ADVERTISEMENT

ಸಾಹಿತ್ಯ ಮತ್ತು ಉತ್ಸವ

ವಸುಧೇಂದ್ರ, ಬೆಂಗಳೂರು
Published 17 ಡಿಸೆಂಬರ್ 2022, 19:32 IST
Last Updated 17 ಡಿಸೆಂಬರ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಸಾಹಿತ್ಯೋತ್ಸವ (Bangalore Literature Festival) ಬಹಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮಗಳನ್ನು ಸರಿಯಾದ ಸಮಯಕ್ಕೆ ನಡೆಸುವ, ಎಂತಹ ಹಿರಿಯ ಲೇಖಕರೇ ಆದರೂ 30-45 ನಿಮಿಷಕ್ಕಿಂತಲೂ ಹೆಚ್ಚಿನ ಸಮಯವನ್ನು ನೀಡದ ಕರಾರುವಾಕ್ಕು ಸಮಯಪಾಲನೆ ಆದರ್ಶವಾಗಿ ಕಂಡಿತು. ದೂಳು, ತಳ್ಳಾಟ ಇರದಿದ್ದರಿಂದ ಸಾವಿರಾರು ಜನ, ಅದರಲ್ಲೂ ಯುವಕರು-ಮಕ್ಕಳು-ಮಹಿಳೆಯರು, ಬಂದು ಭಾಗವಹಿಸಿದರು. ಕೋಟ್ಯಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನೂ ಖರೀದಿಸಿದರು.

ಪ್ರತೀ ಗೋಷ್ಠಿಯಲ್ಲಿ ಯಾವುದೋ ಪುಸ್ತಕದ ಬಗೆಗಿನ ಚರ್ಚೆಯೇ ಮುಖ್ಯವಾಗಿತ್ತು ಮತ್ತು ಆ ಚರ್ಚೆಯ ನೆಪದಲ್ಲಿ ದೇಶದ ಬಹಳಷ್ಟು ಸಮಸ್ಯೆಗಳ ಬಗ್ಗೆ ಚರ್ಚೆಗಳಾದವು. ಕಳೆದ ವರ್ಷದಲ್ಲಿ ಯಾರು ಮುಖ್ಯ ಪುಸ್ತಕ ಬರೆದಿದ್ದಾರೋ, ಅಂಥವರಿಗೆ ಮಾತ್ರ ಗೋಷ್ಠಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಗೋಷ್ಠಿ ಮುಗಿದ ತಕ್ಷಣ ಪುಸ್ತಕದ ಲೇಖಕರು ಓದುಗರ ಪ್ರತಿಗೆ ಸಹಿ ಮಾಡಿಕೊಡುವ ವ್ಯವಸ್ಥಿತ ಪದ್ಧತಿಯೂ ಇತ್ತು. ಓದುಗರು ಸರಣಿಯಲ್ಲಿ ನಿಂತು ತಮ್ಮ ಮೆಚ್ಚಿನ ಲೇಖಕರೊಡನೆ ಸಂಭ್ರಮದಿಂದ ಮಾತಾಡಿ, ಅವರ ಜೊತೆ ಫೋಟೊ ತೆಗೆಸಿಕೊಂಡು, ಹಸ್ತಾಕ್ಷರ ಪಡೆದರು.

ಎಲ್ಲಕ್ಕೂ ಮುಖ್ಯವಾಗಿ, ಉತ್ಸವದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಬ್ಯಾನರ್ ಇರಲಿಲ್ಲ. ರಾಜಕೀಯ-ಸಿನಿಮಾ-ಆಟೋಟದಲ್ಲಿ ಪ್ರಸಿದ್ಧರಾದವರು ಭಾಗವಹಿಸಿದರೂ ಅವರು ಯಾವುದಾದರೂ ಪುಸ್ತಕ ಬರೆದ ಕಾರಣಕ್ಕಾಗಿಯೇ ಗೋಷ್ಠಿಯ ಅರ್ಹತೆಯನ್ನು ಪಡೆದಿದ್ದರು. ಅನವಶ್ಯಕ ಗಲಾಟೆ ಎಬ್ಬಿಸುವ ಲೌಡ್ ಸ್ಪೀಕರ್‌ಗಳು, ವ್ಯಾಪಾರಿ ವಸ್ತುಗಳ ಮಾರಾಟ ಮಳಿಗೆಗಳು ಒಂದೂ ಇರಲಿಲ್ಲ. ಉತ್ಸವಕ್ಕೆ ಹಣ ಸಹಾಯ ಮಾಡಿದವರ ವಿವರಗಳನ್ನೆಲ್ಲ ಪ್ರತಿಯೊಬ್ಬರಿಗೂ ತಿಳಿಯುವಂತೆ ಕರಪತ್ರದಲ್ಲಿ ಪ್ರಕಟಿಸಿದ್ದರು.

