ADVERTISEMENT

ಗೋಟಾ ಘೋಳೇರೋ...ಕಲಬುರಗಿಗಳ ತಾಂಡಾಗಳಲ್ಲಿ ಒಂದು ಸುತ್ತು

ರಾಹುಲ ಬೆಳಗಲಿ
Published 21 ಜನವರಿ 2023, 22:13 IST
Last Updated 21 ಜನವರಿ 2023, 22:13 IST
ಕಲಬುರಗಿ ತಾಲ್ಲೂಕಿನ ಕುಸುನೂರು ತಾಂಡಾದ ಲಂಬಾಣಿ ಬದುಕಿನ ವಿವಿಧ ಚಿತ್ರ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ
ಕಲಬುರಗಿ ತಾಲ್ಲೂಕಿನ ಕುಸುನೂರು ತಾಂಡಾದ ಲಂಬಾಣಿ ಬದುಕಿನ ವಿವಿಧ ಚಿತ್ರ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ   

ಕಷ್ಟಕೋಟಲೆಗಳು ಎಷ್ಟೇ ಇರಲಿ, ಬದುಕು ಸುಂದರವಾಗಿರಲಿ – ಇದು ಬಂಜಾರ ಸಮುದಾಯದ ಫಿಲಾಸಫಿ. ಕಾಯಕ ಪದದ ಮೂರ್ತರೂಪವಾಗಿರುವ ಕಲಬುರಗಿಗಳ ತಾಂಡಾಗಳಲ್ಲಿ ಒಂದು ಸುತ್ತು...

‘ಗೋಡೆ’ ಎಂದು ಹೇಳಲಾಗುವ ಕಲ್ಲುಗಳನ್ನು ಜೋಡಿಸಿದ ರಚನೆ ಕಪ್ಪಿಟ್ಟಿದೆ. ಮೇಲಿರುವ ತಗಡಿನ ಶೀಟು ಸಹ ಇಲ್ಲಾಣದಿಂದ ತುಂಬಿದೆ. ಆ ‘ಮನೆ’ಯಲ್ಲಿ ಉರಿಯುವ ಕಟ್ಟಿಗೆಯ ಒಲೆ ಎಷ್ಟೊಂದು ತೆರಪಿಲ್ಲದಂತೆ ಕೆಲಸ ಮಾಡಿದೆ ಎಂಬುದರ ಕಥೆಯನ್ನು ಈ ದೃಶ್ಯವೇ ಹೇಳುತ್ತದೆ. ಒಲೆಯ ಮುಂದೆ ಕುಳಿತ ಅಜ್ಜಿಗಂತೂ ಕೈತುಂಬ, ಮೈತುಂಬ ಕೆಲಸ. ಕಟ್ಟಿಗೆ ಆಯ್ದು ತರಬೇಕು, ಬುಟ್ಟಿ ಹೆಣೆಯಬೇಕು, ಕಾಡು ಹಣ್ಣುಗಳನ್ನು ಹೆಕ್ಕಿ ತರಬೇಕು, ಪಟ್ಟಣಕ್ಕೆ ಹೋಗಿ ಮಾರಿ ಬರಬೇಕು, ಮಧ್ಯೆ ಬಿಡುವು ಸಿಕ್ಕರೆ ಬಟ್ಟೆಗೆ ಹೆಣಿಗೆಯನ್ನೂ ಹಾಕಬೇಕು...

