ADVERTISEMENT

ಸ್ಮರಣೆಯೊಂದೇ ಸಾಲದು, ಅವರು ನಡೆದ ದಾರಿಯಲ್ಲಿ ನಡೆಯಬೇಕು

ಸುರೇಶ ಕಂಜರ್ಪಣೆ
Published 14 ಜನವರಿ 2019, 10:02 IST
Last Updated 14 ಜನವರಿ 2019, 10:02 IST
   

ಸಾವಯವ ಕೃಷಿಯ ಹಿರಿಯಜ್ಜ ನಾರಾಯಣ ರೆಡ್ಡಿ ಇನ್ನಿಲ್ಲ. ತೀರ್ಥಹಳ್ಳಿಯ ಪುರುಷೋತ್ತಮ ರಾಯರು, ಗದಗದ ಡಿ.ಡಿ. ಭರಮಗೌಡರ ಮತ್ತು ನಾರಾಯಣ ರೆಡ್ಡಿ ಸಾವಯವ ಕೃಷಿಗೆ ನೆಲೆ ಕಲ್ಪಿಸಿ ಒಂದು ತಲೆಮಾರಿಗೆ ಸ್ಪೂರ್ತಿ ತುಂಬಿದ ತ್ರಿಮೂರ್ತಿಗಳು.

ನಾರಾಯಣ ರೆಡ್ಡಿಯವರನ್ನು ಮೊದಲು ಪರಿಚಯಿಸಿದ್ದು ಆಗ ಉದಯವಾಣಿಯ ಸಂಪಾದಕರಾಗಿದ್ದ ಈಶ್ವರ ದೈತೋಟ. ಆ ಲೇಖನ ಬಂದಾಗಲೂ ಗಾಢ ಪರಿಣಾಮ ಬೀರಿತೋ ಗೊತ್ತಿಲ್ಲ. ಆದರೆ ಎಲ್ಲೋ ಎಳೆ ತಪ್ಪಿದೆ ಎಂಬ ಕಸಿವಿಸಿಯಲ್ಲಿದ್ದ ನನ್ನಂಥ ಹತ್ತಾರು ಜನರಿಗೆ ಈ ವಿಳಾಸ ಸಿಕ್ಕಿತು. ಇದು ಸುಮಾರಾಗಿ 1986. ಆಗ ಅವರಿದ್ದ ವರ್ತೂರಿನ ತೋಟಕ್ಕೊಂದು ಖದರಿತ್ತು. ವರ್ತೂರೂ ಹಳೇ ಊರಿನ ಲಕ್ಷಣ ಹೊಂದಿ ಇನ್ನೇನು ಬೆಂಗಳೂರಿನ ಭಾಗವಾಗುವ ಸಡಗರದಲ್ಲಿತ್ತು. ಈ ಸ್ಥಿತ್ಯಂತರದ ಊರಿನ ನಿರೀಕ್ಷೆಯ ಮಧ್ಯೆ ಸ್ಥಿರವಾಗಿ ನಿಂತ ಊರಿನ ಗುಡಿಯ ಹಾಗೆ ನಾರಾಯಣ ರೆಡ್ಡಿಯವರ ತೋಟವಿತ್ತು.

ಅವರ ಇತಿವೃತ್ತವನ್ನು ಅವರೇ ನೂರಾರು ಬಾರಿ ಹೇಳಿದ್ದಾರೆ. ಅವರು ಯಾವ್ಯಾವುದೋ ಕೆಲಸ ಮಾಡಿದ್ದು. ಮತ್ತೆ ಕೃಷಿಗೆ ಮರಳಿದ್ದು. ರಾಸಾಯನಿಕ ಬಳಸಿ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದು, ಮತ್ತೆ ಮಕಾಡೆ ಮಲಗಿದ್ದು ಹೀಗೆ. ಅಲ್ಲಿಂದಾಚೆಗೆ ಅವರ ಪ್ರಯೋಗಗಳು , observations ಸರಿಸಾಟಿಯಿಲ್ಲದ್ದು. ‘ಓದಿದ್ದು ಎಂಟನೇ ಕ್ಲಾಸು ಅಷ್ಟೇ’ ಎಂದು ಹೇಳಿ ನಗುತ್ತಿದ್ದ ನಾರಾಯಣ ರೆಡ್ಡಿ ಅಸ್ಖಲಿತ ಇಂಗ್ಲಿಷ್ ಬಳಸುತ್ತಿದ್ದರು.

