ADVERTISEMENT

ಪುಸ್ತಕ ವಿಮರ್ಶೆ: ರಾಜ್‌ಕುಮಾರ್‌, ಭಿನ್ನ–ಆಪ್ತ ನೋಟ

ಚ.ಹ.ರಘುನಾಥ
Published 26 ಜೂನ್ 2021, 19:45 IST
Last Updated 26 ಜೂನ್ 2021, 19:45 IST
ಅಂತರಂಗದ ಅಣ್ಣ
ಅಂತರಂಗದ ಅಣ್ಣ   

‘ತಿಮ್ಮಜ್ಜಿಯ ಮ್ಯಾಗ್ಲುಂಡಿ’ ಕಾದಂಬರಿಯ ಮೂಲಕ ಸಹೃದಯರಿಗೆ ಪರಿಚಿತರಾದ ಪ್ರಕಾಶರಾಜ್ ಮೇಹು, ಬರವಣಿಗೆ ಹಾಗೂ ನಿರ್ದೇಶನ ವಿಭಾಗದಲ್ಲಿ ಸಿನಿಮಾರಂಗದಲ್ಲೂ ಗುರ್ತಿಸಿಕೊಂಡವರು. ಪ್ರಕಾಶರಾಜ್ ಅವರ ‘ಅಂತರಂಗದ ಅಣ್ಣ’ ಕೃತಿಯನ್ನು ಲೇಖಕರ ಸಾಹಿತ್ಯ ಮತ್ತು ಸಿನಿಮಾಪ್ರೀತಿಯ ಸಮೀಕರಣದಂತೆ ನೋಡಬಹುದು. ಈ ಕೃತಿ ಲೇಖಕರನ್ನು ಇನ್ನಿಲ್ಲದಂತೆ ಪ್ರಭಾವಿಸಿದ ಅನನ್ಯ ವ್ಯಕ್ತಿತ್ವವೊಂದರ ಕುರಿತ ಸಾಂಸ್ಕೃತಿಕ ಕಥನವೂ ಹೌದು. ಈ ಬರವಣಿಗೆ ವೈಯಕ್ತಿಕ ಪರಿಧಿಯನ್ನು ಮೀರಿ ಸಾಂಸ್ಕೃತಿಕ ಕಥನದ ರೂಪ ಪಡೆದುಕೊಂಡಿರುವುದಕ್ಕೆ ಕಾರಣ, ಪ್ರಕಾಶರಾಜ್ ಅಂತರಂಗದಲ್ಲಿನ ಅಣ್ಣ ಈಗಾಗಲೇ ಕನ್ನಡಸಮೂಹದ ಅಂತರಂಗದಲ್ಲೂ ಸ್ಥಾನ ಪಡೆದಿರುವುದು.

ಕಳೆದ ಒಂದೂವರೆ ದಶಕದ ಅವಧಿಯಲ್ಲಿ ರಾಜ್‌ಕುಮಾರ್ ಅವರ ವ್ಯಕ್ತಿತ್ವ ಮತ್ತು ಸಾಧನೆಯ ಬಗ್ಗೆ ಪ್ರಕಟವಾದಷ್ಟು ಪುಸ್ತಕಗಳು ಕರ್ನಾಟಕದ ಬೇರೆ ಯಾವ ವ್ಯಕ್ತಿಯ ಬಗ್ಗೆಯೂ ಪ್ರಕಟಗೊಂಡಂತಿಲ್ಲ.ದೊಡ್ಡಹುಲ್ಲೂರು ರುಕ್ಕೋಜಿ ಅವರು ಎರಡು ಸಂಪುಟಗಳಲ್ಲಿ ಪ್ರಕಟಿಸಿದ, ರಾಷ್ಟ್ರಪ್ರಶಸ್ತಿ ಪಡೆದ ‘ಡಾ. ರಾಜ್‌ಕುಮಾರ್ ಸಮಗ್ರ ಜೀವನಚರಿತ್ರೆ’ ಕೃತಿಗಳಂತೂ ಕನ್ನಡ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಯಾವ ವ್ಯಕ್ತಿಗೂ ಸಲ್ಲದ ವಿಶೇಷ ಗೌರವವಾಗಿದೆ. ಈ ರಾಜಸಾಹಿತ್ಯ ಶ್ರೇಣಿಯಲ್ಲಿ ಪ್ರಕಾಶರಾಜ್ ಅವರ ‘ಅಂತರಂಗದ ಅಣ್ಣ’ ಕೃತಿ ಹತ್ತರಲ್ಲಿ ಹನ್ನೊಂದು ಎನ್ನಿಸಿಕೊಳ್ಳದೆ ಸಹೃದಯರ ಗಮನಸೆಳೆಯುವುದಕ್ಕೆ ಕಾರಣ, ಪುಸ್ತಕದ ಶೀರ್ಷಿಕೆಯಲ್ಲಿನ ಅಂತರಂಗ ಕೃತಿಯುದ್ದಕ್ಕೂ ಭಾವತರಂಗವಾಗಿ ಪ್ರವಹಿಸಿರುವುದು.

