ADVERTISEMENT

ಪುಸ್ತಕ ವಿಮರ್ಶೆ: ಸರ್ವ ಕಲೆಗಳ ಸಮೃದ್ಧಿಯ ತೋಟ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 19:30 IST
Last Updated 7 ಆಗಸ್ಟ್ 2021, 19:30 IST
s divakr book
s divakr book   

ಸರ್ವ ಜನಾಂಗದ ಶಾಂತಿಯ ಭಾಷೆ (ಪ್ರಬಂಧಗಳು)
ಲೇ:
ಎಸ್‌. ದಿವಾಕರ್
ಪ್ರಕಾಶನ: ಅಂಕಿತ ಪುಸ್ತಕ
ದೂ: 080 26617100/755
ಜಾಲತಾಣ:www.ankitapustaka.com

‘ಸರ್ವ ಜನಾಂಗದ ಶಾಂತಿಯ ಭಾಷೆ’ ಇದು ಎಸ್‌. ದಿವಾಕರ್ ಅವರ ಇತ್ತೀಚೆಗಿನ ಪ್ರಬಂಧ ಸಂಕಲನದ ಹೆಸರು. ಇದು ಈ ಸಂಕಲನದ ಒಂದು ಪ್ರಬಂಧದ ಶೀರ್ಷಿಕೆಯಾದರೂ ಇಡೀ ಪ್ರಬಂಧದ, ಅಷ್ಟೇ ಏಕೆ, ಎಸ್‌. ದಿವಾಕರ್ ಅವರ ಒಟ್ಟಾರೆ ಗ್ರಹಿಕೆ ಮತ್ತು ಅಭಿವ್ಯಕ್ತಿಗಳಿಗೂ ಹೊಂದುವ ಹೆಸರು.

ಮೇಲಿಂದ ಬೇರೆ ಬೇರೆ ಎಂದು ಕಾಣಿಸುವ ದೇಶ, ಭಾಷೆ ಮತ್ತು ಅವುಗಳಿಂದ ಅಭಿವ್ಯಕ್ತಗೊಳ್ಳುವ ಕಲೆಗಳ ನಡುವಿನ ಅಂತರ್‌ಸಂಬಂಧದ ಹುಡುಕಾಟ ಮತ್ತು ಅವುಗಳ ತಪ್ಪು ಗ್ರಹಿಕೆಗಳಿಂದ ಹುಟ್ಟುವ ಘರ್ಷಣೆಯನ್ನು ದಾಟಿ ತಿಳಿಗೊಳದಲ್ಲಿ ಮೂಡುವ ಅಖಂಡವಾದ ಶಾಂತ ಚಿತ್ರವನ್ನು ಕಾಣಿಸುವುದು ಅವರ ಎಲ್ಲ ಬರಹಗಳ ಹಿಂದಿನ ಹಂಬಲವಾಗಿದೆ. ಆದರೆ ಇದನ್ನು ಅವರು ಸ್ಟೇಟ್‌ಮೆಂಟ್‌ಗಳ ಮೂಲಕ ಹೇಳಲಾರರು; ಸಂವಿಧಾನದ ರೀತಿ ಸ್ಥಾಪಿಸಲಾರರು; ಬದಲಿಗೆ ‘ನೋಡಿ ನೋಡಿ, ನೀವು ಅಲ್ಲಿ ನಿಂತು ಕಂಡ ಹೂವಿಗೆ ಇತ್ತಲಿಂದ ಬೇರೆಯದೇ ಒಂದು ಆಯಾಮವಿದೆ. ತುಸು ಆಚೆಯಿಂದ ನೋಡಿದರೆ ಇನ್ನೊಂದೇ ಆಗಿ ಕಾಣಬಹುದು. ಈ ಎಲ್ಲವನ್ನೂ ಒಟ್ಟಿಗೇ ನೋಡಲು ಸಾಧ್ಯವೇ ಪ್ರಯತ್ನಿಸೋಣ ಬನ್ನಿ’ ಎಂದು ಆಪ್ತವಾಗಿ ಕರೆಯುತ್ತ ನಮ್ಮನ್ನು ನಡೆಸುತ್ತ, ತಾನೂ ಅದೇ ಕುತೂಹಲದಿಂದ ನಡೆಯುವವರು ಅವರು. ಹಾಗಾಗಿಯೇ ದಿವಾಕರ್‌ ಅವರದ್ದು ಗುರಿಯಲ್ಲದೆ ಬೇರೇನನ್ನೂ ನೋಡದ ಬಾಣದ ಮೊನೆಯ ಸಂವೇದನೆಯಲ್ಲ; ಬಿತ್ತಿಕೊಂಡಲ್ಲೆಲ್ಲ ಬೇರೂರಿ, ಅಲ್ಲಿಂದ ಇಲ್ಲಿಂದಲೆಲ್ಲ ಸತ್ವವನ್ನು ಹೀರಿ, ಬಿಸಿಲು ಗಾಳಿಗೆ ಮೈಯೊಡ್ಡಿ ಸಮೃದ್ಧವಾಗಿ ಬೆಳೆಯುವ ಮರದ ಬಗೆಯ ಸಂವೇದನೆ.

