ADVERTISEMENT

ಪುಸ್ತಕ ವಿಮರ್ಶೆ: ಸೈದ್ಧಾಂತಿಕ ಚೌಕಟ್ಟಿನಲ್ಲಿ ಕಂಡ ವ್ಯಕ್ತಿಬಿಂಬ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:30 IST
Last Updated 2 ಜನವರಿ 2021, 19:30 IST
ಸೈದ್ಧಾಂತಿಕ ಚೌಕಟ್ಟಿನಲ್ಲಿ ಕಂಡ ವ್ಯಕ್ತಿಬಿಂಬ
ಸೈದ್ಧಾಂತಿಕ ಚೌಕಟ್ಟಿನಲ್ಲಿ ಕಂಡ ವ್ಯಕ್ತಿಬಿಂಬ   

ಸಾರ್ವಕರ್‌: ಹಿಂದುತ್ವದ ಜನಕನ ನಿಜಕತೆ
ಲೇ: ವೈಭವ್‌ ಪುರಂದರೆ
ಕನ್ನಡಕ್ಕೆ: ಬಿ.ಎಸ್‌. ಜಯಪ್ರಕಾಶ ನಾರಾಯಣ
ಪ್ರ: ವಸಂತ ಪ್ರಕಾಶನ
ದೂ: 080 22443996
ಪುಟಗಳು: 480
ಬೆಲೆ: 380

***

ಪ್ರಮುಖ ಘಟನೆಯೊಂದು ಕಾಲಾಂತರದಲ್ಲಿ ಜನರ ಬಾಯಿಗೆ ಸಿಲುಕಿ ರೂಪಾಂತರ ಹೊಂದುವುದು, ಅವರವರ ಭಾವಕ್ಕೆ ತಕ್ಕಂತೆ ದಕ್ಕುತ್ತಾ ಹೋಗಿ, ಕೊನೆಗೆ ಅದರ ಮೂಲ ಸ್ವರೂಪವೇ ಮುಕ್ಕಾಗಿಬಿಡುವುದು ಅಸಹಜವಾದ ಸಂಗತಿಯೇನಲ್ಲ. ಇತಿಹಾಸ ಪುರುಷರ ವಿಷಯಕ್ಕೂ ಈ ಮಾತು ಯಥಾರ್ಥವಾಗಿ ಅನ್ವಯಿಸುತ್ತದೆ.

ADVERTISEMENT

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಂಪೂರ್ಣ ಪೂರ್ವಗ್ರಹಪೀಡಿತವಾಗಿ ಅನಾರೋಗ್ಯಕರ ರಾಜಕೀಯ ವ್ಯವಸ್ಥೆಯನ್ನೂ ತನ್ಮೂಲಕ ದುರ್ಬಲ ಸಾಮಾಜಿಕ ಸ್ಥಿತಿಯನ್ನೂ ಸೃಷ್ಟಿಸಿರುವ ಸಂಕೀರ್ಣವಾದ ಕಾಲಘಟ್ಟ ಇದು. ಇಂತಲ್ಲಿ, ದೇಶದ ಸಂಸ್ಕೃತಿ, ಇತಿಹಾಸವನ್ನು ಭಾರತದ ಸ್ವಾತಂತ್ರ್ಯ ಹೋರಾಟದ ನೆಲೆಯಲ್ಲಿ ತನಗೆ ಬೇಕಾದಂತೆ ಬೇಕಾದ ದೃಷ್ಟಿಕೋನಗಳಿಂದ ನಿರೂಪಿಸುತ್ತಿರುವ ಪ್ರವೃತ್ತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಮಹಾತ್ಮ ಗಾಂಧಿ, ‘ಹಿಂದುತ್ವದ ಅಧ್ವರ್ಯು’ ವಿನಾಯಕ ದಾಮೋದರ ಸಾವರ್ಕರ್‌ ಅವರ ಕಥೆಯೂ ಹೊರತಲ್ಲ.

