ADVERTISEMENT

100ರ ನೆನಪು: ನ್ಯಾಯ ನಿಷ್ಠುರಿಯ ಶತಕದ ಹಾದಿ

ಮೃತ್ಯುಂಜಯ ರುಮಾಲೆ
Published 25 ಫೆಬ್ರುವರಿ 2023, 19:30 IST
Last Updated 25 ಫೆಬ್ರುವರಿ 2023, 19:30 IST
ಕೋ. ಚೆನ್ನಬಸಪ್ಪ
ಕೋ. ಚೆನ್ನಬಸಪ್ಪ   

ವಕೀಲರಾಗಿ, ನ್ಯಾಯಾಧೀಶರಾಗಿ, ಲೇಖಕರಾಗಿ ನಾಡು, ನುಡಿಯ ಸೇವೆಯನ್ನು ಪರಿಪರಿಯಾಗಿ ಮಾಡಿದವರು ಕೋ. ಚೆನ್ನಬಸಪ್ಪ. ಅವರ ಜನ್ಮಶತಾಬ್ದಿಯ ಸಂದರ್ಭ ಇದು. ಬೆಂಗಳೂರಿನಲ್ಲಿ ಇಂದು ಆ ನೆಪದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

**

ತನಗೆ ಬೇಡವಾಗಿದ್ದ ಮದ್ರಾಸ್ ಪ್ರಾಂತದಲ್ಲಿ ಸೇರಿದ್ದ ಬಳ್ಳಾರಿಯು ಅನುಭವಿಸುತ್ತಿದ್ದ ದಿವ್ಯ ನಿರ್ಲಕ್ಷ್ಯದ ವಿದ್ಯಮಾನಗಳಿಗೂ, ಕೋ. ಚೆನ್ನಬಸಪ್ಪನವರು ಕಾನೂನು ಶಿಕ್ಷಣ ಅಭ್ಯಾಸ ಮಾಡಲು ನಿರ್ಧರಿಸಿದ್ದಕ್ಕೂ ಪ್ರಜ್ಞಾಪೂರ್ವಕ ಸಂಬಂಧವಿದೆ. ಏಕೀಕರಣ ಮತ್ತು ಸ್ವಾತಂತ್ರ್ಯಪೂರ್ವದ ಬಳ್ಳಾರಿ ತನ್ನ ಹೆಗಲ ಮೇಲಿದ್ದ ಹಲವು ಭಾರಗಳನ್ನು ಇಳಿಸಿಕೊಳ್ಳಲು ತನ್ನ ಕುಡಿಗಳಲ್ಲಿ ಹಲವರನ್ನು ರಾಜ್ಯಮಟ್ಟದ, ಇನ್ನೂ ಕೆಲವರನ್ನು ಪ್ರಾಂತ ಮಟ್ಟದ ವ್ಯಕ್ತಿತ್ವಗಳಾಗಿ ರೂಪಿಸುವ ಅನಿವಾರ್ಯತೆಗೆ ಸಿಲುಕಿತ್ತು. ರಾಜಕೀಯ ಸ್ಥಿತ್ಯಂತರ, ಅನಿಯಮಿತ ಆಡಳಿತ ಪದ್ಧತಿ, ಅವೈಜ್ಞಾನಿಕ ತಾಲ್ಲೂಕು ವಿಂಗಡಣೆ, ಪರಿಮಿತ ಶೈಕ್ಷಣಿಕ ವ್ಯವಸ್ಥೆ ಮತ್ತು ಮುಖ್ಯವಾಗಿ ಆಡಳಿತ ಕೇಂದ್ರವಾದ ಮದ್ರಾಸ್‌ನಿಂದ ದೂರವಿದ್ದ ಕಾರಣದಿಂದ ಉಂಟಾಗಿದ್ದ ಉಪೇಕ್ಷೆ – ಇಂತಹ ಹಲವು ಗೊಂದಲಗಳಿಂದ ಬಳ್ಳಾರಿ ಅಕ್ಷರಶಃ ಹಿಂದುಳಿದ ಜಿಲ್ಲೆಯಾಗಿತ್ತು.

