ADVERTISEMENT

ವಿಶ್ವ ಪ್ರಜ್ಞೆಯೇ ಸನ್ಯಾಸದ ಲಕ್ಷಣ

ಡಾ.ಕೆ.ಎಸ್‌.ನಾಗಪತಿ ಹೆಗಡೆ
Published 20 ಮಾರ್ಚ್ 2021, 19:30 IST
Last Updated 20 ಮಾರ್ಚ್ 2021, 19:30 IST
ಕಲೆ: ಸಂಜೀವ ಕಾಳೆ
ಕಲೆ: ಸಂಜೀವ ಕಾಳೆ   

ಹಿಂದಿನ ಕಾಲದಿಂದಲೂ ವ್ಯಕ್ತಿಯನ್ನು ಹಾಗೂ ಸಮಾಜವನ್ನು ಧರ್ಮದ ದಾರಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಧಾರ್ಮಿಕ ಮುಖಂಡರು ಹೊತ್ತಿದ್ದಾರೆ. ವೇದಗಳಲ್ಲಿ ಸನ್ಯಾಸಧರ್ಮದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕೊಡಲಾಗಿದೆ. ಭಗವಂತನೇ ಸತ್ಯ, ಪ್ರಪಂಚವೆಲ್ಲವೂ ಮಿಥ್ಯ, ಅದೊಂದನ್ನೇ ಅನುಭವಿಸಬೇಕು ಎಂಬುದು ಸನ್ಯಾಸಿಯ ಆದರ್ಶವಾಗಿರಬೇಕು ಎಂಬ ಪರಿಕಲ್ಪನೆ ಈ ಸನ್ಯಾಸಧರ್ಮದ ಮೂಲಮಂತ್ರ. ನಮ್ಮ ಪ್ರಾಚೀನ ಸಂತರು ಹಾಗೂ ದಾರ್ಶನಿಕರು ಕಂಡುಕೊಂಡ ಆಧ್ಯಾತ್ಮಿಕ ಸತ್ಯವೇ ಇದಕ್ಕೆ ಪ್ರೇರಣೆ. ವೇದ, ಉಪನಿಷತ್ತು ಮತ್ತು ವೇದಾಂತ ರೂಪಿಸಿದ ತತ್ವಗಳು ಈ ಪ್ರಪಂಚವನ್ನು ಮೀರಿದ, ಆದರೆ ಅದರಲ್ಲಿಯೇ ಓತಪ್ರೋತವಾಗಿರುವ, ನಿತ್ಯವೂ, ಶಾಶ್ವತವೂ ಮತ್ತು ಪರಿಪೂರ್ಣವೂ ಆಗಿರುವ ತತ್ವವನ್ನು ‘ಬ್ರಹ್ಮ’ ಎಂದು ಕರೆದಿದ್ದಾರೆ. ಈ ಬ್ರಹ್ಮನಲ್ಲಿಯೇ ಲೀನವಾಗುವ ಉದ್ದೇಶದಿಂದ, ಅತಿ ದೃಢಮನಸ್ಸುಳ್ಳವರು ಈ ಮಾರ್ಗವನ್ನು ಅನುಸರಿಸಬೇಕೆಂಬುದು ಅಂದಿನ ದಾರ್ಶನಿಕರ ಇಚ್ಛೆಯಾಗಿತ್ತು. ಇದು ಅತ್ಯಂತ ಕಠಿಣ ಆಶ್ರಮ. ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯನ ಅಂತಿಮ ಗುರಿ ಮೋಕ್ಷ. ವೇದಾಂತ ವಿಜ್ಞಾನ

ಸುನಿಶ್ಚಿತಾರ್ಥಸ್ಸಂನ್ಯಾಸಯೋಗಾದ್ಯತಯಶುದ್ದ ಸತ್ವಾ: /
ತೇ ಬ್ರಹ್ಮಲೋಕೇತು ಪರಾಂತಕಾಲೇ ಪರಾಮೃತಾತ್ಪರಿಮುಚ್ಛನ್ತಿ ಸರ್ವೇ //
(ಮಹಾನಾರಾಣೋಪನಿಷತ್ )

