ADVERTISEMENT

ನಿಮ್ಮ ಪುಸ್ತಕ, ನೀವೇ ಪ್ರಕಾಶಕ...

ವಿಜಯ್ ಜೋಷಿ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲೇಖಕ ಗುರುರಾಜ ಕುಲಕರ್ಣಿ ಅವರು ಅಂತರ್ಜಾಲ ಮಾಧ್ಯಮದಲ್ಲಿ, ಕೆಲವು ಪತ್ರಿಕೆಗಳಲ್ಲಿ ಒಂದಿಷ್ಟು ಬರಹಗಳನ್ನು ಪ್ರಕಟಿಸಿದ್ದರು. ಆ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂದಾದರೆ ಸಂಪರ್ಕಿಸಬೇಕಿರುವುದು ಯಾರನ್ನು ಎಂಬುದು ಅವರಿಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲ, ಬಿಡಿ ಬರಹಗಳನ್ನು ಪುಸ್ತಕ ರೂಪದಲ್ಲಿ ತರಲು ಅವರಿಗೆ ಹೇಳಿಕೊಳ್ಳುವ ಉತ್ಸಾಹವೂ ಇರಲಿಲ್ಲ. ಆದರೆ, ಕನ್ನಡದಲ್ಲಿ ಇ–ಪುಸ್ತಕಗಳನ್ನು ಪ್ರಕಟಿಸುತ್ತಿರುವ ಮೈಲ್ಯಾಂಗ್‌ ಸಂಸ್ಥೆಯವರು ಲೇಖಕರಿಗೆ ಪುಸ್ತಕಗಳನ್ನು ತಾವೇ ಪ್ರಕಟಿಸಲು ವೇದಿಕೆ ಕಲ್ಪಿಸುತ್ತಿರುವ ವಿಚಾರ ಆ ಹೊತ್ತಿನಲ್ಲಿ ಕುಲಕರ್ಣಿ ಅವರಿಗೆ ಗೊತ್ತಾಯಿತು.

‘ನಾನು ಮೈಲ್ಯಾಂಗ್‌ ಸಂಸ್ಥೆಯವರ ಜೊತೆ ಮಾತುಕತೆ ನಡೆಸಿದೆ. ಪುಸ್ತಕದ ಪುಟಗಳ ವಿನ್ಯಾಸ ಮಾಡಲು ಅವರು ನನಗೆ ಸಹಾಯ ಮಾಡಿದರು. ಈಗ ನನ್ನ ‘ನಾನು, ನನ್ನ ರೂಂಮೇಟುಗಳು - ಬ್ರಹ್ಮಚಾರಿ ಬದುಕಿನ ಕತೆಗಳು’ ಇ–ಪುಸ್ತಕವು ಒಂದಿಷ್ಟು ಜನರನ್ನು ತಲುಪಿದೆ. ಇದರಲ್ಲಿ ಹಣಕಾಸಿನ ರಿಸ್ಕ್‌ ಇಲ್ಲ. ನಮ್ಮಂತಹ ಹೊಸ ಬರಹಗಾರರಿಗೆ ಇದು ಬಹಳ ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ. ನಾನು ಬರೆದಿರುವ ಇ–ಪುಸ್ತಕಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆತರೆ ಮುಂದೆ ಅದನ್ನು ಬೇಡಿಕೆಗೆ ಅನುಗುಣವಾಗಿ ಮುದ್ರಿತ ರೂಪದಲ್ಲಿಯೂ ತರಬಹುದು’ ಎಂದು ತಮ್ಮ ಮೊದಲ ಪುಸ್ತಕವು ಪ್ರಕಟವಾದ ಬಗ್ಗೆ ಹೇಳಿದರು ಕುಲಕರ್ಣಿ.