ADVERTISEMENT

ಕೇಳ್ಕರ್ ವರದಿಯ ಪರಿಣಾಮವಾಗಿ ಬಳ್ಳಾರಿಯು ತನ್ನ ಕನ್ನಡ ಅಸ್ಮಿತೆ, ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಉದ್ವಿಗ್ನ ಸಂದರ್ಭದಲ್ಲಿ ಕೋ. ಚೆನ್ನಬಸಪ್ಪನವರು 1935ರಿಂದ 1965ರವರೆಗೆ ಮೂರು ದಶಕಗಳ ಕಾಲ ಬಳ್ಳಾರಿಯಲ್ಲಿ ವಿದ್ಯಾರ್ಥಿಯಾಗಿ, ವಕೀಲರಾಗಿ, ನೆಲದ ರಚನಾತ್ಮಕ ಘಟಕವಾಗಿ ಕಾರ್ಯ ನಿರ್ವಹಿಸಿದರು. ಕಾನೂನು ಪದವೀಧರರಾಗಿ ಅವರು ವೈಯಕ್ತಿಕವಾಗಿ ಪಡೆದದ್ದಕ್ಕಿಂತ ಬಳ್ಳಾರಿಗೆ, ಆ ಮೂಲಕ ಕನ್ನಡ ನಾಡಿಗೆ ನೀಡಿದ್ದು ಘನ ಪ್ರಮಾಣದಲ್ಲಿದೆ. ಚೆನ್ನಬಸಪ್ಪನವರು ನೌಕರಿ ಮಾಡಬೇಕೆಂಬ ಸಂಕುಚಿತ ಉದ್ದೇಶದಿಂದ ಕಾನೂನು ಶಿಕ್ಷಣ ಪಡೆದವರಲ್ಲ. ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ, ತಮಿಳು ಕೇಂದ್ರದ ನಿಯಂತ್ರಣದಲ್ಲಿ ತೆಲುಗು ಶೈಕ್ಷಣಿಕ ಪದ್ಧತಿಯಲ್ಲಿ, ಅಪ್ಪಟ ಕನ್ನಡ ಸಂಸ್ಕೃತಿಯ ನಿರ್ಭೀತ, ಮುಕ್ತ ಚಿಂತನೆಯ ಕೇಂದ್ರವಾಗಿದ್ದ ಬಳ್ಳಾರಿಯ ಪರಂಪರೆಯನ್ನು ಉಳಿಸುವ ಕೈಂಕರ್ಯವನ್ನೂ ಅವರು ತೊಟ್ಟಿದ್ದರು. ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವ, ಸತ್ಯವನ್ನು ಸಾಬೀತುಪಡಿಸುವ ಚೆನ್ನಬಸಪ್ಪನವರ ಜೀವನಧರ್ಮಕ್ಕೆ ಕಾನೂನು ಕ್ಷೇತ್ರ ಯಥೋಚಿತ ಹೊಂದಿಕೆಯಾಗಿತ್ತು.

