ADVERTISEMENT

ವಿಸ್ಮೃತಿ ನಿವಾರಕ; ಸ್ವಾಮಿ ವಿವೇಕಾನಂದ

ಪಂಚಾಂಗದ ಪ್ರಕಾರ ಇಂದು ಸ್ವಾಮಿ ವಿವೇಕಾನಂದರ ಜಯಂತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 3:07 IST
Last Updated 4 ಫೆಬ್ರುವರಿ 2021, 3:07 IST
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ   

ಸ್ವಾಮಿ ವಿವೇಕಾನಂದರ ಮಹಾನ್ ಕೊಡುಗೆ ಏನೆಂದರೆ ಸುಪ್ರಸಿದ್ಧ ನೋಬೆಲ್ ವಿಜೇತ ರೋಮೈರೋಲಾ ಹೇಳಿದಂತೆ ಜೀವಚ್ಛವವಾಗಿದ್ದ ಭಾರತದ ನರ-ನಾಡಿಗಳಲ್ಲಿ ಪ್ರಾಣಸಂಚಾರವಾಗುವಂತೆ ಮಾಡಿದ್ದು...ಪಂಚಾಂಗದ ಪ್ರಕಾರ ಇಂದು ಸ್ವಾಮಿ ವಿವೇಕಾನಂದರ ಜಯಂತಿ.

ಹಲವಾರು ಸಲ ಶ್ರೀರಾಮಕೃಷ್ಣರು ಸುತ್ತ ನೆರೆದಿದ್ದ ಭಕ್ತರ ಮುಂದೆ ಹೇಳುತ್ತಿದ್ದುದುಂಟು, ‘ನರೇಂದ್ರ ಜಗತ್ತಿಗೆ ಬೋಧಿಸಬೇಕಾಗಿದೆ ಜಗನ್ಮಾತೆ ಅವನಿಗೆ ಲೈಸನ್ಸ್ ಕೊಟ್ಟು ಕಳಿಸಿದ್ದಾಳೆ, ಯಾರೆಂದರೆ ಅವರು ಬೋಧಿಸಿದರೆ ಯಾರು ಕೇಳುತ್ತಾರೆ? ತನ್ನ ಆಧ್ಯಾತ್ಮಿಕ ಮತ್ತು ಬೌದ್ಧಿಕ ಶಕ್ತಿಗಳಿಂದ ಪ್ರಪಂಚವನ್ನೇ ಅಲುಗಾಡಿಸಿಬಿಡುತ್ತಾನೆ ಅವನು. ಈ ಹಿಂದೆಯೂ ಅವಳು ಹಲವರಿಗೆ ಲೈಸನ್ಸ್ ಕೊಟ್ಟಿದ್ದುದುಂಟು; ಭಗವಾನ್ ಶುಕ, ನಾರದ, ಶ್ರೀಶಂಕರಾಚಾರ್ಯರು ಇತ್ಯಾದಿ ಜನರಿಗೆ’.

ಭಕ್ತಜನರು ಎಷ್ಟು ಮಾತ್ರ ಈ ಮಾತುಗಳನ್ನು ನಂಬಿದರೋ ದೇವರೇ ಬಲ್ಲ. ತನ್ನ ನೆಚ್ಚಿನ ಶಿಷ್ಯನ ಬಗ್ಗೆ ಗುರು, ತನ್ನ ಮಗನ ಬಗ್ಗೆ ತಂದೆ ಅಭಿಮಾನದ ಆಧಿಕ್ಯದಲ್ಲಿ ಹೀಗೆಲ್ಲಾ ಹೇಳುವುದುಂಟು ಎಂದು ಭಾವಿಸಿರಲಿಕ್ಕೂ ಸಾಕು ಅಥವಾ ತಮ್ಮ ಶ್ರದ್ಧೇಯ ಗುರುಗಳ ಮಾತನ್ನು ಒಪ್ಪಿ ಒಳಗೊಳಗೇ ಆನಂದ ಆಶ್ಚರ್ಯಗಳನ್ನು ಅನುಭವಿಸಿದ್ದರೂ ಇರಬಹುದು. ಆದರೆ ಸ್ವಯಂ ನರೇಂದ್ರನೇ ಈ ಮಾತುಗಳನ್ನು ಬಹುಕಾಲ ಒಪ್ಪಿಕೊಂಡಿರಲಿಲ್ಲ; ನಂಬಿರಲೂ ಇಲ್ಲ. ಒಮ್ಮೆಯಂತೂ ಇದರ ಬಗ್ಗೆ ಶ್ರೀರಾಮಕೃಷ್ಣರೊಡನೆ ಪ್ರತಿಭಟನೆಗೇ ಇಳಿದಿದ್ದ.