ಇದು ಕನ್ನಡದ ಡಿಜಿಟಲ್ ಜಗತ್ತಿನಲ್ಲಿ ಈಗ ತೆರೆದುಕೊಳ್ಳುತ್ತಿರುವ, ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಿಕೊಳ್ಳುವ ಅವಕಾಶವನ್ನು ಬಳಸಿಕೊಂಡಿರುವ ಒಂದು ಕಥೆ. ಅಂದಹಾಗೆ, ತಮ್ಮ ಪುಸ್ತಕವನ್ನು ತಾವೇ ಪ್ರಕಟಿಸಿಕೊಳ್ಳುವುದು ಹೊಸದೇನೂ ಅಲ್ಲ. ಡಿಜಿಟಲ್ ಜಗತ್ತಿನಲ್ಲಿ ಪುಸ್ತಕಗಳು ಪ್ರವೇಶ ಪಡೆಯುವ ಮೊದಲು, ಮುದ್ರಿತ ಪುಸ್ತಕಗಳು ಮಾತ್ರವೇ ಇದ್ದ ಸಂದರ್ಭದಲ್ಲಿಯೂ ತಮ್ಮ ಪುಸ್ತಕವನ್ನು ತಾವೇ ಪ್ರಕಟಿಸಿಕೊಳ್ಳುವವರು ಇದ್ದರು, ಅಂಥವರು ಈಗಲೂ ಇದ್ದಾರೆ. ಹೊಸಬರೂ ಹಳಬರೂ ಒಂದಿಷ್ಟು ಉತ್ಸಾಹ ತೋರಿ, ತಮ್ಮ ಪುಸ್ತಕವನ್ನು ತಾವೇ ಪ್ರಕಟಿಸಿದ ಉದಾಹರಣೆಗಳು ಇವೆ. ಪುಸ್ತಕ ಪ್ರಕಾಶನಕ್ಕೆ ಕೈಹಾಕಿದ ಕೆಲವರು ಹಣ ಕಳೆದುಕೊಂಡರು, ಇನ್ನು ಕೆಲವರಿಗೆ ಹಾಕಿದ ಹಣ ಒಂದಿಷ್ಟಾದರೂ ಮರಳಿತು.

ADVERTISEMENT

ಆದರೆ, ಡಿಜಿಟಲ್‌ ಜಗತ್ತಿನಲ್ಲಿ ತಮ್ಮ ಪುಸ್ತಕವನ್ನು ತಾವೇ ಪ್ರಕಟಿಸುವ ಮಾದರಿಯು ಹಣದ ವಿಚಾರವಾಗಿ ಇರುವ ರಿಸ್ಕ್‌ ಅನ್ನು ಬಹುಪಾಲು ನಿವಾರಿಸಿದೆ. ನಗಣ್ಯ ಎನ್ನಬಹುದಾದ ಖರ್ಚಿನಲ್ಲಿ ಲೇಖಕರು ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸ ಬಹುದು. ಈ ಮಾದರಿಯಲ್ಲಿ ಪುಸ್ತಕ ಪ್ರಕಟಿಸಲು ಅವಕಾಶ ನೀಡುವ ಡಿಜಿಟಲ್ ವೇದಿಕೆಗಳು ಗೂಗಲ್‌ ಪ್ಲೇಬುಕ್‌ ಆದಿಯಾಗಿ ಹಲವು ಇವೆ. ಆದರೆ, ಕನ್ನಡದ್ದೇ ಆದ ವೇದಿಕೆಯನ್ನು ಸೃಷ್ಟಿಸುವ ಪ್ರಯತ್ನವನ್ನು ಈಗ ‘ಮೈಲ್ಯಾಂಗ್‌’, ‘ಋತುಮಾನ’ದಂತಹ ಸಂಸ್ಥೆಗಳು ಆರಂಭಿಸಿವೆ.

