ADVERTISEMENT

ಪುಸ್ತಕ ವಿಮರ್ಶೆ: ನೆರಳಿನಲ್ಲಿ ಕಾಣದ ಮರದ ಆಕಾರ

ಎಸ್.ದಿವಾಕರ್
Published 5 ಜೂನ್ 2021, 19:30 IST
Last Updated 5 ಜೂನ್ 2021, 19:30 IST
ಕ್ಷಿತಿಜ ಕೃತಿ
ಕ್ಷಿತಿಜ ಕೃತಿ   

ಪ್ರಮೋದ ಮುತಾಲಿಕರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದವರು; ಕೆಲವು ಕತೆ, ಕಾದಂಬರಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೂ ಕನ್ನಡದಿಂದ ಇಂಗ್ಲಿಷಿಗೂ ಅನುವಾದಿಸಿರುವವರು. ಈ ಸಂಕಲನದಲ್ಲಿ ಅವರು ಅನುವಾದಿಸಿರುವ 38 ಕವಿಗಳ 64 ಕವನಗಳಿವೆ. ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿಯ ರೂಪದಲ್ಲಿ ಇಲ್ಲಿನ ಈ ಕವನಗಳ ವಸ್ತು, ಆಶಯಗಳ ಬಗೆಗೆ ಅಮೋಘವಾಗಿ ಬರೆದಿದ್ದಾರೆ.

ಕಾವ್ಯವನ್ನು ಅನುವಾದಿಸುವಾಗ ಯಾವುದು ಕಳೆದುಹೋಗುವುದೋ ಅದೇ ಕಾವ್ಯ ಎಂಬ ಮಾತನ್ನು ನಾವು ಕೇಳಿದ್ದೇವಲ್ಲವೆ? ಬೇಂದ್ರೆಯವರು ಕಾವ್ಯಾನುವಾದವೆಂದರೆ ‘ನೆರಳು’ ಎಂದು ಎಲ್ಲೋ ಬರೆದಂತೆ ನೆನಪು. ಮರದ ನೆರಳಿನಲ್ಲಿ ಮರ ಇರುವುದಿಲ್ಲ, ನಿಜ. ಆದರೆ, ಮರದ ಆಕಾರವಂತೂ ಇದ್ದೇ ಇರುತ್ತದೆ. ಕಾವ್ಯವನ್ನು ಅನುವಾದಿಸುವವರು ಮೂಲದ ಕಾವ್ಯಭಾಷೆ, ಲಯ, ಧ್ವನಿ, ಪ್ರತಿಮಾ ವಿಧಾನ, ಮೂಲ ಕವಿಯ ನಿಲುವು, ಆಶಯ ಮೊದಲಾದವುಗಳನ್ನು ಆಳವಾಗಿ ಅರಿತಿದ್ದರೆ ಒಳ್ಳೆಯದು. ಜೊತೆಗೆ ತಾವು ಅನುವಾದಿಸುತ್ತಿರುವ ಭಾಷೆಯಲ್ಲಿ ಸ್ವತಃ ಕವಿಯಾಗಿದ್ದರೆ ಇನ್ನೂ ಒಳ್ಳೆಯದು. ಯು.ಆರ್. ಅನಂತಮೂರ್ತಿಯವರ ಅನುವಾದಗಳನ್ನು ಓದುವಾಗಲೆಲ್ಲ ನನಗೆ ಹೀಗೆಯೇ ಮತ್ತೆ ಮತ್ತೆ ಅನ್ನಿಸುವುದುಂಟು.

