ADVERTISEMENT

ನುಡಿಚಿತ್ರ– ಸಿರಿ ತುಳುನಾಡಿನ ಬೆಳಕು ಮಾಚಾರು ಗೋಪಾಲ ನಾಯ್ಕ

ಕೆ. ಚಿನ್ನಪ್ಪಗೌಡ
Published 11 ಮಾರ್ಚ್ 2023, 23:30 IST
Last Updated 11 ಮಾರ್ಚ್ 2023, 23:30 IST
ಮಾಚಾರು ಗೋಪಾಲ ನಾಯ್ಕ
ಮಾಚಾರು ಗೋಪಾಲ ನಾಯ್ಕ   

ಹಲವು ಸಂಧಿ ಪಾಡ್ದನಗಳ ಕಣಜ ಮಾಚಾರು ಗೋಪಾಲ ನಾಯ್ಕ. ಸಿರಿ ಜಾತ್ರೆಯಲ್ಲಿ ಕುಮಾರನಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದವರು. ಜಾನಪದ ಲೋಕಕ್ಕೆ ಅವರ ಕೊಡುಗೆ ಎಷ್ಟೊಂದು ಹಿರಿದಾದುದು ಗೊತ್ತೆ?

ತುಳು ಸಿರಿ ಕಾವ್ಯವನ್ನು ತುಳುನಾಡಿನ ಬೆಳಕು ಅಂತ ಕರೆದವರು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದ ಬೆಳಾಲಿನ ಮಾಚಾರು ಗೋಪಾಲ ನಾಯ್ಕ. ಹೀಗೆ ಹೇಳುವಾಗ ಅವರ ಕಣ್ಣ ಮುಂದೆ ಇದ್ದುದು ಮುಖ್ಯವಾಗಿ ಅವರು ಹಾಡಿದ್ದ ಸಿರಿ ಸಂಧಿ. ಅವರು ಹಾಡಿರುವ ಸಿರಿ ಸಂಧಿಯಲ್ಲಿ ಬರೋಬ್ಬರಿ 15,683 ಸಾಲುಗಳಿವೆ. ನಾಯಿಕ ಅವರದು ಮಹಾಕವಿ ಪ್ರತಿಭೆ. ತಮ್ಮಷ್ಟೇ ಪ್ರತಿಭಾವಂತರಾದ ಮತ್ತು ಜನಪದ ಸಿರಿ ಮಹಾಕಾವ್ಯವನ್ನು ಮುರಿದು ಮರುಕಟ್ಟುವ ಸಾಮರ್ಥ್ಯವುಳ್ಳ ಗಾಯಕರು ಇರುವುದನ್ನು ನಾಯ್ಕರು ಮನಗಂಡಿದ್ದರು.

ಸಿರಿ ಸಂಧಿಯನ್ನು ಹಾಡಿರುವ ಗಾಯಕರನ್ನು ಮತ್ತು ಪ್ರಕಟವಾಗಿರುವ ಸಿರಿ ಸಂಧಿಯ ಸಂಪುಟಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕರ್ಗಿ ಶೆಡ್ತಿ, ಗಿಡಿಗೆರೆ ರಾಮಕ್ಕ ಮುಗ್ಗೆರ್ತಿ, ಶ್ಯಾಮ ಶೆಟ್ಟಿ , ರಾಮಕ್ಕ ಕುಂಬಾರಕೊಪ್ಪ, ಲೀಲಾ ಶೆಡ್ತಿ ಸಿರಿ ಸಂಧಿಯನ್ನು ಅವರದ್ದೇ ಕ್ರಮಗಳಲ್ಲಿ ಹಾಡಿದ್ದಾರೆ. ಕರ್ಗಿ ಶೆಡ್ತಿ ಮತ್ತು ರಾಮಕ್ಕ ಮುಗ್ಗೆರ್ತಿ ಅವರ ಸಿರಿ ಪಠ್ಯಗಳು ಪ್ರಕಟವಾಗಿವೆ. ಸಿರಿ ಪಠ್ಯಗಳ ಅಧ್ಯಯನವನ್ನು ಸಿರಿ ಕಾವ್ಯ ವಿದ್ವಾಂಸರಾದ ಬಿ.ಎ.ವಿವೇಕ ರೈ, ಎ.ವಿ. ನಾವಡ, ಗಾಯತ್ರಿ ನಾವಡ, ಅಶೋಕ ಆಳ್ವ ಹೀಗೆ ಹಲವರು ನಡೆಸಿದ್ದಾರೆ. ಅಮೃತರು ಸಂಗ್ರಹಿಸಿ ಪ್ರಕಟಿಸಿದ ‘ಸತ್ಯನಾಪುರತ ಸಿರಿ’ ಸಹ ಇದೆ.

