ADVERTISEMENT

ಪುಸ್ತಕ ವಿಮರ್ಶೆ: ತೊಗಲಿನ ಹೊದಿಕೆ ಒಳಗಿನ ವಿಸ್ಮಯ

ಎಸ್.ರವಿಪ್ರಕಾಶ್
Published 4 ಸೆಪ್ಟೆಂಬರ್ 2021, 19:30 IST
Last Updated 4 ಸೆಪ್ಟೆಂಬರ್ 2021, 19:30 IST
ನಮ್ಮ ದೇಹದ ವಿಜ್ಞಾನ
ನಮ್ಮ ದೇಹದ ವಿಜ್ಞಾನ   

ನಮ್ಮ ದೇಹ ವಿಜ್ಞಾನ
ಸಂಪಾದಕರು:
ಡಾ.ಟಿ.ಆರ್‌.ಅನಂತರಾಮು, ಡಾ.ನಾ.ಸೋಮೇಶ್ವರ
ಪ್ರ: ನವಕರ್ನಾಟಕ ಪ್ರಕಾಶನ
ಪುಟಗಳು: 554
ಬೆಲೆ: ₹1,500

***

ಸದಾ ಬಾಹ್ಯಮುಖಿಯಾಗಿ ವ್ಯವಹರಿಸುವ ಮಾನವನಿಗೆ ತನ್ನ ದೇಹದೊಳಗಿನ ಅದ್ಭುತ ‘ಬ್ರಹ್ಮಾಂಡ’ವನ್ನು ಇಣುಕಿ ನೋಡುವ ಮತ್ತು ಅದರ ‘ಅರಿವು’ ಪಡೆಯುವ ಜ್ಞಾನ ಸಿದ್ಧಿಸಿಲ್ಲ ಅಥವಾ ಅದರ ವ್ಯವಧಾನವೂ ಇಲ್ಲ. ತೊಗಲಿನ ಹೊದಿಕೆಯನ್ನು ಹೊದ್ದ ಮೂಳೆ, ಮಾಂಸ, ನರ-ನಾಡಿಗಳು, ರಕ್ತಗಳಿಂದ ಕೂಡಿದ ದೇಹದ ಬಾಹ್ಯ ಚೆಲುವು, ತ್ವಚೆ, ಸೌಷ್ಟವದ ಬಗ್ಗೆಯಷ್ಟೇ ಅಭಿಮಾನ ಇಲ್ಲವೇ ಕೀಳರಿಮೆ ಬೆಳೆಸಿಕೊಂಡಿರುತ್ತಾನೆ. ಆದರೆ, ಇದರ ಒಳಗೊಂದು ವಿಸ್ಮಯದಿಂದ ಕೂಡಿದ ಭವ್ಯ ವಿಶ್ವವೇ ಅಡಗಿರುವುದು ಗೊತ್ತಿಲ್ಲ. ಮಾನವ ತನ್ನ ದೇಹದ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಾ ಹೋದಲ್ಲಿ, ಆತನ ಚಿಂತನಾ ವಿಧಾನ ಬೇರೆಯದೇ ಆಯಾಮಕ್ಕೆ ವಿಸ್ತರಿಸಬಲ್ಲದು. ಆತ ಸಹಜೀವಿಗಳೊಂದಿಗೆ ವ್ಯವಹರಿಸುವ ರೀತಿಯೇ ಬೇರೆಯದಾಗಲೂಬಹುದು.

