ADVERTISEMENT

ಮೈಸೂರು: ಕುಸಿದಿದ್ದು ಕಟ್ಟಡ ಮಾತ್ರ ಅಲ್ಲ!

ರವೀಂದ್ರ ಭಟ್ಟ
Published 5 ನವೆಂಬರ್ 2022, 22:15 IST
Last Updated 5 ನವೆಂಬರ್ 2022, 22:15 IST
ಕೊಲಾಜ್‌: ಸಂತೋಷ್‌ ಸಸಿಹಿತ್ಲು
ಕೊಲಾಜ್‌: ಸಂತೋಷ್‌ ಸಸಿಹಿತ್ಲು   

ಪರಂಪರೆ ಎಂದರೆ ಅದು ಕಟ್ಟಡಕ್ಕೆ ಮಾತ್ರ ಸೀಮಿತವಲ್ಲ. ಮೈಸೂರಿನ ಆಡಳಿತ, ಸಾಹಿತ್ಯ, ನೃತ್ಯ, ಸಂಗೀತ, ಸಾಮಾಜಿಕ ಸಾಮರಸ್ಯ ಎಲ್ಲದರಲ್ಲೂ ಮೈಸೂರಿಗೆ ಒಂದು ಪರಂಪರೆ ಇದೆ. ಅಂತಹ ಪರಂಪರೆ ಉಳಿಯಬೇಕಿದೆ. ಕಟ್ಟಡ ಕುಸಿದರೆ ಮತ್ತೆ ಕಟ್ಟಬಹುದು. ಮಾನವೀಯತೆಯನ್ನು ಅಂತರ್ಗತ ಮಾಡಿಕೊಂಡು ಬೆಳೆದ ಪರಂಪರೆ ಕುಸಿದುಹೋದರೆ ಕಟ್ಟುವುದು ಕಷ್ಟ...

ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಪರಂಪರೆಗಳ ನಗರ ಎಂಬ ಖ್ಯಾತಿಯೂ ಇದೆ. ಇಲ್ಲಿ ಈಗ ಪಾರಂಪರಿಕ ಕಟ್ಟಡಗಳು ಒಂದೊಂದಾಗಿ ಕುಸಿದು ಬೀಳುತ್ತಿವೆ. ಇತ್ತೀಚೆಗೆ ಮಹಾರಾಣಿ ವಿಜ್ಞಾನ ಕಾಲೇಜಿನ ಪಾರಂಪರಿಕ ಕಟ್ಟಡ ಕುಸಿದಿದೆ. ಕೆಲವೇ ದಿನಗಳ ಮೊದಲು ಅರಮನೆಯ ತಡೆಗೋಡೆ ಬಿದ್ದಿತ್ತು. ಈಗಾಗಲೇ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಸರಸ್ವತಿಪುರಂ ಅಗ್ನಿಶಾಮಕ ಠಾಣೆ, ಮಾನಸ ಗಂಗೋತ್ರಿಯಲ್ಲಿ ಇರುವ ಜಯಲಕ್ಷ್ಮೀ ವಿಲಾಸ ಅರಮನೆ ಚಾವಣಿ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಚಾವಣಿ ಸೇರಿದಂತೆ ಹಲವಾರು ಪಾರಂಪರಿಕ ಕಟ್ಟಡಗಳು ಕುಸಿದಿವೆ. ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿರುವ 131 ಪಾರಂಪರಿಕ ಕಟ್ಟಡಗಳು ಮೈಸೂರಿನಲ್ಲಿ ಇವೆ. ಅವುಗಳಲ್ಲಿ 25ಕ್ಕೂ ಹೆಚ್ಚು ಕಟ್ಟಡಗಳು ಅಪಾಯದ ಅಂಚಿನಲ್ಲಿವೆ ಎಂದು ತಜ್ಞರು ಗುರುತಿಸಿದ್ದಾರೆ. ಐತಿಹಾಸಿಕ ಮಹತ್ವ ಇರುವ ಮತ್ತು ಪುರಾತನ ಶೈಲಿಯ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು, ಅವುಗಳ ರಕ್ಷಣೆಗೆ ಒತ್ತು ನೀಡಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮಹತ್ವದ ಪ್ರಶ್ನೆ ಎಂದರೆ ಮೈಸೂರಿನಲ್ಲಿ ಕಟ್ಟಡಗಳು ಮಾತ್ರ ಕುಸಿಯುತ್ತಿವೆಯಾ?