ಕನ್ನಡದ ಪುಸ್ತಕಗಳನ್ನು ಡಿಜಿಟಲ್ ಜಗತ್ತಿಗೆ ಒಯ್ಯುವ ಪ್ರಯತ್ನಗಳು ಈಗಾಗಲೇ ಶುರುವಾಗಿವೆ. ಹಲವು ಪ್ರಕಾಶನ ಸಂಸ್ಥೆಗಳು ಈ ಕೆಲಸದಲ್ಲಿ ತೊಡಗಿವೆ. ಹಳೆಯ ಪುಸ್ತಕಗಳು, ಹೊಸ ಹೊತ್ತಗೆಗಳು ಇ–ಪುಸ್ತಕಗಳ ರೂಪ ಪಡೆದು ಬೇರೆ ಬೇರೆ ಡಿಜಿಟಲ್ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕನ್ನಡ ಪುಸ್ತಕಗಳ ಇ–ಆವೃತ್ತಿಯು ಮುಂದೆ ಪ್ರಕಾಶನ ಸಂಸ್ಥೆಗಳಿಗೆ ಹಾಗೂ ಬರಹಗಾರರಿಗೆ ಹೊಸ ಆದಾಯ ಮೂಲವೊಂದನ್ನು ಸೃಷ್ಟಿಸಿಕೊಡುತ್ತದೆ ಎಂಬ ನಂಬಿಕೆ ಇದೆ. ಈಗ ಕನ್ನಡದ ಹೊಸ ಬರಹಗಾರರಿಗೆ ಡಿಜಿಟಲ್ ಜಗತ್ತಿನಲ್ಲಿ ತಮ್ಮ ಪುಸ್ತಕಗಳನ್ನು ಪ್ರಕಟಿಸಿ, ಓದುಗರ ಮುಂದೆ ಇರಿಸಲು ವೇದಿಕೆ ಕಲ್ಪಿಸಿಕೊಟ್ಟರೆ ಬರಹಗಾರರ ಪಡೆಯೊಂದು ಬೆಳೆದೀತು ಎಂಬ ನಿರೀಕ್ಷೆ ಕೆಲವು ಪ್ರಕಾಶಕರಲ್ಲಿ ಇದೆ.

‘ನಾವು ಮೈಲ್ಯಾಂಗ್ ಸಂಸ್ಥೆಯನ್ನು ಆರಂಭಿಸಿದ ನಂತರದಲ್ಲಿ ನಮಗೆ ನಿರ್ದಿಷ್ಟವಾದ ಒಂದು ಪ್ರಶ್ನೆ ನೂರಾರು ಸಂಖ್ಯೆಯಲ್ಲಿ ಬರಲಾರಂಭಿಸಿತು. ನಾವು ಸಣ್ಣ ಊರುಗಳಲ್ಲಿ ಇದ್ದೇವೆ, ನಮ್ಮ ಪುಸ್ತಕ ಪ್ರಕಟಿಸುವವರು ಇಲ್ಲಿ ಯಾರೂ ಇಲ್ಲ, ನಾವೇ ಪ್ರಕಟಿಸಿದರೆ ಅದನ್ನು ಮಾರಾಟ ಮಾಡುವುದು ಹೇಗೆ ಎಂಬುದು ಗೊತ್ತಾಗುವುದಿಲ್ಲ, ಪುಸ್ತಕದ ಅಂಗಡಿಗಳಲ್ಲಿ ಹೊಸಬರ ಪುಸ್ತಕಗಳನ್ನು

ವಸಂತ ಶೆಟ್ಟಿ

ಎದ್ದುಕಾಣುವಂತೆ ಇರಿಸುವುದಿಲ್ಲ, ನಾವು ಬರವಣಿಗೆಯಲ್ಲಿ ತೊಡಗಬೇಕು ಎಂಬ ಬಯಕೆ ಇದ್ದರೂ ಅದಕ್ಕೆ ಪೂರಕ ವಾತಾವರಣ ಇಲ್ಲ, ಹೀಗಿರುವಾಗ ನಾವೇನು ಮಾಡಬೇಕು ಎಂಬುದು ಆ ಪ್ರಶ್ನೆಗಳಲ್ಲಿ ಇರುತ್ತಿದ್ದ ಸಾಮಾನ್ಯ ಎಳೆ’ ಎಂದು ಮೈಲ್ಯಾಂಗ್‌ ಸಂಸ್ಥೆಯ ಸಹಸಂಸ್ಥಾಪಕ ವಸಂತ ಶೆಟ್ಟಿ ನೆನಪಿಸಿಕೊಂಡರು. ಅವರು ತಮ್ಮ ಸಂಸ್ಥೆಯ ಮೂಲಕ, ಬರಹಗಾರರಿಗೆ ತಾವೇ ತಮ್ಮ ಪುಸ್ತಕ ಪ್ರಕಟಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದರ ಹಿಂದೆ ಕೆಲಸ ಮಾಡಿದ್ದು ಈ ಬಗೆಯ ಪ್ರಶ್ನೆಗಳು.

