ADVERTISEMENT

ಪುಸ್ತಕ ವಿಮರ್ಶೆ: ಮೊಸಾದ್‌ ಸಾಹಸದ ಕಥೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 19:30 IST
Last Updated 18 ಸೆಪ್ಟೆಂಬರ್ 2021, 19:30 IST
ಪ್ರತೀಕಾರ ಕೃತಿ
ಪ್ರತೀಕಾರ ಕೃತಿ   

ಇಸ್ರೇಲ್‌ನ ಗುಪ್ತಚರ ಸಂಸ್ಥೆಯ ಸಾಹಸ ಬಲುದೊಡ್ಡದು. ಅಡಾಲ್ಫ್‌ ಹಿಟ್ಲರ್‌ನ ನೆಚ್ಚಿನ ಬಂಟನಾಗಿದ್ದ ನಾಜಿ ಸೇನೆಯ ಅಡಾಲ್ಫ್‌ ಐಷ್ಮನ್‌ನನ್ನು 1960ರಲ್ಲಿ ಸೆರೆ ಹಿಡಿದು ತಂದಿದ್ದು ಇದೇ ಮೊಸಾದ್‌ ಪಡೆ. ಇಸ್ರೇಲ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಕೊನೆಗೆ ಆತನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು. 1972ರ ಮ್ಯೂನಿಕ್‌ ಒಲಿಂಪಿಕ್‌ ಕೂಟದಲ್ಲಿ ಪಾಲ್ಗೊಂಡಿದ್ದ ಇಸ್ರೇಲ್‌ ಕ್ರೀಡಾಪಟುಗಳನ್ನು ಹತ್ಯೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಂಡಿದ್ದು ಸಹ ಇದೇ ಪಡೆ. ಮೊಸಾದ್‌ ಗೂಢಚಾರರ ಇಂತಹ ರೋಚಕ ಕಾರ್ಯಾಚರಣೆಗಳ ಕಥೆಯೇ ಡಾ.ಡಿ.ವಿ. ಗುರುಪ್ರಸಾದ್‌ ಅವರ ಹೊಸ ಕೃತಿ ‘ಪ್ರತೀಕಾರ’.

ಅದು 1976ರಲ್ಲಿ ನಡೆದ ಘಟನೆ. ಟೆಲ್‌ ಅವಿವ್‌ನಿಂದ ಪ್ಯಾರಿಸ್‌ಗೆ ಹೊರಟಿದ್ದ ವಿಮಾನವನ್ನು ಹೈಜಾಕ್‌ ಮಾಡಿದ್ದ ಪ್ಯಾಲೆಸ್ಟೀನ್‌ನ ಉಗ್ರರು ಆ ವಿಮಾನದಲ್ಲಿದ್ದ ಇಸ್ರೇಲ್‌ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಆ ವಿಮಾನ ಉಗಾಂಡಾದ ಎಂಟೆಬೆಯಲ್ಲಿ ಲ್ಯಾಂಡ್‌ ಆಗಿತ್ತು. ಸುಮಾರು ನಾಲ್ಕು ಸಾವಿರ ಕಿ.ಮೀ. ದೂರದಲ್ಲಿದ್ದ ಎಂಟೆಬೆಗೆ ರಾತ್ರಿ ವೇಳೆಯಲ್ಲಿ ದಾಳಿಯಿಟ್ಟ ಇಸ್ರೇಲ್‌ ಸೇನೆ, ಉಗ್ರರನ್ನು ಕೊಂದು, ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆದೊಯ್ದಿತ್ತು. ಈ ಕಾರ್ಯಾಚರಣೆಯಲ್ಲೂ ಮೊಸಾದ್‌ ಮಹತ್ವದ ಪಾತ್ರ ವಹಿಸಿತ್ತು.

ತನ್ನ ಬದ್ಧ ವೈರಿ ಇರಾನ್‌ಗೆ 2018ರಲ್ಲಿ ನುಗ್ಗಿದ್ದ ಮೊಸಾದ್‌ ಪ್ರತಿನಿಧಿಗಳು, ಅಲ್ಲಿಂದ ಅಣುಶಕ್ತಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಕದ್ದು ತಂದಿದ್ದರು. ಇದಲ್ಲದೆ ಆಪರೇಷನ್‌ ರಾತ್‌ ಆಫ್‌ ಗಾಡ್‌, ಆಪರೇಷನ್‌ ಒಪೇರಾ ಮತ್ತಿತರ ಕಾರ್ಯಾಚರಣೆಗಳ ಕಥೆಗಳು ಇಲ್ಲಿವೆ. ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣ ಇಲ್ಲಿಯ ಬರಹಗಳಿಗೆ ಸಿದ್ಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.