ADVERTISEMENT

ಸಾಹಿತ್ಯಪ್ರೀತಿಯ ಜನರು ಮಾತ್ರ ಸೇರಿದ ಈ ಇಂಗ್ಲಿಷ್ ಸಾಹಿತ್ಯೋತ್ಸವದಲ್ಲಿ ಕನ್ನಡದ ಸಾಕಷ್ಟು ಗೋಷ್ಠಿಗಳು ನಡೆದವು ಮತ್ತು ಕನ್ನಡ ಪುಸ್ತಕಗಳು ಮಾರಾಟವೂ ಆದವು. ಅರೆಭಾಷೆ, ಕೊಂಕಣಿ, ತುಳು, ಬ್ಯಾರಿ, ಸಂಕೇತಿ ಭಾಷೆಗಳ ಗೋಷ್ಠಿಗಳಿಗೂ ಆಯೋಜಕರು ಅವಕಾಶ ಮಾಡಿಕೊಟ್ಟಿದ್ದರು. ಕನ್ನಡ ಸಾಹಿತ್ಯಲೋಕದ ವಿಸ್ತಾರವನ್ನು ಗಮನಿಸಿದರೆ, ಕನ್ನಡದ ಇನ್ನಷ್ಟು ಗೋಷ್ಠಿಗಳಿಗೆ ಅವಕಾಶ ಇರಬೇಕಿತ್ತು ಎಂದು ನಮಗೆ ಅನ್ನಿಸಿದ್ದು ಸುಳ್ಳಲ್ಲ. ಮುಂದಿನ ವರ್ಷಗಳಲ್ಲಿ ಆ ಬೇಡಿಕೆ ಈಡೇರುತ್ತೆ ಎಂದು ಆಶಿಸೋಣ.

ಇನ್ನೇನು ಜನವರಿಯಲ್ಲಿ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನ ಬರುತ್ತಿದೆ. ಇಂತಹ ಯಶಸ್ವಿ ಉತ್ಸವಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ಮೊತ್ತಮೊದಲಿಗೆ ಸಮಯ ಪರಿಪಾಲನೆ. ಎಲ್ಲಾ ಗೋಷ್ಠಿಗಳೂ ನಿಗದಿತ ಸಮಯಕ್ಕಿಂತಲೂ ಎರಡು ಮೂರು ಪಟ್ಟು ಹೆಚ್ಚಿಗೆ ತೆಗೆದುಕೊಳ್ಳುವ ಪರಿಪಾಟ ನಮ್ಮಲ್ಲಿದೆ. ಅದರಲ್ಲೂ ವಾಚಾಳಿ ಸಾಹಿತಿಗಳಂತೂ ಪರಿವೆಯಿಲ್ಲದೆ ಮಾತಾಡುತ್ತಲೇ ಹೋಗುತ್ತಾರೆ. ಗೋಷ್ಠಿಯ ಕೊನೆಯಲ್ಲಿ ಮಾತಾಡುವವರಿಗೆ ಸರಿಯಾಗಿ ಐದು ನಿಮಿಷದ ಸಮಯವೂ ಉಳಿಯುವುದಿಲ್ಲ. ಬಹುತೇಕ ನಮ್ಮ ಗೋಷ್ಠಿಗಳಿಗೂ ನಮ್ಮ ಸದ್ಯದ ಕನ್ನಡ ಪುಸ್ತಕಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇಡೀ ಸಮ್ಮೇಳನ ಮುಗಿದರೂ ಸಭಿಕರಿಗೆ ಇತ್ತೀಚೆಗೆ ಬಂದ ಒಳ್ಳೆಯ ಕನ್ನಡ ಪುಸ್ತಕ ಯಾವುದು ಎಂಬುದು ತಿಳಿಯುವುದಿಲ್ಲ. ಸಾಹಿತ್ಯ ಸಮ್ಮೇಳನವೊಂದು ಸಮಾಜಶಾಸ್ತ್ರ ಸಮ್ಮೇಳನವಾಗಿ ಮುಗಿದುಹೋಗುತ್ತದೆ.