ಕ್ರಾಂತಿಕಾರಿ ವ್ಯಕ್ತಿತ್ವದಿಂದ, ವಿವಾದಾತ್ಮಕ ವಿಚಾರಧಾರೆಗಳಿಂದ ತಮ್ಮದೇ ಆದ ಕಟ್ಟಾ ಅಭಿಮಾನಿ ಬಳಗವನ್ನೂ ಕಟು ವಿರೋಧಿ ಪಡೆಯನ್ನೂ ಸಮಪ್ರಮಾಣದಲ್ಲಿ ಕಟ್ಟಿಕೊಂಡಿರುವ ಸಾವರ್ಕರ್‌, ಸಾರ್ವಜನಿಕ ಗ್ರಹಿಕೆಗೆ ನಿಲುಕಿದ್ದು ಕಡಿಮೆಯೇ. ಇದಕ್ಕೆ ತಮ್ಮ ಜೀವಿತಾವಧಿಯ ಬಹುಪಾಲನ್ನು ಅವರು ಸೆರೆಮನೆಯಲ್ಲೇ ಕಳೆಯಬೇಕಾಗಿ ಬಂದದ್ದು ಕಾರಣವೋ ಜನರೊಟ್ಟಿಗೆ ಹೆಚ್ಚಾಗಿ ಬೆರೆಯದ ಮೂಲಸ್ವಭಾವವು ಅವರ ವ್ಯಕ್ತಿತ್ವದ ಪೂರ್ಣಚಿತ್ರಣವನ್ನು ಹೊರಜಗತ್ತಿಗೆ ಮಸುಕಾಗಿಸಿತೋ ಎನ್ನುವುದು ಜಿಜ್ಞಾಸೆ.

ಪತ್ರಕರ್ತ ವೈಭವ್‌ ಪುರಂದರೆ ಅವರು ಹೊರತಂದಿರುವ ‘ಸಾವರ್ಕರ್‌: ದಿ ಟ್ರೂ ಸ್ಟೋರಿ ಆಫ್‌ ದಿ ಫಾದರ್‌ ಆಫ್‌ ಹಿಂದುತ್ವ’ (ಸಾವರ್ಕರ್‌: ಹಿಂದುತ್ವದ ಜನಕನ ನಿಜಕತೆ) ಕೃತಿ, ಭಿನ್ನ ವ್ಯಕ್ತಿತ್ವವೊಂದರ ನಾನಾ ಮಜಲುಗಳನ್ನು ಅನಾವರಣಗೊಳಿಸುತ್ತದೆ. ಎಂಟು ಸಂಪುಟಗಳಲ್ಲಿರುವ ಸಾವರ್ಕರ್‌ ಅವರ ಮರಾಠಿ ಭಾಷೆಯಲ್ಲಿನ ಬರಹಗಳು, ಅವರ ಬಗೆಗೆ ಸಮಕಾಲೀನರ ಅಭಿಪ್ರಾಯಗಳನ್ನು ಉಲ್ಲೇಖಿಸುವ ಮರಾಠಿ ಪತ್ರಿಕಾ ತುಣುಕುಗಳ ಜೊತೆಗೆ ಸ್ವಾತಂತ್ರ್ಯಪೂರ್ವ ಮತ್ತು ನಂತರದ ದಶಕಗಳ ಭಾರತಕ್ಕೆ ಸಾಕ್ಷಿಯಾಗಿದ್ದ ನೂರಾರು ಪ್ರಮುಖರ ಧ್ವನಿಮುದ್ರಿಕೆಗಳ ಅಧ್ಯಯನಶೀಲ ಬರಹ ಇದಾಗಿದೆ.

ಪ್ರತಿಯೊಂದು ಅಧ್ಯಾಯದ ಕೊನೆಯಲ್ಲೂ ಬರಹದ ವಸ್ತುಸ್ಥಿತಿಗೆ ಪೂರಕವಾದ ಅಡಿಟಿಪ್ಪಣಿಯನ್ನು ಲೇಖಕರು ಕೊಟ್ಟಿದ್ದಾರೆ. ಇದೆಲ್ಲದರ ನಡುವೆಯೂ ಸಾವರ್ಕರ್‌ ಅವರನ್ನು ಉತ್ಪ್ರೇಕ್ಷಿತವಲ್ಲದ ನೆಲೆಯಲ್ಲಿ ನಕಾರಾತ್ಮಕ ಗ್ರಹಿಕೆಗಳ ಒರೆಗೆ ಹಚ್ಚಿ ನೋಡುವುದು ಈ ಪುಸ್ತಕದ ವೈಶಿಷ್ಟ್ಯ.