ಅದೇ ವೈಜ್ಞಾನಿಕ ಭಾಷೆಯಲ್ಲಿ ಕೃಷಿ ವಿಜ್ಞಾನಿಗಳನ್ನು ಪ್ರಶ್ನಿಸುವುದನ್ನು ಕಲಿಸಿದ್ದು ಅವರೇ. ರಾಸಾಯನಿಕ ಕೃಷಿಯ ಅಂದಾದುಂದಿ ಪರಿಣಾಮಗಳಿಗೆ ಪಕ್ಕಾ ರೈತನಿಗೆ ಪರ್ಯಾಯ ದಾರಿಯನ್ನು ವಾಸ್ತವದಲ್ಲಿ ರೂಪಿಸುವುದು ಹೇಗೆ ಎಂದು ಚಿಂತಿಸುತ್ತಾ ನಡೆದ ಘಟ ನಾರಾಯಣ ರೆಡ್ಡಿ. ಅವರಿಗೆ ಎಲ್ಲವೂ ಪ್ರಾಕ್ಟಿಕಲ್. ಸಾವಯವ ಸಾಧ್ಯವೋ ಎಂದು ಪ್ರಶ್ನೆ ಹಾಕಿದರೆ ಅದರ ಮಾರ್ಗೋಪಾಯಗಳನ್ನು ಪ್ರಾಕ್ಟಿಕಲ್ ಆಗಿ ವಿವರಿಸುತ್ತಿದ್ದ ಬಗೆ ಅನನ್ಯ.

ಪರಮ ಜಂಗಮರಾಗಿದ್ದ ನಾರಾಯಣ ರೆಡ್ಡಿ ಕರ್ನಾಟಕದ ಹತ್ತು ಹಲವು ಸರ್ಕಾರೇತರ ಸಂಸ್ಥೆಗಳ ಜೊತೆ ಪರ್ಯಾಯ ಕೃಷಿ ಪ್ರಯೋಗಗಳಿಗೆ ಕೈಜೋಡಿಸಿದರು. AME ಸಂಸ್ಥೆ ತರುತ್ತಿದ್ದ LEISA ತ್ರೈಮಾಸಿಕಕ್ಕೆ ನಿಯಮಿತವಾಗಿ ಅಂಕಣ ಬರೆದರು. ರೈತ ಕ್ಷೇತ್ರ ಶಾಲೆ ಎಂಬ ಪ್ರಯೋಗಕ್ಕೆ ಬೇಕಾದ ವಿವರಗಳನ್ನು ಸ್ಪಷ್ಠಪಡಿಸಿದರು. ಅಷ್ಟೇಕೆ. GREEN Foundation ರಾಗಿಯಲ್ಲೂ SRI ಮಾದರಿಯಲ್ಲಿ ಪ್ರಯೋಗ ಮಾಡಬಹುದಲ್ಲಾ ಎಂದು ಯೋಚಿಸಿದಾಗ ವನಜಾ ರಾಮಪ್ರಸಾದ್ ನೋಡಿದ್ದು ರೆಡ್ಡಿಯವರ ಕಡೆಗೆ. ಇಂದು ಗುಳಿ ರಾಗಿ ಎಂಬ ಹೆಸರಿನಲ್ಲಿ ಜನಪ್ರಿಯವಾಗುತ್ತಿರುವ ರಾಗಿಯ SRI ಪ್ರಯೋಗ ಮೊದಲು ನಡೆಸಿದ್ದು ನಾರಾಯಣ ರೆಡ್ಡಿ. NGO ಗಳಿಗೆ ಸುಸ್ಥಿರ ಕೃಷಿ ಯೋಜನೆ ಜನಪ್ರಿಯ ಫಂಡಿಂಗ್ ಮೂಲವಾಗುವ ಮೊದಲು GREEN FOUNDATION ಮತ್ತು ICRA ಸಂಸ್ಥೆಗಳು ನಾರಾಯಣ ರೆಡ್ಡಿಯವರ ಪ್ರಯೋಗ ಮತ್ತು ಅನುಭವಗಳನ್ನು ದೊಡ್ಡ ಪ್ರಮಾಣದಲ್ಲಿ ರೈತರ ಬಳಿಗೆ ಒಯ್ಯವ ಕೆಲಸ ಮಾಡಿದವು. ಸಹಜ ಸಮೃದ್ಧದ ಕೃಷ್ಣಪ್ರಸಾದ ಕೂಡಾ ಈ ನಿಟ್ಟಿನಲ್ಲಿ ನಾರಾಯಣ ರೆಡ್ಡಿ ಬೆರಳು ತೋರಿದೆಡೆ ನಡೆದರು.

