ADVERTISEMENT

ರಾಷ್ಟ್ರಕವಿ ಕುವೆಂಪು ಜತೆಗೆ ರಾಜಕಾರಣಿಗಳು

ರಹಮತ್ ತರೀಕೆರೆ
Published 24 ಡಿಸೆಂಬರ್ 2022, 19:30 IST
Last Updated 24 ಡಿಸೆಂಬರ್ 2022, 19:30 IST
ಎಸ್‌. ನಿಜಲಿಂಗಪ್ಪ ಅವರೊಂದಿಗೆ ಕುವೆಂಪು
ಎಸ್‌. ನಿಜಲಿಂಗಪ್ಪ ಅವರೊಂದಿಗೆ ಕುವೆಂಪು   

ಕುಪ್ಪಳಿಯಲ್ಲಿರುವ ಕವಿಮನೆ ಸ್ಮಾರಕಕ್ಕೆ ಹೋದಾಗಲೆಲ್ಲ ಕುತೂಹಲ ಹುಟ್ಟಿಸುವುದು, ಕುವೆಂಪುರವರ ಸಾರ್ವಜನಿಕ ಬದುಕಿನ ಪಟಗಳು; ಈ ಪಟಗಳಲ್ಲಿರುವ ಅವರ ವಿವಿಧ ಭಾವಸೂಚಕ ಕಣ್ನೋಟ, ಮುಖ, ಮಾತಾಡುವಾಗಿನ ಕೈವರಸೆ, ಕುಳಿತ-ನಿಂತ ಭಂಗಿಗಳು. ಲೇಖಕರ ಚಿಂತನೆ ಮತ್ತು ಸಾರ್ವಜನಿಕ ವ್ಯಕ್ತಿತ್ವವನ್ನು, ಅವರ ಮಾತು, ಜೀವನಶೈಲಿ, ಬರೆಹಗಳ ಮೂಲಕ ಕಟ್ಟಿಕೊಳ್ಳುವಂತೆ, ಪಟಗಳಲ್ಲಿರುವ ದೇಹಭಾಷೆಯ ಮೂಲಕವೂ ಕಟ್ಟಿಕೊಳ್ಳಬಹುದು.

ಕುವೆಂಪು ಆಕರ್ಷಕ ಮುಖದ ಆಜಾನುಬಾಹು. ಬಿಳಿಯ ಖಾದಿಜುಬ್ಬ ಮತ್ತು ಪೈಜಾಮ; ಅವುಗಳ ಮೇಲೆ ಉಣ್ಣೆಯ ನೀಳಕೋಟು. ತಲೆಯ ನಡುವೆ ಬೈತಲೆ ತೆಗೆದು ಎರಡೂ ಕಡೆ ಬಾಚಿದ ಗುಂಗುರುಕೂದಲು. ಬಹಳಷ್ಟು ಫೋಟೊಜೆನಿಕ್ ಚಹರೆಗಳಿದ್ದರೂ ಕುವೆಂಪು ಅವರಿಗೆ ಕ್ಯಾಮೆರಾಕ್ಕೆ ಪೋಸುಕೊಟ್ಟು ಪಟ ತೆಗೆಸಿಕೊಳ್ಳುವುದು ಪ್ರಿಯ ಸಂಗತಿಯಾಗಿರಲಿಲ್ಲ. ಎಂ.ಎ. ವಿದ್ಯಾರ್ಥಿಯಾಗಿದ್ದಾಗ ತೆಗೆದ (1927), ಬಿಎಂಶ್ರೀ, ಟಿ.ಎಸ್. ವೆಂಕಣ್ಣಯ್ಯ ಎ. ಆರ್. ಕೃಷ್ಣಶಾಸ್ತ್ರಿ ಮೊದಲಾದ ಗುರುಗಳೂ; ಡಿ.ಎಲ್. ನರಸಿಂಹಾಚಾರ್, ತೀನಂಶ್ರೀ ಮೊದಲಾಗಿ ಸಹಪಾಠಿಗಳೂ ಇರುವ ಪಟದಲ್ಲಿ, ತರುಣ ಕುವೆಂಪು ಎತ್ತಲೊ ಕಣ್ಣು ನೆಟ್ಟಿರುವರು.

