ADVERTISEMENT

ಪುಸ್ತಕ ವಿಮರ್ಶೆ: ಭರವಸೆ ಮೂಡಿಸುವ ಪ್ರಬಂಧಗಳು

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:30 IST
Last Updated 15 ಮೇ 2021, 19:30 IST
ಬ್ರೂನೊ ದಿ ಡಾರ್ಲಿಂಗ್‌ ಕೃತಿಯ ಮುಖಪುಟ
ಬ್ರೂನೊ ದಿ ಡಾರ್ಲಿಂಗ್‌ ಕೃತಿಯ ಮುಖಪುಟ   

ನಂದಿನಿ ಹೆದ್ದುರ್ಗ ಅವರ ‘ಬ್ರೂನೊ ದಿ ಡಾರ್ಲಿಂಗ್’ ಹದಿನಾರು ಲಲಿತ ಪ್ರಬಂಧಗಳ ಸಂಕಲನ. ಶೀರ್ಷಿಕೆಯ ಅಡಿಯಲ್ಲಿ ‘ಲವಲವಿಕೆಯ ಬರಹಗಳು’ ಎಂದು ಕರೆಯಲಾಗಿದೆ. ಮುನ್ನುಡಿ ಮತ್ತು ಬೆನ್ನುಡಿಗಳಲ್ಲಿ ಇಲ್ಲಿನ ಬರಹಗಳನ್ನು ಲಲಿತ ಪ್ರಬಂಧಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ.

‘An essay is lyric in prose’, ಲಲಿತ ಪ್ರಬಂಧವು ಗದ್ಯದ ಭಾವಗೀತೆ ಎಂಬ ಮಾತೊಂದಿದೆ. ಈ ಮಾತು ಲಲಿತ ಪ್ರಬಂಧಗಳ ಸಾಹಿತ್ಯಿಕ ಮಹತ್ವವನ್ನು ಸೂಚಿಸುತ್ತದೆ. ಪ್ರಬಂಧದ ನಿರೂಪಣೆಯಲ್ಲಿ ಮಾತೇ ಬಂಡವಾಳ ಎಂಬುದು ನಿಜವಾದರೂ ಮಾತು ಬರವಣಿಗೆ ರೂಪ ಪಡೆಯುವಾಗ ಕಲಾತ್ಮಕವಾಗಿರುತ್ತದೆ. ಇದರಲ್ಲಿ ವ್ಯಂಗ್ಯ, ಹಾಸ್ಯ ಧ್ವನಿಗಳು ಹದವಾಗಿ ಬೆರೆತುಕೊಳ್ಳಬೇಕಾದುದು ಅಪೇಕ್ಷಣೀಯ.

ಪ್ರಬಂಧದಲ್ಲಿ ಬಂಧ ಶಿಥಿಲವಾಗಿದ್ದರೂ ಕವಿ, ಕಥೆಗಾರ, ಕಾದಂಬರಿಕಾರನಂತೆ ಭಾವಲಹರಿ ಮತ್ತು ವಿಚಾರಲಹರಿಗಳನ್ನು ಹರಿಯಬಿಡಬೇಕು. ಇತರ ಸಾಹಿತ್ಯ ಪ್ರಕಾರಗಳಲ್ಲಿರುವಂತೆ ಸದ್ಯತನ, ಸಾರ್ವತ್ರಿಕತೆ ಮತ್ತು ಸಾರ್ವಕಾಲಿಕತೆಗಳನ್ನೊಳಗೊಂಡ ಅಭಿವ್ಯಕ್ತಿಯ ಕ್ರಮವೊಂದು ಬೇಕೇ ಬೇಕಾಗುತ್ತದೆ. ಪ್ರಬಂಧದ ಮಾದರಿ ಬಯಸುವ ಈ ಗುಣಗಳ ಹಿನ್ನೆಲೆಯಲ್ಲಿ ನೋಡಿದಾಗ ನಂದಿನಿಯವರ ಪ್ರಬಂಧಗಳಲ್ಲಿ ಅಲ್ಲಲ್ಲಿ ಈ ಸೂಚನೆಗಳು ಗಟ್ಟಿಯಾಗಿ ಕಾಣುತ್ತವೆ.

