ADVERTISEMENT

ಪುಸ್ತಕ ವಿಮರ್ಶೆ: ಅಂಬೇಡ್ಕರ್ ಮಣ್ಣಿನಲ್ಲಿ ಹೊಸ ಬಿತ್ತ

ಚ.ಹ.ರಘುನಾಥ
Published 3 ಜುಲೈ 2021, 19:31 IST
Last Updated 3 ಜುಲೈ 2021, 19:31 IST
ಕಾರುಣ್ಯದ ಮೋಹಕ ನವಿಲುಗಳೆ
ಕಾರುಣ್ಯದ ಮೋಹಕ ನವಿಲುಗಳೆ   

ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆ ಗ್ರಾಮದ ರಂಗನಾಥ್‌ ತಮ್ಮ ಹೆಸರಿನೊಂದಿಗೆ ಊರಿನ ಹೆಸರನ್ನಷ್ಟೇ ಕಸಿ ಮಾಡಿಕೊಂಡಿಲ್ಲ, ಊರುಕೇರಿಯ ಸಂಕಟಗಳನ್ನು ಕಾವ್ಯದ ಶ್ರುತಿಯನ್ನಾಗಿಸಿಕೊಂಡಿದ್ದಾರೆ. ಸಹಜವಾಗಿಯೇ ಅವರ ಕಾವ್ಯದ ಭೂಮಿಕೆಯಲ್ಲಿ ಅಂಬೇಡ್ಕರ್‌ ಪ್ರತಿಮೆ ಎದ್ದುಕಾಣಿಸುತ್ತದೆ. ಆದರೆ, ಈ ಅರಿವು ಆಕ್ರೋಶದಲ್ಲಿ ತೆಳುವಾಗದೆ ಅಥವಾ ಕಳೆದುಹೋಗದೆ ಜೀವನದ್ರವ್ಯವಾಗಿ ಒದಗಿಬಂದಿದೆ.

‘ಅವ್ವನೆದೆಯ ಅಜ್ಜನ ಅರಿವು’ ಕವಿತೆಯನ್ನು ರಂಗನಾಥರ ಕಾವ್ಯದ ಪ್ರಣಾಳಿಕೆಯಂತೆ ನೋಡಬಹುದು. ಒಲೆಯ ಉರಿಯ ಜೊತೆಗೆ ತಾನೂ ಉರಿದು ಹಸಿದ ಕರುಳುಗಳಿಗೆ ತಂಪಾಗುವ ಅವ್ವನ ಮೂಲಕ ಲೋಕವನ್ನು ಕಾಣುವ ದೃಷ್ಟಿ ಇಲ್ಲಿನದು. ಹೆಣ್ಣಿನ ಕಣ್ಣೋಟ ಹಾಗೂ ಮಾತೃ ಮಮತೆಯ ಮೂಲಕ ಲೋಕವನ್ನು ನೋಡುವ ಕ್ರಮ ಕವಿಗಷ್ಟೇ ಅಲ್ಲ, ವರ್ತಮಾನದ ಸಮಾಜಕ್ಕೂ ಅಗತ್ಯವಾದುದು. ಈ ಅವ್ವ ಅಂತಿಂಥವಳಲ್ಲ. ಸದಾ ಪುಸ್ತಕ ಹೊತ್ತಿರುವ ಅಂಬೇಡ್ಕರಜ್ಜನೊಂದಿಗೆ ಒಂದೊಂದೆ ಪದವ ಎದೆಗಿಟ್ಟವಳು. ಅಜ್ಜನಂತಾಗುವ ಹಂಬಲ ಮೂಡಿಸಿದವಳು.