ಸಾವರ್ಕರ್‌ ಕಾಲಾನಂತರವೂ ಅವರ ಜೀವನಗಾಥೆ ಅಜ್ಞಾತವಾಗಿಯೇ ಉಳಿದುಹೋದದ್ದಕ್ಕೆ ಭಾಷಾ ತೊಡಕು ಪ್ರಮುಖ ಕಾರಣ ಎಂಬುದಂತೂ ವಿಲಕ್ಷಣ ವಾಸ್ತವ. ಸಾವರ್ಕರ್‌ ಅವರ ಬಹುಪಾಲು ಬರವಣಿಗೆ ಮತ್ತು ಭಾಷಣಗಳು ಮರಾಠಿ ಭಾಷೆಯಲ್ಲಿವೆ. ಅವುಗಳಲ್ಲಿ ಕೆಲವಷ್ಟೇ ಇಂಗ್ಲಿಷ್‌ಗೆ ತರ್ಜುಮೆಯಾಗಿವೆ. ಮಹಾರಾಷ್ಟ್ರದ ಕೆಲವು ಪ್ರಾಜ್ಞರು ತಮ್ಮ ಕೃತಿಗಳ ಮೂಲಕ ಅವರ ಜೀವನಚರಿತ್ರೆಯನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರಾದರೂ ಮರಾಠಿ ಭಾಷೆಯಲ್ಲೇ ಇರುವುದು ಅವುಗಳ ಮಿತಿಯೂ ಆಗಿದೆ. ಪುರಂದರೆ ಅವರ ಈ ಇಂಗ್ಲಿಷ್‌ ಕೃತಿ ಅಂತಹ ಮಿತಿಯನ್ನು ಮೀರಿದ್ದರಿಂದ ಮರಾಠಿಯೇತರರು ಸಾವರ್ಕರ್‌ ಅವರನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಅವಕಾಶವಾಗಿದೆ.

ಅಂಡಮಾನ್‌ನ ಸೆಲ್ಯುಲರ್‌ ಜೈಲಿನಲ್ಲಿ ಅಮಾನುಷವಾದ ಕರಿನೀರಿನ ಶಿಕ್ಷೆಗೊಳಗಾಗಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದದ್ದನ್ನೇ ಮುಂದಿಟ್ಟುಕೊಂಡು ಸಾವರ್ಕರ್‌ ಅವರ ಯೋಗ್ಯತೆ ಅಳೆಯುವುದನ್ನು ಟೀಕಿಸಿದಷ್ಟೇ ಮುಕ್ತವಾಗಿ, ಅವರ ಅತಿರೇಕದ ಸಾಮಾಜಿಕ ನಿಲುವುಗಳನ್ನೂ ಬಿಂಬಿಸಿರುವುದರ ಹಿಂದೆ ಪತ್ರಕರ್ತನೊಬ್ಬನ ನಿಷ್ಠುರ ವೃತ್ತಿಪರತೆ ಕೆಲಸ ಮಾಡಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಆಚೆಗೂ ಇದೊಂದು ಪ್ರಮುಖ ಕೃತಿಯಾಗಿ ಗಮನಸೆಳೆಯುತ್ತದೆ.

ಭಾರತದ ಇಂದಿನ ರಾಜಕೀಯ ಸ್ತರದಲ್ಲಿ ಅಗ್ರಸ್ಥಾನ ಪಡೆದಿರುವ ಸಾವರ್ಕರ್‌ ಅವರ ಬಗೆಗಿನ ಪೂರ್ವಗ್ರಹಗಳನ್ನು ದೂರ ಮಾಡಲು, ಅವರ ಬದುಕನ್ನು ಹೊಸದೊಂದು ದೃಷ್ಟಿಕೋನದಿಂದಲೇ ನೋಡಬೇಕಾದ ಅಗತ್ಯವಿದೆ ಎಂದು ಕೃತಿ ಬಲವಾಗಿ ಪ್ರತಿಪಾದಿಸುತ್ತದೆ. ಆದರೆ ‘ಪ್ರಖರ ಹಿಂದುತ್ವವಾದಿ’ ಎಂಬ ಕಾರಣಕ್ಕೇ ಸಾವರ್ಕರ್‌ ಅವರನ್ನು ಇಷ್ಟಪಡುವ ಇಂದಿನ ತಲೆಮಾರು, ಅಂದಿನ ಸಂಪ್ರದಾಯಶೀಲ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದ ಅವರ ಕಟು ವೈಚಾರಿಕ ನಿಲುವುಗಳನ್ನು ಅರಿತು ದ್ವಂದ್ವಕ್ಕೆ ಒಳಗಾದರೆ ಅದು ಲೇಖಕರ ತಪ್ಪಲ್ಲ! ‘ಬಿ.ಎಸ್‌.ಜಯಪ್ರಕಾಶ ನಾರಾಯಣ ಅವರ ಕನ್ನಡಾನುವಾದ ಪುಸ್ತಕದ ಸುಲಭ ಗ್ರಹಿಕೆಗೆ ಅನುವಾಗುವಂತಿದೆ’ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.