ADVERTISEMENT

ಸ್ಮರಣೆ: ಪುಂಡುವೇಷದ ‘ಐಕಾನ್’ ಶ್ರೀಧರ ಭಂಡಾರಿ

ನಾ.ಕಾರಂತ ಪೆರಾಜೆ
Published 28 ಫೆಬ್ರುವರಿ 2021, 4:38 IST
Last Updated 28 ಫೆಬ್ರುವರಿ 2021, 4:38 IST
ಪುತ್ತೂರು ಶ್ರೀಧರ ಭಂಡಾರಿ
ಪುತ್ತೂರು ಶ್ರೀಧರ ಭಂಡಾರಿ   

ತೆಂಕುತಿಟ್ಟು ಯಕ್ಷಗಾನದ ಪುಂಡು ವೇಷಧಾರಿ ಪುತ್ತೂರು ಶ್ರೀಧರ ಭಂಡಾರಿಯವರ ಕಲಾಯಾನಕ್ಕೆ ಹತ್ತಿರ ಹತ್ತಿರ ಆರು ದಶಕದ ದಾಖಲೆ. ಫೆಬ್ರುವರಿ 19ರಂದು ಅವರು ಇನ್ನಿಲ್ಲವಾದಾಗ ಅವರಿಗೆ ಎಪ್ಪತ್ತಾರು ವರುಷ. ‘ಸಿಡಿಲಮರಿ, ಗಂಡುಗತ್ತಿನ ಪುಂಡು ವೇಷಧಾರಿ, ಸಿಡಿದೆದ್ದ ಗಂಡುಗಲಿ, ಯಕ್ಷನಾಟ್ಯ ಚತುರ, ಶತದಿಗಿಣಗಳ ವೀರ...’ ಇವೆಲ್ಲಾ ಭಂಡಾರಿಯವರಿಗೆ ಅರ್ಹತೆಯು ತಂದಿತ್ತ ನಿಜಾರ್ಥದ ಬಿರುದುಗಳು.

‘ಒಂದು ನಿಮಿಷಕ್ಕೆ ನೂರು ಸುತ್ತು (ದಿಂಗಿಣ) ಹಾರಬೇಕು’ - ಝೀ ಮ್ಯೂಸಿಕ್ ವಾಹಿನಿಯು ತನ್ನ ‘ಶಭಾಷ್‌ ಇಂಡಿಯಾ’ ಕಾರ್ಯಕ್ರಮದಲ್ಲಿ ಶ್ರೀಧರ ಭಂಡಾರಿಗಳ ಮುಂದಿಟ್ಟ ಸವಾಲು. ಹಾರಿದ್ದು ಮಾತ್ರ ನೂರನಲವತ್ತೆಂಟು ಸುತ್ತು! ಅದು ಗಿನ್ನಿಸ್ ದಾಖಲೆ ಮಾಡಿತು. ಆಗವರಿಗೆ ಅರವತ್ತೆರಡು ವಯಸ್ಸು.

ಶ್ರೀಧರ ಭಂಡಾರಿ ಅಂದಾಗ ನೆನಪಾಗುವುದು ಅವರ ‘ಅಭಿಮನ್ಯು’ ಪಾತ್ರ. ಪುರಾಣದ ಅಭಿಮನ್ಯು ನಿಮ್ಮ ಗ್ರಹಿಕೆಗೆ ಬಂತೆನ್ನಿ. ಯಕ್ಷಗಾನದ ಸಂಪರ್ಕವಿರುವವರಿಗೆ ಆಗ ಇವರು ನೆನಪಾಗದೇ ಇರರು. ಹೀಗೆ ಪಾತ್ರವೂ, ವ್ಯಕ್ತಿಯೂ ಒಂದಾದ ಸಂಬಂಧವು ಮರೆಯಲಾಗದ ಬಂಧ, ಕಾಡುವ ಅನುಬಂಧ.

