ADVERTISEMENT

ಒಳನೋಟ: ಸಂಶೋಧನಾ ಮಾರ್ಗದಲ್ಲಿ ಹರಡಿದ ಬೆಳಕು

ಮಾಧವ ಚಿಪ್ಪಳಿ
Published 14 ಆಗಸ್ಟ್ 2021, 19:31 IST
Last Updated 14 ಆಗಸ್ಟ್ 2021, 19:31 IST
ಮಾರ್ಗಾನ್ವೇಷಣೆ
ಮಾರ್ಗಾನ್ವೇಷಣೆ   

ಮಾರ್ಗಾನ್ವೇಷಣೆ
ಲೇ:
ನಿತ್ಯಾನಂದ ಶೆಟ್ಟಿ
ಪ್ರ: ಬೆಸುಗೆ ಪಬ್ಲಿಕೇಷನ್ಸ್‌
ಸಂ: 89701 62207, 93538 77377
ಪುಟಗಳು: 304
ಬೆಲೆ: 350

ನಮ್ಮ ಸುತ್ತಲೂ ಪಿಎಚ್.ಡಿ ಪದವಿಗಾಗಿ ಅಧ್ಯಯನ ಮಾಡುತ್ತಿರುವ ಕೆಲವರನ್ನು ಗಮನಿಸಿದರೆ ಒಂದು ವಿಚಿತ್ರವಾದ ಸಂಗತಿ ಗಮನಕ್ಕೆ ಬರುತ್ತದೆ. ಸಂಶೋಧನೆಯನ್ನು ಮಾಡುವ ಮಾರ್ಗ ಈಗಾಗಲೇ ಸ್ಪಷ್ಟವಾಗಿದೆ, ಆ ಮಾರ್ಗವು ಮಾರ್ಗದರ್ಶಿಗೆ ತಿಳಿದಿದೆ, ಸಂಶೋಧನಾ ವಿದ್ಯಾರ್ಥಿಯು ಈಗಾಗಲೇ ಗೊತ್ತಿರುವ ಕ್ರಮದಲ್ಲಿ ಅಧ್ಯಯನ ಮಾಡಿ ಥೀಸಿಸ್ ಬರೆದರೆ ಸಂಶೋಧನೆ ನಡೆಸಿದಂತೆ ಎನ್ನುವ ತಿಳಿವಳಿಕೆಯದು. ಆದರೆ ನಿಜದಲ್ಲಿ ಸಂಶೋಧನೆಯೆನ್ನುವುದು ಹಾಗಿರುವುದಿಲ್ಲ. ಅರ್ಜಿಯೊಂದನ್ನು ತುಂಬುವ ಹಾಗೆ ಈಗಾಗಲೇ ಇರುವ ಸಿದ್ಧ ಮಾದರಿಯ ಮಾರ್ಗದಲ್ಲಿ ವಿವರಗಳನ್ನು ಪೋಣಿಸುವುದು ಮಾತ್ರವಲ್ಲ; ಬದಲಿಗೆ ಓದುವ, ಬರೆಯುವ ಹೊಸ ಮಾರ್ಗವನ್ನು ಶೋಧಿಸಿಕೊಳ್ಳುವುದೇ ಸಂಶೋಧನೆ ಎನ್ನುವುದನ್ನು ನಿತ್ಯಾನಂದ ಶೆಟ್ಟಿ ತಮ್ಮ ‘ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ-ನೀತಿ’ ಎನ್ನುವ ಪುಸ್ತಕದಲ್ಲಿ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ.