ಸ್ವಾತಂತ್ರ್ಯಪೂರ್ವದಲ್ಲಿ, ಅಂದರೆ 1944ರಲ್ಲಿ, ಚೆನ್ನಬಸಪ್ಪನವರು ‘ಯಾರಿಗಾಗಿ?’ ಎಂಬ ಕಥೆಯನ್ನು ಬರೆದು ಪ್ರಕಟಣೆಗೆಂದು ಕಳುಹಿಸಿದಾಗ, ಈ ಕಥೆ ‘ಅಂದಿನ’ ಆಳರಸರ ವಿರುದ್ಧವಾಗಿದೆ ಎಂಬ ಕಾರಣದಿಂದ ಬೆಳಗಾವಿಯ ಕಥಾ ಸಂಕಲನದ ಪ್ರಕಾಶಕರು ಪ್ರಕಟಿಸಲು ಹೆದರಿ ಹಿಂಜರಿದಿದ್ದರು. 1951ರಲ್ಲಿ (ಸ್ವಾತಂತ್ರ್ಯ ನಂತರ) ಬರೆದ ‘ಮುಕ್ಕಣ್ಣನ ಮುಕ್ತಿ’ ಎಂಬ ಕಥೆ ಸರ್ಕಾರವನ್ನು ಟೀಕಿಸುವುದೆಂಬ ಕಾರಣದಿಂದ ಧಾರವಾಡ ಆಕಾಶವಾಣಿ ಕೇಂದ್ರವು ಅದನ್ನು ಬಿತ್ತರಿಸಲು ನಿರಾಕರಿಸಿತ್ತು. ಚೆನ್ನಬಸಪ್ಪನವರಿಗೆ ಸಂಪ್ರದಾಯಬದ್ಧ, ಸ್ಥಾಪಿತ ವ್ಯವಸ್ಥೆಯಲ್ಲಿ ‘ನನಗೆ ಆದರವಿಲ್ಲ’ ಎಂಬ ತಿಳಿವಳಿಕೆ ಬಂದಿತಾದರೂ ‘ಸಾಹಿತ್ಯ ಮತ್ತು ಸತ್ಯಕ್ಕೆ ರಾಜ, ರಾಜತ್ವ ಕೂಡ ಹೆದರುತ್ತದೆ’ ಎಂಬ ಧೋರಣೆಯನ್ನು ತಮ್ಮ ಪ್ರತಿಪಾದನೆಗೆ ಅವರು ಧೈರ್ಯವಾಗಿ ಪರಿವರ್ತಿಸಿಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಸಂಪ್ರದಾಯ ಪದ್ಧತಿಗೆ ವಿರುದ್ಧವಾದ ಪ್ರಗತಿಶೀಲ ಸಾಹಿತ್ಯ ಪಂಥಕ್ಕೆ ಸೇರಿದ ಅವರನ್ನು ಸ್ಥಾಪಿತ ವ್ಯವಸ್ಥೆಯ ಸಂಪ್ರದಾಯಪ್ರಿಯರು ಅಷ್ಟೇನೂ ಆದರದಿಂದ ನೋಡಲಿಲ್ಲ.

ಕೋ (ಕೋಣನ – ಅವರ ಹಿರಿಯರು ಕೋಣಗಳ ಮೇಲೆ ದಿನಸಿ, ದವಸಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತಿದ್ದು
ದರಿಂದ ಈ ಉಪನಾಮ ರೂಢವಾಗಿತ್ತು.) ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಆಲೂರು ಮಜರಾ ಗ್ರಾಮ ಕಾನಾಮಡುವಿನಲ್ಲಿ ಜನಿಸಿದರು. ತಂದೆ ಕೋ. ವೀರಣ್ಣ, ತಾಯಿ ಬಸಮ್ಮ (ಜನನ: 27 ಫೆಬ್ರುವರಿ 1922). ವಿದ್ಯಾರ್ಥಿಯಾಗಿದ್ದಾಗ ನಡೆದ ಹಲವು ಘಟನೆಗಳು ಚಾರಿತ್ರಿಕ. 1938ರಲ್ಲಿ ಬಳ್ಳಾರಿಯಲ್ಲಿ ಆರ್‌.ಆರ್‌. ದಿವಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರಾಗಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಕನ್ನಡ, ಸಂಸ್ಕೃತಿಗೆ ನಿಷ್ಠರಾಗಿ ರೂಪುಗೊಂಡರು. ಹದಿನಾರರ ಪ್ರಾಯದಲ್ಲಿಯೇ ಕೋ. ಚೆನ್ನಬಸಪ್ಪ ನಿರ್ಭೀತ ಗುಣವನ್ನು, ಮುಕ್ತ ಅಭಿವ್ಯಕ್ತಿಯನ್ನು ಸ್ಪಷ್ಟ ಪ್ರತಿಪಾದನೆಯನ್ನು ಮೈಗೂಡಿಸಿಕೊಂಡಿದ್ದರು. 1939–44ರವರೆಗೆ ಅನಂತಪುರದ ಸೀಡೆಡ್‌ ಕಾಲೇಜಿನಲ್ಲಿ ಕಾನೂನು ಅಭ್ಯಾಸ ನಡೆಸಿದರು. ಕಾನೂನು ಶಿಕ್ಷಣ ಪಡೆದ ಮೇಲೆ ಅವರು 1946–1965ರವರೆಗೆ ಬಳ್ಳಾರಿಯಲ್ಲಿ ವಕೀಲ ವೃತ್ತಿ ನಡೆಸಿದರು.

