ADVERTISEMENT

ಕೆಂಡದ ಮೇಲೆ ಕಾಲಿಟ್ಟು ನಿಂತವರು...

ಪದ್ಮನಾಭ ಭಟ್ಟ‌
Published 13 ಜೂನ್ 2020, 19:30 IST
Last Updated 13 ಜೂನ್ 2020, 19:30 IST
ಚಾನ್ನೆ
ಚಾನ್ನೆ   

‘ಚಾನ್ನೆ’ ಮುದಿರಾಜ್ ಬಾಣದ್ ಅವರ ಎರಡನೇ ಕಥಾಸಂಕಲನ. ಅವರೇ ಹೇಳಿಕೊಂಡಿರುವ ಹಾಗೆ, ‘ಬರೆದರೆ ಮಾತ್ರ ಹಗುರಾಗುತ್ತೇನೆಂಬ’ ತೀವ್ರ ತುಡಿತದಲ್ಲಿ ಬರೆದ ಕತೆಗಳಿವು. ಅವರೊಳಗಿನ ಆ ತೀವ್ರ ತುಡಿತವೆಂಬ ಕೆಂಡದ ಸುಡುಸುಡು ಗುಣ ಇಡೀ ಸಂಕಲನದಲ್ಲಿ ಎದ್ದು ಕಾಣುತ್ತದೆ. ಕೆಲವೊಮ್ಮೆ ಅದು ಬೂದಿಯಡಿಗೆ ಅವಿತು ಇದ್ದೂ ಇಲ್ಲದಂತೆ ಕಂಡರೆ, ಇನ್ನು ಕೆಲವು ಕಡೆ ಭಗಭಗ ಉರಿದು ಬಿಸಿಯನ್ನು ನಮಗೂ ದಾಟಿಸುತ್ತದೆ.

ಮುದಿರಾಜ್ ಅವರ ಕಥೆಯ ಪಾತ್ರಧಾರಿಗಳೆಲ್ಲರೂ ಭೂತದ ಕೆಂಡದೊಲೆಯೊಳಗೆ ಕಾಲಿಟ್ಟು ನಿಂತವರು. ಸುಡುವ ಬಿಸಿಯನ್ನು ಭರಿಸಲೂ ಆಗದೆ, ತಪ್ಪಿಸಿಕೊಳ್ಳಲೂ ಆಗದೆ ವರ್ತಮಾನದಲ್ಲಿ ನರಳುತ್ತಿರುವವರು. ಭವಿಷ್ಯದ ಬಗ್ಗೆ ಆಶಾವಾದ ಇರಿಸಿಕೊಳ್ಳುವಷ್ಟೂ ತ್ರಾಣ ಅವರಲ್ಲಿಲ್ಲ. ಹಾಗಾಗಿಯೇ ಇಲ್ಲಿನ ಬಹುತೇಕ ಪಾತ್ರಗಳು ವಿಕ್ಷಿಪ್ತ ಅನಿಸುವಷ್ಟು ತಹತಹಿಸುತ್ತಲೇ ಇರುತ್ತವೆ. ತಮ್ಮ ಭೂತದ ಹುತ್ತದಲ್ಲಿ ಕೈ ಹಾಕಿ ಪದೇ ಪದೇ ಹಾವಿನಿಂದ ಕಚ್ಚಿಸಿಕೊಳ್ಳುತ್ತಲೇ ಇರುತ್ತವೆ. ಇಲ್ಲಿನ ಹಲವು ಕಥೆಗಳಲ್ಲಿ ಮುಖ್ಯ ಪಾತ್ರಗಳಿಗೆ ನಿರ್ದಿಷ್ಟ ಹೆಸರಿಲ್ಲ. ‘ಇವನು‘, ‘ಇವಳು‘, ಅಮ್ಮ, ಚಿಕ್ಕಮ್ಮ, ಅಪ್ಪ ಹೀಗೆ ಸಂಬಂಧ ಸೂಚಕಗಳಿಂದಳೇ ಗುರ್ತಿಸಲ್ಪಡುತ್ತಾರೆ. ಯಾಕೆಂದರೆ ಇವರೆಲ್ಲ ಒಂದು ಕಥೆಯಲ್ಲಿ ಬಂದು ಹೋಗುವ ಪಾತ್ರಗಳಲ್ಲ. ಇಲ್ಲಿನ ಎಲ್ಲ ಕಥೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ, ಒಂದು ಕಥೆಯಿಂದ ಇನ್ನೊಂದಕ್ಕೆ ಮುಂದುವರಿಯುವ, ಹಿಂಜರಿಯುವ, ಅರಳುವ, ಮುದುಡುವ, ತೆರೆದುಕೊಳ್ಳುವ, ಮುಚ್ಚಿಕೊಳ್ಳುವ ಪಾತ್ರಗಳು.