ಕವಿತೆಯ ಅವ್ವ ಹೆಣ್ಣಿನ ಕಣ್ಣೋಟವಾದರೆ, ಅಜ್ಜ ದಲಿತರ ಪಾಲಿಗೆ ಎಲ್ಲವೂ ಆದ ಅಂಬೇಡ್ಕರ್‌. ಅರಿವಿನೊಂದಿಗೆ ಲೋಕಕಾರುಣ್ಯ ಮತ್ತು ಉಳಿವಿಗಾಗಿ ಅಗತ್ಯವಾದ ಕಾಠಿಣ್ಯದ ವಿಶಿಷ್ಟ ಸಮೀಕರಣವೊಂದನ್ನು ಈ ಕವಿತೆ ನಮಗೆ ಕಾಣಿಸುವಂತಿದೆ. ಅವ್ವನ ಬೆವರು ಪದಗಳ ನಾಡಿ ಹಿಡಿದು ಅನ್ನಕ್ಕಿಂತ ಅಕ್ಷರ ಲೇಸು ಎನ್ನುವುದನ್ನು ಮನಗಾಣಿಸುತ್ತದೆ. ಇಲ್ಲಿನ ‘ಬೆವರು ಪದಗಳ’ ಪ್ರಯೋಗ ಗಮನಿಸಿ. ರಾಣಿಯ ಚೆಲುವು ಹಾಗೂ ಶ್ರೀಗಂಧದ ಕಂಪಿನ ವಿಶೇಷಣವನ್ನು ಭಾಷಾ ಅಭಿಮಾನಕ್ಕೆ ಸಂಬಂಧಿಸಿದಂತೆ ಬಳಸುತ್ತೇವೆ. ರಂಗನಾಥ್‌ ನಮ್ಮ ಮುಂದಿರಿಸಿರುವುದು ಬೆವರಿನ ಸ್ಪರ್ಶದ ಪದಗಳನ್ನು. ಈ ಬೆವರು ಕವಿಯದೂ ಹೌದು, ಓದುವ ಸಹೃದಯರದೂ ಹೌದು ಎನ್ನುವುದಕ್ಕೆ ಸಂಕಲನದ ಬಹುತೇಕ ಕವಿತೆಗಳು ಉದಾಹರಣೆಯಾಗಿವೆ.

ADVERTISEMENT

‘ಅವ್ವನೆದೆಯ ಅಜ್ಜನ ಅರಿವು’ ಕವಿತೆಯೊಂದಿಗೆ ‘ಅಕ್ಷರಕ್ಕೆ ಅಂಜಬೇಡಿ’ ಕವಿತೆಯನ್ನು ಒಟ್ಟಿಗಿಟ್ಟು ನೋಡಬೇಕು. ‘ನಿಮ್ಮೆದೆಯ ಅಳತೆಯಲ್ಲೀಗ ಇಂಚುಗಳ ಲೆಕ್ಕ ಕ್ಲೀಷೆಯೆನಿಸಿ’ ಎಂದು ವರ್ತಮಾನದ ರಾಜಕಾರಣದೊಂದಿಗೆ ನೇರ ಸಂವಾದಕ್ಕಿಳಿಯುವ ಕವಿತೆ, ಮಾತಿನ ಅರ್ಥಹೀನತೆಯನ್ನು ಹೇಳುತ್ತ, ‘ಮಾತಿಗೆ ದಣಿವಾರಿಸಲು ಬಿಡಿ’ ಎಂದು ಕೋರುತ್ತದೆ. ‘ಮಾತು ಕಟ್ಟಿದ ಭಾರತ’ಕ್ಕೆ ಪರ್ಯಾಯವಾಗಿ ಕವಿತೆ ಸೂಚಿಸುವುದು ಬಾಬಾಸಾಹೇಬರ ಬಿತ್ತನೆಗಳನ್ನು. ಕುಲಾಂತರಿಗಳಲ್ಲದ ಈ ಬಿತ್ತನೆಗಳನ್ನು ‘ಈ ನಾಡ ಮಣ್ಣಿನಲ್ಲಿ ಬಿತ್ತಲಾಗಿದೆ’ ಎನ್ನುವ ಕವಿತೆ, ಇಂದಲ್ಲಾ ನಾಳೆ ಈ ನಾಡು ಅಂಬೇಡ್ಕರ್‌ ವಿಚಾರಗಳ ತಳಹದಿಯಲ್ಲಿ ತನ್ನನ್ನು ರೂಪಿಸಿಕೊಳ್ಳಲಿದೆ ಎನ್ನುವ ಜೀವಪರ ಕನಸಾಗಿದೆ.