ಸಮರ್ಥ ಕವಿಯಾಗಿದ್ದರೆ ಅವರಿಗೆ ವ್ಯುತ್ಪತ್ತಿ ಇರುತ್ತದೆ, ಛಂದೋವೈವಿಧ್ಯ ಗೊತ್ತಿರುತ್ತದೆ, ಭಾಷೆಯಲ್ಲಿ ಭಾವವನ್ನು ಅಭಿನಯಿಸಿ ತೋರಿಸುವ ಪ್ರತಿಭೆಯಿರುತ್ತದೆ, ಗದ್ಯದಲ್ಲೂ ಪದ್ಯದ ಲಯವನ್ನು ಸಾಧಿಸುವ ಸಾಮರ್ಥ್ಯವಿರುತ್ತದೆ, ಅಗತ್ಯವೆನ್ನಿಸಿದಾಗ ವ್ಯಾಕರಣವನ್ನೂ ಧಿಕ್ಕರಿಸಿ ಮುಂದೆ ಸಾಗುವ ಧೈರ್ಯವಿರುತ್ತದೆ. ಇವೆಲ್ಲ ಇದ್ದಾಗ ಅನುವಾದಿತ ಕವನ ಮೂಲ ಕವಿತೆಯ ಸ್ವರೂಪ, ಆಂತರ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಹೀರಿಕೊಂಡಿರುವುದಷ್ಟೇ ಅಲ್ಲ, ಆಧುನಿಕ ಕನ್ನಡ ಕಾವ್ಯ ಪರಂಪರೆಯೊಡನೆ ಒಂದು ಹೊಸ ಸಂಬಂಧವನ್ನೂ ಕಟ್ಟಿಕೊಂಡಿರುತ್ತದೆ.

ADVERTISEMENT

ಸ್ವತಃ ಕವಿಯಾಗಿರುವ ಅನುವಾದಕನಿಗೆ ತಾನು ಅನುವಾದಕ್ಕಾಗಿ ಆಯ್ದುಕೊಳ್ಳುವ ಒಂದೊಂದು ಕವನವೂ ಒಂದೊಂದು ಸವಾಲೇ. ಆ ಸವಾಲಿನಲ್ಲಿ ಸ್ವಲ್ಪ ಮಟ್ಟಿಗಾದರೂ ಯಶಸ್ಸು ಕಂಡಾಗ ಅವನು ಅನುವಾದಿಸಿದ ಕವನ ಅವನ ಭಾಷೆಯ ಕಾವ್ಯದ ಜೊತೆ ಮತ್ತು ಅವನದೇ ಕಾವ್ಯದ ಜೊತೆ ಯಾವ ತಕರಾರೂ ಇಲ್ಲದೆ ಬೆರೆತುಕೊಳ್ಳುತ್ತದೆ.

ಪ್ರಸಿದ್ಧ ವಿಮರ್ಶಕ ಜಾರ್ಜ್ ಸ್ಟೈನರ್ ಸಂಪಾದಿಸಿರುವ ‘ಪೊಯೆಮ್ ಟು ಪೊಯೆಮ್’ ಎಂಬ ಸಂಕಲನದಲ್ಲಿ ವರ್ಜಿಲ್, ಸಾಫೊಕ್ಲಿಸ್, ಬೋದಿಲೇರ್, ರಿಲ್ಕ್, ಬ್ರೆಖ್ಟ್, ಮಯಾಕೋವ್‍ಸ್ಕಿ, ಪಾಸ್ತರ್‍ನಾಕ್, ಲೋರ್ಕ ಮುಂತಾದವರ ಕವನಗಳಿವೆ. ಇವುಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ಹಾಪ್ಕಿನ್ಸ್, ಯೇಟ್ಸ್, ಎಜ್ರಾ ಪೌಂಡ್, ಮರಿಯನ್ ಮೂರ್, ಅಲೆನ್ ಟೇಟ್, ರಾಯ್ ಕ್ಯಾಂಪ್‍ಬೆಲ್, ರಾಬರ್ಟ್ ಲವೆಲ್, ಸ್ಟೀಫನ್ ಸ್ಪೆಂಡರ್, ರಿಚರ್ಡ್ ವಿಲ್ಬರ್ ಮುಂತಾದವರು ಸ್ವತಃ ಉತ್ತಮ ಕವಿಗಳು. ಇವರು ಬಹುಮಟ್ಟಿಗೆ ತಮ್ಮ ಅನುವಾದಗಳಲ್ಲಿ ಆಯಾ ಕವಿಗಳ ಸ್ಟಾಂಜಾ ಕ್ರಮವನ್ನೂ ಲಯವಿನ್ಯಾಸವನ್ನೂ ಅಂತ್ಯಪ್ರಾಸವನ್ನೂ ತರಲು ಪ್ರಯತ್ನಿಸಿರುವುದುಂಟು.

