ADVERTISEMENT

ಬಿಸ್ಕತ್ತಿನ ಕತೆ: ಊರೋರ್‌ ಕಣ್ಣು ಮಾರಿ ಮ್ಯಾಲೆ!

ಸುನೀಲ್ ಬಾರ್ಕೂರ್
Published 24 ಜುಲೈ 2021, 19:30 IST
Last Updated 24 ಜುಲೈ 2021, 19:30 IST
ರಷ್ಯಾದ ರಾಜಕುಮಾರಿ ಮಾರಿಯಾ ಅಲೆಕ್ಸಾಂಡ್ರೋವ್ನಾ
ರಷ್ಯಾದ ರಾಜಕುಮಾರಿ ಮಾರಿಯಾ ಅಲೆಕ್ಸಾಂಡ್ರೋವ್ನಾ   

ಅದು 1874ನೆಯ ಇಸವಿ. ಬ್ರಿಟನ್ನಿನ ಜನತೆ ಅಲ್ಲಿಯ ರಾಜಮನೆತನದ ಅತ್ಯಂತ ಅದ್ಧೂರಿ ಮದುವೆಯೊಂದನ್ನು ಸಾಕ್ಷೀಕರಿಸುತ್ತಿತ್ತು. ವಿಕ್ಟೋರಿಯಾ ರಾಣಿಯ ದ್ವಿತೀಯ ಪುತ್ರ, ಎಡಿನ್‌ಬರೊದ ಡ್ಯೂಕ್‌ ಆಗಿದ್ದ ಆಲ್ಫ್ರೆಡ್, ರಷ್ಯಾದ ರಾಜಕುಮಾರಿ ಮಾರಿಯಾ ಅಲೆಕ್ಸಾಂಡ್ರೋವ್ನಾ ಅವರನ್ನು ವರಿಸಿದ ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿಶ್ವದ ಎಲ್ಲೆಡೆಯಿಂದ ಅತಿಗಣ್ಯರು ಅಲ್ಲಿ ನೆರೆದಿದ್ದರು. ರಾಜಮನೆತನದ ಮದುವೆಯೆಂದರೆ ಕೇಳಬೇಕೇ? ಒಂದರ್ಥದಲ್ಲಿ ರಾಷ್ಟ್ರೀಯ ಉತ್ಸವದಂತಿದ್ದ ಮದುವೆಗೆ ನವವಧುವನ್ನು ಸ್ವಾಗತಿಸಲು ರಸ್ತೆಗಳಿಗೆಲ್ಲ ಸುಣ್ಣಬಣ್ಣ ಬಳಿಯಲಾಗಿತ್ತು. ಜನ ತಮ್ಮ ಮನೆಯಲ್ಲಿ ಸಿಹಿತಿಂಡಿಗಳನ್ನು ಮಾಡಿ ಸಂಭ್ರಮಿಸುತ್ತಿದ್ದರು.

ಲಂಡನ್ನಿನ ಪೀಕ್ ಫ್ರಿಯಾನ್ಸ್‌ ಎಂಬ ಬೇಕರಿಯ ಮುಖ್ಯ ಶೆಫ್ ಒಬ್ಬ ವಿಶೇಷ ಬಿಸ್ಕತ್ತೊಂದನ್ನು ತಯಾರಿಸಿದ. ಗೋಧಿಹಿಟ್ಟು, ಸ್ವಲ್ಪ ಸಕ್ಕರೆಯ ಪಾಕ, ತುಸು ವೆನಿಲಾ ಸೇರಿಸಿ ತಯಾರಿಸಲಾದ ಆ ಬಿಸ್ಕತ್ತು ಸಾಂಪ್ರದಾಯಿಕ ಬಿಸ್ಕತ್ತಿನಂತಿರದೇ ಚಪ್ಪಟೆಯಾಗಿ ಗೋಳಾಕಾರದಲ್ಲಿದ್ದು ತನ್ನ ಪರಿಧಿಯಾದ್ಯಂತ ಗಡಿಯಾರದ ಸೆಕೆಂಡಿನ ಗುರುತುಗಳಂತೆಯೇ ಸಣ್ಣ ಪಟ್ಟಿಗಳನ್ನು ಹೊಂದಿತ್ತು. ಮಧ್ಯ ಮೇಲ್ಮೈಯಲ್ಲಿ ತೂತುಗಳಿದ್ದು ಮಧ್ಯಭಾಗದಲ್ಲಿ ಮಾರಿಯಾ ಎಂದು ವಧುವಿನ ಹೆಸರನ್ನು ಕೆತ್ತಿ ಈ ಬಿಸ್ಕತ್ತನ್ನು ರೂಪಿಸಲಾಗಿತ್ತು. ಬೇಕರಿಯವರು ರಾಜಮನೆತನದವರಿಗೂ ಈ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ಸಮರ್ಪಿಸಿದರು.

