ADVERTISEMENT

ಪುಸ್ತಕ ವಿಮರ್ಶೆ: ಬಹುಮುಖಿ ವ್ಯಕ್ತಿತ್ವದ ಆಪ್ತ ಚಿತ್ರಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
   

ರಂಗಭೂಮಿಯೊಂದಿಗಿನ ನಿಷ್ಠೆಯನ್ನು ತಪಸ್ಸಾಗಿ ಸ್ವೀಕರಿಸಿ, ‘ಸಮುದಾಯ’ದ ನಾಯಕಿಯಾಗಿ ಸಾಮಾಜಿಕ ಸಂಚಲನವನ್ನು ಮೂಡಿಸಿದವರು ಎಸ್‌. ಮಾಲತಿ. ಕನ್ನಡ, ಕೊಂಕಣಿ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಅವರು ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡಿದವರು. ವಿಮರ್ಶಕಿಯಾಗಿ, ಕವಯಿತ್ರಿಯಾಗಿ ಕನ್ನಡಕ್ಕೆ ಅಮೂಲ್ಯ ಕೊಡುಗೆಗಳನ್ನು ಕೊಟ್ಟವರು. ಹಲವು ಚಳವಳಿಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡವರು. ಅವರ ಅಗಲಿಕೆಯ ನೋವಿನಲ್ಲಿ ಪೋಣಿಸಿದ ನೆನಪುಗಳ ಗುಚ್ಛವೇ ‘ಬಹುಮುಖಿ’.

ಮಾಲತಿ ಅವರ ಒಡನಾಡಿಗಳು, ಅಭಿಮಾನಿಗಳು, ರಂಗತಂಡದ ಸದಸ್ಯರು ಬರೆದಿರುವ ಇಲ್ಲಿನ ಬರಹಗಳು, ಅವರು ಎಂತಹ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದನ್ನು ಅನಾವರಣ ಮಾಡುತ್ತವೆ. ಅವರ ಬದುಕಿನ ಹಲವು ಆಪ್ತ ಘಟನೆಗಳನ್ನೂ ಮೆಲುಕು ಹಾಕುತ್ತವೆ. ಛಲವಾದಿ, ಸ್ತ್ರೀವಾದಿ, ರಂಗತಜ್ಞೆ, ಕಲಾವಿದೆ... ಹೀಗೆ ಬಹುರೂಪದಲ್ಲಿ ಮಾಲತಿಯವರು ನಮಗಿಲ್ಲಿ ಗೋಚರಿಸುತ್ತಾರೆ. ನಾ.ಡಿಸೋಜ, ವಿವೇಕ ರೈ ಅವರಂತಹ ಹಿರಿಯರು, ಕೆ. ಷರೀಫಾ, ಎನ್‌. ಗಾಯತ್ರಿ ಅವರಂತಹ ಒಡನಾಡಿಗಳ ನೆನಪುಗಳು ಬಲು ಆಪ್ತವಾಗಿವೆ. ಕೃತಿಯ ಮೊದಲ ಭಾಗದಲ್ಲಿ ಹಲವು ಒಡನಾಡಿಗಳ ನೆನಪುಗಳು ಹರಡಿಕೊಂಡಿದ್ದರೆ, ಎರಡನೇ ಭಾಗದಲ್ಲಿ ಮಾಲತಿ ಅವರು ಮಾಡಿದ ಭಾಷಣಗಳು, ನೀಡಿದ ಸಂದರ್ಶನಗಳು ಹಾಗೂ ಬ್ರೆಕ್ಟ್‌ ಕುರಿತು ಅವರು ಬರೆದ ಲೇಖನವನ್ನು ಸಂಗ್ರಹಿಸಿ ಕೊಡಲಾಗಿದೆ. ಕೃತಿಯ ಕೊನೆಯ ಭಾಗದಲ್ಲಿ ಮಾಲತಿ ಅವರ ಜೀವನ, ಸಾಹಿತ್ಯ, ರಂಗ ಚಟುವಟಿಕೆಗಳ ಪರಿಚಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT