ADVERTISEMENT

ಸಂಕ್ರಾಂತಿ ಸಂಭ್ರಮ: ಜಾತ್ರೆ ಬಲು ಜೋರ...

ಪ್ರಮೋದ
Published 7 ಜನವರಿ 2023, 19:30 IST
Last Updated 7 ಜನವರಿ 2023, 19:30 IST
ಜನರೇ ಎಳೆದ ಕೊಪ್ಪಳದ ಗವಿಸಿದ್ದೇಶ್ವರ ತೇರು ಇದು –‍ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಜನರೇ ಎಳೆದ ಕೊಪ್ಪಳದ ಗವಿಸಿದ್ದೇಶ್ವರ ತೇರು ಇದು –‍ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಸಂಕ್ರಾಂತಿ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಜಾತ್ರೆಗಳ ಸಂಭ್ರಮ. ಸಾಮಾಜಿಕ ಹಾಗೂ ವೈಚಾರಿಕ ಕಾರಣಗಳಿಂದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆ, ನಾಟಕಗಳ ಪ್ರದರ್ಶನಕ್ಕೆ ಹೆಸರಾದ ಬನಶಂಕರಿ ಜಾತ್ರೆ, ಗ್ರಾಮೀಣ ಸೊಗಡಿನ ಸಡಗರಕ್ಕೆ ಖ್ಯಾತಿ ಗಳಿಸಿದ ಸವದತ್ತಿ ಜಾತ್ರೆಗಳ ವೈಭವ ನೋಡಿಕೊಂಡು ಬರೋಣ ಬನ್ನಿ...

***

ಕೊಪ್ಪಳಕ್ಕೆ ನೀವು ಎಂದಾದರೂ ಬೇಸಿಗೆಯಲ್ಲಿ ಬಂದಿದ್ದೀರಾ? ಒಲೆಯ ಮೇಲಿನ ಬೋಗುಣಿಯಂತೆ ಕಾದು ನಿಂತ ಕಲ್ಲುಬಂಡೆಗಳು, ಕೆಂಡದ ಸ್ನಾನ ಮಾಡಿಸುವ ರಣರಣ ಬಿಸಿಲು, ಕಾದ ಕಾವಲಿಯಂತಾದ ಗವಿಮಠದ ಮುಂದಿನ ಜಾತ್ರೆಯ ಬಯಲು. ಆ ಬಿಸಿಲಿನ ಸವಿಯುಂಡವರು ಜನವರಿಯಲ್ಲಿ ನಡೆಯುವ ಅಜ್ಜನ ಜಾತ್ರೆಗೆ ಸಾಕ್ಷಿಯಾದರೆ ನಿಬ್ಬೆರಗಾಗಿ ನಿಂತುಬಿಡುತ್ತಾರೆ. ಕೊಪ್ಪಳ ಸೀಮೆಗೆ ಅಷ್ಟೊಂದು ರೂಪಾಂತರ ಆಗ. ಜಾತ್ರೆಯ ಬಯಲಿನಲ್ಲಿ ಇರುವೆ ಕೂಡ ಓಡಾಡಲು ಆಗದಷ್ಟು ಕಿಕ್ಕಿರಿದ ಜನಸಾಗರ, ಜನರಿಂದ ತುಂಬಿ ತುಳುಕುತ್ತಿದ್ದರೂ ಸ್ವಚ್ಛತೆಯಲ್ಲಿ ಒಂದಿಷ್ಟೂ ಕಾಣದ ಲೋಪ, ಲಕ್ಷ ಲಕ್ಷ ಜನರಿಗೆ ಹಗಲು ರಾತ್ರಿಯನ್ನದೆ ಸಾಂಗೋಪಾಂಗವಾಗಿ ನಡೆಯುವ ಊಟದ ಸಮಾರಾಧನೆ, ಪ್ರತಿಯೊಂದು ಕೆಲಸದಲ್ಲೂ ಪುಟಿದೇಳುವ ಜೀವನೋತ್ಸಾಹ. ಅಬ್ಬಬ್ಬಾ, ಜಾತ್ರೆ ಅಂದರೆ ಹೀಗಿರಬೇಕು ಎನ್ನುವ ಉದ್ಗಾರ. ಇದೇ ಅಜ್ಜನ ಜಾತ್ರೆಯ ವೈಶಿಷ್ಟ್ಯ.