ADVERTISEMENT

ಬ್ರಹ್ಮಸಮಾಜದ ಮುಖ್ಯಸ್ಥ ಕೇಶವಚಂದ್ರಸೇನ್ ತನ್ನ ಒಡನಾಡಿಗಳನೊಡಗೂಡಿ ಶ್ರೀರಾಮಕೃಷ್ಣರ ದರ್ಶನಕ್ಕೆ ಬಂದಿದ್ದ. ಸಮಯ ಸಿಕ್ಕಿದಾಗೆಲ್ಲಾ ಅವನು ಹಾಗೆ ಮಾಡುವುದಿತ್ತು. ನರೇಂದ್ರನೂ ಅಲ್ಲಿಯೇ ಇದ್ದ. ಅವನೂ ಬ್ರಹ್ಮಸಮಾಜದ ಅನುಯಾಯಿಯೇ, ಮಾತಿನ ನಡುವೆ ಶ್ರೀರಾಮಕೃಷ್ಣರು ಒಮ್ಮೆ ಕೇಶವನ ಕಡೆ ಮತ್ತೋಮ್ಮೆ ನರೇಂದ್ರನ ಕಡೆ ದಿಟ್ಟಿಸಿ ನೋಡಿತ್ತಾ ‘ಆಹಾ!! ಎಂಥ ದೃಶ್ಯ ಕಂಡೆ! ಕೇಶವನಲ್ಲಿ ಶಕ್ತಿಯ ಒಂದು ಅಂಶ ಸಮೃದ್ಧವಾಗಿದೆ; ಅಷ್ಟರಿಂದಲೇ ಅವನು ಜಗತ್ಪ್ರಸಿದ್ಧನಾಗಿಬಿಟ್ಟಿದ್ದಾನೆ. ಆದರೆ ನರೇಂದ್ರನಲ್ಲಿ ಅಂತಹ ಹದಿನೆಂಟು ಅಂಶಗಳು ಪರಿಪೂರ್ಣವಾಗಿರುವುದನ್ನು ನಾನೀಗ ಕಂಡೆ! ಕೇಶವ-ವಿಜಯಕೃಷ್ಣರಲ್ಲಿ ಜ್ಞಾನವು ಹಣತೆಯ ಹಾಗೆ ಉರಿಯುತ್ತಿದ್ದರೆ, ನರೇಂದ್ರನಲ್ಲಿ ಸ್ವಯಂ ಜ್ಞಾನಸೂರ್ಯನೇ ಬೆಳಗುತ್ತಿದ್ದಾನೆ; ಅದರ ಪ್ರಖರ ಪ್ರಕಾಶವು ಅಜ್ಞಾನ-ಮೋಹಗಳನ್ನು ಸುಟ್ಟು ಹಾಕುತ್ತದೆ!’ ಅಂದುಬಿಟ್ಟರು.

ಕೇಶವನೇನೂ ಸಾಮಾನ್ಯನಾಗಿರಲಿಲ್ಲ, ಅಂದಿನ Young indiaದ ಆರಾಧ್ಯದೇವತೆ. ಇಂಗ್ಲಿಷ್ ಮತ್ತು ಬಂಗಾಳಿಯಲ್ಲಿನ ಅವನ ಉಪನ್ಯಾಸಗಳಿಗೆ ಸಾವಿರಾರು ಜನ ಮಂತ್ರಮುಗ್ಧರಾಗುತ್ತಿದ್ದರು. ಅಂದಿನ ಬೌದ್ಧಿಕವಲಯಗಳಲ್ಲಿ ತನ್ನ ಪ್ರಖರ ಚಿಂತನೆಗಳಿಂದ ವಿದ್ಯುತ್‍ಸಂಚಾರ ಮಾಡಿಸುತ್ತಿದ್ದವನು ಅವನೇ. ಥಾಮಸ್ ಆಳ್ವ ಎಡಿಸನ್ ಗ್ರಾಮಾಫೋನ್ ಕಂಡು ಹಿಡಿದಾಗ ಅದರಲ್ಲಿ ಮೊಟ್ಟ ಮೊದಲ ಬಾರಿಗೆ ಮುದ್ರಿಸಿಕೊಂಡಿದ್ದ ಧ್ವನಿ ಯಾರದಾಗಿತ್ತೋ ಅಂಥ ವಿದ್ವನ್ಮಣಿ ಮಾಕ್ಸ್‌ಮುಲ್ಲರ್‌ನಿಂದಲೇ ಗೌರವಕ್ಕೊಳಗಾಗಿದ್ದವನು ಇವನು. ಅಷ್ಟೇಕೆ! ಲಂಡನ್ನ್‍ನಲ್ಲಿನ ಅವನ ಬೈಬಲ್ ವ್ಯಾಖ್ಯಾನಗಳಿಗೆ ರಾಣಿ ವಿಕ್ಟೋರಿಯಾ ಎಲ್ಲರಂತೆ ವಿನೀತಳಾಗಿ ಕೈಜೋಡಿಸಿ ಕೇಳಿಸಿಕೊಳ್ಳುತ್ತಾ ಆನಂದವನ್ನು ಸವಿಯುತ್ತಿದ್ದಳು. ಆದರೆ ನರೇಂದ್ರನೋ ಇನ್ನೂ ಒಬ್ಬ ಕಾಲೇಜ್ ವಿದ್ಯಾರ್ಥಿ, ಶ್ರೀರಾಮಕೃಷ್ಣರ ಮಾತುಗಳನ್ನು ಕೇಳಿ ‘ಇದೇನು ಮಹಾಶಯರೇ! ನೀವೇನು ಹೇಳುತ್ತಿರುವಿರಿ! ಇದನ್ನು ಕೇಳಿದರೆ ಜನ ನಿಮ್ಮನ್ನು ಹುಚ್ಚ ಎಂದಾರು ಜಗತ್ಪ್ರಸಿದ್ಧರಾದ ಕೇಶವಚಂದ್ರಸೇನ್‍ರೆಲ್ಲಿ ಸಾಮಾನ್ಯ ವಿದ್ಯಾರ್ಥಿಯಾದ ನಾನೆಲ್ಲಿ’ ಎಂದು ಹೇಳಿಯೇ ಬಿಟ್ಟ.

