ADVERTISEMENT

ಚೆಲುವಿನಧಾರೆ ಗೊಂಬೆಯ ದಸರೆ...

ರೂಪಾ .ಕೆ.ಎಂ.
Published 1 ಅಕ್ಟೋಬರ್ 2022, 9:20 IST
Last Updated 1 ಅಕ್ಟೋಬರ್ 2022, 9:20 IST
ಕಾವ್ಯಾ ಶಾ
ಕಾವ್ಯಾ ಶಾ   

ನಾಡಹಬ್ಬ ದಸರಾದಲ್ಲಿ ದುರ್ಗಾಆರಾಧನೆ ಪ್ರಮುಖ ಎನಿಸಿದರೂ, ಹಲವಾರು ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಗೊಂಬೆ ಕೂರಿಸುವುದೂ ಅದರಲ್ಲಿ ಒಂದು. ಬದುಕಿಗೆ ಬೆಸೆದುಕೊಂಡಿರುವ ಅಗಣಿತ ಪ್ರೀತಿಯ ದ್ಯೋತಕವೇ ಈ ಗೊಂಬೆಗಳು. ಅವುಗಳೊಂದಿಗಿನ ನೆನಪಿನ ಮೆರವಣಿಗೆ ಇಲ್ಲಿದೆ...

***

ಬದುಕು ಕಟ್ಟಿಕೊಡುವ ಚಂದದ ಕ್ಷಣ
ದಸರಾ ಅಂದರೆ ನನಗೆ ನಾಡಹಬ್ಬ ಮೈಸೂರು ದಸರಾ, ಶೃಂಗೇರಿಯ ಶರನ್ನವರಾತ್ರಿ ಉತ್ಸವ.. ಇನ್ನೂ ಹಲವು. ಆದರೆ, ಅದಕ್ಕಿಂತ ಹೆಚ್ಚಾಗಿ ಆಪ್ತ ಎನಿಸೋದು ನಮ್ಮ ಮನೆಯಲ್ಲಿ ಗೊಂಬೆ ಕೂರಿಸುತ್ತಿದ್ದದು. ಪ್ರತಿ ವರ್ಷ ಆ ಮುದ್ದುಗೊಂಬೆಗಳಿಗೆ ಮಾಡುತ್ತಿದ್ದ ಅಲಂಕಾರವನ್ನು ನೋಡುವುದೇ ಚಂದ.ಈಗಲೂ ಗೊಂಬೆ ಹಬ್ಬ ಎಂದಾಕ್ಷಣ ಬಾಲ್ಯದ ಇಂತಹ ಚಂದದ ನೆನಪುಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ADVERTISEMENT