‘ಹೇಳದೆ ಉಳಿಯಲಾರೆ’ ಎಂಬ ಅಭಿವ್ಯಕ್ತಿಯ ತಹತಹ ಎಲ್ಲ ಸೃಜನಶೀಲ ಬರಹಗಾರರಿಗೂ ಅನಿವಾರ್ಯ. ಆದರೆ ಈ ತಹತಹಿಕೆಯೊಂದರಿಂದಲೇ ಒಳ್ಳೆಯ ಕೃತಿ ಜೀವ ತಳೆಯುವುದಿಲ್ಲ ಎನ್ನುವುದನ್ನೂ ಮರೆಯಬಾರದು. ಹೇಳುವುದು ಎಷ್ಟು ಮುಖ್ಯವೋ, ಪರಿಣಾಮವೂ ಮುಖ್ಯ. ಇಲ್ಲದಿದ್ದರೆ ಪ್ರಕಟಣೆ ಎಂಬುದೇ ಅರ್ಥಹೀನವಾಗುತ್ತದೆ. ಇದು ಕಥನಕೌಶಲಕ್ಕೆ ಸಂಬಂಧಿಸಿದ್ದು. ಭಾಷೆ ಎನ್ನುವುದು ಬರಹಗಾರ ಕೈಯಲ್ಲಿನ ಉಳಿಯಿದ್ದಂತೆ. ಕಲ್ಲ ಮೇಲಿಟ್ಟು ಮನಬಂದಂತೆ ಸುತ್ತಿಗೆ ಹೊಡೆದರೆ ಕಲಾಕೃತಿ ರೂಪುಗೊಳ್ಳುವುದಿಲ್ಲ. ಭಾಷೆಯನ್ನು ಉಳಿಯಂತೆ ಬಳಸಿಕೊಂಡು ಅನುಭವವನ್ನು ಶಿಲ್ಪವಾಗಿಸುವ ಸಂಯಮ ಮತ್ತು ಕೌಶಲ ಈ ಸಂಕಲನದ ಮೊದಲ ಕೆಲವು ಕಥೆಗಳಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯಾವುದೇ ಪ್ರಾದೇಶಿಕ ಭಾಷೆಗಾದರೂ, ಎಷ್ಟೇ ಗ್ರಾಮೀಣ ಸೊಗಡಿನ ಮಾತಿಗಾದರೂ ಒಂದು ವ್ಯಾಕರಣ ಇರುತ್ತದೆ. ಬರೆಯುವಾಗ ಅಲ್ಪ ವಿರಾಮ, ಪೂರ್ಣವಿರಾಮ, ಭಾವಸೂಚಕಗಳಿರುತ್ತವೆ ಎಂಬುದನ್ನೇ ಲೇಖಕರು ಈ ಕಥೆಗಳ ಮಟ್ಟಿಗೆ ಮರೆತಿರುವ ಹಾಗಿದೆ. ನಿರೂಪಣಾ ಕ್ರಮದಲ್ಲಿಯೂ ಇದೇ ರೀತಿಯ ತೊಡಕುಗಳಿವೆ. ಕೆಲವು ಕಡೆಗಳಲ್ಲಂತೂ ಪ್ರಥಮ ಪುರುಷದಲ್ಲಿ ಶುರುವಾಗುವ ವಾಕ್ಯ ಉತ್ತಮ ಪುರುಷದಲ್ಲಿ ಕೊನೆಗೊಳ್ಳುತ್ತದೆ! ನಿರೂಪಕ ಮತ್ತು ಪಾತ್ರದ ಪ್ರಜ್ಞೆಪ್ರವಾಹಗಳು ಯಾವಾಗ ಸೇರುತ್ತವೆ, ಯಾವಾಗ ಅಗಲುತ್ತವೆ ಎಂದೂ ಬೇರ್ಪಡಿಸಿಕೊಳ್ಳುವುದು ಕಷ್ಟ.