‘ನಮ್ಮ ಪುಸ್ತಕ ಯಾರು ಪ್ರಕಟಿಸುತ್ತಾರೆ ಎಂದು ಹೊಸಬರು ಕೇಳುವ ಪ್ರಶ್ನೆಗಳಿಗೆ ಡಿಜಿಟಲ್ ವೇದಿಕೆಯಲ್ಲಿ ಒಂದಿಷ್ಟು ಪರಿಹಾರ ಸಿಗುತ್ತದೆ. ಬರಹಗಾರರು ಎಷ್ಟೇ ಸಣ್ಣ ಊರಿನಲ್ಲಿ ಇರಲಿ, ಅವರ ಬರಹವು ಯೂನಿಕೋಡ್‌ನಲ್ಲಿ ಇದ್ದರೆ, ಮೈಲ್ಯಾಂಗ್‌ ವೇದಿಕೆಯಲ್ಲಿ ಒಂದು ಖಾತೆ ತೆರೆದು, ಅಲ್ಲಿ ಅವರು ತಮ್ಮ ಇ–ಪುಸ್ತಕವನ್ನು ಪ್ರಕಟಿಸಬಹುದು. ಆ ಪುಸ್ತಕದ ಬೆಲೆ ಎಷ್ಟಿರಬೇಕು ಎಂಬುದನ್ನೂ ಅವರೇ ತೀರ್ಮಾನಿಸಬಹುದು’ ಎಂದು ಶೆಟ್ಟಿ ತಮ್ಮ ಸಂಸ್ಥೆಯ ಹೊಸ ಹೆಜ್ಜೆಯ ಕುರಿತು ವಿವರ ನೀಡಿದರು.

ಮೈಲ್ಯಾಂಗ್‌ ಸಂಸ್ಥೆಯ ಪ್ರತಿನಿಧಿಗಳು ಇ–ಪುಸ್ತಕದ ಹೂರಣವನ್ನು ಒಮ್ಮೆ ಪರಿಶೀಲಿಸಿ, ನಂತರ ಅದನ್ನು ತಮ್ಮ ವೇದಿಕೆ ಮೂಲಕ ಓದುಗರ ಮುಂದೆ ಇರಿಸುತ್ತಾರೆ. ಪುಸ್ತಕದ ಪರಿಶೀಲನೆ ಕೆಲಸವು ಸಾಮಾನ್ಯವಾಗಿ 48 ಗಂಟೆಗಳಲ್ಲಿ ಆಗುತ್ತದೆ ಎಂಬುದು ಸಂಸ್ಥೆಯ ಹೇಳಿಕೆ. ಪುಸ್ತಕದ ಮಾರಾಟದಿಂದ ಬಂದ ಹಣದಲ್ಲಿ ಒಂದು ಪಾಲು ಲೇಖಕರಿಗೆ ಸಂದಾಯವಾಗುತ್ತದೆ. ‘ಮೊದಲ ಬಾರಿಗೆ ಪುಸ್ತಕ ಪ್ರಕಟಿಸಬೇಕು ಎಂಬ ಬಯಕೆ ಹೊಂದಿರುವವರಿಗೆ, ಖರ್ಚಿಲ್ಲದೆ ಆ ಕೆಲಸ ಆಗುವ ಮಾರ್ಗವಿದು. ‍ಪುಸ್ತಕ ಪ್ರಕಟಿಸುವ ಪ್ರಕ್ರಿಯೆಯನ್ನು ಎಲ್ಲರ ಕೈಗೂ ಎಟಕುವಂತೆ ಆಗಿಸುವ ಪ್ರಯತ್ನ ಕೂಡ ಹೌದು ಇದು’ ಎಂದು ಅವರು ಪ್ರತಿಪಾದಿಸಿದರು.