ಪ್ರಕಟಣೆಯಾಗುತ್ತಿರುವ ಸಾಹಿತ್ಯ ನಿಲುವುಗಳೇನು? ಯಾವ ಸಮಾಜ ಇದನ್ನು ಒಪ್ಪುತ್ತಿದೆ? ಪ್ರಕಟಣೆಗೆ ನಿರಾಕರಣೆಯಾಗುತ್ತಿರುವ ಸಾಹಿತ್ಯದ ನಿಲುವುಗಳೇನು? ಯಾವ ಸಮಾಜ ಇದನ್ನು ಒಪ್ಪುತ್ತಿಲ್ಲ?! ಎಂಬುದು ಕೋ. ಚೆನ್ನಬಸಪ್ಪನವರಿಗೆ ಅರ್ಥವಾಗಿದ್ದು ಅನಂತಪುರದ ಸೀಡೆಡ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ. ತಮ್ಮೂರಿನ ಜೊತೆಗಾರರೂ, ಸಹಪಾಠಿಗಳೂ ಆದ
ಎ.ಬಿ. ಆರ್‌. ಕೊಟ್ರಗೌಡ, ಅ. ನಂಜಪ್ಪ, ನೀಲಂ ರಾಜಶೇಖರ ರೆಡ್ಡಿ, ಕಮ್ಯುನಿಸ್ಟ್‌ ಸಿದ್ಧಾಂತದ ನಾಗಿರೆಡ್ಡಿ, ರಾಜ್ಯಮಟ್ಟದಲ್ಲಿ ಉದಯೋನ್ಮುಖರಾಗಿ ಗುರುತಿಸಿಕೊಳ್ಳುತ್ತಿದ್ದ ಜಿ. ವೆಂಕಟರೆಡ್ಡಿ, ಕೆ.ರಾಘವಾಚಾರ್‌, ಪಪ್ಪುಲು ರಾಮಾಚಾರ್ಯ, ಪ್ರಾಂತ ವಲಯದಲ್ಲಿ ಗಮನ ಸೆಳೆದಿದ್ದ ರಾಜಾಜಿ, ಪ್ರಕಾಶಂ, ಬೆಜವಾಡ ಗೋಪಾಲರೆಡ್ಡಿ, ಪ್ರೊ.ರಂಗ, ಭಾರತಿರಂಗ, ಸಹಪಾಠಿಗಳಾದ ಜ್ಯೋತಿ, ಶಿವಲಿಂಗಪ್ಪ, ಕುಬೇರಪ್ಪ, ಮಹಾನಂದಯ್ಯ, ಆದಿನಾರಾಯಣರೆಡ್ಡಿ, ಅಯ್ಯಪ್ಪರೆಡ್ಡಿ, ಬುಡಾನ್‌ ಸಾಹೇಬ್‌ ಇವರ ಒಡನಾಟಗಳಿಂದ ಚೆನ್ನಬಸಪ್ಪನವರು ನಾಡಿನ ಸಮಾಜೋರಾಜಕೀಯ ಸಮಗ್ರ ಮಾಹಿತಿಗಳ ಸಂಪನ್ಮೂಲ ವ್ಯಕ್ತಿಯಾಗಿ ರೂಪಗೊಂಡಿದ್ದರು.

