ADVERTISEMENT

ಶಿವರಾಮ ಕಾರಂತ ನೆನಪು | ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದೇವಾ?

ನಾರಾಯಣ ರಾಯಚೂರ್
Published 3 ಡಿಸೆಂಬರ್ 2022, 21:45 IST
Last Updated 3 ಡಿಸೆಂಬರ್ 2022, 21:45 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   

ಕಾರಂತರು ನಮ್ಮ ನಡುವೆ ಇಲ್ಲವಾಗಿ ಇದೇ 9ಕ್ಕೆ ಭರ್ತಿ 25 ವರ್ಷ. ಆದರೆ, ದಿನ ಕಳೆಯುತ್ತಾ ಹೋದಂತೆ ಅವರ ಚಿಂತನೆಗಳು ಇನ್ನೂ ಹೆಚ್ಚು ಪ್ರಸ್ತುತವಾಗುತ್ತಾ ಹೊರಟಿವೆ...

ಕನ್ನಡದ ಮೇರು ಲೇಖಕರಲ್ಲೊಬ್ಬರು ಡಾ.ಶಿವರಾಮ ಕಾರಂತರು. ಅವರ ಬದುಕು-ಬರಹ ಎರಡೂ ವೈವಿಧ್ಯಮಯ, ವಿದ್ವತ್ಪೂರ್ಣ. 95 ವರ್ಷಗಳ ತುಂಬು ಜೀವನದ ಸಾಧನೆಯಲ್ಲಿ 427 ಕೃತಿಗಳನ್ನು ಬರೆದರು - ಅವುಗಳಲ್ಲಿ ಕಾದಂಬರಿ, ನಾಟಕ, ಕಥೆ, ಪ್ರವಾಸ ಕಥನ, ವಿಜ್ಞಾನ ಸಾಹಿತ್ಯ, ಬಾಲ ಸಾಹಿತ್ಯ, ವಿಶ್ವಕೋಶ ಎಲ್ಲವೂ ಸೇರಿದ್ದವು. ಹೀಗಾಗಿ ಅವರೊಬ್ಬ ನಡೆದಾಡುವ ವಿಶ್ವಕೋಶವೇ ಆಗಿದ್ದರು. ಕೊನೆಗಾಲದಲ್ಲೂ, ತಮ್ಮ ಪ್ರಾಣಪಕ್ಷಿ ಹಾರಿಹೋಗುವ ತುಸು ಮೊದಲೂ, ಹಕ್ಕಿಗಳನ್ನು ಕುರಿತಾದ ಒಂದು ಪುಸ್ತಕ ರಚನೆಯಲ್ಲಿ ತೊಡಗಿದ್ದರಂತೆ ಅವರು!

ಕಾರಂತರು ಗಂಭೀರ ಸ್ವಭಾವದವರೆಂದೇ ಸುಪರಿಚಿತರು. ಆದರೆ, ನನ್ನ-ಅವರ ಮೊದಲ ಭೇಟಿ ಅವರ ಭಿನ್ನ ವ್ಯಕ್ತಿತ್ವವನ್ನೂ ಪರಿಚಯಿಸಿತು. ಎಂಬತ್ತರ ದಶಕದ ಸಂದರ್ಭ. ನಮ್ಮ ಬ್ಯಾಂಕ್‌ನ ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಕಾರಂತರು ಅತಿಥಿ. ಸರಿಯಾದ ಸಮಯಕ್ಕೆ ಕಾರು ಸಂಘದ ಮುಖ್ಯದ್ವಾರದ ಬಳಿ ಬಂತು. ಕಾರಂತರು ಇಳಿದರು. ನಾನು ಬರಮಾಡಿಕೊಂಡು ಎದುರಿಗಿದ್ದ ಸಂಘದ ಇತರ ಪದಾಧಿಕಾರಿಗಳನ್ನು ಕಾರಂತರಿಗೆ ಪರಿಚಯಿಸುತ್ತ ‘ಇವರು... ನಾಗೇಶ್ ಅಂತ...’ ಎನ್ನುತ್ತಾ, ನಮ್ಮ ಸಂಘದ ಖಜಾಂಚಿ ಎನ್ನಬೇಕು ಅನ್ನುವಷ್ಟರಲ್ಲಿಯೇ ಕಾರಂತರು, ‘ಅಂತ... ಯಾಕೆ? ಇನ್ನೂ ಡೆಫನೇಟ್ ಇಲ್ಲವೋ?’ ಎಂದು ಬಿಡೋದೇ! ನಂಗೊ ಅಚ್ಚರಿಮಿಶ್ರಿತ ಆನಂದ. ಪರವಾಗಿಲ್ವೆ, ಕಾರಂತರೂ ಹಾಸ್ಯಪ್ರಜ್ಞಾಪ್ರಿಯರೇ. ಸುಮ್ಮನೆ ಅವರ ಬಗ್ಗೆ ಜನ ಏನೋ ಹೆದರಿಸಿದ್ದರಲ್ಲ ಎಂದುಕೊಂಡೆ.