ನಮ್ಮ ಮನೆಯ ಅಡುಗೆ ಮನೆಯ ಮೂಲೆಯಲ್ಲಿ ಇಪ್ಪತ್ತೈದು ಕೆ.ಜಿ ಅಕ್ಕಿ ಹಿಡಿಯುವಂತಹ ತಗಡಿನ ಡಬ್ಬ ಇತ್ತು. ಅದಕ್ಕೆ ಅಮ್ಮ ಪೇಂಟ್ ಮಾಡಿಸಿ, ಫಳ ಫಳ ಹೊಳೆಯೋ ಹಾಗೆ ಇಟ್ಟುಕೊಂಡಿದ್ದರು. ವರ್ಷ ಪೂರ್ತಿ ಆ ಡಬ್ಬದ ಮೇಲೆ ಈರುಳ್ಳಿ ಬುಟ್ಟಿ, ಮಣೆ.. ಇನ್ನು ಎಂಥದ್ದೋ ವಸ್ತುಗಳನ್ನು ಪೇರಿಸಿಡುತ್ತಿದ್ದರು. ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಡಬ್ಬದ ಮೇಲಿದ್ದ ಲಗೇಜ್‌ನೆಲ್ಲ ಪಕ್ಕಕ್ಕಿಟ್ಟು, ಅದರ ಮುಚ್ಚಳ ತೆಗೆಯುತ್ತಿದ್ದರು. ಮುಚ್ಚಳ ತೆಗೆಯುತ್ತಿದ್ದಂತೆ ಮೊದಲು ಜಿರಳೆಗಳು ಹೊರಗಡೆ ಜಿಗಿಯುತ್ತಿದ್ದವು. ಆಮೇಲೆ ನ್ಯೂಸ್‌ಪೇಪರ್‌ನಲ್ಲಿ ಸುತ್ತಿಟ್ಟಿದ್ದ ಬೊಂಬೆಗಳನ್ನು ಒಂದೊಂದಾಗಿ ತೆಗೆದು ಜೋಡಿಸುತ್ತಿದ್ದರು. ಈ ಪ್ರಕ್ರಿಯೆ ನನಗೆ ಅಲ್ಲಾವುದ್ದೀನ್‌ ಅದ್ಭುತ ದೀಪದ ಕಥೆಯನ್ನು ನೆನಪಿಸುತ್ತಿತ್ತು. ಡಬ್ಬದಿಂದ ಬೊಂಬೆಗಳನ್ನು ತೆಗೆದು ಜೋಡಿಸುವಾಗ, ಅದೆಂಥದ್ದೋ ಸಂಭ್ರಮ. ಇಷ್ಟಕ್ಕೂ ಆ ಡಬ್ಬದಲ್ಲಿ ಏನಿದೆ ಅಂತ ಮೊದಲೇ ಗೊತ್ತಿದ್ದರೂ, ವರ್ಷವಾದ ಮೇಲೆ ಗೊಂಬೆ ನೋಡುತ್ತಿದ್ದದ್ದಕ್ಕೆ ಆಗುತ್ತಿದ್ದ ಪುಳಕವೇ ಬೇರೆ.

ಇನ್ನು, ಗೊಂಬೆಗಳಿಗೆ ಅಲಂಕಾರ ಮಾಡಿ, ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ,ಹಬ್ಬದ ದಿನ ಅವುಗಳ ಮುಂದೆ ದೀಪ ಹಚ್ಚಿಟ್ಟು, ಆರತಿ ಮಾಡುತ್ತಿದ್ದರು. ಆಗೆಲ್ಲ ಅಡುಗೆ ಮನೆ, ದೇವರ ಮನೆ ಅಂತ ಬೇರೆ ಇರಲಿಲ್ಲ. ಪುಟ್ಟ ಮನೆಯಲ್ಲೇ ಎಲ್ಲವನ್ನು ಒಪ್ಪವಾಗಿ, ಅಂದವಾಗಿ ಜೋಡಿಸಿಡುತ್ತಿದ್ದ ಆ ಕಲಾವಂತಿಕೆ ಮಾತ್ರ ಅದ್ಭುತ.

ಅಷ್ಟೆಲ್ಲ ಗೊಂಬೆಗಳನ್ನು ನೋಡಿದ್ದರೂ, ಅಲಂಕೃತಗೊಂಡ ಗೊಂಬೆಗಳನ್ನು ಮುಟ್ಟಬೇಕೆಂಬ ಕುತೂಹಲ. ಹೀಗಾಗಿ, ‘ಆನೆ ಗೊಂಬೆ ಇಟ್ಟಿರೋದು ಒಂಚೂರು ಓರೆಯಾಗಿದೆ ಅಲ್ವಾ’ ಅಂತ ಸುಳ್ಳೇ ಸುಳ್ಳೇ ಹೇಳುತ್ತಾ ಅದನ್ನು ಸರಿ ಮಾಡುವ ನೆಪದಲ್ಲಿ ಗೊಂಬೆ ಮುಟ್ಟಿ ಸಂಭ್ರಮಿಸುತ್ತಿದ್ದೆವು. ಗೊಂಬೆಗಳಿಗೆ ನಿತ್ಯ ಸಂಜೆ ಆರತಿ ಮಾಡುತ್ತಿದ್ದೆವು. ಗೊಂಬೆ ನೋಡೋದಕ್ಕೆ ಅಂತ ಬರುವ ಮಕ್ಕಳಿಗೆ ನಮ್ಮ ಕೈಯಿಂದಲೇ ಕೋಡುಬಳೆ, ಸಿಹಿ ತಿನಿಸುಗಳನ್ನು ಕೊಡಿಸುತ್ತಿದ್ದರು.

