ADVERTISEMENT

ಮೊದಲ ಓದು: ಗುರುಕಾವ್ಯದ ಸ್ಥೂಲ ಹಂದರ

ಟಿ.ಎನ್‌.ವಾಸುದೇವಮೂರ್ತಿ
Published 29 ಮೇ 2021, 19:30 IST
Last Updated 29 ಮೇ 2021, 19:30 IST
‘ನಾರಾಯಣ ಗುರು ಸಂಪೂರ್ಣ ಕೃತಿಗಳು’ ಮುಖಪುಟ
‘ನಾರಾಯಣ ಗುರು ಸಂಪೂರ್ಣ ಕೃತಿಗಳು’ ಮುಖಪುಟ   

ನಾರಾಯಣ ಗುರು ಸಂಪೂರ್ಣ ಕೃತಿಗಳು
ಕನ್ನಡಕ್ಕೆ:
ವಿನಯ ಚೈತನ್ಯ
ಪ್ರ: ಇನ್‌ಸೈಟ್ ಪಬ್ಲಿಕಾ, ನವಕ್ಕಾವು
ಬೆಲೆ: 399
ಪುಟ: 248

ಮೂಲತಃ ಕೇರಳದವರಾದ ವಿನಯಚೈತನ್ಯ ಅವರು ಕನಕಪುರ ರಸ್ತೆಯ ನಾರಾಯಣಗುರು ಗುರುಕುಲದಲ್ಲಿ 40 ವರ್ಷಗಳ ಕಾಲ ಅಧ್ಯಕ್ಷರಾಗಿದ್ದವರು. ಇಂಗ್ಲಿಷಿನಲ್ಲಿ ಹಲವು ಕೃತಿಗಳನ್ನು ಬರೆದಿರುವ ಲೇಖಕರು ಕನ್ನಡದಲ್ಲೂ ಅಕ್ಕಮಹಾದೇವಿ, ಮಿಲರೇಪ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಸಂಸ್ಕೃತ ಹಾಗೂ ಮಲಯಾಳಂನಲ್ಲಿ ರಚನೆಗೊಂಡ ನಾರಾಯಣ ಗುರುಗಳ ಸಮಗ್ರ ಕೃತಿಗಳ ಕನ್ನಡ ಅನುವಾದವಿದೆ.

ಕನ್ನಡದಲ್ಲಿ ಈಗಾಗಲೇ ಕೆ.ಕೆ.ನಾಯರ್, ಪಿ.ಪರಮೇಶ್ವರನ್, ಮಲಾರ್ ಜಯರಾಮ ರೈ, ಓ ಶಾಮಭಟ್ಟ, ಕೆ.ಎಂ.ರಾಘವ ನಂಬಿಯಾರ್ ಮುಂತಾದವರು ನಾರಾಯಣ ಗುರುಗಳ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಇವಲ್ಲದೇ ನಾರಾಯಣ ಗುರುಗಳ ಕುರಿತಾಗಿ ಹತ್ತು ಹಲವು ಲೇಖನ, ಪ್ರಬಂಧಗಳೂ ಕಾಲಕಾಲಕ್ಕೆ ಪ್ರಕಟವಾಗಿವೆ. ಆದರೆ ನಾರಾಯಣ ಗುರುಗಳ ಸಮಗ್ರ ಸಾಹಿತ್ಯ ಇದೇ ಮೊದಲ ಸಲ ಕನ್ನಡದಲ್ಲಿ ಬರುತ್ತಿದೆ.