ಇನ್ನು ರಾಜಕೀಯ ವ್ಯಕ್ತಿಗಳ ಮಾತಂತಿರಲಿ, ಊರಿನ ಪುಡಿ ರೌಡಿಗಳ ಬ್ಯಾನರ್‌ಗಳು ಯಾವ ರೀತಿ ಅಬ್ಬರದಿಂದ ಊರಿನ ತುಂಬಾ ರಾರಾಜಿಸುತ್ತಿರುತ್ತವೆಂದರೆ, ‘ನಾವು ಏನು ಮಾಡಲು ಹೊರಟಿದ್ದೇವೆ’ ಎಂಬ ಅನುಮಾನ ಶುರುವಾಗುತ್ತದೆ. ಸಮ್ಮೇಳನದ ಅಧ್ಯಕ್ಷರ ಸಪ್ಪೆ ಮೋರೆಯ ಫೋಟೊ ಮಾತ್ರ ನೆಪಕ್ಕೆ ಊಟದ ಎಲೆಯಲ್ಲಿ ಮೂಲೆಗೆ ಬಡಿಸಿದ ಉಪ್ಪಿನಂತೆ ಎಲ್ಲೋ ಆ ಬ್ಯಾನರ್‌ಗಳಲ್ಲಿ ಕಾಣುತ್ತಿರುತ್ತದೆ.

ಸರ್ಕಾರದಿಂದ ಕನ್ನಡ ಸಾಹಿತ್ಯೋತ್ಸವಕ್ಕೆ ಹಣ ಪಡೆಯುವುದು ಪ್ರಜೆಗಳ ಹಕ್ಕು. ಹಾಗಂತ ಎಲ್ಲವೂ ರಾಜಕೀಯ ವ್ಯಕ್ತಿಗಳ ಪ್ರದರ್ಶನಕ್ಕೆ ಸೀಮಿತವಾದರೆ, ಇಂತಹ ಉತ್ಸವದಲ್ಲಿ ನಿಜವಾದ ಸಾಹಿತ್ಯಪ್ರಿಯರಿಗೆ ಆಸಕ್ತಿ ಮುರುಟುತ್ತದೆ. ಸರ್ಕಾರದ ಹಣದ ಜೊತೆಯಲ್ಲಿ ನಮ್ಮದೇ ರೀತಿಯಲ್ಲಿ ಹಣವನ್ನು ಸಂಗ್ರಹ ಮಾಡಿಕೊಂಡು, ನಮ್ಮ ಧ್ವನಿ ಮತ್ತು ನಿರ್ಧಾರಗಳಿಗೆ ಶಕ್ತಿಯನ್ನು ತಂದುಕೊಳ್ಳುವ ಅವಶ್ಯಕತೆ ಇದೆ.

ಇಂಗ್ಲಿಷ್ ಸಾಹಿತ್ಯೋತ್ಸವಕ್ಕೆ ಅವರು ಸಂಗ್ರಹಿಸಿ ವೆಚ್ಚ ಮಾಡಿದ್ದು ಕೇವಲ ಒಂದೂವರೆ ಕೋಟಿ ರೂಪಾಯಿ. ನಮಗೆ ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವುದು ಇಪ್ಪತ್ತು ಕೋಟಿ ರೂಪಾಯಿ. ಹಾಗಂತ ಎರಡನ್ನೂ ಹೋಲಿಸುವುದು ತಪ್ಪು. ಕನ್ನಡ ಸಾಹಿತ್ಯ ಸಮ್ಮೇಳನ ಲಕ್ಷಾಂತರ ಜನರು ಭಾಗವಹಿಸುವ ಮಹಾಕೂಟ. ಆದರೆ ನಾವು ಹಣವನ್ನು ಸಾಹಿತ್ಯದ ಸಂಗತಿಗಳಿಗೆ ಬಳಸುತ್ತಿದ್ದೇವೆಯೇ ಅಥವಾ ಸಾಹಿತ್ಯೇತರ ಸಂಗತಿಗಳಿಗೆ ಬಳಸುತ್ತಿದ್ದೇವೆಯೇ ಎನ್ನುವುದನ್ನು ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.

