ADVERTISEMENT

ಪುಸ್ತಕ ವಿಮರ್ಶೆ: ತೆರೆಮರೆಯ ಜಗತ್ತಿಗೆ ಸರ್ಚ್‌ಲೈಟ್‌!

ಪದ್ಮನಾಭ ಭಟ್ಟ‌
Published 23 ಜನವರಿ 2021, 19:30 IST
Last Updated 23 ಜನವರಿ 2021, 19:30 IST
ಜೂಜು
ಜೂಜು   

ಹೆ: ಜೂಜು (ಕಾದಂಬರಿ)
ಲೇ: ಲೇ: ಕೆ.ಎನ್. ವೆಂಕಟಸುಬ್ಬರಾವ್
ಪ್ರ: ನಿವೇದಿತಾ ಪ್ರಕಾಶನ, ಬೆಂಗಳೂರು
ದೂ: 080- 26543465

‘ಜೂಜು’ ಕೆ.ಎನ್. ವೆಂಕಟಸುಬ್ಬರಾವ್ ಅವರ ಐದನೇ ಕೃತಿ. ಕಥನ ನಡೆಯುವ ಕಾಲಮಾನದ ದೃಷ್ಟಿಯಿಂದಲ್ಲದಿದ್ದರೂ, ವಸ್ತು ಮತ್ತು ನಿರ್ವಹಣೆಯ ದೃಷ್ಟಿಯಿಂದ ಹಿರಿದಾದ ಭಿತ್ತಿಯನ್ನು ಹೊಂದಿರುವ ಕೃತಿ. ಮನುಷ್ಯನೇ ದಾಳವೂ, ದಾಳ ಉರುಳಿಸುವವನೂ ಆಗಿ; ಕುದುರೆಯೂ, ಕುದುರೆ ಓಡಿಸುವವನೂ ಆಗಿಬಿಡುವ ಬದುಕೆಂಬ ಜೂಜಿನ ನಾನಾ ಮುಖಗಳನ್ನು ಕಾಣಿಸುತ್ತದೆ.

ಹೆಸರುಗಳನ್ನು ನೆನಪಿಟ್ಟುಕೊಳ್ಳಲೂ ಕಷ್ಟವಾಗುವಷ್ಟು ಸಂಖ್ಯೆಯಲ್ಲಿರುವ ಪಾತ್ರಗಳಲ್ಲಿ, ವಂಚಕರಿದ್ದಾರೆ, ಅಮಾಯಕರಿದ್ದಾರೆ, ಮುಗ್ಧರಿದ್ದಾರೆ, ಪ್ರಾಮಾಣಿಕರಿದ್ದಾರೆ, ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬದುಕೆಂಬ ಪರಮಪದಸೋಪಾನಪಟದ ಏಣಿಯಲ್ಲಿ ಸರಸರನೇ ಮೇಲೇರಿ ಬರುವ ಚಾಲಾಕಿಗಳಿದ್ದಾರೆ, ತನ್ನ ಏಳಿಗೆಗಾಗಿ ಇನ್ನೊಬ್ಬರನ್ನು ಹಾವಿನ ಬಾಯಿಗೆ ಬಲಿಕೊಡುವ ಕ್ರೂರಿಗಳಿದ್ದಾರೆ, ಎಲ್ಲವನ್ನೂ ನುಂಗಿಕೊಂಡು, ತನ್ನ ಬೆನ್ನಿಗೆ ಚೂರಿಯಿಟ್ಟವರನ್ನೂ ಕ್ಷಮಿಸಿಬಿಡುವ ಪರಮ ಉದಾರಿಗಳೂ ಇದ್ದಾರೆ.

ADVERTISEMENT

ಅರೆಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿರುವ ವ್ಯಕ್ತಿಯೊಬ್ಬನ ಬಡಬಡಿಕೆಯಿಂದ ಈ ಕಾದಂಬರಿ ಆರಂಭವಾಗುತ್ತದೆ. ಅಲ್ಲಿಂದ ಆಸ್ಪತ್ರೆಯ ರಾಜಕಾರಣ, ಜೀವಉಳಿಸುವ ಜಾಗದ ನೆರಳಡಿಯಲ್ಲಿ ನಡೆಯುವ ಜೀವವಿರೋಧಿ ಚಟುವಟಿಕೆಗಳನ್ನು ಕಾಣಿಸುತ್ತ ಹೋಗುತ್ತದೆ. ಆದರೆ, ನಂತರ ಅದು ಕಾರ್ಮಿಕ ಸಂಘಟನೆ, ರಿಯಲ್‌ಎಸ್ಟೇಟ್, ರಾಜಕಾರಣ ಎಲ್ಲವನ್ನೂ ಹಾದು ಸಿನಿಮಾಕ್ಷೇತ್ರಕ್ಕೆ ಬಂದುನಿಲ್ಲುತ್ತದೆ. ಸಮಾಜದ ಬೇರೆ ಬೇರೆ ವಲಯಗಳಲ್ಲಿ ಪಾತ್ರಗಳ ಕಂಬ ನೆಟ್ಟ ಲೇಖಕರು ಅದರ ಮೂಲಕ ಒಂದು ಕಾಲಘಟ್ಟದ ಸ್ಥಿತ್ಯಂತರಗಳಿಗೆ ಕಥನದ ಚಪ್ಪರ ಕಟ್ಟಲು ಯತ್ನಿಸಿದ್ದಾರೆ.