ADVERTISEMENT

ಸಿರಿ ಜಾತ್ರೆಗಳಲ್ಲಿ, ಕುಟುಂಬದಲ್ಲಿ ನಡೆಯುವ ದಲ್ಯ ಆಚರಣೆಗಳಲ್ಲಿ, ಚಿಕಿತ್ಸೆ ನೀಡುವ ಸಂದರ್ಭಗಳಲ್ಲಿ ಸಿರಿ ಸಂಧಿಯನ್ನು ಹಾಡುತ್ತಾರೆ. ಹಾಗಾಗಿ ಸಿರಿ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ, ಸ್ಪಂದನಶೀಲವಾಗಿದೆ (vibrant). ಇಂತಹ ಸಿರಿ ಕಾವ್ಯವನ್ನು ನಾಯಿಕ ಅವರು ತುಳುನಾಡಿನ ಬೆಳಕು ಅಂತ ಕರೆದಿದ್ದಾರೆ. ತುಳುನಾಡು ಅಂದರೆ ಇಲ್ಲಿನ ಜನರು, ಮಹಿಳೆಯರು, ವ್ಯವಸಾಯ ಲೋಕ, ವಾರ್ಷಿಕ ಮತ್ತು ಜೀವನಾವರ್ತನ ಆಚರಣೆಗಳು ಮತ್ತು ಆರಾಧನೆ. ಇವುಗಳನ್ನು ಒಳಗೊಂಡ ಲೋಕದ ಬೆಳಕು!

ಸಿರಿ ಸಂಧಿಯನ್ನು ಲೋಕದ ಬೆಳಕು ಎಂದು ಕರೆದ ನಾಯಿಕ ಅವರು ಬೆಳಕಿಗೆ ಬಂದ ಕತೆಯನ್ನು ಹೇಳುತ್ತೇನೆ. ಫಿನ್ಲೆಂಡ್‌ನ ಲೌರಿ ಹೋಂಕೊ ಜಾಗತಿಕ ಜಾನಪದ ಅಧ್ಯಯನ ನಡೆಸಿದ ಮನ್ನಣೆ ಇರುವ ಜಾನಪದ ವಿದ್ವಾಂಸರು. ಫಿನ್ಲೆಂಡ್‌ನ ರಾಷ್ಟ್ರೀಯ ಮಹಾಕಾವ್ಯ ಕಲೇವಾಲದ 150ನೆಯ ವರ್ಷಾಚರಣೆಯನ್ನು ಉಡುಪಿಯಲ್ಲಿ ಕು.ಶಿ. ಹರಿದಾಸ ಭಟ್ಟರು ಆಯೋಜಿಸಿದ್ದರು. ಅದರಲ್ಲಿ ಭಾಗವಹಿಸಲು ಹೋಂಕೊ ಬಂದಿದ್ದರು (1985). ತುಳುನಾಡಿನ ಜಾನಪದ ಪರಂಪರೆ, ಅದರಲ್ಲಿಯೂ ಸಂಧಿ ಪಾಡ್ದನಗಳ ಮಹಾಕಾವ್ಯ ಪರಂಪರೆ ಸಮೃದ್ಧವಾಗಿರುವ ಸಂಗತಿ ಅವರ ಗಮನಕ್ಕೆ ಬಂತು.

ಹೋಂಕೊ ಅವರು ಜಗತ್ತಿನ ಮೌಖಿಕ ಮಹಾಕಾವ್ಯಗಳ ಸಂಗ್ರಹ, ಸಂಪಾದನೆ, ಅಧ್ಯಯನ ಮತ್ತು ಪ್ರಕಟಣೆಯ ಯೋಜನೆಯಲ್ಲಿ ಅಷ್ಟರಲ್ಲಿಯೇ ತೊಡಗಿದ್ದರು. ಇದರ ಮುಂದುವರಿಕೆಯಾಗಿ ಫಿನ್ನಿಷ್‌ ಇಂಡಿಯಾ ಜಾನಪದ ದಾಖಲಾತಿ ಯೋಜನೆಯನ್ನು ಹಾಕಿ ಅದರ ಅಂಗವಾಗಿ ಮುಖ್ಯವಾಗಿ ಎರಡು ಕಾರ್ಯಗಳನ್ನು ಕೈಗೆತ್ತಿಕೊಂಡರು. ಮೊದಲನೆಯದು ಫಿನ್ನಿಷ್‌ ಇಂಡಿಯನ್ ಮೌಖಿಕ ಜಾನಪದ ಅಧ್ಯಯನ ಹಾಗೂ ಕ್ಷೇತ್ರಕಾರ್ಯ ತರಬೇತು ಕಾರ್ಯಾಗಾರ(1989). ಎರಡನೆಯದು ಸಿರಿ ಮಹಾಕಾವ್ಯದ ಪಠ್ಯೀಕರಣ ಯೋಜನೆ (1990).