ADVERTISEMENT

ಮಾನವನ ಬದುಕನ್ನು ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳು ಸಹ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ರೂಪಿಸುತ್ತವೆ. ಅವುಗಳಿಗೂ ಮನುಷ್ಯನಿಗೂ ಇರುವ ಸಂಬಂಧ ಎಂತಹದ್ದು ಎಂಬುದನ್ನು ಇಲ್ಲಿನ ಕೆಲವು ಪ್ರಬಂಧಗಳು ಸೊಗಸಾಗಿ ಕಟ್ಟಿಕೊಟ್ಟಿವೆ. ಶಾಲು ಮತ್ತು ಸಬಲೆ, ಅಪ್ಪನೆಂಬೊ ಆಕಾಶ, ಏನು ಬಂದಿರಿ ಹದುಳವಿರುವಿರೋ, Don’t comeಬಳಿ ಹುಳುವೆ ಪ್ರಬಂಧಗಳು ಬದುಕಿನ ವಿವಿಧ ಮುಖಗಳನ್ನು ಲಾಲಿತ್ಯಪೂರ್ಣವಾಗಿ ದರ್ಶನ ಮಾಡಿಸುವಲ್ಲಿ ಯಶ ಕಂಡಿವೆ. ಸಣ್ಣಪುಟ್ಟ ಸಂಗತಿಗಳನ್ನು ಆಕರ್ಷಕವಾಗಿ ನಿರೂಪಿಸುವ ಕೌಶಲವೂ ಲೇಖಕಿಗೆ ಸಿದ್ಧಿಸಿದೆ. ಹಾಗೆಯೇ, ಕೆಲವು ಕಡೆ ಪ್ರಬಂಧದ ಧ್ವನಿ ಕಡಿಮೆ ಇರುವುದನ್ನೂ ಇಲ್ಲಿ ಉಲ್ಲೇಖಿಸಲೇಬೇಕು.

ಭಾವಲಹರಿಯಷ್ಟೇ ಪ್ರಬಂಧದ ಲಕ್ಷಣವಲ್ಲ, ಅದರಲ್ಲಿ ಒಂದು ಎಳೆ ವಿಚಾರವೂ ಸೇರಿಕೊಂಡಿರಬೇಕು. ಇದು ಭಾಷೆಯನ್ನು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ. ನಂದಿನಿ ಅವರ ಬರವಣಿಗೆಯನ್ನು ಗಮನಿಸಿದರೆ, ಅವರಿಂದ ಗಂಭೀರವಾದ ನೈತಿಕ ಸಮಸ್ಯೆಗಳ ಚಿಂತನೆ, ಒಳಿತು ಕೆಡುಕುಗಳ ಘರ್ಷಣೆಯನ್ನು ಪರಿಣಾಮಕಾರಿಯಾಗಿ ಹಿಡಿದಿಡಲು ಸಾಧ್ಯ ಎನ್ನುವುದು ಎದ್ದು ಕಾಣುತ್ತದೆ.

ಹಾಸ್ಯ, ಪದಲಾಲಿತ್ಯ, ಲವಲವಿಕೆಯೇ ಪ್ರಧಾನವಾಗಿಬಿಟ್ಟರೆ ಓದುಗನಿಗೆ ಆ ಕ್ಷಣಕ್ಕೆ ಮುದವನ್ನು ನೀಡಬಹುದು. ಆದರೆ ಪರಿಣಾಮಕಾರಿ ಆಗಿರುವುದಿಲ್ಲ. ಆದ್ದರಿಂದ ಲಲಿತ ಪ್ರಬಂಧಗಳೂ ಸಾಹಿತ್ಯಿಕ ಗುಣವನ್ನು ಒಳಗೊಂಡಿರಬೇಕು. ಈ ಸಂಕಲನದಲ್ಲಿರುವ ಕೆಲವು ಪ್ರಬಂಧಗಳಲ್ಲಿ ಆ ಗುಣ ಢಾಳಾಗಿ ಕಾಣಿಸುತ್ತದೆ. ಮುಂದೆ ಈ ಲೇಖಕಿ ಇನ್ನೂ ಹೆಚ್ಚಿನ ಪ್ರಬಂಧಗಳನ್ನು ಬರೆಯುತ್ತಾರೆ ಮತ್ತು ಅವುಗಳು ಮತ್ತಷ್ಟು ಪರಿಣಾಮಕಾರಿಯಾಗಿ ಹೊರಹೊಮ್ಮುತ್ತವೆ ಎಂಬ ಭರವಸೆಯನ್ನು ಇಲ್ಲಿನ ಬರಹಗಳ ಮೂಲಕ ಮೂಡಿಸುತ್ತಾರೆ.

ಡಿ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.