ADVERTISEMENT

ಭಾರತದಲ್ಲಿ ಗಾಂಧಿ, ಅಂಬೇಡ್ಕರ್ ಮುಂತಾದವರ ಸಾಮಾಜಿಕ ಚಳವಳಿಗಳು ಪ್ರಾರಂಭವಾಗುವ ಮೊದಲೇ, 19ನೇ ಶತಮಾನದ ಉತ್ತರಾರ್ಧದಲ್ಲೇ, ಜಾತಿವೈಷಮ್ಯ, ಪ್ರಾಣಿವಧೆ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ರೋಗಗಳ ಚಿಕಿತ್ಸೆಗೆ ಮುಂದಾದ ಪ್ರಮುಖ ಸಂತ ನಾರಾಯಣ ಗುರು. ಕನ್ನಡದ ಓದುಗರಿಗೆ ನಾರಾಯಣ ಗುರುಗಳು ಒಬ್ಬ ಸಮಾಜ ಸುಧಾರಕ ಸಂತನೆಂದೇ ಪರಿಚಿತರು. ಆದರೆ, ಅವರ ಬಗೆಗೆ ಅಷ್ಟುಮಾತ್ರ ಹೇಳಿದರೆ ಅದು ಅಪೂರ್ಣ ಚಿತ್ರಣವಾಗುತ್ತದೆ ಎಂಬುದು ವಿನಯ ಚೈತನ್ಯರ ಅಭಿಪ್ರಾಯ. ಅವರನ್ನು ಒಬ್ಬ ಅದ್ವೈತ ಸಿದ್ಧಾಂತದ ಪ್ರತಿಪಾದಕನಂತೆ ಬಿಂಬಿಸುವುದು ಲೇಖಕರ ಮೂಲ ಆಶಯವಿದ್ದಂತಿದೆ. ಫ್ರೆಂಚ್ ತತ್ವಜ್ಞಾನಿ ರೋಮೇ ರೋಲೋರಂತಹ ಜೀವನ ಚರಿತ್ರಕಾರರು ಈಗಾಗಲೇ ನಾರಾಯಣ ಗುರುಗಳ ಬರವಣಿಗೆಗಳಲ್ಲಿ ಆದಿಶಂಕರರ ಅದ್ವೈತ ಸಿದ್ಧಾಂತದ ಪ್ರಭಾವವಿರುವುದನ್ನು ಗುರುತಿಸಿದ್ದಾರೆ.

ಲೇಖಕರು ಹೇಳುವಂತೆ ನಾರಾಯಣ ಗುರುಗಳನ್ನು ಅದ್ವೈತಕ್ಕಷ್ಟೇ ಸೀಮಿತಗೊಳಿಸುವುದು ಪುನಃ ಅಪೂರ್ಣ ಚಿತ್ರಣವೇ ಆಗುತ್ತದೆ. ಏಕೆಂದರೆ, ಅವರ ಕೃತಿಗಳಲ್ಲಿ ಬುದ್ಧ ಮತ್ತು ಶಂಕರರ ತತ್ವಗಳೆರಡೂ ಮಿಳಿತವಾಗಿವೆ. ಜೊತೆಗೆ ರಾಮಾನುಜರ ಭಕ್ತಿರಸವೂ ಕಂಡು ಬರುತ್ತದೆ. ನಾರಾಯಣ ಗುರುಗಳು ಸಹ ರಾಮಾನುಜರಂತೆಯೇ ದಲಿತರಿಗೆ ದೇವಸ್ಥಾನ ಪ್ರವೇಶದ ಹಕ್ಕನ್ನು ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಗಳಿಸಿಕೊಡಲು ಶ್ರಮಿಸಿದವರು. ನಾರಾಯಣ ಗುರುಗಳ ರಚನೆಗಳಲ್ಲಿ ಅದ್ವೈತದ ಹಲವು ಒಳನೋಟಗಳು ಇವೆಯಾದರೂ ಮಿಥ್ಯಾವಾದವನ್ನು ಪ್ರತಿಪಾದಿಸುವ ಶಾಂಕರ ಅದ್ವೈತಕ್ಕಿಂತ ಸಾಮಾಜಿಕ ಕಳಕಳಿಯುಳ್ಳ ನಾರಾಯಣ ಗುರುಗಳ ಅದ್ವೈತ ಹೇಗೆ ಭಿನ್ನವಾದುದು ಎಂಬ ಜಿಜ್ಞಾಸೆಗೆ -ಸುದೀರ್ಘ ಪ್ರಸ್ತಾವನೆಯುಳ್ಳ- ಈ ಕೃತಿಯಲ್ಲಿ ಸಮಾಧಾನ ಸಿಗುವುದಿಲ್ಲ.