ನಮ್ಮ ಪಕ್ಕದ ಮನೆಯವರು ಗೋಧಿಹುಲ್ಲಿನಲ್ಲಿ ಗೊಂಬೆ ಪಾರ್ಕ್‌ ಮಾಡುತ್ತಿದ್ದರು. ಅಷ್ಟೇ ಅಲ್ಲ, ಗೊಂಬೆಗಳಿಗೆ ಚಂದದ ಅಲಂಕಾರ ಮಾಡಿ, ಬಣ್ಣ ಬಣ್ಣದ ಲೈಟ್ ಹಾಕುತ್ತಿದ್ದರು. ಆಗ ಗೊಂಬೆಗಳು ಫಳ ಫಳ ಹೊಳೆಯುತ್ತಿದ್ದವು. ಅದನ್ನು ನಾವು ಪ್ರಪಂಚದ ಮತ್ತೊಂದು ಅದ್ಭುತ ಎನ್ನುವ ರೀತಿ ನೋಡುತ್ತಿದ್ದೆವು. ಹೀಗೆ ಬೇರೆಯವರ ಮನೆಯ ಗೊಂಬೆಗಳನ್ನು ನೋಡಿಕೊಂಡು ವಾಪಸ್‌ ಬರುವ ಹೊತ್ತಿಗೆ ಅಮ್ಮನ ಮೇಲೆ ಕೋಪ, ಅದ್ಧೂರಿಯಾಗಿ ಗೊಂಬೆ ಜೋಡಿಸಿರುವ ಮನೆಯವರ ಮೇಲೆ ಹೊಟ್ಟೆಕ್ಕಿಚ್ಚು ಎಲ್ಲ ಶುರುವಾಗಿರೋದು. ನಂತರ, ‘ನಮ್ಮ ಮನೆಯಲ್ಲೂ ಪಾರ್ಕ್‌ ಮಾಡೋಣ ಅಂದರೆ ಜಾಗ ಇಲ್ಲ ಅಂತೀಯಾ, ಆ ಪಾತ್ರೆಗಳನ್ನೆಲ್ಲ ಮೇಲಿಟ್ಟರೆ ನಾವು ಪಾರ್ಕ್ ಮಾಡಬಹುದು’ ಅಂತ ಅಮ್ಮನಿಗೆ ಸಲಹೆ ಕೊಡುತ್ತಿದ್ದೆವು. ‘ಆಯ್ತು ಮಾಡೋಣ‘ ಅಂತ ಭರವಸೆ ಕೊಟ್ಟ ಮೇಲೆ ನಮಗೆ ಸಮಾಧಾನ ಆಗ್ತಿತ್ತು.

ಬಾಲ್ಯ ಕಳೆದು ಹೈಸ್ಕೂಲು, ಕಾಲೇಜಿಗೆ ಹೋಗುವ ವೇಳೆಗೆ ‘ಅಯ್ಯೊ ನಮ್ಮನೆಯಲ್ಲಿ ಈಗೆಲ್ಲ ಗೊಂಬೆ ಕೂರಿಸಲ್ಲ. ಅದನ್ನೆಲ್ಲ ಯಾರು ಮಾಡ್ತಾರೆ’ ಅನ್ನೋ ಮಾತುಗಳು ಕೇಳುತ್ತಿದ್ದೆವು. ಇದರ ನಡುವೆಯೂ ನಮ್ಮನೆಯಲ್ಲಿ ಮಾತ್ರ ಗೊಂಬೆ ಕೂರಿಸುವ ಸಂಪ್ರದಾಯ ಮುಂದುವರಿದಿತ್ತು.