ADVERTISEMENT

ಅವರ ಹಿಂದಿನ ಪ್ರಬಂಧಗಳಂತೆ ಇಲ್ಲಿನ ಪ್ರಬಂಧಗಳೂ ಬಹುಮುಖಿ ಆಸಕ್ತಿಯನ್ನೂ, ಅವೆಲ್ಲವೂ ಏನೋ ಒಂದನ್ನು ಕಾಣುವ ಉದ್ದೇಶದಿಂದ ಪರಸ್ಪರ ಕೂಡಿಕೊಳ್ಳುವ ಬೆರಗನ್ನೂ ಹುಟ್ಟಿಸುತ್ತವೆ.

ಈ ಸಂಕಲನದ ಮೊದಲ ಪ್ರಬಂಧ ‘ಕ್ಲೀಷೆಯ ಭಾಷೆ, ಭಾಷೆಯ ಕ್ಲೀಷೆ’ಯಲ್ಲಿ ಬಳಸಿ ಬಳಸಿ ಜೀವಂತ ಶವಗಳಂತಾಗುವ ಪದ, ಸಾಲು, ನುಡಿಗಟ್ಟುಗಳ ಬಗ್ಗೆ ಮಾತನಾಡುವ ಅವರು, ಕೊನೆಯ ಪ್ರಬಂಧ, ‘ಅವಸಾನವೇಕೆ ಅನಿವಾರ್ಯ?’ ಎಂಬ ಪ್ರಶ್ನೆಯನ್ನೆತ್ತಿಕೊಂಡು, ಸೃಷ್ಟಿಯಾಗಿದ್ದೆಲ್ಲವೂ ಮುದುಕಾಗಿ, ಸಾಯಲೇಬೇಕಾದ ಅನಿವಾರ್ಯವನ್ನೂ, ಆ ಸಾವನ್ನು ಘನತೆಯಿಂದ ಎದುರಿಸುವುದಷ್ಟೇ ನಾವು ಮಾಡಬಹುದಾಗಿದ್ದೆಂದೂ ಹೇಳುತ್ತದೆ. ಮೊದಲ ಮತ್ತು ಕೊನೆಯ ಪ್ರಬಂಧಗಳೆರಡೂ ಭಾಷೆ/ಸಾಹಿತ್ಯ ಮತ್ತು ಜೀವ/ಜೀವನದ ಅವಸಾನದ ಕುರಿತು ಮಾತನಾಡುವುದು ಕಾಕತಾಳೀಯವಾಗಿರಲಿಕ್ಕಿಲ್ಲ.

ಈ ಎರಡು ತುದಿಗಳ ನಡುವೆ ಅವರು, ಸಂಗೀತ, ಚಿತ್ರಕಲೆ, ಸಿನಿಮಾ, ವ್ಯಕ್ತಿಚಿತ್ರ, ಸಾಹಿತ್ಯ ಎಲ್ಲ ಕಾಡುಗಳಲ್ಲಿಯೂ ತಾವೇ ಮಾಡಿಕೊಂಡ ದಾರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.