ಜಗತ್ತಿನ ಜನಪದ ಮಹಾಕಾವ್ಯಗಳ ಸಂಗ್ರಹ, ಸಂಪಾದನೆ ಮತ್ತು ಪಠ್ಯೀಕರಣದ ಬೃಹತ್ ಯೋಜನೆಯ ಭಾಗವಾಗಿ ಸಿರಿ ಕಾವ್ಯದ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಯ ಕೆಲಸದಲ್ಲಿ ಹೋಂಕೊ ತಂಡ (ಇತರ ಸದಸ್ಯರು ಬಿ.ಎ. ವಿವೇಕ ರೈ, ಕೆ. ಚಿನ್ನಪ್ಪ ಗೌಡ ಮತ್ತು ಅನ್ನೆಲಿ ಹೋಂಕೊ) 1990ರ ನಂತರ ಏಳೆಂಟು ವರ್ಷಗಳ ಕಾಲ ದುಡಿದದ್ದು ಒಂದು ಸ್ಮರಣೀಯ ಘಟನೆ. ಇಂತಹ ಹೊತ್ತಿನಲ್ಲಿ ನಾಯಿಕ ಅವರು ಹೋಂಕೊ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾದರೂ ಒಂದು ಮಹತ್ವದ ಘಟನೆ. ಇದಕ್ಕೆ ಮುಂಚಿತವಾಗಿ ನಾಯಿಕ ಅವರು ಹೇಳಿದ್ದ ಸಿರಿ ಸಂಧಿಯ ಪಠ್ಯವನ್ನು ಸಂಗ್ರಹಿಸಿದ್ದೆ. ಈ ಪಠ್ಯವನ್ನು ಆಧರಿಸಿ ಸಿರಿಯ ಕತೆಯ ಸಾರಸಂಗ್ರಹವನ್ನು ಸಿದ್ಧಪಡಿಸಿ ಹೋಂಕೊ ಅವರಿಗೆ ಕಳುಹಿಸಿಕೊಟ್ಟಿದ್ದೆ. ಇದರಿಂದ ಕುತೂಹಲ ತಾಳಿದ ಹೋಂಕೊ ಅವರು ಸಿರಿ ಕಾವ್ಯ ಯೋಜನೆಯನ್ನು ರೂಪಿಸಿ ನಾಯಿಕ ಅವರಿಂದ ಸಿರಿಸಂಧಿಯನ್ನು ಹಾಡಿಸಿ ಜಗತ್ತಿನ ಜನಪದ ಕಾವ್ಯಗಳಲ್ಲಿ ಅತ್ಯಂತ ದೀರ್ಘವಾದ ಪಠ್ಯವನ್ನು ದಾಖಲಿಸಿಕೊಂಡರು. ಸಿರಿ ಮಹಾಕಾವ್ಯದ ಹೆಬ್ಬಾಗಿಲು ಹೀಗೆ ತೆರೆಯಿತು!

ಮಹಾಕಾವ್ಯಗಳ ಕೊಪ್ಪರಿಗೆ

ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತಂತೆ ನಾಯಿಕ ಅವರಿಗೆ ಅಪಾರ ತಿಳಿವಳಿಕೆ ಇದೆ. ಸಿರಿ ಕಾವ್ಯದ ಕತೆಯ ನಡಿಗೆ, ಕತೆಯನ್ನು ಘಟಕಗಳನ್ನಾಗಿ ವಿಂಗಡಿಸಿ ಮರುಕಟ್ಟುವ ಕಲೆ, ವರ್ಣನೆಗಳನ್ನು ಪರಂಪರೆಯಿಂದ ಆಯ್ದು ಅಳವಡಿಸುವ ಬಗೆ, ವರ್ಣನೆಗಳನ್ನು ವಿಸ್ತರಿಸುವ ಅಥವಾ ಕುಗ್ಗಿಸುವ ಪದವಿನ್ಯಾಸ, ಸಿದ್ಧಸೂತ್ರಗಳನ್ನು ಸರಿಯಾದ ಜಾಗದಲ್ಲಿ ಸೇರಿಸುವ ಶಕ್ತಿ ಇವುಗಳ ವಿಷಯದಲ್ಲಿ ನಾಯಿಕರ ಜ್ಞಾನ ಅಪ್ರತಿಮವಾದುದು. ಸಂದರ್ಭ ಸನ್ನಿವೇಶಗಳನ್ನು ನೋಡಿಕೊಂಡು ಸಿರಿಕಾವ್ಯವನ್ನು ಅಂದಗೆಡದಂತೆ ಅವರು ಹಿಗ್ಗಿಸಬಲ್ಲರು, ಕುಗ್ಗಿಸಬಲ್ಲರು.