ADVERTISEMENT

ಹಾಗೆಂದು ಈ ಕಥೆಗಾರರಿಗೆ ಕೌಶಲದ ಬಗ್ಗೆ ಅರಿವೇ ಇಲ್ಲ ಎಂದಲ್ಲ. ಈ ಸಂಕಲನದ ಕಥೆಗಳ ಕ್ರಮ, ಮುದಿರಾಜ್‌ ಅವರೊಳಗಿನ ಕಥೆಗಾರ ಬೆಳೆಯುತ್ತ ಹೋಗಿರುವ ಕ್ರಮವೂ ಹೌದು. ಮೊದಲ ಕೆಲವು ಕಥೆಗಳಲ್ಲಿ, ಕಣ್ಣಿಗೆ ಕಂಡ ದಟ್ಟ ಬಣ್ಣಗಳಲ್ಲಿ ಕುಂಚವನ್ನದ್ದಿ ಮನಬಂದಂತೆ ಕ್ಯಾನ್ವಾಸಿನ ಮೇಲೆ ಎಳೆದಾಡಿದಂತೆ ಭಾಸವಾಗುತ್ತದೆ. ಆದರೆ ‘ಚಾನ್ನೆ‘ ಕಥೆಗೆ ಬರುವಷ್ಟರಲ್ಲಿ ತನ್ನ ಅನುಭವದ ಬಣ್ಣವನ್ನು ಮೆತ್ತಿಕೊಂಡ ಕುಂಚವನ್ನು ಎಲ್ಲಿ ಒತ್ತಿ ಎಲ್ಲಿ ಹಗುರಗೊಳಿಸಿ, ಯಾವ ಆಕಾರದಲ್ಲಿ ಎಳೆದರೆ ಕಲಾಕೃತಿಯಾಗಬಲ್ಲದು ಎಂಬ ಪಕ್ವತೆ ಬಂದಿದೆ. ಇಡೀ ಸಂಕಲನದುದ್ದಕ್ಕೂ ಈ ಕೌಶಲ, ಭಾಷೆಯ ಬಳಕೆ, ವಸ್ತುವಿನ ನಿರ್ವಹಣೆ, ಶಿಲ್ಪಗಳ ದೃಷ್ಟಿಯಿಂದ ಬೆಳವಣಿಗೆಯನ್ನು ಗುರ್ತಿಸಬಹುದು.

ಇಲ್ಲಿನ ಎಲ್ಲ ಕಥೆಗಳ ಸ್ಥಾಯಿಭಾವಕ್ಕೆ ‘ಕಟ್ಟಿರುವೆ’ ಎಂಬ ಹೆಸರಿನ ಕತೆ, ಸೂಕ್ತ ಪ್ರತಿಮೆಯಾಗಬಲ್ಲದು. ಕಟ್ಟಿರುವೆ ಕಥೆಯಲ್ಲಿ ಕಾಣಿಸಿಕೊಳ್ಳುವ ಇರುವೆಗಳು ಇಲ್ಲಿನ ಎಲ್ಲ ಕಥೆಗಳಲ್ಲಿಯೂ ಭೂತದ ನೆನಪುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಸಂತೋಷದ, ಉನ್ಮಾದದ ಗಳಿಗೆಗಳಲ್ಲಿ ಪ್ರತ್ಯಕ್ಷವಾಗಿ ಕಚ್ಚಿ, ನೋಯಿಸಿ ಸತಾಯಿಸುತ್ತವೆ. ಕಡ್ಡಿ ಹಿಡಿದು ಹೊಡೆದು ಕೊಂದಷ್ಟೂ ಸಾಲು ಸಾಲಾಗಿ ಬರುತ್ತಲೇ ಇರುತ್ತವೆ.