ADVERTISEMENT

ಭಂಡಾರಿ ಯಕ್ಷರಂಗದ ಬೆರಗು. ರಂಗ ಸಾಧ್ಯತೆಯನ್ನು ಮೀರಿದ ಸಾಹಸಿ. ಯಕ್ಷಗಾನದ ಎಲ್ಲಾ ಪುಂಡುವೇಷಗಳು ಇವರನ್ನು ಮರೆಯವು! ಪಾತ್ರಗಳೇ ಬೆರಗಾಗುವ ಕ್ಷಣಗಳನ್ನು ರಂಗದಲ್ಲಿ ಮೂಡಿಸಿದ ಅಪ್ರತಿಮ. ರಂಗಪ್ರವೇಶಿಸಿದರೆ ಸಾಕು, ಇದಿರು ಪಾತ್ರಧಾರಿಯ ಅರ್ಧ ಶಕ್ತಿಯನ್ನು ಸೆಳೆವ ಶಕ್ತಿ, ಜತೆಪಾತ್ರಗಳ ಅಭಿವ್ಯಕ್ತಿಗಳಿಗೆ ಅವ್ಯಕ್ತ ಅಂಕುಶ.

ಪುಂಡುವೇಷಗಳ ವೇಗವು ಅವರಿಗೆ ಸ್ವ-ಭಾವ. ಅದು ಹುಟ್ಟಿನಿಂದಲೇ ರೂಪುಗೊಂಡ ಶಿಲ್ಪ. ರಂಗದಲ್ಲಿ ಆ ವೇಗವು ಬಿಡಿಸುವ ಚಿತ್ತಾರಕ್ಕೆ ರಂಗವೇ ದಂಗಾಗಿದೆ. ಜವ್ವನದ ಈ ವೇಗದ ಕ್ಷಿಪ್ರತೆಗೆ ಶ್ರೀ ಧರ್ಮಸ್ಥಳ ಮೇಳದ ಮದ್ಲೆಗಾರ್ ಕೀರ್ತಿಶೇಷ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ನುಡಿತ, ಬಿಡಿತ. ದಿನದಿನವೂ ರಂಗದಲ್ಲಿ ಪ್ರಯೋಗ. ಸವಾಲುಗಳ ಆಪೋಶನಗಳು ಒಂದು ಕಾಲಘಟ್ಟದ ರಂಗ ವಿಸ್ಮಯ.

1957ರಲ್ಲಿ ಶ್ರೀ ಬಳ್ಳಂಬೆಟ್ಟು ಮೇಳದ ಮೂಲಕ ಶ್ರೀಧರರ ರಂಗಪ್ರವೇಶ. ಪ್ರಥಮ ಪಾತ್ರ ‘ಬಾಲಕೃಷ್ಣ’. ಮುಂದೆ ಎಲ್ಲಾ ಪಾತ್ರಗಳಲ್ಲೂ ಕೃಷ್ಣನ ಸೌಂದರ್ಯವನ್ನು ತಂದರು. ಅಭಿಮನ್ಯುವಿನ ಕ್ರೋಧದಲ್ಲೂ ಸೌಂದರ್ಯ, ಬಬ್ರುವಾಹನನ ಸಿಟ್ಟಿನಲ್ಲೂ ಮಾಧುರ್ಯ. ಇಂದ್ರಜಿತುವಿನ ಕಾಠಿಣ್ಯದ ಮಧ್ಯೆಯೂ ಇಣುಕುವ ಸೊಗಸುಗಾರಿಕೆ. 1959ರ ಬಾಲ್ಯದ ಆ ದಿವಸ. ಮೇರು ಕಲಾವಿದ ಕ್ರಿಶ್ಚನ್ ಬಾಬು ಅವರ ‘ಅಭಿಮನ್ಯು’ ಪಾತ್ರವನ್ನು ನೋಡಿದ್ದರು. ಅದು ಪಾತ್ರವಲ್ಲ, ಸಿಡಿಲ ಮಿಂಚು! ಪಾತ್ರದ ವೇಗ, ಕ್ಷಿಪ್ರ ರಂಗನಡೆ, ದಣಿವರಿಯದ ಅಭಿವ್ಯಕ್ತಿ, ಕ್ಷಣಕ್ಷಣಕ್ಕೆ ಏರುವ ಉತ್ಸಾಹ. ಆಟವನ್ನು ನೋಡುತ್ತಾ ಕುಳಿತ ಶ್ರೀಧರರ ಮನದೊಳಗೆ ಅಭಿಮನ್ಯು ಕುಳಿತುಬಿಟ್ಟ! ರಂಗದಲ್ಲಿ ನೋಡಿದ ಅಭಿಮನ್ಯುವಿನ ಆ ಕಿಚ್ಚಿನ ಭಾವವೇ ಮುಂದೆ ಯೋಗವಾಯಿತು.