ಯಕ್ಷಗಾನದಲ್ಲಿ ಅವರು ಹೊಸ ಪ್ರಯೋಗ ಮಾಡಿದರು - ಅದೂ ಇಳಿ ವಯಸ್ಸಿನಲ್ಲಿ, ತಾವೇ ಗೆಜ್ಜೆ ಕಟ್ಟಿ ಕುಣಿದರು. ಸಿನಿಮಾ ಮಾಡಿದರು. ಮುಂಬೈಗೆ ಹೋಗಿ ಸಿನಿಮಾ ತಂತ್ರ ಕಲಿತು, ಕ್ಯಾಮೆರಾ ಖರೀದಿಸಿ ತಂದು ಅಭಿನಯಿಸಿ, ನಿರ್ದೇಶಿಸಿ ಚಿತ್ರ ನಿರ್ಮಾಣ ಮಾಡಿದರು. ಒಮ್ಮೆ ಒಬ್ಬ ಬಡಗಿ ಮೇಜು ಮಾಡಿದ್ದು ಸರಿ ಬರಲಿಲ್ಲವೆಂದು ತಾವೇ ಉಳಿ, ಗರಗಸ ಹಿಡಿದು ಪೀಠ ತಯಾರಿಸಿದ ಹಟವಾದಿಯವರು.

ADVERTISEMENT

ತಮ್ಮ ಪುಸ್ತಕಕ್ಕೆ ತಾವೇ ಮುಖಪುಟ ಚಿತ್ರ ಬರೆದುಕೊಂಡ ಏಕೈಕ ಸಾಹಿತಿ ಆ ಕಾಲದಲ್ಲಿ ಯಾರಾದರೂ ಇದ್ದಿದ್ದರೆ ಅದು ಕಾರಂತರು ಮಾತ್ರ! ಮೊಳೆ ಜೋಡಿಸಿ ಅಚ್ಚುಮಾಡುತ್ತಿದ್ದ ದಿನಗಳಲ್ಲಿ ತಾವೇ ಮುದ್ರಣಾಲಯವನ್ನು ತೆರೆದು, ಮೊಳೆ ಜೋಡಿಸಿ, ಅಚ್ಚುಮಾಡಿ ತಮ್ಮ ಪುಸ್ತಕಗಳನ್ನು ಹೊರತಂದ ಸಾಹಸವನ್ನು ಅವರ ಮಾತುಗಳಲ್ಲಿಯೇ ಕೇಳಿ: ‘ಮುದ್ರಣಾಲಯದ ಮೊಳೆ ಜೋಡಿಸುವವ, ಅಚ್ಚು ಮಾಡುವವ, ಪ್ರೂಫ್ ನೋಡುವವ, ಮುದ್ರಿಸುವವ ಇಷ್ಟಾಗಿ ಪುಸ್ತಕ ಸಿದ್ಧವಾದ ಮೇಲೆ ಓದುಗನೂ ನಾನೊಬ್ಬನೇ’.

ಇನ್ನು ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ‘ಕೇಳಿಸ್ಕೊಳ್ಳಿ, ಬರ ಬಂದಿದೆ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದೇವಾ’ ಎಂದು ಕೇಳಿದವರು ಕಾರಂತರು! ಮೊದಲ ವಿಶ್ವ ಕನ್ನಡ ಸಮ್ಮೇಳನ 1985ರಲ್ಲಿ ಮೈಸೂರಿನಲ್ಲಿ ನಡೆಯಿತು. ಕುವೆಂಪು ಅವರಂಥ ಘಟಾನುಘಟಿಗಳೆದುರೇ ‘ನಾಡಿನಲ್ಲಿ ಬರ ಇರುವಾಗ ವಿಶ್ವ ಕಾಣದ ಸಮ್ಮೇಳನಗಳು ಬೇಕೇ’ ಎಂದು ಪ್ರಶ್ನೆ ಮಾಡಿದವರಿಗೆ ಕಾರಂತರು ಉತ್ತರಿಸಿದ ಬಗೆ ಇದು.

