ADVERTISEMENT

ಸವದತ್ತಿ ಎಲ್ಲಮ್ಮನ ಜಾತ್ರೆ: ಬಂಡಿಗಳ ಸಾಲು, ಭಂಡಾರದ ಮುಗಿಲು

ಟಿ.ಕೆಂಪಣ್ಣ
Published 7 ಜನವರಿ 2023, 19:30 IST
Last Updated 7 ಜನವರಿ 2023, 19:30 IST
ಜೋಗತಿ ಗುಂಡಿಯಲ್ಲಿ ಭಕ್ತರಿಂದ ಸ್ನಾನ... (ಚಿತ್ರಗಳು ಲೇಖಕರವು)
ಜೋಗತಿ ಗುಂಡಿಯಲ್ಲಿ ಭಕ್ತರಿಂದ ಸ್ನಾನ... (ಚಿತ್ರಗಳು ಲೇಖಕರವು)   

ಸಂಕ್ರಾಂತಿ ಕಳೆಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ಬರುವ ಜಾತ್ರೆಗಳಲ್ಲಿ ಹೆಚ್ಚಿನವು ಒಂದೆರಡು ದಿನಗಳಲ್ಲಿ ಮುಗಿದು ಹೋದರೆ, ತೀರಾ ಕೆಲವು ತಿಂಗಳ ಕಾಲ ನಡೆಯುತ್ತವೆ. ಅವುಗಳಲ್ಲಿ ಸವದತ್ತಿ ಎಲ್ಲಮ್ಮನ ಜಾತ್ರೆ ಕೂಡ ಒಂದು. ಎಲ್ಲಮ್ಮನ ಆರಾಧನೆ ಪ್ರತೀ ಪೂರ್ಣಿಮೆಯಂದು ನಡೆದರೂ ಮಾರ್ಗಶಿರ ಪೂರ್ಣಿಮೆಯ ದಿನದ್ದು ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಜಾತ್ರೆಗೆ ಕರ್ನಾಟಕದವರಲ್ಲದೆ, ಆಂಧ್ರ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಿಂದಲೂ ಬಹುಸಂಖ್ಯೆಯ ಭಕ್ತರು ಬರುತ್ತಾರೆ. ಸವದತ್ತಿಯಿಂದ ಎಂಟು ಕಿ.ಮೀ. ದೂರದಲ್ಲಿ ಐದು ಕೊಳ್ಳಗಳಿಂದೊಡಗೂಡಿದ ಗುಡ್ಡದ ಸರಸ್ವತಿ ತಟಾಕದಲ್ಲಿ ಈ ದೇವಾಲಯವಿದೆ. ರಚನೆಯ ದೃಷ್ಟಿಯಿಂದ ಈ ದೇವಾಲಯವು 7 ಅಥವಾ 8ನೇ ಶತಮಾನಕ್ಕೆ ಸೇರಿರಬಹುದೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಎಲ್ಲಮ್ಮ, ಪುರಾಣದ ಜಮದಗ್ನಿ ಋಷಿಯ ಪತ್ನಿ ಹಾಗೂ ಪರಶುರಾಮನ ತಾಯಿ ರೇಣುಕೆ ಎಂದು ಭಕ್ತಾದಿಗಳು ನಂಬಿದ್ದಾರೆ. ವರ್ಷದ ಪ್ರತೀ ಪೂರ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಬರುವ ಹೊಸ್ತಿಲು ಹುಣ್ಣಿಮೆ, ಜನವರಿ ತಿಂಗಳಲ್ಲಿ ಬರುವ ಬನದ ಹುಣ್ಣಿಮೆ ಹಾಗೂ ಫೆಬ್ರುವರಿ ತಿಂಗಳಲ್ಲಿ ಬರುವ ಭರತ ಹುಣ್ಣಿಮೆ ಸಂದರ್ಭದಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಹೊಸ್ತಿಲು ಹುಣ್ಣಿಮೆಯನ್ನು ರಂಡಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಕೆಲವು ಮಂಗಳಮುಖಿಯರು ಈ ಸಂದರ್ಭದಲ್ಲಿ ಬಳೆ, ತಾಳಿಗಳನ್ನು ತೆಗೆದು ವಿಧವೆಯರಾಗುತ್ತಾರಂತೆ, ಮುಂದೆ ಬರುವ ಬನದ ಹುಣ್ಣಿಮೆಯಲ್ಲಿ ಮತ್ತೆ ಮುತ್ತೈದೆಯರಾಗುತ್ತಾರಂತೆ.