ಕಲಬುರಗಿ ಹತ್ತಿರದ ಕುಸುನೂರು ತಾಂಡಾದ ಜನಜೀವನದ ಒಂದು ಪುಟ್ಟ ಝಲಕ್‌ ಇದು. ಇಲ್ಲೊಂದೇ ಅಲ್ಲ, ತಾಂಡಾಗಳೇ ಹೆಚ್ಚಾಗಿರುವ ಚಿಂಚೋಳಿ ತಾಲ್ಲೂಕಿನ ಬಂಜಾರ ಸಮುದಾಯದ ಯಾವುದೇ ಬಿಡಾರಗಳಿಗೆ ಹೋದರೂ ಇಂತಹದ್ದೇ ದೃಶ್ಯಗಳು ಸಾಮಾನ್ಯ. ಬೆಳಗಿನಿಂದ ರಾತ್ರಿವರೆಗೆ ಮೈತುಂಬ ಕೆಲಸಗಳಿದ್ದರೂ ಈ ಮಹಿಳೆಯರ ಜೀವನೋತ್ಸಾಹ ಎಂದಿಗೂ ಬತ್ತದಂಥದ್ದು. ಅರೆಕ್ಷಣವೂ ಖಾಲಿ ಕುಳಿತು ಹೊತ್ತು ಕಳೆಯದ ಅವರ ಮನೋಭಾವ ಇಂದಿನ ದಿನಮಾನದ ಅಚ್ಚರಿಗಳಲ್ಲೊಂದು.

ಆಧುನಿಕತೆಯ ದಟ್ಟಪ್ರಭಾವ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಜೀವನಶೈಲಿ ಮಧ್ಯೆಯೂ ನೈಜ ಅಸ್ತಿತ್ವ ಕಾಪಾಡಿಕೊಳ್ಳಲು ಹೆಣಗುತ್ತಿರುವ ಕೆಲವೇ ಸಮುದಾಯಗಳಲ್ಲಿ ಬಂಜಾರ ಸಮುದಾಯ ಕೂಡ ಒಂದು. ಜೀವನಶೈಲಿಯಲ್ಲಿ ಹಲವು ಸ್ವರೂಪದ ಬದಲಾವಣೆಗಳಾದರೂ ಶತಮಾನಗಳ ಪರಂಪರೆ, ಸಂಸ್ಕೃತಿ, ಸಂಪ್ರದಾಯವನ್ನು ಯಥಾವತ್ತು ಉಳಿಸಿಕೊಳ್ಳಬೇಕು ಎಂಬ ಕಾಳಜಿ ಆ ಸಮುದಾಯದ್ದು.

ADVERTISEMENT
ಕಲಬುರಗಿ ತಾಲ್ಲೂಕಿನ ಕುಸುನೂರು ತಾಂಡಾದ ಲಂಬಾಣಿ ಬದುಕಿನ ವಿವಿಧ ಚಿತ್ರ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ

ಬ್ರಿಟಿಷರ ಆಳ್ವಿಕೆ ದಿನಗಳಿಂದಲೂ ‘ಜಿಪ್ಸಿ’ (ಅಲೆಮಾರಿಗಳು) ಎಂದು ಕರೆಯಲ್ಪಟ್ಟು ಹಲವು ತರಹದ ಸವಾಲು, ಸಮಸ್ಯೆಗಳನ್ನು ಎದುರಿಸುತ್ತ ಬದುಕು ಕಟ್ಟಿಕೊಂಡ ಬಂಜಾರ ಸಮುದಾಯದವರಿಗೆ ಲಂಬಾಣಿ, ಲಮಾಣಿ, ನಾಯ್ಕ, ಗೋರ್ ಮಾಟ, ಗೋರ ಎಂದೆಲ್ಲ ಚೆಂದದ ಹೆಸರುಗಳಿವೆ. ಲಿಪಿಯೇ ಇರದ ಲಂಬಾಣಿ ಭಾಷೆಯಲ್ಲೇ ಪರಸ್ಪರ ಸಂವಾದಿಸುವ ಅವರು ಪಕ್ಕಾ ಸ್ವಾಭಿಮಾನಿಗಳು. ಸೌಹಾರ್ದ ಮನೋಭಾವದವರು.