ದೇವರಾಜ ಅರಸು ಅವರೊಂದಿಗೆ ಕುವೆಂಪು

ಡಿವಿಜಿ, ಮಾಸ್ತಿ, ಕಾರಂತ, ವಿಸೀ, ಅನಕೃ, ರಾಜರತ್ನಂ ಜತೆ ಆಕಾಶವಾಣಿಯ ಮಾತುಕತೆಗೆಂದು ಕೂತಿರುವ ಪಟದಲ್ಲೂ ಹೀಗೇ. ಆದರೆ ಅವರನ್ನು ವೈಚಾರಿಕವಾಗಿ ಪ್ರಭಾವಿಸಿದ್ದ ಟ್ಯಾಗೋರ್‌ ಹಾಗೂ ವಿವೇಕಾನಂದರು, ಪ್ರಜ್ಞಾಪೂರ್ವಕ ಸಿದ್ಧತೆ ಮಾಡಿಕೊಂಡು ಕ್ಯಾಮೆರಾಕ್ಕೆ ಬಗೆಬಗೆಯ ಪೋಸು ಕೊಡಬಲ್ಲವರಾಗಿದ್ದರು. ಈ ದೃಷ್ಟಿಯಿಂದ ಕುವೆಂಪು ಅವರದು ಪರಹಮಹಂಸರಂತೆ ಉದಾಸಭಾವ. ಬೇಂದ್ರೆ ಹಾಗೂ ಕಾರಂತರಿಗೂ ಕ್ಯಾಮೆರಾಕ್ಕೆ ಮುಖಕೊಡುವ ಬಗ್ಗೆ ಅಷ್ಟೊಂದು ಲಕ್ಷ್ಯವಿರಲಿಲ್ಲ. ತೇಜಸ್ವಿಯವರೇ ಮಾಡಿರುವ ಕ್ಲಿಕ್ಕುಗಳಲ್ಲಿ ಕುವೆಂಪು ಕೆಲವು ಪೋಸು ಕೊಟ್ಟಿದ್ದಾರೆ. ಅವುಗಳಲ್ಲಿ ಅವರ ಚಿಂತನಾಮಗ್ನ ಮುಖಭಾವದ ಪಟವೊಂದರಲ್ಲಿ ಆಳವಾದ ಭಾವಗಳಿವೆ. ನಿಸಾರ್ ಅಹಮದರಿಗೆ ಆಗಸಕ್ಕೆ ಕೈಯೆತ್ತಿ ಅದೇನನ್ನೊ ತನ್ಮಯವಾಗಿ ವಿವರಿಸುತ್ತಿರುವ, ನಟ ರಾಜಕುಮಾರ್ ಅವರಿಂದ ಹೂಮಾಲೆ ಹಾಕಿಸಿಕೊಳ್ಳುತ್ತಿರುವ ಪಟಗಳು, ಅವರ ಭಾವದ ವಿವಿಧ ಮಗ್ಗುಲುಗಳನ್ನು ಕಾಣಿಸುತ್ತಿವೆ.

ADVERTISEMENT

ಇವುಗಳಲ್ಲೆಲ್ಲ ವಿಶೇಷವಾದವು, ಕುವೆಂಪು ಕರ್ನಾಟಕದ ಮುಖ್ಯಮಂತ್ರಿಗಳ ಜತೆಗಿರುವ ಪಟಗಳು. ಒಂದು ಸಭೆಯಲ್ಲಿ ಕೆ.ಸಿ.ರೆಡ್ಡಿಯವರು ದಿಂಬಿಗೊರಗಿ ಕೂತು, ಕುವೆಂಪು ಅವರತ್ತ ತೀಕ್ಷ್ಣವೆನ್ನಬಹುದಾದ ನೋಟ ಬೀರುತ್ತಿದ್ದಾರೆ. ಇದರ ಪರಿವೆಯಿಲ್ಲದೆ ಕುರ್ಚಿಯಲ್ಲಿ ಕೂತಿರುವ ಕುವೆಂಪು, ಎದುರುಗಡೆ ಪುಸ್ತಕವನ್ನು ಇಟ್ಟುಕೊಂಡು ತನ್ಮಯವಾಗಿ ಮಾತಾಡುತ್ತಿದ್ದಾರೆ. ಕೆಂಗಲ್ ಜತೆಗಿರುವ ಪಟದಲ್ಲಿ ಕೊರಳ ತುಂಬ ಹಾರ ಹಾಕಿಸಿಕೊಂಡಿರುವ ಅವರು, ಕೈಮುಗಿದು ಸಂಕೋಚದಲ್ಲಿದ್ದಾರೆ.

ಎಸ್. ಆರ್. ಕಂಠಿಯವರ ಜತೆಗಿನ ಚಿತ್ರದಲ್ಲಿ, ಅವರು ಅಗತ್ಯಕ್ಕಿಂತ ಹೆಚ್ಚಾಗಿ ತಲೆಯೆತ್ತಿ ಎದೆಸೆಟೆಸಿ ನಿಂತಂತಿದೆ. ಅವರ ಪಕ್ಕ ಮುಖ್ಯಮಂತ್ರಿ, ಗುರುವಿನ ಪಕ್ಕ ಶಿಷ್ಯನಂತೆ ನಮ್ರವಾಗಿದ್ದಾರೆ. ಮತ್ತೊಂದು ಪಟದಲ್ಲಿ, ಕುವೆಂಪು ಗಂಭೀರಭಾವದಲ್ಲಿ ಇದು ಹೇಗಾಯಿತು ಎಂಬ ಕೈಭಂಗಿಯಲ್ಲಿ ಏನನ್ನೊ ವಿವರಿಸುತ್ತಿದ್ದರೆ, ಜತ್ತಿಯವರು ಗೌರವ ಶ್ರದ್ಧೆಗಳಿಂದ ನೋಡುತ್ತಿದ್ದಾರೆ. ವೀರೇಂದ್ರ ಪಾಟೀಲರ ಜತೆಗಿನ ಫೋಟೊದಲ್ಲಿ, ಪಾಠ ಮಾಡುತ್ತಿರುವಂತೆ ತೋರುತ್ತಿರುವ ಅವರ ಮಾತನ್ನು, ಮುಖ್ಯಮಂತ್ರಿಯವರು ಬೆರಗು-ಹರುಷಗಳಿಂದ ಮೈಯೆಲ್ಲ ಕಣ್ಣು ಕಿವಿಯಾಗಿ ಆಲಿಸುತ್ತಿದ್ದಾರೆ.