‘ಧರೆ ಧೂಪದ ಕುಂಡ’ ಕವಿತೆ ಭೂಮಿ ಅಗ್ನಿಕುಂಡವಾಗಿರುವ ಪರಿಸರ ವೈಪರೀತ್ಯದ ಬಗ್ಗೆ ಮಾತನಾಡಿದರೂ, ಆ ಮಾತುಗಳು ವರ್ತಮಾನದ ಸಾಮಾಜಿಕ ಬಿಕ್ಕಟ್ಟುಗಳ ಕುರಿತ ಪ್ರತಿಕ್ರಿಯೆಯೂ ಆಗಿವೆ. ಧರೆಯಾಳದ ಜಲಮೂಲದ ಅಣುವಿಗೂ ಬಾಯಾರಿರುವ ಸಂದರ್ಭವನ್ನು ಚಿತ್ರಿಸುತ್ತ, ಈ ಪರಿಸ್ಥಿತಿಗೆ ಯಾರು ಕಾರಣರು ಎನ್ನುವ ಪ್ರಶ್ನೆಯನ್ನು ಕವಿತೆ ಎತ್ತುತ್ತದೆ. ಆದರೆ, ಪ್ರಶ್ನೆಗಳಿಗಿದು ಕಾಲವಲ್ಲವಷ್ಟೆ? ‘ಹವಾನಿಯಂತ್ರಿತ ಕೊಠಡಿಗಳಲ್ಲಿ ಬೆವೆತವರ ಹೆಸರು ಕೂಗಿದರೆ ಕೂಗುಮಾರಿಯ ಪಟ್ಟ ತಪ್ಪದು’ ಎನ್ನುವ ಮಾತು, ಈ ಹೊತ್ತಿನ ಪ್ರಭುತ್ವವನ್ನು ಪ್ರಶ್ನಿಸುವವರು ಅನುಭವಿಸುತ್ತಿರುವ ಆತಂಕವನ್ನು ಧ್ವನಿಸುತ್ತದೆ. ಅಳಬಹುದೆ ಅರೆಗಂಜಿಗೆ ಎನ್ನುವುದು ಕವಿಯ ಪ್ರಶ್ನೆ. ‘ಅಳಕೂಡದು, ಆಳುವ ಮಂದಿಗೆ ಅಳುವೂ ಆನಂದ’ ಎನ್ನುವುದು ಕವಿಯೇ ನೀಡುವ ಉತ್ತರ. ಜನಸಾಮಾನ್ಯರ ಸಂಕಟಗಳು ತೀವ್ರವಾದಾಗಲೆಲ್ಲ, ಕಾಮನಬಿಲ್ಲೊಂದನ್ನು ತೋರುವ ಪ್ರಭುತ್ವದ ಜಾಣತನವನ್ನು ಕವಿ, ‘ಮುಗಿಲೆಲ್ಲ ಬರಡಾಗಿ ಹೊಗೆಯೆದ್ದು ಕುಣಿದಿರಲು / ಆಡಿಸಿ ನೋಡಲೆಂದು ಹಬ್ಬಗಳ ತಂದಾರು!’ ಎಂದು ವ್ಯಂಗ್ಯವಾಡುತ್ತಾರೆ.

‘ದಲಿತರಾಗುವುದೆಂದರೆ ಎಷ್ಟು ಸಡಗರ!’ ರಾಜಕೀಯ ಪ್ರಜ್ಞೆಯ ಮತ್ತೊಂದು ಕವಿತೆ. ದಲಿತರೆಂದು ಗುರ್ತಿಸಿಕೊಂಡು ಸಡಗರಿಸುತ್ತಿರುವವರನ್ನು ಲೇವಡಿ ಮಾಡುವ ಕವಿತೆ, ದಲಿತಲೋಕದಲ್ಲಿ ದಲಿತರೇ ಇಲ್ಲವೆಂದು ಶಾಸನ ಹೊರಡಿಸುವವರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಅಂತರಂಗ ಬಹಿರಂಗ ಶುದ್ಧಿಗೆ ಒತ್ತಾಯಿಸುವ ಈ ಕವಿತೆ, ‘ಕೇಡಿನ ಕಿನ್ನರಿ ನುಡಿಸುವ ಕೈಗಳಿಗು / ಆರ್ತನಾದಕ್ಕೆ ಮಿಡಿಯುವ ಹೃದಯವಿರಲೆಂದು’ ಪ್ರಾರ್ಥಿಸುತ್ತದೆ.