ಒಂದು ಕಡೆ ಸುಭದ್ರ ನೆಲೆ ಕಂಡುಕೊಳ್ಳದೇ ಮತ್ತು ಆಸ್ತಿಯನ್ನೂ ಮಾಡದೇ ಊರಿಂದೂರಿಗೆ ಅಲೆಯುವ ಅವರು, ದೇಶದ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಶೋಷಣೆಗೆ ಒಳಗಾಗುತ್ತಲೇ ಬಂದವರು. ಹಣ್ಣು, ತರಕಾರಿ, ಸೌದೆ ಸೇರಿದಂತೆ ಬಗೆಬಗೆಯ ವಸ್ತುಗಳನ್ನು ಮಾರುತ್ತಾ ಆಯಾ ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬಂದ ಲಂಬಾಣಿಯವರಿಗೆ ಬ್ರಿಟಿಷರು ‘ಅಪರಾಧಿ ಬುಡಕಟ್ಟು ಜನಾಂಗ’ ಎಂಬ ಹಣೆಪಟ್ಟಿ ಕಟ್ಟಿತ್ತು.

ಯಾರೂ ಅವರನ್ನು ಊರಿನೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರು ಪ್ರತಿದಿನವೂ ಪೊಲೀಸರಿಗೆ ವರದಿ ಮಾಡಿಕೊಳ್ಳಬೇಕಿತ್ತು. ‘ನಾವು ಯಾವುದೇ ರೀತಿಯ ಅಪರಾಧ ಮಾಡಿಲ್ಲ’ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಒಂದು ವೇಳೆ ಅವರನ್ನು ಯಾರಾದರೂ ಸಂಪರ್ಕಿಸಲು ಪ್ರಯತ್ನಿಸಿದರೆ, ಅವರನ್ನೇ ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿತ್ತು.

ದೇಶವು 1947ರ ಆಗಸ್ಟ್ 15ರಂದು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು. ಆದರೆ, ಲಂಬಾಣಿಗರು ‘ನಾವು ಅಪರಾಧಿಗಳು ಅಲ್ಲ. ನಾವು ಈ ದೇಶದ ಪ್ರಾಮಾಣಿಕ ಪ್ರಜೆಗಳು’ ಎಂದು ಮುಕ್ತವಾಗಿ ಹೇಳಲು ಮತ್ತೆ ಐದು ವರ್ಷ ಕಾಯಬೇಕಾಯಿತು. 1952ರ ಆಗಸ್ಟ್ 31ರಂದು ‘ಅಪರಾಧಿ ಬುಡಕಟ್ಟು ಜನಾಂಗ ಕಾಯ್ದೆ’ ರದ್ದು ಆದ ಬಳಿಕ ಎಲ್ಲರಂತೆ ಬದುಕು ಕಂಡುಕೊಳ್ಳಲು ಸಾಧ್ಯವಾಯಿತು.

ಕಲಬುರಗಿ ತಾಲ್ಲೂಕಿನ ಕುಸುನೂರು ತಾಂಡಾದ ಲಂಬಾಣಿ ಬದುಕಿನ ವಿವಿಧ ಚಿತ್ರ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ

ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ತಾಂಡಾಗಳಲ್ಲಿ ವಾಸವಿರುವ ಲಂಬಾಣಿಗಳ ದೈನಂದಿನ ಬದುಕು ಸಣ್ಣಪುಟ್ಟ ವ್ಯಾಪಾರದ ಮೇಲೆಯೇ ನಿಂತಿದೆ. ಕಾಡು ಪ್ರದೇಶದಲ್ಲಿ ಸಿಗುವ ಕರ್ಚಿಕಾಯಿ, ಪೇರಲ, ಅಂಜೂರ ಮುಂತಾದ ಹಣ್ಣುಗಳನ್ನು ಲಂಬಾಣಿ ಮಹಿಳೆಯರು ಹೆಕ್ಕಿತಂದು ನಗರ ಪ್ರದೇಶದಲ್ಲಿ ಮಾರುವುದು ರೂಢಿ. ಲಂಬಾಣಿ ಮಿಶ್ರಿತ ಕನ್ನಡ ಮಾತನಾಡುವ ಅವರು, ಗ್ರಾಹಕರ ಮನ ಗೆದ್ದು, ರುಚಿಕಟ್ಟಾದ ಹಣ್ಣು ಹಂಪಲು ಮಾರುವುದರಲ್ಲೇ ಖುಷಿ ಕಾಣುವುದನ್ನು ನೋಡುವುದೇ ಚೆಂದ.