ಇವುಗಳಲ್ಲೆಲ್ಲ ನಿಜಲಿಂಗಪ್ಪನವರ ಜತೆಗಿರುವ ಪಟ ಮತ್ತೂ ವಿಶಿಷ್ಟ. ಇದರಲ್ಲಿ ಕುವೆಂಪು ಅವರ ಬೆನ್ನಹಿಂದೆ ಅಂಟಿಕೊಂಡಂತೆ ನಿಂತಿದ್ದಾರೆ. ಬಹುಕಾಲದ ಗೆಳೆತನದ ಸಲುಗೆ ಅಲ್ಲಿದೆ. ನಿಜಲಿಂಗಪ್ಪನವರು ಮುಕ್ತವಾಗಿ ನಗುತ್ತಿದ್ದರೆ, ಕುವೆಂಪು ತುಸುವೇ ತುಟಿಯರಳಿಸಿ ಮುಗುಳ್ನಗೆ ಸೂಸುತ್ತಿದ್ದಾರೆ. ಅವರು ನಿಜಲಿಂಗಪ್ಪ ಮತ್ತು ದೇವರಾಜ ಅರಸು ಅವರ ಜತೆಗಿನ ಪಟಗಳಲ್ಲಿ ಹೆಚ್ಚು ಆಪ್ತತೆಯಲ್ಲಿ ಸಮಾನಸ್ಕಂಧರಾಗಿ ಕಾಣಿಸುತ್ತಾರೆ. ಕಾರಣ, ಇಬ್ಬರೂ ಕರ್ನಾಟಕ ಏಕೀಕರಣ, ಕನ್ನಡ ಆಡಳಿತ ಭಾಷೆ ಮತ್ತು ಕರ್ನಾಟಕದ ನಾಮಕರಣ ವಿಷಯದಲ್ಲಿ, ಅವರ ಚಿಂತನೆಯನ್ನು ಸಾಕಾರಗೊಳಿಸಿದ ಆಡಳಿತಗಾರರು. ಅವರು ನಿಜಲಿಂಗಪ್ಪನವರಿಗೆ ಬರೆದ ಪತ್ರಗಳಲ್ಲೂ ಇದೇ ವಿಷಯಗಳ ಪ್ರಸ್ತಾಪವಿದೆ. ಯಾವುದೊ ಖಾಸಗಿ ಕಾರ್ಯಕ್ರಮದಲ್ಲಿ ತೆಗೆದ ಪಟದಲ್ಲಿ ಕಡಿದಾಳು ಮಂಜಪ್ಪನವರು ಸಂಭ್ರಮದಿಂದ ನಿಂತಿದ್ದರೆ, ಕುವೆಂಪು ನಿರ್ಲಿಪ್ತ ನೋಟವನ್ನು ಎತ್ತಲೊ ಬೀರುತ್ತಿದ್ದಾರೆ.

‘ಉದಯರವಿ’ಯಲ್ಲಿ ತೆಗೆಸಿಕೊಂಡ ಪಟದಲ್ಲಿ ಗುಂಡೂರಾಯರು, ಕವಿಯ ಜತೆ ವಿಚಾರವಿನಿಮಯ ಮಾಡುತ್ತಿದ್ದಾರೆ. ಯಾವುದೊ ವಿನೋದಕ್ಕೆ ಇಬ್ಬರೂ ನಗುತ್ತಿದ್ದಾರೆ. ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ (1985) ಬಿಳಿದಲೆಯ ಕುವೆಂಪು, ಬಿಳಿಯ ಉಡುಪು ಧರಿಸಿ, ಹಣೆಗಿಟ್ಟ ತಿಲಕದೊಂದಿಗೆ ಮದುಮಗನಂತೆ ಆಸೀನರಾಗಿದ್ದಾರೆ. ಪಕ್ಕದಲ್ಲಿ ರಾಮಕೃಷ್ಣ ಹೆಗಡೆ, ಶಿವರಾಮ ಕಾರಂತ, ರಾಜೀವ್‌ ಗಾಂಧಿ. ಕುವೆಂಪು ವಿಸ್ಮಯದಿಂದ ನೆರೆದ ಸಂದಣಿಯನ್ನು ದಿಟ್ಟಿಸುತ್ತಿದ್ದಾರೆ.