ಮೈಸೂರು ಎಂದ ತಕ್ಷಣ ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ರೇಷ್ಮೆ, ಅಗರಬತ್ತಿ, ಮೈಸೂರು ಪಾಕ್, ಮೈಸೂರು ಪೇಟ ಎಲ್ಲವೂ ನೆನಪಿಗೆ ಬರುತ್ತವೆ. ಇವೆಲ್ಲವೂ ಪಾರಂಪರಿಕ ಮೌಲ್ಯಗಳನ್ನು ಹೊಂದಿವೆ. ಆದರೆ ಮಲ್ಲಿಗೆ ತಮಿಳುನಾಡಿನಿಂದ ಬರುತ್ತದೆ. ವೀಳ್ಯದೆಲೆ ತೋಟಗಳಲ್ಲಿ ಬಡಾವಣೆಗಳು ಎದ್ದಿವೆ. ಪೇಟ ಮುಂಬೈಯಿಂದ ಬರುತ್ತದೆ. ಮೈಸೂರಿನ ಐಡೆಂಟಿಟಿಯಲ್ಲಿ ಆಡಳಿತವೂ ಬಹಳ ಮುಖ್ಯವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಿದ ಆಡಳಿತ ಮೈಸೂರಿನದ್ದು.

ಪರಂಪರೆ ಎಂದರೆ ಅದು ಕಟ್ಟಡಕ್ಕೆ ಮಾತ್ರ ಸೀಮಿತವಲ್ಲ. ಮೈಸೂರಿನ ಆಡಳಿತ, ಸಾಹಿತ್ಯ, ನೃತ್ಯ, ಸಂಗೀತ, ಸಾಮಾಜಿಕ ಸಾಮರಸ್ಯ ಎಲ್ಲದರಲ್ಲೂ ಮೈಸೂರಿಗೆ ಒಂದು ಪರಂಪರೆ ಇದೆ. ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ರಾಜರು ಇದ್ದರೆ ನಮಗೆ ಸ್ವಾತಂತ್ರ್ಯವೇ ಬೇಡ’ ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದರು. ಜನಹಿತ, ಜನಕಲ್ಯಾಣವೇ ಮೈಸೂರು ರಾಜರ ಧ್ಯೇಯವಾಗಿತ್ತು. ಮೈಸೂರು ಮಹಾರಾಜರು ಎಂದಿಗೂ ಯುದ್ಧ ಮಾಡಿದವರಲ್ಲ. ‘ಮೈಸೂರು ರಾಜ್ಯವೇ ರಾಮರಾಜ್ಯ’ ಎಂದು ಮಹಾತ್ಮ ಗಾಂಧಿ ಬಣ್ಣಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ರಾಜ ಋಷಿ ಎಂದು ಕೊಂಡಾಡಿದ್ದರು.

ADVERTISEMENT

ಮೈಸೂರು ರಾಜರ ಜನಪರ ಆಡಳಿತಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ರಾಜರು ಮತ್ತು ರಾಣಿಯರ ಮೈಮೇಲಿನ ಬಂಗಾರವನ್ನು ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿದ ಅರಸರು ಅವರು. ಇಡೀ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದರೂ ವಿದ್ಯುತ್ ಬೆಳಕು ಮೊದಲು ಅರಮನೆಗೆ ಬರಲಿಲ್ಲ. ಕೆಜಿಎಫ್‌ಗೆ ಬಂತು. ನಂತರ ಬೆಂಗಳೂರಿಗೆ ಬಂತು. ಆ ಮೇಲೆ ಮೈಸೂರಿಗೆ ಬಂತು.

1806ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲ. ಮೈಸೂರಿಗೆ ಕಾಲರಾ ಅಪ್ಪಳಿಸಿತು. ಕೋಟೆಯ ಒಳಗೇ ಸಾವಿರಾರು ಮಂದಿ ಕಾಲರಾಕ್ಕೆ ಬಲಿಯಾದರು. ಅದೇ ಸಂದರ್ಭದಲ್ಲಿ ಕಾಲರಾ ನಿರೋಧಕ ಲಸಿಕೆ ಬಂತು. ಆದರೆ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರಲಿಲ್ಲ. ಆಗ ಮಹಾರಾಣಿ ಲಕ್ಷ್ಮಮ್ಮಣ್ಣಿ ಅವರು ಮೂವರು ರಾಜಕುಮಾರಿಯರಿಗೆ ಸಾರ್ವಜನಿಕವಾಗಿ ಲಸಿಕೆ ಹಾಕಿಸಿದರು. ನಂತರವೇ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು. ಈಗ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಾಗ ಏನೇನಾಯಿತು ಎಂದು ನೆನಪಿಸಿಕೊಳ್ಳಿ.

