ADVERTISEMENT

ಪುಸ್ತಕ ವಿಮರ್ಶೆ: ದಿಟ್ಟ ಹೆಣ್ಣಿನ ಸಾಹಸಗಾಥೆ

ಎಚ್.ದಂಡಪ್ಪ
Published 13 ಮಾರ್ಚ್ 2021, 19:30 IST
Last Updated 13 ಮಾರ್ಚ್ 2021, 19:30 IST
ಅಲೆಮಾರಿಯೊಬ್ಬಳ ಆತ್ಮವೃತ್ತಾಂತ ಕೃತಿ
ಅಲೆಮಾರಿಯೊಬ್ಬಳ ಆತ್ಮವೃತ್ತಾಂತ ಕೃತಿ   

‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಅಜಿತ್ ಕೌರ್ ಅವರ ಆತ್ಮಕಥನ. ಮೊದಲು ನಿರಂಕುಶ ಸ್ವಭಾವದ ತಂದೆ, ನಂತರ ಮದುವೆಯಾಗಿ ಹನ್ನೆರಡು ವರ್ಷಗಳ ಕಾಲ ಗಂಡನ ದೌರ್ಜನ್ಯಕ್ಕೆ ಒಳಗಾಗಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪುರುಷಾಧಿಕಾರವನ್ನು ಧಿಕ್ಕರಿಸಿ ಹೊರನಡೆದು, ನೋವು ಕಷ್ಟ ಪರಂಪರೆಗಳನ್ನು ಅನುಭವಿಸಿ ಸ್ವತಂತ್ರ ಬದುಕನ್ನು ಕಟ್ಟಿಕೊಂಡ ಪರಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.

ಕೌರ್‌, ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವಾಗ ಪಂಜಾಬ್ ಸರ್ಕಾರದ ಅಧಿಕಾರಿಗಳ ಜಡಸ್ವಭಾವ, ರಾಜಕಾರಣಿಗಳ ಮಾನಸಿಕ ಸ್ವರೂಪ, ಮಧ್ಯವರ್ತಿಗಳ ಹಾವಳಿ, ನ್ಯಾಯ ವ್ಯವಸ್ಥೆ, ಬಾಡಿಗೆ ಮನೆಯ ಕಷ್ಟ, ಓಂಪ್ರಕಾಶ್ ಎಂಬಾತನೊಂದಿಗೆ ಇದ್ದ ಪ್ರೇಮ, ಆತನಿಂದ ವಂಚಿತಳಾಗಿ ನಡೆಸುವ ಏಕಾಂಗಿ ಹೋರಾಟ ಮುಂತಾದ ವಿವರಗಳು ಅನಾವರಣಗೊಳ್ಳುತ್ತವೆ.

ಆತ್ಮಕಥನಗಳಲ್ಲಿ ಸಾಮಾನ್ಯವಾಗಿ ವಂಶಾವಳಿ, ಜನನ, ಬಾಲ್ಯ, ಶಿಕ್ಷಣ, ಉದ್ಯೋಗ, ಮದುವೆ... ಮುದಿತನ ಇತ್ಯಾದಿ ಘಟನೆಗಳು ಉದ್ದಕ್ಕೆ ನೇರವಾಗಿ ಹರಿಯುತ್ತವೆ. ಆದರೆ, ಈ ಕೃತಿಯಲ್ಲಿ ನೇರವಾಗಿ ಬರದೆ ಕೌರ್‌ ಅವರ ಎರಡನೇ ಮಗಳಾದ ಕ್ಯಾಂಡಿಯು, ಪ್ಯಾರಿಸ್ಸಿನಲ್ಲಿ ಬೆಂಕಿಯಿಂದ ಸುಟ್ಟುಕೊಂಡು ಆಸ್ಪತ್ರೆ ಸೇರಿದ ಘಟನೆಯಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಈ ಕೃತಿಗೆ ಏಕತಾನತೆ ಬಂದಿಲ್ಲ. ‘ಹಿಂದಿರುಗಿ ನೋಡುವಾಗ ನನ್ನ ಕಾಲಿನ ಹಿಮ್ಮಡಿಯಿಂದ ದೂರ ದಿಗಂತದವರೆಗೂ ಕೇವಲ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಂತೆ ಕಾಣುತ್ತದೆ’ ಎಂಬ ಸಾಲಿನೊಂದಿಗೆ ಆರಂಭವಾಗುತ್ತದೆ.