ಉತ್ತಮ ಪುರುಷದ ನಿರೂಪಣೆ ಬಂದಾಗೆಲ್ಲ ಅನುಭವಗಳ ಬಿರುಗಾಳಿಗೆ ತತ್ತರಿಸಿದಂತೆ ಕಾಣುವ ಕಥೆಗಾರರು, ಅದರಿಂದ ತುಸು ಅಂತರ ಕಾಯ್ದುಕೊಂಡಾಗೆಲ್ಲ ಹೆಚ್ಚು ಪ್ರಖರವಾಗಿ ಹೊಳೆಯುತ್ತಾರೆ. ಹಾಗಾಗಿಯೇ ‘ಜೇಜಮ್ಮ‘ ಈ ಸಂಕಲನದ ಹೆಚ್ಚು ಯಶಸ್ವಿ ಕಥೆ. ಮಹಾರಸಿಕ ಗಂಡನ ಪಡೆದೂ ದಾಂಪತ್ಯ ಸುಖವನ್ನು ಅನುಭವಿಸದ, ಮಗನ ಪಡೆದೂ ವೃದ್ಧಾಪ್ಯವನ್ನು ನೆಮ್ಮದಿಯಲ್ಲಿ ಕಳೆಯಲಾಗದ ಜೇಜಮ್ಮನ ಬದುಕು ಹಲವು ಧ್ವನಿಗಳನ್ನು ರಿಂಗಣಿಸುವ ಹಾಗೆ ಚಿತ್ರಿತವಾಗಿದೆ. ಮನುಷ್ಯನ ನೆಮ್ಮದಿಯನ್ನು ಕಸಿದುಕೊಳ್ಳುವ ಅತಿಯಾಸೆ, ದುರಾಸೆಗಳು, ಶಿಥಿಲಗೊಂಡು ಕುಸಿದು ಬೀಳುವ ಸಂಬಂಧಗಳ ಮಹಾಮರದ ಅಡಿಯಲ್ಲಿಯೇ ಮಲಗಿ ನಿದ್ರಿಸಬಯಸುವ ಹಂಬಲ, ಒಂದು ಸಮಾಜ ಸಾಮೂಹಿಕವಾಗಿ ಜೇಜಮ್ಮನಂಥವರ ನೆಮ್ಮದಿ ಕಸಿದುಕೊಂಡು, ಕೊನೆಗೆ ಕೊಂದೇ ಬಿಡುವ ಅಗೋಚರ ಕ್ರೌರ್ಯ ಎಲ್ಲವೂ ಈ ಕಥೆಯಲ್ಲಿ ಸಮರ್ಥವಾಗಿ ಬಿಂಬಿತವಾಗಿದೆ.

ತಮ್ಮ ಅನುಭವಗಳ ದಿಕ್ಕಾಪಾಲು ಓಟಕ್ಕೆ ಲಗಾಮು ಹಾಕಿ, ಅದನ್ನು ಸರಿಯಾದ ದಿಕ್ಕಿನಲ್ಲಿ ಹರಿಸುವ ಕೌಶಲವನ್ನು ಮತ್ತು ಅದಕ್ಕೆ ಅಗತ್ಯವಾದ ಭಾಷಾ ಬಳಕೆಯನ್ನು ದಕ್ಕಿಸಿಕೊಂಡರೆ ಮುದಿರಾಜ್ ಇನ್ನಷ್ಟು ಮಹತ್ವಾಕಾಂಕ್ಷೆಯ ಕೃತಿಗಳನ್ನು ರಚಿಸಬಲ್ಲರು ಎಂಬುದಕ್ಕೆ ಧಾರಾಳ ಸೂಚನೆಗಳು ಈ ಸಂಕಲನದಲ್ಲಿ ಸಿಗುತ್ತವೆ.

ಚಾನ್ನೆ (ಕಥಾಸಂಕಲನ)
ಲೇ: ಮುದಿರಾಜ್ ಬಾಣದ್
ಪ್ರ: ವೃಷ್ಣವಿ ಪ್ರಕಾಶನ
ಮೊ: 96201 70027

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.