ADVERTISEMENT

ಗುರುವೇ ನಮಃ ಗುರುವೇನು ಮಹಾ!: ಇವರೆಲ್ಲ ಹೊಣೆ ಮರೆತವರು

ಎಸ್.ಜಿ.ಸಿದ್ದರಾಮಯ್ಯ
Published 20 ಮಾರ್ಚ್ 2021, 19:31 IST
Last Updated 20 ಮಾರ್ಚ್ 2021, 19:31 IST
ಕಲೆ: ರಾಮಕೃಷ್ಣ ಸಿದ್ರಪಾಲ
ಕಲೆ: ರಾಮಕೃಷ್ಣ ಸಿದ್ರಪಾಲ   

ಜನರೆದೆಯಲ್ಲಿ ಅಕ್ಷರದ ಬೀಜ ಬಿತ್ತುತ್ತಾ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಮಠಗಳು ಈಗ ಜಾತಿಯ ವಿಷಬೀಜಕ್ಕೆ ನೀರೆರೆಯುತ್ತಿವೆ. ರಾಜಕಾರಣದ ಕೇಂದ್ರಗಳಾಗಿರುವ ಮಠಗಳ ನೈತಿಕತೆ ದಿವಾಳಿ ಎದ್ದಿದೆ. ಇದಕ್ಕೆಲ್ಲ ಯಾರು ಹೊಣೆ? ಜನರೇ? ರಾಜಕಾರಣಿಗಳೇ? ಮಠದ ಸ್ವಾಮಿಗಳೇ?

ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೇ ತೂಗಿ ತೂಗಿ ಟೊಕಟೊಕನೆ ಹೊಡಿ
ಎಂದಾತ ನಮ್ಮ ಅಂಬಿಗರ ಚೌಡಯ್ಯ

ಸತ್ಯ ಶುದ್ಧ ಕಾಯಕಜೀವಿ ಶಿವಶರಣ ಅಂಬಿಗರ ಚೌಡಯ್ಯನ ಈ ವಚನವನ್ನು ಓದಿದಾಗ ಯಾರಿಗಾದರೂ ಸಹಜವಾಗಿ ಇಂದಿನ ಮಠ ಸಂಸ್ಕೃತಿಯಲ್ಲಿನ ಕೆಲವರು ಸ್ವಾಮೀಜಿಗಳು ನೆನಪಾಗಬಹುದು. ಅದರಲ್ಲೂ ತಮ್ಮ ತಮ್ಮ ಜಾತಿಗಳ ಪರವಾಗಿ ಬೀದಿಗಿಳಿದು ಹೋರಾಟದ ಹಾರಾಟದಲ್ಲಿ ತೊಡಗಿರುವ ಹಲವು ಸ್ವಾಮೀಜಿಗಳು ಕಾಡಿಸಬಹುದು.

ADVERTISEMENT

ನಾನು ವಚನಧರ್ಮದ ವಿದ್ಯಾರ್ಥಿ. ವಚನಧರ್ಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆ ಯಾವುದೇ ಅನ್ಯ ಆಕರಗಳನ್ನು ಪೂರ್ಣವಾಗಿ ಆಶ್ರಯಿಸದೆ ವಚನಗಳನ್ನೇ ಪಠ್ಯ ಪ್ರಮಾಣವನ್ನಾಗಿ ಗಣಿಸಿದವನು. ಏಕೆಂದರೆ ವಚನಗಳು ವಚನಧರ್ಮದ ಉಪ ಉತ್ಪನ್ನಗಳಂತೆ ಮೂಡಿಬಂದವು. ಅವು ಪ‍್ರಜಾಪ್ರಭುತ್ವವಾದಿ ನೆಲೆಯಲ್ಲಿ ವಿಚಾರಮಂಥನ ಮಾಡಿದಂತೆ ಮೂಡಿದ ಅನುಭಾವಿಕ ಅಭಿಪ್ರಾಯಗಳು. ಅವು ಲಿಂಗಾಯತದ ನಿಜ ಪಠ್ಯಗಳು. ಇಂಥ ಪಠ್ಯಗಳಲ್ಲಿ ಎಲ್ಲೂ ಸನ್ಯಾಸತ್ವವನ್ನು ಪುರಸ್ಕರಿಸಿದ ಮಾತಿಲ್ಲ. ಮರ್ತ್ಯಲೋಕವನ್ನು ಕರ್ತಾರನ ಕಮ್ಮಟ ಎಂದೂ ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದುಶಿವಂಗೆ ಎಂದೂ ಇಹದ ಬಾಳುವೆಯಲ್ಲಿ ಸಂಸಾರದ ಸಂಪದವನ್ನು ಗೌರವಿಸಿದ ಧರ್ಮ ಇದು.