ನಮ್ಮ ಸಮ್ಮೇಳನಗಳ ಗೋಷ್ಠಿಗಳನ್ನು ನಾವು ಕನ್ನಡ ಲೇಖಕರಿಗೆ ಸೀಮಿತವಾಗಿಡುತ್ತೇವೆ. ಆದರೆ, ನೆರೆಹೊರೆಯ ಸಾಹಿತಿಗಳನ್ನೂ ಕರ್ನಾಟಕದ ಮುಖ್ಯ ಇಂಗ್ಲಿಷ್‌ ಲೇಖಕರನ್ನೂ ಆಹ್ವಾನಿಸಿ ಗೋಷ್ಠಿಗಳನ್ನು ನಡೆಸುವ ಅವಶ್ಯಕತೆ ಇದೆ. ಕೇವಲ ಕನ್ನಡತಿ ಎನ್ನುವ ಕಾರಣಕ್ಕೆ ಕನ್ನಡ ಮಾತಾಡಲೂ ಬರದ ಸಿನಿಮಾ ತಾರೆಯನ್ನು ದುಂದುವೆಚ್ಚ ಮಾಡಿ ಕರೆಸುವುದಕ್ಕಿಂತಲೂ, ಕನ್ನಡ ಬರದಿದ್ದರೂ ನೆರೆಹೊರೆಯ ಭಾಷೆಯ ಸಾಹಿತ್ಯದಲ್ಲಿ ಸಾಧನೆ ಮಾಡಿದ ಲೇಖಕರನ್ನು ಆಹ್ವಾನಿಸುವುದು ಹೆಚ್ಚು ಸಮಂಜಸ.

ಕನ್ನಡೇತರರನ್ನು ಒಳಗೊಳ್ಳುವ ಸತ್ಸಂಪ್ರದಾಯವನ್ನು ನಾವು ಶುರುವಿಟ್ಟರೆ, ಆ ಕಡೆಯಿಂದಲೂ ನಮ್ಮ ಕುರಿತು ಗೌರವ ಮೂಡುತ್ತದೆ ಮತ್ತು ಕೊಡು–ಕೊಳ್ಳುವಿಕೆಯಾಗುತ್ತದೆ. ಕನ್ನಡದಂತೆ ಭರ್ಜರಿಯಾಗಿ ಸಾಹಿತ್ಯ ಸಮ್ಮೇಳನ ಮಾಡುವ ಭಾಷೆ ಮತ್ತೊಂದಿಲ್ಲ. ಆ ಸಂಗತಿಯೂ ಹೊರಗಿನವರಿಗೆ ತಿಳಿಯಬೇಕಾಗಿದೆ. ಬೇರೆ ಭಾಷೆಯ ಗೋಷ್ಠಿಗಳನ್ನು ಕನ್ನಡಕ್ಕೆ ತಕ್ಷಣ ಅನುವಾದ ಮಾಡಿ, ನಮ್ಮ ಸಭಿಕರಿಗೆ ತಿಳಿಸುವ ಸಮರ್ಥ ಅನುವಾದಕರು ನಮ್ಮಲ್ಲಿ ಇದ್ದಾರೆ. ಆದ್ದರಿಂದ ಬೇರೆ ಭಾಷೆಯ ಗೋಷ್ಠಿಗಳನ್ನು ನಡೆಸುವುದು ಕಷ್ಟವಾಗುವುದಿಲ್ಲ.