ಸಭೆಯೊಂದರಲ್ಲಿ ದೇವೇಗೌಡರು ನಿಂತುಕೊಂಡು ಕೊಟ್ಟಿರುವ ಪುಸ್ತಕದ ಮೇಲೆ, ಕುಳಿತಿರುವ ಕುವೆಂಪು ಕಣ್ಣಾಡಿಸುತ್ತಿರುವ ಪಟವೂ ಇದೆ. ಬಂಗಾರಪ್ಪನವರು ಭಾಷಣ ಮಾಡುತ್ತಿರುವ ಸಭೆಯಲ್ಲಿ ಜೀರ್ಣದೇಹಿಯಾದ ಅವರು ತಲೆತಗ್ಗಿಸಿ ಸುಸ್ತಾದಂತೆ ಕೂತಿದ್ದಾರೆ. ‘ಕರ್ನಾಟಕ ರತ್ನ’ ಪ್ರದಾನ ಸಮಾರಂಭದಲ್ಲಿ ಮತ್ತಷ್ಟು ಮೆತ್ತಗಾಗಿದ್ದಾರೆ. ಅವರನ್ನು ವಿಶಾಲ ಸೋಫಾದಲ್ಲಿ ಕೂರಿಸಲಾಗಿದೆ. ಪಕ್ಕ ನಿಂತು ಎಸ್.ಆರ್. ಬೊಮ್ಮಾಯಿ ಸ್ಮರಣಿಕೆ ನೀಡುತ್ತಿರುವರು.

ಸಾರ್ವಜನಿಕ ವ್ಯಕ್ತಿಗಳ ಜತೆಯಿದ್ದಾಗ ಕುವೆಂಪು ತೋರುತ್ತಿದ್ದ ಸಂಕೋಚ, ತನ್ಮಯತೆ, ಮುಗ್ಧತೆ ಇಲ್ಲಿ ಕಾಣುತ್ತವೆ. ಅವರು ಏನನ್ನಾದರೂ ವಿವರಿಸುವಾಗ ರಾಜಕಾರಣಿಗಳ ಕಣ್ಣಲ್ಲಿಕಣ್ಣಿಟ್ಟು ಮಾತಾಡುತ್ತಿದ್ದರೆ, ನಗುವಾಗ ಕಣ್ಣನ್ನು ನೆಲದತ್ತ ಹೊರಳಿಸುವುದೂ ತಿಳಿಯುತ್ತದೆ. ಹೆಚ್ಚಿನ ಪಟಗಳಲ್ಲಿ ಅವರು ಧೀಮಂತವಾಗಿ ನಿರಾಸಕ್ತವಾಗಿ ಇದ್ದಾರೆ. ರಾಜಕಾರಣಿಗಳು ದೊಡ್ಡ ಸಂತನ ಸನ್ನಿಧಿಯಲ್ಲಿರುವ ಉಪಾಸಕರಂತಿದ್ದಾರೆ. ಕುವೆಂಪು ಅವರ ದೇಹಭಾಷೆ ಹೊರಸೂಸುತ್ತಿರುವ ಈ ಸ್ವಘನತೆಗೆ ಹಲವು ಕಾರಣಗಳಿವೆ.

***

ಕೆಂಗಲ್‌ ಹನುಮಂತಯ್ಯ ಜೊತೆ

ಕುವೆಂಪು ಅವರಿಗೆ ಕವಿಯ ವ್ಯಕ್ತಿತ್ವದ ಘನತೆ ಮತ್ತು ಅಲೌಕಿಕತೆಯ ಮೇಲೆ ಅಪಾರ ನಂಬಿಕೆಯಿತ್ತು. ಅವರು ಸಂಸ್ಕೃತ ಕಾವ್ಯಮೀಮಾಂಸೆಯ ‘ಅಪಾರೇ ಕಾವ್ಯಸಂಸಾರೆ ಕವಿರೇವ ಪ್ರಜಾಪತಿಃ’, ಶೆಲ್ಲಿಯ ‘ಕವಿಗಳು ನಾಡಿನ ಅನಧಿಕೃತ ಶಾಸಕರು’ ಮೊದಲಾದ ತಾತ್ವಿಕ ಹೇಳಿಕೆಗಳನ್ನು ಪ್ರಾಮಾಣಿಕವಾಗಿ ನಂಬಿದ್ದವರು.ಕವಿಗಳು ಮೂಲತಃ ಋಷಿಗಳು; ನಾಡನ್ನು ಕಟ್ಟುವ ಕಣಸು ಕಾಣಬಲ್ಲ ದ್ರಷ್ಟಾರರು; ಅವರ ಕೃತಿಗಳಲ್ಲಿ ಜನರನ್ನು ಸಂವೇದನಶೀಲಗೊಳಿಸಿ ಆ ಮೂಲಕ ಲೋಕ ಬದಲಿಸುವ ಶಕ್ತಿಯಿದೆ ಎಂಬ ಮೀಮಾಂಸೆ ಅವರದು. ಇದಕ್ಕೆ ತಕ್ಕಂತೆ, ಬಿಎಂಶ್ರೀ, ಕಾರಂತ, ಕುವೆಂಪು ಅವರ 1947ರ ಹಿಂದಿನ ಬರೆಹಗಳು, ಬಿಡುಗಡೆಗೊಳ್ಳಲಿರುವ ಭಾರತದ ಜನಮಾನಸವನ್ನು ರೂಪಿಸುವುದಕ್ಕಾಗಿ ಮಾಡಿದ ತುಡಿತಗಳಂತಿವೆ.