ನಾಲ್ಕೈದು ವರುಷಗಳ ಹಿಂದಿನ ‘ಮಗುತನ’ದ ಭಾವ

ಇವರಿಗೆ ‘ಹುಟ್ಟುಕಲಾವಿದ’ ಪದವು ಹೆಚ್ಚು ಒಪ್ಪುತ್ತದೆ. ಕಣ್ಣು ಬಿಡುವಾಗಲೇ ಮನೆಯೊಂದು ಬಣ್ಣದ ಮನೆ! ಗೆಜ್ಜೆಯ ಸದ್ದು. ಬಣ್ಣದ ಓಕುಳಿ. ಜೌಳಿಯ ರಂಗು. ತಂದೆ ಬನ್ನೂರು ಶೀನಪ್ಪ ಭಂಡಾರಿಯವರ ತನುಸ್ಪರ್ಶದಲ್ಲೇ ಬೆಳೆದರು. ‘ತನ್ನ ಯಕ್ಷಗಾನ ಮೇಳದ ಹಾದಿ ಮಗನಿಗೆ ಬೇಡ’ - ತಂದೆಯ ನಿಲುವು. ಕಲಾವಿದನಾಗಲೇ ಬೇಕೆಂಬ ಹಟ ಮಗನದು. ಮಗನ ಹಟದಲ್ಲಿ ಆತನ ಉತ್ಕರ್ಷವಿದೆಯೆಂದರಿತ ತಂದೆ ರಾಜಿಯಾದರು. ಮತ್ತೆ ರಂಗದಲ್ಲಿ ತಂದೆ-ಮಗನದ್ದೇ ಜೋಡಿ. ಕೃಷ್ಣ-ಕಂಸ, ಪ್ರಹ್ಲಾದ-ಹಿರಣ್ಯಕಶಿಪು ಜತೆಗಾರಿಕೆ.

ಶ್ರೀ ಆದಿಸುಬ್ರಹ್ಮಣ್ಯ ಮೇಳ, ಶ್ರೀ ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ. ಬಳಿಕ ಸ್ವಂತದ್ದಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಮೇಳ, ಶ್ರೀ ಕಾಂತಾವರ ಮೇಳಗಳ ಯಜಮಾನಿಕೆ. ‘ಬಾಲೆ ನಾಗಮ್ಮ, ನಾದಕೇದಗೆ, ಬಂಟಮಲೆ ಬೈರವೆ, ಪಟ್ಟದ ಕತ್ತಿ, ಬಾಲೆದ ಓಲೆ, ಮರ್ಲೆದಿ ಮಾಚಕ್ಕೆ, ಜಾಗೆದ ಪಂಜುರ್ಲಿ, ಪುತ್ತೂರ್ದ ಮುತ್ತು..’ ಪ್ರಸಂಗಗಳ ಪ್ರದರ್ಶನ. ಕೊನೆಗೆ ಸಾಲ ಶೂಲವಾದಾಗ ಮೇಳಗಳನ್ನು ನಿಲುಗಡೆಗೊಳಿಸಿದರು. ಮತ್ತೆ ಧರ್ಮಸ್ಥಳ ಮೇಳದಿಂದ ನಿವೃತ್ತಿ ತನಕ ಕಲಾವಿದನಾಗಿ ದುಡಿತ.

ಶ್ರೀ ಧರ್ಮಸ್ಥಳ ಮೇಳ ಸೇರುವಾಗ (1964) ಶ್ರೀಧರರ ಪ್ರತಿಭೆಗೆ ಪ್ರಖರತೆ ಇದ್ದಿರಲಿಲ್ಲ. ಮೇಳದಲ್ಲಿ ಭಾಗವತ ಕಡತೋಕ ಮಂಜುನಾಥ ಭಾಗವತರು, ಮದ್ಲೆಗಾರ ಕೃಷ್ಣಯ್ಯ ಬಲ್ಲಾಳರ ನಿರಂತರ ಉಳಿಪೆಟ್ಟುಗಳಿಂದ ಶಿಲೆಯು ಶಿಲ್ಪವಾಯಿತು. ರಂಗದಲ್ಲಿ ವೀರರಸದ ಪಾತ್ರಗಳಿಗೆ ಸೊಗಸುಗಾರಿಕೆ ಬಂತು. ವೀರರಸ ಪ್ರಧಾನವಾದ ಪ್ರಸಂಗಗಳ ಮಾತಿಗೆ, ಮತಿಯಿದೆ, ಭಾವವಿದೆ ಎಂದು ತೋರಿದರು. ಅದನ್ನು ಅಭಿವ್ಯಕ್ತಿಸುವ ವಿನ್ಯಾಸವು ಸ್ವೀಕೃತಿ ಪಡೆಯಿತು.