‘ಅಂತರಂಗದ ಅಣ್ಣ’ ಕೃತಿ ಎರಡು ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಒಂದು, ಕಲಾವಿದನಾಗಿ ರಾಜ್‌ಕುಮಾರ್‌ ಶ್ರೇಷ್ಠತೆಯ ಕುರಿತು ಹೇಳುತ್ತಲೇ ನಟನೊಬ್ಬ ಸಿನಿಮಾ ಪ್ರಭಾವಳಿ ಮೀರಿ ಸಾಂಸ್ಕೃತಿಕ ವ್ಯಕ್ತಿತ್ವವಾಗಿ ರೂಪುಗೊಂಡ ವಿಸ್ಮಯವನ್ನುಲೇಖಕರು ಕೊಂಚ ಬೆರಗಿನಿಂದಲೇ ದಾಖಲಿಸಿರುವುದು. ಈ ಬರವಣಿಗೆಯಲ್ಲಿ ಭಾವುಕತೆ, ಅಭಿಮಾನಕ್ಕಿಂತಲೂ ವೈಚಾರಿಕತೆ ಮತ್ತು ವಿಮರ್ಶಾಪ್ರಜ್ಞೆಯ ಪಾತ್ರವೇ ಹೆಚ್ಚಾಗಿದೆ. ಪುಸ್ತಕ ಮುಖ್ಯವೆನ್ನಿಸಲಿಕ್ಕೆ ಮತ್ತೊಂದು ಕಾರಣ, ಚಿತ್ರರಸಿಕರ ಗಮನಕ್ಕೆ ಅಷ್ಟಾಗಿ ಬಾರದ ರಾಜ್‌ಕುಮಾರ್‌ ಅವರ ಸಿನಿಮಾ ಜ್ಞಾನ ಹಾಗೂ ಸಂವೇದನಾಶೀಲತೆಯ ವಿವರಗಳನ್ನು ಪ್ರಕಾಶರಾಜ್‌ ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಟ್ಟಿರುವುದು.