‘ಬೆಳಗಾದರೆ ಸಾಕು, ಆಯಾ ದಿನದ ದುಡಿಮೆ ನಾವು ಕಂಡುಕೊಳ್ಳಬೇಕು. ಮನೆಯಿಂದ ಹೊರ ಹೋಗದಿದ್ದರೆ, ನಮಗೆ ಬದುಕಿಲ್ಲ. ಕಾಯಂ ಪಗಾರ ಕೂಡ ಇಲ್ಲ. ಒಂದಿಷ್ಟು ಜನರು ಹೊಲದಲ್ಲಿ ದುಡಿಯಲು ಹೋದರೆ, ಇನ್ನೂ ಕೆಲವರು ಹಣ್ಣುಹಂಪಲು, ತರಕಾರಿ ಮಾರಲು ಮಾರುಕಟ್ಟೆಗೆ ಹೋಗುತ್ತಾರೆ’ ಎಂದು ಹಣ್ಣು ಮಾರಾಟಮಾಡುವ ಅಂಬಾಬಾಯಿ ಹೇಳುತ್ತಾರೆ.

ಅಂಬಾಬಾಯಿಯಂತೆ ವ್ಯಾಪಾರ ಮಾಡುವವರು ಕಲಬುರಗಿಯ ಸೂಪರ್‌ ಮಾರುಕಟ್ಟೆ ಅಥವಾ ಕಣ್ಣಿ ಮಾರುಕಟ್ಟೆಗೆ ತೆರಳಿ ವ್ಯಾಪಾರ ಮಾಡಿದರೆ, ಚಿಂಚೋಳಿ, ಸೇಡಂ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿ ವಾಸವಿರುವ ತಾಂಡಾಗಳ ನಿವಾಸಿಗಳು ನೇರವಾಗಿ ಕಾಡಿನ ಹಾದಿ ಹಿಡಿಯುತ್ತಾರೆ. ಸೌದೆಯನ್ನು ಮಾರಾಟ ಮಾಡಿ ಅಥವಾ ಇನ್ನೊಬ್ಬರ ಜಮೀನಿನ ಗುತ್ತಿಗೆ ಪಡೆದು ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ.

‘ಬಹುತೇಕ ಅನಕ್ಷರಸ್ಥರೇ ಆಗಿರುವ ಲಂಬಾಣಿ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕಿಂತ ತಮ್ಮದೇ ಆದ ಜೀವನಶೈಲಿ ಮತ್ತು ಸಂಸ್ಕೃತಿಯಲ್ಲಿ ಸಂತೃಪ್ತಿ ಕಾಣುತ್ತಾರೆ. ಹೀಗಾಗಿಯೇ ಅವರು ಎಲ್ಲರಂತೆ ಎಲ್ಲರೊಂದಿಗೆ ಪೂರ್ಣಪ್ರಮಾಣದಲ್ಲಿ ಬೆರೆಯುವುದು ಕಡಿಮೆ. ಇತ್ತೀಚಿನ ಕೆಲ ಯುವಜನರು ಶಿಕ್ಷಣ ಪಡೆದು, ಹೊಸ ಮಾರ್ಗ ಕಂಡುಕೊಂಡಿದ್ದು ಹೊರತುಪಡಿಸಿದರೆ ಸಮುದಾಯದ ಹಿರಿಯರು ಅದರಿಂದ ಹೊರಬರಲು ಇಷ್ಟ ಪಡುವುದಿಲ್ಲ’ ಎಂದು ಲೇಖಕ ಕೆ.ಎಸ್‌.ನಾಯಕ ಅಭಿಪ್ರಾಯಪಡುತ್ತಾರೆ.