–ಕೋ. ಚೆನ್ನಬಸಪ್ಪ

ದೇಶದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಸ್ಥಾಪನೆಗೊಂಡಿದ್ದ ಸ್ಟಿಕ್ಕರ್ಸ್‌ ಕ್ಲಬ್‌ನ (Sticker's club) ಪ್ರಮುಖ ಸೂತ್ರಧಾರಿಗಳಾಗಿ ಚೆನ್ನಬಸಪ್ಪನವರು ಸಹಪಾಠಿಗಳಾಗಿದ್ದ ನಂಜಪ್ಪ, ಕೊಟ್ರಗೌಡ ಅವರೊಂದಿಗೆ ಸಮರ್ಥವಾಗಿ ನಿರ್ವಹಿಸಿದ್ದರು. ಆಗ ಇವರ ವಯಸ್ಸು 18ರಿಂದ 20 ವರ್ಷ. ಈ ಚಟುವಟಿಕೆಗಳು ಅದೆಷ್ಟು ತೀವ್ರವಾಗಿದ್ದವೆಂದರೆ 1942ರ ಕ್ವಿಟ್‌ ಇಂಡಿಯಾ ಚಳವಳಿಯು ಕಾವೇರಿದ್ದ ಸಂದರ್ಭದಲ್ಲಿ ‘ಅಸಂಬದ್ಧ ಮಾಹಿತಿಗಳ ಹಿನ್ನೆಲೆಯಲ್ಲಿ’ ಆಗಿನ ಸರ್ಕಾರ ಈ ಮೂವರು ಯುವಕರನ್ನು ಬಂಧಿಸಲು ಆದೇಶಿಸಿತ್ತು. ನ್ಯಾಯಾಂಗ ತನಿಖೆಗೆ ಒಳಪಡಿಸಿ ಇವರ ಭವಿಷ್ಯ ನಾಶಪಡಿಸಲು ಅಂದಿನ ಪ್ರಭುತ್ವ ಯೋಜಿಸಿದ್ದಾಗ ಹೆಸರಾಂತ ವಕೀಲರೂ ಅಂತರರಾಷ್ಟ್ರೀಯ ಶ್ರೇಷ್ಠ ಕಲಾವಿದರೂ ಆಗಿದ್ದ ‘ಬಳ್ಳಾರಿ ರಾಘವ’ ಈ ಯುವಕರ ಪರ ವಾದಿಸಿ ಆರೋಪಮುಕ್ತಗೊಳಿಸಿದ್ದರು.

ಕೇಳ್ಕರ್‌ ಅವರ ಅವೈಜ್ಞಾನಿಕ ವರದಿಯ ಪರಿಣಾಮವಾಗಿ ಮೂಡಿಬಂದ ಆರ್‌.ಕೆ.ಧರ್‌ ಕಮಿಟಿ ವರದಿ, ಜೆ.ಎ.ಪಿ.ವರದಿ, ಕೆ.ಎಸ್‌. ವಾಂಛೂ ವರದಿ, ಎಸ್‌.ಆರ್‌. ಮಿಶ್ರಾ ವರದಿ, ಘಜಲ್‌ ಆಲಿ ಕಮಿಟಿ ವರದಿಗಳ ಮಂಡನೆ, ಪ್ರತಿಕ್ರಿಯೆ ಸಂದರ್ಭಗಳಲ್ಲಿ ಬಳ್ಳಾರಿ ಜಿಲ್ಲೆಗೆ ನ್ಯಾಯ ಒದಗಿಸಲು ಚೆನ್ನಬಸಪ್ಪನವರು ಕಾನೂನು ತಜ್ಞರಾಗಿ ‘ಅವತಾರ ಪುರುಷ’ರಂತೆ ಸಮರ್ಥವಾಗಿ ಒದಗಿಬಂದರು. ಸ್ವತಂತ್ರ ಭಾರತ ಮೊದಲ ಭಾಷಾವಾರು ರಾಜ್ಯವಾಗಿ ರೂಪುಗೊಂಡ (1 ಅಕ್ಟೋಬರ್‌ 1953) ಆಂಧ್ರಪ್ರದೇಶ ರಚನೆಯ ಸಂದರ್ಭದಲ್ಲಿ ಮೈಸೂರು ರಾಜ್ಯ ಬಳ್ಳಾರಿ ಜಿಲ್ಲೆಯನ್ನು ತನ್ನೊಳಗೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಮೂಡಿದ ಅಪಸ್ವರಕ್ಕೆ ಬಳ್ಳಾರಿಯ ತಂಡ – ಅಲ್ಲಂ ಕರಿಬಸಪ್ಪನವರ ನೇತೃತ್ವದಲ್ಲಿ ಚೆನ್ನಬಸಪ್ಪ, ಗಡಗಿ ಮರಿಸ್ವಾಮಪ್ಪ, ಅಂಗಡಿ ಚೆನ್ನಬಸಪ್ಪ, ಮತ್ತು ಸೌದಾಗರ್‌ ಅಬ್ದುಲ್‌ ರಜಾಕ್‌ ಸಾಹೇಬ್‌ ಅವರು ಮೈಸೂರು ರಾಜ್ಯದ ಎಲ್ಲಾ ಶಾಸಕರನ್ನು ಸ್ವತಃ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಮನವೊಲಿಸಿ ಬಳ್ಳಾರಿಯನ್ನು ಮೈಸೂರು ರಾಜ್ಯಕ್ಕೆ ಸೇರಿಸಿದರು (ಈ ಐವರು ಓಡಾಡಿದ ಕಾರು; ಮಾರಿಸ್‌ ಮೈನರ್‌ –135 ಇಂದಿಗೂ ಅಲ್ಲಂ ವೀರಭದ್ರಪ್ಪ ಅವರ ಮನೆಯಲ್ಲಿ ಮೂಕ ಸಾಕ್ಷಿಯಾಗಿ ನಿಂತಿದೆ). ಬಳ್ಳಾರಿ ವಿಲೀನ ಸಂದರ್ಭದಲ್ಲಿ ‘Welcome Bellary- ಸ್ಮರಣ ಸಂಚಿಕೆಯೂ ಒಂದು ದಾಖಲೆಯಾಗಿದೆ.

