ADVERTISEMENT

ಸರ್ಕಾರಿ ಶಾಲೆಗಳತ್ತ ಉಕ್ಕುವ ಪ್ರೀತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 19:30 IST
Last Updated 17 ಜುಲೈ 2021, 19:30 IST
ಸಾಧಾರಣ ಜನ ಅಸಾಧಾರಣ ಶಿಕ್ಷಕರು
ಸಾಧಾರಣ ಜನ ಅಸಾಧಾರಣ ಶಿಕ್ಷಕರು   

ಸಾಧಾರಣ ಜನ; ಅಸಾಧಾರಣ ಶಿಕ್ಷಕರು
ಲೇ: ಎಸ್‌. ಗಿರಿಧರ್
ಪು: 240 ಬೆ: ₹250
ಪ್ರಕಾಶನ: ನವಕರ್ನಾಟಕ ಪಬ್ಲಿಕೇಷನ್
ದೂ: 080 22161900

ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ನಡುವೆ ದೊಡ್ಡ ಕಂದರವೇ ನಿರ್ಮಾಣಗೊಂಡ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಕಂದರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿರುವುದು ಒಂದು ವಿದ್ಯಮಾನವಷ್ಟೇ ಅಲ್ಲ, ಅದು ಭವಿಷ್ಯದ ಬಹುದೊಡ್ಡ ಸಂಕಷ್ಟದ ಸೂಚನೆಯೂ ಹೌದು, ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆ, ಸಾಮುದಾಯಿಕ ಪ್ರಜ್ಞೆ ಹೀಗೆ ಈ ಸಮಸ್ಯೆಗೆ ಹಲವು ಮುಖಗಳಿವೆ.

‘ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಸಿಗುವುದಿಲ್ಲ’ ಎನ್ನುವುದು ಬಹುತೇಕ ಎಲ್ಲರ ಆರೋಪ. ಈ ಆರೋಪಕ್ಕೆ ಉತ್ತರರೂಪದಂತೆ ಎಸ್‌. ಗಿರಿಧರ್ ಅವರ ಈ ಪುಸ್ತಕವನ್ನು ಓದಿಕೊಳ್ಳಬೇಕು. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಗಿರಿಧರ್ ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಆರಂಭಿಕ ಸದಸ್ಯರೂ ಹೌದು. ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಸಾಧಾರಣ ಶಿಕ್ಷಕರ ಹಲವು ಮಾದರಿಗಳನ್ನು ನಮ್ಮೆದುರಿಗಿಡುವ ಈ ಪುಸ್ತಕ, ದಂತಗೋಪುರದಲ್ಲಿ ಕೂತು ಬರೆದ ಕೃತಿಯಲ್ಲ. ಬದಲಿಗೆ ಸ್ವತಃ ಆ ಪ್ರದೇಶಕ್ಕೆ ತೆರಳಿ, ಆ ಶಾಲೆಗಳ ಶಿಕ್ಷಕರು, ಮಕ್ಕಳು ಸುತ್ತಲಿನ ಸಮುದಾಯಗಳ ಜೊತೆ ಒಡನಾಡಿ, ಅವರ ಅನುಭವಗಳನ್ನು ಕೇಳಿ, ಪರಿಣಾಮಗಳನ್ನು ಸ್ವತಃ ಅಧ್ಯಯನ ಮಾಡಿ ಬರೆದ ಪುಸ್ತಕ. ಹಾಗಾಗಿ ಇದಕ್ಕೊಂದು ಅಧಿಕೃತ ಛಾಪಿದೆ.

ADVERTISEMENT

ಯಾದಗಿರಿಯ ಯಾವುದೋ ಹಳ್ಳಿಯಲ್ಲಿನ ಶಾಲೆಯಿಂದ ಹಿಡಿದು ರಾಜಸ್ಥಾನ, ಉತ್ತರಾಖಂಡಗಳ ಹಲವು ಶಾಲೆಗಳಲ್ಲಿ, ಮಕ್ಕಳ ಅಭ್ಯುದಯಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಹಲವು ಶಿಕ್ಷಕರ ಸಾಧನೆಯ ಪರಿಚಯ ಇಲ್ಲಿದೆ. ಇದು ಶಿಕ್ಷಕರ ಕುರಿತಾಗಿಯಷ್ಟೇ ಅಲ್ಲದೆ, ಅವರು ಸರ್ಕಾರಿ ಶಾಲೆಯ ಜೊತೆ ಸಮುದಾಯದ ಸಂಬಂಧವನ್ನು ಬೆಸೆಯಲು, ಮಕ್ಕಳನ್ನು ಶಾಲೆಯತ್ತ ಸೆಳೆಯಲು, ಭಾರವಾಗದ ಹಾಗೆ ಪಾಠವನ್ನು ಮಾಡಲು, ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಅನುಸರಿಸಿದ ಹಲವು ಯಶಸ್ವಿ ಮಾದರಿಗಳ ಪರಿಚಯವೂ ಇದೆ. ಹಾಗಾಗಿ ಇದನ್ನು ಶಿಕ್ಷಕರ ಶಿಕ್ಷಣದ ಒಂದು ಕೈಪಿಡಿಯಾಗಿಯೂ ನೋಡಬಹುದು. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.