ADVERTISEMENT

ಪುಸ್ತಕ ವಿಮರ್ಶೆ: ಚರಿತ್ರೆಯ ಕನ್ನಡಿಯಲ್ಲಿ ವರ್ತಮಾನದ ‘ಬಿಂಬ’

ಎಸ್.ಆರ್.ವಿಜಯಶಂಕರ
Published 16 ಜನವರಿ 2021, 19:30 IST
Last Updated 16 ಜನವರಿ 2021, 19:30 IST
ಚರಿತ್ರೆಯ ಕನ್ನಡಿಯಲ್ಲಿ ವರ್ತಮಾನದ ‘ಬಿಂಬ’
ಚರಿತ್ರೆಯ ಕನ್ನಡಿಯಲ್ಲಿ ವರ್ತಮಾನದ ‘ಬಿಂಬ’   

ಬೂಬರಾಜ ಸಾಮ್ರಾಜ್ಯ
ಲೇ:
ಬಿ.ಜನಾರ್ದನ ಭಟ್‌
ಪ್ರ: ಅಂಕಿತ ಪುಸ್ತಕ, 080 2661 7100
ಪುಟಗಳು: 272
ಬೆಲೆ: 250

‘ಬೂಬರಾಜ ಸಾಮ್ರಾಜ್ಯ’ ಕರ್ನಾಟಕದ ಕರಾವಳಿಯ ಪ್ರಾಚೀನ ಇತಿಹಾಸದಲ್ಲಿ ನಡೆದ ಸಂಘರ್ಷವೊಂದನ್ನು ಇಂದಿನ ಸಮಾಜದ ಸಮಕಾಲೀನ ಸಂದರ್ಭದಲ್ಲಿ ನಡೆದ ಒಳಿತು-ಕೆಡುಕುಗಳ ನಡುವಿನ ಹೋರಾಟವೊಂದಕ್ಕೆ ‘ತಗುಲಿಸಿ’ ಹೇಳುವ ವಿಶಿಷ್ಟ ಕಥಾಮುಖವುಳ್ಳ ಕಾದಂಬರಿ. ಇದನ್ನು ಬರೆದ ಬಿ. ಜನಾರ್ದನ ಭಟ್ ತಮ್ಮ ಈ ಮೊದಲಿನ ಕಾದಂಬರಿಗಳಾದ ‘ಉತ್ತರಾಧಿಕಾರ’, ‘ಹಸ್ತಾಂತರ’ ಮತ್ತು ‘ಮೂರು ಹೆಜ್ಜೆ’ ಕಾದಂಬರಿಗಳಲ್ಲಿ ಕೂಡಾ ಪೂರ್ವಕಾಲವನ್ನು, ವರ್ತಮಾನ ಕಾಲಕ್ಕೆ ಜೋಡಿಸಿಕೊಂಡು ಮನುಷ್ಯ ವರ್ತನೆಗಳ ಸಾರ್ವಕಾಲಿಕ ಸ್ವರೂಪವನ್ನು ಹೇಳಲು ಪ್ರಯತ್ನಿಸಿದ್ದಾರೆ.

ಚರಿತ್ರೆ ಮತ್ತು ವರ್ತಮಾನಗಳನ್ನು ಹೀಗೆ ತಗುಲಿಸಿ ಹೇಳುವ ಕ್ರಮವನ್ನು ಮೊದಲಿಗೆ ಪ್ರಾರಂಭಿಸಿದ್ದು ಆದಿಕವಿ ಪಂಪ. ಅವನು ಇತಿಹಾಸ ಪ್ರದೀಪವಾದ ಮಹಾಭಾರತವನ್ನು ಮತ್ತು ಅವನ ವರ್ತಮಾನಕಾಲದ ಅರಿಕೇಸರಿಯನ್ನು ‘ತಗುಳ್ಚಿ’ ಹೇಳುತ್ತಾನೆ. ತಗುಳ್ಚಿ ಅಂದರೆ ತಗುಲಿಸಿ ಹೇಳುವ ಪಂಪನ ಕ್ರಮವನ್ನು ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಸಮಾಸ ಸೌಂದರ್ಯ ಎಂದು ವಿವರಿಸಿದ್ದಾರೆ. ಅರಿಕೇಸರಿಯನ್ನು ತನ್ನ ಕಥಾ ನಾಯಕನಾದ ಅರ್ಜುನನಿಗೆ ಸಮೀಕರಿಸುವ ಮೂಲಕ ಪಂಪನು ಸಾಮಂತರಾಜನಲ್ಲಿರುವ ಸಾರ್ವಭೌಮ ಗುಣಗಳನ್ನು ಸೂಚಿಸುತ್ತಾನೆ. ಚರಿತ್ರೆಯ ಮೂಲಕ ವರ್ತಮಾನವನ್ನು ವ್ಯಾಖ್ಯಾನಿಸುತ್ತಾನೆ.