ಕನ್ನಡಕ್ಕೆ ಬಂದರೆ ಬಿ.ಎಂ.ಶ್ರೀ.ಯವರು ತಮ್ಮ ‘ಇಂಗ್ಲಿಷ್ ಗೀತೆ’ಗಳಲ್ಲಿ ‘ಇಂಗ್ಲಿಷ್ ಕವನಗಳಲ್ಲಿನ ನಡೆಗೆ ಸಮಾನವಾಗಬಹುದಾದ್ದನ್ನು’ ಕನ್ನಡದಲ್ಲಿ ಗುರುತಿಸಿದರು. ರಾಮಚಂದ್ರ ಶರ್ಮರ ‘ಈ ಶತಮಾನದ ನೂರು ಇಂಗ್ಲಿಷ್ ಕವನಗಳು’ ಮತ್ತು ಎಚ್.ಎಸ್. ಶಿವಪ್ರಕಾಶರ ‘ಮರುರೂಪಗಳು’ ಸಂಕಲನಗಳಲ್ಲಿ, ನಿಸಾರ್ ಅಹಮದರ ‘ಸುಮುಹೂರ್ತ’ ಸಂಕಲನದ ಎರಡನೆಯ ಭಾಗದಲ್ಲಿ (ಶಿವಪ್ರಕಾಶರೇ ಬರೆದಿರುವಂತೆ) ‘ಪ್ರತೀ ಕವಿತೆಯ ಸ್ವಧರ್ಮವೇ ತರ್ಜುಮೆಯ ದಿಕ್ಕನ್ನೂ ತೋರಿಸಿದಂತಿದೆ’. ಈ ಮಾತು ಇನ್ನಷ್ಟು ಸ್ಪಷ್ಟವಾಗಬೇಕಾದರೆ ಮುತಾಲಿಕರು ಇಲ್ಲಿ ಅನುವಾದಿಸಿರುವ ರಾಬರ್ಟ್ ಸದೆಯ ‘ಬ್ಲೆನ್‍ಹೀಮ್ ಕದನ’, ಡಬ್ಲ್ಯು.ಎಚ್. ಆಡೆನ್ನನ ‘ನಿರಾಶ್ರಿತರು’ ಕವನಗಳ ಜೊತೆಗೆ ಬಿ.ಎಂ.ಶ್ರೀ. ಮತ್ತು ರಾಮಚಂದ್ರ ಶರ್ಮರ ಇದೇ ಕವನಗಳ ಅನುವಾದವನ್ನೂ ಇಟ್ಟುಕೊಂಡು ಓದಬೇಕು.