ADVERTISEMENT

ಉದ್ದಕ್ಕೂ ಈ ಬೆಂಕಿ, ಬೇರೆ ಬೇರೆ ರೂಪಗಳಲ್ಲಿ ಆಕೆಯನ್ನು ಸುಡುತ್ತಾ ಕೊನೆಗೆ ಓಂಪ್ರಕಾಶನ ಗೆಳೆತನದವರೆಗೂ ಮುಂದುವರಿದು ಆ ಸಂಬಂಧವೂ ಮುರಿದುಬಿದ್ದು ‘ಏಕಾಂಗಿ’ಯಾಗುವವರೆಗೆ ಮುಂದುವರಿಯುತ್ತದೆ. ‘ಏಕಾಂಗಿ’ ಎಂಬ ಮಾತಿನಿಂದಲೇ ಆತ್ಮಕಥನ ಮುಗಿಯುತ್ತದೆ. ಇಲ್ಲಿಯವರೆಗೂ ಅವರ ಬದುಕಿನಲ್ಲಿ ‘ಬೆಂಕಿ’ ಮೈ ಮನಗಳನ್ನು ಬೇರೆ ಬೇರೆ ರೂಪಗಳಲ್ಲಿ ಸುಡುತ್ತಿರುತ್ತದೆ. ಸುಡುವಿಕೆಯಲ್ಲಿಯೇ ಆಕೆ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಆಕೆಯಲ್ಲಿದ್ದ ಸಂರಕ್ಷಿಸುವ ಕಾಳಜಿಯ ಭಾವವನ್ನು ಆಧರಿಸಿದ ನೈತಿಕತೆ.

ತನ್ನ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟಿರುವ ಮಕ್ಕಳು ಕಣ್ಣೆದುರೇ ಸಾಯುವುದು ಮನುಷ್ಯನ ಬದುಕಿನಲ್ಲಿ ಬರಬಹುದಾದ ಘೋರವಾದ ದುಃಖಗಳಲ್ಲೊಂದು. ಇದು ದುರ್ಬರವಾದ ಅನುಭವ. ಮಗಳು ವಿದಾಯವನ್ನು ಹೇಳುವಾಗ ಮಾತುಗಳೇ ಹೊರಬರುವುದಿಲ್ಲ. ತನ್ನ ತಾಯಿಯನ್ನು ಅಪ್ಪಿಕೊಳ್ಳಬೇಕೆಂದು ಬಯಸಿದರೂ ಆಗುವುದಿಲ್ಲ. ತಾಯಿಗೆ ಮಗಳು ಒಂದು ನಿಧಿ. ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಪರಿಚಯವಿಲ್ಲದ ಪ್ಯಾರಿಸ್ಸಿನಲ್ಲಿ ಹಗಲುರಾತ್ರಿ ನಿದ್ದೆಯಿಲ್ಲದೆ ಆ ಮಗುವಿನ ನೆನಪುಗಳಲ್ಲಿ, ನಿಟ್ಟುಸಿರುಗಳಲ್ಲಿ ದಿನಗಳನ್ನು ಕಳೆಯುವುದರ ವಿವರಗಳು ಕಾವ್ಯಾತ್ಮಕ ಸ್ವರೂಪವನ್ನು ಪಡೆದುಕೊಂಡಿವೆ. ಇಲ್ಲಿ ಬರುವ ಹುಟ್ಟು, ಸಾವು, ಜೈವಿಕ ಪರಿಸರದ ಸಂಬಂಧಗಳ ಬಗೆಗಿನ ವಿವರಗಳು ರೂಪಕಾತ್ಮಕವಾಗಿ ಬದುಕಿನ ತಾತ್ವಿಕತೆಯನ್ನು ಕಟ್ಟಿಕೊಡುತ್ತವೆ. ಕೊನೆಗೆ ಮಗಳು ಚಿರನಿದ್ರೆಗೆ ಜಾರಿದಾಗ ಆಕೆಗೆ ಸಿಗುವುದು ಬರೀ ಶೂನ್ಯ.