ಸಿರಿ ಯೋಜನೆಯ ಬಹುಮುಖೀ ದಾಖಲೀಕರಣದ ವಿಧಾನದ ಅನ್ವಯ ಅವರು ಸಿರಿ ಸಂಧಿಯನ್ನು ಹಾಡಲು ಆರಂಭಿಸಿದ್ದು 1990ರ ಡಿಸೆಂಬರ್‌ 20ರಂದು. ಸಿರಿ ಸಂಧಿಯ ಪೂರ್ಣ ಪಠ್ಯವನ್ನು ಹಾಡಿಮುಗಿಸಲು ಅವರು ತೆಗೆದುಕೊಂಡ ದಿನಗಳು ಒಂಬತ್ತು! ಅಂದಾಜು ಇಪ್ಪತ್ತೈದು ಗಂಟೆಗಳು! ದಿನವೊಂದಕ್ಕೆ ಹೆಚ್ಚೆಂದರೆ ನಾಲ್ಕು ಗಂಟೆ. ಅರ್ಧ ಅಥವಾ ಮುಕ್ಕಾಲು ಗಂಟೆ ಅವಧಿಯ ಸರಣಿ ಪ್ರಸ್ತುತಿ. ನಡುನಡುವೆ ಹಾಡಿಗೆ ವಿರಾಮ, ಅವರಿಗೆ ವಿಶ್ರಾಂತಿ. ಸಿರಿ ಕಾವ್ಯವನ್ನು ಅಜ್ಜೆರು ಸಂಧಿ, ಸಿರಿ ಸಂಧಿ, ಸೊನ್ನೆಗಿಂಡ್ಯೆ ಸಂಧಿ, ಅಬ್ಬಯ ದಾರಯ ಸಂಧಿ, ಕುಮಾರ ಸಂಧಿ ಮತ್ತು ಮುಕ್ತಾಯ ಹೀಗೆ ವ್ಯವಸ್ಥಿತವಾಗಿ ವಿಂಗಡಿಸಿ ಹಾಡಿದ್ದಾರೆ.

ಸಿರಿ ಕಾವ್ಯ ಅಲ್ಲದೆ ಇವರು ಹಾಡಿದ ಇತರ ಸಂಧಿಗಳು/ ಜನಪದ ಕಾವ್ಯಗಳು ಇಂತಿವೆ. ಕೋಟಿ ಚೆನ್ನಯ ಬೈದ್ಯೆರೆ ಸಂಧಿ (7,000 ಸಾಲುಗಳು), ಏಕಸಾಲ್ಯೆರೆ ಸಂಧಿ (1,800 ಸಾಲುಗಳು), ಮೈಸಂದಾಯ ಸಂಧಿ (1,150 ಸಾಲುಗಳು), ಈಶ್ವರ ಸಂಧಿ (2,080 ಸಾಲುಗಳು), ಕೋಡ್ದಬ್ಬು ಸಂಧಿ (3,000 ಸಾಲುಗಳು). ಇಷ್ಟಲ್ಲದೆ ಅವರೊಬ್ಬ ಜನಪದ ವೈದ್ಯ, ಜನಪದ ಕುಣಿತಗಳ ನಾಯಕ. ಬೇಸಾಯದ ಬಗೆಗಿನ ಅವರಿಗೆ ವಿಶೇಷ ಅನುಭವ ಇದೆ. ಇವರು ಕೆಲಸದ ಹಾಡುಗಳ ಕಣಜವೂ ಹೌದು. ಬೇಸಾಯದ ಗದ್ದೆಯಲ್ಲಿ ಕಬಿತಗಳನ್ನು ಮುಖ್ಯ ಗಾಯಕರಾಗಿ ಹಾಡುತ್ತಾರೆ. ಜನಪದ ಕತೆಗಳನ್ನು (ತುಳುವಿನ ಅಜ್ಜಿಕತೆ) ಹೇಳಬಲ್ಲ ಕತೆಗಾರನೂ ಹೌದು. ಸಿರಿ ಜಾತ್ರೆಯಲ್ಲಿ ಅವರ ನೇತೃತ್ವದಲ್ಲಿ ಒಂದು ಸಿರಿ ತಂಡ ಭಾಗವಹಿಸುತ್ತದೆ. ಈ ಸಿರಿ ಬಳಗದ ‘ಮುಖ್ಯ ಕುಮಾರ’ ಅವರು. ತಮ್ಮ ಸಿರಿ ಬಳಗದ ಮಹಿಳೆಯರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಅವರು ಹಾಡುವ ಎಲ್ಲ ಸಂಧಿಗಳ ಸಾಲುಗಳನ್ನು ಒಟ್ಟು ಸೇರಿಸಿದರೆ 30,000 ದಾಟುತ್ತದೆ. ಇದು ಮಹಾ ಪ್ರತಿಭೆ ಇರುವ ಗಾಯಕನಿಂದ ಮಾತ್ರ ಸಾಧ್ಯ.