ಮೈಸೂರು ಅರಸರು ರಾಜರ ಖರ್ಚಿಗೆ ನಿಗದಿಯಾಗಿದ್ದ ಹಣಕ್ಕಿಂತ ಒಂದು ಪೈಸೆ ಹಣವನ್ನೂ ಹೆಚ್ಚಿಗೆ ಖರ್ಚು ಮಾಡಲಿಲ್ಲ. ಅರಮನೆಯನ್ನು ಕಟ್ಟಿದ್ದು ತಮ್ಮ ಹಣದಲ್ಲಿಯೇ ವಿನಾ ಸಾರ್ವಜನಿಕ ಹಣದಲ್ಲಿ ಅಲ್ಲ. ರಾಜರ ಖರ್ಚಿಗೆ ಹಣ ಇಲ್ಲದೇ ಇದ್ದಾಗ ಒಡವೆಗಳನ್ನು ಅಡ ಇಟ್ಟ ಪ್ರಸಂಗಗಳೂ ಇವೆಯೇ ವಿನಾ ಜನರ ಹಣ ಬಳಸಿಕೊಂಡ ಉದಾಹರಣೆಗಳಿಲ್ಲ. ಮೈಸೂರಿನ ಜನರೂ ಹಾಗೆಯೇ ಇದ್ದರು. ಅದಕ್ಕೂ ಉದಾಹರಣೆಗಳಿವೆ.

1897 ಫೆಬ್ರುವರಿ 28ರಂದು ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿ ಮತ್ತು ಸರ್ದಾರ್ ಎಂ.ಕಾಂತರಾಜೇ ಅರಸ್ ಅವರ ವಿವಾಹ. ಅದೇ ದಿನ ಅರಮನೆಗೆ ಬೆಂಕಿ ಬಿತ್ತು. ಅರಮನೆಯಲ್ಲಿ ಕೋಲಾಹಲ. ಜನ ದಿಕ್ಕಾಪಾಲಾದರು. ಆದರೆ ಮೈಸೂರಿನ ಜನರು ಬೆಂಕಿ ಜ್ವಾಲೆಯನ್ನು ಲೆಕ್ಕಿಸದೆ ಅರಮನೆಯ ಒಳಕ್ಕೆ ನುಗ್ಗಿ ಬಂಗಾರದ ಒಡವೆಗಳು, ಗ್ರಂಥಗಳು, ಪೀಠೋಪಕರಣಗಳು, ರೇಷ್ಮೆ ವಸ್ತ್ರಾಭರಣಗಳಲ್ಲದೆ ಅಮೂಲ್ಯ ವಸ್ತುಗಳನ್ನು ಕೈಯಿಂದ ಕೈಗೆ ದಾಟಿಸುತ್ತಾ ಹೊರಗೆ ಹಾಕಿದರು. ಒಡವೆ, ವಸ್ತ್ರ, ರಾಜಪೋಷಾಕು, ಹಾರ ತುರಾಯಿ, ಆಭರಣ ಎಲ್ಲವೂ ಎರಡು ರಾತ್ರಿ ಎರಡು ಹಗಲು ಅರಮನೆಯ ಅಂಗಳದಲ್ಲಿ ಅನಾಥವಾಗಿ ಬಿದ್ದಿದ್ದವು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಅರಮನೆಯ ಅಂಗಳದಲ್ಲಿ ನಿಂತು ರೋದಿಸಿದರೇ ವಿನಾ ಬೆಲೆಬಾಳುವ ವಸ್ತುಗಳನ್ನು ಮುಟ್ಟಲಿಲ್ಲ. ನಿಜವಾದ ಅರ್ಥದಲ್ಲಿ ಯಥಾ ರಾಜ ತಥಾ ಪ್ರಜಾ ಎಂಬ ಮಾತು ಅಲ್ಲಿ ನಿಜವಾಗಿತ್ತು.