***

ಬಿ.ಡಿ.ಜತ್ತಿ ಜೊತೆ

ಲೌಕಿಕ ಯಶಸ್ಸು ಮತ್ತು ಕೀರ್ತಿಗಳ ಬಗ್ಗೆ ಕುವೆಂಪು ಅವರಿಗೆ ಅನಾಸಕ್ತಿಯಿತ್ತು. ಲೇಖಕರು ಅತಿಯಾಗಿ ಸಾರ್ವಜನಿಕ ಬದುಕಿನಲ್ಲಿ ತೊಡಗುವುದು ಅಥವಾ ಅಧಿಕಾರಸ್ಥ ಸ್ಥಾನಮಾನದಲ್ಲಿರುವುದು, ಬರೆಹದ ಕಾಯಕಕ್ಕೆ ಬೇಕಾದ ಅಧ್ಯಯನ-ಧ್ಯಾನಶೀಲತೆ ಕಳೆಯುತ್ತವೆ ಎಂಬ ಗ್ರಹಿಕೆಯಿತ್ತು. ಇದಕ್ಕೆ ‘ಕೀರ್ತಿಶನಿ’ ಪದ್ಯವನ್ನಾಗಲಿ, ಕುಲಪತಿಯಾಗಿ ತನ್ನ ಹಾಡನ್ನು ಕೇಳುವ ವ್ಯವಧಾನ ಕಳೆದುಕೊಂಡು ರಸಚ್ಯುತಿಗೆ ಒಳಗಾದ ಕವಿಯನ್ನು ಪುಟ್ಟಹಕ್ಕಿಯೊಂದು ಕಿಚಾಯಿಸುವ ಪದ್ಯವನ್ನಾಗಲಿ ಗಮನಿಸಬಹುದು.

***

ವೀರೇಂದ್ರ ಪಾಟೀಲ್‌ ಜೊತೆ

ಪ್ರಜಾಪ್ರಭುತ್ವವಾದಿಯಾದ ಕುವೆಂಪು, ರಾಜಪ್ರಭುತ್ವವನ್ನು ವಿಮರ್ಶೆ ಮಾಡುತ್ತಿದ್ದರು. ಅವರು ತಾರುಣ್ಯದಲ್ಲಿ, ಬಿಎಂಶ್ರೀ ಪ್ರೇರಣೆಯಿಂದ ನಾಲ್ವಡಿಯವರ ಮೇಲೆ ಪ್ರಗಾಥ ಬರೆದದ್ದುಂಟು. ಅದರಲ್ಲಿ ನಾಡನ್ನು ಕಟ್ಟುವ ದೊರೆಯ ಬಗ್ಗೆ ಮೆಚ್ಚುಗೆಯಿದೆ. ಆದರೆ ದೇಶವು ರಾಜಕೀಯ ಸ್ವಾತಂತ್ರ್ಯ ಪಡೆದ ಬಳಿಕ ಅವರು ‘ಶ್ರೀಸಾಮಾನ್ಯನ ದೀಕ್ಷಾಗೀತೆ’ ಬರೆದು ಸಂಭ್ರಮಿಸಿದರು. ಆ ಬಳಿಕವೂ ಹಳೆಯ ದೊರೆಗಳು ರಾಜ್ಯಪಾಲರಾಗಿ ಮುಂದುವರೆದಾಗ, ಪ್ರಜಾಪ್ರಭುತ್ವದಲ್ಲಿ ಪ್ರಭುವಿನ ವೈಭವೀಕರಣ ಸಲ್ಲದೆಂದು ಪ್ರತಿಪಾದಿಸಿದರು. ಈ ಹಿನ್ನೆಲೆಯಿಂದ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಅವರು ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರವರ ಜತೆ ಕುಳಿತಿರುವ ಪಟವನ್ನು ಗಮನಿಸಬೇಕು. ಅವರು ಮಿರಿವ ಶೂಧರಿಸಿ ಕತ್ತರಿಗಾಲು ಹಾಕಿಕೊಂಡು ಗಂಭೀರವಾಗಿ ಕೂತಿದ್ದರೆ, ಚಿಕ್ಕವಯಸ್ಸಿನ ಒಡೆಯರವರು ವಿನಯದಲ್ಲಿ ಕೂತಿದ್ದಾರೆ.