ಬಳ್ಳಾರಿಗೆ, ಅದರ ಹೆಮ್ಮೆಯ ಪುತ್ರ ಕೊಟ್ಟ ಕೊಡುಗೆ ಇದಾದರೆ, ಬಳ್ಳಾರಿಯು ನಾಡಿಗೆ ಕೊಟ್ಟ ಅಭಿಮಾನದ ಕಾಣಿಕೆಯೂ ಇವರಾಗಿದ್ದಾರೆ. ಬದುಕಿನ ಕೊನೆಯ ಕ್ಷಣದವರೆಗೆ ನ್ಯಾಯಕ್ಕಾಗಿ ಹಂಬಲಿಸಿದ ನ್ಯಾಯ ನಿಷ್ಠುರಿ ಅವರು. ಬಡವರ ಪರ ಅನನ್ಯ ಕಾಳಜಿ ಹೊಂದಿದ್ದರು. ವಕೀಲರಾಗಿ, ನ್ಯಾಯಾಧೀಶರಾಗಿ, ಲೇಖಕರಾಗಿ ನಾಡು, ನುಡಿಯ ಸೇವೆಯನ್ನು ಪರಿಪರಿಯಾಗಿ ಮಾಡಿದವರು.

ಒಂದು ಕಾಲದ ಚರಿತ್ರೆಯ ಘಟಕವಾಗಿ ಒಬ್ಬ ವ್ಯಕ್ತಿ, ಒಬ್ಬ ವ್ಯಕ್ತಿಯ ಜೀವನ ಚರಿತ್ರೆ, ಒಂದು ನಾಡಿನ ಚರಿತ್ರೆ ಅವಿಭಜಿತವಾಗಿರುವುದು. ಈ ಮಾತಿಗೆ ಚೆನ್ನಬಸಪ್ಪನವರ ವಿಷಯದಲ್ಲಿ ಸತ್ಯನಿದರ್ಶನವಾಗಿದೆ. ಅಂತಹ ಚೇತನದ ಶತಮಾನೋತ್ಸವ ನಮ್ಮನ್ನು ಮತ್ತೆ ಕರ್ತವ್ಯಕ್ಕೆ ಸಮರ್ಪಿಸಿಕೊಳ್ಳಲು ಪ್ರೇರಣೆದಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.