ಶಿವಶರಣರ ಕಾಲದಲ್ಲಿ ಅನುಭವ ಮಂಟಪ ಇತ್ತೇ ಹೊರತು ಮಠ ಸಂಸ್ಕೃತಿ ಇರಲಿಲ್ಲ.ಆ ನಂತರದ ಕಾಲಮಾನದಲ್ಲಿ ಮಠ ಸಂಸ್ಕೃತಿ ಬಂತು. ಮಠ ಸಂಸ್ಕೃತಿ, ಪೀಠ ಸಂಸ್ಕೃತಿ ಎಂಬುದು ವೈದಿಕ ಮೂಲದ್ದು. ಅದು ಅವರ ಧರ್ಮ ರಕ್ಷಣೆಗೆ, ವರ್ಣ ರಕ್ಷಣೆಗೆ ಕಟ್ಟಿಕೊಂಡಂಥದ್ದು. ಅವೈದಿಕ ಸಮುದಾಯಗಳಲ್ಲಿ ಅರ್ಥಾತ್‌ ಕಾಯಕಜೀವಿ ಸಮುದಾಯಗಳಲ್ಲಿ ಈ ಮಠ, ಪೀಠ ಸಂಸ್ಕೃತಿ ಶರಣ ಚಳವಳಿಯ ನಂತರದಲ್ಲಿ ಬಂದಿರುವುದು. ಹೀಗೆ ಬಂದ ಮಠಗಳು ಓದೋ ಮಠಗಳಾಗಿ ಸಾಲಿ ಮಠಗಳಾಗಿ ಅಕ್ಷರ ಜಗತ್ತಿಗೆ ಸಮುದಾಯಗಳನ್ನು ತೊಡಗಿಸುವ ಜನೋಪಯೋಗಿ ಕಾರ್ಯದಲ್ಲಿ ತೊಡಗಿರುವುದು ಚಾರಿತ್ರಿಕ ಮಹತ್ವದ ಸಂಗತಿಯೇ ಸರಿ. ಇಂಥ ಮಠಗಳು ತ್ರಿವಿಧ ದಾಸೋಹದ ಮೂಲಕ ಜನಸೇವೆ ಮಾಡಿದ್ದು ಒಂದು ಶ್ಲಾಘನೀಯ ಹೆಜ್ಜೆ.

ಕೆಲವು ಮಠಗಳು ಸ್ಥಾಪಿತವಾದ ಧರ್ಮದ ಮಿತಿಯನ್ನೂ ದಾಟದಂತೆ ಸರ್ವಜನಾಂಗವನ್ನು ಒಳಗೊಳ್ಳುತ್ತಾ ತಮ್ಮ ಮಿತಿಯಲ್ಲಿ ಈ ಕೈಂಕರ್ಯವನ್ನು ಮುನ್ನಡೆಸಿಕೊಂಡು ಬಂದಿವೆ. ಅಂಥ ಮಠಗಳಲ್ಲಿ ಅಕ್ಷರದ ಬೆಳಕಿಗೆ ತೆರೆದುಕೊಂಡ ಎಷ್ಟೋ ಜನ ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ಬಾಳು ಕಟ್ಟಿಕೊಂಡಿದ್ದಾರೆ. ಬೀದಿಗೆ ಬಿದ್ದ ಎಷ್ಟೋ ಮಕ್ಕಳಿಗೆ ಆಸರೆ ನೀಡಿದ ಮಠಗಳು, ಮಠದ ಸ್ವಾಮಿಗಳು ತಮ್ಮ ಧರ್ಮ ಬೋಧನೆಯನ್ನು ಕೇವಲ ಬಾಯಿಯ ಬೊಗಳೆಯಾಗಿಸದೇ ಬದುಕಿನ ಬೆಳಕಾಗಿಸಿದ್ದಾರೆ. ಈ ಪರಂಪರೆ ನಿನ್ನೆ ಮೊನ್ನೆವರೆಗೂ ಸದ್ದುಗದ್ದಲ ಇಲ್ಲದೇ ನಡೆದುಕೊಂಡು ಬಂದ ಕ್ರಿಯೆ ಆಗಿತ್ತು.

