ADVERTISEMENT

ನುಡಿ ನಮನ: ‘ಭತ್ತದ ಮಹದೇವಪ್ಪ’ ಬಳುವಳಿಯ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 19:45 IST
Last Updated 6 ಮಾರ್ಚ್ 2021, 19:45 IST
ಎಂ. ಮಹದೇವಪ್ಪ
ಎಂ. ಮಹದೇವಪ್ಪ   

ಎಂ.ಮಹದೇವಪ್ಪ ಅವರನ್ನು ಕೃಷಿ ತಜ್ಞ, ವಿಜ್ಞಾನಿ ಎನ್ನುವ ಬದಲಿಗೆ ‘ಭತ್ತದ ಮಾಹಿತಿಯ ಕಣಜ’ ಎಂದು ಕರೆಯುವುದೇ ಸೂಕ್ತ. ಭತ್ತದ ಕೃಷಿಗೆ ನೀಡಿದ್ದ ಕೊಡುಗೆಗಳೇ ಅವರಿಗೆ ‘ಭತ್ತದಮಹದೇವಪ್ಪ’ ಎಂಬ ಹೆಸರು ತಂದುಕೊಟ್ಟಿತ್ತು.

ಮಂಡ್ಯದ ವಿ.ಸಿ.ಫಾರ್ಮ್‌ನಲ್ಲಿ ಭತ್ತದ ತಳಿ ವಿಜ್ಞಾನಿಯಾಗಿಮಹದೇವಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಅವರ ಕಿರಿಯ ಸಹೋದ್ಯೋಗಿಯಾಗಿ ಆರಂಭಗೊಂಡ ಒಡನಾಟಕ್ಕೆ 40 ವರ್ಷ ತುಂಬಿದೆ. ಅವರ ಮಾರ್ಗದರ್ಶನ ಶೈಲಿ ನನ್ನನ್ನೂ ಸೇರಿದಂತೆ ಅನೇಕರಿಗೆ ಸ್ಫೂರ್ತಿ ನೀಡಿದೆ.

ಅದು, ಮಲೆನಾಡಿನಲ್ಲಿ ಭತ್ತಕ್ಕೆ ಬೆಂಕಿರೋಗದ ಬಾಧೆ ತೀವ್ರಗೊಂಡಿದ್ದ ಕಾಲ. ಹಲವಾರು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಮಹಾದೇವಪ್ಪ ಅವರು ಬೆಂಕಿರೋಗ ನಿರೋಧಕ ಶಕ್ತಿಯುಳ್ಳ ‘ಇಂಟಾನ್’ ಭತ್ತದ ತಳಿ ಅಭಿವೃದ್ಧಿಪಡಿಸಿದರು. ಹಲವು ವರ್ಷ ಭತ್ತದ ಬೆಳೆಗಾರರ ಆದ್ಯತೆಯಾಗಿ ‘ಇಂಟಾನ್’ ತಳಿ ಹೆಚ್ಚು ಪ್ರಸಿದ್ಧಿಯಾಗಿತ್ತು.

ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ತಡವಾಗುತ್ತಿತ್ತು. ಇದನ್ನು ಮನಗಂಡು ಅಲ್ಪಾವಧಿಯ ಭತ್ತದ ತಳಿಗಳಿಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದರು. ಇದರ ಪರಿಣಾಮವಾಗಿ ಹೊರಬಂದಿದ್ದು ‘ಮಧು’, ‘ಮಂಗಳ’ ಎಂಬ ಭತ್ತದ ತಳಿಗಳು.

ಉಪ್ಪಿನಾಂಶ ಇರುವ ಮಣ್ಣಿನಲ್ಲೂ ಭತ್ತದ ಯಶಸ್ವಿಯಾಗಿ ಬೆಳೆಯಬಹುದು ಎಂದು ‘ಪ್ರಗತಿ’ ತಳಿ, ಚಳಿಯನ್ನು ತಡೆಯುವ ‘ಮುಕ್ತ’ ಹೀಗೆ..ಅವರು ಸಂಶೋಧಿಸಿದ ತಳಿಗಳೆಲ್ಲವೂ ವಿಶೇಷ ಮತ್ತು ವಿಭಿನ್ನವಾಗಿದ್ದವು.