ADVERTISEMENT

‘ಬೂಬರಾಜ’ ಕಾದಂಬರಿ ವರ್ತಮಾನದ ಕಣ್ಣಿನಿಂದ ಚರಿತ್ರೆಯನ್ನು ಹಲವು ದೃಷ್ಟಿಕೋನಗಳ ಮೂಲಕ ನೋಡಲು ಸಾಧ್ಯ ಎಂಬುದನ್ನು ಸೂಚಿಸುತ್ತದೆ. ಚರಿತ್ರೆಯಲ್ಲಿ ಆದ ಅನ್ಯಾಯಕ್ಕೆ ವರ್ತಮಾನದಲ್ಲಿ ನ್ಯಾಯ ಕೊಡಿಸುತ್ತೇವೆ ಎಂಬ ವಾದ ಹುರುಳಿಲ್ಲದ್ದು ಎಂದೂ ಹೇಳುತ್ತದೆ. ಯಾಕೆಂದರೆ, ಚರಿತ್ರೆಯಲ್ಲಿ ಸಂಕಷ್ಟಕ್ಕೆ ಒಳಗಾದ ಹೆಣ್ಣುಮಕ್ಕಳು, ಬಡವರು ಮತ್ತು ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದವರು ವರ್ತಮಾನ ಕಾಲದಲ್ಲೂ ಅದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾಲ, ಘಟನೆಗಳ ವಿವರಗಳು ವರ್ತಮಾನದಲ್ಲಿ ಬದಲಾದರೂ ಮಾನವನ ಮೂಲಭೂತ ಹಿಂಸಾ ಪ್ರವೃತ್ತಿ ಬದಲಾಗಿದೆಯೇ ಎಂದು ಪ್ರಶ್ನಿಸುತ್ತದೆ. ನಿದ್ರಿಸುತ್ತಿದ್ದ ಭೂವರಾಹ ಪಾಂಡ್ಯ ರಾಜನ ಅಂಗರಕ್ಷಕನೇ ಸಂದರ್ಭ ನೋಡಿ ರಾಜನ ಕೊಲೆ ಮಾಡುವುದು, ಆ ಅಂಗರಕ್ಷಕನು ಭೂವರಾಹ ರಾಜನನ್ನು ವಿರೋಧಿಸುತ್ತಿದ್ದ ಕೋಶರ ಜಾತಿಗೆ ಸೇರಿರುವುದು, ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯನ್ನು ನೆನಪಿಸುವುದು ಕೇವಲ ಕಾಕತಾಳೀಯ ಇರಲಾರದು.

ಬೂಬರಾಜ ಎಂದು ಕರೆಯಲಾದ ತುಳುನಾಡಿನಲ್ಲಿದ್ದ ಪ್ರಾಚೀನ ತೌಳವ ಪಾಂಡ್ಯರಾಜ ಭೂವರಾಹ ಪಾಂಡ್ಯನ ಕಥೆಯ ಚಾರಿತ್ರಿಕ ಆಧಾರವನ್ನು ಕಾದಂಬರಿಕಾರರು ತಮಿಳು ಮೂಲದ ‘ತುಳುನಾಡ ಇತಿಹಾಸ- ಕ್ರಿ.ಶ. ಎರಡನೇ ಶತಮಾನ’ ಎಂಬ ವಯಿಲೈ ಶೀನಿ ವೆಂಕಟಸಾಮಿಯವರ ಪುಸ್ತಕದಿಂದ (ಕನ್ನಡ ಅನುವಾದ: ಡಾ. ಶ್ರೀಕೃಷ್ಣಭಟ್ ಅರ್ತಿಕಜೆ- ತುಳು ಸಾಹಿತ್ಯ ಅಕಾಡೆಮಿ ಪ್ರಕಟಣೆ) ಪಡೆದಿದ್ದಾರೆ. ಹಾಗೆಯೇ ಸಂಗಂ ಸಾಹಿತ್ಯದಲ್ಲೂ ಸ್ತ್ರೀಹತ್ಯೆ ಮಾಡಿದ ತುಳುನಾಡಿನ ರಾಜನೊಬ್ಬನ ಪ್ರಸ್ತಾಪವಿದೆ. ತನಗೆ ಸೇರಿದ ಪವಿತ್ರ ಮಾವಿನ ಮರದ ಹಣ್ಣನ್ನು ತಿಂದಳೆಂದು ರಾಜನು ಕೋಶರ ಹುಡುಗಿಗೆ ಮರಣದಂಡನೆ ವಿಧಿಸುತ್ತಾನೆ. ಕೋಶರು ಪ್ರತಿಭಟನೆಯಾಗಿ ಆ ಮಾವಿನ ಮರವನ್ನೇ ಕಡಿದು ಹಾಕುತ್ತಾರೆ.