ಈ ಕೃತಿಯ ಕೇಂದ್ರದಲ್ಲಿರುವುದು ಸಿನಿಮಾ ಕ್ಷೇತ್ರ. ಸಿನಿಮಾ ನಿರ್ಮಾಣಕ್ಕೂ ಜೂಜಿಗೂ ಹಲವು ಸಾಮ್ಯತೆಗಳಿವೆ. ಎರಡರಲ್ಲಿಯೂ ಜಾಣ್ಮೆ ಎಷ್ಟು ಮುಖ್ಯವೋ ಅಷ್ಟೇ ಅದೃಷ್ಟವೂ ಮುಖ್ಯ. ಅಸಂಖ್ಯರ ಸೋಲು ಗೆಲುವುಗಳೆರಡನ್ನೂ ಬಳಸಿಕೊಂಡು, ಹಗಲಿನ ಬೆಳಕು ಮತ್ತು ನಟ್ಟಿರುಳಿನ ಕತ್ತಲು ಎರಡರಲ್ಲಿಯೂ ಕಾಲೂರಿ ಬಣ್ಣದ ಲೋಕ ಬೆಳೆಯುತ್ತಿರುತ್ತದೆ. ಈ ಕೃತಿಯ ಮುಖ್ಯಭೂಮಿಕೆಯಲ್ಲಿ ತಮಿಳು ಚಿತ್ರರಂಗವಿದ್ದರೂ, ಅದು ಯಾವುದೇ ಚಿತ್ರರಂಗದ ಚಹರೆಗೂ ಹೋಲುವಂಥದ್ದು. ಅಲ್ಲಿನ ವರ್ಚಸ್ಸು, ವಂಚನೆ, ದ್ರೋಹ, ಚಾಲಾಕಿತನ, ಪ್ರತಿಭೆ, ಹುಂಬತನ, ಅಸಹಾಯಕತೆ, ಅಭಿಮಾನ ಮತ್ತು ಎಲ್ಲವನ್ನೂ ಆಳುವ ಹಣದ ಹೊಳೆ... ಇದು ಭಾರತದ ಯಾವುದೇ ಚಿತ್ರರಂಗದ ಚಹರೆಯೂ ಹೌದು. ಹಾಗಾಗಿ ವಸ್ತುವಿನ ವಿಷಯದಲ್ಲಿ ‘ಜೂಜು’, ಕನ್ನಡಕ್ಕೆ ಭಿನ್ನವಷ್ಟೇ ಅಲ್ಲ, ಅಪರೂಪದ್ದೂ ಹೌದು.