ರಾಜರಂತೆಯೇ ದಿವಾನರೂ ಪ್ರಜಾಪಾಲಕರಾಗಿದ್ದರು. ಸರ್ ಎಂ.ವಿಶ್ವೇಶ್ವರಯ್ಯನವರು, ಮಿರ್ಜಾ ಇಸ್ಮಾಯಿಲ್ ಅವರು, ಕೆ.ಶೇಷಾದ್ರಿ ಅಯ್ಯರ್, ಎಂ.ಕಾಂತರಾಜ ಅರಸರು ಎಲ್ಲರೂ ಪಾರಂಪರಿಕ ಮೌಲ್ಯಗಳನ್ನು ಉಳಿಸಿಕೊಂಡೇ ಬಂದಿದ್ದರು. ಜನೋಪಕಾರದ ಕೆಲಸಗಳನ್ನು ಮಾಡಿದರು. ಈ ಪರಂಪರೆ ಈಗ ಎಲ್ಲಿಗೆ ಬಂದು ನಿಂತಿದೆ?

ಮೈಸೂರಿನಲ್ಲಿ ಗುರು ಶಿಷ್ಯ ಪರಂಪರೆಯೂ ಇತ್ತು. ವೆಂಕಣ್ಣಯ್ಯ, ಕುವೆಂಪು, ತ.ಸು.ಶಾಮರಾವ್, ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಡಿ.ಎಲ್.ನರಸಿಂಹಾಚಾರ್, ಪ್ರೊ.ಶ್ರೀಕಂಠಯ್ಯ ಹೀಗೆ ಸಾಲು ಸಾಲು ಗುರುಗಳು ಇದ್ದರು. ಅವರ ಗರಡಿಯಲ್ಲಿ ಕಲಿತ ಶಿಷ್ಯರೂ ಮುಂದೆ ಶ್ರೇಷ್ಠ ಗುರುಗಳಾಗಿ ಲೋಕಕ್ಕೆ ಅನನ್ಯ ಕೊಡುಗೆ ನೀಡಿದರು. ಶಿಷ್ಯರನ್ನು ಮನೆಯಲ್ಲಿಯೇ ಇಟ್ಟುಕೊಂಡು ಪಾಠ ಹೇಳುವ ಪದ್ಧತಿ ಇತ್ತು. ವಾರಾನ್ನದ ಪದ್ಧತಿ ಕೂಡ ಇತ್ತು. ಬಾಲಕಾರ್ಮಿಕನಾಗಿದ್ದ ಅಪ್ಪಾಜಿ ಗೌಡರನ್ನುಮನೆಯಲ್ಲಿಯೇ ಇಟ್ಟುಕೊಂಡು ಊಟ ಹಾಕಿ ವಿದ್ಯೆ ಕಲಿಸಿದ ಕನ್ನಡದ ಕಣ್ವ ಬಿಎಂಶ್ರೀ, ನೂರಾರು ವಿದ್ಯಾರ್ಥಿಗಳಿಗೆ ಬೆಳಕಾದ ವೆಂಕಣ್ಣಯ್ಯ, ವಿಚಾರದೀವಿಗೆ ಹತ್ತಿಸಿದ ಕುವೆಂಪು ಹೀಗೆ ಮೈಸೂರಿನ ಗುರು ಪರಂಪರೆ ದೊಡ್ಡದು. ಮಧ್ಯರಾತ್ರಿಮಕ್ಕಳಿಗೆ ಪಾಠ ಮಾಡಿದ ಬೆಟ್ಟಹಲಸೂರು ವೆಂಕಟರಾಮ ಶಾಸ್ತ್ರಿಗಳು, ಡಾ.ರಾಳಪಲ್ಲಿ ಅನಂತಕೃಷ್ಣ ಶರ್ಮಮುಂತಾದವರು ಮೈಸೂರು ಗುರು ಪರಂಪರೆಗೆ ಮೆರುಗು ತಂದವರು. ಈಗ ಮೈಸೂರಿನ ಗುರುಗಳ ಗತಿ ಏನಾಗಿದೆ, ಶಿಷ್ಯರ ಕತೆ ಏನಾಗಿದೆ?

