ADVERTISEMENT

ಬಯಲಾಗುವ ಮನುಷ್ಯತ್ವದ ಬಂಡವಾಳ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ಒಡನಾಡಿಯ ಒಡಲಾಳ ಕೃತಿಯ ಮುಖಪುಟ
ಒಡನಾಡಿಯ ಒಡಲಾಳ ಕೃತಿಯ ಮುಖಪುಟ   

ಬಯಲಾಗುವ ಮನುಷ್ಯತ್ವದ ಬಂಡವಾಳ
‘ಒಡನಾಡಿಯ ಒಡಲಾಳ’ ಎಂಬುದು ಮನುಷ್ಯತ್ವದ ಬಂಡವಾಳ ಬಯಲು ಮಾಡುವ ಕೃತಿ. ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ–ಪರಶು ಅವರ ಹೋರಾಟದ ಕತೆಗಳು ಇದರಲ್ಲಿ ಇವೆ. ಹಣ ಗಳಿಸುವುದಕ್ಕಾಗಿ ಮನುಷ್ಯ ಯಾವ ಮಟ್ಟಕ್ಕೂ ಇಳಿಯುತ್ತಾನೆ ಎನ್ನುವುದನ್ನು ಪುರಾವೆ ಸಹಿತ ಈ ಕೃತಿ ಬಹಿರಂಗಪಡಿಸುತ್ತದೆ. ಒಂದೊಂದು ಕತೆಯನ್ನು ಓದಿ ಮುಗಿಸಿದ ನಂತರವೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಪುರುಷನ ಕ್ರೌರ್ಯದ ಬಗ್ಗೆ ಸಿಟ್ಟು ಉಕ್ಕುತ್ತದೆ.

ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಇರುವಂತೆ ಕಾಣುವ ಸಮಾಜ ತೆರೆಯ ಹಿಂದೆ ಎಷ್ಟೊಂದು ಹುಳುಕುಗಳನ್ನು ಹೊತ್ತುಕೊಂಡಿದೆ, ಭೀಕರವಾಗಿದೆ, ಅಮಾನವೀಯವಾಗಿದೆ ಎನ್ನುವುದನ್ನು ಕೃತಿ ಹಂತಹಂತವಾಗಿ ಬಿಚ್ಚಿಡುತ್ತದೆ, ಬೆಚ್ಚಿ ಬೀಳಿಸುತ್ತದೆ. ಮೇರೆಮೀರಿದ ಪುರುಷನ ಕ್ರೌರ್ಯ, ಹೆಣ್ಣಿನ ಅಸಹಾಯಕತೆ, ಗಂಡಸಿನ ಕಾಮದ ಹಸಿವು, ಹೆಣ್ಣಿನ ಹೊಟ್ಟೆಯ ಹಸಿವು ಎಲ್ಲವೂ ಇಲ್ಲಿ ಬಯಲಾಗುತ್ತವೆ. ಪುಸ್ತಕ ಓದಿ ಮುಗಿಸಿದಾಗ ಎಲ್ಲ ಪುರುಷರೂ ಬೆತ್ತಲಾದ ಅನುಭವ. ಪುರುಷ ಜನಾಂಗದ ಮೇಲೆ ಹೇಸಿಗೆಯ ಭಾವ ಹುಟ್ಟಿದರೆ ಅಚ್ಚರಿಯಲ್ಲ.

ಲೈಂಗಿಕ ಕಾರ್ಯಕರ್ತೆಯರ ಆತ್ಮಕತೆಗಳೂ ಕನ್ನಡದಲ್ಲಿ ಬಂದಿವೆ. ಆದರೆ ಇದು ಇಂತಹ ಹಲವಾರು ಹತಭಾಗ್ಯೆಯರ ಕತೆ. ಕತ್ತಲ ಕೂಪಕ್ಕೆ ಅವರನ್ನು ತಳ್ಳಿದ ಕತೆ. ಅಲ್ಲಿಂದ ಅವರನ್ನು ಬಿಡಿಸಲು ಸ್ಟ್ಯಾನ್ಲಿ–ಪರಶು ನಡೆಸಿದ ಹೋರಾಟದ ಕತೆ. ಈ ಹೋರಾಟದಲ್ಲಿ ಸೋಲು ಗೆಲುವು ಎರಡೂ ಇವೆ. ಎಲ್ಲವನ್ನೂ ಅವರು ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ವೇಶ್ಯಾವಾಟಿಕೆ ಎನ್ನುವುದು ಪುರಾತನ ಉದ್ಯೋಗ, ಎಲ್ಲ ಸಮಾಜಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಅದು ಮಾಮೂಲು ಎಂದು ಹೇಳುತ್ತಾ ಅದನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವ ಸಮಾಜ ಕಾನೂನು ಬಾಹಿರ, ಅನೈತಿಕ ಮತ್ತು ಹಿಂಸಾತ್ಮಕ ಉದ್ಯಮವನ್ನು ಹೇಗೆ ಬೆಳೆಸುತ್ತಿದೆ ಎನ್ನುವುದರ ಮೇಲೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ADVERTISEMENT

ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಮಾನಸಿಕ ಸ್ಥಿತಿ, ಮಹಿಳೆಯರನ್ನು ಇಂತಹ ಕೂಪಕ್ಕೆ ಕೆಡವಲು ಪ್ರಯತ್ನಿಸುವ ವ್ಯಕ್ತಿಗಳ ಮಾನಸಿಕ ಸ್ಥಿತಿ, ದಂಧೆಯ ವಿವಿಧ ಮುಖಗಳು, ತಂದೆ ತಾಯಿಯ ಸಂಕಟ ಎಲ್ಲವೂ ಇಲ್ಲಿ ದಾಖಲಾಗಿವೆ. ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮೈಸೂರಿನ ಇನ್ನೊಂದು ಮುಖ ಇಲ್ಲಿ ಕಾಣ ಸಿಗುತ್ತದೆ. ಅದೇ ರೀತಿ ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಉದ್ಯಮವಾಗಿ ಬೆಳೆದ ಬಗೆ ಹಾಗೂ ಅದರ ಪರಿಣಾಮಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಇನ್ನಷ್ಟು ಗಂಭೀರವಾಗಿ ಚಿಂತಿಸುವಂತೆಯೂ ಮಾಡುತ್ತದೆ.

ಯಾವ ಮರ್ಯಾದಾ ಪುರುಷರೂ ಮಾಡಲು ಬಯಸದೇ ಇರುವ ಈ ಸೇವಾ ಕಾರ್ಯದಲ್ಲಿ ಸ್ಟ್ಯಾನ್ಲಿ–ಪರಶು ಕಳೆದ ಮೂರು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲ ರೀತಿಯ ಅವಮಾನ, ಅವಹೇಳನ, ಸನ್ಮಾನಗಳನ್ನೂ ಪಡೆದಿದ್ದಾರೆ. ಒಡನಾಡಿಯ ಸೋಲು ಗೆಲುವಿನ ಜೊತೆಗೆ ಸಮಾಜದ ಸೋಲು ಗೆಲುವುಗಳೂ ಇಲ್ಲಿವೆ. ಹಲವು ಬಾರಿ ಒಡನಾಡಿ ಗೆದ್ದಿದೆ. ಆದರೆ ಸಮಾಜ ಎಲ್ಲ ಬಾರಿಯೂ ಸೋತಿದೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಇದಲ್ಲ. ಓದಿದ ಮೇಲೆ ನಮ್ಮೊಳಗೂ ತಳಮಳ ಉಂಟಾದರೆ ಅದೇ ಇದರ ಯಶಸ್ಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.