ವರ್ತುರಿನಲ್ಲಿ ಇನ್ನು ಕೃಷಿ ಸಾಧ್ಯವೇ ಇಲ್ಲ ಎಂದು ಅನ್ನಿಸಿದಾಗ ರೆಡ್ಡಿಯವರು ದೊಡ್ಡಬಳ್ಳಾಪುರದ ಬಳಿ ಒಂದಷ್ಟು ಜಮೀನು ತೆಗೆದುಕೊಂಡು ಅದನ್ನೊಂದು ಸಾವಯವ ಕಾಶಿಯನ್ನಾಗಿಸಿದರು. ದೊಡ್ಡಬಳ್ಳಾಪುರದ ಮಿತ್ರರಿಗೆ ಅದು ಬೆಟ್ಟವೇ ಮಹಮ್ಮದನ ಬಳಿ ಬಂದ ಹಾಗೆ...

ಪ್ರಾಯಶಃ ಭಾರತದ ಎಲ್ಲಾ ಸಾವಯವ ಪ್ರಯೋಗಿಗಳಿಗೆ ಫೀಲ್ಡ್ ಲೆವೆಲ್ ಸಮಸ್ಯೆಗಳು ಬಂದಾಗ ನೆನಪಾಗುತ್ತಿದ್ದದು ನಾರಾಯಣ ರೆಡ್ಡಿ. ಕೃಷಿ ವಿಜ್ಞಾನಿಗಳು ಕೇಳುವ ಎರಡು ಪ್ರಶ್ನೆಗಳನ್ನು ನೆನಪಿಸುವೆ. 1. ಸಾವಯವ ಮೂಲಕ ಈ ದೇಶಕ್ಕೆ ಆಹಾರ ಪೂರೈಸಲು ಸಾಧ್ಯವಾ? 2. ಪ್ರತೀ ಬೆಳೆಗೂ ನಿರ್ದಿಷ್ಟ ಸಾಗುವಳಿ ಪದ್ಧತಿ ನಿರ್ದಿಷ್ಟಪಡಿಸಲಾಗಿದೆಯಾ? (ಇದಕ್ಕೆ ಕ್ರಾಪ್ ಪ್ರೊಟೋಕಾಲ್ ಎಂದು ಕರೆಯುತ್ತಾರೆ) ಈ ಎರಡೂ ಪ್ರಶ್ನೆ ನಾರಾಯಣರೆಡ್ಡಿಯವರಿಗೆ ಬಲು ಪ್ರಿಯ. ಲೂಸ್ ಬಾಲ್ ಬಿದ್ದಾಗ ಖುಷಿಪಡುವ ಬ್ಯಾಟ್ಸ್‌ಮನ್ ಥರ ಅವರು ಇವೆರಡನ್ನೂ ಎತ್ತಿಕೊಂಡು ಇನ್ನಿಲ್ಲದ ಪರಿಣಿತಿ, ವ್ಯಂಗ್ಯದಲ್ಲಿ ಉತ್ತರಿಸುತ್ತಿದ್ದರು.