ಬ್ರಿಟನ್ನಿನ ರಾಜಮನೆತನದ ಅತ್ಯಂತ ಚಿರಸ್ಮರಣೀಯ ಗಳಿಗೆಯೊಂದರ ಸ್ಮರಣಿಕೆಯೆಂದು ಬಿಂಬಿಸಲ್ಪಟ್ಟ ಆ ಬಿಸ್ಕತ್ತು, ಇದೇ ಕಾರಣಕ್ಕೆ ದೇಶದಾದ್ಯಂತ ಹವಾ ಎಬ್ಬಿಸಿತು. ರಾಜಮನೆತನದ ಮದುವೆಗಿಂತ ಹೆಚ್ಚಾಗಿ ಈ ಬಿಸ್ಕತ್ತು ಸದ್ದು ಮಾಡಿತು. ಒಳ್ಳೆಯ ಮಾರ್ಕೆಟಿಂಗ್ ತಂತ್ರವನ್ನು ಬಳಸಿ ಚಾಣಾಕ್ಷತೆಯನ್ನು ಮೆರೆದ ಪೀಕ್ ಫ್ರಿಯಾನ್ಸ್‌ ಬೇಕರಿ ಯಶ ಸಾಧಿಸಿತ್ತು. ಕುತೂಹಲಕ್ಕಾಗಿ ಬೇಕರಿಗೆ ಭೇಟಿ ನೀಡಿ ಮಾರಿಯಾ ಬಿಸ್ಕತ್ತನ್ನು ಸವಿದ ಜನ ಮತ್ತೆ ಮತ್ತೆ ಬರತೊಡಗಿದರು. ದಿನದಿಂದ ದಿನಕ್ಕೆ ಈ ಬಿಸ್ಕತ್ತು ಜನಪ್ರಿಯವಾಗುವುದನ್ನು ಗಮನಿಸಿದ ಬ್ರಿಟನ್ನಿನ ದೊಡ್ಡ ಬಿಸ್ಕತ್ತು ತಯಾರಕ ಕಂಪನಿಗಳು ಈ ವಿನ್ಯಾಸವನ್ನು ಕಾಪಿ ಹೊಡೆದು ತಮ್ಮ ಕಂಪನಿಯ ಬ್ರ್ಯಾಂಡ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಪಡೆದವು. ಹೀಗೆ ನಕಲಿಸುವಾಗ ಮಾರಿಯಾ ಎಂಬ ಹೆಸರು ಕೊಂಚ ಮಾರ್ಪಾಡುಗೊಂಡು ಮಾರಿ ಎಂದಾಯಿತು.

ADVERTISEMENT

ವಿಷಯ ಅಷ್ಟಕ್ಕೇ ನಿಲ್ಲಲಿಲ್ಲ. ಬ್ರಿಟನ್ನಿನ ಬಿಸ್ಕತ್ತು ತಯಾರಕರು ಈ ಮಾರಿ ಬಿಸ್ಕತ್ತನ್ನು ಹೊರ ದೇಶಗಳಿಗೆ ರಫ್ತು ಮಾಡಲೂ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾದರು. ಆದರೆ, ಈ ಬಿಸ್ಕತ್ತುಗಳು ತೆಳುವಾಗಿದ್ದು ಹೆಚ್ಚು ಒಣಗಿರುವುದರಿಂದ ಸಾಗಾಣಿಕೆಯಲ್ಲಿ ಚೂರಾಗುವ ಮತ್ತು ಹೊರಗಿನ ವಾತಾವರಣದ ತೇವಾಂಶದ ಸಂಪರ್ಕಕ್ಕೆ ಬಂದರೆ ತನ್ನ ಕುರುಕಲುತನವನ್ನು ಕಳೆದುಕೊಳ್ಳುವ ಅಪಾಯವಿತ್ತು. ಆ ಕಾರಣಕ್ಕೆ ಅವುಗಳಿಗಾಗಿಯೇ ವಿಶೇಷ ಗಾಳಿಯಾಡದ ಡಬ್ಬಗಳನ್ನು ತಯಾರಿಸಿ ಹಡಗು ಮತ್ತು ರೈಲಿನ ಮೂಲಕ ರಫ್ತು ಮಾಡಲಾಯಿತು.