ಶ್ರೀರಾಮಕೃಷ್ಣರ ಉತ್ತರ ಅವರ ಸ್ಥಾನಕ್ಕೆ ತಕ್ಕಂತೆಯೇ ಇತ್ತು. ‘ಮಗು, ನಾನು ತಾನೇ ಏನು ಮಾಡಲಿ? ನಾನಾಗಿಯೇ ಹಾಗೆ ಹೇಳಿದೆ ಎಂದು ತಿಳಿದೆಯಾ? ಜಗನ್ಮಾತೆಯೇ ನನಗೆ ಹಾಗೆಂದು ತೋರಿಸಿಕೊಟ್ಟಳು ಮತ್ತು ಆಕೆ ಎಂದಿಗೂ ಸುಳ್ಳುಸುಳ್ಳನ್ನು ತೋರಿಸಿಲ್ಲ’.

ದೇವಮಾನವನ ದಿವ್ಯವಾಣಿ ಸದ್ದಿಲ್ಲದೇ ಕೆಲಸ ಮಾಡತೊಡಗಿತ್ತು. ಜಗನ್ಮಾತೆಯ ಲೈಸನ್ಸ್ ಪಡೆದ, ಜ್ಞಾನಸೋರ್ಯನನ್ನೇ ಧರಿಸಿದ ವ್ಯಕ್ತಿಯ ಲಕ್ಷಣಗಳು ದಿನೇದಿನೇ ನರೇಂದ್ರನಲ್ಲಿ ಸ್ಪಷ್ಟವಾಗಿ ಗೋಚರಿಸತೊಡಗಿದವು. ಪಾಶ್ಚಾತ್ಯ ಪ್ರಪಂಚದ ದಿಗ್ಗಜಗಳೆನಿಸಿದ್ದ ಹ್ಯೂಮ್, ಕ್ಯಾಂಟ್, ಮಿಲ್ಲ್ ಮತ್ತು ಹೆಗೆಲ್‍ರ ತತ್ವಶಾಸ್ತ್ರಗಳು, ಮಿಲ್ಟನ್, ವಡ್ಸ್‍ವರ್ತ್, ಶೇಕ್‌ಸ್ಪಿಯರ್‌ನ ಕೃತಿಗಳು, ಗ್ರೀಕ್, ರೋಮ್, ಪರ್ಶಿಯನ್ ಇತಿಹಾಸಗಳು, ಅಷ್ಟೇಕೆ! ಇಡೀ ಪಾಶ್ಚಾತ್ಯ ಜಗತ್ತಿನ ಸಂಪೂರ್ಣ ಚಿಂತನವಲಯ ತನ್ನನ್ನು ವಿನೀತಭಾವದಿಂದ ನರೇಂದ್ರನ ಒಪ್ಪಿಗೆಯ ಮುದ್ರೆಗೆ ಸಮರ್ಪಿತಗೊಂಡಿದ್ದವೋ ಎನ್ನುವಷ್ಟರ ಮಟ್ಟಿಗೆ ಅವನು ಅವುಗಳನ್ನು ನಿಷ್ಕರ್ಷಿಸುತ್ತಿದ್ದ; ವಿಮರ್ಶಿಸುತ್ತಿದ್ದ. ಅವನ ಕಾಲೇಜ್ ಪ್ರಿನ್ಸಿಪಾಲ್‍ರೊಮ್ಮೆ ಹೀಗೆ ಉದ್ಗರಿಸಿದ್ದುಂಟು: ‘ಜರ್ಮನ್ ವಿಶ್ವವಿದ್ಯಾಲಯಗಳನ್ನೂ ಒಳಗೊಂಡು ಪ್ರಪಂಚದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದ ನನಗೆ ನರೇಂದ್ರನಾಥನಂತಹ ಪ್ರತಿಭಾಶಾಲಿಯೇ ಕಾಣಲಿಲ್ಲ. ಮಾನವ ಇತಿಹಾಸದಲ್ಲಿ ಅವನು