‘ಏನ್ರೀ ದೇಶಕ್ಕೆ ಊಟ ಹಾಕ್ತೀನಿ ಅಂತ ರೈತ ಬರ್ಕೊಟ್ಟಿದಾನಾ?’ಎಂಬ ಗುರುಗಾಟದಿಂದ ಶುರು ಮಾಡುತ್ತಿದ್ದರೆಡ್ಡಿ ಪ್ರತೀ ಬೆಳೆಯನ್ನೂ ಹೇಗೆ ಕೆಡಿಸಿದಿರಿ ಎಂದು ಸೂಕ್ಷ್ಮಾತಿಸೂಕ್ಷ್ಮ ವಿವರಗಳ ಮೂಲಕ ನಿವಾಳಿಸಿ ಪ್ರಕೃತಿಯನ್ನು ಗಮನಿಸಿದರೆ ಹೇಗೆ ಪ್ರತೀ ಬೆಳೆಯ ಸಾಗುವಳಿ ಪದ್ಧತಿ ತನ್ನಂತಾನೇ ಕಣ್ಣೆದುರು ನಿಲ್ಲುತ್ತದೆ ಎಂದು ವಿವರಿಸುವರು. ಒಂದು ಎಕರೆಯಲ್ಲಿರುವ ಸಸ್ಯ ವೈವಿಧ್ಯ, ಅದರಲ್ಲಿರುವ ಕ್ರಿಮಿಕೀಟಗಳು, ಅಲ್ಲಿ ಬರುವ ಹಕ್ಕಿ ಪಕ್ಕಿ ಇವೆಲ್ಲವನ್ನೂ ಅನುಭವ ಜನ್ಯವಾಗಿ ವಿವರಿಸುತ್ತಾ, ಆಧುನಿಕ ವಿಜ್ಞಾನದಿಂದ ಪಡೆದ ಸೂಕ್ಷ್ಮ ಜೀವಿಗಳ ಸಂಖ್ಯೆ, ಅವುಗಳ ವೈವಿಧ್ಯಗಳನ್ನು ಮುಂದಿಡುವರು. ತಾನೇ ಕಲಿತ ಅನುಭವ, ಪಾರಂಪರಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ವಿವರಗಳ ಮೂರೆಳೆಗಳನ್ನೂ ರೆಡ್ಡಿಯವರು ಹೆಣೆಯುತ್ತಿದ್ದ ಬಗೆ ಅಪೂರ್ವ.

ನಾರಾಯಣರೆಡ್ಡಿಯವರು ತಿರುಗುತ್ತಿದ್ದ ರೀತಿ ನೋಡಿದರೆ ಭಯವಾಗುತ್ತಿತ್ತು. ‘ಸಾರ್, ಇದೇನು ಇಷ್ಟು ತಿರುಗ್ತಿರಿ?’ಎಂದು ಕೇಳಿದರೆ, ‘ಗವರ್ಮೆಂಟ್ ಬಸ್ಸಾಗಿದ್ರೆ ಈಗಲೇ ಗುಜರಿಗೆ ಹಾಕಿರೋರು’ಎಂದು ನಗುವರು.

