ADVERTISEMENT

ಪುಸ್ತಕ ವಿಮರ್ಶೆ: ‘ರೈತ ಹೋರಾಟ’ವೆಂಬ ತಾಯಿ

ಜ.ನಾ.ತೇಜಶ್ರೀ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಕದನ ಕಣ
ಕದನ ಕಣ   

ನ್ಯಾಯಕ್ಕಾಗಿ, ಪ್ರೀತಿಯಿಂದ, ಹಿಂಸೆಯಿಲ್ಲದೆ ನಡೆಯುವ ಎಲ್ಲ ಪ್ರತಿಭಟನೆ ಮತ್ತು ಹೋರಾಟಗಳ ಕೇಂದ್ರದಲ್ಲೂ ಹೆಣ್ಣು-ಹೃದಯ, ತಾಯಿಕರುಳು ಇರುತ್ತದೆ. ಜಗತ್ತಿನಲ್ಲಿ ಮತ್ತು ಭಾರತದಲ್ಲಿ ನಡೆಯುತ್ತಿರುವ ಹತ್ತು ಹಲವು ಹೋರಾಟಗಳ ಮುನ್ನೆಲೆಯಲ್ಲಿ ಮೊದಲಿನಿಂದಲೂ ಹೆಣ್ಣು ಮಕ್ಕಳಿದ್ದಾರೆ. ಮಹಾಶ್ವೇತಾದೇವಿ, ಮೇಧಾ ಪಾಟ್ಕರ್, ಅರುಂಧತಿ ರಾಯ್, ವಂದನಾ ಶಿವ, ಅರುಣಾ ರಾಯ್, ಗ್ರೇಟಾ ಥನ್ಬರ್ಗ್ ಎಲ್ಲರೂ ಇಂಥ ‘ರಾಜಕಾರಣ’ವಲ್ಲದ ಹೋರಾಟಗಳ ಮುಂದಾಳುಗಳು. ಕಳೆದ ಕೆಲವು ತಿಂಗಳುಗಳಿಂದ ಉತ್ತರದಲ್ಲಿ ನಡೆದಿರುವ ರೈತ ಹೋರಾಟಕ್ಕೂ ಮೂಲಪ್ರೇರಣೆ ಈ ‘ತಾಯಿತತ್ವ’ವೇ.

ಕರ್ನಾಟಕ ರೈತಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಎಚ್.ಆರ್.ನವೀನ್ ಕುಮಾರ್ ಅವರು, ದೆಹಲಿಯಂಚಿನಲ್ಲಿ ನಡೆಯುತ್ತಿರುವ ರೈತಹೋರಾಟದಲ್ಲಿ ಪಾಲ್ಗೊಂಡು, ಅಲ್ಲಿನ ಅನುಭವಗಳನ್ನು ದಾಖಲಿಸಿರುವ ಪುಸ್ತಕ ‘ಕದನ ಕಣ’. ಆತ್ಮಕಥೆಯಂತೆ ಹರಿಯುವ ಈ ಕೃತಿಯು ‘ಕೇವಲ ತನಗೆ’ ಸೀಮಿತವಾಗದೆ ಸಮುದಾಯಗಳ ಕಡೆಗೆ ವಿಸ್ತರಿಸಿಕೊಂಡಿದೆ.

‘ಮಹಿಳಾ ಶಕ್ತಿ’ ಎನ್ನುವ ಎರಡು ಪುಟಗಳ ಅಧ್ಯಾಯವು ಈ ಪುಸ್ತಕದ ಮತ್ತು ರೈತ ಹೋರಾಟದ ಸೂತ್ರವನ್ನು ಹಿಡಿದಿಟ್ಟುಕೊಂಡಿದೆ. ಹೋರಾಟದಲ್ಲಿರುವ ರಾಜಸ್ಥಾನದ ಮಹಿಳೆಯೊಬ್ಬರು ‘ಭಾಷಣಕ್ಕೆ ನಿಂತರೆ ಅವರ ಮುಂದೆ ಯಾರೂ ಸಾಟಿಯಿಲ್ಲದಂತೆ ಮಾತನಾಡುತ್ತಿದ್ದರು. ಮಾತ್ರವಲ್ಲ, ಇವರು ತಮ್ಮ ಭೂಮಿಯಲ್ಲಿ ಸ್ವತಃ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿಯನ್ನೂ ಮಾಡುತ್ತಿದ್ದಾರೆ’ ಎಂದು ಬರೆಯುತ್ತಾರೆ ಲೇಖಕರು. ‘ಕೃಷಿ ಮಾಡಿದ ಅದೇ ಕೈಗಳಲ್ಲಿ ಕೆಂಬಾವುಟವನ್ನು ಹಿಡಿದು ಇಡೀ ರಾಜಸ್ಥಾನವನ್ನು ಸುತ್ತಾಡಿ ರೈತರನ್ನು ಸಂಘಟಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತ ಚಳವಳಿಯನ್ನು ರೂಪಿಸಿ ಸಾವಿರಾರು ಸಂಖ್ಯೆಯಲ್ಲಿ ರೈತ ಮಹಿಳೆಯರನ್ನು ಹೋರಾಟಕ್ಕಿಳಿಸಿದ್ದಾರೆ’ ಎಂದೂ ವಿವರಿಸುತ್ತಾರೆ.