ಗುರುತು ಬಿಟ್ಟು ಹೋಗುವುದು ನಿಸ್ಸಂಶಯ’. ಇಂಗ್ಲಿಷ್ ಸಂಸ್ಕೃತಗಳಂತೂ ಮಾತೃಭಾಷೆಗಳೇ ಆದವು. ಈ ಕಡೆ ಸ್ವಯಂ ಶ್ರೀರಾಮಕೃಷ್ಣರೇ ತಮ್ಮ ಅಲೌಕಿಕ ರೀತಿಯಲ್ಲಿ ಶಿಷ್ಯನ ಆಂತರಿಕ ಪ್ರಜ್ಞಾಸ್ತರಗಳನ್ನೇ ಜಾಗೃತಗೊಳಿಸಿ, ಭೂತ ಭವಿಷ್ಯಗಳನ್ನೊಳಗೊಂಡ, ಪರಿಪೂರ್ಣ ಜ್ಞಾನದ ಸಮಸ್ತ ವಲಯಗಳನ್ನು ತೆರಿದಿಟ್ಟು ಜ್ಞಾತೃ, ಜ್ಞಾನ, ಜ್ಞೇಯಗಳನ್ನು ಐಕ್ಯವಾಗಿಸಿ ಸರ್ವಜ್ಞತ್ವವನ್ನೇ ಧಾರೆಯೆರೆದು ಕೊಡುತ್ತಿದ್ದರು. ತಮ್ಮ ಮಹಾಪ್ರಸ್ಥಾನಕ್ಕೆ ಮುಂಚೆ ತಮ್ಮ ತಪಃಶಕ್ತಿಯನೆಲ್ಲಾ ಪ್ರೀಯಶಿಷ್ಯನಿಗೆ ವರ್ಗಾಯಿಸಿ ಜಗನ್ಮಾತೆಯ ಕಾರ್ಯಕ್ಕೆ ಸಂಪೂರ್ಣವಾಗಿ ಅಣಿಗೊಳಿಸಿದರು. ಈ ಎಲ್ಲ ಪ್ರಕ್ರೀಯೆಗಳು ಕ್ರಮೇಣ ಪರಿಪಕ್ವಗೊಂಡು ಒಮ್ಮೆ ವಿವೇಕಾನಂದರೇ, ತಮ್ಮ ಗುರುಭಾಯಿಗಳಿಗೆ ಹೇಳುತ್ತಾರೆ: ‘I feel I am filled with infinite energy I don't know when I will explode.’


ಹೌದು!! ಅಗ್ನಿಪರ್ವತ ಸ್ಫೋಟಗೊಂಡಿತ್ತು. ವಿವೇಕಾನಂದರು ‘ಅಮೇರಿಕಾದ ಸೋದರರೇ, ಸೋದರಿಯರೇ’ ಎಂದು ಸಂಬೋಧಿಸಿದಾಗ ಉಪಸ್ಥಿತರಿದ್ದ 7000 ಜನ ಪೂರ್ತಿ 2 ನಿಮಿಷ ಕಿವಿಗಳು ಗಡಚಿಕ್ಕುವಂತೆ ಕರತಾಡನವನ್ನು ಮಾಡಿದಾಗ, ಸ್ಫೋಟವೋ! ಪಾಂಚಜನ್ಯದ ನಿನಾದವೋ! ಸಂಕುಚಿತತೆ ಮತಾಂಧತೆಗಳಿಗೆ ನೀಡಿದ ವಜ್ರಾಘಾತವೋ! ನವಯುಗದ ನಾಂದಿ ನಿರ್ಮಾಣವಾಗಿತ್ತು. ಸಂಕ್ರಾಂತಿಯಂದು ಜನಿಸಿದ ಕ್ರಾಂತಿಪುರುಷ ತನ್ನ ಆಗಮನವನ್ನು ಸರಿಯಾಗಿಯೇ ಘೋಷಿಸಿದ್ಧ.