ಕನ್ನಡದಲ್ಲೇ ಭತ್ತದ ಕೈಪಿಡಿ ಫಿಲಿಪ್ಪೈನ್ಸ್‌ನಲ್ಲಿರುವ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯಲ್ಲಿ ಮೂರು ವರ್ಷಗಳ ಕಾಲ ಸಂಶೋಧನೆ ಮುಗಿಸಿ ಮತ್ತೆ ಕರುನಾಡಿಗೆ ಬಂದಿದ್ದ ಅವರಿಗೆ, ಭತ್ತದ ಬೆಳೆಯುವ ಆಧುನಿಕ ವಿಧಾನ ಮತ್ತು ತಂತ್ರಜ್ಞಾನಗಳ ಮಾಹಿತಿ ಇಲ್ಲಿನ ರೈತರಿಗೆ ತಲುಪುತ್ತಿಲ್ಲ ಎಂದು ಅರಿತಿದ್ದರು.

ಇದಕ್ಕಾಗಿ ಭತ್ತದ ಬೆಳೆಗಾರರಿಗೆ ಕನ್ನಡದಲ್ಲಿ ಹಾಗೂ ವರ್ಣಚಿತ್ರಗಳ ಸಹಿತ ವಿವರಣೆ ನೀಡುವ ‘ಭತ್ತದ ಕೈಪಿಡಿ’ ಹೊರತಂದರು. ಅವರ ಈ ಕಾರ್ಯ ಬೆಳೆಗಾರರಿಗೆ ಭರಪೂರ ಮಾಹಿತಿಯನ್ನು ಸರಳವಾಗಿ ತಿಳಿಸಿತ್ತು.

ಬರವಣಿಗೆಯಲ್ಲೂ ಹಿಡಿತವಿದ್ದ ಅವರು ‘ಕೃಷಿ ಗೀತೆಗಳು’ ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ.

ಧಾರವಾಡ ಕೃಷಿ ವಿವಿ ಕುಲಪತಿ: ಉನ್ನತ ಶಿಕ್ಷಣ ಪೂರೈಸಿದ ನಂತರ ಮೊದಲಿಗೆ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಹಿರಿಯ ಸಂಶೋಧಕರಾಗಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಬ್ರೀಡರ್ (ಜೋಳ ಅಭಿವೃದ್ಧಿ ತಜ್ಞ) ಆಗಿ, ಮಂಡ್ಯದ ವಿ.ಸಿ.ಫಾರ್ಮ್‌ನಲ್ಲಿ ಭತ್ತ ಸಸ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದರು.

ಇವರ ಸಾಧನೆಗಳನ್ನು ಅರಸಿ ಬಂದಿದ್ದು, ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ, ಹೂಕರ್ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪುರಸ್ಕಾರಗಳ ಪಟ್ಟಿಯೇ ನೀಡಬಹುದು.

ಭಾರತದಲ್ಲಿ ಹೈಬ್ರೀಡ್ ಭತ್ತದ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಎಂ.ಮಹಾದೇವಪ್ಪ ಅವರು ಭತ್ತದ ತಳಿಗಳಿಂದ ಇಂದಿಗೂ ಮನೆಮಾತು. ಕೃಷಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ತಮ್ಮ ಅಂತಿಮ ದಿನಗಳನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ಪೂರ್ಣಗೊಳಿಸಿದರು.