ಇಂಥ ಮಠಗಳಲ್ಲಿ ಇಲಿಗಳೂ ಇದ್ದವು. ಇಲಿಗಳನ್ನು ಕೊಂದು ತಿನ್ನುವ ಮಾರ್ಜಾಲಗಳೂ ಇದ್ದವು. ಮಠ, ಪೀಠದ ಸುತ್ತಲಿನ ಇಂಥ ಕಥೆಗಳು ಕತ್ತಲಿನಲ್ಲಿ ಕರಗಿ ಹೋಗುತ್ತಿದ್ದವು. ಕಾರಣ ಆ ಮಠಗಳು ನಡೆಸುತ್ತಿದ್ದ ತ್ರಿವಿಧ ದಾಸೋಹ, ಜನೋಪಯೋಗಿ ಕಾರ್ಯ ಚಟುವಟಿಕೆಗಳು ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಮಠಗಳು ನೀಡಿದ ಕೊಡುಗೆ ಅಪಾರವಾದದ್ದು. ಇದು ಆಗಿನ ಮಾತು. ಆದರೆ ಇಂದು ಮಠಗಳು ರಾಜಕಾರಣದ ಕೇಂದ್ರವಾಗಿವೆ. ಜಾತಿ ಭಾವನೆಗಳನ್ನು ಹುಟ್ಟುಹಾಕುವ, ಜಾತಿಯ ವಿಷಬೀಜಗಳನ್ನು ಜನರೆದೆಯಲ್ಲಿ ಬಿತ್ತಿ ಬೆಳೆಯುವ ಜಾತಿ ಕೇಂದ್ರಗಳಾಗಿವೆ. ಅವು, ಇವು ಎನ್ನದೇ ಬಹುತೇಕ ಎಲ್ಲ ಮಠಗಳೂ ಧರ್ಮಕ್ಕಿಂತ ಜಾತಿ ಕರ್ಮಕ್ಕಂಟಿದ ಕೇಂದ್ರಗಳಾಗಿವೆ. ಮಠಗಳು ಹೀಗಾಗಲು ಯಾರು ಕಾರಣ? ಜನರೇ? ರಾಜಕಾರಣಿಗಳೇ? ಮಠದ ಸ್ವಾಮಿಗಳೇ? ಈ ಪ್ರಶ್ನೆಯನ್ನು ನಿಷ್ಠುರವಾಗಿ ಕೇಳಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ಉತ್ತರದಾಯಿತ್ವವಾಗಿ ಮೂವರನ್ನು ಗುರಿಪಡಿಸಿದರೂ ಅದರಲ್ಲಿ ಮುಖ್ಯವಾಗಿ ಇದರ ನೈತಿಕ ಹೊಣೆ ಸ್ವಾಮಿಗಳಿಗೇ ಸೇರಿದ್ದಾಗುತ್ತದೆ.

ಕೆಲವು ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ತತ್ವರಹಿತ ಕೊಳಕು ರಾಜಕಾರಣವೇ ನಡೆ ಆಗಿರುತ್ತದೆ. ಅದಕ್ಕಾಗಿ ಮಠಗಳು ಅವರಿಗೆ ಒಳ್ಳೆಯ ಹುಲ್ಲುಗಾವಲು ಇದ್ದಂತೆ. ಹೀಗಾಗಿಯೇ ಸಿದ್ಧಾಂತರಹಿತ ಅಪ್ರಜಾಸತ್ತಾತ್ಮಕವಾದ ರಾಜಕಾರಣ ಸದಾ ಮಠಗಳನ್ನು, ಮಠದ ಸ್ವಾಮಿಗಳನ್ನು ಓಲೈಸುವ ಕಾರ್ಯಗಳನ್ನು ಮಾಡುತ್ತದೆ. ಮಠಗಳನ್ನು ಎದುರುಹಾಕಿಕೊಂಡರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂಬ ಭೀತಿ ಕಾರಣದಲ್ಲಿ ಈ ನಡೆ ರಾಜಕಾರಣಿಗಳಿಗೆ ಅನಿವಾರ್ಯ ಎನ್ನಿಸಿದೆ.