ಇತ್ತೀಚೆಗೆ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ 11ನೇ ಆವೃತ್ತಿಯಲ್ಲಿ ಸಾಹಿತ್ಯ ಸಮುದ್ರದಲ್ಲಿ ಈಜಾಡಿದ ಪುಸ್ತಕ ಪ್ರೇಮಿಗಳು... –ಚಿತ್ರ: ಪ್ರಶಾಂತ್ ಎಚ್.ಜಿ.

ಇಂಗ್ಲಿಷ್ ಸಾಹಿತ್ಯೋತ್ಸವದಲ್ಲಿ ಕನ್ನಡಕ್ಕೆ ಹೆಚ್ಚಿನ ಅವಕಾಶ ಬೇಕು ಎಂದು ಆಶಿಸುವ ನಾವು, ನಮ್ಮ ಸಾಹಿತ್ಯೋತ್ಸವದಲ್ಲಿ ಅವರಿಗೆ ಎಷ್ಟು ಅವಕಾಶ ಮಾಡಿಕೊಟ್ಟಿದ್ದೇವೆ ಎಂಬ ಮರುಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಹೊರರಾಜ್ಯದ ಇಂಗ್ಲಿಷ್ ಲೇಖಕರನ್ನು ಪರಿಗಣಿಸುವ ಅವಶ್ಯಕತೆ ಇಲ್ಲ. ಆದರೆ, ನಮ್ಮ ರಾಜ್ಯದಲ್ಲಿಯೇ ಎಷ್ಟೊಂದು ಇಂಗ್ಲಿಷ್ ಲೇಖಕರಿದ್ದಾರಲ್ಲವೆ? ಮರಾಠಿ, ತೆಲುಗು, ತಮಿಳು, ಮಲೆಯಾಳ ಲೇಖಕರೂ ಇಲ್ಲಿದ್ದಾರೆ. ಅವರನ್ನಾದರೂ ನಾವು ಗೋಷ್ಠಿಗಳಿಗೆ ಆಹ್ವಾನಿಸಬೇಕಲ್ಲವೆ? ಹಿಂದೊಮ್ಮೆ ಆರ್‌.ಕೆ.ನಾರಾಯಣರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಮೇಲ್ಪಂಕ್ತಿ ನಮಗಿದೆ.

ಯಾವುದೇ ಸಮ್ಮೇಳನ/ ಸಂಘಟನೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ ಅದನ್ನು ‘ಕಾರ್ಪೊರೇಟ್’ ಅಥವಾ ‘ಎಲೈಟ್’ ಎಂದು ಕರೆಯುವ ಪದ್ಧತಿ ಕನ್ನಡ ಸಾಹಿತ್ಯಲೋಕದಲ್ಲಿ ವಿಪರೀತವಾಗಿ ಕಾಣುತ್ತಿದೆ. ಈ ಬೆಂಗಳೂರು ಸಾಹಿತ್ಯೋತ್ಸವಕ್ಕೂ ಅದು ತಪ್ಪಲಿಲ್ಲ. ಬಹುತೇಕ ಕನ್ನಡ ಸಾಹಿತಿಗಳು ಅದನ್ನು ‘ಎಲೈಟ್’ ಜನರ ಉತ್ಸವ ಎಂದೇ ಕರೆದರು. ಮೊದಲಿಗೆ ಈ ಸಾಹಿತ್ಯೋತ್ಸವಗಳನ್ನು ನಾವು ನಿರ್ಲಕ್ಷಿಸುತ್ತಿದ್ದೆವು, ಈಗ ವಿರೋಧಿಸುತ್ತಿದ್ದೇವೆ.