ಪಡ್ಲಿಗಿ ಪೂಜೆಯ ಕ್ಷಣ... ಭಕ್ಷ್ಯ–ಭೋಜನದ ಮೆರವಣಿಗೆ

ಭರತ ಹುಣ್ಣಿಮೆಯ ದಿನ ಸಂಪ್ರದಾಯದಂತೆ ಸೀರೆ, ರವಿಕೆ, ಬಳೆ ಹಾಗೂ ಅರಿಶಿನ ಕುಂಕುಮವನ್ನು ಒಳಗೊಂಡ ಬಾಗಿನವನ್ನು ಎಲ್ಲಮ್ಮನಿಗೆ ಒಪ್ಪಿಸಿದ ಮೇಲೆ ಜಾತ್ರೆ ಪ್ರಾರಂಭವಾಗುತ್ತದೆ. ಜಾತ್ರೆಗೆ ಬಂದ ಭಕ್ತರು ಸೂಕ್ತ ಜಾಗ ಹುಡುಕಿ ಬಂಡಿಗಳನ್ನು ಸಾಲಾಗಿ ನಿಲ್ಲಿಸಿ, ರಾತ್ರಿ ತಂಗಲು ಟೆಂಟುಗಳನ್ನು ಕಟ್ಟಿಕೊಳ್ಳುತ್ತಾರೆ. ಹರಕೆ ಹೊತ್ತವರು ಜೋಗತಿ ಗುಂಡಿಯಲ್ಲಿ ಸ್ನಾನಮಾಡಿ ಬರುತ್ತಾರೆ. ಅಷ್ಟರಲ್ಲಿ ಇತರ ಮಹಿಳೆಯರು ಅಮ್ಮನ ನೈವೇದ್ಯಕ್ಕೆ ಹಲವು ಬಗೆಯ ಆಹಾರಗಳನ್ನು ತಯಾರಿಸುತ್ತಾರೆ. ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆಯಿಂದ ಬಂದವರು ಜೋಳದ ಹಿಟ್ಟಿನ ಕಡುಬು ಮತ್ತು ಗುಗ್ಗರಿ ಮಾಡುತ್ತಾರೆ. ಆಂಧ್ರ ಕಡೆಯವರು ಮೊಸರು ಅನ್ನ, ಕರಿಕಡುಬು, ದಾವಣಗೆರೆ ಕಡೆಯವರು ಹೋಳಿಗೆ ಮಾಡುತ್ತಾರೆ.

ADVERTISEMENT

ತಾವು ಉಳಿದುಕೊಂಡ ಬಯಲಿನಲ್ಲಿಯೇ ಸೂಕ್ತ ಜಾಗವನ್ನು ಸ್ವಚ್ಛಗೊಳಿಸಿ ಪಡ್ಲಿಗೆಗಳನ್ನಿಟ್ಟು (ಬಿದಿರಿನ ಬುಟ್ಟಿಗಳು) ತಾವು ಆ ವರುಷ ಬೆಳೆದ ಜೋಳ, ಅಕ್ಕಿ, ಸಜ್ಜೆ, ನವಣೆ ಮುಂತಾದ ಹೊಸ ಧಾನ್ಯ ಹಾಗೂ ತರಕಾರಿಗಳನ್ನು ಪಡ್ಲಿಗೆಗಳಲ್ಲಿ ತುಂಬುತ್ತಾರೆ. ಪಡ್ಲಿಗೆಗಳ ಮುಂದೆ ಎಲೆ ಹಾಕಿ, ತಾವು ತಯಾರಿಸಿದ ನೈವೇದ್ಯವನ್ನು ಇಡುತ್ತಾರೆ. ಮಂಗಳಾರತಿ ಮಾಡಿ ಐದು ಜನ ಜೋಗತಿಯರಿಂದ ಉಧೋ ಉಧೋ ಹಾಕಿಸುತ್ತಾರೆ. ಅಲ್ಲಿಗೆ ಅಮ್ಮನಿಗೆ ಪಡ್ಲಿಗೆ ತುಂಬಿಸುವ ಪ್ರಮುಖ ಹರಕೆ ಕಾರ್ಯ ಮುಗಿಯುತ್ತದೆ. ನಂತರ ಗುಡಿಗೆ ಹೋಗಿ ದರ್ಶನ ಮಾಡಿಕೊಂಡು ಬರುತ್ತಾರೆ. ದೇವದಾಸಿ ಪದ್ಧತಿ ಈಗ ಬಹುಮಟ್ಟಿಗೆ ನಿಂತು ಹೋಗಿದ್ದರೂ, ರಹಸ್ಯ ತಾಣಗಳಲ್ಲಿ ಹಾಗೂ ಕೆಲವು ಜೋಗತಿಯರ ಮನೆಯಲ್ಲಿ ಕಾನೂನುಬಾಹಿರ ಆಚರಣೆಗಳು ಈಗಲೂ ನಡೆಯುತ್ತಿವೆ ಎಂಬ ಮಾಹಿತಿ ಇದೆ.