ಯಾವಾಗ ಮಠಗಳ ಓಲೈಕೆಗಾಗಿ ರಾಜ್ಯದ ಬಜೆಟ್‌ನಲ್ಲಿ ಇಂತಿಂಥ ಜಾತಿ ಮಠಗಳಿಗೆ ಇಷ್ಟಿಷ್ಟು ಕೋಟಿ ಎಂದು ಹಣವನ್ನು ಅನುದಾನದ ರೀತಿಯಲ್ಲಿ ಕೊಡುವ ಕೆಟ್ಟ ಸಂಪ್ರದಾಯ ಆರಂಭವಾಯಿತೋ ಅಂದೇ ರಾಜ್ಯ ಬಜೆಟ್‌ನ ಪಾವಿತ್ರ್ಯ ಹಾಳಾಯಿತು. ಮಠಗಳ ನೈತಿಕತೆ ದಿವಾಳಿ ಆಯಿತು. ಈ ಪರಿಯ ಅನುದಾನವನ್ನು ತಿರಸ್ಕರಿಸುವ ನೈತಿಕ ತಾಕತ್ತನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಿಟ್ಟರೆ ಬೇರೆ ಯಾವ ಮಠದ ಸ್ವಾಮಿಗಳೂ ತೋರಲಿಲ್ಲ. ಬಾಯಿ ಮಾತಿನಲ್ಲಿ ಬೇಡಿಕೆ ಹೇಳುವ ಗಾಂಭೀರ್ಯವನ್ನು ಕೆಲವು ಮಠದವರು ತೋರಿದರೆ ಇನ್ನು ಕೆಲವು ಮಠದವರು ಕೋರಿಕೆಯ ಮನವಿ ಪತ್ರಗಳನ್ನು ಸಲ್ಲಿಸಿದವರಾದರು. ಈ ಅನುದಾನ ಹಂಚಿಕೆ ಎಂಬುದು ರಾಜಕಾರಣದ ಕೊಳಕನ್ನು ಮಠಗಳಿಗೆ ಅಂಟಿಸಿದ್ದೇ ಆಯಿತು.

ಇದರ ಬೆಳವಣಿಗೆಯೇ ಇಂದಿನ ಮಠದ ಸ್ವಾಮಿಗಳು ಮೆರೆಯುತ್ತಿರುವ ಬೀದಿ ರಾಜಕಾರಣವಾಗಿದೆ. ಧರ್ಮದ ಜಗದ್ಗುರುಗಳು ಜಾತಿಯ ಜಗದ್ಗುರುಗಳಾಗಿ ಧರ್ಮಬೋಧಕ ಸ್ವಾಮಿಗಳು ಜಾತಿ ಪ್ರೇರಕ ಸ್ವಾಮಿಗಳಾಗಿ ಕುಬ್ಜರಾಗುತ್ತಿದ್ದಾರೆ. ಜಗತ್ತಿಗೆ ಬುದ್ಧಿ ಹೇಳಬೇಕಾದವರು ಮಾತಿನ ಮೈಲಿಗೆಯಲ್ಲಿ ಮಾತು ಸೋತವರಾಗಿದ್ದಾರೆ. ಬೀದಿಗಿಳಿದು ಬೆತ್ತಲಾಗಿದ್ದಾರೆ.