ADVERTISEMENT

ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ಎಲ್ಲ ಮಹಿಳೆಯರಿಗೂ ಟ್ರ್ಯಾಕ್ಟರ್ ಚಲಾಯಿಸುವ ತರಬೇತಿ ನೀಡಲಾಗುತ್ತಿತ್ತು ಎಂಬ ಗಮನಿಸುವಿಕೆಯು ಲೇಖಕರ ಸೂಕ್ಷ್ಮದೃಷ್ಟಿಗೂ, ಸ್ತ್ರೀಶಕ್ತಿಯು ವಿಸ್ತರಿಸುತ್ತಿರುವ ಬಗೆಗೂ ಹಿಡಿದ ಕನ್ನಡಿಯಂತಿದೆ. ಪ್ರಸ್ತುತ ರೈತಹೋರಾಟದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಕಡಿಮೆಯೇ. ಆದರೆ, ಪುರುಷರು ತಿಂಗಳುಗಟ್ಟಲೆ ಮನೆಯಿಂದ ದೂರ ಉಳಿದಾಗ ಮನೆ, ಕೃಷಿ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಭಾಯಿಸುತ್ತಿರುವುದು ಹೆಣ್ಣುಮಕ್ಕಳೇ. ಆದ್ದರಿಂದಲೇ ಇಂಥ ಸುದೀರ್ಘ ಹೋರಾಟ ಸಾಧ್ಯವಾಗಿದೆ ಎನ್ನುವ ಒಳನೋಟವೂ ಈ ಕೃತಿಯಲ್ಲಿ ಸಿಗುತ್ತದೆ.

ಸಿಖ್‍ಧರ್ಮದ ಸ್ಥಾಪಕರಾದ ಗುರುನಾನಕ್‍ರಿಂದ ಆರಂಭಗೊಂಡ ‘ಲಂಗರ್’ (ಅನ್ನದಾಸೋಹ ಕೇಂದ್ರ) ಪರಂಪರೆಯ ಬಗ್ಗೆ; ಚಳವಳಿಯು ಆರಂಭಗೊಂಡ ಗಳಿಗೆಯಿಂದ ಈ ಕ್ಷಣದವರೆಗೂ ಬಂದವರಿಗೆಲ್ಲ ಊಟ, ವಸತಿ ವ್ಯವಸ್ಥೆ ಕಲ್ಪಿಸಿರುವ ತಿಳಿವಳಿಕೆಯ ಬಗ್ಗೆ; ನಿವೃತ್ತ ಸೇನಾಯೋಧರು, ‘ಗಡಿ ಕಾಯುವುದು ನಾವೇ, ದೇಶ ಕಾಯುವುದು ನಾವುಗಳೇ, ರೈತ ಮಕ್ಕಳೇ. ಆ ಕಾರಣಕ್ಕಾಗಿ ನಾವು ನಮ್ಮ ಅನ್ನದಾತ ರೈತರ ಜೊತೆಯಲ್ಲಿ ನಿಂತಿದ್ದೇವೆ’ ಎಂದು ಮಕ್ಕಳಾದಿಯಾಗಿ ಇಡೀ ಕುಟುಂಬವನ್ನು ಇದರಲ್ಲಿ ತೊಡಗಿಸಿರುವ ಬಗ್ಗೆ; ರೈತರು ಪ್ರತಿಭಟನೆ ನಡೆಸುತ್ತಿರುವ ಜಾಗಗಳನ್ನೇ ಪುಟ್ಟ ಹಳ್ಳಿಗಳನ್ನಾಗಿ ಪರಿವರ್ತಿಸಿಕೊಂಡ ಬಗ್ಗೆ; ಅಲ್ಲಲ್ಲೇ ರೂಪುಗೊಂಡಿರುವ ಗ್ರಂಥಾಲಯಗಳು, ಪೋಸ್ಟರ್ ತಯಾರಿಕೆಯ ಮೂಲಕ ಮಕ್ಕಳಿಗೆ ಹೊಸ ಆಲೋಚನಾ ವಿಧಾನಗಳನ್ನು ಕಲಿಸುತ್ತಿರುವ ಬಗ್ಗೆ ಹಲವು ವಿವರಗಳು ಕೃತಿಯಲ್ಲಿವೆ. ಇಂತಹ ಭಿನ್ನ ದೃಷ್ಟಿಕೋನಗಳಿಂದ ಚಳವಳಿಯನ್ನು ಕಾಣಿಸುವ ಹೊಸಬಗೆ ಈ ಪುಸ್ತಕದ ವಿಶೇಷ. ಜೊತೆಗೇ, ಹೋರಾಟವನ್ನು ಹತ್ತಿಕ್ಕಲು ಸರ್ಕಾರವು ಮಾಡುತ್ತಿರುವ ಸಂಚುಗಳು, ಅಸಾಂವಿಧಾನಿಕ ಕ್ರಮಗಳು ಮತ್ತು ಮಾಧ್ಯಮಗಳ ದುಷ್ಟತನವನ್ನೂ ಕೃತಿಯು ಕಾಣಿಸುತ್ತದೆ.