ADVERTISEMENT

ಹೊಸವರ್ಷಕ್ಕೂ ಮೊದಲು ಕೊಪ್ಪಳ ಜಿಲ್ಲೆಯ ಗುನ್ನಾಳ, ಗಿಣಗೇರಾ, ಜಹಗೀರ ಗೂಡದೂರ್, ಕೋಳೂರು, ಕಾಟ್ರಳ್ಳಿ, ಕಾಮನೂರು, ಅಳವಂಡಿ, ಗಂಗಾವತಿ, ಕಾರಟಗಿ ಹೀಗೆ ಹಲವಾರು ಊರುಗಳಲ್ಲಿ ಜೋಳದ ರೊಟ್ಟಿ ಸದ್ದು ಜೋರಾಗಿ ಕೇಳುತ್ತಲೇ ಇರುತ್ತದೆ. ಆಗ ಊರಿನ ಮಂದಿಗೆಲ್ಲ ದಿನಪೂರ್ತಿ ರೊಟ್ಟಿ ತಟ್ಟುವುದೇ ಕೆಲಸ. ಅದು ಗವಿಸಿದ್ದೇಶ್ವರನ ಸೇವೆ. ಉತ್ತರ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿಯೂ ಈ ಸದ್ದು ಸಾಮಾನ್ಯ. ನವೆಂಬರ್‌ ದಾಟಿದರಂತೂ ಶೇಂಗಾ ಹೋಳಿಗೆಯ ಘಮ ಮೂಗಿಗೆ ರಾಚದೇ ಇರದು.

ಹೊಸ ವರ್ಷದ ಸಂಭ್ರಮ ಮುಗಿಯುತ್ತಿದ್ದಂತೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಮುಂದೆ ಸರತಿ ಸಾಲು. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಅಕ್ಕಿ, ಬೇಳೆಕಾಳು, ಜೋಳ, ಬೆಲ್ಲ, ಎಣ್ಣೆ ಮೊದಲಾದ ಆಹಾರ ಸಾಮಗ್ರಿಗಳನ್ನು ಹೊತ್ತು ಚಕ್ಕಡಿ, ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ಮಠದ ಮುಂದೆ ನಿಲ್ಲುತ್ತವೆ. ಬೆಣ್ಣೆ, ತುಪ್ಪದ ಕ್ಯಾನ್‌ಗಳು ರಾಶಿ ರಾಶಿಯಾಗಿ ಮಠದ ಆವರಣದಲ್ಲಿ ಸಂಗ್ರಹಗೊಳ್ಳುತ್ತವೆ. ರೊಟ್ಟಿಯ ಬಣವೆಯನ್ನೇ ಅಲ್ಲಿ ಒಟ್ಟಲಾಗಿರುತ್ತದೆ.

