ADVERTISEMENT

ಕಪಿಲಾ ಗೋವಿನ ಸಮಗ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:30 IST
Last Updated 8 ಮೇ 2021, 19:30 IST
ಕಪಿಲಾದರ್ಶನ
ಕಪಿಲಾದರ್ಶನ   

ದೇಸಿ ತಳಿಗಳ ಆಕಳುಗಳನ್ನು ಸಾಕುವವರೇ ವಿರಳರಾಗಿದ್ದಾರೆ. ದನದ ಸಂತೆಗೆ ಹೋದರೆ ಸಾವಿರ ಆಕಳುಗಳಲ್ಲಿ ಆರೆಂಟು ಶುದ್ಧ ತಳಿಯ ದೇಸಿ ಆಕಳುಗಳೂ ಸಿಗುವುದಿಲ್ಲ. ನಮ್ಮ ಜನ ಮತ್ತೆ ದೇಸಿ ತಳಿಯ ಆಕಳುಗಳನ್ನು ಸಾಕುವಂತಾಗಬೇಕು ಎನ್ನುವುದು ಲೇಖಕ ವಿಶ್ವನಾಥ ಭಟ್ಟ ಗೋಳಿಕೈ ಅವರ ಕಳಕಳಿ. ಆ ಆಶಯವನ್ನು ಹೊತ್ತು, ಊರೂರು ಸುತ್ತಿ, ತಜ್ಞರನ್ನೂ ಭೇಟಿಮಾಡಿ ಅವರು ಸಿದ್ಧಪಡಿಸಿದ ಹೊತ್ತಿಗೆಯೇ ಕಪಿಲಾದರ್ಶನ.

ಹೆಸರೇ ಸೂಚಿಸುವಂತೆ ಕಪಿಲಾ ತಳಿಯ ಆಕಳು ಕುರಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಆಕಳುಗಳಲ್ಲೆಲ್ಲ ಕಪಿಲಾ ತಳಿಯ ಆಕಳುಗಳು ತುಂಬಾ ಶ್ರೇಷ್ಠ ಎಂದು ಪ್ರತಿಪಾದಿಸುವ ಲೇಖಕರು, ಅದರ ಕ್ಷೀರವನ್ನು ಅಮೃತಕ್ಕೆ ಹೋಲಿಸಿದ್ದಾರೆ. ಈ ಕ್ಷೀರವು ವಾತ, ಪಿತ್ತ, ಕಫ ದೋಷವನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಕಪಿಲೆಯ ಹಾಲು ವಿವೇಕವನ್ನೂ ಬುದ್ಧಿಯನ್ನೂ ಬೆಳೆಸುತ್ತದೆ. ಅಂಗಸೌಷ್ಟವ ವೃದ್ಧಿಗೂ ಸಹಕಾರಿಯಾಗಿದೆ ಎಂದು ವಿವರಿಸುತ್ತಾರೆ. ಕಪಿಲಾ ತಳಿಯಲ್ಲಿರುವ ಗೌರಶಬಲಾ, ಗೌರಪಿಂಗಲಾ, ರಕ್ತಕಪಿಲಾ, ನೀಲಪಾಟಲಾ, ನೀಲಪಿಂಗಾಕ್ಷಿ, ರಕ್ತಪಿಂಗಲಾ, ಬಹುಪಿಂಗಾಕ್ಷಿ, ನೀಲರೋಹಿಣಿ, ಶ್ವೇತಪಿಂಗಾಕ್ಷಿ, ಶ್ವೇತಪಿಂಗಲಾ ಪ್ರಭೇದಗಳ ಸಚಿತ್ರ ಮಾಹಿತಿಯನ್ನೂ ನೀಡಿದ್ದಾರೆ.

ಬಸವ ಭೂಪಾಲರ ‘ಶಿವತತ್ವರತ್ನಾಕರ’ದಲ್ಲಿ ಪ್ರಸ್ತಾಪಗೊಂಡ ವಿವರಗಳನ್ನೂ ಈ ಕೃತಿಯಲ್ಲಿ ಬಳಸಿಕೊಳ್ಳಲಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲೂ ಈ ಗೋವಿನ ಮಹತ್ವವನ್ನು ವಿವರಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು, ಗೋಸಂರಕ್ಷಣೆ ವಿಧಾನದ ಕುರಿತು ಚರ್ಚಿಸಲಾಗಿದೆ. ಹೈದರಾಲಿ ಕಾಲದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಗೋಹತ್ಯೆ ಮಾಡುವವರ ಕೈಯನ್ನು ಕತ್ತರಿಸುವ ಶಿಕ್ಷೆಯನ್ನೂ ಆತ ವಿಧಿಸಿದ್ದ ಎಂದೂ ಪ್ರಸ್ತಾಪಿಸಲಾಗಿದೆ. ಗೋವುಗಳ ಆರ್ಥಿಕ ಕ್ಷಮತೆ ಕುರಿತು ಮಾಹಿತಿ ನೀಡುವ ಪ್ರಯತ್ನವನ್ನೂ ಲೇಖಕರು ಮಾಡಿದ್ದಾರೆ. ಗೋವುಗಳಿಗೆ ಸಂಬಂಧಿಸಿದ ಬೇರೆ ವಿಷಯಗಳು ಚರ್ಚಿತವಾಗಿದ್ದರೂ ಕಪಿಲಾ ತಳಿಯ ಆಕಳುಗಳ ವಿಷಯವನ್ನೇ ಈ ಕೃತಿ ತನ್ನ ಕೇಂದ್ರವಾಗಿಸಿಕೊಂಡಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.