ಹೀಗೆ ವಿದೇಶಗಳಿಗೆ ರಫ್ತುಗೊಂಡ ಮಾರಿ ಬಿಸ್ಕತ್ತುಗಳು ಅಲ್ಲಿಯೂ ಜನಪ್ರಿಯತೆ ಗಳಿಸಿ ಸ್ಥಳೀಯವಾಗಿ ತಯಾರಾಗತೊಡಗಿದವು. ಕಾಲಕ್ರಮೇಣ ದೇಶದಿಂದ ದೇಶಕ್ಕೆ ತನ್ನ ರುಚಿಯ ಜಾದೂ ಮಾಡುತ್ತ, ಸ್ಥಳೀಯ ಬಿಸ್ಕತ್ತು ತಯಾರಕರ ವ್ಯಾಪಾರ ವಹಿವಾಟನ್ನು ಹೆಚ್ಚಿಸಿದ ಜಗತ್ತಿನ ಅತ್ಯಂತ ಜನಪ್ರಿಯ ಬಿಸ್ಕತ್ತುಗಳ ವಿಧಗಳಲ್ಲೊಂದೆಂಬ ಖ್ಯಾತಿಗಳಿಸಿತು.

ಮಾರಿ ಬಿಸ್ಕತ್ತುಗಳ ಜನಪ್ರಿಯತೆಯ ಹಿಂದೆ ಹಲವು ಕಾರಣಗಳಿವೆ. ಈ ಬಿಸ್ಕತ್ತು ಪರಿಚಯವಾದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಎರಡು ತರಹದ ಬಿಸ್ಕತ್ತುಗಳು ತಯಾರಾಗುತ್ತಿದ್ದವು. ಒಂದೆರಡು ದಿನಗಳಲ್ಲಿಯೇ ಕೆಡುವ, ಬೇಕರಿಯಲ್ಲಿ ದೊರಕುವ ಬಿಸ್ಕತ್ತುಗಳು ಒಂದೆಡೆಯಾದರೆ, ಎರಡನೆಯವು ಹಡಗುಗಳಲ್ಲಿ ಬಳಕೆಯಾಗುವಂಥವುಗಳು. ಈ ಎರಡನೆಯ ವಿಧದ ಬಿಸ್ಕತ್ತುಗಳು ಹಡಗುಗಳಲ್ಲಿ ದೂರ ಪಯಣಕ್ಕೆ ಸಾಗುವ ಕಾರ್ಮಿಕರಿಗಾಗಿಯೇ ತಯಾರಿಸಲ್ಪಡುತ್ತಿದ್ದು ರುಚಿಯಲ್ಲಿ ಸಪ್ಪೆಯಾಗಿರುತ್ತಿದ್ದವು. ಸಂಗ್ರಹಣೆಯ ಅನುಕೂಲ ಮತ್ತು ಕಡಿಮೆ ವೆಚ್ಚದ ದೃಷ್ಟಿಯಿಂದಷ್ಟೇ ತಯಾರಿಸಲ್ಪಡುತ್ತಿದ್ದ ಇವುಗಳಿಗೆ ಹೊರಗಡೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಲ್ಲ.

ಅದು ಔದ್ಯೋಗಿಕ ಕ್ರಾಂತಿಯ ಸಮಯ. ಜನರ ಕೆಲಸ ಮಾಡುವ ಸಮಯ ಬದಲಾಗಿ ಕೆಲಸದ ಮಧ್ಯೆ ಚಹಾ ವಿರಾಮ ತೆಗೆದುಕೊಳ್ಳುವ ಹೊಸ ಪ್ರವೃತ್ತಿ ಹುಟ್ಟಿಕೊಂಡಿತು. ಈ ಚಹಾದ ಜೊತೆಗೆ ಕುರುಕಲು ತಿಂಡಿಗಳನ್ನು ತಿನ್ನುವ ಹೊಸ ಹವ್ಯಾಸ ಕೂಡ ಜನಪ್ರಿಯವಾಗುತ್ತ ಬಂದು, ಕುರುಕಲುಗಳ ತಿಂಡಿಗಳ ಪಟ್ಟಿಯಲ್ಲಿ ಬಿಸ್ಕತ್ತು ಮುಂಚೂಣಿಯಲ್ಲಿತ್ತು. ಈ ಸಮಯದಲ್ಲಿ ರಾಣಿಯ ಮದುವೆಗೆಂದು ತಯಾರಾದ ವಿಶೇಷ ಬಿಸ್ಕತ್ತೆನ್ನುವ ಹಣೆಪಟ್ಟಿ ಹೊತ್ತುಕೊಂಡು ಬಂದ ಈ ಮಾರಿ ಜನರ ಗಮನ ಸೆಳೆಯಿತು. ಇನ್ನು ಗೋಧಿಯನ್ನು ಹೆಚ್ಚು ಬೆಳೆದು ಅದನ್ನು ರಫ್ತುಮಾಡಲು ಪರದಾಡುತ್ತಿದ್ದ ಸ್ಪೇನ್‌ನಂತಹ ದೇಶಗಳಿಗೆ ಗೋಧಿ ಹಿಟ್ಟನ್ನೇ ಪ್ರಮುಖವಾಗಿ ಬಳಸಿ ತಯಾರಾಗುವ ಈ ಬಿಸ್ಕತ್ತು, ಗೋಧಿಯನ್ನು ಹೊಸರೂಪದಲ್ಲಿ ಸ್ಥಳೀಯ ಬಳಸುವ ಜೊತೆಜೊತೆಗೆ ರಫ್ತನ್ನೂ ಮಾಡಲು ಹೊಸ ದಾರಿ ತೋರಿತು.

ಕಡಿಮೆ ಪ್ರಮಾಣದ ಸಕ್ಕರೆಯ ಅಂಶದ ಕಾರಣಕ್ಕೆ ಡಯಟ್ ಬಗ್ಗೆ ಹೆಚ್ಚು ಯೋಚಿಸುವ ಜನರಿಗೆ ಹೆಚ್ಚು ಆಪ್ತವಾಗಿರುವ ಈ ಮಾರಿ ಬಿಸ್ಕತ್ತುಗಳನ್ನು ಕೆಲವೆಡೆ ಚೀಸ್, ಕ್ರೀಮ್‌ಗಳ ಫಿಲ್ಲಿಂಗ್ಸ್‌ ಬಳಸಿಯೂ ಸೇವಿಸುವುದುಂಟು. ಮಾರಿ ಬಿಸ್ಕತ್ತಿನ ಹಿಟ್ಟನ್ನು ಬಳಸಿ ಫುಡ್ಡಿಂಗನ್ನೂ ತಯಾರಿಸಲಾಗುತ್ತದೆ.

ವಿಪರ್ಯಾಸವೆಂದರೆ ಜಗತ್ತಿನಾದ್ಯಂತ ಬಿಸ್ಕತ್ತು ಪ್ರೇಮಿಗಳಿಗೆ ಅವರ ಅರಿವಿಲ್ಲದಂತೆಯೇ ತನ್ನ ಹೆಸರಿನ ಬಲದಿಂದಲೇ ಖ್ಯಾತಿಗಳಿಸಿ ಹೊಟ್ಟೆ ಪೂಜೆಯ ಸಾಧನವಾಗಿರುವ ಈ ಬಿಸ್ಕತ್ತಿನ ಮೂಲ ಮಹಿಳೆ ಮಾರಿಯಾ ಅಲೆಕ್ಸಾಂಡ್ರೋವ್ನಾ ಜೀವನ ಮಾತ್ರ ಅಷ್ಟೇನೂ ಸಿಹಿಯಾಗಿರಲಿಲ್ಲ. ರಷ್ಯಾದ ಕ್ರಾಂತಿಯಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆಕೆ ನಂತರ ಮೊದಲ ವಿಶ್ವಯುದ್ಧದಲ್ಲಿ ತನ್ನ ಗಂಡ ಅರಸೊತ್ತಿಗೆಯನ್ನೂ ಕಳೆದುಕೊಳ್ಳುವ ದುರಂತಕ್ಕೆ ಸಾಕ್ಷಿಯಾದಳು. ತನ್ನ ಕೊನೆಯ ದಿನಗಳನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಹೆಚ್ಚುಕಡಿಮೆ ಒಂಟಿಯಾಗಿಯೇ ಕಳೆದು 1920ರಲ್ಲಿ ಸಾವನ್ನಪ್ಪಿದಾಗ ಅದು ಎಲ್ಲೂ ಸುದ್ದಿಯಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.