ADVERTISEMENT

ಪುಸ್ತಕ ವಿಮರ್ಶೆ: ಶರಣ ಸಾಹಿತ್ಯದ ವಿರಾಟ್‌ ದರ್ಶನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 19:30 IST
Last Updated 9 ಅಕ್ಟೋಬರ್ 2021, 19:30 IST
ಅಕ್ಕೂರಮಠರ ಸಮಗ್ರ ಸಾಹಿತ್ಯ
ಅಕ್ಕೂರಮಠರ ಸಮಗ್ರ ಸಾಹಿತ್ಯ   

ಅಕ್ಕೂರಮಠರ ಸಮಗ್ರ ಸಾಹಿತ್ಯ

ಸಂಪುಟ–1
ಪುಟಗಳು: 492
ಬೆಲೆ: 500

ಎರಡೂ ಕೃತಿಗಳ
ಲೇ:
ಷಣ್ಮುಖಯ್ಯ ಅಕ್ಕೂರಮಠ
ಪ್ರ: ಅನುಪಮ ಪ್ರಕಾಶನ
ಸಂ: 9449625025

ADVERTISEMENT

ಶರಣ ಸಾಹಿತ್ಯದಲ್ಲಿ ‘ಮಾಸ್ಟರ್‌’ ಎನ್ನುವಂತಹ ಪಾಂಡಿತ್ಯ ಹೊಂದಿದ್ದ ಷಣ್ಮುಖಯ್ಯ ಅಕ್ಕೂರಮಠ ಅವರು ನಮ್ಮನ್ನು ಅಗಲುವ ಮುನ್ನ ಬಿಟ್ಟುಹೋದ ಮಹತ್ವದ ಕೃತಿಗಳೆಂದರೆ ಅವರ ಸಮಗ್ರ ಸಾಹಿತ್ಯದ ಎರಡು ಸಂಪುಟಗಳು. ಈ ಕೃತಿಗಳಲ್ಲಿರುವ ಲೇಖನಗಳು ಅವರ ಮೂರೂವರೆ ದಶಕಗಳ ಅಧ್ಯಯನದ ಫಲ. ಸಂಸ್ಕೃತ ವಿದ್ವಾಂಸರೂ ಆಗಿದ್ದ ಅಕ್ಕೂರಮಠ ಅವರು ವಚನ ಸಾಹಿತ್ಯದ ಕುರಿತು ನಡೆಸಿದ ಸಂಶೋಧನೆ, ಮಾಡಿದ ಅನುಸಂಧಾನ ಅತ್ಯಂತ ಮಹತ್ವಪೂರ್ಣವಾದುದು. ಶೂನ್ಯ ಸಂಪಾದನೆಯ ಮೇಲೆ ಅವರು ಮಠಗಳಲ್ಲಿ ತಿಂಗಳುಪರ್ಯಂತ ಪ್ರವಚನ ನೀಡುತ್ತಿದ್ದುದನ್ನೂ ಹಲವರು ಬಲ್ಲರು. ಅಂತಹ ಅಧ್ಯಯನದ ಹಿನ್ನೆಲೆಯ ಇಲ್ಲಿನ ಲೇಖನಗಳು ಚಿಂತನಾತ್ಮಕ ಹಾಗೂ ಸಂಶೋಧನಾತ್ಮಕ ನೆಲೆಗಳನ್ನು ಹಿಡಿದಿರುವುದು ಎದ್ದು ಕಾಣುತ್ತದೆ.

‘ವರ್ಣ–ಜಾತಿ: ವಚನಕಾರರ ಪರಿಕಲ್ಪನೆ’, ‘ಶರಣರ ಸಾಮಾಜಿಕ ಚಿಂತನೆ’, ‘ಶರಣರು ವೈದಿಕ ಸಂಸ್ಕೃತಿಯ ವಿರೋಧಿಗಳೇ?’ ‘ಅಲ್ಲಮನ ‘ಪ್ರಭುಗೀತ’ ಅವಲೋಕನ’, ‘ಶರಣ–ಸೂಫಿ–ಝೆನ್‌’ ‘ಅರೇಬಿಯಾದ ವಿರಾಗಿಣಿ ರಾಬಿಯಾ ಜೀವನ ಮತ್ತು ಸಂದೇಶ’ – ಮೊದಲ ಸಂಪುಟದಲ್ಲಿರುವ ಲೇಖನಗಳ ಈ ಶೀರ್ಷಿಕೆಗಳೇ ಅಕ್ಕೂರಮಠರ ಚಿಂತನೆಯ ದಿಕ್ಕನ್ನು ತೋರಿಸುವಂತಿವೆ.

ಎರಡನೇ ಸಂಪುಟ ವೀರಶೈವ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದಾಗಿದೆ. ವೀರಶೈವವನ್ನು ಒಂದು ಧರ್ಮವಾಗಿ ಶಾಸ್ತ್ರೀಯ ರೀತಿಯಲ್ಲಿ ಅಧ್ಯಯನ ನಡೆಸಿ ಬರೆದ ಲೇಖನಗಳು ಇದರಲ್ಲಿವೆ. ಮಠಗಳ ಪರಿಕಲ್ಪನೆ, ಇಷ್ಟಲಿಂಗ ದೀಕ್ಷೆ, ಧಾರ್ಮಿಕ ಆಚರಣೆಗಳಲ್ಲಿ ಕಂಡುಬರುವ ಅಸಂಗತಗಳು, ಜಂಗಮರು ಮತ್ತು ಸತ್ಯಾಗ್ರಹ ಹೀಗೆ ಇಲ್ಲಿನ ಚರ್ಚೆಯ ಹರವು ಬಲು ದೊಡ್ಡದು. ಧರ್ಮ–ದರ್ಶನಶಾಸ್ತ್ರ, ಸಮಾಜ–ಸಮಾಜಶಾಸ್ತ್ರದ ಗಂಭೀರ ಅಧ್ಯಯನಕಾರರಾಗಿದ್ದ ಅಕ್ಕೂರಮಠ ಅವರು, ಸಾಹಿತ್ಯಕೇಂದ್ರಿತ ಬರಹಗಳಲ್ಲಿ ದರ್ಶನಶಾಸ್ತ್ರವನ್ನು ಹದವಾಗಿ ಬೆರೆಸಿಕೊಟ್ಟಿದ್ದಾರೆ. ಅವರು ಈಗಿಲ್ಲದಿದ್ದರೂ ಈ ಬೃಹತ್‌ ಸಂಪುಟಗಳ ಮೂಲಕ ಓದುಗರೊಂದಿಗೆ ಸದಾ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.