ADVERTISEMENT

ಮೊದಲ ಓದು: ಮರಾಠಿ ಮಣ್ಣಿನ ಕನ್ನಡ ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ತಮಾಶಾ ಕೃತಿಯ ಮುಖಪುಟ
ತಮಾಶಾ ಕೃತಿಯ ಮುಖಪುಟ   

ಮಹಾರಾಷ್ಟ್ರದಲ್ಲಿ ಬಹುಜನಪ್ರಿಯ ಜನಪದ ನಾಟಕ ಪ್ರಕಾರವಾಗಿದೆ ಲೋಕನಾಟ್ಯ ತಮಾಶಾ. ಈ ರಂಗ ಪ್ರಕಾರಕ್ಕೆ ಸುಮಾರು ಮೂರು ಶತಮಾನಗಳಷ್ಟು ದೀರ್ಘ ಚರಿತ್ರೆಯಿದೆ. ಪೇಶ್ವೆಗಳ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ಏರಿದ ತಮಾಶಾ ಇಂದಿಗೂ ಅದೇ ಮಹತ್ವವನ್ನು ಉಳಿಸಿಕೊಂಡುಬಂದಿದೆ. ಸಂಸ್ಕೃತ ಭೂಯಿಷ್ಟವಾಗಿದ್ದ ಮರಾಠಿ ನಾಟ್ಯ ಸಂಗೀತದ ನಾಟಕಗಳಿಗೆ ಜನಸಾಮಾನ್ಯರಿಂದ ಪರ್ಯಾಯವಾಗಿ ಹುಟ್ಟಿಕೊಂಡ ಪ್ರಕಾರವನ್ನಾಗಿಯೂ ಇದನ್ನು ನೋಡಲಾಗುತ್ತದೆ. ಅಂತಹ ತಮಾಶಾ, ಡಿ.ಎಸ್‌. ಚೌಗಲೆ ಅವರ ಮೂಲಕ ಈಗ ಕನ್ನಡಕ್ಕೆ ಬಂದಿದೆ.

ಮೂಲತಃ ಅಧ್ಯಾತ್ಮವನ್ನೇ ತಮಾಶಾ ಕೇಂದ್ರೀಕರಿಸಿದ್ದುಂಟು. ಆದರೆ, ಈಗಿನ ಪ್ರಯೋಗಗಳಿಗೆ ಲೌಕಿಕವೇ ಪ್ರಧಾನವಸ್ತು. ರಂಗ ಪ್ರಯೋಗದ ದೃಷ್ಟಿಯಿಂದಲೂ ಹಲವು ಸಾಧ್ಯತೆಗಳನ್ನು ಹುಡುಕಿದ ಪ್ರಕಾರ ಇದಾಗಿದೆ. ಮೊದಲು ಬಯಲಿನಲ್ಲೇ ಆಟಗಳು ನಡೆಯುತ್ತಿದ್ದವು. ಹಿಲಾಲುಗಳೇ ಈ ಪ್ರಯೋಗಗಳಿಗೆ ಬೆಳಕಿನ ವ್ಯವಸ್ಥೆ ಮಾಡುತ್ತಿದ್ದವು. ಬರುಬರುತ್ತಾ ರಂಗ ಮಂದಿರಗಳಲ್ಲೂ ತಮಾಶಾ ಜಯಭೇರಿ ಬಾರಿಸಿತು. ‘ತಮಾಶಾ’ ಹೆಸರಿನ ಪ್ರಸ್ತುತ ನಾಟಕವಾದರೂ ರಂಗಾಯಣದ ಪ್ರಯೋಗಕ್ಕಾಗಿ ತಯಾರಾದದ್ದು. ರಂಗಾಯಣದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ನಾಟಕೋತ್ಸವಗಳಲ್ಲೂ ಯಶಸ್ವಿಯಾಗಿ ಪ್ರದರ್ಶನ ಕಂಡಿರುವಂಥದ್ದು.

ಕನ್ನಡ–ಮರಾಠಿ ಭಾಷೆಗಳ ನಡುವಿನ ಕೊಡು–ಕೊಳ್ಳುವಿಕೆಯ ಕೊಂಡಿಯಂತಿರುವ ಚೌಗಲೆ, ಏಳು ಮರಾಠಿ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅವರ ಆ ಅನುಭವ ‘ತಮಾಶಾ’ದ ಆಟ ಕಟ್ಟುವಲ್ಲೂ ನೆರವಿಗೆ ಬಂದಿದೆ. ಗ್ರಾಮೀಣ ಭಾಗದ ಜನಸಾಮಾನ್ಯರ ನಿತ್ಯದ ಬದುಕನ್ನೇ ಕಥಾವಸ್ತುವನ್ನಾಗಿ ಹೊಂದಿದ ಈ ನಾಟಕ, ತನ್ನ ಜವಾರಿ ಭಾಷೆಯಿಂದ ಗಮನ ಸೆಳೆಯುತ್ತದೆ. ಹಾಗೆ ಜವಾರಿತನದಿಂದ ಕಥೆ ಸಾಗುವಾಗ ಕೆಲವು ಸಂಭಾಷಣೆಗಳು ಪ್ರೇಕ್ಷಕರಿಗೆ ಅಶ್ಲೀಲವಾಗಿ ಕಂಡರೆ ಅದು ‘ತಮಾಶಾ’ದ ತಪ್ಪಲ್ಲ!

ADVERTISEMENT

‘ಲಾಡಿ ಎಳಿ ಚಡ್ಡಿ ಕಳಿ, ಲಾಡಿ ಎಳಿ ಚಡ್ಡಿ ಕಳಿ’

‘ಹಾಂ, ನಾನ್‌ ಅವನಿಗೆ ತಿಳಿಸಿ ಹೇಳ್ದೆ. ಮಗನ ಹಾಗೆಲ್ಲ ಲಾಡಿ ಎಳೆಯೋದು, ಚಡ್ಡಿ ಕಳೆಯೋದು ಮಾಡಬೇಡಪ್ಪಾ, ಬೊಂಬಾಯಿ ಕಾಣತೈತಿ ಅಂತ’

– ಆ ತರಹದಸಂಭಾಷಣೆಗಳ ಕೆಲವು ಝಲಕ್‌ಗಳು ಇವು. ಆದರೆ, ಇಡೀ ತಮಾಶಾ, ಚುಟುಕಾದ, ಚುರುಕಾದ ಸಂಭಾಷಣೆಗಳ ಮೂಲಕ ಸರಾಗವಾಗಿ ಸಾಗುತ್ತದೆ. ಕುರಿ ಕಾಯೋರು, ಗೌಳಣರ ಮಾತುಗಳು ಕಚಗುಳಿ ಇಡುತ್ತವೆ. ಹಾಗೆಯೇ ಚಿಂತನೆಗೂ ಹಚ್ಚುತ್ತವೆ. ಸಹಜವಾಗಿಯೇ ಮರಾಠಿ ಪ್ರಭಾವ ದಟ್ಟವಾಗಿದ್ದರೂ ಕನ್ನಡದ ಜಾಯಮಾನಕ್ಕೆ ಹೊಂದುವ ಗಮ್ಮತ್ತು ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.