ADVERTISEMENT

ಲಾಲ್‌ಬಾಗ್‌ ಕಥೆ ಹೇಳುವ ಕೃತಿ ಬಿಡುಗಡೆ: ಹಲವು ಸ್ವಾರಸ್ಯಗಳ ಕಣಜ

‘ಬೆಂಗಳೂರ್ಸ್‌ ಲಾಲ್‌ಬಾಗ್‌: ಎ ಕ್ರಾನಿಕಲ್‌ ಆಫ್‌ ದಿ ಗಾರ್ಡನ್‌ ಆ್ಯಂಡ್‌ ದಿ ಸಿಟಿ’ ಹೆಸರಿನ ಕೃತಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 15:03 IST
Last Updated 26 ಆಗಸ್ಟ್ 2021, 15:03 IST
ಸುರೇಶ್‌ ಜಯರಾಮ್‌
ಸುರೇಶ್‌ ಜಯರಾಮ್‌   

ಬೆಂಗಳೂರು: ಕಾಂಕ್ರಿಟ್‌ ಕಾಡಾಗಿರುವ ರಾಜಧಾನಿ ಬೆಂಗಳೂರಿನೊಳಗೆ ಓಯಸೀಸ್‌ನಂತೆ, ಸಸ್ಯಕಾಶಿ ಎಂದೇ ಪ್ರಸಿದ್ಧಿಯಾಗಿರುವ ಲಾಲ್‌ಬಾಗ್‌ ಸಸ್ಯೋದ್ಯಾನ ಕಳೆದ ಕೆಲ ಶತಮಾನಗಳಲ್ಲಿ ಹೇಗೆ ಬೆಳೆಯಿತು, ವಿಸ್ತರಣೆಯಾಯಿತು ಎಂದು ವಿವರಿಸುವ ಕೃತಿಯೊಂದು ಬಿಡುಗಡೆಯಾಗಿದೆ.

‘ಬೆಂಗಳೂರ್ಸ್‌ ಲಾಲ್‌ಬಾಗ್‌: ಎ ಕ್ರಾನಿಕಲ್‌ ಆಫ್‌ ದಿ ಗಾರ್ಡನ್‌ ಆ್ಯಂಡ್‌ ದಿ ಸಿಟಿ’ ಹೆಸರಿನ ಈ ಕೃತಿಯನ್ನು ಕಲಾವಿದ, ಇತಿಹಾಸಕಾರ ಸುರೇಶ್‌ ಜಯರಾಮ್‌ ರಚಿಸಿದ್ದಾರೆ. ಲಾಲ್‌ಬಾಗ್‌ನ ಸಸ್ಯೋದ್ಯಾನದ ಇತಿಹಾಸ ಹಾಗೂ ಉದ್ಯಾನನಗರಿ ಬೆಂಗಳೂರಿನ ಕಥೆಯನ್ನು ಈ ಕೃತಿ ಹೊಂದಿದೆ. ಕೆಂಪೇಗೌಡರು ಆಳಿದ ಬೆಂಗಳೂರು ಹೇಗಿತ್ತು?, ಲಾಲ್‌ಬಾಗ್‌ ಒಳಗಿರುವ ಸ್ಮಾರಕಗಳು, ಇಲ್ಲಿಗೆ ಭೇಟಿ ನೀಡಿದ ಗಣ್ಯರು, ನಾನಾ ಬಗೆಯ ಗಿಡಮರಗಳು, ಹೂಹಣ್ಣುಗಳ ಪರಿಚಯ ಇದರಲ್ಲಿ ಅಡಕಗೊಂಡಿದೆ.

ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಂಶುಪಾಲರಾಗಿದ್ದ ಸುರೇಶ್‌ ಜಯರಾಮ್‌, ಐವತ್ತು ವರ್ಷಗಳಿಂದ ಲಾಲ್‌ಬಾಗ್‌ನ ಪ್ರತಿ ಬದಲಾವಣೆಯನ್ನು ಹತ್ತಿರದಿಂದ ನೋಡಿದವರು. ‘ಒಂದು ಮುಂಜಾನೆ ಲಾಲ್‌ಬಾಗ್‌ನಲ್ಲಿ ನಡಿಗೆ ಮಾಡುತ್ತಿರುವಾಗ ಮನಸ್ಸಿನಲ್ಲಿ ಬಿತ್ತಿದ ಬೀಜ ಈಗ ಈ ಕೃತಿಯಾಗಿ ಹೆಮ್ಮರವಾಗಿ ಬೆಳೆದಿದೆ. ಲಾಲ್‌ಬಾಗ್‌ ಬೆಳೆಯುವುದನ್ನು ಹಾಗೂ ಬದಲಾಗುವುದನ್ನು ನಾನು ನೋಡಿದ್ದೇನೆ. ಅದೇ ರೀತಿ ಈ ಸಸ್ಯೋದ್ಯಾನದ ಸುತ್ತಲಿನ ನಗರ ಅಭಿವೃದ್ಧಿಯಾಗುತ್ತಿರುವುದನ್ನೂ ನಾನು ಗಮನಿಸಿದ್ದೇನೆ’ ಎನ್ನುತ್ತಾರೆ ಸುರೇಶ್‌ ಜಯರಾಮ್‌.

ADVERTISEMENT

261 ವರ್ಷಗಳ ಹಿಂದೆ ಹೈದರ್‌ ಅಲಿ ನಿರ್ಮಾಣ ಮಾಡಿದ್ದ ಈ ಲಾಲ್‌ಬಾಗ್‌ನ ದೃಶ್ಯಗಳನ್ನು ಫೋಟೊ, ಚಿತ್ರಕಲೆ ಹಾಗೂ ಪೋಸ್ಟ್‌ಕಾರ್ಡ್‌ ರೂಪದಲ್ಲಿ ಈ ಕೃತಿಯಲ್ಲಿ ನೀಡಲಾಗಿದೆ. ‘ಸುಲ್ತಾನ್ಸ್‌ ಬಾಗ್‌’ ಎನ್ನುವ ಭಾಗದಲ್ಲಿ ಈ ಕುರಿತ ಉಲ್ಲೇಖವನ್ನೂ ಸುರೇಶ್‌ ಮಾಡಿದ್ದಾರೆ. ತಮ್ಮ ಕುಟುಂಬದ ಆಲ್ಬಂಗಳಲ್ಲಿ ಇದ್ದ ಲಾಲ್‌ಬಾಗ್‌ನ ಹಳೆಯ ಫೋಟೊಗಳನ್ನೂ ಕೃತಿಯಲ್ಲಿ ಸುರೇಶ್‌ ಬಳಸಿಕೊಂಡಿದ್ದಾರೆ. ‘ಬೆಂಗಳೂರು ನಗರ ಎಷ್ಟೇ ಬದಲಾದರೂ ಹಲವು ಸ್ಥಳ, ವಿಷಯಗಳು ಇನ್ನೂ ಹಾಗೆಯೇ ಉಳಿದಿವೆ. ಈ ಕೃತಿಯು ನಗರವನ್ನು ಹೊಸ ದೃಷ್ಟಿಕೋನದಲ್ಲಿ ನೋಡಲು ಬೆಂಗಳೂರಿನವರಿಗೆ ಸಹಾಯವಾಗಲಿದೆ’ ಎಂದರು ಸುರೇಶ್‌.

‘ಲಾಲ್‌ಬಾಗ್‌ ಕುರಿತಂತೆ ಇರುವ ಎಲ್ಲ ದಾಖಲೆಗಳು, ಕೃತಿಗಳು, ದತ್ತಾಂಶಗಳನ್ನು ಅಧ್ಯಯನ ನಡೆಸಿ ಮೂರು ವರ್ಷಗಳ ಅವಧಿಯಲ್ಲಿ ಈ ಕೃತಿಯನ್ನು ರಚಿಸಿದ್ದೇನೆ. ಬೆಂಗಳೂರು ಎಷ್ಟೇ ನಗರೀಕರಣವಾದರೂ, ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ ಬೆಂಗಳೂರಿನ ಎರಡು ಶ್ವಾಸಕೋಶವಾಗಿರಲಿದೆ’ ಎನ್ನುತ್ತಾರೆ ಸುರೇಶ್‌.

ಪ್ರೆಸ್‌ ವರ್ಕ್ಸ್‌ ಸಹಯೋಗದಲ್ಲಿ ವಿಷ್ಯುವಲ್‌ ಆರ್ಟ್ಸ್‌ ಕಲೆಕ್ಟಿವ್‌ ಟ್ರಸ್ಟ್‌ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಬೆಲೆ ₹1 ಸಾವಿರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.