ಯಲ್ಲಮ್ಮನ ಗುಡ್ಡವೆಂದರೆ ಭಕ್ತಿಯೇ ಭಂಡಾರ... ಅದುವೃ ಶೃಂಗಾರ

ಗವಿಮಠದ ಪಾಕಶಾಲೆಯಲ್ಲಿ ಹೊತ್ತಿದ ಒಲೆಗಳು ಆರುವುದೇ ಇಲ್ಲ. ಹೌದು, ಕಟ್ಟಿಗೆ ಬಳಸಿ ಅಡುಗೆ ಮಾಡುವ ಒಲೆಗಳು 24 ತಾಸು ಉರಿಯುತ್ತಲೇ ಇರುತ್ತವೆ. ಒಲೆ ಎಲ್ಲಿಯವರೆಗೆ ಉರಿಯುತ್ತದೆ ಎನ್ನುವ ಪ್ರಶ್ನೆಗೆ ಕೊನೆಯ ಭಕ್ತನ ಊಟವಾಗುವ ತನಕ ಎನ್ನುವುದೇ ಉತ್ತರ. ಗಂಗಾವತಿ ಪ್ರಾಣೇಶ್‌ ಅವರ ಮಾತಿನಲ್ಲೇ ಹೇಳುವುದಾದರೆ ಇಲ್ಲಿರುವ ಸಾಂಬಾರದ ಕೊಪ್ಪರಿಗೆಗಳು ಸ್ವಿಮ್ಮಿಂಗ್‌ ಪೂಲ್‌ನಂತೆ ಗೋಚರಿಸುತ್ತವೆ! ಒಟ್ಟಿದ ಅನ್ನದ ಬೆಟ್ಟ ಒಂದೇ ಪಂಕ್ತಿಗೆ ಖಾಲಿಯಾಗಿ ಮತ್ತೊಂದು ಅನ್ನದ ಬೆಟ್ಟ ಪಕ್ಕದಲ್ಲಿ ಏಳುತ್ತಿರುತ್ತದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಊಟಕ್ಕೆ ಬಂದರೂ ಒಂದಿನಿತೂ ಗೊಂದಲವಿಲ್ಲ. ಗೌಜು ಗದ್ದಲವಿಲ್ಲ. ನೂಕಾಟ, ತಳ್ಳಾಟವಂತೂ ಇಲ್ಲವೇ ಇಲ್ಲ. ಎಲ್ಲರಿಗೂ ಶಿಸ್ತಿನಿಂದ ಊಟ ಬಡಿಸಲಾಗುತ್ತದೆ. ಅಚ್ಚುಕಟ್ಟಾದ ಊಟದ ಕೌಂಟರ್‌ಗಳ ವ್ಯವಸ್ಥೆ ಇರುತ್ತದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಭಕ್ತರು ಊಟ ಮಾಡಿ ಹೋಗಿದ್ದು ಕೂಡ ಗೊತ್ತಾಗದಷ್ಟು ಶಿಸ್ತು ಅಲ್ಲಿ ಮನೆಮಾಡಿರುತ್ತದೆ.

ಗವಿಮಠ ಪ್ರತಿ ವರ್ಷ ನಾಲ್ಕು ದಿನ ಮಾತ್ರ ಜಾತ್ರಾ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಭಕ್ತರು ಎರಡು ತಿಂಗಳು ಮೊದಲೇ ‘ಮಹಾದಾಸೋಹ’ದ ಸಿದ್ಧತೆ ಆರಂಭಿಸುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ದವಸ ಧಾನ್ಯಗಳನ್ನು ಸಮರ್ಪಿಸಿ ‘ನಮ್ಮ ಹೆಸರು ಎಲ್ಲಿಯೂ ಹೇಳಬೇಡಿ’ ಎಂದು ಗವಿಸಿದ್ದೇಶ್ವರನ ಸನ್ನಿಧಿಗೆ ಕೈ ಮುಗಿದು ಹೋಗುವ ಭಕ್ತರೂ ಇದ್ದಾರೆ. ಎರಡ್ಮೂರು ವಾರ ಜಾತ್ರೆಯ ಸಂಭ್ರಮ ಉಳಿಯುವಂತೆ ಜನ ನೋಡಿಕೊಳ್ಳುತ್ತಾರೆ. ಆದ್ದರಿಂದ ಇದು ಗವಿಮಠದ ಸನ್ನಿಧಿಯಲ್ಲಿ ಜನರೇ ಮಾಡುವ ಜಾತ್ರೆ. ಅವರೇ ಎಳೆಯುವ ತೇರು. ಅಜ್ಜನ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ. ಆಡಂಬರಕ್ಕೆ ಸೀಮಿತವಲ್ಲ. ಗವಿಮಠದ ಬಗ್ಗೆ ಅನನ್ಯ ಪ್ರೀತಿ, ನೆಲದ ಸಂಸ್ಕೃತಿಯ ಅನಾವರಣಕ್ಕೂ ಇಲ್ಲುಂಟು ಜಾಗ. ಜನರ ಬದುಕಿನ ಜೊತೆಗೆ ಜಾತ್ರೆ ಸಮ್ಮಿಳಿತಗೊಂಡಿದ್ದರಿಂದ ಅವರ ಬದುಕಿಗೆ ಬೇಕಾದುದೆಲ್ಲವನ್ನೂ ಗವಿ ಮಠ ಕೂಡ ಮೊಗೆದು ಕೊಡುವ ಪ್ರಯತ್ನ ಮಾಡುತ್ತದೆ.

ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಕೋವಿಡ್‌ ಹಾವಳಿ ಪೂರ್ವದಲ್ಲಿ ಐದಾರು ಲಕ್ಷ ಜನ ಸೇರುತ್ತಿದ್ದರು. ಕೋವಿಡ್ ಕಾರಣದಿಂದ ಹೋದವರ್ಷ ‘ಯಾರೂ ಬರಬೇಡಿ’ ಎಂದು ಹೇಳಿ ಬೆಳಗಿನ ಜಾವ ಎಳೆದ ತೇರಿಗೆ 50 ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು. ಈಗ ಯಾವ ಸೋಂಕಿನ ಹಾವಳಿ ವ್ಯಾಪಕವಾಗಿಲ್ಲ. ಈ ಬಾರಿಯ ಜಾತ್ರೆ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಮಾಡಲಾಗುತ್ತಿದೆ. ವಿದೇಶಗಳಲ್ಲಿ ನೆಲೆಸಿರುವ ಜಿಲ್ಲೆಯ ಜನ ಜಾತ್ರೆಯ ನೆಪದಲ್ಲಿ ಊರಿಗೆ ಮರಳುತ್ತಿದ್ದಾರೆ.

ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೀಗೆ ಬರುವುದೇ ಚೆಂದ ಚಿತ್ರ/ಪ್ರಕಾಶ ಕಂದಕೂರ

ಈ ಸಲ ನಾಲ್ಕು ಲಕ್ಷ ಶೇಂಗಾ ಹೋಳಿಗೆ, 20 ಲಕ್ಷಕ್ಕೂ ಹೆಚ್ಚು ಜೋಳದ ರೊಟ್ಟಿ, 270 ಕ್ವಿಂಟಲ್‌ ಸಿಹಿ ಮಾದಲಿ ಸಂಗ್ರಹವಾಗಿದ್ದು, ಈ ಲೆಕ್ಕವೇ ಗವಿಮಠದ ಜಾತ್ರೆಗೆ ಬರುವ ಭಕ್ತರ ಸಂಖ್ಯೆಗೆ ಸಾಕ್ಷಿ ಹೇಳುತ್ತದೆ. ಬಣವೆಯಂತೆ ಒಟ್ಟಿರುವ ಜೋಳದ ರೊಟ್ಟಿ, ಊಟದ ಜಾಗದಲ್ಲಿಯೇ ಬಿಸಿಬಿಸಿಯಾಗಿ ಮಾಡಿಕೊಡುವ ಮಿರ್ಚಿ, ಅನ್ನದ ರಾಶಿ, ಸಾಂಬಾರ್‌ ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಇವುಗಳನ್ನೆಲ್ಲ ತಯಾರಿಸುವ ಕೊಪ್ಪರಿಗೆಗಳನ್ನು ನೋಡುವುದೇ ಮಹಾಸಂಭ್ರಮ.