‘ರೂಪರೂಪಗಳನು ದಾಟಿ’ ಎಂಬ ಪ್ರಬಂಧವೇ ಅವರ ಬಹುಮುಖಿ ಪ್ರತಿಭೆಗೆ ಮತ್ತು ಅವರಿಗೇ ವಿಶಿಷ್ಟವಾದ ಅಭಿವ್ಯಕ್ತಿಗೆ ನಿದರ್ಶನವೆಂಬಂತಿದೆ. ಪತ್ರಿಕೆಯೊಂದರ ವಿಶೇಷ ಸಂಚಿಕೆಗಾಗಿ ಮಾಡಿದ ಸಂಗೀತ, ಚಿತ್ರಕಲೆ ಮತ್ತು ಕಾವ್ಯದ ಸಂವಾದವನ್ನು ಸೇರಿಸಿ ಹೊಲಿಯುವ ಕೆಲಸವನ್ನು ಈ ಬರಹ ಮಾಡುತ್ತದೆ. ಈ ಹೊಲಿಗೆ ಬಲವಂತವಾಗಿ ಎಳೆದುತಂದು ಬಿಗಿಯುವುದಲ್ಲ, ಸಹಜವಾಗಿ ಕೂಡಿಕೊಳ್ಳಲು ಸಾಧ್ಯವಿರುವ ಹಾಗೆ ಮಾಡಿದ ಜೋಡಣೆ ಎನ್ನುವುದು ಗಮನಾರ್ಹ. ಸಂಗೀತ, ಚಿತ್ರಕಲೆ, ಮತ್ತು ಕಾವ್ಯವನ್ನು ಅವರು ವಿಶ್ಲೇಷಿಸುವ ರೀತಿ ಅವರಿಗೇ ಅನನ್ಯವಾದದ್ದು. ಹೀಗೆ ಒಂದರ ಜೊತೆ ಇನ್ನೊಂದನ್ನು ಇಟ್ಟು ನೋಡುವ, ನಮ್ಮ ಹಿತ್ತಿಲಗಿಡದ ಜೊತೆಗೆ ಜಗತ್ತಿನ ಇನ್ಯಾವುದೋ ಮೂಲೆಯ ಮೂಲಿಕೆಯನ್ನು ಸೇರಿಸಿ ಮದ್ದನ್ನು ಹುಡುಕುವ ಕಾಣ್ಕೆ ದಿವಾಕರ್ ಅವರ ಬಹುತೇಕ ಎಲ್ಲ ಪ್ರಬಂಧಗಳಲ್ಲಿಯೂ ಕಾಣಿಸುತ್ತದೆ. ಆದರೆ ಇದು ಎಲ್ಲೂ ಪಾಂಡಿತ್ಯ ಪ್ರದರ್ಶನದ ಗ್ಯಾಲರಿ ಆಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಮೊದಲೇ ಹೇಳಿದಂತೆ, ತನಗೆ ಹುಟ್ಟಿದ ಬೆರಗನ್ನು ತನ್ನ ಓದುಗರಿಗೂ ದಾಟಿಸುವ ಸಹಜತೆಯಲ್ಲಿಯೇ ಅವು ಒಡಮೂಡಿರುತ್ತವೆ. ಈ ಬೆರಗು ಕಲೆಯ ಹಲವು ರೂಪ, ನೆಲೆಗಳ ನಡುವಿನ ಸಾಮ್ಯತೆಗಷ್ಟೇ ಸಂಬಂಧಿಸಿದ್ದಲ್ಲ, ಬಿರುಕುಗಳಿಗೂ ಸಂಬಂಧಿಸಿದ್ದು. ಒಂದು ಇನ್ನೊಂದಾಗದ, ಆಗಲಾರದ ವ್ಯತ್ಯಾಸಗಳು ಮತ್ತು ಬೇರೆಯದೇ ಆಗಿ ಕಾಣುವುದರ ನಡುವೆ ಇರುವ ಒಂದುತನ ಎರಡೂ ಅವರನ್ನು ತಾಕುತ್ತವೆ. ಹಾಗಾಗಿಯೇ ವಿಶ್ವ ಸಾಹಿತ್ಯದ ಸಂಗತಿಗಳು ಹಾಗ್ಹಾಗೆ ಬರದೇ ಅದು ದಿವಾಕರತನದ ಛಾಪಿನೊಟ್ಟಿಗೇ ನಮ್ಮೆದೆಗೆ ದಾಟುತ್ತವೆ.

ಈ ಸಂಕಲನದ ಇನ್ನೊಂದು ವಿಶಿಷ್ಟ ಪ್ರಬಂಧ ‘ನೊಣ’. ನೊಣದ ಗುಣಲಕ್ಷಣಗಳ ಕುರಿತು ಲಲಿತವಾಗಿ ವಿವರಿಸುತ್ತಲೇ ವಿಶ್ವಸಾಹಿತ್ಯದಲ್ಲಿ ನೋಟದ ಹಾರಾಟವನ್ನೂ ಅದು ಕಾಣಿಸುತ್ತದೆ.

‘ಭಾಷಾಂತರ: ಸಾಧ್ಯತೆ ಮತ್ತು ಸವಾಲು’ ಎಂಬ ಪ್ರಬಂಧದ ಕೊನೆಯ ಸಾಲುಗಳು ಹೀಗಿವೆ. ‘ಅನುವಾದಕ್ಕಾಗಿ ನಾನು ಆಯ್ಕೆ ಮಾಡಿಕೊಂಡ ಪುಸ್ತಕ ಹಾಗೂ ನನ್ನ ಭಾಷಾಂತರ ವಿಧಾನ ಎರಡೂ ನನ್ನನ್ನೇ ಅಭಿವ್ಯಕ್ತಿಸುವಂತಿರಬೇಕು’. ಈ ಸಾಲುಗಳು ಬರೀ ಭಾಷಾಂತರದ ಕುರಿತ ಅವರ ನಿಲುವಷ್ಟೇ ಅಲ್ಲ, ಇಲ್ಲಿನ ಎಲ್ಲ ಪ್ರಬಂಧಗಳ ಗುಣವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.