ಲಂಬಾಣಿ ಸಮುದಾಯದವರಿಗೆ ದೀಪಾವಳಿ ಮತ್ತು ಹೋಳಿ ದೊಡ್ಡ ಹಬ್ಬಗಳು. ಹೋಳಿ ಹಬ್ಬವನ್ನು ಒಂದು ವಾರ ಆಚರಿಸಿದರೆ, ದೀಪಾವಳಿ ಹಬ್ಬವನ್ನು ತಿಂಗಳುಪೂರ್ತಿ ಆಚರಿಸುವುದು ಸಂಪ್ರದಾಯ. ಬಂಜಾರ ಗೀತೆಗಳನ್ನು ಹಾಡುತ್ತ ಸಂಭ್ರಮಿಸುತ್ತಾರೆ. ಅದರಲ್ಲೇ ಮಗ್ನರಾಗುತ್ತಾರೆ.

ತಾಂಡಾದ ಸಂಪ್ರದಾಯದಂತೆ ಹಬ್ಬದ ಹಿಂದಿನ ದೀಪಾವಳಿ ಅಮಾವಾಸ್ಯೆಯ ರಾತ್ರಿ ದೀಪಗಳನ್ನು ಹಚ್ಚಿ ಯುವತಿಯರು ‘ಸೇವಾಲಾಲ್ ತೂ ಮೇರಾ ದಾದಿ, ದಾದಾ, ತೂ ಮೇರಾ ವರ್ಷೇ ದಾಡೇರ್ ದವಾರೆ ಮರೇಮ್ಮ ತೂ ಮೇರಾ’ ಎಂಬ ಬಂಜಾರ ಹಾಡು ಹಾಡುತ್ತ ತಾಂಡಾದ ಎಲ್ಲ ಮನೆಗಳಿಗೆ ಹೋಗಿ ಮಲಗಿದ್ದವರಿಗೆ ಎಚ್ಚರಿಸಿ ದೀಪ ತೋರಿಸಿ ಅವರಿಂದ ಹಣ ಪಡೆದುಕೊಳ್ಳುತ್ತಾ ಹೋಗುತ್ತಾರೆ. ಈ ಪರಿಪಾಟ ಬೆಳಗಿನವರೆಗೆ ನಡೆಯುತ್ತದೆ.

ಬೆಳಿಗ್ಗೆ ಕುಮಾರಿಯರು (ಮದುವೆಯಾಗದವರು) ಮಡಿಯುಟ್ಟು ದೇವಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ತಲೆ ಮೇಲೆ ಗಣ್ಯೋಪುಲ್ಯೊ ಧರಿಸಿ ಅದರ ಮೇಲೆ ಹೂವು ತರುವ ಬುಟ್ಟಿ ಇಟ್ಟುಕೊಂಡು ಉರುಮೆ ಮುಂತಾದ ವಾದ್ಯಗಳ ಸದ್ದಿಗೆ ನೃತ್ಯ ಮಾಡುತ್ತಾರೆ. ಇವರೊಂದಿಗೆ ಗ್ರಾಮದ ಹಿರಿಯ ಮಹಿಳೆಯರು ಹೆಜ್ಜೆ ಹಾಕುತ್ತಾರೆ.

ಬಳಿಕ ಹಿರಿಯರ ಪೂಜೆಗೆ ಹೂವು ತರಲು ಹೊರಟ ಯುವತಿಯರನ್ನು ಪೋಷಕರು ಊರ ಬಾಗಿಲವರೆಗೆ ಬಂದು ಕಳುಹಿಸಿಕೊಡುತ್ತಾರೆ. ಈ ರೀತಿ ಹೊರಟ ಹುಡುಗಿಯರು ಲಂಬಾಣಿ ಭಾಷೆಯಲ್ಲಿ ಹಬ್ಬದ ಮಹತ್ವ ಸಾರುವ ಹಾಡುಗಳ ಜತೆಗೆ ಪೂಜೆಗೆ ಹೂವು ಕೀಳಲು ಬಂದ ತಮ್ಮನ್ನು ಬಯ್ಯಬೇಡಿ ಎಂದು ಹೊಲದ ಮಾಲೀಕರಿಗೆ ಮನವಿ ಮಾಡಿಕೊಳ್ಳುವ ಹಾಡು ಹಾಡುತ್ತಾ ಹೂವುಗಳನ್ನು ಕಿತ್ತು ಬುಟ್ಟಿಯಲ್ಲಿ ಸಂಗ್ರಹಿಸಿಕೊಳ್ಳುತ್ತಾರೆ.

