ADVERTISEMENT

ಮೊದಲ ಓದು: ನೀತಿಬೋಧೆಯ ಐದು ಶತಕಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:30 IST
Last Updated 16 ಅಕ್ಟೋಬರ್ 2021, 19:30 IST
ಸಾಮಾಜಿಕನೀತಿ ಕಾವ್ಯಗುಚ್ಛಃ
ಸಾಮಾಜಿಕನೀತಿ ಕಾವ್ಯಗುಚ್ಛಃ   

ಭರ್ತೃಹರಿಯ ‘ನೀತಿಶತಕ’ದಿಂದ ಸ್ಫೂರ್ತಿ ಪಡೆದ ಹಿರಿಯ ವಿದ್ವಾಂಸ ಎಂ.ವಿ. ನಾಡಕರ್ಣಿ ಅವರು ಸಂಸ್ಕೃತದಲ್ಲಿ ರಚಿಸಿದ ಐದು ಶತಕಗಳ ಕನ್ನಡ ಅನುವಾದ ಮತ್ತು ಟಿಪ್ಪಣಿಗಳ ಗುಚ್ಛವೇ ‘ಸಾಮಾಜಿಕನೀತಿ ಕಾವ್ಯಗುಚ್ಛಃ’. ಲೇಖಕರೇ ತಿಳಿಸಿರುವಂತೆ ಇದು ಎರಡು ದಶಕಗಳ ತಪಸ್ಸಿನ ಫಲ. ಇಲ್ಲಿನ ಪ್ರತಿಯೊಂದು ಕೃತಿಯೂ ಸಾಮಾಜಿಕ ನೀತಿತತ್ತ್ವವನ್ನು ಪರಿಚಯಿಸುತ್ತದೆ. ಮಾನವ ಸಂಘಜೀವಿ. ಸಮಾಜದೊಂದಿಗೇ ಅವನ ಬದುಕು ಸಾಗಬೇಕು. ಹೀಗೆ ಸಮಾಜದೊಂದಿಗೆ ಬಾಳುವಾಗ ಅವನ ವ್ಯಕ್ತಿತ್ವ ಹೇಗಿರಬೇಕು, ಎಂತಹ ನೀತಿತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು, ಹೊಣೆಗಾರಿಕೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಇಲ್ಲಿನ ಶತಕಗಳು ಸೊಗಸಾಗಿ ಕಟ್ಟಿಕೊಡುತ್ತವೆ.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ, ಐಸೆಕ್‌ನ ಸಂದರ್ಶಕ ಪ್ರಾಧ್ಯಾಪಕರೂ ಆದ ನಾಡಕರ್ಣಿ ಅವರು ಈ ಶತಕಗಳನ್ನು ರಚಿಸಿದ್ದು ಸಂಸ್ಕೃತದಲ್ಲಾದರೂ ಆಧುನಿಕ, ವೈಚಾರಿಕ ದೃಷ್ಟಿಕೋನದ ವಿಷಯಗಳನ್ನೇ ಅವುಗಳು ತುಂಬಿಕೊಂಡಿವೆ. ಶಾರದಾ ದಶಕದಿಂದ ಈ ಗ್ರಂಥ, ನೀತಿ ತತ್ತ್ವಗಳಿಗೆ ನಾಂದಿ ಹಾಡುತ್ತದೆ. ಸತ್ಯ, ಅಸತ್ಯಗಳ ನಡುವಿನ ಭೇದವನ್ನು ಅರಿಯಲು ಸಾಮರ್ಥ್ಯ ನೀಡುವಂತೆ ಶಾರದಾ ಮಾತೆಯನ್ನು ಈ ದಶಕ ಪ್ರಾರ್ಥಿಸುತ್ತದೆ.