ADVERTISEMENT

ದೇಹವೆಂದರೆ ಕೇವಲ ನರ–ನಾಡಿ, ರಕ್ತ–ಮಾಂಸ, ಯೋಚನೆ, ತಲೆ ಬೇನೆಗಳ ಮೂಟೆಯಲ್ಲ. ಅದು ವೈದ್ಯ ವಿಜ್ಞಾನ, ಭೌತ ವಿಜ್ಞಾನ, ಮೆಕ್ಯಾನಿಕ್ಸ್‌, ರಸಾಯನ ವಿಜ್ಞಾನ, ಗಡಿಯಾರ, ಪ್ರಕೃತಿ ಹೀಗೆ ವಿಜ್ಞಾನ ಮತ್ತು ಗಣಿತಗಳ ಸಂಯೋಜಿತ ಸುಸಂಬದ್ಧ ಮೊತ್ತ. ಅಲ್ಲಿ ವಿದ್ಯುತ್‌ ಪ್ರವಾಹವಿರುತ್ತದೆ. ವಿವಿಧ ಕೋಶಗಳ ಮಧ್ಯೆ ಸಂವಹನ ನಡೆಯುತ್ತದೆ. ಎಲ್ಲವೂ ಅಚ್ಚುಕಟ್ಟು ಮತ್ತು ಶಿಸ್ತುಬದ್ಧ. ಒಂದು ಸಿಗ್ನಲ್‌ ತಪ್ಪಾದರೆ, ವಿದ್ಯುತ್‌ ಸರ್ಕಿಟ್‌ನಲ್ಲಿ ವ್ಯತ್ಯಾಸವಾದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ರಾಸಾಯನಿಕ ಸ್ರವಿಸಿದರೆ ಎಲ್ಲವೂ ಅಸ್ತವ್ಯಸ್ತ! ಹೀಗೆ ಇಡೀ ದೇಹವನ್ನು ಬಿಡಿ ಬಿಡಿಯಾಗಿ, ಅದರ ಒಳಲೋಕವನ್ನು ಹೊಕ್ಕು ಮನ ಮುಟ್ಟುವಂತೆ ಅನಾವರಣಗೊಳಿಸುತ್ತಾ ಸಾಗುವ ಮತ್ತು ಸೋಜಿಗ ಹುಟ್ಟಿಸುವ ಕೃತಿಯೇ ‘ನಮ್ಮ ದೇಹದ ವಿಜ್ಞಾನ’. ಮಾನವ ದೇಹದ ಕುರಿತ 40 ಲೇಖನಗಳ ಸಚಿತ್ರ ಸಂಪುಟವನ್ನು ಡಾ.ಟಿ.ಆರ್‌.ಅನಂತರಾಮು ಮತ್ತು ಡಾ.ನಾ.ಸೋಮೇಶ್ವರ ಸಂಪಾದಿಸಿದ್ದಾರೆ.