ಸನ್ಯಾಸಿ ಆದವನು ವೇದಾಂತ ವಿಜ್ಞಾನದಿಂದ ಪರಬ್ರಹ್ಮ ವಸ್ತುವಿನಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಪ್ರಪಂಚದ ಸಕಲ ಭೋಗವಸ್ತುಗಳನ್ನು ತ್ಯಾಗ ಮಾಡಿ ಇಂದ್ರಿಯ ನಿಗ್ರಹ ಮಾಡಿಕೊಂಡು ರಜೋ ಗುಣ ಮತ್ತು ತಮೋ ಗುಣದಿಂದ ದೂರವಾಗಿ ಸತ್ವ ಗುಣ ಅಳವಡಿಸಿಕೊಳ್ಳಬೇಕು. ಅಂತಹ ಸನ್ಯಾಸಿಗಳು ತಮ್ಮ ಜೀವನದ ಅಂತ್ಯದಲ್ಲಿ ಪರಮಾತ್ಮನಲ್ಲಿ ಲೀನರಾಗುತ್ತಾರೆ ಎಂಬುದು ಉಪನಿಷತ್ಕಾರರ ಸ್ಪಷ್ಟ ಅಭಿಪ್ರಾಯ. ಇಲ್ಲಿ ಧರ್ಮಗಳ ಜೊತೆಗೆ ಅರಿಷಡ್ವರ್ಗಗಳನ್ನೂ ತ್ಯಾಗ ಮಾಡುವುದಾಗಿದೆ. ಅವನು ಧರಿಸುವ ಕಾವಿಬಟ್ಟೆ ಕೂಡ ತ್ಯಾಗದ ಸಂಕೇತವಾಗಿರುತ್ತದೆ. ಭೋಗ ಸಂಸ್ಕೃತಿಯಿಂದ ಸಿಗುವ ಸಂತೋಷ, ಸುಖ ಹಾಗೂ ಆನಂದ ಕ್ಷಣಿಕವಾದದ್ದು. ಅದರ ಹಿಂದೆ ಅಪಾರ ದುಃಖ ಇರುತ್ತದೆ ಎನ್ನುವ ಪ್ರಜ್ಞೆ ಇರಬೇಕು. ಸನ್ಯಾಸಿಯ ಯೋಚನೆ ವ್ಯಕ್ತಿ ಪ್ರಜ್ಞೆಯಿಂದ ವಿಶ್ವ ಪ್ರಜ್ಞೆಯತ್ತ ಸಾಗಬೇಕು. ‘ವಸುಧೈವ ಕುಟುಂಬಕಂ’ ಎನ್ನುವುದು ಸನ್ಯಾಸಿಯ ಆದರ್ಶವಾಗಬೇಕು.