ಧರ್ಮ, ಜಾತಿ, ಊರು, ವ್ಯಕ್ತಿ ಹಾಗೂ ಹೊಲದ ಬೇಧವಿಲ್ಲದೆ ಎಲ್ಲೆಡೆ ಬೆಳೆದ ಧಾನ್ಯಗಳು ಗವಿಮಠದ ಸನ್ನಿಧಿಯಲ್ಲಿ ಒಂದಾಗುತ್ತವೆ. ಇದರಂತೆಯೇ ಜಾತ್ರೆಯ ನೆಪದಲ್ಲಿ ಎಲ್ಲ ಧರ್ಮದವರೂ ಒಂದೆಡೆ ಸೇರುತ್ತಾರೆ. ದಿನಪೂರ್ತಿ ಅಡುಗೆ ಮಾಡುವ ಕೆಲಸವನ್ನು ಸರತಿಯ ಮೇಲೆ ದಿನಕ್ಕೊಂದು ಊರಿನ ಜನ ನೋಡಿಕೊಳ್ಳುತ್ತಾರೆ. ಜಾತ್ರೆ ಪೂರ್ವದಿಂದಲೇ ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಎಲ್ಲವನ್ನೂ ಅಸ್ಥೆಯಿಂದ ನೋಡುತ್ತಾರೆ. ಕಟ್ಟಿಗೆ ಹೊತ್ತುಕೊಂಡು ಹೋಗುವವರಿಗೆ ಹೆಗಲಾಗುತ್ತಾರೆ. ಊಟದ ಕೋಣೆ ಸ್ವಚ್ಛಗೊಳಿಸುವ ಸಿಬ್ಬಂದಿಗೆ ನೆರವಾಗುತ್ತಾರೆ.

ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ವಿವಿಧ ಬಣ್ಣ, ಆಕಾರದ ಬಳೆಗಳ ಸಾಲು ಸಾಲು ಅಂಗಡಿಗಳು, ರಿಬ್ಬನ್ ಹೇರ್ ಕ್ಲಿಪ್ಪುಗಳು, ಬಟ್ಟೆಗಳ ಸರತಿ ಸಾಲು. ಮಕ್ಕಳ ಆಟಿಕೆಗಳ ಜಗತ್ತು ಬೇರೆ. ಜಾತ್ರೆ ಎಂದಮೇಲೆ ಬೆಂಡು–ಬತ್ತಾಸು, ಚುರುಮುರಿ ಖಾರದ ಅಂಗಡಿಗಳು ಇಲ್ಲದಿದ್ದರೆ ಹೇಗೆ? ಗೆರೆ ಕೊರೆದಂತೆ ಎಲ್ಲದಕ್ಕೂ ಸಾಲು ಸಾಲು ಅಂಗಡಿಗಳು.

ಜಾತ್ರೆಯ ಧಾರ್ಮಿಕ ಆಚರಣೆಗಳು ಕೆಲವಾದರೆ ‘ಅಜ್ಜನ ಜಾತ್ರೆ’ಯಲ್ಲಿ ಸಾಮಾಜಿಕ ಹಾಗೂ ವೈಚಾರಿಕ ವಿಚಾರಗಳೇ ಪ್ರಧಾನವಾಗುತ್ತವೆ. ಪ್ರತಿ ಕಾರ್ಯಕ್ರಮಗಳು ಅರ್ಥಪೂರ್ಣ ಸಂದೇಶಗಳನ್ನು ಕೊಡುವಂತೆ ಯೋಜನೆ ರೂಪಿಸಲಾಗುತ್ತದೆ. ಜಾತ್ರೆಯ ನೆಪದಲ್ಲಿ ಗವಿಮಠ ರಕ್ತದಾನ ಶಿಬಿರ, ಬಾಲ್ಯ ವಿವಾಹ ತಡೆ, ಜಲ ಸಂರಕ್ಷಣೆ, ಸಶಕ್ತಮನ, ಸಂತೃಪ್ತ ಜೀವನ, ಕೃಪಾದೃಷ್ಟಿ, ಲಕ್ಷ ಲಕ್ಷ ವೃಕ್ಷೋತ್ಸವ ಹಾಗೂ ಅಂಗಾಂಗದಾನ ಜಾಗೃತಿ ಜಾಥಾದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿವೆ.

ಅಜ್ಜನ ಜಾತ್ರೆಗೆ ಬಂದ ರೊಟ್ಟಿಗೆ ಲೆಕ್ಕ ಇಟ್ಟವರು ಯಾರು..

ಸತತ ಮಳೆಯ ಅಭಾವದಿಂದ ಬರಗಾಲದಿಂದ ಪರಿತಪಿಸುತ್ತಿದ್ದ ರೈತ ಸಮುದಾಯದಲ್ಲಿ ನೀರಿನ ಮಿತವ್ಯಯದ ಬಳಕೆಯ ಅರಿವು ಮೂಡಿಸಲು ಮಳೆನೀರು ಸಂಗ್ರಹ ಜಾಗೃತಿ ಮೂಡಿಸಲಾಗಿದೆ. ಕೊಪ್ಪಳ ಸಮೀಪದ ತುಂಗಭದ್ರದ ಉಪನದಿಯಾದ ಹೀರೆಹಳ್ಳದ ಸುಮಾರು 26 ಕಿ.ಮೀ. ಉದ್ದದ ಹಳ್ಳದ ಪುನಶ್ಚೇತನ ಮಾಡಲಾಗಿದೆ. ಕಲ್ಭಾವಿ ಕೆರೆ, ರಾಯನ ಕೆರೆ, ನಿಡಶೇಷಿ ಕೆರೆ, ಇಂದರಗಿ ಕೆರೆ, ಗಂಗಾವತಿಯ ದುರ್ಗಮ್ಮನ ಹಳ್ಳ ಇವೆಲ್ಲವೂ ಗವಿಮಠದ ಸ್ವಾಮೀಜಿಯ ಮುಂದಾಳತ್ವದಲ್ಲಿ ಸ್ವಚ್ಛಗೊಂಡಿವೆ. ಪ್ರತಿ ವರ್ಷವೂ ಅಭಿವೃದ್ಧಿ ಕಾರ್ಯದ ಸಂಕಲ್ಪದೊಂದಿಗೆ ಜಾತ್ರೆಯ ಯೋಜನೆ ಸಿದ್ಧಗೊಂಡು ಜನರಿಂದ ನಡೆಯುವ ಜನಪರ ಜಾತ್ರೆಯಾಗಿ ಬದಲಾಗಿದೆ.

ನಾಟಕಗಳದ್ದೇ ಕಾರುಬಾರು
ಎರಡು ದಿನಗಳ ಹಿಂದೆಯಷ್ಟೇ ರಥೋತ್ಸವ ನೆರವೇರಿದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬನಶಂಕರಿ ಜಾತ್ರೆ ವಿಭಿನ್ನ ನಾಟಕಗಳ ಕಾರಣದಿಂದಲೇ ಜನಮಾನಸದಲ್ಲಿ ಉಳಿದುಕೊಂಡಿದೆ.

ರಂಗಭೂಮಿ ಕಲಾವಿದರು ಹಾಗೂ ನಾಟಕ ಕಂಪನಿಗಳಿಗೆ ‘ಅಕ್ಷಯ ಪಾತ್ರೆ‘ಯಾದ ಈ ಜಾತ್ರೆಯಲ್ಲಿ ನಾಟಕ ನೋಡುವ ಸಲುವಾಗಿಯೇ ಲಕ್ಷಾಂತರ ಜನ ಬರುತ್ತಾರೆ. ಭರ್ತಿ ಒಂದು ತಿಂಗಳು ಬೆಳಗಿನ ಜಾವದ ತನಕ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ‘ಬನಶಂಕರಿ ದೇವಿ ಭಕ್ತರಿಗಷ್ಟೇ ಅಲ್ಲ. ನೂರಾರು ಜನ ಕಲಾವಿದರನ್ನು ಕಾಪಾಡುತ್ತಾಳೆ. ನಾಟಕ ಕಲೆಯನ್ನು ರಕ್ಷಿಸುತ್ತಾಳೆ’ ಎನ್ನುವ ನಂಬಿಕೆ ಹೊಂದಿದ್ದಾರೆ.