ಇಡೀ ಪಾಶ್ಚಾತ್ಯ ಜಗತ್ತು ಆಧ್ಯಾತ್ಮಿಕ ಮರುಭೂಮಿಯಂತಿದ್ದ ಕಾಲ ಅದು. ಡಾರ್ವಿನ್‍ನ ವಿಕಾಸವಾದ ಹಾಗೂ ಆಧುನಿಕ ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳು, ತಾರ್ಕಿಕ ವಿಶ್ಲೇಷಣೆ, ಪರೀಕ್ಷೆಗಳಿಗೊಳಪಡದ ಮತ್ತು ಅನುಭವಸಿದ್ಧವಲ್ಲದ ಯಾವುದನ್ನೂ ವಿಷದಂತೆ ದೂರವಿಡುವ ಮನಃಸ್ಥಿತಿಯನ್ನು ನಿರ್ಮಿಸಿದ್ದವು. ಆಜ್ಞೇಯತಾವಾದ ಪ್ರತಿಷ್ಠೆಯ ಸಂಕೇತವಾಗಿತ್ತು. ಸುಪ್ರಸಿದ್ಧ ನಾಸ್ತಿಕ ರಾಬರ್ಟ್ ಇಂಗರ್‍ಸಾಲ್‍ನ ಉಪನ್ಯಾಸಕ್ಕೆ ಜನ ಮುಗಿಬೀಳುತ್ತಿದ್ದರು. ಧರ್ಮಕ್ಕೆ ವಿಚ್ಛೇದನ ನೀಡಲು ಒಪ್ಪದ ಆದರೆ ಅವೈಜ್ಞಾನಿಕ ಧರ್ಮವನ್ನು ಒಪ್ಪಲೂ ಆಗದ ಮನಸ್ಸುಗಳು Christian science ಎಂಬ ಹೊಸ ಪಂಥವೊಂದನ್ನು ರಚಿಸಿ ಅಲ್ಲಿಯ Science ಎಂಬ ಪದಕ್ಕಷ್ಟೇಯೇ ತೃಪ್ತಿಗೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಇತ್ತ ವಿವೇಕಾನಂದರ ಬೋಧನೆಗಳೋ ವಿಜ್ಞಾನಕ್ಕೆ ಸವಾಲೆಸೆಯುವಂತೆ ಇದ್ದವು. 'ಹಿಂದೂಧರ್ಮ’ದ ಮೇಲಿನ ಮೊದಲ ಉಪನ್ಯಾಸವೇ ಜನರ ಹುಬ್ಬೇರಿಸಿತ್ತು. ಸ್ವಯಂ ಇಂಗರ್‍ಸಾಲ್‍ನೇ ವಿವೇಕಾನಂದರಿಂದ ಆಕರ್ಷಿತನಾಗಿದ್ದನಲ್ಲದೇ ಸುಪ್ರಸಿದ್ಧ ವಿಜ್ಞಾನಿ ನಿಕೋಲಾಟೆಸ್ಲಾ, ಮಷಿನ್‍ಗನ್ ಸಂಶೋಧಕ ಹೀರಮ್ ಮ್ಯಾಕ್ಸಿಂ ಆತ್ಮೀಯ ಶಿಷ್ಯರಾದರು. ‘ಯಾವುದನ್ನಾದರೂ ಒಪ್ಪಿಕೊಳ್ಳುವುದಕ್ಕೆ ಮುಂಚೆ ವಿಜ್ಞಾನ ಹೇಗೆ ಪ್ರಯೋಗ ಪರಿವೀಕ್ಷಣೆ ಮತ್ತು ನಿಯಮ ನಿರೂಪಣೆ ಎಂಬ ಸೂತ್ರವನ್ನು (experimentation observation & inference)) ಅನುಸರಿಸುತ್ತದೆಯೋ ಹಾಗೆಯೇ ಧಾರ್ಮಿಕ ಚಿಂತನೆಗಳನ್ನು ಸತ್ಯದ ಕುಲುಮೆಯಲ್ಲಿ ಹಾಯಿಸಿಯೇ ಒಪ್ಪಿಗೆಯ ಮುದ್ರೆಯನ್ನು ಒತ್ತಬೇಕೆ? ಹೌದು! ಎಂದಿಗೂ ಹೌದು! ಯಾವ ಧರ್ಮ ವೈಜ್ಞಾನಿಕ ಪರೀಕ್ಷೆಯಲ್ಲಿ ಸೋಲುವುದೋ ಅದು ಎಂದೂ ಧರ್ಮವಾಗಿರಲಿಲ್ಲ ಮುಂದೆ ಆಗುವುದು ಇಲ್ಲ ಅದೊಂದು ಕಸ ಆಚೆಗೆ ಬಿಸಾಡಿ ಅದನ್ನು ಅಥವಾ ಬಿಸಾಕಿ ಅದನ್ನು’ ಎನ್ನುವ ಅವರ ಗುಡುಗು ಧರ್ಮದ ಬಗೆಗಿನ ಎಲ್ಲಾ ಜೊಳ್ಳುಗಳನ್ನು ಗಾಳಿಗೆ ತೂರಿತ್ತು. ವಿಜ್ಞಾನ ಧರ್ಮಕ್ಕೆ ವಿರುದ್ಧವಲ್ಲ, ಒಂದು ದೃಶ್ಯ ಪ್ರಪಂಚವನ್ನು ವರ್ಣಿಸಿದರೆ ಮತ್ತೊಂದು 'ದೃಕ್' ಅನ್ನು ವಿವರಿಸುತ್ತದೆ. 