ನಾಲ್ಕಾರು ದಶಕಗಳ ಹಿಂದೆ ಈ ಮಠಗಳು ಕೇವಲ ಪ್ರಬಲ ಜಾತಿಗಳಲ್ಲಿ ಬೇರೂರಿ ಬೆಳೆದ ಪೀಠಗಳಾಗಿದ್ದವು. ಜನಾಂಗದ ಒಗ್ಗಟ್ಟಿಗೆ ಹಾಗೂ ರಾಜಕೀಯದ ಬಲಸಂವರ್ಧನೆಗೆ ಪರೋಕ್ಷವಾಗಿ ಕಾರಣವಾದ ಶಕ್ತಿ ಕೇಂದ್ರಗಳಾಗಿದ್ದವು. ಒಬ್ಬ ಸ್ವಾಮಿ, ಎಲ್ಲ ಜಾತಿಗಳಿಗೂ ಜಗದ್ಗುರುಗಳ ಅಗತ್ಯವನ್ನು ಮನಗಂಡವರಂತೆ ಜಾತಿಗೊಬ್ಬೊಬ್ಬರಿಗೆ ದೀಕ್ಷೆ ಕೊಟ್ಟು ಜಾತಿ ಜಗದ್ಗುರುಗಳ ನಿರ್ಮಾಣಕಾರರಾದರು. ಇದರಿಂದ ಜಾತಿಗೊಂದು ಮಠ ಸೃಷ್ಟಿಯಾಯಿತು.

ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್‌ ಅವರ ಚಿಂತನೆಗೆ ವಿರುದ್ಧವಾದ ನಡೆ ಇದು. ಶೋಷಣೆಗೆ ಒಳಗಾಗಿದ್ದ ಸಮುದಾಯಗಳು ಅಂಬೇಡ್ಕರ್‌ ಅವರ ಚಿಂತನೆಯ ಹಾದಿಯಲ್ಲಿ ಸಂಘಟಿತವಾಗಿ ಸಾಗಿದ್ದರೆ ಈ ದೇಶದ ಪ್ರಜಾಪ್ರಭುತ್ವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದ ಯಶಸ್ಸು ಈ ಸಮುದಾಯಗಳಿಗೆ ಸೇರುತ್ತಿತ್ತು. ಅದಕ್ಕೆ ವಿರುದ್ಧವಾಗಿ ಈ ಮಠ ಸಂಸ್ಕೃತಿಯ ಹಾದಿ ತುಳಿದು ಇಡೀ ಸಮುದಾಯಗಳನ್ನು ಮತೀಯ ಮೌಢ್ಯ, ಕಂದಾಚಾರದ ಕೂಪಕ್ಕೆ, ಸಂಸ್ಕೃತೀಕರಣದ ಸಾಂಸ್ಕೃತಿಕ ಜೀತಕ್ಕೆ ದೂಡಿದಂತಾಯಿತು. ದೇಶದ ಚರಿತ್ರೆಯ ಗಂಧಗಾಳಿ ಗೊತ್ತಿಲ್ಲದ ಹಲವರು ಪೀಠಾರೋಹಣ ಮಾಡಿದ್ದೇ ತಮ್ಮನ್ನು ದೈವಾಂಶ ಸಂಭೂತರೆಂದು ಭ್ರಮಿಸಿಕೊಂಡು ಜಾತಿ ಜಗದ್ಗುರುಗಳಾಗಿ ಆದೇಶ ಹೊರಡಿಸತೊಡಗಿದರು. ಇವರನ್ನು ದಾಳವಾಗಿ ಬಳಸಿಕೊಂಡು ಪಕ್ಷ ರಾಜಕಾರಣದ ಸೂತ್ರಧಾರರು ಸಾಂಸ್ಕೃತಿಕ ರಾಜಕಾರಣದ ದಾಳಗಳನ್ನು ಉರುಳಿಸತೊಡಗಿದರು. ಇದರ ಪರಿಣಾಮ ಇಂದು ಶಿಕ್ಷಣ, ಸಂಘಟನೆ ಹೋರಾಟದ ಹಾದಿ ತುಳಿಯಬೇಕಾಗಿದ್ದ ಅಲ್ಪಸಂಖ್ಯಾತ, ದಲಿತ, ಶೋಷಿತ, ವಂಚಿತ ಸಮುದಾಯಗಳು ತಮ್ಮತಮ್ಮಲ್ಲೇ ಕಿತ್ತಾಡಿಕೊಂಡು ಹರಿದು ಹಂಚಿಹೋಗಿವೆ.