ರೈತ ಹೋರಾಟದ ನಿಕಟ ಪರಿಚಯವಿರುವ ಪ್ರೊ. ಪುರುಷೋತ್ತಮ ಬಿಳಿಮಲೆಯವರ ಸಂದರ್ಶನವು ನಮಗೆ ಮೇಲ್ನೋಟಕ್ಕೆ ತೋರದ ಹಲವು ಆಯಾಮಗಳನ್ನು ಬಿಚ್ಚಿಡುತ್ತದೆ. ಬಿಳಿಮಲೆಯವರನ್ನು ‘ಸರ್, ಇಡೀ ಚಳವಳಿಯಲ್ಲಿ ನಿಮಗೆ ಅತ್ಯಂತ ಇಷ್ಟವಾದ ಸಂಗತಿ ಯಾವುದು?’ ಎಂದು ಕೇಳಿದಾಗ, ಅವರು, ‘ಇಲ್ಲಿಯ ರೈತರು ಈ ಚಳವಳಿಗೆ ಬಂದವರನ್ನು ನಡೆಸಿಕೊಳ್ಳುತ್ತಿರುವ ರೀತಿ, ಆ ಆತ್ಮೀಯತೆ ತುಂಬ ಇಷ್ಟವಾಯಿತು. ಚಳವಳಿಯ ಜಾಗಕ್ಕೆ ಯಾರೇ ಬಂದರೂ ಅವರಿಗೆ ಕುಡಿಯಲು ನೀರು, ಮಜ್ಜಿಗೆ, ಚಾ, ಊಟ ನೀಡುತ್ತಾರೆ. ಎಷ್ಟರಮಟ್ಟಿಗೆ ಅಂದರೆ ಇದೇ ರೈತರನ್ನು ತಡೆದು ಲಾಠಿ ರುಚಿ ತೋರಿಸಿದ ಪೊಲೀಸಿನವರಿಗೂ ಊಟ ಕೊಟ್ಟು ಉಪಚರಿಸುತ್ತಿದ್ದಾರೆ. ಕುತೂಹಲಕ್ಕೆ ನಾನು ಒಬ್ಬ ರೈತರನ್ನು ಮಾತನಾಡಿಸಿ ಈ ವಿಚಾರವನ್ನು ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರ: ‘ಪೊಲೀಸಿನವರು ನಮ್ಮ ಮಕ್ಕಳೇ. ಬದುಕಿನ ಸಲುವಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ಜಾಗದಲ್ಲಿ ಅವರು ಮೇಲಿನ ನಿರ್ದೇಶನದಂತೆ ವರ್ತಿಸುತ್ತಾರೆ ಅಷ್ಟೆ. ಅದರಲ್ಲಿ ವೈಯಕ್ತಿಕವಾಗಿ ಅವರ ತಪ್ಪೇನೂ ಇಲ್ಲ. ಇದಕ್ಕಾಗಿ ಅವರಿಗೆ ಊಟ ಕೊಡದೆ ಇರುವುದು ಸರಿಯಲ್ಲ’ ಎಂದಿದ್ದಾರೆ.