‘ಬೆವರಿನ ಗಂಜಿ’ ವಿಷಾದದೊಳಗೆ ತೋಯ್ದು, ಓದುಗರನ್ನು ಆರ್ದ್ರವಾಗಿಸುವ ಕವಿತೆ. ರಂಗನಾಥರ ಕವಿತೆಗಳ ಭಾಷೆಯನ್ನು ತೋಯಿಸಿರುವ ಬೆವರು ಈ ಕವಿತೆಯಲ್ಲಿ ಬೇರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನೆಲಕ್ಕೆ ಬಿದ್ದ ಬೆವರು ಅನ್ನವಾಗುತ್ತದೆ. ಆದರೆ, ಇಲ್ಲಿನ ಬೆವರು ಗಂಜಿಯಾಗುವುದು ದೇಹವ್ಯಾಪಾರದಲ್ಲಿ. ‘ಬೆವರ ಹಿಂಜಿಕೊಡುವ ತೊಗಲ ಮೆತ್ತೆಯ ಚೀಪುವ ಕಾರಿರುಳ ತೆವಲಿನಲ್ಲಿ’ ಮೈಮನಗಳು ಮುರಿಯುತ್ತವೆ, ಕಣ್ಣೀರ ಕಥನ ಸವುಳುಮಣ್ಣಾಗುತ್ತದೆ. ಅಂಗೈಯ ರೇಖೆಯಲ್ಲಿ ಸವೆದ ಆರ್‌ಬಿಐನ ಮುದ್ರೆಯನ್ನು ಕಾಣಿಸುವ ಕವಿತೆ, ‘ಈಗ ಬೆವರಿನ ಗಂಜಿಗೂ / ಜನನಾಂಗವೆ ಅನ್ನಾಂಗವಾದ ಪರಿ ಬಯಲೊಳಗೆ’ ಎನ್ನುವ ಉದ್ಗಾರದೊಂದಿಗೆ ಕೊನೆಗೊಳ್ಳುತ್ತದೆ. ವಿವರಿಸಲಾಗದ,ವಿವರಣೆಗೆ ದಕ್ಕದ, ಇಲ್ಲಿನ ನೋವು ಸಹೃದಯನೊಳಗೆ ಬೆಳೆಯುತ್ತ ಹೋಗುವಂತಹದ್ದು.

‘ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಾಗಿಲ್ಲ’ ಕವಿತೆ ವರ್ತಮಾನದ ಅನೇಕ ದುರಂತಗಳನ್ನು ನೆನಪಿಸುತ್ತ, ಆ ಘಟನೆಗಳಿಗೆ ನಮ್ಮ ವೈಚಾರಿಕ ಜಗತ್ತು ಮಾತು ಕಳೆದುಕೊಂಡಿರುವ ವೈರುಧ್ಯವನ್ನು ಚಿತ್ರಿಸುತ್ತದೆ. ‘ಕಾರುಣ್ಯದ ಮೋಹಕ ನವಿಲುಗಳೇ, ನಟನೆಯಲಿ ಪಳಗಿ ನಾಟ್ಯವ ಮರೆತಿರೇನು?’ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತದೆ.

ರಂಗನಾಥ್‌ ತಮ್ಮದೇ ಆದ ಕಾವ್ಯಭಾಷೆಯೊಂದನ್ನು ರೂಪಿಸಿಕೊಳ್ಳುವ ಹಾದಿಯಲ್ಲಿರುವ ಉತ್ಸಾಹಿ. ಆಶಯ ಮತ್ತು ಕವಿತೆ ಬೇರೆ ಬೇರೆಯಾಗಿ ಕಾಣದಂತೆ ಕಾವ್ಯಶಿಲ್ಪ ಕಟೆಯುವ ಹಂಬಲ ಮತ್ತು ಪ್ರಯತ್ನ ಎರಡನ್ನೂ ಅವರ ರಚನೆಗಳಲ್ಲಿ ಕಾಣಬಹುದು.ಅಂಬೇಡ್ಕರ್‌ ಒದಗಬೇಕಾದುದು ಸಾಹಿತ್ಯಕ್ಕಲ್ಲ, ಬದುಕಿಗೆ ಎನ್ನುವ ಅರಿವಿನೊಂದಿಗೆ ತಾಯಮಮತೆಯೂ ಕಾವ್ಯದ ದಾರಿಯಲ್ಲಿ ಅವರಿಗೆ ಊರುಗೋಲಾಗಿ ಒದಗಿದೆ. ಅವರ ಕವಿತೆಗಳುದ್ದಕ್ಕೂ ಪ್ರತಿಮೆಗಳು ಕಿಕ್ಕಿರಿದಿವೆ ಹಾಗೂ ಕಾವ್ಯ ಘೋಷಣೆಯಾಗದಂತೆ ಪೊರೆದಿವೆ. ಚೊಚ್ಚಿಲ ಸಂಕಲನದಲ್ಲೇ ಸಾಧಿಸಿರುವ ಈ ಕಸುಬುದಾರಿಕೆ ರಂಗನಾಥ್‌ರ ಕಾವ್ಯದ ನಾಳೆಗಳ ಬಗ್ಗೆ ಆಸೆ ಹುಟ್ಟಿಸುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.