ಈಗಲೂ ನಮ್ಮಲ್ಲಿ ಗೊಂಬೆ ಕೂರಿಸುತ್ತೇವೆ. ತುಂಬಾ ಅಲಂಕಾರ ಮಾಡುತ್ತೀವಿ. ನಾವು ತಾಯಿಯನ್ನು ಚಾಮುಂಡೇಶ್ವರಿಯೋ, ಶಕ್ತಿಯೋ, ಶಾರದೆಯೋ, ಲಲಿತೆಯೋ, ದುರ್ಗೆಯೋ ಎಷ್ಟೆಲ್ಲಾ ಹೆಸರಿನಿಂದ ಕರೆದು, ವಿಭಿನ್ನವಾಗಿ ಬಗೆ ಬಗೆಯ ಅಲಂಕಾರ ಮಾಡುತ್ತೇವೆ.

ನಿಜ, ಬದುಕನ್ನು ಕಟ್ಟಿಕೊಡುವುದು ಇಂಥ ಚಂದದ ಕ್ಷಣಗಳೇ. ಬದುಕಿನ ಜಂಜಾಟವನ್ನು ಮರೆತು ಇಂಥ ಹಬ್ಬಗಳ ತಯಾರಿಯಲ್ಲಿನಮ್ಮನ್ನು ನಾವು ತೊಡಗಿಸಿಕೊಳ್ಳುವುದಿದೆಯಲ್ಲಾ, ಇವೇ ಖುಷಿಯ ಕ್ಷಣಗಳು, ಕಲಾವಂತಿಕೆಯ ಕ್ಷಣಗಳು.

ಪ್ರತಿ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ಚಂದದ್ದು, ಚೆಲುವಾದದ್ದು ಯಾವತ್ತಿಗೂ ಇರುತ್ತದೆ ಎನ್ನುವುದಕ್ಕೆ ಆ ಗೊಂಬೆಗಳಲ್ಲಿ ಮೂಡಿರುವ ಕಲಾವಂತಿಕೆಯೇ ಸಾಕ್ಷಿ ಅಂತ ನನಗೆ ತೀವ್ರವಾಗಿ ಅನ್ನಿಸುತ್ತದೆ. ದಸರಾ– ಗೊಂಬೆ ಹಬ್ಬ ತುಂಬಾ ಚಂದವಾಗಿದೆ. ನಮ್ಮಲ್ಲರ ಬದುಕು ಹೀಗೆ ಚಂದವಾಗಿರಲಿ.