ದೇವರಾಜ ಅರಸು ಅವರ ಕಾಲದಲ್ಲಿ ದನಿ ಇಲ್ಲದವರಿಗೆ ದನಿ ಬಂತು. ಅದರಿಂದಾಗಿ ಎಷ್ಟೋ ಅನಾಮಿಕ ಸಮುದಾಯ ಮೂಲದವರು ಶಿಕ್ಷಣಕ್ಕೆ ತೆರೆದುಕೊಂಡರು. ಸರ್ಕಾರದ ಉದ್ಯೋಗಾವಕಾಶಗಳ ಅನುಭೋಗಿಗಳಾದರು. ಆದರೆ, ಇಂದು ಉಳ್ಳವರಿಗೆ ಉನ್ನತ ಶಿಕ್ಷಣ ಎಂಬಂತಾಗಿದೆ. ಶಿಕ್ಷಣದ ಖಾಸಗೀಕರಣದಿಂದ ಬಡವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಸರ್ಕಾರದ ಉದ್ಯೋಗವಕಾಶಗಳು ಹೇಳಹೆಸರಿಲ್ಲದಂತೆ ಕರಗಿ ಹೋಗುತ್ತಿವೆ. ಸರ್ಕಾರದ ಬಹುತೇಕ ಕ್ಷೇತ್ರಗಳು ಖಾಸಗಿಯವರಿಗೆ ಮಾರಾಟವಾಗುತ್ತಿವೆ. ಇದರ ಪರಿಣಾಮ ಮೇಲ್ಜಾತಿಗಳಿಗೆ ಉದ್ಯೋಗ, ಉದ್ಯಮಪತಿಗಳಿಗೆ ದೇಶದ ಸಂಪತ್ತು ಎಂಬಂತಹ ದುರಂತದ ಕಡೆಗೆ ಪ್ರಜಾಪ್ರಭುತ್ವ ಸಾಗುತ್ತಿದೆ. ಇಂಥ ರಾಜಕೀಯ ನಡೆಯ ಸೂತ್ರಧಾರಿಗಳಿಗೆ ಕೈಗೊಂಬೆಗಳಾದಂತೆ ಕೆಲವು ಜಾತಿಯ ಸ್ವಾಮಿಗಳು ತಮ್ಮ ತಮ್ಮ ಸಮುದಾಯಗಳನ್ನು ರಾಜಕೀಯಕ್ಕೆ ದಾಳವಾಗಿಸುತ್ತಿದ್ದಾರೆ. ಮೀಸಲಾತಿ ಎಂಬುದರ ಬಗೆಗೆ ಸಾಂವಿಧಾನಿಕ ತಿಳಿವಳಿಕೆ ಇಲ್ಲದವರಾಗಿ ವರ್ತಿಸುತ್ತಿರುವ ಇವರ ನಡೆ ಅಪ್ರಜಾಸತ್ತಾತ್ಮಕವಾಗಿದೆ. ಕೊಡಲಿಯ ಕಾವು ಮರಕ್ಕೆ ಮೃತ್ಯು ಎಂಬಂತೆ ಇದು ತಳಸಮುದಾಯಗಳಿಗೆ ಮೃತ್ಯುಪ್ರಾಯವಾಗಿದೆ.

ಆಮರಣಾಂತ ಉಪವಾಸದ ಬೆದರಿಕೆ ಒಡ್ಡುವ, ಕಾಲ್ನಡಿಗೆ ಜಾಥಾ ಮಾಡಿ ಜಾತಿ ಸಮಾವೇಶಗಳ ಬಲ ಪ್ರದರ್ಶನ ಮಾಡುವ ಜಾತಿ ದುರಂಧರ ಪೀಠಾಧಿವೀರ ಸ್ವಾಮಿಗಳು ಹಲವರಾಗಿದ್ದಾರೆ. ಇದು ನೈತಿಕ ಬಲ ಕಳೆದುಕೊಳ್ಳುವ ನಡೆಯಲ್ಲದೆ ಬೇರೇನೂ ಅಲ್ಲ. ಈ ಮಧ್ಯೆ ಒಂದಿನಿತೂ ದನಿಯೆತ್ತದೆ ಶೇ 10ರ ಮೀಸಲಾತಿಯನ್ನು ಕೇಂದ್ರದಲ್ಲಿ ಘೋಷಿಸಿಕೊಂಡವರ ಬಗ್ಗೆ ಇವರಿಗೆ ತಿಳಿವಳಿಕೆಯೇ ಇಲ್ಲವಾಗಿದೆ.