ಪರಿಸರನೀತಿ ಶತಕಮ್‌, ಗಾಂಧಿತತ್ತ್ವ ಶತಕಮ್‌, ಸನಾತನಧರ್ಮತತ್ತ್ವ ಶತಕಮ್‌, ಮಾನವಧರ್ಮ ಶತಕಮ್‌, ಪ್ರಜಾಪ್ರಭುತ್ವ ಶತಕಮ್‌ –ಶೀರ್ಷಿಕೆಗಳ ಹೆಸರೇ ಸೂಚಿಸುವಂತೆ ಒಂದೊಂದು ಅಧ್ಯಾಯವೂ ಒಂದೊಂದು ಮಹತ್ವದ ನೀತಿ ಕುರಿತಂತೆ ಮಾತನಾಡುತ್ತದೆ. ಮಾನವಧರ್ಮದ ಕುರಿತು ಇದುವರೆಗೆ ವ್ಯಕ್ತವಾದ ಚಿಂತನೆಗಳ ಸಾರವೇ ಇಲ್ಲಿನ ಪುಟ್ಟ ಶತಕಗಳಲ್ಲಿ ಹರಳುಗಟ್ಟಿದೆ. ಪ್ರಜಾಪ್ರಭುತ್ವದ ಕುರಿತ ಸಂಸ್ಕೃತ ಕೃತಿಗಳು ಓದಲು ಮಜವೆನಿಸಿದರೂ ಅವುಗಳು ಬಿಟ್ಟುಕೊಡುವ ನೀತಿ ಮಾತ್ರ ಅಗಾಧವಾದುದು. ಉದಾಹರಣೆಗೆ: ‘ಪ್ರಜಾರಾಜ್ಯೇನ ನ ಮಂತವ್ಯಂ ಕ್ಷೋಭೋ ವಾ ರಾಜಹೀನತಾ/ ಶಾಸನಂ ರಚಿತಂ ಲೋಕೈಃ ಲೋಕೈಃ ಏವ ಪ್ರತೀಕ್ಷಿತಮ್‌’ (ಪ್ರಜಾರಾಜ್ಯವೆಂದರೆ ಕ್ಷೋಭೆ ಅಥವಾ ಅರಾಜಕತೆಯೆಂದು ತಿಳಿಯಬಾರದು. ಕಾನೂನುಗಳು ಜನರಿಂದಲೇ ರಚಿತವಾದವು. ಅವರಿಂದಲೇ ಗೌರವಿಸಲ್ಪಡುತ್ತವೆ).

ADVERTISEMENT

ಗಾಂಧಿತತ್ತ್ವಗಳು ಹಿಂದೆಂದಿಗಿಂತ ಈಗ ಹೇಗೆ ಪ್ರಸ್ತುತ ಎನ್ನುವುದನ್ನು ಇಲ್ಲಿನ ಕೃತಿಗಳು ಮನಮುಟ್ಟುವಂತೆ ಅರಹುತ್ತವೆ. ಒಂದು ಕೃತಿ ಹೀಗಿದೆ: ‘ಗ್ರಾಮೋದ್ಯೋಗಾಃ ಹಿ ಕುರ್ವಂತಿ ಗ್ರಾಮರಾಜ್ಯಂ ಪ್ರಭಾಯುತಮ್‌/ ನಿರರ್ಥಕಂ ಪ್ರಜಾತಂತ್ರಂ
ವಿಕೇಂದ್ರೀಕರಣಂ ವಿನಾ’ (ಗ್ರಾಮೋದ್ಯೋಗಗಳೇ ಗ್ರಾಮರಾಜ್ಯವನ್ನು ಪ್ರಭಾವಿಯನ್ನಾಗಿ ಮಾಡುತ್ತವೆ. ಇಂತಹ ಆರ್ಥಿಕ ಅಥವಾ ಔದ್ಯೋಗಿಕ ವಿಕೇಂದ್ರೀಕರಣಇಲ್ಲದಿದ್ದರೆ ಪ್ರಜಾತಂತ್ರವು ನಿರರ್ಥಕವಾಗುತ್ತದೆ). ಇಂತಹ ಪ್ರಗತಿಪರ ವಿಚಾರಗಳನ್ನು ಮಂಡಿಸಲು ಲೇಖಕರು ಹಳೆಯ ಭಾಷೆ ಎನಿಸಿದ ಸಂಸ್ಕೃತವನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿರುವುದು ವಿಶಿಷ್ಟವಾಗಿದೆ. ಗ್ರಂಥದಲ್ಲಿ ವ್ಯಕ್ತವಾದ ಪರಿಸರದ ಕಾಳಜಿ ಕೂಡ ಅಷ್ಟೇ ಅನನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.