ADVERTISEMENT

ಪುಸ್ತಕ ವಿಮರ್ಶೆ: ‘ಪಾತುಮ್ಮ’ ಸುತ್ತ ಅನುಭಾವ ಲೋಕ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 19:30 IST
Last Updated 18 ಮಾರ್ಚ್ 2023, 19:30 IST
ಮೂವರು ಮಹಮದರು
ಮೂವರು ಮಹಮದರು   

ಆನ್‌ಲೈನ್‌ ವೇದಿಕೆ ‘ಅವಧಿ’ಯಲ್ಲಿ ಕವಿ, ಅಂಕಣಗಾರ್ತಿ ಪಿ. ಚಂದ್ರಿಕಾ ಅವರು ಬರೆಯುತ್ತಿದ್ದ ಅಂಕಣಗಳ ಗುಚ್ಛ ಈ ಕೃತಿ. ದೃಶ್ಯ ಮಾಧ್ಯಮದಲ್ಲೂ ಇವರ ಕೃಷಿ ಇದೆ. ಹಲವು ಚಲನಚಿತ್ರ ಮತ್ತು ಧಾರಾವಾಹಿಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಜೊತೆಗೆ ಕಲಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದವರು ಚಂದ್ರಿಕಾ.

ಬೊಳುವಾರು ಮಹಮದ್ ಕುಂಞ ಅವರ ‘ಒಂದು ತುಂಡು ಗೋಡೆ’ ಕಥೆಯನ್ನು ನಿರ್ದೇಶಕ ಪಂಚಾಕ್ಷರಿ ‘ಪಾತುಮ್ಮ’ ಎಂಬ ಸಿನಿಮಾ ರೂಪ ನೀಡಿದಾಗ, ಅವರೊಂದಿಗೆ ಕೈಜೋಡಿಸಿ ಸಿನಿಮಾವನ್ನು ತೆರೆಗೆ ತಂದಲ್ಲಿಯವರೆಗಿನ ಚಂದ್ರಿಕಾ ಅವರ ಹೆಜ್ಜೆಗಳ ದಾಖಲೆ ಇದಾಗಿದೆ.

ಸಿನಿಮಾ ಹುಟ್ಟಿನ ಹಿಂದಿನ ಸ್ವಾರಸ್ಯಕರ ಕಥೆಗಳನ್ನು ವಿಡಿಯೊ ಸಂದರ್ಶನಗಳಲ್ಲಿ ನಿರ್ದೇಶಕರು, ನಟರು ಹೇಳಿರುವುದನ್ನು ಕೇಳಿರುತ್ತೇವೆ. ಆದರೆ ಇವುಗಳನ್ನು ದಾಖಲಿಸಿದ್ದು ಕೆಲವರು ಮಾತ್ರ. ಈ ಪಟ್ಟಿಗೆ ಹೊಸ ಸೇರ್ಪಡೆ ‘ಮೂವರು ಮಹಮದರು’. ಒಂದು ಸಿನಿಮಾ ಎಂದರೆ ಅದೊಂದು ಸುದೀರ್ಘ ಪಯಣ. ಇಲ್ಲಿ ಹಲವು ಹೊಸ ಮುಖಗಳ ಭೇಟಿ, ಹೊಸ ಸ್ಥಳಗಳ ಅನ್ವೇಷಣೆ, ವಿಭಿನ್ನವಾದ ಸನ್ನಿವೇಶಗಳ ಮುಖಾಮುಖಿ, ಸಾಹಸ, ಭಯ ಹೀಗೆ ಹಲವು ಒಡನಾಟಗಳ ಪಯಣವಿದು. ಇಂಥ ಒಡನಾಟಗಳ ಸಾರ ಸಂಗ್ರಹವನ್ನು ಇಲ್ಲಿನ ಬರವಣಿಗೆಯಲ್ಲಿ ಕಾಣಬಹುದು.