‘ಮೂಕಜ್ಜಿಯ ಕನಸುಗಳು’ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ. ಮೂಕಜ್ಜಿಯ ಮೂಲಕ ಕಾರಂತರೇ ಮಾತನಾಡಿದ್ದಾರೆ. ‘ನಾಲ್ಕು ದಿನ ಚಂದವಾಗಿ ಇರಬೇಕು’. ಇದು ಮೂಕಜ್ಜಿಯ ತತ್ವ. ಚಂದವಾಗಿ ಅಂದರೆ? ‘ಇರುವಷ್ಟು ದಿನ ನಮಗೂ ಹಿತವಾಗಿ, ನಾಲ್ಕು ಜನರಿಗೂ ಹಿತವಾಗಿ ಬಾಳುವುದಪ್ಪಾ. ಬರಿ ಮನುಷ್ಯರಿಗಷ್ಟೇ ಅಲ್ಲ, ಆಚೀಚಿನ ಎಲ್ಲ ಜೀವಿಗಳಿಗೂ. ಪರರಿಗೆ ಸುಖ ಕೊಡಲು ಬಾರದೆ ಹೋದರೂ ಪರವಾಗಿಲ್ಲ, ದುಃಖ ಕೊಡದಿದ್ದರೆ ಸಾಕು’ ಇಂತಹ ಅಸ್ತಿತ್ವವಾದಿ ಮಾನವತತ್ವವನ್ನು ಪ್ರತಿಪಾದಿಸುವ ತತ್ವಜ್ಞಾನಿ ಮೂಕಜ್ಜಿ. ಮೂಡೂರು, ನಾಡೂರು, ಪಾಡೂರು, ಬಸರಿಕಟ್ಟೆ, ಅಶ್ವಥಕಟ್ಟೆ, ಬೂದಿಕಟ್ಟೆ ಇವು ಸಾಂಕೇತಿಕ.

ಗಣ್ಯ ಪತ್ರಕರ್ತರಾಗಿದ್ದ ಎಚ್.ವೈ.ಶಾರದಾಪ್ರಸಾದ್ ಹಾಗೂ ಕಾರಂತರು ಆಪ್ತಸ್ನೇಹಿತರು. ಭಾರತೀಯ ವಿದ್ಯಾಭವನದ ಕಾರ್ಯಕ್ರಮವೊಂದಕ್ಕೆ ಕಾರಂತರು ದೆಹಲಿಗೆ ಬಂದಾಗ ಪತ್ರಕರ್ತನೊಬ್ಬ ಕಾರಂತರಿಗೆ ಕೇಳಿದ್ದ: ‘ಮಿಸ್ಟರ್ ಕಾರಂತ್? ಯು ಆರ್‌ ಎ ಹೆಕ್ಟಿಕ್ ರೈಟರ್, ಆ್ಯಕ್ಟಿವಿಸ್ಟ್, ಡು ಯು ಬರ್ನ್ ಮಿಡ್ ನೈಟ್ ಆಯಿಲ್?’ ಅದಕ್ಕೆ ಕಾರಂತರ ಚುಟುಕು - ಚಾಲಾಕಿನ ಪ್ರತ್ಯುತ್ತರ: ‘ನೋ, ಸನ್‌ಲೈಟ್ ಇಸ್ ಇನಫ್ ಫಾರ್ ಮಿ’!

1997ರ ಡಿಸೆಂಬರ್ 9ರಂದು ಕಾರಂತರು ನಮ್ಮನ್ನಗಲಿದ ದಿನ. ‘ಕಾರಂತರ ನಿಧನದಿಂದ ಉಜ್ವಲ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವ’ ಎಂದಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮಾತು ಎಷ್ಟು ಧ್ವನಿಪೂರ್ಣ. ಕಾರಂತರು ನಮ್ಮನ್ನಗಲಿ 25 ವರ್ಷಗಳೇ ಆಗಿರಬಹುದು. ಆದರೆ, ಚಿಂತನೆಗಳಿಂದ ನಮ್ಮ ನಡುವೆ ಬದುಕಿದ್ದಾರೆ.

‘ಸಾವು ಬರುವುದು ಅದರ ಇಷ್ಟವಿದ್ದಾಗ’

ಶಿವರಾಮ ಕಾರಂತರ ಜತೆ ಒಂದು ಕಾಲ್ಪನಿಕ ಸಂದರ್ಶನ/ ಫಟಾಫಟ್ ಪ್ರಶ್ನೋತ್ತರ. ಉತ್ತರವನ್ನು ಅವರ ನುಡಿಗಟ್ಟಿನಿಂದಲೇ ಆಯ್ದದ್ದು!