ಧರೆಯ ಸಕಲ ಚರಾಚರ ವಸ್ತುಗಳಿಗೂ ನಮ್ಮ ದೇಹಕ್ಕೂ ಮತ್ತು ನಮ್ಮನ್ನು ಒಡಲಲ್ಲಿ ಹುದುಗಿಸಿಕೊಂಡಿರುವ ವಿಶ್ವಕ್ಕೂ ವ್ಯತ್ಯಾಸವಿಲ್ಲ. ‘ಇಡೀ ವಿಶ್ವವೇ ಪರಮಾಣುಗಳಿಂದ ಆಗಿದೆ. ಈ ವಿಶ್ವವನ್ನು 92 ಪರಮಾಣುಗಳು ರೂಪಿಸಿದ್ದರೆ, ನಮ್ಮ ದೇಹವನ್ನು 60 ಪರಮಾಣುಗಳು ನಿರ್ಮಿಸಿವೆ. ವಿಶ್ವವು ರೂಪುಗೊಂಡ ಸಂದರ್ಭದಲ್ಲಿ ಎಲ್ಲ ಪರಮಾಣುಗಳೂ ಅಂತರಿಕ್ಷದಲ್ಲಿ ತೇಲುತ್ತಿದ್ದವು. ಹೀಗೆ ತೇಲುತ್ತಿದ್ದ ಪರಮಾಣುಗಳಲ್ಲಿ ಆಕ್ಸಿಜನ್‌, ಕಾರ್ಬನ್‌, ಹೈಡ್ರೋಜನ್ ಮತ್ತು ನೈಟ್ರೋಜನ್ ಪ್ರಮುಖವಾದವು. ಆದಿ ಅಂತರಿಕ್ಷದಲ್ಲಿ ಸಿಡಿಲು ಹೊಡೆಯಿತು. ಆಗ ಹೊಮ್ಮಿದ ಅಗಾಧ ಶಾಖದಲ್ಲಿ ಪರಮಾಣುಗಳು ವಿವಿಧ ಕ್ರಮಗತಿಯಲ್ಲಿ ಸಂಯೋಜನೆಗೊಂಡವು. ಹೊಸ ಅಣುಗಳನ್ನು ಸೃಷ್ಟಿಸಿದವು’. ಈ ಹಂತದಲ್ಲಿ ಆದಿಜೀವಿಯ ಸೃಷ್ಟಿ ಆಗಿದ್ದು ಹೇಗೆ? ಈ ಮೂಲ ‘ಪುರುಷ’ನಿಂದಲೇ ಆರಂಭಿಸಿ ಈ ಕೃತಿಯ ಯಾನ ಆರಂಭವಾಗುತ್ತದೆ. ಶಾಲೆ ಮತ್ತು ಕಾಲೇಜು ಹಂತಗಳಲ್ಲಿ ಅತ್ಯಂತ ನೀರಸವೆಂದು ಭಾವಿಸಿ ಓದಿದ್ದ ಮಾನವ ದೇಹದ ಕುರಿತ ವಿಜ್ಞಾನದ ಪಾಠಗಳ ಮುಂದುವರೆದ ಮತ್ತು ಆಳವಾದ ತಿಳಿವಳಿಕೆಯನ್ನು ಈ ಕೃತಿ ಕಟ್ಟಿಕೊಡುತ್ತದೆ. ಕೌತುಕಭರಿತ ಬರಹಗಳು, ಅವಕ್ಕೆ ಪೂರಕವಾದ ಚಿತ್ರಗಳಿಂದ ಕೂಡಿದ ಈ ಹೊತ್ತಗೆ ಆಂಗ್ಲ ಭಾಷೆಯಯಾವುದೇ ವಿಜ್ಞಾನದ ಎನ್‌ಸೈಕ್ಲೊಪೀಡಿಯಾವನ್ನೂ ಸರಿಗಟ್ಟಬಲ್ಲ ಕೃತಿ.

ಮಾನವ ದೇಹದಲ್ಲಿ ಎಲ್ಲ ಅಂಗಾಂಗಗಳೂ ಬಹುಮುಖ್ಯವೇ ಆದರೂ ಅಗ್ರಪಟ್ಟ ಮಾತ್ರ ಮಿದುಳಿಗೆ. 87 ಲಕ್ಷ ಜೀವರಾಶಿಗಳಲ್ಲಿ ಮಾನವನನ್ನು ಭಿನ್ನವಾಗಿ ಮತ್ತು ಎತ್ತರದಲ್ಲಿ ನಿಲ್ಲಿಸುವುದು ಇದೇ ಕಾರಣಕ್ಕಾಗಿ. ಯೋಚಿಸುವ, ತರ್ಕಿಸುವ, ನಿರ್ಮಿಸುವ ಶಕ್ತಿ ಬಂದಿದ್ದೂ ಮಿದುಳಿನ ವಿಕಾಸದಿಂದಲೇ, ಹೀಗಾಗಿ ಭೂಮಿಯ ಏಳೂ ಅದ್ಭುತಗಳಿಗಿಂತ ಮಿಗಿಲಾದ ಅದ್ಭುತವೆಂದರೆ, ಆ ಏಳೂ ಅದ್ಭುತಗಳನ್ನು ಸೃಷ್ಟಿಸಿದ ಮಾನವ ಮಿದುಳು. ‘ಸೂಪರ್‌ ಕಂಪ್ಯೂಟರ್‌’ ಮನುಷ್ಯ ಮಿದುಳಿಗಿಂತಲೂ ಅದ್ಭುತ ರಚನೆ ಎನ್ನುತ್ತಾರೆ. ಆದರೆ, ಮಾನವ ಮಿದುಳು ಸೂಪರ್‌ ಕಂಪ್ಯೂಟರ್‌ಗೂ ಸಾಟಿಯಿಲ್ಲದ ಸೂಪರ್‌ ಕಂಪ್ಯೂಟರ್. ಇದನ್ನು ಮನದಟ್ಟು ಮಾಡಿಕೊಂಡರೆ ಮಿದುಳಿನ ವಿರಾಟ್‌ ರೂಪವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಅದರ ಸಮಗ್ರ ವಿವರ ಇಲ್ಲಿದೆ.