ADVERTISEMENT

ಕೃತಿಯ ಆರಂಭದಲ್ಲೇ ಈ ಲೇಖನಗಳ ಗುಚ್ಛ ಹೆಣೆಯಲು ಕಾರಣವಾದ ಘಟನೆಗಳನ್ನು ಚಂದ್ರಿಕಾ ಬಿಚ್ಚಿಡುತ್ತಾರೆ. ಕೋವಿಡ್‌ ಕಾಲಘಟ್ಟದಲ್ಲಿ ಧರ್ಮದ ಹೆಸರಿನಲ್ಲಿ ಒಡೆದ ಮನಸ್ಸುಗಳನ್ನು ಕಂಡು, ಮರುಗಿ ಉಲ್ಲಾಳದ ಸುಭಾಷ್‌ ನಗರದ ಮುಸಲ್ಮಾನ ಕೇರಿಗಳಲ್ಲಿ ಕಂಡು, ಅನುಭವಿಸಿದ ಸೌಖ್ಯದ ಕಥೆಯನ್ನು ಮೆಲುಕು ಹಾಕುತ್ತಾ ಹೋಗುತ್ತಾರೆ ಅವರು. ಸುಭಾಷ್‌ನಗರಕ್ಕೆ ಮೊದಲ ಹೆಜ್ಜೆ ಇಟ್ಟ ಅನುಭವದಿಂದಲೇ ಒಡನಾಟದ ಈ ಕೃತಿಯನ್ನು ಆರಂಭಿಸುತ್ತಾರೆ ಚಂದ್ರಿಕಾ. ಚಿತ್ರೀಕರಣಕ್ಕಾಗಿ ಮನೆಯೊಂದರ ಹುಡುಕಾಟಕ್ಕೆಂದು ಹೆಜ್ಜೆ ಇಟ್ಟ ಚಿತ್ರತಂಡದಲ್ಲಿದ್ದ ಚಂದ್ರಿಕಾ, ಮೊದಲ ಅಧ್ಯಾಯದಲ್ಲೇ ಸುಭಾಷ್‌ ನಗರವನ್ನು ಕಂಡ ಬಗೆ, ಅಲ್ಲಿ ಕಟ್ಟಿಕೊಟ್ಟ ವ್ಯಕ್ತಿ ಚಿತ್ರಣ, ಮುಸ್ಲಿಂ ಹುಡುಗನೊಬ್ಬನ ಕಣ್ಣಲ್ಲಿ ಕಂಡ ಕನಸಿನ ಲೋಕವನ್ನು ಸರಳವಾಗಿ, ಲವಲವಿಕೆಯ ಭಾಷೆಯ ಮೂಲಕ ಕಟ್ಟಿಕೊಟ್ಟಿದ್ದಾರೆ.

ಈ ಪಯಣ ಸಾಗುತ್ತಾ ‘ಒಂದು ತುಂಡು ಗೋಡೆ’ಯನ್ನೇ ಸಿನಿಮಾಗಾಗಿ ಆಯ್ದುಕೊಂಡಿದ್ದರ ಹಿನ್ನೆಲೆ, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ವ್ಯಕ್ತಿತ್ವ, ಅವರ ಕನಸುಗಳು, ಟಿಪ್ಪು ಜನ್ಮದಿನ ಆಚರಣೆ ವಿಚಾರವಾಗಿ ಬಂದ್ ನಡೆದಾಗ ಆದ ಘಟನೆ, ಚಿತ್ರೀಕರಣದ ಸಂದರ್ಭದಲ್ಲಿ ಹೊರಬಿದ್ದ ಮುಸ್ಲಿಂ ಹಿರಿಯರ ಮನದಾಳದ ಮಾತುಗಳ ಕಟ್ಟು, ಹೊರ ಜಗತ್ತಿನ ಘಟನಾವಳಿಗಳು ಚಿತ್ರೀಕರಣದ ಮೇಲೆ ಬೀರುತ್ತಿದ್ದ ಪ್ರಭಾವ ಹೀಗೆ ಚಂದ್ರಿಕಾ ಅವರ ಅನುಭವ, ಅನುಭಾವಗಳ ಜಗತ್ತು ಈ ಕೃತಿಯಾಗಿದೆ.

ಕೃತಿ: ಮೂವರು ಮಹಮದರು
ಲೇ: ಪಿ.ಚಂದ್ರಿಕಾ
ಪ್ರ: ಬಹರೂಪಿ
ಸಂ: 7019182729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.