ಮೈಸೂರಿನ ಸಾಹಿತ್ಯ ಪರಂಪರೆಯೂ ಮೌಲಿಕವಾದದ್ದು. ರಾಜಪ್ರಭುತ್ವಕ್ಕೆ ಕಟ್ಟುಬಿದ್ದ ಸಾಹಿತ್ಯವಲ್ಲ ಅದು. ರಾಜರೆಂಬ ಒಂದೇ ಕಾರಣಕ್ಕೆ ತಲೆಬಾಗುವ ಸಾಹಿತ್ಯವಲ್ಲ ಅದು. ಆಸೆ ಆಮಿಷಕ್ಕೆ ಬಗ್ಗುವ ಸಾಹಿತ್ಯ ಪರಂಪರೆಯಲ್ಲ ಅದು. ಯುವರಾಜ ಚಾಮರಾಜ ಒಡೆಯರ್ ಅವರು ಕುವೆಂಪು ಅವರ ಶಿಷ್ಯರು. ಒಮ್ಮೆ ಜಯಚಾಮರಾಜ ಒಡೆಯರ್ ಅವರ ಕನ್ನಡ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದ್ದರು. 17 ಅಂಕ ಕೊಟ್ಟರು. ಇದು ಆಗಿನ ಕುಲಪತಿ ಎನ್.ಎಸ್.ಸುಬ್ಬರಾವ್ ಅವರಿಗೆ ಗೊತ್ತಾಯಿತು. ನಂತರ ಅದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ತಿಳಿಯಿತು. ಈ ಬಗ್ಗೆ ವಿಚಾರಣೆ ನಡೆಸಲು ಟಿ.ಎಸ್.ವೆಂಕಣ್ಣಯ್ಯ ಅವರಿಗೆ ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ‘ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಂತಲ್ಲ’ ಎಂದು ಕೇಳಿದರು. ಅದಕ್ಕೆ ಕುವೆಂಪು ‘ನಾನು ನೀಡಿದ್ದಲ್ಲ, ಅವರು ಪಡೆದುಕೊಂಡಿದ್ದು’ ಎಂದು ಉತ್ತರಿಸಿದರು. ಅದನ್ನು ಬದಲಾಯಿಸಲು ಕುವೆಂಪು ಒಪ್ಪಲಿಲ್ಲ. ಅದಕ್ಕೆ ಮಹಾರಾಜರು ಬೇಸರ ಮಾಡಿಕೊಳ್ಳಲೂ ಇಲ್ಲ. ಯುವರಾಜರಿಗೆ ಮನೆಪಾಠ ಮಾಡಲೂ ಕುವೆಂಪು ಒಪ್ಪಿಕೊಳ್ಳಲಿಲ್ಲ.

ಮೈಸೂರಿನ ಆಡಳಿತ ಪರಂಪರೆ ಕುಸಿಯುತ್ತಿರುವುದರ ಬಗ್ಗೆ ಕುವೆಂಪು ಅವರಿಗೆ ಭಾರಿ ಸಿಟ್ಟಿತ್ತು. ‘ವಿಚಾರ ಕ್ರಾಂತಿಗೆ ಆಹ್ವಾನ’ ಎನ್ನುವ ಭಾಷಣದಲ್ಲಿ ಅವರು ಈ ಬಗ್ಗೆ ಸಾಕಷ್ಟು ಕಿಡಿಕಾರಿದ್ದಾರೆ. ‘ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ, ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ’ ಎಂದು ಬೇಸರಿಸಿಕೊಂಡಿದ್ದಾರೆ. ಆಗಲೇ ಹೇಳಿದ ಮಾತುಗಳು ಇವು. ಈಗ ಅವರು ಬದುಕಿದ್ದರೆ ಏನು ಹೇಳುತ್ತಿದ್ದರೋ ಕಾಣೆ.

ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಅವರ ಮಾತುಗಳನ್ನು ಕೇಳಿ. ‘ನಮ್ಮಲ್ಲಿ ಡೆಮಾಕ್ರಸಿ ಎನ್ನುವುದು ಬರಿಯ ಮಾಕರಿಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ ನಿಲ್ಲುವುದು ಕೂಡ ಅಸಾಧ್ಯ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳೂ ಬರಿ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನರು ಯಾತಕ್ಕೂ ಹೇಸದ ಖದೀಮರು ಸೇರಿ ಉಪಾಯದಿಂದಲಾದರೂ ಕಾಳಸಂತೆಯ ಕಪ್ಪುಹಣವೋ ಕಳ್ಳಸಾಗಣೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು. ಚುನಾವಣೆ ಗೆಲ್ಲಬಹುದು. ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನೂ ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೆ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು’ ಎಂದು ಕುವೆಂಪು ಸಿಟ್ಟು ಕಾರಿದ್ದರು. ಮೈಸೂರಿನ ಎಲ್ಲ ಪರಂಪರೆ ಕುಸಿಯುತ್ತಿರುವುದನ್ನು ಅವರು ಅಂದೇ ಗುರುತಿಸಿದ್ದರು.

ಕಟ್ಟಡ ಕುಸಿದರೆ ಮತ್ತೆ ಕಟ್ಟಬಹುದು. ಮಾನವೀಯತೆಯೇ ಕುಸಿದುಹೋದರೆ ಕಟ್ಟುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.