ರೆಡ್ಡಿಯವರ Wry humour ಅವರದ್ದೇ. ಅವರಿಗಿದ್ದ ಹಾಸ್ಯಪ್ರಜ್ಞೆ ನಮ್ಮೆಲ್ಲರಿಗೂ ಮಾದರಿ. ನಾನು ಏನನ್ನಾದರೂ ಸೋಲಿನ ಭಯವಿಲ್ಲದೇ ಎದುರಿಸುವ ಧೈರ್ಯ ಕೊಟ್ಟದ್ದೇ ಈ ಗುರುವರ್ಯ. ತೀರ್ಥಹಳ್ಳಿಯ ಪುರುಷೋತ್ತಮ ರಾಯರಿಗೂ ಈ ಗುಣ ಇತ್ತು.
ಅವರ ಭಾಷಣಗಳನ್ನು ಕೇಳಿದವರಿಗೆ ತಟಕ್ಕನೆ ಈ ಗುಣ ಗೊತ್ತಿರುತ್ತದೆ. ಆದರೆ ಈ ವ್ಯಂಗ್ಯ ತಮಾಷೆಯ ಹಿಂದೆ ಉಕ್ಕಿನ ದೃಢತೆ ಮತ್ತು ಹದ್ದಿನಗಣ್ಣಿನಲ್ಲಿ ವಿವರಗಳನ್ನು ಗಮನಿಸುವ ಪ್ರತಿಭೆ ಇತ್ತು. ಕಳೆದ ಎರಡು ದಶಕಗಳಲ್ಲಿ ಅವರ ಸಾತ್ವಿಕ ಆಕ್ರೋಶ ಹೆಚ್ಚುತ್ತಾ ಹೋಗಿದ್ದು ಎಲ್ಲರೂ ಗಮನಿಸಿದ್ದಾರೆ. ಯಾರು ಕರೆದರೂ ಸುಮಾರಾಗಿ ಹೋಗುವರು. ಆದರೆ ಅಲ್ಲಿನ ಪ್ರೇಕ್ಷಕ ಗಡಣದ ಸೀರಿಯಸ್‌ನೆಸ್ ಬಗ್ಗೆ ಅವರಿಗೆ ಗುಮಾನಿಗಳಿದ್ದವು.

ಸ್ವಭಾವತಃ ರೈತನ ಮಾತುಗಾರಿಕೆಯ ಸೊಗಡು ತುಂಬಿಕೊಂಡಿದ್ದ ರೆಡ್ಡಿಯವರು ಔಪಚಾರಿಕ ಸೆಮಿನಾರುಗಳಲ್ಲಿ ಬೇಕೆಂದೇ ವಿಜ್ಞಾನಿಗಳಿಗೆ ಆಢ್ಯರಿಗೆ ಮುಜುಗರ ಮಾಡುವ ಧಾಟಿಯಲ್ಲಿ ಮಾತಾಡಿದ್ದಿದೆ. ಕ್ಲುಪ್ತವಾಗಿ ಪಿಪಿಟಿ ಮೂಲಕ ಇಪ್ಪತ್ತು ನಿಮಿಷದಲ್ಲಿ ಪ್ರೆಸೆಂಟೇಶನ್ ಮಾಡಿ ಭೇಷ್ ಅನ್ನಿಸಿಕೊಳ್ಳುವ ಸೆಮಿನಾರುಗಳಲ್ಲಿ ರೆಡ್ಡಿ ಆದ್ಯಂತವಾಗಿ ಮಾತಾಡುತ್ತಿದ್ದರು. ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ಹೋಗಿ ಮತ್ತೆ ಏನು ಮಾತಾಡ್ತಿದ್ದೆ ಅಂತ ನೆನಪು ಮಾಡಕೊಂಡು... ಹೀಗೆ ರೆಡ್ಡಿಯವರ ಮಾತಿನ ಓಘ.

ರಾಜಕೀಯ ಸ್ಪಷ್ಠತೆ ಬಗ್ಗೆ ಯೋಚಿಸಿದರೆ ರೆಡ್ಡಿಯವರ ನಿಲುಮೆ ಟಿಪಿಕಲ್ ರೈತನದ್ದೇ. ಕೆಟ್ಟು ನಿಪಾತೆದ್ದಿರುವ ರಾಜಕೀಯ ವ್ಯವಸ್ಥೆ ಬಗ್ಗೆ ರಾಜಕಾರಣಿಗಳ ಗುಳ್ಳೆನರಿ ಸ್ವಭಾವದ ಬಗ್ಗೆ ರೇಜಿಗೆ ಆಕ್ರೋಶದಲ್ಲಿ ಮಾತಾಡುತ್ತಿದ್ದರು.ಆಮೇಲೆ ಅವರ ಬಂದೂಕು ರೈತರ ಮೇಲೆಯೇ ತಿರುಗುವುದು. ಯಾಕ್ರಪ್ಪಾ ಹೀಗಿದೀರಾ ಎಂದು ಎರಡನೇ ಮಜಲಿಗೆ ಮಾತು ಏರಿಸುವುದು ಅವರ ಮಾತಿನ ಧಾಟಿ.