ಇದಕ್ಕೆ ಒಂದು ಕಾರಣ ಒಡೆಯರವರು ಕುವೆಂಪು ವಿದ್ಯಾರ್ಥಿಯಾಗಿದ್ದುದೂ ಇರಬೇಕು. ಅವರು ಕನ್ನಡದಲ್ಲಿ ಫೇಲಾದಾಗ, ನಾಲ್ವಡಿಯವರು ವಿಭಾಗ ಮುಖ್ಯಸ್ಥರಾದ ಟಿ.ಎಸ್. ವೆಂಕಣ್ಣಯ್ಯನವರನ್ನು ಕರೆಯಿಸಿಕೊಂಡು ಸಮಸ್ಯೆಯ ಪರಾಮರ್ಶೆ ನಡೆಸುತ್ತಾರೆ. ಆಗ ವೆಂಕಣ್ಣಯ್ಯನವರು ರಾಜಕುಮಾರನಿಗೆ ಕುವೆಂಪುರವರಿಂದ ಟ್ಯೂಶನ್ ಹೇಳಿಸಿ, ಮರುಪರೀಕ್ಷೆ ಬರೆಯುವ ಮಾರ್ಗ ಸೂಚಿಸುತ್ತಾರೆ. ಆದರೆ ಕುವೆಂಪು ಗುರುಗಳ ಸೂಚನೆಯನ್ನು ನಯವಾಗಿ ನಿರಾಕರಿಸುತ್ತಾರೆ. ಇಲ್ಲಿ ಕೆಲವು ಸೂಫಿಗಳು, ಸುಲ್ತಾನರ ಭೇಟಿಯನ್ನು ತಪ್ಪಿಸಿಕೊಳ್ಳುತ್ತಿದ್ದ, ಭೇಟಿಯಾಗಲೇ ಬೇಕಾದಾಗ ನಿಷ್ಠುರವಾಗಿ ವರ್ತಿಸುತ್ತಿದ್ದ ನಿದರ್ಶನಗಳು ನೆನಪಾಗುತ್ತವೆ. ಶಾಹುಮಹಾರಾಜರ ಜತೆಗೆ ಕುಳಿತಿರುವ ಸಿದ್ಧಾರೂಢ ಸ್ವಾಮಿಗಳು ಕುಳಿತಿರುವ ಪಟವೂ ನೆನಪಾಗುತ್ತದೆ.

***

ಆರ್‌.ಗುಂಡುರಾವ್‌ ಜೊತೆ

ತಮ್ಮ ಕಾಲದ ಸೆಲೆಬ್ರಿಟಿಯಾಗಿದ್ದ ಕುವೆಂಪು, ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟು, ಕನ್ನಡತ್ವದ ಪ್ರತೀಕವೆನಿಸಿದ್ದರು. ಅವರೊಟ್ಟಿಗೆ ಗುರುತಿಸಿಕೊಳ್ಳುವುದನ್ನು ರಾಜಕಾರಣಿಗಳು ಹೆಮ್ಮೆಯೆಂದು ಭಾವಿಸಿದ್ದರು. ನಾಡು-ನುಡಿಯ ವಿಷಯಗಳಿದ್ದಾಗ ರಾಜಗುರುವಿನಂತಿದ್ದ ಅವರ ಮನೆಗೆ ಹೋಗಿ ಚರ್ಚಿಸುತ್ತಿದ್ದರು. ಜತೆಗೆ ಕಡಿದಾಳು, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ, ವೀರಪ್ಪ ಮೊಯಿಲಿ, ಬಂಗಾರಪ್ಪ ಮೊದಲಾದವರು ಸಾಹಿತ್ಯ ಕಲೆಗಳ ಲೋಕದ ಬಗ್ಗೆ ವೈಯಕ್ತಿಕವಾಗಿ ಆಸಕ್ತಿ-ಆದರ ಹೊಂದಿದ್ದರು.

***

ರಾಮಕೃಷ್ಣ ಹೆಗಡೆ ಜೊತೆ

ಪ್ರಜಾಪ್ರಭುತ್ವವಾದಿಯಾದ ಕುವೆಂಪು ಅವರಿಗೆ ಜನಪ್ರತಿನಿಧಿಗಳ ಬಗ್ಗೆ ಗೌರವವಿತ್ತು. ವೈಯಕ್ತಿಕ ಆಶೋತ್ತರಗಳಿರಲಿಲ್ಲವಾಗಿ, ಅಧಿಕಾರಸ್ಥರ ಎದುರು ತಗ್ಗಿಬಗ್ಗುವ ಸನ್ನಿವೇಶ ಅವರಿಗೆ ಬಂದಂತಿಲ್ಲ. ಆದರೆ ಕನ್ನಡದ ಅಥವಾ ವಿಶ್ವವಿದ್ಯಾಲಯದ ವಿಷಯದಲ್ಲಿ ಸರ್ಕಾರದ ನೀತಿನಿರೂಪಣೆ ಬಂದಾಗ, ಅವರು ಪ್ರಭುತ್ವದವರನ್ನು ಭೇಟಿ ಮಾಡುತ್ತಿದ್ದರು. ರಾಜಕೀಯ ಅಧಿಕಾರಸ್ಥರು ಕನ್ನಡ-ಕರ್ನಾಟಕದ ವಿಷಯದಲ್ಲಿ ಆಲಸ್ಯ ತೋರಿದಾಗ ವ್ಯಗ್ರರಾಗುತ್ತಿದ್ದರು. ಅವರು ಅಧಿಕಾರಸ್ಥ ರಾಜಕಾರಣಿಗಳನ್ನು ಕಟುವಾಗಿ ಟೀಕಿಸುವ ‘ಅಖಂಡ ಕರ್ನಾಟಕ’ ಪದ್ಯದಲ್ಲಿ, ‘ಇಂದು ಬಂದು ನಾಳೆ ಸಂದುಹೋಹ ಸಚಿವ ಮಂಡಲ’ದ ವಿಡಂಬನೆಯಿದೆ. ಪರ್ಯಾಯವಾಗಿ ‘ನೃಪತುಂಗನೆ ಚಕ್ರವರ್ತಿ! ಪಂಪನಲ್ಲಿ ಮುಖ್ಯಮಂತ್ರಿ’ ಆಗಿರುವ ಸರಸ್ವತಿ ರಚಿಸಿದ ನಿತ್ಯ ಮಂತ್ರಿಮಂಡಲದ ಮಂಡನೆಯಿದೆ. ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿತು ಓಲೈಸುವವನು ಎಂಬ ಆಪಾದನೆ ಬಂದಾಗ ಕೆರಳಿದ ಬಸವಣ್ಣ, ಕೂಡಲಸಂಗಮನೇ ನಿಜವಾದ ದೊರೆ ಎಂದುತ್ತರಿಸುವ ವಚನದ ಮಾದರಿಯಿದು.