ADVERTISEMENT

ವೇದ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ. ಭಾರತದ ಸಮಾಜವನ್ನು ಒಡೆದು ಆಳುವ ನೀತಿಯ ಭಾಗವಾಗಿ ಮುಂದೆ ಜಾತಿ ವ್ಯವಸ್ಥೆ ಹುಟ್ಟಿನಿಂದ ಜಾರಿಗೆ ಬಂದಿದೆ. ಸಮಾಜದ ಮೇಲ್ಜಾತಿ ಎನಿಸಿಕೊಂಡವರು ಮಠವನ್ನು ಕಟ್ಟಿಕೊಂಡು ಮಠಾಧೀಶರ ನೇಮಿಸುವ ವ್ಯವಸ್ಥೆ ಜಾರಿಗೆ ಬಂತು. ಸ್ವಾತಂತ್ರ್ಯೋತ್ತರದಲ್ಲಿ ಎಲ್ಲ ಸಮಾಜದವರು ತಮ್ಮ ತಮ್ಮ ಜಾತಿಯ ಮಠವನ್ನು ಸ್ಥಾಪಿಸಿದರು. ಈ ಮಠಗಳು ಆಯಾ ಸಮಾಜದ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿರುವಂತೆ ನಡೆದುಕೊಂಡರೆ ಅದಕ್ಕೆ ಆಕ್ಷೇಪ ಇರಲಾರದು. ಆದರೆ ಈ ಮಠದ ಸ್ವಾಮಿಗಳೆನಿಸಿಕೊಂಡವರು ಕೇವಲ ಕಾವಿಬಟ್ಟೆಯನ್ನು ಹಾಕಿಕೊಂಡರೆ ಸನ್ಯಾಸಿ ಎಂಬ ಭ್ರಮೆಯಲ್ಲಿ ಇರುವಂತೆ ಕಾಣುತ್ತದೆ. ಸನ್ಯಾಸಧರ್ಮದ ಮೂಲಮಂತ್ರಗಳನ್ನು ಮರೆತಂತೆ ಕಾಣುತ್ತದೆ. ಆರ್ಥಿಕ ಹಾಗೂ ರಾಜಕೀಯ ಅಧಿಕಾರ, ಅತಿ ಸಂಪತ್ತು ಕೂಡಿಸಿಕೊಂಡು ಭೋಗ ಜೀವನದ ದಾರಿಯನ್ನು ಹಿಡಿದಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಅಂತಸ್ತು ಮತ್ತು ಅಧಿಕಾರದ ಬಗ್ಗೆ ಈ ಮಠಗಳ ಮಧ್ಯೆ ತೀವ್ರ ಸ್ಪರ್ಧೆ ಹುಟ್ಟಿಕೊಂಡಿರುವುದು ಕಂಡುಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಇದರ ವ್ಯಾಪ್ತಿ ಸಮಾಜವನ್ನು ಕೂಡಿಸಿ ಶಾಂತಿ ಸಹಬಾಳ್ವೆ ಜೀವನ ಹೇಳುವ ಬದಲಾಗಿಸಮಾಜವನ್ನು ಒಡೆಯುವ ದಾರಿಯನ್ನು ಹಿಡಿದಂತೆ ಕಾಣುತ್ತಿದೆ. ಇಂದು ನಮ್ಮ ಜಾತಿಗೆ ಇಷ್ಟು ಮಂತ್ರಿಗಳಿರಬೇಕು, ಸರ್ಕಾರಿ ನೌಕರಿಯಲ್ಲಿ ಇಷ್ಟು ಪ್ರತಿಶತ ಮೀಸಲಾತಿ ಇರಬೇಕು, ಇಂತಹ ವ್ಯಕ್ತಿಯನ್ನು ಮಂತ್ರಿ ಮಾಡದೇ ಇದ್ದರೆ ನಮ್ಮ ಜಾತಿಯ ಎಲ್ಲ ಶಾಸಕರು ಒಟ್ಟಾಗಿ ಸರ್ಕಾರಕ್ಕೆ
ಕೊಟ್ಟ ಬೆಂಬಲವನ್ನು ವಾಪಸ್ಸು ಪಡೆಯುತ್ತಾರೆ ಎನ್ನುವ ಹೇಳಿಕೆಗಳು ಮಠಾಧೀಶರಿಂದ ಬರುತ್ತಿವೆ. ಮಠಾಧೀಶರು ಭಕ್ತರಿಗೆ
ಮಾರ್ಗದರ್ಶನ ಮಾಡುವ ಬದಲಾಗಿ, ಸ್ವಾರ್ಥಕ್ಕಾಗಿ ತಾವೇ ಬೀದಿಗಿಳಿದು ಹೋರಾಟದ ಹಾದಿಯನ್ನು ಹಿಡಿದಿರುವುದನ್ನು ಕಾಣುತ್ತಿದ್ದೇವೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಜಾತಿ, ಧರ್ಮ ಮತ್ತು ಭಾಷೆ ಇವು ಅತಿ ಸೂಕ್ಷ್ಮ ವಿಚಾರಗಳು. ಬೇರೆಯವರು ಇದರಲ್ಲಿ ತಲೆಹಾಕಿದರೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ಪ್ರಾರಂಭವಾಗುತ್ತದೆ. ಹೀಗಾಗಿ, ಈ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

ಬದಲಾದ ಭಾರತ: ವೇದಕಾಲದ ಸನ್ಯಾಸಧರ್ಮವನ್ನು ಈಗ ಆಚರಣೆ ಮಾಡುವುದು ಅಸಾಧ್ಯದ ಮಾತು. ಆದರೂ ಸನ್ಯಾಸಧರ್ಮದ ಅಡಿಪಾಯವನ್ನೇ ಬಿಟ್ಟು ಸಾಮಾಜಿಕ ಹೋರಾಟದ ಹೆಸರಿನಲ್ಲಿ ಸಮಾಜದ ಶಾಂತಿ ಹಾಗೂ ನೆಮ್ಮದಿಗೆ ಭಂಗ ತರುತ್ತಿರುವುದನ್ನು ಕಾಣುತ್ತಿದ್ದೇವೆ.ಆಯಾ ಜಾತಿಯ ಎಲ್ಲ ಮಠಾಧೀಶರು ಹಾಗೂ ಹಿರಿಯ ಪ್ರಜ್ಞಾವಂತ ನಾಗರಿಕರು ತಮ್ಮ ಸಮಾಜದ ಹಿತ ಕಾಯುವ ಜೊತೆಗೆ ಸಮಷ್ಟಿಯ ಹಿತವನ್ನೂ ಕಾಯುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಆಯಾಯ ಸಮಾಜದವರು ಚಿಂತನ-ಮಂಥನ ಮಾಡಬೇಕು. ಒಂದು ಲಕ್ಷ್ಮಣ ರೇಖೆಯನ್ನು ಸ್ವಯಂ ಹಾಕಿಕೊಂಡು ಇತರರಿಗೆ ಮಾರ್ಗದರ್ಶನ ಮಾಡುತ್ತಾ ಸಮಾಜದಲ್ಲಿ ಸದ್ಭಾವನೆ ಸಹಬಾಳ್ವೆ ಶಾಂತಿ ಹಾಗೂ ನೆಮ್ಮದಿಯನ್ನು ತರುವ ಪ್ರಯತ್ನ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.