ಇದೇ ಮಾದರಿಯ ಪ್ರಯತ್ನಕ್ಕೆ ಮುಂದಾಗಿರುವ ಋತುಮಾನ ಸಂಸ್ಥೆಯು, ತಾವೇ ಪುಸ್ತಕ ಪ್ರಕಟಿಸಲು ಬಯಸುವವರಿಗೆ ಎರಡು ಬಗೆಯ ಸೇವೆಗಳನ್ನು ಆರಂಭಿಸಿದೆ. ಬರಹ ಸಿದ್ಧವಿದ್ದರೆ ಅದನ್ನು ಇ–ಪುಸ್ತಕ ರೂಪಕ್ಕೆ ಪರಿವರ್ತಿಸಿಕೊಡುವ ಕೆಲಸ ಹಾಗೂ ಬೇಡಿಕೆ ಬಂದಾಗ ಮಾತ್ರ ಮುದ್ರಿಸಿಕೊಡುವ (print on demand) ಕೆಲಸವನ್ನು ಋತುಮಾನ ತಂಡ ಮಾಡುತ್ತಿದೆ. ‘ಇ–ಪುಸ್ತಕ ಅಥವಾ ಮುದ್ರಿತ

ಕುಂಟಾಡಿ ನಿತೇಶ್

ಪುಸ್ತಕವು ನಾವು ಬಯಸುವ ಗುಣಮಟ್ಟವನ್ನು ಹೊಂದಿದ್ದರೆ ಅದನ್ನು ನಮ್ಮ ವೇದಿಕೆಯ ಮೂಲಕವೇ ಮಾರಾಟಕ್ಕೆ ಇರಿಸುತ್ತೇವೆ. ಗುಣಮಟ್ಟ ನಮಗೆ ಒಪ್ಪಿತವಾಗದೆ ಇದ್ದರೆ ಅದರ ಮಾರಾಟದ ಹೊಣೆಯನ್ನು ನಾವು ಹೊತ್ತುಕೊಳ್ಳುವುದಿಲ್ಲ’ ಎಂದು ಋತುಮಾನ ಪ್ರತಿನಿಧಿ ಕುಂಟಾಡಿ ನಿತೇಶ್ ಹೇಳಿದರು. ಆದರೆ, ಅವರು ಸಿದ್ಧಪಡಿಸಿ ಕೊಡುವ ಇ–ಪುಸ್ತಕವನ್ನು ಬೇರೆ ಬೇರೆ ಡಿಜಿಟಲ್ ವೇದಿಕೆಗಳ ಮೂಲಕ ಓದುಗರಿಗೆ ತಲುಪಿಸುವ ಅವಕಾಶ ಲೇಖಕರಿಗೆ ಸಿಗುತ್ತದೆ.

ಪ್ಲೇಬುಕ್ಸ್ ವೇದಿಕೆಯ ಮೂಲಕವೂ ಲೇಖಕರು ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಬಹುದು. ಆದರೆ, ಅಲ್ಲಿ ಕನ್ನಡದ ಅನುಭವ ಸಿಗುವುದಿಲ್ಲ. ‘ಆ ವೇದಿಕೆಯು ಕನ್ನಡ ಪುಸ್ತಕಗಳಿಗೆ ಸೀಮಿತವಾದುದಲ್ಲ. ಅಲ್ಲಿಗೆ ಬರುವ ಓದುಗರು ಕನ್ನಡದ ಪುಸ್ತಕಗಳನ್ನೇ ಅರಸಿ ಬಂದಿರುತ್ತಾರೆ ಎನ್ನಲು ಆಗದು’ ಎಂದು ಪ್ರಕಾಶಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