ಸಿರಿ ಕಾವ್ಯದ ನಿರ್ಮಾಣ, ಅದರ ಬಳಕೆ, ಕಾವ್ಯದಲ್ಲಿ ಬರುವ ಸ್ಥಳನಾಮಗಳ ಮಾಹಿತಿ, ಕತೆಯ ಭೌಗೋಳಿಕ ಪ್ರಸರಣ, ಕಾವ್ಯದ ಕಲಿಕೆ ಹೀಗೆ ಅನೇಕ ಸಂಗತಿಗಳ ಕುರಿತಾಗಿ ವಿವರವಾದ ಮಾಹಿತಿಗಳನ್ನು ಅವರು ನೀಡಿದ್ದಾರೆ.

ಸಿರಿ ಯೋಜನೆಯ ಸಮಗ್ರ ಮಾಹಿತಿಗಳು ಇರುವ ‘ಸಿರಿ ಆರ್ಕೈವ್’ ಫಿನ್ಲೆಂಡ್‌ನ ನಾರ್ಡಿಕ್ ಇನ್‌ಸ್ಟಿಟ್ಯೂಟ್ ಆಫ್ ಫೋಕ್‌ಲೋರ್ ಮತ್ತು ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಇದೆ. ಈ ಸಂಗ್ರಹದಲ್ಲಿ 350 ಗಂಟೆಗಳ ಆಡಿಯೊ, 250 ಗಂಟೆಗಳ ವಿಡಿಯೊ , ಸುಮಾರು 5,000 ಫೋಟೊಗಳು ಇವೆ. ತುಳು ಜನಪದ ಕಾವ್ಯಗಳ ಬಗೆಗಿನ ನಾಯ್ಕ ಅವರ ವಿದ್ವತ್ತು ವಿಶೇಷವಾದುದು, ಅಸಾಧಾರಣವಾದುದು. ಅವರು ಯಾವತ್ತೂ ಯೋಜನೆಯ ಬರಿಯ ಮಾಹಿತಿದಾರರಾಗಿರಲಿಲ್ಲ. ಸಿರಿ ಅಧ್ಯಯನ ಯೋಜನೆಯ ಸಂಶೋಧನಾ ಸಹಭಾಗಿಯಾಗಿದ್ದರು. ಸಿರಿ ಕಾವ್ಯ ಪಠ್ಯದ ಎರಡು ಸಂಪುಟಗಳ ಹೆಸರು THE SIRI EPIC as performed by Gopala Naika. ಅವರ ಅನುಭವ, ಕಾವ್ಯ ಕಟ್ಟುವ ಪ್ರತಿಭೆ ಮತ್ತು ವಿಶ್ಲೇಷಣಾ ಸಾಮರ್ಥ್ಯಕ್ಕೆ ಹೋಂಕೊ ಮಾರುಹೋಗಿದ್ದರು.

ನಾಯ್ಕ ಅವರು ಸೃಜಿಸಿರುವ ಸಿರಿ ಕಾವ್ಯದ ಎರಡು ಪಠ್ಯಗಳಿವೆ. ಮೊದಲನೆಯದು ಅವರು ಹಾಡಿದ ಪಠ್ಯ. 15,683 ಸಾಲುಗಳಿರುವ ದೀರ್ಘ ಪಠ್ಯ. ಎರಡನೆಯದು ಅವರು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ ಪಠ್ಯ. ಇದು ಹಾಡಿದ ಪಠ್ಯದ ಅರ್ಧದಷ್ಟಿದೆ. ಹಾಡಿದ ಮತ್ತು ಹೇಳಿದ ಎರಡು ಪಠ್ಯಗಳು ನಾಯ್ಕ ಅವರ ಹೆಸರಿನಲ್ಲಿ ಮಾತ್ರ ಇವೆ. ತೌಲನಿಕ ಅಧ್ಯಯನಕ್ಕೆ ಮತ್ತು ಕಾವ್ಯ ನಿರ್ಮಾಣದ ನೆಲೆಗಳನ್ನು ಶೋಧಿಸುವುದಕ್ಕೆ ಅವರ ಈ ಎರಡು ಪಠ್ಯಗಳು ಸಹಾಯಕವಾಗಿವೆ. ಸಿರಿ ಜಾತ್ರೆಯ ಸಂದರ್ಭದಲ್ಲಿ ಹಾಡುವ ಸಿರಿ ಸಂಧಿಯ ಭಾಗ ಬಹಳ ಕಡಿಮೆ. ಸಿರಿ ಸಂಧಿಯ ಸಮಗ್ರ ಪಠ್ಯವನ್ನು ಜಾತ್ರೆಯಲ್ಲಿ ಹಾಡಲು ಸಾಧ್ಯವಿಲ್ಲ. ಅದರ ಅಗತ್ಯವೂ ಅಲ್ಲಿ ಬರುವುದಿಲ್ಲ. ಜಾತ್ರೆಯಲ್ಲಿ ಕುಮಾರ/ ಗಾಯಕನಿಗೆ ಇತರ ಕೆಲಸಗಳು ತುಂಬಾ ಇವೆ. ಕಲಿಕೆಗೆ ಮತ್ತು ದಾಖಲೀಕರಣಕ್ಕೆ ಇತರ ಸಂದರ್ಭಗಳನ್ನು ಕಲ್ಪಿಸಿಕೊಳ್ಳುವುದು ಸರಿ ಎಂಬುದು ಅವರ ಅಭಿಪ್ರಾಯ. ಸಂದರ್ಶನದಲ್ಲಿ ನಾಯ್ಕ ಅವರು ಹಂಚಿಕೊಂಡ ಕೆಲವು ಅಭಿಪ್ರಾಯಗಳು ಇಂತಿವೆ.