ಪಿಎಚ್.ಡಿ ವಿದ್ಯಾರ್ಥಿಗಳನ್ನೇ ಗಮನದಲ್ಲಿ ಇಟ್ಟುಕೊಂಡು, ಪಿಎಚ್.ಡಿ ಎಂದರೇನು, ಪಶ್ಚಿಮದಲ್ಲೂ ಭಾರತದಲ್ಲೂ ಈ ಪದವಿಯ ಇತಿಹಾಸವೇನು, ಸಂಶೋಧನಾ ಪ್ರಸ್ತಾವ ಎಂದರೇನು, ಅದು ಹೇಗಿರಬೇಕು ಎಂದು ಸುದೀರ್ಘವಾಗಿ ಚರ್ಚಿಸುವ ಈ ಕೃತಿ ಅಷ್ಟಕ್ಕೇ ನಿಲ್ಲುವುದಿಲ್ಲ. ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಪ್ರಭುತ್ವ ಮತ್ತು ಬಂಡವಾಳಶಾಹಿಯ ಕಾಣದ ಕೈಗಳು ಹೇಗೆ ಕೆಲಸ ಮಾಡುತ್ತಿರುತ್ತವೆ, ನಮ್ಮ ಸುತ್ತಲಿನ ಮತ್ತು ನಾವು ಅಧ್ಯಯನ ಮಾಡುತ್ತಿರುವ ಪಠ್ಯವು ರಚನೆಯಾದ ಸಂದರ್ಭದ ರಾಜಕೀಯ ಹೇಗೆ ಸಾಹಿತ್ಯ ಸಂಶೋಧನೆಯನ್ನು ಪ್ರಭಾವಿಸುತ್ತದೆ ಎನ್ನುವುದನ್ನೂ ವಿವರವಾಗಿ ಬಿಡಿಸಿಡುತ್ತದೆ.

ADVERTISEMENT

ಕನ್ನಡ ಸಾಹಿತ್ಯ ಚರಿತ್ರೆಯನ್ನು ಹೇಳುವ ರೀತಿಯಲ್ಲೇ ಕನ್ನಡ ಸಾಹಿತ್ಯ ಸಂಶೋಧನೆಯ ಚರಿತ್ರೆಯನ್ನು ಶೆಟ್ಟರು ಹೇಳುತ್ತಾರೆ. ಹಾಗಾಗಿ ಈ ಕೃತಿಯು ಪಿಎಚ್.ಡಿಯಲ್ಲಿ ಆಸಕ್ತರಾದವರಿಗೆ ಮಾತ್ರವಲ್ಲದೆ ಸಾಹಿತ್ಯ, ಸಂಶೋಧನೆ, ಜ್ಞಾನ ನಿರ್ಮಾಣದ ಕುರಿತು ಕುತೂಹಲ ಹೊಂದಿರುವವರಿಗೂ ಮಾಹಿತಿಯನ್ನು, ಒಳನೋಟಗಳನ್ನು ಒದಗಿಸುತ್ತದೆ. ಜೊತೆಗೆ, ವಿಶ್ವವಿದ್ಯಾಲಯದ ಹೊರಗಿದ್ದುಕೊಂಡು ಸಾಹಿತ್ಯ ಸಂಶೋಧನಾದಿ ಸಂಗತಿಗಳಲ್ಲಿ ಆಸಕ್ತರಾಗಿರುವ ನನ್ನಂಥವರಿಗೆ ವಿಶ್ವವಿದ್ಯಾಲಯಗಳೊಳಗೆ ಈಗ ಏನು ನಡೆಯುತ್ತಿದೆ, ಅದರ ಗುಣ ದೋಷಗಳೇನು ಎನ್ನುವ ಗುಟ್ಟನ್ನು ಕೂಡ ಕಿವಿಯಲ್ಲಿ ಸಣ್ಣದಾಗಿ ಉಸುರುತ್ತದೆ.

ಸಾಹಿತ್ಯ ಸಂಶೋಧನೆ ಎನ್ನುವುದು ಇವತ್ತು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ಸಾಹಿತ್ಯದ ಅಧ್ಯಯನವು ಹಲವು ಬೇರೆ ಶಿಸ್ತುಗಳ ಜೊತೆಗೆ ಸಮ್ಮಿಳಿತಗೊಂಡಿದೆ ಅಥವಾ ಸಂಕರಗೊಂಡಿದೆ. ಶೆಟ್ಟರು ಸಾಹಿತ್ಯ ಸಂಶೋಧನೆಯನ್ನು ಅದರ ಎಲ್ಲ ಸಂಕೀರ್ಣತೆಯಲ್ಲಿ ಚಿತ್ರಿಸುವಾಗ ಸಂಸ್ಕೃತಿ ಅಧ್ಯಯನ, ಸಮಾಜಶಾಸ್ತ್ರ ಮುಂತಾದ ಶಿಸ್ತುಗಳೊಂದಿಗೆ ಅದು ಇಟ್ಟುಕೊಂಡಿರುವ ಹೊಂದಾಣಿಕೆ, ಹೊಣೆಗಾರಿಕೆ, ಹೊಡೆದಾಟಗಳನ್ನೂ ವಿವರಿಸುತ್ತಾರೆ.