ಬಯಲಲ್ಲೇ ನೈವೇದ್ಯಕ್ಕೆ ಭರದ ತಯಾರಿ

ಈಗಿನಂತೆ ವಾಹನ ಸೌಕರ್ಯ ಇಲ್ಲದಿದ್ದ ಹಿಂದಿನ ಕಾಲದಲ್ಲಿ ಸಿಂಗಾರಗೊಂಡ ಎತ್ತುಗಳನ್ನು ಕಟ್ಟಿದ ಬಣ್ಣ-ಬಣ್ಣದ ಕಮಾನು ಬಂಡಿಗಳಲ್ಲಿ ಜನ ಜಾತ್ರೆಗೆ ಬರುತ್ತಿದ್ದರು. ರಸ್ತೆಯ ಒಂದು ಪಕ್ಕದಲ್ಲಿ ಶಿಸ್ತಿನ ಸಿಪಾಯಿಯಂತೆ ಸಾಲಾಗಿ ಸಾಗುತ್ತಿದ್ದ ಸಾಲು ಬಂಡಿಗಳ ಸೊಬಗು, ಎತ್ತುಗಳ ಕೊರಳ ಗಂಟೆಗಳಿಂದ ಹೊರಹೊಮ್ಮುವ ನಿನಾದ ಎಂಥವರನ್ನೂ ಆಕರ್ಷಿಸುತ್ತಿತ್ತು. ಈಗಲೂ ಹತ್ತಿರದ ಊರುಗಳಿಂದ ಜಾತ್ರೆಗೆ ಬರುವ ಸಾಲು ಬಂಡಿಗಳನ್ನು ಕಾಣಬಹುದು. ಎಲ್ಲಮ್ಮನ ದೇವಾಲಯದ ಸುತ್ತಲಿನ ಗುಡ್ಡಗಳ ಮೇಲೆಲ್ಲಾ ಯಾತ್ರಾರ್ಥಿಗಳು ಬೀಡುಬಿಟ್ಟಿರುವುದನ್ನು ಮುಸ್ಸಂಜೆಯಲ್ಲಿ ನೋಡುವುದಕ್ಕೆ ಚೆಂದ.

ಜಾತ್ರೆಯಲ್ಲಿ ನಡೆಯುತ್ತಾ ಸಾಗಿದರೆ, ಒಟ್ಟಾಗಿ ಅಡುಗೆಮಾಡುವ ಮಹಿಳೆಯರನ್ನು, ಹರಟೆ ಹೊಡೆಯುತ್ತ ಕುಳಿತಿರುವ ಪುರುಷರನ್ನು ಕಂಡಾಗ ಆ ಜನರ ಸಂಸ್ಕೃತಿ-ಪರಂಪರೆಗಳ ಪರಿಚಯವಾಗುತ್ತದೆ. ಆದರೆ ಮೊಣಕಾಲು ಉದ್ದ ಕಲುಷಿತ ನೀರಿರುವ ಜೋಗತಿ ಗುಂಡಿಯಲ್ಲಿ ಪವಿತ್ರ ಸ್ನಾನಕ್ಕಾಗಿ ಮುಳುಗೇಳುವ ಪರಿಪಾಟ, ಎಲ್ಲೆಂದರಲ್ಲಿ ಒಬ್ಬರ ಎದುರಿಗೊಬ್ಬರು ನಿಸ್ಸಂಕೋಚವಾಗಿ ಶೌಚಕ್ಕೆ ಕೂರುವ ದೃಶ್ಯ ನಾಗರಿಕತೆಯನ್ನು ಅಣಕಿಸುತ್ತವೆ. ಜೋಗತಿ ಗುಂಡಿಯಲ್ಲಿಯೇ ಸ್ನಾನ ಮಾಡಬಯಸಿ, ಸಾವಿರಾರು ಭಕ್ತರು ಬರುವುದರಿಂದ ಶುದ್ಧ ನೀರನ್ನು ಗುಂಡಿಯಲ್ಲಿ ತುಂಬಿಸುವ ಕೆಲಸವಾಗಬೇಕು. ಹಾಗೆಯೇ, ನೀರಿನ ಸೌಲಭ್ಯದೊಂದಿಗೆ ಶೌಚಾಲಯಗಳ ವ್ಯವಸ್ಥೆ ಮಾಡಿದಲ್ಲಿ ದೇವಾಲಯದ ಸುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡಬಹುದು.

ಸಾಲು ಬಂಡಿಯಲ್ಲಿ ಜಾತ್ರೆಯತ್ತ ಪಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.