ಕಾವ್ಯವೆನ್ನುವುದು ವಿಚಾರಗಳ ವಾಹಕವಲ್ಲ, ತತ್ತ್ವಶಾಸ್ತ್ರವೂ ಅಲ್ಲ. ಅದು ಶಬ್ದಗಳ ರಿಂಗಣಗುಣಿತ. ಆ ರಿಂಗಣಗುಣಿತದ ಮೂಲಕ ಕವಿಯು ಓದುಗನಲ್ಲೊಂದು ಧ್ವನಿಯ ಅಲೆ ಎಬ್ಬಿಸುತ್ತಾನೆ. ಅದನ್ನು ಆಗಮಾಡಿಸುವುದಕ್ಕಾಗಿ ಕವಿತೆ ತನ್ನ ವಸ್ತುವನ್ನು ಹೇಗೋ ಹಾಗೆ ತನ್ನ ಆಕೃತಿಯನ್ನೂ ಆಶ್ರಯಿಸುತ್ತದೆ. ಜೊತೆಗೆ ಅದು ತನ್ನದೇ ಭಾಷೆಗೆ ಅಂಟಿಕೊಂಡಿರುತ್ತದೆ ಮತ್ತು ಭಾಷಿಕ ಸಾಧ್ಯತೆಗಳ ಇಡೀ ಶ್ರೇಣಿಯನ್ನೇ ಉಪಯೋಗಿಸಿಕೊಂಡಿರುತ್ತದೆ. ಅಂದರೆ ಅದರ ಭಾಷೆಗೆ ಸಂಬಂಧಿಸಿದ ಅನನ್ಯ ಅರ್ಥ, ನುಡಿಗಟ್ಟು, ಸಂಸ್ಕೃತಿ, ಪ್ರಾಸ, ಲಯ, ಧ್ವನಿ, ನಾದ, ಸಂವೇದನೆ, ಅಷ್ಟೇಕೆ ಅದರ ಹ್ರಸ್ವ, ದೀರ್ಘ ಶಬ್ದಗಳು - ಹೀಗೆ ಎಲ್ಲವೂ ಒಂದು ಕಾವ್ಯದ ಭಾಷೆಯಲ್ಲಿರುತ್ತವೆ. ವಿಭಿನ್ನ ಭಾಷೆಗಳ ನಡುವೆ ಇರುವ ಶಬ್ದಗಳ ಹಾಗೂ ಧ್ವನಿಗಳ ವ್ಯತ್ಯಾಸಗಳಿಂದಾಗಿ ಅನುವಾದದಲ್ಲಿ ಒಡಮೂಡಿರುವ ಕವನ, ಮೂಲ ಕವನದ ಶಬ್ದಗಳನ್ನಷ್ಟೇ ಅಲ್ಲ, ಇಡೀ ಕವನದ ಆಕೃತಿಯನ್ನೇ ಬದಲಾಯಿಸಿಬಿಟ್ಟಿರುತ್ತದೆ.

ಅನುವಾದಕನಾದವನು ಪ್ರಾಸ ಬೇಕೇ ಬೇಕೆಂದು ಅನ್ನಿಸಿದಾಗ ಮೂಲ ಕವನದ ಪದಶಃ ಅರ್ಥಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಷ್ಟು ಸ್ವಾತಂತ್ರ್ಯ ವಹಿಸಲೇಬೇಕು. ಮೂಲ ಕವನದ ಕಲಾತ್ಮಕ ಸಂವೇದನೆಯನ್ನೂ ಅರ್ಥವನ್ನೂ ಉಳಿಸಿಕೊಳ್ಳಬೇಕೆನಿಸಿದಾಗಲೆಲ್ಲ ಒಳ್ಳೆಯ ಅನುವಾದಕ ಪದಶಃ ಅನುವಾದಕ್ಕೆ ಪಕ್ಕಾಗದೆ ಸ್ವತಂತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಾನೆ. ಬಹುಶಃ ಇದೇ ಕಾರಣದಿಂದಲೇ ಉತ್ತಮ ಅನುವಾದವೊಂದು ಮೂಲ ಕವನದಷ್ಟೇ ಸ್ವತಂತ್ರ ಕಲಾತ್ಮಕ ಸೃಷ್ಟಿಯಾಗಿರುತ್ತದೆ ಅಥವಾ ಮೂಲದ ಅನುಸೃಷ್ಟಿಯಾಗಿರುತ್ತದೆ.