ವರನಟ ಡಾ. ರಾಜಕುಮಾರ್, ಉಮಾಶ್ರಿ, ಗುಬ್ಬಿ ವೀರಣ್ಣ, ಚಿಂದೋಡಿ ಕುಟುಂಬ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಬನಶಂಕರಿ ಸನ್ನಿಧಿಯಲ್ಲಿ ಬಣ್ಣ ಹಚ್ಚಿದ್ದಾರೆ. ಎಳ್ಳು ಅಮವಾಸ್ಯೆ ಮುಗಿಯುತ್ತಿದ್ದಂತೆ ಜಾತ್ರೆಯ ಸಿದ್ಧತೆ ಜೋರಾಗುತ್ತದೆ. ಬನಶಂಕರಿ ಜಾತ್ರೆಯಲ್ಲಿ ನಾಟಕ ಪ್ರದರ್ಶನ ಮಾಡಿದರೆ ಆ ಕಂಪನಿಯವರಿಗೆ ‘ವರ್ಷದ ಅನ್ನ‘ ಸಿಗುತ್ತದೆ ಎನ್ನುವ ಗಟ್ಟಿ ನಂಬಿಕೆ ಕಲಾವಿದರದ್ದು. ಇದಕ್ಕಾಗಿಯೇ ‘ಬನಶಂಕರಿ ಜಾತ್ರೆ ಜೋರ, ಬರ್ತಾವ ನಾಟಕ ಸಾವಿರಾರ...‘ ಎನ್ನುವ ಹಾಡು ಉತ್ತರ ಕರ್ನಾಟಕದಲ್ಲಿ ಜನಜನಿತ. ಸದ್ಯದ ಟ್ರೆಂಡ್‌ಗಳಿಗೆ ಅನುಗುಣವಾಗಿ ಹಾಸ್ಯಭರಿತ ನಾಟಕಗಳಿಗೆ ಆದ್ಯತೆ ಸಿಗುತ್ತಿದೆ. ಜಾತ್ರೆಗೆ ಸಾಕಷ್ಟು ದಿನಗಳ ಮೊದಲೇ ನಾಟಕಗಳ ಪ್ರದರ್ಶನದ ‍ಪ್ರಚಾರ ನಡೆಯುತ್ತದೆ.

ಬನಶಂಕರಿ ಜಾತ್ರೆಯೆಂದರೆ ನೆನಪಾಗುವುದೇ ನಾಟಕಗಳ ಟೆಂಟ್‌

‘ತೊದಲ ಗಂಗಿ ಹರಿದಾಳ ಅಂಗಿ, 'ಕೈ ಕೊಟ್ಟ ಹುಡುಗಿ ತಲೆ ಕೆಟ್ಟ ಹುಡುಗ', 'ಬಂಡ ಬಡ್ಡಿ ಮಗ', 'ಪ್ಯಾಟೆ ಹುಡಿಗ್ಯಾರು', 'ಹುಚ್ಚ ಹಿಡಿಸ್ಯಾಳ ಹುಚ್ಚಮಂಗಿ', 'ಅವ್ವ ಬಂಗಾರಿ ಮಗಳು ಸಿಂಗಾರಿ', 'ಅಪ್ಪ ಮನ್ಯಾಗ ಮಗಳು ಸಂತ್ಯಾಗ', 'ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ' ಹೀಗೆ ನಾಟಕಗಳ ಹೆಸರೇ ಜನರನ್ನು ಟೆಂಟ್‌ಗಳಿಗೆ ಆಕರ್ಷಿಸುತ್ತವೆ. ಜಾತ್ರೆಯ ಮೆರಗು ಹೆಚ್ಚಿಸುತ್ತವೆ.