'ದೃಕ್'ನ ಜ್ಞಾನವಿಲ್ಲದೆ 'ದೃಶ್ಯಜ್ಞಾನ' ಎಂದೂ ಕರಾರುವಾಕ್ ಅಲ್ಲ ಎಂದು ಹೇಳಿ ಆಧುನಿಕ ವಿಜ್ಞಾನದ Uncertainty principleಗೆ ಪೂರ್ವಸೂಚನೆ ಕೊಟ್ಟಿದ್ದರು. ‘ಎಲ್ಲ ವಿಜ್ಞಾನಗಳ ತವರುಮನೆ ಭಾರತ, ಬೆರೆಯವರು ಅದನ್ನು ಬೆಳೆಸಿದ್ದಾರೆ ಅಷ್ಟೇ’ ಎನ್ನುವ ಮೂಲಕ ‘ಭಾರತ ಸರ್ವರೀತಿಯಲ್ಲೂ ಜ್ಞಾನದ ತವರುಮನೆ’ ಎನ್ನುವ ಸುಪ್ರಸಿದ್ಧ ಫ್ರೆಂಚ್ ಚಿಂತಕ ಗಿVoltaireನ ವಾದವನ್ನು ಪುಷ್ಟಿಗೊಳಿಸಿದರು. Detroitನ ಗೌರ್ನರ್‍ನ ಪತ್ನಿ Mrs ಬ್ಯಾಗ್ಲಿ ಹೇಳಿದಂತೆ ‘ಕ್ರಿಶ್ಚಿಯನ್ನರಾದ ನಮಗೆ ಅವರು ಕೊಟ್ಟ ಚಿಂತನೆಗಳು ನಾವು ಎಂದೂ ಕಂಡು ಕೇಳರಿಯದಂಥಾದ್ದು, ಅವರು ಯಾರನ್ನೂ ಖಂಡಿಸುವುದಿಲ್ಲ ಬದಲಾಗಿ ಪ್ರತಿಯೊಬ್ಬರನ್ನೂ ತಾವಿರುವ ಸ್ಥರದಿಂದ ನಿಸ್ಸಂಶಯವಾಗಿಯೂ ಮೇಲೆತ್ತುತ್ತಾರೆ. ಪ್ರತಿಯೊಬ್ಬ ಅಮೆರಿಕನ್ ವಿವೇಕಾನಂದ ಹಾಗೂ ಅವರ ಚಿಂತನೆಗಳ ಸಂಪರ್ಕಕ್ಕೆ ಬರಬೇಕು ಎಂಬುದು ನನ್ನ ಆಸೆ. ಭಾರತದಲ್ಲಿ ಇಂಥವರು ಇನ್ನೂ ಇದ್ದಲ್ಲಿ ಅವರೆಲ್ಲರೂ ನಮ್ಮಲ್ಲಿಗೆ (ಅಮೆರಿಕಾಕ್ಕೆ )ಬರಲಿ’ ಎನ್ನುವುದೇ ಪೂರ್ವಾಗ್ರಹರಹಿತ ಪ್ರತೆಯೊಬ್ಬ ಅಮೇರಿಕನ್‍ನ ಭಾವನೆಯಾಗಿತ್ತು. ಅಲ್ಲಿನ ಪತ್ರಿಕೆಗಳ ಸಂಪಾದಕೀಯ ಹಾಗೂ ಇತರ ವರದಿಗಳಿಂದ ಇದು ತಿಳಿದುಬರುತ್ತದೆ. ‘ಇಂಥ ಸತ್ಯಗಳನ್ನೇ ಇಷ್ಟುದಿನ ನಾವು ಎದುರು ನೋಡುತ್ತಿದ್ದುದು’ ಎನ್ನುವ ಭಾವನೆ ಅದೆಷ್ಟು ನೂರು ಸಲ ಸಾರ್ವಜನಿಕ ವಲಯಗಳಲ್ಲಿ ಪ್ರತಿಧ್ವನಿಸಿತೋ ಆ ದೇವರೇ ಬಲ್ಲ. ಜ್ಞಾನಪಿಪಾಸುಗಳಿಂದ ತುಂಬಿದ ಆ ದೇಶದಲ್ಲಿ ಯಾವ ಸಭಾಭವನವೂ ಪ್ರೇಕ್ಷಕರಿಗೆ ಸಾಕಾಗುತ್ತಿರಲಿಲ್ಲ. ವಿವೇಕಾನಂದರು ತಮಗೆ ಗೊತ್ತು ಎಂದು ಹೇಳಿಕೊಳ್ಳುವುದೇ ಪ್ರತಿಷ್ಠೆ ಎಂಬ ವಾತಾವರಣ. ವಿಜ್ಞಾನಿಗಳು, ತತ್ವಶಾಸ್ತ್ರಜ್ಞರು, ಸಂಗೀತಗಾರರು, ಕವಿಗಳು, ಓಪೇರಾ ಹಾಡುಗಾರ್ತಿಯರು, ರಾಜನೀತಿಜ್ಞರು, ಶ್ರೀಮಂತರೂ ಸ್ವಾಮೀಜಿಯ ಶಿಷ್ಯವರ್ಗದಲ್ಲಿ ಸೇರಿಕೊಂಡರು. ಈ ಎಲ್ಲ ಬೆಂಬಲ ಜನಪ್ರೀಯತೆಯನ್ನು ಅವರು ಉಪಯೋಗಿಸಿಕೊಂಡದ್ದು ಗುರುವಿನ ಆಜ್ಞೆಯನ್ನು ಪಾಲಿಸಲು, ಅದೇ ಜಗತ್ತಿನ ಹಿತ; ಆತ್ಮನ ಮೋಕ್ಷ, ಮುಂದೆ ಇದೇ ರಾಮಕೃಷ್ಣ ಮಿಷನ್ನಿನ ಧ್ಯೇಯವಾಕ್ಯವೂ ಆಯಿತು.

