ADVERTISEMENT

ಪ್ರಜಾವಾಣಿ ಸಾಧಕರು 2023 | ವಸಂತ ಶೆಟ್ಟಿ - ಕನ್ನಡ ಕೃತಿಗಳಿಗೆ ‘ಇ’ ಬೆಳಕು

ಪ್ರಜಾವಾಣಿ ವಿಶೇಷ
Published 1 ಜನವರಿ 2023, 4:55 IST
Last Updated 1 ಜನವರಿ 2023, 4:55 IST
ವಸಂತ ಶೆಟ್ಟಿ
ವಸಂತ ಶೆಟ್ಟಿ   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ವಸಂತ ಶೆಟ್ಟಿ

ADVERTISEMENT

ವೃತ್ತಿ: ಮೈಲ್ಯಾಂಗ್ ಕ್ರಿಯೇಟರ್ಸ್ ಸಹಸ್ಥಾಪಕ

ಸಾಧನೆ: ಕನ್ನಡ ಕೃತಿಗಳ ಇ–ಬುಕ್, ಆಡಿಯೊ ಬುಕ್ ರೂಪಿಸಿರುವುದು

ವಸಂತ ಶೆಟ್ಟಿ ಅವರು ಹುಟ್ಟಿದ್ದು ಉಡುಪಿ ಜಿಲ್ಲೆಯಲ್ಲಿ. ಓದಿದ್ದು, ಬೆಳೆದಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿ‌. ಬಿ.ಇ ಎಲೆಕ್ಟ್ರಾನಿಕ್ಸ್ ಪದವಿ ಪಡೆದಿರುವ ಶೆಟ್ಟಿ, ತಕ್ಷಶಿಲಾ ಸಂಸ್ಥೆಯಲ್ಲಿ ಪಬ್ಲಿಕ್ ಪಾಲಿಸಿ ಅಧ್ಯಯನ ಮಾಡಿದ್ದಾರೆ.

ಮೊಟೊರೊಲಾ, ಟಿ.ಸಿ.ಎಸ್, ಸಿಸ್ಕೋ ಮುಂತಾದ ಕಂಪನಿಗಳಲ್ಲಿ 15 ವರ್ಷ ಕೆಲಸ ಮಾಡಿ, ಈಗ ಮೈಲ್ಯಾಂಗ್ ಕ್ರಿಯೇಟರ್ಸ್ ಸಹಸ್ಥಾಪಕರಾಗಿದ್ದಾರೆ. ಕನ್ನಡವನ್ನು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಸಜ್ಜುಗೊಳಿಸುವ ಹಲವು ಲ್ಯಾಂಗ್ವೇಜ್ ಪ್ಲಾನಿಂಗ್ (ನುಡಿಹಮ್ಮುಗೆ) ಯೋಜನೆಗಳಲ್ಲಿ ಹನ್ನೆರಡು ವರ್ಷಗಳಿಂದ ಸಕ್ರೀಯ ಪಾಲ್ಗೊಳ್ಳುತ್ತಿದ್ದಾರೆ. ’ಕರ್ನಾಟಕವೊಂದೇ‘ ಮತ್ತು ’ಕನ್ನಡ ಜಗತ್ತು‘ ಅನ್ನುವ ಎರಡು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಪುಸ್ತಕಗಳನ್ನು ಜಗತ್ತಿನ ಯಾವುದೇ ಮೂಲೆಯಿಂದ, ತಮ್ಮ ಮೊಬೈಲ್ ಫೋನ್ ಮೂಲಕ ಕೊಂಡು ಇ–ಬುಕ್ ರೂಪದಲ್ಲಿ ಓದುವ, ಆಡಿಯೋ ಪುಸ್ತಕದ ರೂಪದಲ್ಲಿ ಕೇಳುವ ಅವಕಾಶವನ್ನು ಮೈಲ್ಯಾಂಗ್ ಕಲ್ಪಿಸಿದೆ. ಇದಲ್ಲದೇ ಕರ್ನಾಟಕದಾದ್ಯಂತ ನೆಲೆಸಿರುವ ಬರಹಗಾರ/ಬರಹಗಾರ್ತಿಯರ ಕತೆಗಳನ್ನು ಆಸಕ್ತ ದನಿ‌ಕಲಾವಿದರ ನೆರವಿನಲ್ಲಿ ಆಡಿಯೋಕತೆಗಳಾಗಿಸಿ ಕೇಳಿಸುವ ವಿನೂತನ ಸಮುದಾಯದ ಕಲ್ಪನೆಯ ವೇದಿಕೆಯೊಂದನ್ನು ಮೈಲ್ಯಾಂಗ್ ಆಡಿಯೋ ಹೆಸರಿನಲ್ಲಿ ಶುರು ಮಾಡಿದ್ದಾರೆ. ಈ ಮೂಲಕ ಹೊಸ ತಲೆಮಾರಿನ ಕನ್ನಡಿಗರನ್ನು ಆಡಿಯೋದ ಮೂಲಕ ಕನ್ನಡ ಓದಿನತ್ತ ಕರೆ ತರುವ ಪ್ರಯತ್ನ ಮೈಲ್ಯಾಂಗ್ ಮೂಲಕ ಮಾಡುತ್ತಿದ್ದಾರೆ.

ಕನ್ನಡವನ್ನು ಸಿನಿಮಾ, ಸಾಹಿತ್ಯಕ್ಕೆ ಸೀಮಿತಗೊಳಿಸದೇ ಹೊಸ ಕಾಲದ ಅಗತ್ಯಗಳನ್ನೂ ಪೂರೈಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆಲೆಯಲ್ಲೂ ಗಟ್ಟಿಗೊಳಿಸುವ ಹಲವಾರು ಯೋಜನೆಗಳನ್ನು ಮುನ್ನೋಟ ಅನ್ನುವ ತಂಡದ ಮೂಲಕ ಸಾಧ್ಯವಾಗಿಸುವ ಕೆಲಸದಲ್ಲೂ ವಸಂತ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.