ಪ್ರಸ್ತುತ ಸಂಕಲನದಲ್ಲಿರುವ ಕವಿಗಳಲ್ಲಿ ಒಬ್ಬೊಬ್ಬರದೂ ತಮ್ಮ ತಮ್ಮ ಕಾಲಧರ್ಮಕ್ಕನುಗುಣವಾದ, ವಿವಿಧ ರಚನಾ ಕ್ರಮಗಳನ್ನು ಅನುಸರಿಸಿದ ವಿಶಿಷ್ಟ ಧ್ವನಿ. ಆದರೆ ಮುತಾಲಿಕರು ಈ ಕವಿಗಳನ್ನು ಜೋಡಿಸುವಲ್ಲಿ ಯಾವುದೇ ಕಾಲಾನುಕ್ರಮವನ್ನು ಅನುಸರಿಸದೆ ‘ಸರ್ವರಿಗೆ ಸಮಬಾಳು’ ಕಲ್ಪಿಸಿದ್ದಾರೆ. ಇಲ್ಲಿ ಮಾಯಾ ಏಂಜಲೋ ಮೊದಲ ಕವಿಯಾಗಿದ್ದರೆ ಶೇಕ್ಸ್‌ಪಿಯರ್‌ಗೆ 27ನೆಯ ಸ್ಥಾನ ಸಿಕ್ಕಿದೆ! ಮಧ್ಯದಲ್ಲೆಲ್ಲೋ ನಮ್ಮ ವೈಯೆನ್ಕೆ ಮತ್ತು ಎಚ್.ಎಸ್. ಬಿಳಿಗಿರಿ ಇಬ್ಬರೂ ಸೇರಿ ಬರೆದರೆ ಹೇಗೋ ಹಾಗೆ ನಾನ್‍ಸೆನ್ಸ್ ಕವಿತೆಗಳನ್ನು ಬರೆದ ಓಗ್ಡನ್ ನ್ಯಾಶ್ ಕೂಡ ನುಸುಳಿಬಿಟ್ಟಿದ್ದಾನೆ. ಈ ಅನುವಾದಗಳಲ್ಲಿ ಕೆಲವು ನನಗೆ ಒಂದೇ ರೀತಿ ಕೇಳಿಸುತ್ತಿರುವುದಕ್ಕೆ ಬಹುಶಃ ಇದೂ ಒಂದು ಕಾರಣವಿದ್ದೀತು.

ಮುತಾಲಿಕರದು ಮುಖ್ಯವಾಗಿ ಪದ್ಯಲಯಕ್ಕಿಂತ ಗದ್ಯಲಯಕ್ಕೇ ಒಲಿದ ಮನಸ್ಸು ಎಂದು ತೋರುತ್ತದೆ. ಆದ್ದರಿಂದಲೇ ಇರಬೇಕು, ಇಲ್ಲಿ ಬ್ರೆಖ್ಟ್, ಮಾಯಾ ಏಂಜಲೋ, ಗೇಬ್ರಿಯಲ್ ಒಕಾರ, ಚಾರ್ಲ್ಸ್‌ ಬುಕೋವ್‍ಸ್ಕಿ, ಅರುಣ್ ಕೋಲಟ್ಕರ್, ಜೀವ ಪಟೇಲ್ ಮುಂತಾದವರ ಕೆಲವು ಕವನಗಳು ತಕ್ಕಮಟ್ಟಿಗೆ ಯಶಸ್ವಿಯಾಗಿವೆ.

ಒಟ್ಟಿನಲ್ಲಿ ಅನುವಾದಿತ ಕವನವೊಂದರ ಯಶಸ್ಸು ಅಥವಾ ಅಪಯಶಸ್ಸು ಅದು ಹೇಗೆ ಕನ್ನಡದಲ್ಲಿ ಉಸಿರಾಡುತ್ತಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಒಳ್ಳೆಯ ಓದುಗರಿಗೆ ಅನುವಾದಗೊಂಡ ಒಂದು ಕವನದ ಮೂಲ ಯಾವುದೆಂದು ತಿಳಿಯದ ಸಂದರ್ಭದಲ್ಲಿ ಕೂಡ ಅನುವಾದಗೊಂಡಿರುವುದು ಚೆನ್ನಾಗಿದೆಯೋ ಇಲ್ಲವೋ ಎಂದು ಸುಲಭವಾಗಿ ತಿಳಿದುಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.