ಇಂದು ಜಗತ್ತಿನಲ್ಲಿ ಆಹಾರದ ಕೊರತೆ ನೀಗಿದ್ದರೇ ಅದಕ್ಕೆ ಸ್ವಾಮೀಜಿ ಕಾರಣ. ಅಂದಿನ ಅತ್ಯಂತ ಶ್ರೀಮಂತ ವ್ಯಕ್ತಿ ಜಾನ್ ಡಿ. ರಾಕ್‍ಫೆಲ್ಲರ್‌ಗೆ ‘ದುರ್ಬಲರಿಗಾಗಿ ವಿನಿಯೋಗವಾಗದ ಸಂಪತ್ತು ವ್ಯರ್ಥ’ ಎಂದು ಮನಗಾಣಿಸಿ Rockfeller ‌Foundation ಆವಿಷ್ಕಾರಕ್ಕೆ ಕಾರಣೀಭೂತರಾದವರು ವಿವೇಕಾನಂದರು, ಇದರ ಪರಿಣಾಮವೇ ಬ ಭತ್ತದ ಹೊಸ ತಳಿ. H.Y.V ಎಂಬ ಗೋಧಿ ತಳಿ (ವಿಜ್ಞಾನಿ ನಾರ್ಮನ್ ಬೋರ್ಲಾಗ್ ಕಂಡು ಹಿಡಿದದ್ದು) (IR ಎಂದರೆI Rockfeller ಎಂದು ಅರ್ಥ) ಮುಂದಿನ ಹಸಿರುಕ್ರಾಂತಿಗೆ ಇದೇ ನಾಂದಿ ಹಾಕಿದ್ದು.

ಸ್ವಾಮೀಜಿ ಭಾರತಕ್ಕೆ ಹಿಂದಿರುಗಿದಾಗ ಅಮೆರಿಕಾದ ಪ್ರತಿಷ್ಠಿತರು ಭಾರತೀಯರಿಗೆ ಕೃತಜ್ಞತೆ ಸಲ್ಲಿಸುತ್ತಾ ಬರೆದ ಪತ್ರದ ಒಕ್ಕಣಿಕೆ ಹೀಗಿತ್ತು: ‘ಮಹಾನ್ ಆರ್ಯ ಕುಟುಂಬಕ್ಕೆ ಸೆರಿದ ಭಾರತೀಯ ಸೋದರ ಸೋದರಿಯರಿಗೆ‘ ಎಂದು. ‘ಹಾವಾಡಿಗರ ರಾಷ್ಟ್ರ‘ ‘ಸೋದರರಾಷ್ಟ್ರ‘ವಾಗಿ ಪರಿವರ್ತನೆಯಾಗಿತ್ತು. ಇಂಗ್ಲೆಂಡ್ ಅಮೆರಿಕಾಗಳಲ್ಲಿ ಹರಿದಾಡಿದ ಅಂದಿನ ವರದಿಗಳನ್ನು ವಿಶ್ಲೇಷಿಸಿದರೆ ಪಾಶ್ಚಾತ್ಯರ ದೃಷ್ಟಿಯಲ್ಲಿ ಭಾರತದ ಚಿತ್ರವೇ ಬದಲಾಗಿಬಿಟ್ಟಿತ್ತು. ಲಿಯೋ ಟಾಲ್‍ಸ್ಟಾಯ್ ಭಾರತಕ್ಕೆ ಸ್ವಾತಂತ್ರ್ಯದ ಹಕ್ಕಿದೆ ಎಂದು ಬರೆದರು. ಸುಪ್ರಸಿದ್ಧ ಚರಿತ್ರಕಾರ ವಿಲ್ ಡ್ಯೂರೆಂಟ್ A case for India ಪುಸ್ತಕದ ಮೂಲಕ ಇಂಗ್ಲೆಂಡ್ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದು ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ 'ವಕಾಲತ್ತನ್ನೇ' ವಹಿಸಿದರು. ವಿಸ್ಮೃತಿಗೊಳಗಾಗಿದ್ದ ದೇಶವು ಮೈಕೋಡವಿ ಎದ್ದಿತು. ಗಾಂಧಿ, ನೆಹರು, ಸುಭಾಷ, ಜೆಮ್‍ಷೆಡ್‍ಜಿ ಟಾಟಾ, ಆರವಿಂದರು, ನಿವೇದಿತಾ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿ ಪುನಶ್ಚೇತನ ತುಂಬಿದರು. ಮಿಕ್ಕಿದ್ದು ಇತಿಹಾಸ. ವಿವೇಕಾನಂದರ ಮಹಾನ್ ಕೊಡುಗೆ ಏನೆಂದರೆ ಸುಪ್ರಸಿದ್ಧ ನೋಬೆಲ್ ವಿಜೇತ ರೋಮೈರೋಲಾ ಹೇಳಿದಂತೆ ಜೀವಚ್ಛವವಾಗಿದ್ದ ಭಾರತದ ನರ-ನಾಡಿಗಳಲ್ಲಿ ಪ್ರಾಣಸಂಚಾರವಾಗುವಂತೆ ಮಾಡಿದ್ದು, ದೇವಮುಖ(Godward)ವಾಗಿದ್ದ ಧರ್ಮಕ್ಕೆ ಜೀವಮುಖ (Man ward)ದ ಅನಿವಾರ್ಯತೆಯನ್ನು ಇನ್ನಿಲ್ಲದ ರೀತಿಯಲ್ಲಿ ಮನಗಾಣಿಸಿದ್ದು, ಸ್ತ್ರೀಯರು ಮತ್ತು ಜನಸಾಮಾನ್ಯರನ್ನು ನಿರ್ಲಕ್ಷಿಸಿದ್ದೇ ಭಾರತದ ದುಃಸ್ಥಿತಿಗೆ ಕಾರಣವೆಂದು ತಿಳಿಸಿದ್ದಷ್ಟೇ ಅಲ್ಲದೆ ಭಾರತೀಯ ಜೀವನಾಡಿಯೇ ಆದ ಆಧ್ಯಾತ್ಮಿಕತೆಯನ್ನು ನಿರ್ಲಕ್ಷಿಸಿ ಯಾವ ರಾಜಕೀಯ, ಸಾಮಾಜಿಕ ಉತ್ಥಾನವೂ ಭಾರತವನ್ನು ಎಳ್ಳಷ್ಟೂ ಉತ್ತಮ ಸ್ಥಿತಿಗೆ ತರಲಾರದು ಎಂದು ತರ್ಕಿಸಿದ್ದು; ಅದು ಜಾಗತೀಕ ಮಟ್ಟದಲ್ಲಾಗಲಿ, ರಾಷ್ಟ್ರೀಯಮಟ್ಟದಲ್ಲಾಗಲಿ. ಅವರ ಚಿಂತನೆಯ ಕೇಂದ್ರ ಶ್ರೀರಾಮಕೃಷ್ಣರು ಹಾಗೂ ಅವರ ಜೀವನ ಆದ್ದರಿಂದ ಸಮನ್ವಯ ಸೂತ್ರವೇ ಅವರ ಮೂಲಮಂತ್ರ ಅರ್ಥಾತ್ ಧರ್ಮ ಮತ್ತು ವಿಜ್ಞಾನ, ಪೂರ್ವ ಮತ್ತು ಪಾಶ್ಚಾತ್ಯ, ಪ್ರಾಚೀನ ಮತ್ತು ಅರ್ವಾಚೀನಗಳ ಸರ್ವಸಮ್ಮತ, ಸಶಕ್ತ, ಸಾರ್ವಕಾಲಿಕ ಉತ್ತಮ ಅಂಶಗಳನ್ನು ಅರ್ವಾಚೀನ ವೈಜ್ಞಾನಿಕ ಚೌಕಟ್ಟಿನಲ್ಲಿ ಪಕ್ವಗೊಳಿಸಿದ ತತ್ವಭೂಮಿಕೆ ಮತ್ತು ಆಧಾರಗಳೇ ಅವರ ಬೋಧನೆಗಳ ಮುಖ್ಯಪಲ್ಲವಿ. ಇದಕ್ಕೆ ಅವರೇ ಇಟ್ಟ ಹೆಸರು ‘Man-making and character building‘. ಈ ಶೀರ್ಷಿಕೆಯಲ್ಲೇ ಬೇಕೆಂಬಷ್ಟು ವೈಶಾಲ್ಯ ಮತ್ತು ವೈಜ್ಞಾನಿಕತೆಗಳನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.