ಪಂಚತಾರಾ ಹೋಟೆಲು ನಮ್ಮ ಮಧ್ಯಮ ವರ್ಗದ ಮನಃಸ್ಥಿತಿಗೆ ಕಸಿವಿಸಿ ಉಂಟು ಮಾಡುವುದು ಸತ್ಯ. ಆಧುನಿಕ ವಸ್ತ್ರಗಳನ್ನು ಧರಿಸಿ, ಗಂಡು-ಹೆಣ್ಣುಗಳು ನಿರ್ಭಿಡೆಯಿಂದ ಮೈಗೆ ಮೈ ತಾಕಿಸಿಕೊಂಡು ನಗುನಗುತ್ತಾ ಇಂಗ್ಲಿಷ್‌ನಲ್ಲಿ ಮಾತಾಡುತ್ತಾ ಅಡ್ಡಾಡುವುದು ಬಹುತೇಕರಿಗೆ ಹೊಂದಾಣಿಕೆಯಾಗುವುದಿಲ್ಲ. ಇದು ನಮ್ಮ ಕೀಳರಿಮೆಯೋ ಅಥವಾ ‘ಎಲೈಟ್’ ಜನರ ಲೋಪವೋ ನನಗೆ ಗೊತ್ತಿಲ್ಲ. ಇಂಥವನ್ನು ಕನ್ನಡದ ಉತ್ಸವಗಳಿಂದ ಸದ್ಯಕ್ಕೆ ದೂರವಿಡಬಹುದು, ಅನುಕರಿಸಬೇಕಿಲ್ಲ. ಆದರೆ ಉಳಿದ ಸಂಗತಿಗಳು ಉತ್ತಮವಾಗಿದ್ದವಲ್ಲವೆ?

ಮಕ್ಕಳಿಗೂ ಕತೆ ಹೇಳಿ, ಆಟ ಆಡಿಸಿ ಖುಷಿಪಡಿಸುವ ಎರಡು ವೇದಿಕೆಗಳನ್ನು ಮಾಡಿದ್ದರು. ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳಿಗೆಂದೇ ಮಾಡಿದ ವೇದಿಕೆ ನೋಡಿದ್ದು ನನಗಂತೂ ನೆನಪಿಲ್ಲ. ಪ್ರತ್ಯೇಕ ವೇದಿಕೆ ಮಾಡಿಕೊಡುವುದಿರಲಿ, ಅಪರೂಪಕ್ಕೆ ಸಣ್ಣವರು ಏಕಾಂಗಿಯಾಗಿ ಸಮ್ಮೇಳನಕ್ಕೆ ಬಂದರೆ ಆ ನೂಕು ನುಗ್ಗಲಿನಲ್ಲಿ ಸುರಕ್ಷಿತವಾಗಿ ಮನೆಗೆ ವಾಪಸು ಹೋಗುವುದೂ ಅನುಮಾನ.

ಧಾರವಾಡದ ಸಾಹಿತ್ಯ ಸಮ್ಮೇಳನವನ್ನು ನೆನೆಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ. ಆ ಸಮ್ಮೇಳನದ ವ್ಯವಸ್ಥೆ ಎಷ್ಟು ಅಧ್ವಾನವಾಗಿತ್ತೆಂದರೆ, ಯಾವುದೇ ಹೊತ್ತಿನಲ್ಲಿಯೂ ಕಾಲ್ತುಳಿತವಾಗಿ ಹಲವಾರು ಮಕ್ಕಳು-ಹೆಂಗಸರಿಗೆ ಅಪಾಯವಾಗುವ ಭೀತಿ ಅಲ್ಲಿತ್ತು. ಆದರೆ, ಅಂತಹ ಹೊತ್ತಿನಲ್ಲಿಯೂ ನಮ್ಮ ಸಾಹಿತಿಗಳು ಯೋಚಿಸುವ ಕ್ರಮ ಸೋಜಿಗವೆನ್ನಿಸುತ್ತದೆ. ವೇದಿಕೆಯಲ್ಲಿ ಯಾವ ಸಾಹಿತಿಯೂ ಈ ಅವ್ಯವಸ್ಥೆಯ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಅದಕ್ಕೆ ಬದಲು ಬೆಳಿಗ್ಗೆ ಮೆರವಣಿಗೆಯಲ್ಲಿ ಹೆಂಗಸರು ಕಳಸ ಹೊತ್ತು ಬಂದಿದ್ದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ವೇದಿಕೆಯನ್ನು ಬಳಸಿಕೊಂಡು, ಚಪ್ಪಾಳೆ ಗಿಟ್ಟಿಸಿಕೊಂಡರು. ಸಾಹಿತಿಗಳ ಆದ್ಯತೆಗಳು ನನಗೆ ಕೆಲವೊಮ್ಮೆ ಭಯ ಹುಟ್ಟಿಸುತ್ತವೆ.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಆಹ್ವಾನಿತ ಲೇಖಕರಿಗೆ ಕೊಟ್ಟ ಉಡುಗೊರೆ ಸಾಕಷ್ಟು ಉಪಯೋಗಿಯಾಗಿದ್ದವು. ಸಾಹಿತ್ಯೋತ್ಸವದ ಲೋಗೊ ಇರುವ ಜೋಳಿಗೆ, ಅದರಲ್ಲಿ ಕಾಫಿ ಪುಡಿ, ಟೀ ಪುಡಿ, ಚಾಕೊಲೇಟ್, ಚಕ್ಕುಲಿ, ಕೋಡುಬಳೆ, ಮಸಾಲೆ ಕಡಲೆಬೀಜ, ಮೈಸೂರು ಪಾಕ್‌, ಅಲಂಕಾರದ ಮೋಂಬತ್ತಿ ಇತ್ಯಾದಿಗಳಿದ್ದವು. ಮನೆಯವರೆಲ್ಲಾ ಉಪಯೋಗಿಸಬಹುದಾದ ವಸ್ತುಗಳಿವು.