ದೇಹದಲ್ಲಿ ಜೀವಕೋಶಗಳದ್ದೇ ಒಂದು ಅದ್ಭುತ ಜಗತ್ತು. ಅವು ಯಾವ ಅಥವಾ ಯಾರ ಆಳ್ವಿಕೆಗೂ ಒಳಪಡುವುದಿಲ್ಲ. ಅವು ಸರ್ವಸ್ವತಂತ್ರ. ಈ ಜೀವಕೋಶಗಳು ಪರಸ್ಪರ ಸಂವಹನ ನಡೆಸುತ್ತವೆ. ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಆ ವ್ಯಕ್ತಿ ಜಗತ್ತಿಗೇ ಸರ್ವಾಧಿಕಾರಿಯಾಗಿದ್ದರೂ ಆತನ ದೇಹದ ಕೋಶಗಳಿಗೆ ಯಾವತ್ತಿಗೂ ಆತ ಒಡೆಯನಾಗಲು ಸಾಧ್ಯವಿಲ್ಲ. ದೇಹವೆಂದರೆ ಅದೊಂದು ಸುವ್ಯವಸ್ಥಿತ ಜೈವಿಕ ಕ್ರಿಯೆಯ ಜಾಲ. ಇದರ ರಕ್ಷಣೆಗೆ ಒಂದು ಸೇನಾ ಪಡೆಯೇ ಇದೆ. ಅದೂ ಬೇರೇನೂ ಅಲ್ಲ, ರೋಗ ನಿರೋಧಕ ವ್ಯವಸ್ಥೆ. ಇವುಗಳಲ್ಲಿ ಎರಡು ವಿಧ. ಒಂದು ಜನ್ಮದತ್ತ ರೋಗರಕ್ಷಣಾ ವ್ಯವಸ್ಥೆ, ಇದು ಪಿತ್ರಾರ್ಜಿತ ಆಸ್ತಿಯಂತೆ. ಇನ್ನೊಂದು ಸ್ವಯಾರ್ಜಿತ ರಕ್ಷಣಾ ವ್ಯವಸ್ಥೆ. ಈ ರಕ್ಷಣೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸ್ವಪ್ರಯತ್ನದಿಂದ ಗಳಿಸಿಕೊಳ್ಳಬೇಕಾಗುತ್ತದೆ. ಇಂತಹ ಮಾಹಿತಿ ಈ ಕೃತಿಯಲ್ಲಿ ಸಿಕ್ಕುತ್ತದೆ.