ಕಾರಂತರೇ ಸಾವಿನ ಬಗ್ಗೆ ನಿಮ್ಮ ಅಭಿಪ್ರಾಯ?

ಕರೆದರೆ ಸಾವು ಬರುತ್ತದೆಯೇ? ಅದು ಬರುವುದು ಅದರ ಇಷ್ಟವಿದ್ದಾಗ. ನಮ್ಮ ತಯ್ಯಾರಿ ಅದು ನೋಡುತ್ತದೆಯೇ? ಅದು ಬರುವಾಗ ನಾವು ತಯಾರಿರಬೇಕು.

ಬಾಲ ಸಾಹಿತ್ಯ, ಬಾಲವನ ಎಂದ ಪ್ರಿಯ ಕಾರಂತಜ್ಜ ನೀವು. ಪಾಲಕರಿಗೆ ನಿಮ್ಮ ಕಿವಿಮಾತು?

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ; ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ.

ಸಾಹಿತಿಯ ಸ್ಥಾನಮಾನದ ಬಗ್ಗೆ ಏನಂತೀರಿ?

ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆಯೂ ಬೇಡ. ಆತನೂ ಎಲ್ಲರ ಹಾಗೊಬ್ಬ ಮನುಷ್ಯ. ತನ್ನ ಅನುಭವವನ್ನು ಹೇಳುತ್ತಾನೆ-ಪರಿಹಾರ ಸೂಚಿಸುವುದಲ್ಲ-ಒತ್ತಾಯಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.

ಪರಿಸರ ಪ್ರೀತಿ ಹೇಗಿರಬೇಕು ಕಾರಂತರೇ?

ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು, ಉಂಡುಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?

ದೇಶದ ಇಂದಿನ ಸ್ಥಿತಿ-ಗತಿಯ ಬಗ್ಗೆ?

ಈ ದೇಶ ಎತ್ತ ಹೋಗುತ್ತಿದೆಯೋ ಗೊತ್ತಿಲ್ಲ. ಏನು ಮಾಡಿದರೂ, ನಾನು ಪತ್ರಿಕೆಗಳಲ್ಲಿ ಬರಬೇಕು, ನಾನು ಇಂಥವ ಎಂದು ಹೇಳಿಕೊಳ್ಳುವ ಆತ್ಮರತಿಯಲ್ಲಿ ಮುಳುಗಿದ್ದೇವೆ. ನಮ್ಮನ್ನು ನಾವೇ ದೊಡ್ಡವರು ಎಂದು ಹೇಳಿಕೊಳ್ಳುತ್ತಿರುವ ಆಸ್ಪತ್ರೆ ಆಗುತ್ತಿದೆ ಈ ದೇಶ.

ಹಣ, ಹಣ, ಹಣ ಎಂದು ಹಣದ ಹಿಂದೆ ಬಿದ್ದವರ ಬಗ್ಗೆ ಏನಂತೀರಿ ಕಾರಂತರೇ?

ಹಣ ಎಂದರೆ ಉಪ್ಪು ಇದ್ದಂತೆ - ಅದನ್ನು ತುಸುವೇ ನಾಲಿಗೆಯ ಮೇಲಿಟ್ಟುಕೊಂಡರೆ ರುಚಿ. ಹೆಚ್ಚಾಗಿ ತಿಂದರೆ ದಾಹ

ದೇವರ ಬಗ್ಗೆ ಏನು ಹೇಳುತ್ತೀರಿ?

ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಾನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ತಪಸ್ಸಿನಿಂದ ಕಂಡು ಕೊಂಡಿದ್ದರು. ನನಗೆ ರಾಮ ಅಂದರೆ ರಾಜಾ ರವಿವರ್ಮ ಅವರ ಚಿತ್ರ; ಕೃಷ್ಣ ಅಂದರೆ, ಗುಬ್ಬಿ ವೀರಣ್ಣನವರ ಕೃಷ್ಣಲೀಲೆ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇವೆ ಅನ್ನುವುದು ಸರಿಯಲ್ಲ.

ಕಡೆಯದಾಗಿ ತೃಪ್ತಿಕರ ಬದುಕಿನ ಪರಿಭಾಷೆ?

ಬದುಕಿನಲ್ಲಿ ಪರಮಾವಧಿ ತೃಪ್ತಿಯನ್ನು ಕೊಡಬಲ್ಲ ಸಂಗತಿ ಎಂದರೆ ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ. ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕೆನ್ನುತ್ತಿದ್ದೀರೋ ಹಾಗೆ ಬದುಕಿ ತೋರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.