ಕನ್ನಡದ ಕೆಲಸವನ್ನು ಮಾಡಿದ ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಡಿ.ಆರ್. ನಾಗರಾಜ, ಕೆ.ವಿ. ಸುಬ್ಬಣ್ಣ, ಎಂ.ಎಂ. ಕಲಬುರ್ಗಿ, ಎಚ್.ಎಸ್.ಶ್ರೀಮತಿ, ಡಿ.ಎನ್. ಶಂಕರ ಭಟ್, ರಾಜೇಂದ್ರ ಚೆನ್ನಿ, ಬಿ.ಎನ್. ಸುಮಿತ್ರಾಬಾಯಿ, ರಹಮತ್ ತರೀಕೆರೆ, ವಿಜಯಾ ದಬ್ಬೆ, ಷೆಲ್ಡನ್ ಪೋಲಕ್ ಅಷ್ಟೇ ಅಲ್ಲದೆ ಕನ್ನಡ ಸಂಶೋಧನೆಯ ಕುರಿತ ಮಾತುಕತೆಯಲ್ಲಿ ಅಷ್ಟೆಲ್ಲ ಪ್ರಸ್ತಾಪಕ್ಕೊಳಗಾಗದ, ಆದರೆ ವಿದ್ವತ್ತಿಗೆ ಹೆಸರಾದ, ಸುಂದರ್ ಸರುಕ್ಕೈ, ಜಾರ್ಜ್ ಜೀವರ್ಗೀಸ್ ಜೋಸೆಫ್, ಬ್ರೂಸ್ ಕ್ಯಾಪ್‌ಫೆರರ್ ರೀತಿಯ ನೂರಾರು ಚಿಂತಕರು, ಬರಹಗಾರರನ್ನು ಚುಟುಕಾಗಿಯಾದರೂ ಪರಿಚಯಿಸುವ, ಕೆಲವೊಮ್ಮೆ ವಿವರಿಸುವ, ಕೆಲವೊಮ್ಮೆ ಟೀಕಿಸುವ ಶೆಟ್ಟರ ಪುಸ್ತಕದ ಹರವು ಬಹಳ ವಿಸ್ತಾರವಾದದ್ದು.

ತನ್ನ ಗಮನಕ್ಕೆ ಬಂದ ಚಿಂತನೆಗಳನ್ನು ಬಿಡಿಬಿಡಿಯಾಗಿ ಪ್ರಸ್ತಾಪಿಸದೇ ಅವುಗಳ ನಡುವೆ ಇರುವ ಸಂವಾದಗಳನ್ನು, ಅವು ಮಾಡಿದ ಸಾಹಿತ್ಯಿಕ, ಸಾಮಾಜಿಕ ಪರಿಣಾಮಗಳನ್ನು ಈ ಪುಸ್ತಕವು ಗಮನಿಸಿ ಗುರುತಿಸುತ್ತದೆ. ಸಂದರ್ಭಾನುಸಾರವಾಗಿ ಶೆಟ್ಟರು ಕೊಡುವ ವಿದ್ವಾಂಸರ ಮತ್ತು ಅವರ ಕೃತಿಗಳ ಉದ್ದುದ್ದ ಯಾದಿಗಳು ಓದಿಗೆ ಶುಷ್ಕವೆನ್ನಿಸಿದರೂ ಕನ್ನಡದ ಕುರಿತು ನಡೆದ ಅಗಾಧ ಪ್ರಮಾಣದ ಜ್ಞಾನ ನಿರ್ಮಾಣವನ್ನು ನೆನಪಿಸುವಲ್ಲಿ ಸಫಲವಾಗುತ್ತವೆ.