ವಿಚಿತ್ರವೆಂದರೆ ಸರ್ಕಾರಿ ಸ್ವಾಮ್ಯದ ಮುಜರಾಯಿ ದೇವಸ್ಥಾನಗಳನ್ನು ಮಠಕ್ಕೆ ಖಾಸಗೀಕರಣ ಮಾಡಿಸಿಕೊಳ್ಳುವ ರಾಜಕೀಯ ಪ್ರವೀಣ ಸ್ವಾಮಿಗಳು ತಮ್ಮ ಸುತ್ತ ಮೆತ್ತಿಕೊಳ್ಳುವ ಗೈದಪರಾಧಂಗಳ ಆರೋಪಗಳಿಂದ ಮುಕ್ತರಾಗುವ ಪ್ರಭಾವಶಾಲಿಗಳಾಗಿದ್ದಾರೆ. ಇಂಥವರ ಕೇಸುಗಳು ನ್ಯಾಯಪೀಠದ ಮುಂದೆ ಬಂದಾಗ ಜವಾಬ್ದಾರಿಯಿಂದ ಹಿಂದೆ ಸರಿದ ನ್ಯಾಯಮೂರ್ತಿಗಳ ನಡೆ ಸಾರ್ವಜನಿಕರ ಚರ್ಚೆಗೆ ಒಳಗಾಗಿದ್ದು ಈಗ ಇತಿಹಾಸ. ಇನ್ನು ಕೆಲವು ಸ್ವಾಮಿಗಳು ಮಹಿಳೆಯ ವಾಟ್ಸ್ಆ್ಯಪ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದನ್ನೂ ಜನ ಮರೆತಿಲ್ಲ.

ಹಿಂದೆ ಉತ್ತರ ಕರ್ನಾಟಕ ಭಾಗದ ಒಬ್ಬ ಶ್ರೀಗಳು ಮಠದ ಮೂಲಪೀಠವನ್ನು ತಮಗೇ ಕೊಡಬೇಕೆಂದು ಹಟ ಹಿಡಿದು, ಕೊರಳಿಗೆ ಪಾದುಕೆಯ ಹಾರ ಹಾಕಿಕೊಂಡು ಧರಣಿ ಕುಳಿತಿದ್ದರು. ಕಡೆಗೆ ಸಂಬಂಧಿಸಿದ ಜಾತಿಯ ಪ್ರಮುಖರು ಹೋಗಿ ಹಾರ ತೆಗೆಸಿದ್ದು ಪ್ರಹಸನದ ಮುಂದುವರಿದ ಭಾಗ.

ಕರಾವಳಿ ಭಾಗದ ಶ್ರೀಗಳೊಬ್ಬರು ತಮ್ಮ ಸುಸಂಸ್ಕೃತ ಸಮಾಜ ಬಿಟ್ಟು ಬೇರೆ ಜಾತಿ ಧರ್ಮಗಳ ಯುವಕರನ್ನು ತಮ್ಮ ಜಾತಿಯ ಹೆಣ್ಣುಗಳು ಮದುವೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸುತ್ತ ಅಂತರ್ಜಾತಿ ವಿವಾಹ ತಡೆಗೆ ಮಾತೃಮಂಡಳಿ ರಚಿಸುವ ಬಗ್ಗೆ ಮಾತನಾಡಿದ್ದಾರೆ. ಇದು ಸಂವಿಧಾನವಿರೋಧಿ ಮಾತು ಅಂತ ಅವರಿಗೆ ಅನ್ನಿಸಲೇ ಇಲ್ಲವೇ? ಸ್ವಾಮೀಜಿಗಳಾದಾಕ್ಷಣಕ್ಕೆ ಜಾತಿಯ ಎಲ್ಲ ಹೆಣ್ಣು–ಗಂಡುಗಳ ಬದುಕಿನ ನಿರ್ಧಾರಕಶಕ್ತಿ ಕೇಂದ್ರಗಳೇ ಇವರು? ಮೊನ್ನೆ ತಾನೆ ಇನ್ನೊಬ್ಬ ಶ್ರೀಗಳು ತಮ್ಮ ಜಾತಿಯ ಪ್ರತಿಯೊಬ್ಬ ಮಹಿಳೆ ಕನಿಷ್ಠ ಐದು ಮಕ್ಕಳನ್ನು ಹೆರಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ!

