ADVERTISEMENT

ಅವಲೋಕನ: ‘ವನ್ಯಲೋಕ’ದ ಸಂಘರ್ಷಮಯ ಸ್ಥಿತಿಯ ಚಿತ್ರಣ

ಎಸ್.ರವಿಪ್ರಕಾಶ್
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿ
ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿ   

ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು
ಲೇ:
ಮಾಕೋನಹಳ್ಳಿ ವಿನಯ್‌ ಮಾಧವ್‌
ಪ್ರ: ಸಾವಣ್ಣ ಎಂಟರ್‌ಪ್ರೈಸಿಸ್‌, 90363 12786
ಪುಟಗಳು: 208, ಬೆಲೆ: 200
ಸಂ:9036312786

‘ನಾವು ಸೋಲುವ ಯುದ್ಧದಲ್ಲಿ ಹೋರಾಡುತ್ತಿದ್ದೇವೆ. ಆದರೆ, ನಾವಿನ್ನೂ ಸೋತಿಲ್ಲ’ ಎಂಬ ಅಡಿ ಸಾಲನ್ನು ಒಳಗೊಂಡ ‘ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು’ ಕೃತಿ ಅರಣ್ಯ, ವನ್ಯಜೀವಿ, ಮಲೆನಾಡಿನ ಈಗಿನ ಸಂಘರ್ಷಮಯ ಸ್ಥಿತಿ, ಅಸ್ಪಷ್ಟ ಹಾಗೂ ನಿರಾಶಾದಾಯಕ ಭವಿಷ್ಯದ ಮೇಲೆ ಬೆಳಕು ಚೆಲ್ಲಿದೆ. ಅಳಿದುಳಿದ ಕಾಡು ಮತ್ತು ವನ್ಯಜೀವಿಗಳನ್ನು ಉಳಿಸಿಕೊಳ್ಳಲು ಸಾಧ್ಯತೆ ಇದ್ದ ಡಾ.ಮಾಧವ ಗಾಡ್ಗೀಳ್‌ ವರದಿಯ ಶಿಫಾರಸುಗಳನ್ನು ಸಾರಾಸಗಟು ಕಸದ ಬುಟ್ಟಿಗೆ ಎಸೆದು, ಅದಕ್ಕೆ ಪರ್ಯಾಯವಾಗಿ ರೂಪುಗೊಂಡ ಡಾ.ಕಸ್ತೂರಿ ರಂಗನ್‌ ವರದಿಯನ್ನೂ ಪಶ್ಚಿಮಘಟ್ಟ ಪ್ರದೇಶ ಹೊಂದಿರುವ ಎಲ್ಲ ರಾಜ್ಯಗಳು ತಿರಸ್ಕರಿಸಿವೆ. ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ರಾಜಕಾರಣಿಗಳು ತೋಳೇರಿಸಿ ನಿಂತಿರುವ ಕಾಲಘಟ್ಟದಲ್ಲಿ ಈ ಕೃತಿ ಹೊರಬಂದಿದೆ.

ಇದು ಪತ್ರಕರ್ತ ಮಾಕೋನಹಳ್ಳಿ ವಿನಯ್‌ ಮಾಧವ್‌ ಅವರ ವನ್ಯಜೀವಿ/ಪರಿಸರ ವರದಿಗಾರಿಕೆಯ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು ಮತ್ತು ಪತ್ರಿಕಾ ಓದುಗರಿಗೆ ವಿವರಿಸಲಾಗದ ತಾಕಲಾಟ, ಸಂಘರ್ಷಗಳ ಒಳನೋಟವಿರುವ ಕೃತಿ. ಅಲ್ಲದೆ, ಮಲೆನಾಡಿನ ಭಾಗವೂ ತ್ವರಿತ ನಗರೀಕರಣಕ್ಕೆ ಒಗ್ಗಿಕೊಂಡ ನಂತರ ನಾಗಾಲೋಟದಲ್ಲಿ ಸಾಗುತ್ತಿರುವ ಬದಲಾವಣೆಗಳು, ಕೃಷಿ, ಪರಿಸರ, ಅಭಿವೃದ್ಧಿ ಮತ್ತು ವ್ಯವಸ್ಥೆ ಒಂದನ್ನೊಂದು ನುಂಗುತ್ತಾ ಸಾಗಿರುವ ಕಟುವಾಸ್ತವವನ್ನು ಕಟ್ಟಿಕೊಟ್ಟಿದ್ದಾರೆ. ವನ ಮತ್ತು ಅಲ್ಲಿನ ಜೀವಿಗಳನ್ನು ಉಳಿಸಿಕೊಳ್ಳಲು ಚಿಣ್ಣಪ್ಪ ಅವರಂತಹ ಕೆಲವೇ ವ್ಯಕ್ತಿಗಳು ವೈಯಕ್ತಿಕ ನೆಲೆಯಲ್ಲಿ ಹೋರಾಡುತ್ತಿರುವುದನ್ನು ದಾಖಲಿಸುತ್ತಾ, ಆ ಹಾದಿ ಎಷ್ಟು ಕಠಿಣ ಎಂಬುದನ್ನೂ ಕಟ್ಟಿಕೊಡಲಾಗಿದೆ.