ಇತ್ತಿಚೆಗಿನ ದಿನಗಳಲ್ಲಿ ಅವರು ಮಾತಾಡುತ್ತಿದ್ದರೆ ಮಹಾಭಾರತದ ಕೊನೆಯಲ್ಲಿ ವ್ಯಾಸರು, ವಿಷಣ್ಣರಾಗಿ, ‘ಎರಡೂ ಕೈಯೆತ್ತಿ ಕೂಗಿ ಹೇಳುತ್ತಿದ್ದೇನೆ, ದಯವಿಟ್ಟು ಕೇಳಿಸಿಕೊಳ್ಳಿ’ಎಂದು ಆವೇಗದಲ್ಲಿ ಹೇಳಿದ ರೀತಿಯೇ ಕಾಣಿಸುತ್ತಿತ್ತು. ಹೌದಲ್ಲ ಎರಡು ತಲೆಮಾರಿನಲ್ಲೇ ಆದ ಸ್ಥಿತ್ಯಂತರ ಕಂಡು ಮತ್ತೆ ಮಣ್ಣಿಗೆ, ಅನ್ನಕ್ಕೆ, ರೈತನಿಗೆ ಮರುಜೀವ ಕೊಡಲು ಹೆಣಗಿದ ಹಿರಿ ಜೀವ ಅದು.

ಸಹಜವಾಗಿರುವುದೇ ಮರೆತಿರುವ ಈ ಕಾಲದಲ್ಲಿ ರೆಡ್ಡಿ ಅರ್ಧ ತೋಳಿನ ಬಿಳಿ ಶರ್ಟ್, ಪಂಚೆಯಲ್ಲಿ ಕಾಲಿಗೆ ಚಕ್ರ ಕಟ್ಟಿ ತಿರುಗಿದ್ದರು. ಭರಮಗೌಡರೂ ಅಷ್ಟೇ. ಸಾದಾ ಪ್ಯಾಂಟು ಫುಲ್ ತೋಳಿನ ಶರ್ಟು ಅವರ ಪೇಟೆಂಟು. ಭರಮಗೌಡರು ನಿರಾಮಯವಾಗಿ ಸಿಗರೇಟು ಸೇದುತ್ತಾ ಇದ್ದ ಸಹಜತೆ ನೆನಪಿಸಿಕೊಳ್ಳಿ. ನಾರಾಯಣರೆಡ್ಡಿಯವರಿಗೆ ಇದರೊಂದಿಗೆ ಒಂದು ಮಗು ಸಹಜ ಮುಗ್ಧತೆ ಇತ್ತು. ಮೇಲುಕೋಟೆಯ ಗೆಳೆಯ ಸಂತೋಷನ ಮದುವೆಗೆ ನಾರಾಯಣ ರೆಡ್ಡಿಯವರಿಗೂ ಹೇಳಿದ್ದ. ಪುಣ್ಯಾತ್ಮ ಹತ್ತು ಕೇಜಿ ವೆಲ್ವೆಟ್ ಬೀನ್ಸ್ ಬೀಜ ಹೊತ್ತು ಯಾವ್ಯಾವುದೋ ಬಸ್ಸು ಬದಲಾಯಿಸಿ, ಮೇಲುಕೋಟೆಗೆ, ಅಲ್ಲಿಂದ ಹೊಸ ಜೀವನ ದಾರಿಗೆ ತಲುಪಿದ್ದರು. ಅವರ ಶರ್ಟಿನ ಹೆಗಲ ಭಾಗ ಸದಾ ಹೊರೆ ಹೊತ್ತ ಧೂಳಲ್ಲಿ ಮುಳುಗಿತ್ತು.