ಆದರೆ, ಇದರ ಒಳಕತೆಯಾಗಿ ಭೂವರಾಹ ರಾಜ ಲೋಕ ಸುಂದರಿಯಾದ ಆ ಹುಡುಗಿಯನ್ನು ಬಯಸಿದ್ದ. ಆದರೆ ರಾಜಕೀಯ ಕಾರಣಗಳಿಂದ ಅದು ಸಾಧ್ಯವಿಲ್ಲ ಎಂದು, ಅವಳು ಇನ್ನೊಬ್ಬರ ಪಾಲಾಗುವುದನ್ನು ಸಹಿಸದೆ ನೆಪವೊಂದರಲ್ಲಿ ಕೊಲ್ಲಿಸಿದ್ದ. ಅಲ್ಲಿ ಒಳ ಮತ್ಸರದ ಕಾರಣದಿಂದ ಬಹಿರಂಗದ ಹಿಂಸೆ ಯುದ್ಧ. ವರ್ತಮಾನ ಕಾಲದಲ್ಲಿ ಮತ್ಸರದಿಂದ ಹುಟ್ಟಿದ, ಬಹಿರಂಗವಾಗಿಯೇ ಗೋಚರಿಸುವ ಕೇಡಿನ ಬುದ್ಧಿ. ಮನೋಶಕ್ತಿಯೇ ಮೂಲವಾದ ಬಹಿರಂಗದಲ್ಲಿ ಕಾಣಿಸದಿರುವ ಮಾನಸಿಕ ಹಿಂಸೆ. ಚರಿತ್ರೆ, ವರ್ತಮಾನ- ಎರಡೂ ಕಡೆ ಅಮಾಯಕ ಹೆಣ್ಣು ಮಕ್ಕಳ ಸಾವು. ಅದರಿಂದುಂಟಾಗುವ ನೈತಿಕ ಅಧಃಪತನ.

ಬೂಬಾವರ ಎಂಬ ತುಳುನಾಡಿನ ಊರೊಂದರ ಜೂನಿಯರ್ ಕಾಲೇಜಿಗೆ ಕೃಷ್ಣಚಂದ್ರನು ಚರಿತ್ರೆ ಅಧ್ಯಾಪಕನಾಗಿ ಬರುತ್ತಾನೆ. ಈ ಕಾಲ್ಪನಿಕ ಊರು ಕರಾವಳಿಯ ಉದ್ಯಾವರ, ಬ್ರಹ್ಮಾವರ, ಬಾರ್ಕೂರು ಅಥವಾ ಇನ್ಯಾವುದೇ ಪ್ರಾಚೀನ ಚರಿತ್ರೆಯುಳ್ಳ ಊರನ್ನು ನೆನಪಿಸಬಹುದು. ‘ಬೂಬಾವರ ರಾಜ್ಯದ ಚಾರಿತ್ರಿಕ ಸನ್ನಿವೇಶ- ವಿದೇಶ ವ್ಯಾಪಾರ, ವೈಶ್ಯಾಪದ್ಧತಿ ಮತ್ತು ಗುಲಾಮ ವ್ಯಾಪಾರ’ ಎಂಬುದು ಅವನ ಸಂಶೋಧನೆಯ ವಿಚಾರ. ವೈಶ್ಯ ಕುಟುಂಬ ಮೂಲಕ್ಕೆ ಸೇರಿದ್ದ ಗೇಟ್‌ ಭಾರತಿ ವಿವಾಹ ವಿಚ್ಛೇದನಾ ಕೇಸಿನ ಮೂಲಕ ವರ್ತಮಾನದಿಂದ ಒಂದೊಂದೇ ಚಾರಿತ್ರಿಕ ವಿವರಗಳಿಗೆ ದಾರಿ ಕಾಣುತ್ತಾ ಪಿಎಚ್.ಡಿ. ಸಂಶೋಧನೆ ಮೂಲಕ ಚಾರಿತ್ರಿಕ ಕಥನವಾಗುತ್ತದೆ.

