.

ಮನೆಯಲ್ಲೇ ತಯಾರಿಸಿ

ಅಂದಗೆಟ್ಟಿರುವ ತುಟಿಗಳನ್ನು ಸುಂದರವಾಗಿ, ಮೃದುವಾಗಿ ಕಾಣುವಂತೆ ಮಾಡಲು ಲಿಪ್‌ ಬಾಮ್‌ಗಳನ್ನು ಖರೀದಿಸಬೇಕಿಲ್ಲ. ಲಿಪ್‌ ಬಾಮ್‌ನಂತಹ ಮುಲಾಮನ್ನು ಮನೆಯಲ್ಲಿಯೇ ತಯಾರಿಸಬಹುದು. ಜೇನುತುಪ್ಪ, ಕೊಬ್ಬರಿ ಎಣ್ಣೆ, ಟೀ ಟ್ರೀ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಸೇರಿಸಿ ತೈಲ ಮಾಡಿಕೊಳ್ಳಿ. ಅದನ್ನು ಒಂದು ಗಾಜಿನ ಸೀಸೆಯಲ್ಲಿ ಹಾಕಿ ಸೂಕ್ತ ಸ್ಥಳದಲ್ಲಿಟ್ಟು ಕೆಡದಂತೆ ಕಾಪಾಡಿಕೊಳ್ಳಿ. ಇದನ್ನು ಪ್ರತಿ ದಿನ ಮಲಗುವ ಮುನ್ನ ತುಟಿಗಳಿಗೆ ಲೇಪಿಸುವುದರಿಂದ ಚಳಗಾಲದಲ್ಲಿ ತುಟಿಗಳು ಮೃದುವಾಗಿ, ಕೋಮಲವಾಗಿರುತ್ತವೆ. ತೆಂಗಿನೆಣ್ಣೆ, ಜೇನುತುಪ್ಪ ಹಾಗೂ ತುಪ್ಪದಿಂದಲೂ ತುಟಿಯ ಅಂದವನ್ನು ಕಾಪಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.