ನಿರೂಪಣೆಯ ಕ್ರಮದಲ್ಲಿಯೂ ಸಿನಿಮೀಯ ಗುಣವಿದೆ. ಸಸ್ಪೆಸ್ಸ್ ಥ್ರಿಲ್ಲರ್‌ನ ನಡೆಯಿದೆ. ಒಂದು ಸಿನಿಮಾ ನೋಡಿಬಂದು ನಮ್ಮ ಸ್ನೇಹಿತರಿಗೆ ಸೀನ್ ಬೈ ಸೀನ್ ಕಥೆ ಹೇಳುತ್ತೇವಲ್ಲ, ಆ ಧಾಟಿಯಿದೆ. ಈ ‘ಹೇಳುಗುಣ’ವೇ ಕಾದಂಬರಿಯ ಮಿತಿಯೂ ಆಗಿದೆ. ಒಂದಾದ ನಂತರ ಒಂದು ಘಟನೆಗಳನ್ನು ಸರಸರಸರನೇ ಪೋಣಿಸುತ್ತ ಹೋಗುವ ಲೇಖಕರಿಗೆ, ಅದಕ್ಕೆ ಆಪ್ತವೆನಿಸುವ ಆವರಣವನ್ನು ಕಟ್ಟಲು ಪೂರ್ತಿಯಾಗಿ ಸಾಧ್ಯವಾಗಿಲ್ಲ. ಒಂದು ಬಗೆಯ ‘ಅನ್ಯಮನಸ್ಕ’ವಾಗಿಯೇ ಕಾದಂಬರಿ ಓದಬೇಕಾಗುತ್ತದೆ. ಕಾದಂಬರಿಯ ಬಹುತೇಕ ಕಥೆ ಘಟಿಸುವುದು ಕನ್ನಡೇತರ ಜಾಗದಲ್ಲಿ. ಇಲ್ಲಿ ಬರುವ ಪಾತ್ರಗಳೂ ಕನ್ನಡೇತರವೇ. ಇದೂ ಕನ್ನಡದ ಓದುಗರಿಗೆ ‘ಅನ್ಯ’ ಅನಿಸಲು ಕಾರಣವಾಗಿದ್ದೀತು. ಪದೇ ಪದೇ ಬರುವ ತಮಿಳು ಸಂಭಾಷಣೆಗಳು (ಅದಕ್ಕೆ ಕನ್ನಡ ಅನುವಾದವನ್ನು ಕೊಟ್ಟಿಲ್ಲ) ಕಿರಿಕಿರಿ ಹುಟ್ಟಿಸುತ್ತವೆ.

ಸಮಾಜದ ಬೇರೆ ಬೇರೆ ವಲಯಗಳನ್ನು ಬಹಳ ಅಧಿಕೃತವೆನ್ನಿಸುವ ಹಾಗೆ ದಾಖಲಿಸುವುದು ಈ ಕಾದಂಬರಿಯ ಹೆಚ್ಚುಗಾರಿಕೆ. ಬಂಡವಾಳಶಾಹಿಗಳ ಕೈಗೆ ಸಿಲುಕಿ ನಾಶವಾಗುತ್ತಿರುವ ಕಾರ್ಮಿಕ ಸಂಘಟನೆಗಳ ಅವನತಿ, ವೈದ್ಯಕೀಯ ಲೋಕದ ಬೆಚ್ಚಿಬೀಳಿಸುವ ಕಟುಸತ್ಯಗಳು, ಸಿನಿಮಾ ಜಗತ್ತಲ್ಲಿ ಅನುದಿನವೂ ನಡೆಯುವ ‘ದೋ ನಂಬರ್’ ವ್ಯವಹಾರಗಳ ಜಗತ್ತನ್ನು ಈ ಕಾದಂಬರಿ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಆದರೆ ಹೀಗೆ ಬಿಚ್ಚಿಡುವುದರ ಆಚೆಗೆ ಬದುಕಿನ ಆಳಸತ್ಯಗಳನ್ನು ಧ್ವನಿಸುವ ‘ದರ್ಶನ’ ಈ ಕೃತಿಗೆ ದಕ್ಕಿಲ್ಲ. ಜೂಜು ಮತ್ತು ಚಿತ್ರರಂಗದ ವಹಿವಾಟುಗಳನ್ನು ಹಲವು ಕಡೆಗಳಲ್ಲಿ ವಾಚ್ಯವಾಗಿಯೇ ಲೇಖಕರು ಸಮೀಕರಿಸಲು ಯತ್ನಿಸಿದ್ದರೂ ಅದು ಕೃತಿಯೊಳಗೆ ಸಾವಯವವಾಗಿ ಹುಟ್ಟಿ ಮನಸೊಳಗೆ ರಿಂಗಣಿಸುವುದಿಲ್ಲ. ಪದೇ ಪದೇ ಎದುರಾಗುವ ಕಾಗುಣಿತ ದೋಷಗಳೂ ಕೃತಿಯ ಸರಾಗ ಓದಿಗೆ ಅಡಚಣೆ ಉಂಟುಮಾಡುತ್ತವೆ.

ಇಂಥ ಕೆಲವು ಮಿತಿಗಳ ನಡುವೆಯೂ, ‘ಜೂಜು’ ಒಂದು ಕಾಲಘಟ್ಟವನ್ನು, ಜನರಿಗೆ ಅಪರಿಚಿತವಾಗಿಯೇ ಉಳಿಯುವ ‘ತೆರೆಮರೆಯ ಜಗತ್ತಿನ’ ಚಹರೆಗಳನ್ನು ದಾಖಲಿಸುವ ಕಾರಣಕ್ಕೆ ಮಹತ್ವದ ಪ್ರಯತ್ನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.