ಕುವೆಂಪುಗೆ ಹೋಲಿಸಿದರೆ, ಅಧಿಕಾರಸ್ಥರು ಮನೆಗೆ ಬಂದಾಗ ಬೇಂದ್ರೆಯವರು ಅತಿಯೆಚ್ಚರ ವಹಿಸುತ್ತಿದ್ದರು. ಒಮ್ಮೆ ಕುಲಪತಿ ಪಾವಟೆಯವರು ಮನೆಗೆ ಬರುತ್ತಾರೆಂದು ತಿಳಿದಾಗ, ತಮ್ಮ ಭೇಟಿಗೆಂದು ಬಂದಿದ್ದ ಯುವಕ ಕೆ.ವಿ. ಸುಬ್ಬಣ್ಣನವರನ್ನು ಬೇಂದ್ರೆ ಹೊರಕಳಿಸುತ್ತಾರೆ. ಬೇಂದ್ರೆಯವರಿಂದ ಬದುಕಿಗೆ ಮಾರ್ಗದರ್ಶನ ಪಡೆದುಕೊಳ್ಳಲು ಬಂದಿದ್ದ ಸುಬ್ಬಣ್ಣನವರಿಗೆ ಭ್ರಮನಿರಸನ ಉಂಟುಮಾಡುತ್ತದೆ. ಬಳಿಕ ಅವರು ಕಾರಂತರನ್ನು ಮಾದರಿಯಾಗಿಸಿಕೊಳ್ಳುವ ನಿರ್ಧಾರ ತಳೆಯುತ್ತಾರೆ. ಕಾರಂತರಾದರೂ ರಾಜಕಾರಣಿಗಳ ಜತೆ ಬಿಗುವಾಗಿ ವರ್ತಿಸುತ್ತಿದ್ದರು. ರಾಜಕೀಯ ಚಳವಳಿಗೆಂದು ಕಾಲೇಜು ತೊರೆದ, ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದ ಅವರು, ರಾಜಕಾರಣಿಗಳನ್ನು ಸಭೆಗಳಲ್ಲಿ ಕಟುವಾಗಿ, ಕೆಲವೊಮ್ಮೆ ಸಿನಿಕವಾಗಿ ಟೀಕಿಸುತ್ತಿದ್ದರು.

ಲೇಖಕರು ತಮ್ಮ ಘನತೆ, ವಿವೇಕ, ನಿಷ್ಠುರತೆಯಿಂದ ಆಳುವವರನ್ನು ಪ್ರಭಾವಿಸುವ ಮತ್ತು ಕರೆದುಬುದ್ಧಿ ಹೇಳುವ; ಅಥವಾ ರಾಜಕಾರಣಿಗಳು ಅವರಲ್ಲಿ ಹೋಗಿ ಸಲಹೆ ಕೇಳುವ ದಿನಗಳು ಕರ್ನಾಟಕದಲ್ಲಿ ಬೇಗನೆ ಕಣ್ಮರೆಯಾದವು. ಈಗ ರಾಜಕಾರಣಿಗಳನ್ನು ಕರೆಸಿಕೊಂಡು ಬುದ್ಧಿ ಹೇಳುವ ಅಧಿಕಾರವನ್ನು ಧಾರ್ಮಿಕ ನಾಯಕರು ಹಾಗೂ ಉದ್ಯಮಿಗಳು ಚಲಾಯಿಸುತ್ತಿದ್ದಾರೆ. ಈ ದುಷ್ಕಾಲದಲ್ಲೂ ಲೇಖಕರ ನೈತಿಕತೆ ಘನತೆ ಉಳಿಸಿಕೊಂಡ ಲೇಖಕರಲ್ಲಿ ದೇವನೂರರೂ ಒಬ್ಬರು.