ನಾರಾಯಣ ಗುರುಗಳ ಮೇಲೆ ಉಪನಿಷತ್ತು ಮತ್ತು ಅದ್ವೈತ ವೇದಾಂತದ ಪ್ರಭಾವವಿದೆಯಾದರೂ ಶಂಕರರಂತೆ ಉಪನಿಷತ್ತುಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಪ್ರತಿಪಾದಿಸುವ ಪ್ರಯತ್ನವಾಗಲೀ ಆಸಕ್ತಿಯಾಗಲೀ ಅವರ ಕೃತಿಗಳಲ್ಲಿ ಕಂಡುಬರುವುದಿಲ್ಲ. ಬದಲಾಗಿ ಕವಿ ರವೀಂದ್ರ, ಕುವೆಂಪು, ಬೇಂದ್ರೆ, ಮಧುರಚೆನ್ನರಂತೆ ಕಾವ್ಯಮಾರ್ಗದಲ್ಲಿ ಉಪನಿಷತ್ ವಿವೇಕವನ್ನು ಮರುಸೃಷ್ಟಿಸುವ ಪ್ರಯತ್ನ ಅವರ ರಚನೆಗಳಲ್ಲಿ ಕಂಡು ಬರುತ್ತದೆ. ಬೇಂದ್ರೆಯವರಂತೂ ಜ್ಞಾನದೇವ, ಕಬೀರ, ಅರವಿಂದ, ರವೀಂದ್ರ ಮುಂತಾದವರ ಅನುಭಾವದ ರಚನೆಗಳನ್ನು ಅನನ್ಯ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡಕ್ಕೆ ಸಿದ್ಧಿಸಿರುವ ಇಂತಹ ಅನುಭಾವ ಸಾಹಿತ್ಯದ ಹಿನ್ನೆಲೆಯಲ್ಲಿ ಈ ಕೃತಿಯನ್ನು ಅವಲೋಕಿಸಿದಾಗ ನಾರಾಯಣ ಗುರುಗಳ ಕಾವ್ಯದ ವಸ್ತು-ವಿಚಾರಗಳ ಒಂದು ಸ್ಥೂಲ ಹಂದರವಷ್ಟೇ ನಮಗೆ ಪರಿಚಯವಾಗುತ್ತದೆ.

ನಾರಾಯಣ ಗುರು 1880ಕ್ಕೂ ಮುನ್ನ ರಚಿಸಿದ್ದ ಒಂದು ಪದ್ಯವನ್ನು ಅವರಿಗೆ ತೋರಿಸಿದಾಗ ‘ಆ ಪದ್ಯವನ್ನು ಬರೆದ ವ್ಯಕ್ತಿ ಈಗ ಇಲ್ಲ’ ಎಂದು ಅವರು ಹೇಳಿದ್ದರಂತೆ. ನಾರಾಯಣ ಗುರುವಿನಂತಹ ಒಬ್ಬ ಸಂತ-ಕವಿಯ ಪ್ರತಿಭೆ ಕಾಲಾಂತರದಲ್ಲಿ ಯಾವೆಲ್ಲ ಮಾರ್ಗಗಳನ್ನು ಹಿಡಿಯುತ್ತದೆ, ಯಾವೆಲ್ಲ ಸ್ಥಿತ್ಯಂತರಗಳಿಗೆ ಒಳಪಡುತ್ತದೆ ಎಂಬುದು ಒಂದು ಕುತೂಹಲಕಾರಿ ಅಧ್ಯಯನ. ಈ ದೃಷ್ಟಿಯಿಂದ ಅವರ ಕೃತಿಗಳನ್ನು ಕಾಲಾನುಕ್ರಮದಲ್ಲಿ ಸಂಕಲಿಸದಿರುವುದು ಈ ಸಂಕಲನದ ಒಂದು ದೊಡ್ಡ ಕೊರತೆಯಂತೆ ತೋರುತ್ತದೆ. ಆದಾಗ್ಯೂ ಅವರ ಸಮಗ್ರ ಕೃತಿಗಳನ್ನು ಕನ್ನಡಿಗರಿಗೆ ಪರಿಚಯಿಸಲು ಪ್ರಯತ್ನಿಸಿರುವ ವಿನಯಚೈತನ್ಯರ ಪ್ರಯತ್ನ ಶ್ಲಾಘನೀಯ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.