ಇಂಥ ವಾತಾವರಣದಿಂದಾಗಿ ಮಠ ಮಾನ್ಯಗಳ ಮೇಲೆ ಇಟ್ಟಿರುವ ನಂಬಿಕೆ ನಶಿಸಿಹೋಗುತ್ತಿರುವುದು ವಾಸ್ತವ. ದೀಕ್ಷೆ ಕೊಟ್ಟ ಗುರುಸ್ವಾಮಿಯ ನಡೆಯನ್ನು ದೀಕ್ಷೆ ಪಡೆದ ಶಿಷ್ಯಸ್ವಾಮಿಯ ವರ್ತನೆಯನ್ನು ಕುರಿತು ಆಗಲೇ ಅಂಬಿಗರ ಚೌಡಯ್ಯ ಶರಣರು ತಮ್ಮದೊಂದು ವಚನದಲ್ಲಿ

ಎರಡು ಗ್ರಾಮಗಳ ನಡುವೆ ಕಡೆದ ಕಲ್ಲು
ಅದ ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ
ಆದಿಯನರಿಯದ ಗುರುವು, ಭೇದಿಸಲರಿಯದ ಶಿಷ್ಯ
ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗರ ಚೌಡಯ್ಯ ಎಂದಿದ್ದಾರೆ.


ಇತ್ತೀಚೆಗೆ ಮಠಗಳ ವ್ಯವಹಾರಗಳು ಬೀದಿಗೆ ಬಿದ್ದ ಸಂಗತಿಗಳಾಗುತ್ತಿವೆ. ಈ ನಡುವೆ ರಕ್ಷಣೆಗೆ ಧರ್ಮದ ಸ್ವಯಂ ಸೇನೆಗಳನ್ನು ಕಟ್ಟುವ ಸ್ವಾಮಿಗಳು ಹೆಚ್ಚಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಪಠ್ಯ ಪುಸ್ತಕಗಳಲ್ಲಿ ಈ ಧರ್ಮ ಇರಲಿ, ಆ ಧರ್ಮ ಬೇಡ ಎಂದು ಮೂಗು ತೂರಿಸುವ ಸ್ವಾಮಿಗಳ ಹಾವಳಿಯೂ ಅಧಿಕವಾಗುತ್ತಿದೆ. ಸಕಲರಿಗೂ ಲೇಸನ್ನೇ ಬಯಸಬೇಕಾಗಿದ್ದ ಮಠಗಳು ಯಾವ ದಾರಿಯಲ್ಲಿ ಸಾಗುತ್ತಿವೆ? ಸಮಾಜ, ರಾಜಕಾರಣವನ್ನು ಯಾವ ದುರಂತದ ಕಡೆಗೆ ಕೊಂಡೊಯ್ಯುತ್ತಿವೆ? ಈ ನಡೆಯ ಶ್ರೀಶ್ರೀ ಶ್ರೀಗಳೆಲ್ಲರೂ ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಇದರಿಂದ ದೇಶದ ಸಂವಿಧಾನ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿಯುತ್ತದೆ. ಬಹುತ್ವ ಭಾರತ ಬಲಿಷ್ಠ ಭಾರತವಾಗಿ ಪ್ರಗತಿಯ ಪಥದಲ್ಲಿ ನಡೆಯುತ್ತದೆ.

ಉದಯಮುಖದಲ್ಲಿ ಪೂಜಿಸಹೋದರೆ
ಹೃದಯಮುಖದಲ್ಲಿ ಕತ್ತಲೆಯಾಯಿತ್ತು
ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ
ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.