ADVERTISEMENT

ಪುಸ್ತಕ ವಿಮರ್ಶೆ: ಕಾದಂಬರಿ ರೂಪದ ಕೃಷಿ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:30 IST
Last Updated 30 ಜನವರಿ 2021, 19:30 IST
ಮತ್ತೆ ಬೇರಿನ ಕಡೆಗೆ
ಮತ್ತೆ ಬೇರಿನ ಕಡೆಗೆ   

ಮತ್ತೆ ಬೇರಿನ ಕಡೆಗೆ
ಲೇ: ಈರಣ್ಣ ಬಡಿಗೇರ
ಪ್ರ: ಶ್ರೀಹರಿ ಪ್ರಕಾಶನ
ಮೊ: 98440 62244

ಕೃಷಿ ಕೈಪಿಡಿಯನ್ನು ಸಿದ್ಧಪಡಿಸಲು ಬಳಸಬಹುದಾಗಿದ್ದ ವಿವರಗಳಿಗೆ ಕಾದಂಬರಿ ರೂಪವನ್ನು ಕೊಟ್ಟು ಈರಣ್ಣ ಬಡಿಗೇರರು ಇತ್ತೀಚೆಗೆ ರಚಿಸಿದ ಕೃತಿಯೇ ‘ಮತ್ತೆ ಬೇರಿನ ಕಡೆಗೆ’. ಹೆಸರೇ ಸೂಚಿಸುವಂತೆ ಗ್ರಾಮೀಣ ಕೃಷಿ ಬದುಕೇ ಇಲ್ಲಿನ ಕಥಾವಸ್ತು. ಕೃಷಿಯ ಹಿರಿಮೆಯನ್ನೂ ಕೃಷಿ ಪದ್ಧತಿಗಳನ್ನೂ ಇಲ್ಲಿನ ಪಾತ್ರಗಳ ಮೂಲಕ ಚರ್ಚಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹೀಗಾಗಿ ಸದ್ಯದ ಯಾವುದೇ ಕಾದಂಬರಿ ಪ್ರಕಾರಕ್ಕೆ ಇದನ್ನು ಸೇರಿಸದೇ ಇದನ್ನೊಂದು ‘ಶೈಕ್ಷಣಿಕ ಕಾದಂಬರಿ’ ಎಂದು ಕರೆಯಲು ಅಡ್ಡಿಯಿಲ್ಲ.

ಕಥಾನಾಯಕ ಸೋಮಣ್ಣ ಹಾಗೂ ಕಥಾನಾಯಕಿ ಸುಮಾ ಇಬ್ಬರೂ ತಾಂತ್ರಿಕ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ನಗರ ಜೀವನ ತೊರೆದು ಹಳ್ಳಿಯಲ್ಲಿ ನೆಲೆ ನಿಲ್ಲುವ ಅವರು, ಕೃಷಿಯಲ್ಲೇ ಬದುಕನ್ನು ಕಟ್ಟಿಕೊಳ್ಳುವ ದೃಢ ಸಂಕಲ್ಪ ತೊಟ್ಟವರು. ಅವರ ಜೀವನದ ಜತೆಜತೆಗೆ ಕೃಷಿ ಬದುಕಿನ ಕಥೆಯನ್ನೂ ಕಟ್ಟಿಕೊಡಲು ಲೇಖಕರು ಪ್ರಯತ್ನಿಸಿದ್ದಾರೆ.

ADVERTISEMENT

ಕಥೆಯ ನಡುವೆ ಬರುವ ಖರ್ಚು, ವೆಚ್ಚದ ತಖ್ತೆ ವಿವರಗಳು, ಪಂಚಗವ್ಯ, ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಸಸ್ಯ ಸಂರಕ್ಷಣೆ ಕುರಿತ ಮಾಹಿತಿಗಳು ಕಾದಂಬರಿಯ ಭಾಗವಾಗದೆ ರೈತರಿಗೆ ನೀಡಿದ ಸಲಹೆಗಳಂತೆ ಭಾಸವಾಗುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಯೋಜನೆಗಳ ಕುರಿತ ವಿವರಗಳು ಇದನ್ನೊಂದು ಕೃಷಿ ವಿಶ್ವವಿದ್ಯಾಲಯದ ಕೈಪಿಡಿ ರೀತಿಯಲ್ಲಿ ಓದಿಕೊಳ್ಳುವಂತೆ ಒತ್ತಾಯಿಸುತ್ತವೆ. ಕೃಷಿ ಜತೆಗೆ ಉಪ ಕಸುಬುಗಳನ್ನು ಮಾಡುತ್ತಾ ಹಳ್ಳಿಯಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಪ್ರತಿಪಾದಿಸುವ ಈ ಕಾದಂಬರಿ, ಯುವಕರನ್ನು ಮತ್ತೆ ಹಳ್ಳಿಯತ್ತ ಹಿಂದಿರುಗುವಂತೆ ಆಗ್ರಹಿಸುತ್ತದೆ. ಯಾವ ಉದ್ವೇಗಕ್ಕೂ ಒಳಗಾಗದೆ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳದೆ ಹಣ ಗಳಿಸಬಹುದಾದ ಒಂದೇ ಕ್ಷೇತ್ರವೆಂದರೆ ಅದು ಕೃಷಿ ಎನ್ನುವುದು ಕೃತಿ ಕೊಡುವ ಸಂದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.