ಇನ್ನು ರಸಾಯನ ವಿಭಾಗಕ್ಕೆ ಬಂದರೆ, ಇಡೀ ದೇಹವೇ ರಾಸಾಯನಿಕಗಳ ಸಾಗರ. ಪ್ರೀತಿ, ಕೋಪ, ಅಸೂಯೆ ಸೇರಿದಂತೆ ‘ನವರಸ’ಗಳಿಗೂ ಕೆಮಿಸ್ಟ್ರಿಯೇ ಬಾಸು! ಮನೆಯಲ್ಲಿ ಗಂಡ– ಹೆಂಡತಿಯ ಕದನದಿಂದ ಹಿಡಿದು ಜಾಗತಿಕ ಯುದ್ಧದವರೆಗೆ, ಈಗಿನ ಭಯೋತ್ಪಾದನೆ, ಮತಾಂಧತೆ, ವಿವಿಧ ರೀತಿಯ ‘ಸಂಘರ್ಷ’ಗಳಿಗೆ ಮಾನವ ಮಿದುಳಿನ ಅಖಾಡದಲ್ಲಿ ನಡೆಯುವ ರಾಸಾಯನಿಕಗಳ ಘೋರ ಮಥನವೇ ಕಾರಣ. ಅದೇ ರೀತಿ ಜಗತ್ತಿಗೆ ಶಾಂತಿ, ಪ್ರೀತಿ ಮತ್ತು ಅಹಿಂಸೆಯ ಅನುಭೂತಿ ನೀಡಿದ ಬುದ್ಧನ ‘ಸಾಕ್ಷಾತ್ಕಾರ’ಕ್ಕೂ ಮಿದುಳಿನ ರಾಸಾಯನಿಕವೇ ಕಾರಣ. ಶಾಂತಿ–ಕ್ರಾಂತಿ ಇವೆರಡಕ್ಕೂ ಕಾರಣವಾಗುವ ರಾಸಾಯನಿಕಗಳು ಅಕ್ಕಪಕ್ಕದಲ್ಲೇ ಇವೆ. ಅಂದರೆ ಮಿದುಳಿನಲ್ಲೇ! ಆಯ್ಕೆ ಮಾತ್ರ ನಮ್ಮದು. ಮಾನವ ದೇಹ ನೋಡಲು ಒಂದೇ ಎನಿಸಿದರೂ ಡಿಎನ್ಎ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದನ್ನು ಆಧರಿಸಿ, ಎತ್ತರ, ಬಣ್ಣ, ಕೂದಲು ಸೇರಿಯೇ ‘ವ್ಯಕ್ತಿತ್ವ’ ರೂಪುಗೊಳ್ಳುತ್ತದೆ. ಹೀಗಾಗಿ ವ್ಯಕ್ತಿತ್ವ, ಬುದ್ಧಿಮತ್ತೆ ಭಿನ್ನವಾಗಿರುತ್ತವೆ. ಕೊನೇ ಅಧ್ಯಾಯ ‘ಪ್ರಕೃತಿ ಎಡವಿದ್ದೆಲ್ಲಿ’ ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಪ್ರಕೃತಿ ಎಲ್ಲ ಮನುಷ್ಯರನ್ನು ಅಥವಾ ಜೀವಿಗಳನ್ನು ‘ಪರಿಪೂರ್ಣ’ವಾಗಿ ದೋಷರಹಿತವಾಗಿ ಸೃಷ್ಟಿಸುವಂತಾದರೆ, ಪ್ರಕೃತಿ ಎನ್ನಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ.

ಪ್ರತಿಯೊಂದು ಜ್ಞಾನಶಿಸ್ತಿನ ವಿದ್ಯಾರ್ಥಿಯೂ ಓದಿ ಮತ್ತು ಸಂಗ್ರಹಿಸಿಟ್ಟುಕೊಳ್ಳಬೇಕಾದ ಕೃತಿ ಇದಾಗಿದೆ. ಕನ್ನಡ ಮಾಧ್ಯಮದಲ್ಲಿ ವೈದ್ಯ ವಿಜ್ಞಾನ ಅಥವಾ ಎಂಜಿನಿಯರಿಂಗ್‌ ಪಠ್ಯ ತಯಾರಿಸುವುದು ಕಷ್ಟ ಎಂದು ಮೂಗು ಮುರಿಯುವವರಿಗೆ, ‘ನಮ್ಮ ದೇಹದ ವಿಜ್ಞಾನ’ ದಿಟ್ಟ ಉತ್ತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.