ಬಿಳಿಮಲೆ ಅವರ ಮಾತು ಕೇಳಿದ ನವೀನ್ ಕುಮಾರ್ ಬರೆಯುತ್ತಾರೆ, ‘ಮನುಷ್ಯನ ವಿಕಾಸದ ದಾರಿಯಲ್ಲಿ ಅವನು ಕೃಷಿ ಮಾಡಲು ಪ್ರಾರಂಭ ಮಾಡಿದಾಗಿನಿಂದ ಇಲ್ಲಿಯವರೆಗೆ ಅವರು ಸಮಾಜವನ್ನು ಕೃಷಿಯ ಮೂಲಕ ಪೋಷಿಸಿಕೊಂಡು ಬಂದಿದ್ದಾರೆ. ಈಗಲೂ ರೈತರು ತಮ್ಮ ಕಾಯಕದಿಂದ ಸಂಪೂರ್ಣ ವಿಮುಖರಾಗಿಲ್ಲ. ಯಾಕೆಂದರೆ ಅಲ್ಲಿ ಒಂದು ರೀತಿಯ ತಾಯಿಯ ವಾತ್ಸಲ್ಯ ಇದೆ. ತಾಯಿ ತಾನು ಉಪವಾಸವಿದ್ದರೂ ಎಂದಿಗೂ ತನ್ನ ಮಕ್ಕಳನ್ನು ಉಪವಾಸ ಕೆಡಹುವುದಿಲ್ಲ. ನನಗೆ ದೇಶದ ಇಡೀ ರೈತ ಸಮುದಾಯ ಮಕ್ಕಳನ್ನು ಸಾಕಿ ಸಲಹುವ ತಾಯಿಯಂತೆ ಕಾಣಿಸುತ್ತದೆ’. ತಾಯ್ತನದ ಪ್ರತೀಕದಂತಿರುವ ಈ ಪುಸ್ತಕ ಮತ್ತು ಲೇಖಕರ ನಿಲುವು ಹೆಣ್ಣಿನ ನಿಜದ ನೆಲೆಗಳನ್ನು ಅರ್ಥಪೂರ್ಣವಾಗಿ ವಿಸ್ತರಿಸಿದೆ. ಎಲ್ಲ ಹೋರಾಟಗಳ ಹಿಂದೆ ಮೌನವಾಗಿ ದುಡಿಯುವ, ಪ್ರೀತಿಯಿಂದ ಸ್ಪಂದಿಸುವ ಹೆಣ್ತನದ ಸತ್ವಕ್ಕೆ ಈ ಹೋರಾಟ ಮತ್ತು ಈ ಬರವಣಿಗೆ ಕೈಗನ್ನಡಿ.

ಅಂಚು/ಗಡಿಗಳನ್ನು ಹೋರಾಟದ ಕಣ/ಕೇಂದ್ರವಾಗಿ ಪರಿವರ್ತಿಸಿಕೊಂಡಿರುವ, ರಾಜಕೀಯ ಪಕ್ಷಗಳು ಮತ್ತು ಮುಖಂಡರನ್ನು ಬದಿಗೆ ಸರಿಸಿರುವ ಈ ಚಳವಳಿಯ ನಡೆಯು ವಿಭಿನ್ನ, ಅಪರೂಪದ್ದು. ನನ್ನ ಜೊತೆ ಇರುವವನು ಮಾತ್ರವಲ್ಲ ನನ್ನನ್ನು ವಿರೋಧಿಸುತ್ತಿರುವವನು ಕೂಡ ನನ್ನ ಹಾಗೆಯೇ ಮನಸ್ಸು, ಮನಸ್ಸಾಕ್ಷಿ ಉಳ್ಳವನು ಎಂದು ನಂಬುವ ಮೂಲಕ ವಿರೋಧಿಯೊಳಗೂ ಆತ್ಮಸಾಕ್ಷಿಯನ್ನು ಸೃಷ್ಟಿಸುವ, ಅದನ್ನು ಕಲಕುವ, ಮುಟ್ಟುವ, ಬದಲಿಸುವ ಪ್ರಯತ್ನವೇ ‘ಚಳವಳಿ’ ಎಂಬ ಗಾಂಧಿಯ ದೃಷ್ಟಿಕೋನಕ್ಕೆ ಇದು ನಮ್ಮ ಕಾಲದಲ್ಲಿ ಹೊಸಜೀವ ಕೊಟ್ಟಿದೆ.

***

ಕದನ ಕಣ

ಲೇ:ಎಚ್.ಆರ್.ನವೀನ್ ಕುಮಾರ್

ಪ್ರ: ಕ್ರಿಯಾ ಮಾಧ್ಯಮ

90360 82005

ಬೆಲೆ: 120 ಪುಟಗಳು: 132

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.