ಸಮಾಜಕ್ಕೆ ಅವರಿಂದ ಏನು ಸಿಗಬಹುದಿತ್ತೋ ಅದನ್ನೂ ಮೀರಿದ ಪ್ರಯೋಜನವನ್ನು ಸಮಾಜ ಅವರಿಂದ ಪಡೆದಿದೆ. ಕೃಷಿ ವಿಜ್ಞಾನ ಸಂಶೋಧಕರಲ್ಲೇ ಉಳಿಯದೆ, ರೈತರನ್ನೂ ತಲುಪಬೇಕು ಎನ್ನುವ ಅವರ ಕಾಳಜಿಗೆ ಸರಿಸಾಟಿ ಇರಲಿಲ್ಲ. ಅದೆಷ್ಟೋ ಮಂದಿಗೆ ಕೃಷಿ ವಿಜ್ಞಾನದ ಬೆಳಕು ಚೆಲ್ಲಿದ ಕೀರ್ತಿ ಅವರಿಗೆ ಸಲ್ಲಬೇಕು.

ಕೃಷಿ ವಿಜ್ಞಾನಿಪ್ರೊ.ಎಂ.ಮಹದೇವಪ್ಪ ನಿಧನ

ಮೈಸೂರು: ಕೃಷಿ ವಿಜ್ಞಾನಿ, ಭತ್ತದ ತಳಿ ಸಂಶೋಧಕ ಪ್ರೊ.ಎಂ.ಮಹದೇವಪ್ಪ (83) ಶನಿವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ಮಧ್ಯಾಹ್ನ ಚಾಮರಾಜನಗರ ಜಿಲ್ಲೆಯ ಸ್ವಗ್ರಾಮ ಮಾದಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎರಡು ಅವಧಿಗೆ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ಅಂಗಸಂಸ್ಥೆ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ಎಎಸ್‌ಆರ್‌ಬಿ) ಚೇರ್‌ಮನ್‌ ಆಗಿ ಕೆಲಸ ಮಾಡಿದ್ದರು.

ರೈತರ ಬಗ್ಗೆ ಕಾಳಜಿ: ರೈತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಮಹದೇವಪ್ಪ, ನೀರಿನ ಕೊರತೆಯಲ್ಲೂ ಅತ್ಯುತ್ತಮವಾಗಿ ಭತ್ತ ಬೆಳೆಯುವ ಮಾರ್ಗೋಪಾಯ ಹಾಕಿಕೊಟ್ಟಿದ್ದಾರೆ.

ಮಧು, ಮಂಗಳಾ, ಪುಷ್ಪಾ, ಪ್ರಗತಿ, ಇಂಟಾನ್‌, ವಿಕ್ರಮ, ಜಿಎಂಕೆ–17, ಮುಕ್ತಿ, ಬಿಳಿಮುಕ್ತಿ ಹಾಗೂ ಹೈಬ್ರೀಡ್‌ ಭತ್ತದ ತಳಿಗಳ ಅಭಿವೃದ್ಧಿ ಪಡಿಸಿದ್ದರು. ಹೀಗಾಗಿ, ಇವರು ‘ಭತ್ತದ ಮಹದೇವಪ್ಪ’ ಎಂದೇ ಹೆಸರಾಗಿದ್ದರು. ಅಪಾಯಕಾರಿ ಪಾರ್ಥೇನಿಯಂ ಕಳೆ ಹತೋಟಿಗೆ ಪಣತೊಟ್ಟು, ಆ ದಿಕ್ಕಿನಲ್ಲಿ ಪ್ರಯತ್ನ ಮುಂದುವರಿಸಿದ್ದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಗ್ರಾಮೀಣಾಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ‘ಕೃಷಿ ಕಾಯಕ’‌ ಕನ್ನಡ ತ್ರೈಮಾಸಿಕದ ಸಂ‍ಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಅಧ್ಯಕ್ಷರೂ ಆಗಿದ್ದರು.

ಸಂಪರ್ಕಕ್ಕೆ ಪ್ರಸಾದ್: ಮೊ: 9900256310

(ಲೇಖಕರು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಿವೃತ್ತ ಶೈಕ್ಷಣಿಕ ನಿರ್ದೇಶಕ)

ನಿರೂಪಣೆ: ಮನೋಹರ್ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.