‘ನಾನು ನಿಮ್ಮೆದುರಿನಲ್ಲಿ ಸಂಧಿಯನ್ನು ಹಲವು ಬಾರಿ ಹಾಡಿದ್ದೇನೆ. ಹೀಗೆ ಹಾಡಿದಾಗ ಅದು ಒಂದೇ ರೂಪದಲ್ಲಿ ಇರುವುದಿಲ್ಲ. ಕೆಲವು ಅಕ್ಷರಗಳು ಬಿಟ್ಟು ಹೋಗುತ್ತವೆ. ಕೆಲವು ಅಕ್ಷರಗಳು ಸೇರುತ್ತವೆ (ಅಕ್ಷರಗಳು ಅಂದರೆ ಪದಗಳು, ವಾಕ್ಯಗಳು, ವರ್ಣನೆಗಳು). ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಿದಾಗ ಸಿರಿ ಸಂಧಿಯು ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತದೆ. ಸಂಧಿಯನ್ನು ಒಳ್ಳೆಯದು ಕೆಟ್ಟದ್ದು, ದೊಡ್ಡದು ಸಣ್ಣದು ಮಾಡಬಹುದು.’

‘ಬರೆಯುವಾಗ ಮಾತ್ರ ಒಂದು ರೂಪ. ಬಾಯಲ್ಲಿ ಹೇಳುವಾಗ ಒಂದೇ ರೂಪ ಇರಲು ಸಾಧ್ಯವಿಲ್ಲ.’

‘ಕತೆ ಹೇಳುವುದೆಂದರೆ ಅದು ಅರ್ಥದಿಂದ ಅರ್ಥಕ್ಕೆ ಹೋಗುವುದು. ಅಲ್ಲಿ ಅಕ್ಷರಗಳು ಕಡಿಮೆ. ಕತೆ ಸಂಕ್ಷಿಪ್ತವಾಗಿರುತ್ತದೆ. ಸಂಧಿ ವಿಸ್ತಾರವಾಗಿರುತ್ತದೆ. ಕತೆ ಹೇಳುವುದು. ಸಂಧಿ ಸ್ವರ ಎಳೆದು ಹಾಡುವುದು.’

‘ಸಂಧಿಯನ್ನು ಹಾಡುವುದು ಸುಲಭ ಮತ್ತು ಚಂದ. ಹೇಳುವುದು ಕಷ್ಟ ಮತ್ತು ಕಾಯುವ ಕೆಲಸ. ಹಾಡುವುದು ಹಿತ. ಹಾಡುವವರನ್ನು ನೋಡುವಾಗ ಅಯ್ಯೋ ಕಷ್ಟವೆ ಅಂತ ಕಾಣಬಹುದು. ಹಾಡಲು ಒಳ್ಳೆಯ ಸ್ವರ ಬೇಕು. ಹಾಡಿಯೇ ಸಂಧಿಯನ್ನು ಕಲಿಯಬೇಕು, ಕಲಿಸಬೇಕು.‌’

‘ಸಂಧಿಯನ್ನು ಕಟ್ಟುವ ನಿಯಮಗಳನ್ನು ನಾನು ಪಾಲಿಸುತ್ತೇನೆ. ಸಂಧಿಯಲ್ಲಿ ಅನೇಕ ಕಟ್ಟೆಗಳಿವೆ (ಕಟ್ಟೆ ಅಂದರೆ ಘಟನೆಗಳು). ಮಂಚದಲ್ಲಿ ಕುಳಿತು ಎಲೆಅಡಿಕೆ ತಿನ್ನುವುದು, ಗದ್ದೆಗೆ ಹೋಗಿ ಬೇಸಾಯದ ಕೆಲಸ ಮತ್ತು ಭತ್ತದ ಬೆಳೆಯನ್ನು ನೋಡಿ ಬರುವುದು, ಬರಿ ನೆಲದಲ್ಲಿ ಮಲಗಿ ಸಂತಾನದ ಫಲವಿಲ್ಲ ಎಂದು ಕಣ್ಣೀರು ಹರಿಸುವುದು, ಬ್ರಾಹ್ಮಣನ ಸೂಚನೆಯಂತೆ ಆಲಡೆಯನ್ನು ಜೀರ್ಣೋದ್ಧಾರ ಮಾಡುವುದು, ಜಾತ್ರೆಯಲ್ಲಿ ದೊರೆತ ಪ್ರಸಾದದಲ್ಲಿ ಸಿರಿ ಹುಟ್ಟುವುದು... ಇವುಗಳು ಸಿರಿಕತೆಯ ಕಟ್ಟೆಗಳು. ಇವುಗಳ ಪೂರ್ತಿ ವಿವರಗಳನ್ನು ಮನಸ್ಸಿಗೆ ತಂದುಕೊಂಡು ಹಾಡುತ್ತೇನೆ.’