ಅಧಿಕಾರಸ್ಥರ ಜತೆ ಲೇಖಕರು ಕಲಾವಿದರು ಸಂಬಂಧ ಇರಿಸಿಕೊಳ್ಳುವುದಕ್ಕೆ ಕನ್ನಡದಲ್ಲಿ ನಿಡಿದಾದ ಪರಂಪರೆಯಿದೆ. ಶ್ರೀವಿಜಯನ ‘ಕವಿರಾಜಮಾರ್ಗ’ದ ಹೆಸರಲ್ಲೇ ಇದರ ಚಿಹ್ನೆಯಿದೆ. ಪಂಪ, ಬಸವಣ್ಣ, ಬಿಎಂಶ್ರೀ, ಕಟ್ಟೀಮನಿ, ಲಂಕೇಶ್, ಅನಂತಮೂರ್ತಿ, ಬರಗೂರು, ಸಿದ್ಧಲಿಂಗಯ್ಯ, ಕಂಬಾರರು- ವಿವಿಧ ಪರಿಯಲ್ಲಿ ನಂಟಿದ್ದವರೇ. ಲೇಖಕ-ರಾಜಕಾರಣಿಗಳ ಈ ನಂಟಸ್ತಿಕೆ ತನಗೆ ತಾನೇ ದೋಷವೂ ಅಲ್ಲ, ಹಿರಿಮೆಯೂ ಅಲ್ಲ. ಈ ನಂಟು ವೈಯಕ್ತಿಕ ಮಹತ್ವಾಕಾಂಕ್ಷೆಯಿಂದ ಕೂಡಿದೆಯೊ, ಸಾಮುದಾಯಿಕ ಹಿತವುಳ್ಳದ್ದಾಗಿದೆಯೊ? ಈ ನಂಟಿನ ಸ್ವರೂಪ ಸಮಾನಮನಸ್ಕ ಸ್ನೇಹದಲ್ಲಿದೆಯೊ, ಘನತೆ ಸ್ವಾಭಿಮಾನ ಕಳೆದುಕೊಂಡು ಓಲೈಸುವ ಭಾವದಲ್ಲಿದೆಯೊ? ಆಳುವವರು ಸರ್ವಾಧಿಕಾರಿ ಆಗಿದ್ದಾಗ ಲೇಖಕರು ನಿಷ್ಠುರವಾಗಿದ್ದಾರೊ ಕೀರ್ತಿಸುತ್ತಿದ್ದಾರೊ? ಜನರ ಬದುಕನ್ನೆ ಬದಲಾಯಿಸುವ ಶಕ್ತಿಯುಳ್ಳ ಶಕ್ತಿರಾಜಕಾರಣವನ್ನೇ ಅನಿಷ್ಟವೆಂದು ಪರಿಭಾವಿಸುವ ಅರಾಜಕೀಯ ಪ್ರಜ್ಞೆ ಪ್ರಕಟಿಸುತ್ತಿದ್ದಾರೊ? ಇವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ತನ್ನ ದೇಶದ ಸರ್ವಾಧಿಕಾರಿಗಳನ್ನು ವಿರೋಧಿಸುತ್ತ ಬಂಧನ ಭೀತಿಯಿಂದ ಭೂಗತನಾಗಿದ್ದ ಚಿಲಿಯ ಕವಿ ನೆರೂಡ, ಸಮಾಜವಾದಿ ಕಾಣ್ಕೆಯ ಮೂಲಕ ದೇಶ ಕಟ್ಟಲೆಂದು ಆಯ್ಕೆಯಾದ ಅಲೆಂಡೆಯ ಬೆನ್ನಿಗೆ ನಿಂತಿದ್ದನು. ಅಧಿಕಾರಸ್ಥರು ದುಷ್ಟರಾಗಿದ್ದಾಗ, ಎಚ್ಚರಗೇಡಿತನದಲ್ಲೊ ಸ್ವಾರ್ಥಕ್ಕಾಗಿಯೊ ಬೆಂಬಲಿಸಿದ ಸೂಕ್ಷ್ಮಮನಸ್ಸಿನ ಲೇಖಕರು ಜೀವಮಾನವಿಡೀ ಪರಿತಪಿಸಿದ ನಿದರ್ಶನಗಳೂ ಇವೆ. ಯಾಕೆಂದರೆ, ಪ್ರಭುತ್ವದ ಜತೆಗಿನ ಸಂಬಂಧದ ಸ್ವರೂಪವು,ಲೇಖಕರ ಬರೆಹದ ನೈತಿಕತೆ ಮತ್ತು ಕಸುವನ್ನು ನಿರ್ಣಯಿಸುವ ಸಂಗತಿ ಕೂಡ. ಕುವೆಂಪು ಬರೆಹ ಮತ್ತು ವ್ಯಕ್ತಿತ್ವಗಳ ಘನತೆಯ ಒಂದಂಶವು, ಅವರು ಅಧಿಕಾರಸ್ಥರ ಜತೆಗಿರಿಸಿಕೊಂಡ ನಂಟಿನ ಸ್ವರೂಪದಲ್ಲೂ ಇದ್ದಂತಿದೆ.

(ಕುಪ್ಪಳಿಯ ಕವಿ ಮನೆ ಸ್ಮಾರಕದಲ್ಲಿ ಇಲ್ಲಿಚರ್ಚಿತವಾದ ಪಟಗಳು ಪ್ರದರ್ಶನಕ್ಕಿವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.