ಕಲಬುರಗಿಯ ಅಮೃತ‌ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಅಂಗವಾಗಿ ಎಸ್.ವಿ.ಪಿ. ವೃತ್ತದಿಂದ ರಂಗಮಂದಿರ ವರೆಗೆ ಶನಿವಾರ ನಡೆದ ಸಾಂಸ್ಕೃತಿಕ ಕಲಾ ಮೆರವಣಿಗೆ ವೇಳೆ ಅಳಂದ ತಾಲೂಕಿ ಲಲಿತಾ ಕಲಾತಂಡದಿಂದ ನೃತ್ಯ ಪ್ರದರ್ಶಿಸುತ್ತಿರುವ ಲಂಬಾಣಿ ಮಹಿಳೆಯರು -ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಪ್ರಕೃತಿಯನ್ನು ಜೀವಾಳ ಆಗಿಸಿಕೊಂಡಿರುವ ಲಂಬಾಣಿ ಸಮುದಾಯದವರು, ‍ನಿಸರ್ಗ ಮಾತೆಗೆ ಹಾನಿ ಮಾಡಲು ಬಯಸುವುದಿಲ್ಲ. ಮಾತುಗಳನ್ನು ಉಳಿಸಿಕೊಳ್ಳುವಲ್ಲಿ ಅಷ್ಟೇ ಬದ್ಧತೆಯುಳ್ಳವರು. ತಮ್ಮ ತಾಂಡಾಗಳ ಸುತ್ತಮುತ್ತ ಇರುವ ಬೇವಿನ ಮರವನ್ನೇ ಅವರು ದೇವತೆಯನ್ನಾಗಿ ನಂಬುತ್ತಾರೆ. ತಾಂಡಾದಲ್ಲಿ ಏನಾದರೂ ಜಗಳ, ಮುನಿಸು, ಹೊಡೆದಾಟ ನಡೆದರೆ, ತಾಂಡಾದವರು ಆ ಬೇವಿನ ಮರವನ್ನೇ ಸಾಕ್ಷಿಯಾಗಿಸಿಕೊಂಡು ನ್ಯಾಯ ಪಂಚಾಯಿತಿ ಮಾಡಿಕೊಳ್ಳುತ್ತಾರೆ.

ಈಗ ಕೋರ್ಟ್, ಪೊಲೀಸ್ ವ್ಯವಸ್ಥೆಯಿದ್ದರೂ ಬಹುತೇಕ ತಾಂಡಾಗ
ಳಲ್ಲಿ ನ್ಯಾಯ ಪಂಚಾಯಿತಿಯೇ ಮೊದಲ ಆದ್ಯತೆ. ಅಲ್ಲಿ ಬಗೆಹರಿಯದಿದ್ದರೆ ಮಾತ್ರ ಕೋರ್ಟ್, ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಾರೆ.