-ಅಪರ್ಣಾ ವಸ್ತಾರೆ, ನಿರೂಪಕಿ

ಕಲಾತ್ಮಕತೆ ಕಲಿಸಿದ ಹಬ್ಬ
ನವರಾತ್ರಿ ಹಬ್ಬವೆಂದರೆ ನನಗೆ ನೆನಪಾಗೋದು ಬಾಲ್ಯದಲ್ಲಿ ನೋಡಿದ್ದ ಗೊಂಬೆ ಹಬ್ಬ. ನನ್ನಜ್ಜಿ ಎರಡು ತಲೆಮಾರಿನಿಂದ ಬಳುವಳಿಯಾಗಿ ಬಂದ ಗೊಂಬೆಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ನನಗೆ ತುಂಬಾ ಚೆನ್ನಾಗಿ ನೆನಪಿದೆ. ನಮ್ಮ ಅಜ್ಜಿ ಮನೆಯಲ್ಲಿ ಇದ್ದಿದ್ದು ಮದುವೆ ಶಾಸ್ತ್ರವನ್ನು ವಿವರಿಸುವ ಗೊಂಬೆಗಳು. ಅರಿಶಿನ ಕುಟ್ಟುತ್ತಿರುವ, ಮದುಮಗ ಹಾಗೂ ಮದುಮಗಳಿಗೆ ಅರಿಶಿನ ಹಚ್ಚುತ್ತಿರುವ, ತಾಳಿ ಕಟ್ಟುತ್ತಿರುವ, ಸಪ್ತಪದಿ ತುಳಿಯುತ್ತಿರುವ.. ಹೀಗೆ ಮದುವೆಯ ವಿವಿಧ ಶಾಸ್ತ್ರ, ಸಂಪ್ರದಾಯಗಳನ್ನು ವರ್ಣಿಸುವ ಗೊಂಬೆಗಳಿದ್ದವು. ನನಗೆ ತುಂಬಾ ಇಷ್ಟವಾದ ಗೊಂಬೆ ಎಂದರೆ ಗುಂಡು ಮಣಿ ಸರ ಹಾಕಿಕೊಳ್ಳುತ್ತಿದ್ದ ದೊಡ್ಡ ಕಣ್ಣಿನ ಗೊಂಬೆ. ಅದರ ವಸ್ತ್ರವಿನ್ಯಾಸ, ಅದರ ಮೇಲಿನ ಕುಸುರಿ ಕಲೆ ಎಲ್ಲವೂ ಬಹಳ ವಿಭಿನ್ನವಾಗಿತ್ತು. ಇವತ್ತಿಗೂ ನಾನು ನೀಡುತ್ತಿರುವ ನೃತ್ಯ ಕಾರ್ಯಕ್ರಮಗಳಲ್ಲಿ ‘ಸೆಮಿ ಕ್ಲಾಸಿಕಲ್‌‘ ಪರಿಕಲ್ಪನೆಗೆ ಈ ಗೊಂಬೆಗಳ ವಸ್ತ್ರವಿನ್ಯಾಸವೇ ದೊಡ್ಡ ಪ್ರೇರಣೆ ನೀಡುತ್ತಿದೆ.

ಈ ಬಾರಿ ‘ಅಮ್ಮ‘ನಿಲ್ಲದೇ ಹಬ್ಬ ಮಾಡ್ತಿದ್ದೀನಿ.ಸದ್ಯಕ್ಕೆ ಗಂಡನ ಮನೆಯಲ್ಲಿ ಅತ್ತೆ ಜತೆ ನವರಾತ್ರಿಯನ್ನು ಆಚರಿಸ್ತೀದ್ದೀನಿ. ನೃತ್ಯಗಾರ್ತಿಯಾಗಿ ಯುವ ದಸರಾದಲ್ಲಿ ಪಾಲ್ಗೊಂಡಿದ್ದೀನಿ. ವೃತ್ತಿ ಮತ್ತು ಮನೆ ಎರಡೂ ಕಡೆಗಳಲ್ಲಿ ನವರಾತ್ರಿಯ ಸಂಭ್ರಮ ತುಂಬಿದೆ.


–ಕಾವ್ಯಾ ಶಾ, ನಟಿ

ಉತ್ಸಾಹ ತುಂಬುವ ಗೊಂಬೆ
ನಾನು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವಳು. ಅಲ್ಲಿ ಗಣಪತಿ ಕೂರಿಸೋದು, ಗೊಂಬೆ ಇಡುವಂತಹ ಪದ್ಧತಿಗಳೆಲ್ಲ ಇರಲಿಲ್ಲ. ನನ್ನ ತಂದೆ ದೊಡ್ಡೇರಿ ವೆಂಕಟಗಿರಿರಾವ್, ವೈದ್ಯರಾಗಿದ್ದರಿಂದ ಊರಿಂದ ಊರಿಗೆ ವರ್ಗವಾಗುತ್ತಿತ್ತು. ಆ ಪ್ರಕ್ರಿಯೆಯಲ್ಲಿ ಕೆಲ ವರ್ಷಗಳು ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದೆವು. ಅಲ್ಲಿದ್ದಾಗ ಪ್ರತಿ ವರ್ಷ ನಾವು ಗೊಂಬೆ ಖರೀದಿ ಮಾಡುತ್ತಿದ್ದೆವು. ಅದರಲ್ಲೂ ನಾನು ಅಪ್ಪ ಇಬ್ಬರೂ ಹೋಗಿ ಗೊಂಬೆ ಖರೀದಿಸುತ್ತಿದ್ದೆವು. ಈ ಗೊಂಬೆಗಳನ್ನು ಕೂರಿಸುವುದಕ್ಕಾಗಿಯೇ ಎರಡು–ಮೂರು ಸ್ಟ್ಯಾಂಡ್‌ಗಳನ್ನು ಖರೀದಿಸಿದ್ದೆವು. ಆ ಸ್ಟ್ಯಾಂಡ್‌ಗಳಿಗೆ ಬಣ್ಣ ಬಣ್ಣದ ಪೇಪರ್‌ನಿಂದ ಅಲಂಕಾರ ಮಾಡುತ್ತಿದ್ದೆವು. ನಂತರ ಒಂದರ ಮೇಲೊಂದು ಜೋಡಿಸಿ, ಅವುಗಳ ಮೇಲೆ ಪಟ್ಟದ ಗೊಂಬೆಗಳನ್ನು ಸಾಲಾಗಿ ಜೋಡಿಸುತ್ತಿದ್ದೆವು.