ADVERTISEMENT

‘ಭೂಮಿಗೆ ನಿಜಕ್ಕೂ ಗಂಡಾಂತರ ಇರೋದು ಯಾವ ಜೀವಿಯಿಂದ ಎಂದರೆ ನಿಸ್ಸಂಶಯವಾಗಿ ಅದು ಮಾನವ ಎಂದೇ ಹೇಳಬಹುದು. ಧರೆಯಲ್ಲಿ ಎಲ್ಲ ಸಹಜೀವಿಗಳ ನಾಶಕ್ಕೆ ಮಾನವನೇ ಕಾರಣ. ನಾಶ ಹೀಗೆಯೇ ಮುಂದುವರಿದರೆ, ಮಾನವನನ್ನು ಹೊರತುಪಡಿಸಿ ಇತರೆಲ್ಲ ಜೀವಿಸಂಕುಲವೇ ನಾಶವಾಗಿ ಹೋಗುವ ದಿನ ಬಂದರೂ ಅಚ್ಚರಿ ಇಲ್ಲ’ – ಹೀಗೆಂದು ಭವಿಷ್ಯ ನುಡಿದವರು ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾಲಯದ ಜೀವಶಾಸ್ತ್ರ ಪ್ರೊಫೆಸರ್‌ ರೊಡಾಲ್ಫ್ ಡಿರ್ಜೊ. ಮಲೆನಾಡು ಮತ್ತು ಇತರ ಅರಣ್ಯ ಪ್ರದೇಶಕ್ಕೆ ಅವರ ಮಾತು ಯಥಾವತ್ತಾಗಿ ಅನ್ವಯವಾಗುತ್ತದೆ.

ಮಾನವನು ಅರಣ್ಯವನ್ನು ಕಬಳಿಸುತ್ತ ತನ್ನ ಆಧಿಪತ್ಯ ಸ್ಥಾಪಿಸುತ್ತಾ ಹೋದಂತೆ, ಜೀವಜಾಲದ ವೈವಿಧ್ಯ ಸರಪಳಿಗಳೂ ನಾಶವಾಗುತ್ತಾ ಹೋದವು. ಅದು ಆಫ್ರಿಕಾ ಖಂಡದಲ್ಲಿ ಆಗಿರಬಹುದು, ನಮ್ಮ ಪಕ್ಕದ ಮಲೆನಾಡೂ ಆಗಿರಬಹುದು. ಬಹುತೇಕ ಅಪಾಯಕಾರಿ ಕಾಯಿಲೆಗಳ ವೈರಸ್‌ ಅಥವಾ ರೋಗಾಣುಗಳು ಹಬ್ಬಿದ್ದು, ಅರಣ್ಯ ನಾಶ ಮತ್ತು ವನ್ಯಜೀವಿಗಳ ಮಾರಣ ಹೋಮದಿಂದ ಎಂಬುದು ಸಾಬೀತಾಗಿದೆ.