ಜಗತ್ತಿನ ಅತ್ಯುತ್ತಮ ಕವಿತೆ, ಕಥೆ, ಕಾದಂಬರಿ, ಪುರಾಣ ಪ್ರಸಂಗಗಳಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಆಗುವ ದುರ್ಬರ ಅನುಭವಗಳ ಕಲಾತ್ಮಕ ಅಭಿವ್ಯಕ್ತಿ ಇಲ್ಲಿ ನೆನಪಿಗೆ ಬರುತ್ತದೆ. ಈ ಕಥನದಲ್ಲಿ ತಾಯಿಯು ಅರ್ಥಪೂರ್ಣವಾಗಿ ಬರುತ್ತಾಳೆ. ತಾಯಿ ಭಾವದ ಚಿಂತನೆ, ತಾಯ್ತನದ ಪ್ರಕ್ರಿಯೆ, ಕೌರ್ ಅವರ ಸಾಮರ್ಥ್ಯ ಮತ್ತು ಸಾಧನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ರಕ್ಷಣೆ, ಬದುಕಿನ ಪ್ರಗತಿ ಮತ್ತು ಒಪ್ಪಿಕೊಳ್ಳುವಿಕೆಗಳು ಇಲ್ಲಿ ಮುಖ್ಯವಾದ ಮೌಲ್ಯಗಳಾಗಿ ಬಂದಿವೆ. ಆದ್ದರಿಂದಲೇ ಇಲ್ಲಿ ಮಾತು ಕಡಿಮೆ, ಮೌನ ಹೆಚ್ಚು. ಆ ಮೌನದಿಂದಾಗಿ ಹೆಣ್ಣಿನ ಜಗತ್ತು ಒಂದು ಸ್ಪಷ್ಟವಾದ ಆಕಾರ ಪಡೆದು ಒಂದು ಸಂಕಥನ ಸೃಷ್ಟಿಯಾಗಲು ಸಾಧ್ಯವಾಗಿದೆ.

‘ದುರ್ಘಟನೆಗಳ ಪರೀಕ್ಷೆ’ ಎಂಬ ಭಾಗದಲ್ಲಿ ಪಂಜಾಬ್ ಸರ್ಕಾರದ ಜಡಗೊಂಡ ವ್ಯವಸ್ಥೆ, ಲಂಚಬಾಕತನ, ಗಂಡಸರ ಸ್ವಭಾವ, ಧರ್ಮ, ಜಾತಿ ಎಲ್ಲವೂ ಒಬ್ಬ ಸ್ತ್ರೀಯ ಬದುಕಿನ ಮೇಲೆ ಬೀರಬಹುದಾದ ಪರಿಣಾಮವನ್ನು ವಿವರಿಸಲಾಗಿದೆ. ಪ್ರಪಂಚದ ಎಲ್ಲವೂ ತನ್ನ ಆಶಯಕ್ಕಾಗಿ, ತನ್ನ ಶಕ್ತಿ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಇರಬೇಕೆಂದು ಪುರುಷ ಪ್ರಧಾನ ಮನಸ್ಸುಗಳು ಬಯಸುತ್ತವೆ. ಜ್ಞಾನ, ವಿಜ್ಞಾನಗಳು ತನ್ನ ಅಧೀನದಲ್ಲಿರಬೇಕೆಂದು ಪುರುಷ ಬಯಸುವುದು ತಪ್ಪಬೇಕು, ಪ್ರಗತಿಯು ಇಡೀ ಜನ ಸಮುದಾಯಗಳು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕು. ಆದರೆ, ಇಲ್ಲಿ ಆ ರೀತಿಯಾಗುತ್ತಿಲ್ಲ.

ಆರ್ಥಿಕ ಸವಲತ್ತುಗಳು ಹೆಣ್ಣಿಗೆ ದೊರೆಯದಂತೆ ಪುರುಷ ಪ್ರಧಾನ ವ್ಯವಸ್ಥೆ ವ್ಯವಸ್ಥಿತವಾಗಿ ಸಂಚು ರೂಪಿಸುತ್ತದೆ. ಹೆಣ್ಣು ಪ್ರಗತಿಯತ್ತ ಸಾಗದಂತೆ ನೋಡಿಕೊಳ್ಳುತ್ತದೆ. ‘ಹೆಣ್ಣಾಗಿರುವುದು’, ‘ತನ್ನ ರೊಟ್ಟಿಯನ್ನು ತಾನೇ ಗಳಿಸುವುದು’, ‘ಬುದ್ಧಿವಂತೆ, ಸ್ವಾವಲಂಬಿ ಹೆಣ್ಣುಮಗಳು ದೇವತೆಗಳು ವಾಸಿಸುತ್ತಿರುವ ಈ ಭಾರತದಲ್ಲಿರುವುದು ಮಹಾಪರಾಧ’ ಎಂದು ಕೌರ್ ಅವರು ಹೇಳಿರುವುದು ಅರ್ಥಪೂರ್ಣ. ಅವರು ಛಲ ಬಿಡದಂತೆ ಪತ್ರಿಕೋದ್ಯಮ, ಸಾಹಿತ್ಯ, ಬರವಣಿಗೆ ಮಾತ್ರವಲ್ಲದೆ ವೃತ್ತಿಪರ ಕಲಾಶಾಲೆಯ ಸ್ಥಾಪನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಪುರುಷಾಧಿಕಾರದ ನಿರಾಕರಣೆಯನ್ನು ಸೂಚಿಸುತ್ತದೆ.