‘ನನ್ನ ವೈಯಕ್ತಿಕ ಅನುಭವಗಳು ನಾನು ಹೇಳುವ ಸಂಧಿಯ ಸ್ವರೂಪವನ್ನು ನಿರ್ಣಯಿಸುತ್ತವೆ. ವೀಳ್ಯದೆಲೆ ಅಡಿಕೆ ತಿನ್ನುವ ನನ್ನ ರೀತಿ ಮತ್ತು ಅನುಭವದ ಮೇಲೆ ಅದನ್ನು ಹೇಳುತ್ತೇನೆ. ಸಂಧಿ ಹೇಳುವವನಿಗೆ ಬೇಸಾಯ, ಮದುವೆ, ಇತರ ಆಚರಣೆಗಳ ಬಗ್ಗೆ ತಿಳಿವಳಿಕೆ ಬೇಕು. ಲೋಕಾನುಭವಗಳನ್ನು ಬಳಸಿಕೊಳ್ಳುವ ಮೇಲೆ ಸಂಧಿಯ ಗಾತ್ರ ಇರುತ್ತದೆ. ಸಂಧಿಯ ಸಂಗತಿಗಳನ್ನು ವಿವರಿಸುವ, ಕಾರಣಗಳನ್ನು ನೀಡಿ ಉತ್ತರಿಸಲು ಗೊತ್ತಿರಬೇಕು. ನಾನು ಕಟ್ಟಿದ ಸಿರಿಸಂಧಿಯನ್ನು ನಾನು ವಿಮರ್ಶಿಸುತ್ತೇನೆ. ಒಂದು ತೊರೆಗೆ ಇನ್ನೊಂದು ತೊರೆ ಬಂದು ಸೇರುವಂತೆ ಹಲವು ಹೊಸ ಸಂಗತಿಗಳು ಸೇರಿ ಸಂಧಿಯಾಗುತ್ತದೆ.’

‘ಸಿರಿ ಸಂಧಿ ನನಗೆ ಬಾಯಿಪಾಠ ಬರುವುದಿಲ್ಲ. ಕತೆಯ ಒಂದು ಕಟ್ಟೆ ಸಿಕ್ಕಿದರೆ ವಿವರಗಳು ನೆನಪಾಗುತ್ತಾ ಹೋಗುತ್ತವೆ. ನಾನು ಪ್ರತಿ ಬಾರಿಯೂ ಸಂಧಿಯನ್ನು ಹೊಸದಾಗಿಯೇ ಹಾಡುತ್ತೇನೆ’ ನಾಯ್ಕರ ಈ ಮಾತುಗಳು ಜನಪದ ಮಹಾಕಾವ್ಯದ ನಿರ್ಮಾಣ ಮತ್ತು ಪ್ರಸ್ತುತಿಯ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡುತ್ತವೆ.