ಮಾನವ ಇವುಗಳಿಂದ ಪಾಠ ಕಲಿತಂತಿಲ್ಲ. ಪ್ರತಿಯೊಂದು ಜೀವಿಯೂ ತನ್ನದೇ ಆದ ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಂಡಿರುತ್ತದೆ. ಅಂತಹ ನಡವಳಿಕೆ ವಂಶವಾಹಿನಿ ಮೂಲಕ ಬಳುವಳಿಯಾಗಿಯೇ ಬಂದಿರುತ್ತದೆ. ಆ ನಿಸರ್ಗ ನಿಯಮವನ್ನು ಹೊಸಕಿ ಹಾಕುತ್ತಿರುವವರು ನಾವು, ಅಂದರೆ ಮಾನವರು. ಮಾನವ ಕೇಂದ್ರಿತ ಮತ್ತು ಭೌತಿಕವಾದದ ಆವಾಹನೆ ಮಾಡಿಕೊಂಡ ಪರಿಣಾಮ ತೋಟಕ್ಕೆ ಆನೆಗಳು/ಹುಲಿ ಬಂದರೆ ಗುಂಡಿಕ್ಕಿ ಕೊಲ್ಲಿ ಎನ್ನುವ ರಾಜಕಾರಣಿಗಳು ಮಲೆನಾಡು– ಕೊಡಗು ಭಾಗದಲ್ಲಿ ಹುಟ್ಟಿಕೊಂಡಿದ್ದಾರೆ. ‘ಅರಣ್ಯ ಉಳಿಸಿಕೊಳ್ಳುವುದು ನಮಗೆ ಗೊತ್ತು. ಯಾರ ಪಾಠವೂ ಅಗತ್ಯವಿಲ್ಲ’ ಎಂಬ ಮಾತುಗಳನ್ನು ಹೇಳುತ್ತಲೇ ಪರಿಸರ, ವನ್ಯಜೀವಿಗಳ ನಿಸರ್ಗ ನಿಯಮದಲ್ಲಿ ಹಸ್ತಕ್ಷೇಪ ಮಾಡುತ್ತ, ನಾಶಕ್ಕೂ ಕಾರಣವಾಗುತ್ತಿರುವುದನ್ನು ಸೂಚ್ಯವಾಗಿ ಹೇಳಿದ್ದಾರೆ ವಿನಯ್.

ದಕ್ಷಿಣ ಭಾರತದ ಗಜಪಥಗಳ ವಿವರ, ಅವುಗಳನ್ನು ಮಾನವರು ಅತಿಕ್ರಮಿಸಿದ ಬಳಿಕ ಜೈವಿಕವಾಗಿ ಮತ್ತು ಮಾನಸಿಕವಾಗಿ ಅವುಗಳಲ್ಲಿ ಆಗಿರುವ ಏರುಪೇರನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ಕುವೆಂಪು, ಕಾರಂತ, ಕೆದಂಬಾಡಿ ಜತ್ತಪ್ಪ ರೈ, ತೇಜಸ್ವಿ ಕೃತಿಗಳಲ್ಲಿನ ವಿವರಗಳು ಪಶ್ಚಿಮಘಟ್ಟದ ರಮ್ಯಲೋಕ ತೆರೆದಿಡುತ್ತವೆ. ಆದರೆ, ಪಶ್ಚಿಮಘಟ್ಟ ಈಗ ಹಾಗೆ ಉಳಿದಿಲ್ಲ. ಕಾಡು, ವನ್ಯಜೀವಿಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡೋಣ, ಅತಿಕ್ರಮಣ ನಿಲ್ಲಿಸೋಣ ಎಂಬ ಮನಃಸ್ಥಿತಿಯವರೂ ಅಪರೂಪದ ಜೀವಿಗಳಾಗಿದ್ದಾರೆ ಎಂಬುದು ಕಟುಸತ್ಯ. ಇರುವ ಕಾಡನ್ನು ಹರಿದು ಹಂಚಿಬಿಡೋಣ ಎಂಬ ಮನಃಸ್ಥಿತಿ ಆಳುವ ‘ಪ್ರಭು’ಗಳದ್ದು. ಇದರ ಸುತ್ತಲೂ ಹಲವು ಹಿತಾಸಕ್ತಿಗಳು, ಮಾಫಿಯಾಗಳು ಮತ್ತು ಅಜೆಂಡಾಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಕೃತಿ ತೆರೆದಿಟ್ಟಿದೆ. ವನ್ಯಲೋಕಕ್ಕೂ ಅಲ್ಲಿನ ಜೀವಿಗಳಿಗೂ ‘ಪ್ರಜ್ಞೆ’ (consciousness) ಇದೆ ಎಂಬುದನ್ನು ಮರೆಯಬಾರದು ಎನ್ನುವ ಸಂದೇಶವೊಂದು ಕೃತಿಯುದ್ದಕ್ಕೂ ಅಂತರ್ಗಾಮಿಯಾಗಿ ಹರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.