ಈ ಪುಸ್ತಕವು ಸಾಕಷ್ಟು ಮಾಹಿತಿಯನ್ನು, ಒಳ್ಳೆಯ ಒಳನೋಟಗಳನ್ನು ಹೊಂದಿದೆ ಎನ್ನುವಷ್ಟೇ ಮುಖ್ಯ ಈ ವಿಚಾರಗಳನ್ನು ಶೆಟ್ಟರು ಮಂಡಿಸಿರುವ ರೀತಿ. ಸಂಶೋಧನಾ ಕೃತಿಗಳು, ಸಂಶೋಧನೆಯ ಕುರಿತ ಬರಹಗಳು, ತೀರಾ ವಿಶೇಷ ಉದಾಹರಣೆಗಳನ್ನು ಹೊರತುಪಡಿಸಿದರೆ, ಒಂದು ಪ್ರಬಂಧದ ರೀತಿ ಇರುತ್ತವೆ. ಈ ಕೃತಿಯಲ್ಲಿ ಶೆಟ್ಟರು ಅಪರೂಪವೆನ್ನಿಸುವಂತೆ ಸಂವಾದದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಒಬ್ಬ ಮಾರ್ಗದರ್ಶಕ ಅಥವಾ ಮೇಷ್ಟ್ರು ತನ್ನ ವಿದ್ಯಾರ್ಥಿ ಅಥವಾ ಸಂಶೋಧನಾಸಕ್ತನ ಜೊತೆ ನಡೆಸಿದ ಮಾತುಕತೆಯ ರೂಪದಲ್ಲಿ ಇಡೀ ಪುಸ್ತಕದ ನಿರೂಪಣೆಯಿದೆ.

ಶೈಕ್ಷಣಿಕ ಶಿಸ್ತಿನ ಬರವಣಿಗೆಗಳನ್ನು ಹೆಚ್ಚಾಗಿ ನಿರೂಪಣೆಯ ರೂಪದಲ್ಲಿ ಕಂಡಿರುವ ನಮ್ಮ ಓದಿಗೆ ಈ ಸಂವಾದದ ಮಾರ್ಗವು ಒಂದು ಅಗತ್ಯ ಲಘುತ್ವವನ್ನು ತಂದುಕೊಡುತ್ತದೆ. ಸಂಭಾಷಣೆಯ ಪ್ರಸ್ತುತಿಯು ಶೆಟ್ಟರ ಬರವಣಿಗೆಗೆ ಚೆಲುವನ್ನೂ, ಚಲನಶೀಲತೆಯನ್ನೂ, ಚಂಚಲಶೀಲತೆಯನ್ನೂ ತಂದುಕೊಟ್ಟಿದೆ. ಮಾತುಕತೆಯಲ್ಲಿ ಆಗುವಂತೆ ಕೆಲವೊಮ್ಮೆ ಬರವಣಿಗೆಯು ಒಂದು ವಿಚಾರದಿಂದ ಮತ್ತೊಂದಕ್ಕೆ ಹೊರಳುವುದು ಆಕರ್ಷಕವೆನ್ನಿಸಿದರೂ ವಿಷಯಗಳು ಚದುರಿ ಹೋಗುವುದು ಗಮನಕ್ಕೆ ಬಾರದೇ ಹೋಗುವುದಿಲ್ಲ.

‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಇದೇ ಸಂಭಾಷಣೆಯ ರೂಪವನ್ನು ಬಳಸುತ್ತಾರಾದರೂ ಅದರಲ್ಲಿ ಬರುವ ಮತ್ತೊಂದು ಪಾತ್ರವು ಪೂರ್ವಪಕ್ಷವನ್ನು ಪ್ರತಿನಿಧಿಸುತ್ತದೆ ಅಥವಾ ಸ್ವವಿಮರ್ಶೆಯ ಮಾರ್ಗವಾಗುತ್ತದೆ. ಅಲ್ಲಿ ಬರುವ ‘ಓದುಗ’ನು ‘ಸಂಪಾದಕ’ನಷ್ಟು ಒಳನೋಟಗಳನ್ನು ಹೊಂದಿಲ್ಲದಿದ್ದರೂ ಚುರುಕಾದ ಪ್ರಶ್ನೆಗಳನ್ನು ನಿರ್ಭಿಡೆಯಿಂದ ಕೇಳುತ್ತಾನೆ. ಆದರೆ, ಶೆಟ್ಟರ ಕೃತಿಯಲ್ಲಿ ವಿದ್ಯಾರ್ಥಿಯು ಮುಗ್ಧವಾದ ಚುಟುಕು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಅಧ್ಯಾಪಕನು ವಿದ್ವತ್ಪೂರ್ಣ ಸುದೀರ್ಘ ಉತ್ತರಗಳನ್ನು ಕೊಡುತ್ತಾನೆ. ಅಧ್ಯಾಪಕನು ಹೇಳುವ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿದಂತೆ ಕಾಣುವ ಈ ವಿದ್ಯಾರ್ಥಿಯು ಎಲ್ಲಿಯೂ ತನ್ನ ಮೇಷ್ಟ್ರನ್ನು ಎದುರುಹಾಕಿಕೊಳ್ಳುವುದಿಲ್ಲ, ವಿಮರ್ಶಿಸುವುದಿಲ್ಲ. ಬದಲಿಗೆ ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತಾನೆ, ಪ್ರಶ್ನೆಗಳನ್ನು ಕೇಳಿದಾಗ ಹಲವು ಸಾರಿ ‘ಮ್ ಮ್ ಮ್’ ಎನ್ನುತ್ತಾನೆ. ಹಾಗಾಗಿ, ಪ್ರಾರಂಭದಲ್ಲಿ ಆಕರ್ಷಣೀಯವಾಗಿ ಕಾಣುವ ಸಂಭಾಷಣೆಯು ಓದುತ್ತಾ ಹೋದಂತೆ ಇದೊಂದು ಬರಿಯ ತಂತ್ರ, ವಿದ್ಯಾರ್ಥಿಯನ್ನು ಎದುರಿಗೆ ಕೂರಿಸಿಕೊಂಡು ಆಡುವ ಸ್ವಗತ ಎನ್ನಿಸಿಬಿಡುತ್ತದೆ.

ನಿಜವಾದ ಸಂಶೋಧನೆಯ ಸಂದರ್ಭದಲ್ಲಿ ಇದು ಬದಲಾಗಬೇಕು, ಮಾರ್ಗದರ್ಶಿ ಅಪ್ಪಣೆ ಮಾಡುವವ, ವಿದ್ಯಾರ್ಥಿ ಅದನ್ನು ಅನುಸರಿಸುವವ ಎನ್ನುವುದು ಹೋಗಿ ಎಲ್ಲರಿಗೂ ಸಮಾನ ಅವಕಾಶ ದೊರೆತಾಗ, ವಿದ್ಯಾರ್ಥಿಯು ಸಹವರ್ತಿಯಾದಾಗ, ಮಾರ್ಗಾನ್ವೇಷಣೆಯು ಹೆಚ್ಚು ಪ್ರಜಾಸತ್ತಾತ್ಮಕವೂ ಫಲಕಾರಿಯೂ ಆಗಬಲ್ಲುದು ಎಂಬ ಇಂಗಿತವನ್ನು ಇಟ್ಟುಕೊಂಡು ಬರೆದಿರುವ ಈ ಪುಸ್ತಕವು ತನ್ನ ವಸ್ತುವಿಷಯದ ಬಲದಿಂದಲೇ ವಿದ್ಯಾರ್ಥಿಗಳನ್ನು ಆ ಮಟ್ಟಕ್ಕೆ ಏರಿಸುವ ಕೆಲಸವನ್ನು ಒಂದಷ್ಟಾದರೂ ಮಾಡುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.