ನಾನು ಊರಿಗೆ ಹೋದಾಗ ಇನ್ನೊಂದು ರಿತಿಯ ಸೌಭಾಗ್ಯ ಬಂತು. ರೆಡ್ಡಿಯವರ ಮೊಮ್ಮಕ್ಕಳನ್ನು ಚೊಕ್ಕಾಡಿಯ ಸತ್ಯಸಾಯಿ ಶಾಲೆಯಲ್ಲಿ ಸೇರಿಸಿದ್ದರು. ಅವರು ಬೆಳ್ಳಂಬೆಳಿಗ್ಗೆ ಸುಳ್ಯದಲ್ಲಿ ಇಳಿದರೆ ನನ್ನ ತಮ್ಮ ಜೀಪಲ್ಲಿ ಅವರನ್ನು ಎತ್ತಿ ಹಾಕಿಕೊಂಡು ಬರುವನು. ರೆಡ್ಡಿಯವರು ಸಾವಯವ ಪ್ರಯೊಗಗಳನ್ನು ಇನ್ಸಪೆಕ್ಟ್ ಮಾಡುತ್ತಿದ್ದರು(ಇದು ಅವರದೇ ಪದ). ನಾಡಿನ ಕೃಷಿ ಆಳುವವರ, ಕೃಷಿ ವಿಜ್ಞಾನಿಗಳ ಹಪಾಹಪಿಯಿಂದ ಹಳ್ಳ ಹಿಡಿದಾಗ ಮತ್ತೆ ಸುಸ್ಥಿರ ಕೃಷಿಯ ದಾರಿ ತೋರಿದ ಹಿರಿಯ ನಾರಾಯಣ ರೆಡ್ಡಿ ದೈಹಿಕವಾಗಿ ಇಲ್ಲ. ಆದರೆ ಅವರ ಹಾದಿಯಲ್ಲಿ ಕ್ರಮಿಸುವ ಮಂದಿ ಸಾವಿರಾರು ಇದ್ದಾರೆ. ಪ್ರಕೃತಿ ಸ್ನೇಹೀ ಕೃಷಿಯ ರೂವಾರಿಗಳಾದ ತ್ರಿಮೂರ್ತಿಗಳಲ್ಲಿ ಪುರುಷೋತ್ತಮರಾಯರು, ಭರಮಗೌಡರ ನಮ್ಮನ್ನು ತೊರೆದ ನೆನಪು ಮಾಸುವ ಮೊದಲು ರೆಡ್ಡಿಯವರೂ ವಿದಾಯ ಹೇಳಿದ್ದಾರೆ.

‘ಗೊನೆ ಮಾಗಿ ಬಾಳೆ ಜೀವನ್ಮುಕ್ತ, ಹಿಂಡು ಹಿಳ್ಳೆಗಳಲ್ಲಿ ಜೀವ ಊರಿ’ಎಂಬ ಅಡಿಗರ ಸಾಲು ದೇಹ ಪಡೆಯುವುದು ಇಂಥಾ ಸಂದರ್ಭಗಳಲ್ಲಿ. ಸ್ಮರಣೆಯೊಂದೇ ಸಾಲದು. ಅವರು ನಡೆದ ದಾರಿಯಲ್ಲಿ ನಡೆದರೆ ಸಾಕು. ರೆಡ್ಡಿ, ಭರಮಗೌಡರರಂಥಾ ಆತ್ಮಗಳಿಗೆ ಸಾವೆಲ್ಲಿ. ಅವರು ಸದಾ ಅಂತಃ ಸ್ಸಾಕ್ಷಿ ತರ ಬದುಕಿ ಕಾಡುತ್ತಿರುವಾಗ.? ಎದೆಯೊಳಗೆ ತುಂಬಿ ನಡೆದರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.