ದಿನಪೂರ್ತಿ ಜಾತ್ರೆಯ ಸಂತೆ, ಸಂಜೆಯಾಗುತ್ತಿದ್ದಂತೆ ನಾಟಕಗಳ ಕಂತೆ ಜನರನ್ನು ಬನದ ಹುಣ್ಣಿಮೆಗೆ ಬನಶಂಕರಿಗೆ ಮತ್ತೆ ಮತ್ತೆ ಬರಲು ಪ್ರೇರೇಪಿಸುತ್ತವೆ. ಹೀಗಾಗಿ ಬನಶಂಕರಿಯಲ್ಲಿ ಇನ್ನು ಒಂದು ತಿಂಗಳು ಹಗಲು, ಇರುಳು ಎರಡೂ ಒಂದೇ!

ಬನಶಂಕರಿ ಜಾತ್ರೆ ಕೇವಲ ಆಡಂಬರವಲ್ಲ, ಅದ್ದೂರಿಗೆ ಮಾತ್ರ ಸೀಮಿತವಲ್ಲ. ಜನಜಂಗುಳಿಯಷ್ಟೇ ಮುಖ್ಯ ವಿಷಯವಲ್ಲ. ಅಲ್ಲಿ ಬದುಕು ಕಟ್ಟಿಕೊಳ್ಳುವ ಕಲೆಯಿದೆ. ನೋವಿನ ಕಥನಗಳಿಗೆ ಮುಲಾಮು ಇದೆ. ವರ್ಷಪೂರ್ತಿ ಹೊಲಗಳಲ್ಲಿ ದುಡಿದು ದಣಿದ ಅನ್ನದಾತರಿಗೆ ದಣಿವಾರಿಸಿಕೊಳ್ಳಲು, ಬನದ ಹುಣ್ಣಿಮೆಯ ಹೊನಲಲ್ಲಿ ನೋವು ಮರೆಯಲು ಜಾತ್ರೆ ವೇದಿಕೆಯೂ ಹೌದು. ನಾಟಕಗಳ ಸಡಗರದ ಜೊತೆಗೆ ಬೆಂಡು, ಬತ್ತಾಸು, ಬೂಂದಿ, ಖಾರ, ಮಂಡಕ್ಕಿ, ಜಿಲೇಬಿ, ಮೈಸೂರು ಪಾಕ್ ಸವಿಯೂ ಸಿಗುತ್ತದೆ. ಬನಶಂಕರಿ, ಬಾದಾಮಿ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಸಜ್ಜಿ, ಜೋಳದ ರೊಟ್ಟಿ, ತರಹೇವಾರಿ ಪಲ್ಲೆ, ಮೊಸರು, ಮಜ್ಜಿಗೆ, ಒಂದಷ್ಟು ತರಕಾರಿಯನ್ನು ಬಿದಿರಿನ ಬುಟ್ಟಿಯೊಳಗೆ ತಲೆ ಮೇಲೆ ಹೊತ್ತು ತಂದು ಭಕ್ತರಿಗೆ ಇದ್ದ ಜಾಗದಲ್ಲಿಯೇ ಉಣಬಡಿಸುತ್ತಾರೆ. ಮೊಸರಿನ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಕೊಪ್ಪಳದ ಗವಿಸಿದ್ದೇಶ್ವರನ ಜಾತ್ರೆಯ ಸಮುದಲ್ಲಿಯೇ ಮಠದ ಆವರಣವೇ ಒಂದು ಊರಿನಂತೆ ಕಾಣುವ ರೀತಿ

ಮಹಾರಥೋತ್ಸವ
ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವ ಜನವರಿ 8 (ಭಾನುವಾರ) ಸಂಜೆ 5 ಗಂಟೆಗೆ ನಡೆಯುತ್ತದೆ.

ಹಿಂದಿನ ಎಲ್ಲಾ ವರ್ಷಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಶಾ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರಥೋತ್ಸವಕ್ಕೆ ಚಾಲನೆ ನೀಡಲಿರುವುದು ಈ ವರ್ಷದ ಆಕರ್ಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.