ಅಭಿಮನ್ಯು, ಬಬ್ರುವಾಹನ, ಲಕ್ಷ್ಮಣ, ಭಾರ್ಗವ, ಜಯಂತ, ಚಂಡ-ಮುಂಡ, ಶಶಿಪ್ರಭೆ... ಬಹುಕಾಲ ರಂಗದಲ್ಲಿ ಕುಣಿದ, ಕುಣಿಕುಣಿದ ಪಾತ್ರಗಳು. ನಂತರ ಅದೇ ಜಾಡಿನಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ, ರಕ್ತಬೀಜ ಪಾತ್ರಗಳ ಪಯಣ. ಪಗಡಿ (ಪುಂಡು) ವೇಷದಲ್ಲೇ ದೀರ್ಘಕಾಲ ಕಾಣಿಸಿಕೊಂಡ ಇವರ ಇತರ ವೇಷಗಳನ್ನು ಕಣ್ಣುಗಳು ಫಕ್ಕನೆ ಒಪ್ಪಲು ಒದ್ದಾಡುತ್ತಿದ್ದವು.

ಮಳೆಗಾಲದಲ್ಲಿ ಪ್ರಸಿದ್ಧ ಕಲಾವಿದರ ತಂಡದೊಂದಿಗೆ ಕನ್ನಾಡು ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ತಿರುಗಾಟ. ಹೋದೆಡೆ ಶಿಷ್ಯರ-ಅಭಿಮಾನಿಗಳ ದೊಡ್ಡ ಗಡಣ. ವಿದೇಶದಲ್ಲಿ ತರಗತಿ ನಡೆಸಿದ್ದಾರೆ. ಪ್ರದರ್ಶನ ಏರ್ಪಡಿಸಿದ್ದಾರೆ. ನೂರಾರು ಪ್ರದರ್ಶನ, ಜನಮನ್ನಣೆ. ಮಂಗಳೂರು ವಿಶ್ವವಿದ್ಯಾಲಯದಿಂದ ‘ಯಕ್ಷಭಂಡಾರಿ’ (ಲೇ: ಚಂದ್ರಶೇಖರ ಮಂಡೆಕೋಲು) ಅಭಿನಂದನಾ ಕೃತಿ ಪ್ರಕಟವಾಗಿದೆ. ಸಂಮಾನ, ಪುರಸ್ಕಾರ, ಪ್ರಶಸ್ತಿಗಳ ಮಹಾಪೂರ. ಪತ್ನಿ ಉಷಾ. ನಿಜಾರ್ಥದಲ್ಲಿ ಪತಿಗೆ ಹೆಗಲೆಣೆ. ಯಕ್ಷಗಾನವನ್ನು ತುಂಬು ಪ್ರೀತಿಸುವ ಮಕ್ಕಳು, ಸಂಸಾರ.

ಒಂದೂವರೆ ದಶಕದ ಹಿಂದೆ ಪುತ್ತೂರಿನಲ್ಲಿ ‘ಯಕ್ಷಕೂಟ’ ತಂಡದ ಮೂಲಕ ಬಾಲ ಕಲಾವಿದರನ್ನು ರೂಪಿಸಿದ್ದರು. ಎರಡು ವರುಷಗಳ ಕಾಲ ತರಬೇತಿ ನೀಡಿ, ವಿದ್ಯಾರ್ಥಿಗಳು ಪಕ್ವಗೊಂಡ ಬಳಿಕವೇ ರಂಗಪ್ರವೇಶ ಮಾಡಿಸಿದ್ದರು. ಇದರಿಂದಾಗಿ ಮಕ್ಕಳ ತಂಡವು ಸುಪುಷ್ಟವಾಗಿ ಬೆಳೆದಿದೆ. ಆ ಕಾಲಘಟ್ಟದಲ್ಲಿ ನೂರಾರು ಪ್ರದರ್ಶನಗಳಾಗಿವೆ. ಹಲವು ಸ್ಪರ್ಧೆಗಳಲ್ಲಿ ತಂಡವು ಬಹುಮಾನ ಪಡೆದಿದೆ.