ಲಂಬಾಣಿ ಸಮುದಾಯದಲ್ಲಿ ಮದುವೆ ಶಾಸ್ತ್ರ ಕೂಡ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಮದುವೆಯಲ್ಲಿ ಎಕ್ಕದ ಗಿಡ ಮತ್ತು ನೇಗಿಲು ಅಥವಾ ಕೃಷಿ ಉಪಕರಣಗಳಿಗೆ ಪೂಜಿಸುವ ಪದ್ಧತಿ ಇದೆ. ಈ ಹಿಂದೆ ಮಂಗಳ ಸೂತ್ರ ಧರಿಸುತ್ತಿರಲಿಲ್ಲ. ಈಗ ಕೆಲವರ ಕೊರಳಲ್ಲಿ ಮಂಗಳಸೂತ್ರ ಕಾಣುತ್ತದೆ. ಸಾಂಪ್ರದಾಯಿಕ ಉಡುಪು ಮೊದಲೆಲ್ಲ ಕಡ್ಡಾಯವಾಗಿತ್ತು. ಈಗ ಕೊಂಚ ಬದಲಾವಣೆ ಆಗಿದೆ. ವರನ ಮನೆಯಲ್ಲಿ ಯಾರಾದರೂ ಸಾಂಪ್ರದಾಯಿಕ ಉಡುಪು ಧರಿಸುತ್ತಿದ್ದರೆ, ಅಂತಹವರಿಗೆ ಮಾತ್ರ ಆ ಉಡುಪನ್ನು ವಧುವಿನ ಕಡೆಯವರು ನೀಡುತ್ತಾರೆ. ಇಲ್ಲದಿದ್ದರೆ, ಸಾಧಾರಣ ಉಡುಪುಗಳಲ್ಲೇ ಜೀವನ ಸಾಗಿಸುತ್ತಾರೆ.

‘ದೇಶವು ಸ್ವಾತಂತ್ರ್ಯಗೊಂಡ 70 ವರ್ಷಗಳ ಮೇಲೂ ಲಂಬಾಣಿ ಸಮುದಾಯದವರು ದೊಡ್ಡ ಮಟ್ಟ
ದಲ್ಲಿ ಬದಲಾವಣೆ ಕಂಡುಕೊಂಡಿಲ್ಲ. ಎಷ್ಟೇ ಪ್ರಭಾವ, ಒತ್ತಡ, ಸವಾಲು ಮತ್ತು ಸಮಸ್ಯೆಗಳು ಎದುರಾದರೂ ತಮ್ಮ
ಪೂರ್ವಜರು ತೋರಿದ ದಾರಿ ಮತ್ತು ನೀಡಿದ ಮಾರ್ಗದರ್ಶನದಿಂದ ಅವರು ವಿಮುಖರಾಗಿಲ್ಲ. ಅವರು ಒಮ್ಮೆಲೇ ಬದಲಾಗಲು ಬಯಸುವುದೂ ಇಲ್ಲ. ಕೆಲ ತಾಂಡಾಗಳಲ್ಲಿ ಇನ್ನೂ ಮೌಢ್ಯ ಉಳಿದಿದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಕಾಲಕ್ಕೆ ಅನುಸಾರ ಅವರು ತಮ್ಮ ಬದುಕು ಸುಧಾರಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಛಾಪು ಉಳಿಸಿಕೊಳ್ಳಬೇಕು. ಇದು ಅಗತ್ಯ ಮತ್ತು ಅನಿವಾರ್ಯ’ ಎನ್ನುತ್ತಾರೆ ಕೆ.ಎಸ್‌.ನಾಯಕ.

ಇಂತಹ ಕಥೆಗಳನ್ನೆಲ್ಲಾ ಕೇಳಿ ತಾಂಡಾದಿಂದ ಹೊರಬರುವಾಗ ಗೋಟಾ ಘೋಳೇರೊ(ಬೆಲ್ಲದ ಪಾನಕ ಬಂತು) ಹಾಡು ಅಲೆ ಅಲೆಯಾಗಿ ತೇಲಿಬರುತ್ತಿತ್ತು.

(ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ)

ಹುಬ್ಬಳ್ಳಿಯ ಆಲ್‌ ಇಂಡಿಯಾ ಬಂಜಾರಾ ಸೇವಾ ಸಂಘ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಬಂಜಾರಾ ರಾಜ್ಯ ಮಟ್ಟದ ಮಹಿಳಾ ಪದಾಧಿಕಾರಿಗಳ ಸಮಾವೇಶದಲ್ಲಿ ಸಾಂಪ್ರದಾಯಿಕ ವೇಷ ತೊಟ್ಟು ಭಾಗವಹಿಸಿದ್ದ ಲಂಬಾಣಿ ಮಹಿಳೆಯರು–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.