ಗೊಂಬೆ ಕೂರಿಸುವುದಷ್ಟೇ ಅಲ್ಲ, ಸಂಜೆ ಮಕ್ಕಳನ್ನು ಆಹ್ವಾನಿಸಿ ಗೊಂಬೆ ಆರತಿ ಮಾಡುತ್ತಿದ್ದೆವು. ಗೊಂಬೆ ನೋಡಲು ಬರುವ ಪುಟ್ಟ ಮಕ್ಕಳಿಗೆ ಬಾಗಿನ ಕೊಡುತ್ತ ಇದ್ದೇವು. ಅದಕ್ಕೆ ‘ಗೊಂಬೆ ಬಾಗಿನ’ ಎಂದೇ ಹೆಸರಿತ್ತು. ಅದರಲ್ಲಿ ಮಕ್ಕಳಿಗೆ ಇಷ್ಟವೆನಿಸುವ ಸಿಹಿ ತಿನಿಸುಗಳ ಪೊಟ್ಟಣ ಇರುತ್ತಿತ್ತು.

ನಾನು ಪಿಯುಸಿ ಮುಗಿಸುವವರೆಗೂ ದೊಡ್ಡಬಳ್ಳಾಪುರದಲ್ಲಿಯೇ ಇದ್ದಿದ್ದು. ಅಲ್ಲಿವರೆಗೂ ನಮ್ಮನೆಯಲ್ಲಿ ಒಂದು ವರ್ಷವೂ ತಪ್ಪಿಸದೇ ಗೊಂಬೆ ಕೂರಿಸುತ್ತಿದ್ದೆವು.ನಮ್ಮನೆಯಲ್ಲಿ ಮನೆಯ ವಾರ್ತೆಗಳನ್ನು ಬಿಂಬಿಸುವಂತಹ ಗೊಂಬೆಗಳಿದ್ದವು. ಈ ಗೊಂಬೆಗಳು ಸೂಕ್ಷ್ಮವಾಗಿ ಮನೆಯ ವಾರ್ತೆಯನ್ನು ಹೇಳುತ್ತಾ, ಹೇಗೆ ಉತ್ಸಾಹದಿಂದ ಬದುಕು ನಡೆಸಬೇಕು ಎಂಬುದನ್ನೂ ವಿವರಿಸುತ್ತಿದ್ದವು.

ಗೊಂಬೆ ಕೂರಿಸುವ ಸಂಪ್ರದಾಯವಿಲ್ಲದ ಊರಿನವಳಾಗಿದ್ದರೂ, ಈ ಗೊಂಬೆ ಹಬ್ಬದ ನೆನಪು ಸದಾ ನನ್ನ ಮನದಲ್ಲಿ ಹಸಿರಾಗಿದೆ.


-ಅನುರಾಧ ಬಿ.ರಾವ್, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.