ADVERTISEMENT

ನಿರ್ವಹಿಸಿದ ಪಾತ್ರಗಳ ಕಾರಣದಿಂದಾಗಿ ವಿಶಿಷ್ಟ ವರ್ಚಸ್ಸು ಹೊಂದಿದ್ದರೂ, ಮಗುವಿನ ನಿಷ್ಕಲ್ಮಶ ನಗುವಿನ ಮೂಲಕವೇ ರಾಜ್‌ಕುಮಾರ್‌ ಅವರ ಬಿಂಬ ಜನಮಾನಸದಲ್ಲಿ ಅಚ್ಚಾಗಿದೆ. ಹೆಚ್ಚು ಓದದ, ಲೋಕಜ್ಞಾನವಿಲ್ಲದ, ಆಡಿಸುವವರ ಕೈಯ ಮಗುವಿ
ನಂತೆ ಮೇಲ್ನೋಟಕ್ಕೆ ಕಾಣಿಸುವ ರಾಜ್‌ಕುಮಾರ್‌ ಅವರೊಳಗೊಬ್ಬ ವಿಶೇಷ ಒಳನೋಟಗಳ ಸಿನಿಮಾತಜ್ಞನಿದ್ದ ಎನ್ನುವುದಕ್ಕೆ ಹಲವು ನಿದರ್ಶನಗಳು ಕೃತಿಯಲ್ಲಿವೆ. ‘ಭಕ್ತ ಕುಂಬಾರ’ ಹಾಗೂ ‘ಕವಿರತ್ನ ಕಾಳಿದಾಸ’ ಸಿನಿಮಾಗಳು ಅವರು ಆಸೆಪಟ್ಟ ಕಾರಣದಿಂದಾಗಿ ನಿರ್ಮಾಣವಾಗಿ ದೊಡ್ಡ ಗೆಲುವು ಸಾಧಿಸಿದವು. ಹಲವು ಸಿನಿಮಾಗಳಲ್ಲಿನ ಬಿಡಿ ದೃಶ್ಯಗಳು ಉತ್ತಮಗೊಳ್ಳುವಲ್ಲಿ ರಾಜ್‌ ನೀಡಿದ ಸಲಹೆಗಳು ಹಾಗೂ ತಮ್ಮ ಪಾತ್ರಕ್ಕಿಂತಲೂ ಸಿನಿಮಾದ ಕಥೆ ಮುಖ್ಯ ಎನ್ನುವ ಅವರ ನಿಲುವನ್ನು ಲೇಖಕರು ಉದಾಹರಣೆಗಳೊಂದಿಗೆ ದಾಖಲಿಸಿರುವುದು ರಾಜ್‌ರನ್ನು ಮತ್ತೊಂದು ರೂಪದಲ್ಲಿ ನೋಡಲಿಕ್ಕೆ ಒತ್ತಾಯಿಸುವಂತಿದೆ.

ಅನೇಕ ವರ್ಷಗಳ ಕಾಲ ರಾಜ್‌ ಕುಟುಂಬದೊಂದಿಗೆ ಆಪ್ತ ಒಡನಾಟ ಹೊಂದಿದ್ದುದು ಪ್ರಕಾಶ್‌ ಅವರ ಬರಹಕ್ಕೆ ಅಭಿಮಾನದ ಗುಣ
ತಂದುಕೊಟ್ಟಿದ್ದರೂ, ತಮ್ಮ ಅಭಿಪ್ರಾಯಗಳಿಗೆ ಅವರು ಒದಗಿಸುವ ನಿದರ್ಶನಗಳು ಕೃತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ.
ರಾಜ್‌ಕುಮಾರ್‌ ವ್ಯಕ್ತಿತ್ವ ಮತ್ತು ಸಾಧನೆಯನ್ನು ವಿವಿಧ ಕಲಾವಿದರ ಅಭಿಪ್ರಾಯಗಳ ಮೂಲಕ ಚಿತ್ರಿಸುವ ಪ್ರಯತ್ನ ಕೃತಿಯಲ್ಲಿದೆ. ವಿಷ್ಣುವರ್ಧನ್‌, ಅಂಬರೀಶ್‌, ಅನಂತನಾಗ್‌, ಲೋಕೇಶ್‌, ಶಿವಾಜಿ ಗಣೇಶನ್‌, ಅಮಿತಾಭ್ ಬಚ್ಚನ್, ರಜನಿಕಾಂತ್‌, ಕಮಲಹಾಸನ್‌ ಮುಂತಾದವರು ರಾಜ್‌ರೊಂದಿಗೆ ಹೊಂದಿದ್ದ ಒಡನಾಟ ಹಾಗೂ ರಾಜ್‌ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಮಾನ–ಗೌರವವನ್ನು ಲೇಖಕರು ವಿವರವಾಗಿ ದಾಖಲಿಸಿದ್ದಾರೆ.ರಾಜ್ ವ್ಯಕ್ತಿತ್ವದ ಹೊಳಪು ಹೆಚ್ಚಿಸಿದ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ವರದರಾಜ್ ಅವರ ಕುರಿತು ಕುತೂಹಲಕರ ಸಂಗತಿಗಳೂ ಕೃತಿಯಲ್ಲಿವೆ.

ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್ ಅವರು ಜಾತಿಯ ಕಾರಣದಿಂದಾಗಿ ಅವಮಾನಗಳನ್ನು ಎದುರಿಸಿದರೇ‌ ಇಲ್ಲವೇ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದನ್ನು ಈ ಕೃತಿಯ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು. ವಿಜಯ್‌ ಅವರಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಮೂಲಪ್ರಶ್ನೆಯೇ ಹಿಂದೆ ಸರಿದು, ‘ಜಾತಿಯ ಬಗ್ಗೆ ಚರ್ಚಿಸುವುದು ಕಲಾವಿದನಿಗೆ ಮಾಡುವ ಅವಮಾನ’ ಎನ್ನುವ ಅರ್ಥದ ಮಾತುಗಳು ಗಟ್ಟಿಯಾಗಿ ಕೇಳಿಸುತ್ತಿವೆ. ಸಮಾಜದ ಮಾತಿರಲಿ, ‘ಕಲಾವಿದರಾದ ನಾವೆಲ್ಲಾ ಒಂದೇ’ ಎಂದು ಸಿನಿಮಾಮಂದಿ ಆಡುವ ಮಾತು ಎಷ್ಟು ಠೊಳ್ಳೆನ್ನುವುದಕ್ಕೆ, ‘ಅಂತರಂಗದ ಅಣ್ಣ’ ಕೃತಿ ದಾಖಲಿಸಿರುವ, ಜಾತಿಯ ಕಾರಣದಿಂದಾಗಿ ರಾಜ್‌ ಅನುಭವಿಸಿದ ಅವಮಾನ, ತೊಡಕುಗಳ ವಿವರಗಳನ್ನು ಗಮನಿಸಬಹುದು. ಎಲ್ಲ ತೊಡಕುಗಳನ್ನು ದಾಟಿ, ಕನ್ನಡಿಗರ ಮನಸ್ಸಿನಲ್ಲಿ ಜಾತ್ಯತೀತ ವ್ಯಕ್ತಿಯಾಗಿ ರಾಜ್‌ಕುಮಾರ್ ಸ್ಥಾನ ಕಂಡುಕೊಂಡಿರುವುದು ಕನ್ನಡ ಸಾಂಸ್ಕೃತಿಕ ಸಂದರ್ಭದ ಒಂದು ಅಪೂರ್ವ ವಿದ್ಯಮಾನ. ಈ ಪವಾಡ ಎಲ್ಲ ಸಂದರ್ಭದಲ್ಲೂ ಎಲ್ಲರ ವಿಷಯದಲ್ಲೂ ಸಾಧ್ಯವಾಗುವುದಿಲ್ಲ ಎನ್ನುವ ವಾಸ್ತವವನ್ನು ‘ಜಾತಿ ಎಲ್ಲಿದೆ’ ಎಂದು ಪ್ರಶ್ನಿಸುವವರು ಮರೆಯಬಾರದು.

ರಾಜ್‌ಕುಮಾರ್‌ ಅವರ ಹೆಚ್ಚು ಜನಪ್ರಿಯವಲ್ಲದ ಮುಖವೊಂದನ್ನು ಪರಿಚಯಿಸುವ ಮೂಲಕ ‘ಅಂತರಂಗದ ಅಣ್ಣ’ ಕೃತಿ ಆಪ್ತವೆನ್ನಿಸುತ್ತದೆ.ಅಪರೂಪದ ಛಾಯಾಚಿತ್ರಗಳನ್ನು ಬಳಸಿಕೊಂಡಿರುವುದು ಕೃತಿಗೆ ಮೆರುಗು ನೀಡಿದ್ದರೂ, ಫೋಟೊಗಳಿಗೆ ಅಡಿ ಟಿಪ್ಪಣಿಗಳು ಇಲ್ಲದಿರುವುದು ಕೊರತೆಯಾಗಿ ಕಾಣಿಸುತ್ತದೆ. ‘ಪರಿವಿಡಿ’ಯೂ ಕೃತಿಗೆ ಅಗತ್ಯವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.