ವರ್ತಮಾನದಲ್ಲಿ ರಂಜನ್‌ ಕುಮಾರ್‌ ಎಂಬ ಸಹೋದ್ಯೋಗಿ ಲೆಕ್ಚರರ್‌ ಹಿನ್ನೆಲೆಯಲ್ಲಿದ್ದು ಕೃಷ್ಣ ಚಂದ್ರರ ಮೇಲೆ ಸುಳ್ಳು ಆರೋಪದ ಕೇಸುಗಳು ದಾಖಲಾಗುತ್ತವೆ. ಚರಿತ್ರೆಯ ಕತೆಗೆ ಹಲವು ಆಕರಗಳನ್ನು ಒದಗಿಸಿದ ದೇವರಾಜರಾಯರೆಂಬ ನಿವೃತ್ತ ಅಧ್ಯಾಪಕರು ಗೆಲ್ಲಲು ಬೇಕಾದ ಯೋಜನೆ ಹೇಳಿದಾಗ, ಕೃಷ್ಣ ಚಂದ್ರನ ಪ್ರತಿಕ್ರಿಯೆ ‘ನೀವು ಯೋಚಿಸುತ್ತಿರುವ ರೀತಿ ಭೂವರಾಹ ಪಾಂಡ್ಯನ ಕಾಲದಲ್ಲಿ ಜನ ಯೋಚಿಸುತ್ತಿದ್ದ ರೀತಿ ಅಲ್ವಾ ಸರ್?’.

ಚರಿತ್ರೆ ಹಾಗೂ ವರ್ತಮಾನಗಳ ಬದುಕಿನ ಪರಸ್ಪರ ಸಂಬಂಧ ಹೇಗಿರಬೇಕೆಂಬುದು ಇಂದು ಚರ್ಚೆಗೆ ಒಳಗಾಗಿದೆ. ಚರಿತ್ರೆಯ ಹೊಸ ವ್ಯಾಖ್ಯಾನಗಳಿಂದ ಹುಟ್ಟುವ ವಿಚಾರಗಳು ನೈತಿಕವಾಗಿ ನ್ಯಾಯವೇ? ಚರಿತ್ರೆಯ ತಪ್ಪುಗಳಿಗೆ ವರ್ತಮಾನದಲ್ಲಿ ದಂಡನೆ ಸಾಧ್ಯವೇ? ಎಂಬಿತ್ಯಾದಿ ವಿಚಾರಗಳು ನಮ್ಮ ಸಾರ್ವಜನಿಕ ಬದುಕಿನಲ್ಲಿ ಅಂತರ್ಗತವಾಗಿ ಹರಿಯುತ್ತಿರುವ ಸತ್ಯಗಳು. ಈ ಕಾಲದ ಮನಃಸ್ಥಿತಿಯನ್ನು ಕಾದಂಬರಿಯೇ ಒಂದು ರೂಪಕವಾಗಿ ಸೃಜನಶೀಲ ಶೋಧನೆಗೆ ತೊಡಗಿದೆ. ಚರಿತ್ರೆಯ ತಪ್ಪುಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ವರ್ತಮಾನದ ಮುಖ್ಯ ಕಾಳಜಿಯಾಗಬೇಕು ಎಂಬುದೇ ಜನಾರ್ದನ ಭಟ್ ಅವರ ‘ಬೂಬರಾಜ ಸಾಮ್ರಾಜ್ಯ’ದ ಕೊಡುಗೆಯಾಗಿದೆ. ಆದರೆ ಮನುಷ್ಯನ ಸಂಕೀರ್ಣ ಸ್ವರೂಪದ ಮನಸ್ಸು ಸಮಾಜ, ರಾಜ್ಯ ವ್ಯವಸ್ಥೆಗಳಲ್ಲಿ ಅದು ಹೇಗೆ ಸಾಧ್ಯ ಎಂಬುದು ಎಲ್ಲಾ ಕಾಲದ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.