ಸಾಂಸ್ಕೃತಿಕ ಸ್ತ್ರೀವಾದದ ಕೆಲವು ಲಕ್ಷಣಗಳನ್ನೊಳಗೊಂಡಿರುವ ಈ ಕೃತಿಯಲ್ಲಿ ಸ್ತ್ರೀಯರ ವಿಶಿಷ್ಟವಾದ ಭಾಷೆಯನ್ನು ರೂಪಿಸಿಕೊಳ್ಳಲಾಗಿದೆ. ಅವರ ಅನುಭವ, ಬದುಕಿನ ಕ್ರಮ, ಕಲೆ, ಸಂಗೀತ, ಸಾಹಿತ್ಯ ಎಲ್ಲವೂ ಮೌಲಿಕಗೊಂಡು ಸ್ತ್ರೀ ಸಂಸ್ಕೃತಿಯನ್ನು ಕಟ್ಟುವ ಪ್ರಯತ್ನ ಇಲ್ಲಿದೆ. ತಾಯಿ ಮತ್ತು ಹೆಣ್ಣು ಮಕ್ಕಳ ಜೈವಿಕವಾದ, ಭಾವನಾತ್ಮಕವಾದ ಸಂಬಂಧಗಳು ಇಲ್ಲಿ ಮುಖ್ಯವಾಗಿರುವುದರ ಜೊತೆಗೆ ಹೆಣ್ಣುತನದ ನೆಲೆಯಲ್ಲಿಯೇ ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಕಂಡುಕೊಂಡು ಪುರುಷಾಧಿಕಾರದ ಪಂಜರದಿಂದ ಹೊರಬಂದು ವಿಮೋಚನೆ ಕಂಡುಕೊಳ್ಳಬಹುದು ಎಂಬ ಧ್ವನಿ ಈ ಕೃತಿಯಲ್ಲಿದೆ.ಹಾಗೆಯೇ ಎಲ್ಲಾ ಕ್ಷೇತ್ರಗಳು ಆಧುನೀಕರಣಗೊಂಡು ಮಾನವೀಯವಾಗಬೇಕು ಎಂಬ ಆಶಯವನ್ನೂ ಪ್ರಕಟಿಸುತ್ತದೆ.

ಆತ್ಮಕಥೆ ಬರೆಯುವುದು ಸುಲಭವೇನಲ್ಲ. ತನ್ನ ಬೇಕು ಬೇಡಗಳಿಂದ ಪ್ರಭಾವಿತರಾಗದೆ, ವಿಶೇಷ ಭಾವೋದ್ರೇಕಕ್ಕೆ ಒಳಗಾಗದೆ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ನಿರೂಪಿಸುವ ಸಂಯಮ ರೂಢಿಸಿಕೊಳ್ಳಬೇಕು. ಸತ್ಯನಿಷ್ಠೆ ವಿಮರ್ಶಾ ದೃಷ್ಟಿಗಳನ್ನು ರೂಢಿಸಿಕೊಂಡಿರಬೇಕು. ಹೀಗಾದಾಗ ಆತ್ಮಕಥೆಯು ಸಾಂಸ್ಕೃತಿಕ ಚರಿತ್ರೆಯಾಗುತ್ತದೆ. ಅಜಿತ್ ಕೌರ್ ಅವರ ಆತ್ಮಕಥೆಯನ್ನು ರೇಣುಕಾ ನಿಡಗುಂದಿ ಅವರು ಸರಾಗವಾಗಿ ಓದಿಸಿಕೊಳ್ಳುವಂತೆ ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.