ನೋವಿಗೆ ಮಿಡಿವ ಕಾವ್ಯ

ನಾಯ್ಕ ಅವರ ಸಿರಿಸಂಧಿ ಹಲವು ದೃಷ್ಟಿಗಳಿಂದ ನಮಗೆ ಮುಖ್ಯವಾಗುತ್ತದೆ. ಅವರ ಸಿರಿಸಂಧಿ ಈವರೆಗೆ ಪ್ರಕಟವಾಗಿರುವ ಸಿರಿ ಕಾವ್ಯಗಳಲ್ಲಿಯೇ ಹೆಚ್ಚು ದೀರ್ಘವಾಗಿದೆ. ಇದರಲ್ಲಿ ಮೂರು ತಲೆಮಾರುಗಳ ಕತೆಯನ್ನು ಹೆಣೆದಿದ್ದಾರೆ. ಕಾವ್ಯ ಕಟ್ಟುವ ಕಲೆ ಅವರಿಗೆ ಸಿದ್ಧಿಸಿದೆ. ತುಳುವಿನ ಜನಪದ ಮಹಾಕಾವ್ಯಗಳ ನಿರ್ಮಾಣದ ಪ್ರತಿಭೆ ಅವರಲ್ಲಿದೆ. ಬಿರ್ಮುಪಾಲವ, ಸಿರಿ, ಕುಮಾರ, ಸೊನ್ನೆ, ಅಬ್ಬಯ -ದಾರಯ, ಕಾಂತುಪೂಂಜ, ದುರ್ಗಲ್ಲ ಪೆರ್ಗಡೆ, ಕೊಡ್ಸರಾಳ್ವ ಹೀಗೆ ಅನೇಕ ಪಾತ್ರಗಳ ಗುಣ ಸ್ವಭಾವಗಳನ್ನು ಚಿತ್ರಿಸಿದ್ದಾರೆ. ಕಾವ್ಯಕ್ಕೆ ಬಹು ಮುಖ್ಯವಾಗಿರುವ ಸಂಘರ್ಷದ ನೆಲೆಗಳನ್ನು ರೂಪಿಸಿ ಕಾವ್ಯಕುತೂಹಲವನ್ನು ಕಾಯ್ದುಕೊಂಡಿದ್ದಾರೆ.

ಸಿರಿಯ ಮೂಲಕ ಪುರುಷ ಪ್ರಭುತ್ವ ತಂದೊಡ್ಡುವ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಹೋರಾಡುವ ತುಳು ಮಹಿಳೆಯರ ಕಷ್ಟ ತುಮುಲಗಳನ್ನು ಚಿತ್ರಿಸಿದ್ದಾರೆ. ಅವರ ಸಿರಿಕಾವ್ಯ ಸಾಮಾಜಿಕ ಹೋರಾಟದ ಕಥನವಾಗಿದೆ. ಇದು ಹತಾಶೆ ಮತ್ತು ನೋವಿನ ಕಾವ್ಯ. ದೈವಿಕವಾಗಿ ಹುಟ್ಟಿದ ಸಿರಿಯು ನಡೆಸುವ ಪ್ರತಿಭಟನೆಗಳ ಮೂಲಕ ಅವಳ ಸತ್ವಪರೀಕ್ಷೆ ನಡೆಯುತ್ತದೆ. ಮಹಿಳೆಯರ ದುಃಖ ಮತ್ತು ಕಷ್ಟಗಳ ಕತೆಯು ಸಂಧಿ ಮತ್ತು ಜಾತ್ರೆ, ಅಂದರೆ ಪುರಾಣದ ಸಹಯೋಗದಲ್ಲಿ ವಾಸ್ವವ ಜಗತ್ತಿನಲ್ಲಿ ಪ್ರಕಟವಾಗುವುದು ಇವರ ಕಾವ್ಯದ ವೈಶಿಷ್ಟ್ಯವಾಗಿದೆ.

ನಾಯ್ಕರಿಗೆ ಈಗ ವಯಸ್ಸಾಗಿದೆ. ತೊಂಬತ್ತರ ಸನಿಹದಲ್ಲಿದ್ದಾರೆ. ಅರುವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅವರು ಉಜಿರೆಯ ನಿಡ್ಗಲ್ ಸಿರಿ ಜಾತ್ರೆಯಲ್ಲಿ ಅವರೇ ಕಟ್ಟಿ ಮುನ್ನಡೆಸಿದ ಸಿರಿ ಮಹಿಳೆಯರ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಕೌಟುಂಬಿಕ ನೆಲೆಯ ಮಾರ್ಗದರ್ಶಕರು. ಜಾಗತಿಕ ಜಾನಪದ ಸಮಾವೇಶಗಳಲ್ಲಿ ಜನಪದ ಮಹಾಕಾವ್ಯಗಳ ಕುರಿತಂತೆ ನಡೆಯುವ ಶೈಕ್ಷಣಿಕ ಚರ್ಚೆಗಳಲ್ಲಿ ನಾಯ್ಕರ ಹೆಸರು ಮತ್ತು ಚಿಂತನೆಗಳು ಪ್ರಸ್ತಾವಗೊಳ್ಳುತ್ತಿರುವುದು ಅವರ ಹಿರಿಮೆಗೆ ಸಾಕ್ಷಿ. ತುಳುನಾಡಿಗೆ ಅಭಿಮಾನ ಮತ್ತು ಗೌರವದ ವಿಷಯ. ಕರ್ನಾಟಕದಲ್ಲಿ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯ ಮಾನ್ಯತೆ ಸಿಗುವಂತಾಗಲಿ ಎಂಬ ಬೇಡಿಕೆಗೆ ‘ಕರ್ನಾಟಕದ ತುಳು ಸಿರಿಕಾವ್ಯ’ ಇನ್ನೊಂದು ಸಮರ್ಥನೆಯಾಗಿ ನಿಲ್ಲಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.