ಶ್ರೀಧರರ ಪಾತ್ರಗಳ ವೇಗದ ತೀವ್ರತೆಯನ್ನು ಕಾಲಕ್ಕೆ ತಾಳಿಕೊಳ್ಳಲು ಕಷ್ಟವಾಯಿತು. ದಶಕದ ಹಿಂದೆ ಅವರ ರಂಗದ ಓಟಕ್ಕೆ ‘ಆಶಕ್ತತೆ’ಯು ನಿರ್ದಾಕ್ಷಿಣ್ಯವಾಗಿ ಬೇಲಿ ಹಾಕಿತು. ಚೇತರಿಸಿದ ಬಳಿಕ ಶ್ರೀ ಎಡನೀರು ಮೇಳದಲ್ಲಿ ಸ್ವಲ್ಪಕಾಲ ತಿರುಗಾಟ ಮಾಡಿದ್ದರು. ಹವ್ಯಾಸಿ ಕೂಟಗಳಲ್ಲಿ ಭಾಗವಹಿಸಿದರು. ಕಳೆದ ಸುಮಾರು ಇಪ್ಪತ್ತೆಂಟು ವರುಷದಿಂದ ‘ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ’ಯನ್ನು ಮಳೆಗಾಲದಲ್ಲಿ ನಿರ್ವಹಿಸಿದ್ದರು.

ಇಳಿ ವಯಸ್ಸಲ್ಲೂ ಹೊಂತಕಾರಿ ಭಾವ

2019ರ ಮಧ್ಯಭಾಗದವರೆಗೂ ರಂಗದಲ್ಲಿ ಶ್ರೀಧರ ಭಂಡಾರಿ ವೇಷಮಾಡುತ್ತಾ ಇದ್ದರು. ಆ ಚಿಮ್ಮುವ ಉತ್ಸಾಹ, ಪುಟಿಯುವ ಕ್ರಿಯಾಶೀಲತೆಯು ಇಳಿವಯಸ್ಸಲ್ಲೂ ಆಶ್ಚರ್ಯಮೂಡಿಸುತ್ತಿತ್ತು. ರಂಗದಲ್ಲಿ ಎಷ್ಟೋ ಬಾರಿ ನೋಡಿದ್ದೇನೆ, ತನ್ನ ಮನೋವೇಗಕ್ಕೆ ಹೆಜ್ಜೆಯ ಊನವು ಅಡ್ಡಿಯಾದಾಗ ಮುಖದಲ್ಲಿ ವೇದನೆ ಪ್ರಕಟಗೊಳ್ಳುತ್ತಿತ್ತು. ಅಂತಹ ಹೊತ್ತಲ್ಲೆಲ್ಲಾ ಪಾತ್ರ ಮುಗಿದ ಬಳಿಕವೂ ಶ್ರೀಧರ ಭಂಡಾರಿಗಳು ಗಂಟೆಗಳ ಕಾಲ ಮೌನವಾಗುತ್ತಿದ್ದರು, ಮ್ಲಾನವಾಗುತ್ತಿದ್ದರು.

ಮೊನ್ನೆಮೊನ್ನೆಯಷ್ಟೇ ಅಂದರೆ ಡಿಸೆಂಬರ್‌ನಲ್ಲಿ ಶ್ರೀ ಧರ್ಮಸ್ಥಳ ಮೇಳದ ಈ ವರುಷದ ತಿರುಗಾಟದ ಸೇವೆಯಾಟದಲ್ಲಿ ‘ಶ್ರೀಕೃಷ್ಣ’ನ ಪಾತ್ರವನ್ನು ತನ್ನ ಅಶಕ್ತತೆಯ ಮಧ್ಯೆಯೂ ನಿರ್ವಹಿಸಿದ್ದು. ಅದು ಅವರ ಕೊನೆಯ ವೇಷ.

ತೆಂಕುತಿಟ್ಟು ಯಕ್ಷಗಾನದ ಇತಿಹಾಸದಲ್ಲಿ ‘ಪುಂಡುವೇಷದ ಐಕಾನ್’ ಆಗಿ ಹೊರಹೊಮ್ಮಿದ ಭಂಡಾರಿಗಳು ಇನ್ನು ನೆನಪು ಮಾತ್ರ. ಪುಂಡುವೇಷಕ್ಕೆ ಗೌರವ ಮತ್ತು ಅಂದಗಾರಿಕೆಯ ಸ್ಪರ್ಶವನ್ನು ಮಾಡಿದ ಭಂಡಾರಿಗಳ ಪಾತ್ರ ವೈಭವಗಳು ಯಕ್ಷಲೋಕ ಊಹಿಸದ ಅಪೂರ್ವ ವಿದ್ಯಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.