‘ನನಗೆ ಈಗ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇ–ಪುಸ್ತಕ ಪ್ರಕಟಣೆಯಲ್ಲಿ ಹೆಚ್ಚಿನ ರಿಸ್ಕ್‌ ಇಲ್ಲ. ಬರಹಗಾರನಾಗಿ ಅಷ್ಟೇನೂ ಹೆಸರು ಮಾಡಿರದಿದ್ದ ನನ್ನಂಥವರಿಗೆ ಇದು ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಡುತ್ತದೆ. ನಮ್ಮ ಇ–ಪುಸ್ತಕವು ಯಶಸ್ಸು ಕಂಡರೆ, ಪಿಒಡಿ ಮಾದರಿಯಲ್ಲಿ ಪ್ರತಿಗಳನ್ನು ಮುದ್ರಿಸಬಹುದು. ಇ–‍ಪುಸ್ತಕದ ಕಾರಣದಿಂದಾಗಿ ವಿದೇಶದಲ್ಲಿರುವ ಕನ್ನಡದ ಓದುಗರನ್ನೂ ತಲುಪಿದ್ದೇನೆ. ನಾನೇ ಮುದ್ರಿತ ಪುಸ್ತಕ ಮಾಡಿದ್ದಿದ್ದರೆ, ವಿದೇಶಗಳಲ್ಲಿನ ಓದುಗರನ್ನು ತಲುಪುವುದು ಕಷ್ಟವಾಗುತ್ತಿತ್ತು’ ಎಂದು ಕುಲಕರ್ಣಿ ಅವರು ತಮ್ಮ ಪುಸ್ತಕದ ಸುತ್ತಲಿನ ಅನುಭವವನ್ನು ಹಂಚಿಕೊಂಡರು.

‘ತಮ್ಮ ಬರಹದಲ್ಲಿನ ಗಟ್ಟಿತನದ ಬಗ್ಗೆ ವಿಶ್ವಾಸವಿದ್ದರೂ, ಪುಸ್ತಕ ಮುದ್ರಿಸುವ, ಅದನ್ನು ಮಾರಾಟ ಮಾಡುವ ಹಣಕಾಸಿನ ಹೊರೆಯನ್ನು ಹೊತ್ತುಕೊಳ್ಳಲಾರೆ ಎನ್ನುವ ಲೇಖಕರಿಗೆ ಇದು ಒಳ್ಳೆಯ ಅವಕಾಶ’ ಎಂದು ಯುವ ಲೇಖಕರೊಬ್ಬರು ಹೇಳಿದರು. ಅವರು ದುಡ್ಡು–ಕಾಸಿನ ಬಗ್ಗೆ ಬರೆದಿರುವ ಲೇಖನಗಳ ಸಂಗ್ರಹವೊಂದನ್ನು ಇ–ಪುಸ್ತಕವಾಗಿ ಪ್ರಕಟಿಸುವ ಬಯಕೆ ಹೊಂದಿದ್ದಾರೆ. ಓದುಗರು ಇಷ್ಟಪಟ್ಟರೆ ಅದನ್ನು ಬೇಡಿಕೆ ಆಧರಿಸಿ ಮುದ್ರಿತ ರೂಪದಲ್ಲಿ ತರಬಹುದು ಎಂಬ ಆಲೋಚನೆ ಅವರದ್ದು.

ಎಲ್ಲರೂ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಲು ಆರಂಭಿಸಿದರೆ, ಗುಣಮಟ್ಟವನ್ನು ಕಾಯುವ ಕೆಲಸ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಇದೆ. ಈ ವಿಚಾರದಲ್ಲಿ ಋತುಮಾನ ಹಾಗೂ ಮೈಲ್ಯಾಂಗ್‌ ಸಂಸ್ಥೆಗಳು ಬೇರೆ ಬೇರೆ ನಿಲುವು ತಾಳಿವೆ. ‘ಗುಣಮಟ್ಟ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೆ ನಮ್ಮ ವೇದಿಕೆ ಮೂಲಕ ಮಾರಾಟ ಇಲ್ಲ’ ಎಂದು ಋತುಮಾನ ಹೇಳಿದೆ. ಆದರೆ ಮೈಲ್ಯಾಂಗ್‌ ಸಂಸ್ಥೆಯು ‘ಈ ವಿಚಾರದಲ್ಲಿ ನಮಗೆ ಓದುಗರ ತೀರ್ಮಾನವೇ ಅಂತಿಮ. ಯಾವುದು ಚೆನ್ನ, ಯಾವುದು ಅಲ್ಲ ಎಂಬುದನ್ನು ಓದುಗರೇ ತೀರ್ಮಾನಿಸುವರು’ ಎಂಬ ನಿಲುವು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.