ನಮ್ಮ ಸಮ್ಮೇಳನಗಳಲ್ಲಿ ಕೊಟ್ಟ ನೆನಪಿನ ಕಾಣಿಕೆಗಳನ್ನು ಮರೆಯುವಂತಿಲ್ಲ. ಕ್ಯಾಸೆಟ್ ಬಳಕೆಯೇ ನಿಂತು ಹೋದಮೇಲೆ, ಯಾರೋ ಕ್ಯಾಸೆಟ್ ವ್ಯಾಪಾರಿಯೊಬ್ಬ ತನ್ನ ಹಳೆಯ ಮಾಲನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಸರ್ಕಾರದ ಮನವೊಲಿಸಿ 20 ಕ್ಯಾಸೆಟ್ಟುಗಳನ್ನು ಪ್ರತಿಯೊಬ್ಬ ಆಹ್ವಾನಿತರಿಗೂ ಕೊಡುವಂತೆ ಒತ್ತಾಯ ಮಾಡಿ ಹಣ ಮಾಡಿಕೊಂಡಿದ್ದ. ಇನ್ನು ಮನೆಗೆ ಹೊತ್ತುಕೊಂಡು ಬರಲೂ ಭಾರವಾಗುವಂತಹ ಫಲಕವೊಂದನ್ನು ಕೊಡುತ್ತಾರೆ. ಇಲ್ಲದಿದ್ದರೆ ಮಾರಾಟವಾಗದೆ ಉಳಿದ ಪುಸ್ತಕಗಳ ಕಟ್ಟು ಕೊಟ್ಟುಬಿಡುತ್ತಾರೆ.

ಏನೇನೋ ಸಾಧಿಸಲಾಗದ ಗುರಿಗಳನ್ನು ನಾವು ಸಮ್ಮೇಳನದ ಕೊನೆಯ ದಿನ ಪಟ್ಟಿ ಮಾಡುತ್ತೇವೆ. ಅವನ್ನು ಯಾರೂ ಮುಂದಿನ ವರ್ಷ ನೆನಪಿಸಿಕೊಳ್ಳುವುದೂ ಇಲ್ಲ. ಅದರ ಬದಲು ‘ಈ ಸಲಕ್ಕಿಂತಲೂ ಮುಂದಿನ ಸಮ್ಮೇಳನ ಚೆನ್ನಾಗಿ ಮಾಡುತ್ತೇವೆ’ ಎನ್ನುವ ಗುರಿಯೊಂದನ್ನು ಹಾಕಿಕೊಂಡರೂ ಸಾಕು. ಸತತವಾಗಿ ಎಂಟು-ಹತ್ತು ವರ್ಷಗಳ ಕಾಲ ನಾವು ಈ ಗುರಿಯನ್ನು ಸಾಧಿಸಿದರೆ, ನಮ್ಮ ಸಾಹಿತ್ಯ ಸಮ್ಮೇಳನ ತಾನೇತಾನಾಗಿ ಉತ್ತಮವಾಗುತ್ತಾ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.