ADVERTISEMENT

ಪುಸ್ತಕ ವಿಮರ್ಶೆ: ಮೊದಲ ಪ್ರಧಾನಿಯನ್ನು ಮತ್ತೆ ನೆನೆದು...

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 19:30 IST
Last Updated 27 ಫೆಬ್ರುವರಿ 2021, 19:30 IST
ಕೃತಿಯ ಮುಖಪುಟ
ಕೃತಿಯ ಮುಖಪುಟ   

ಯಾರು ಭಾರತ ಮಾತೆ?
ಮೂಲ
: ಪುರುಷೋತ್ತಮ ಅಗರವಾಲ್‌
ಕನ್ನಡಕ್ಕೆ: ಪ್ರೊ. ಕೆ.ಈ. ರಾಧಾಕೃಷ್ಣ
ಪ್ರ: ಸಪ್ನ
ಸಂ: 080 40114455

***

ಅತೀ ಹೆಚ್ಚು ಚರ್ಚೆಗೊಳಗಾದ ಭಾರತೀಯ ಪ್ರಧಾನಿ ಎಂದರೆ ಅದು ನಿಸ್ಸಂದೇಹವಾಗಿ ಜವಾಹರಲಾಲ್‌ ನೆಹರೂ. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರ ನೀತಿಗಳು, ಕೈಗೊಂಡ ಕ್ರಮಗಳು, ಆಡಳಿತ ಏಳು–ಬೀಳುಗಳು ಇಂದಿನ ಈ ಕಾಲಘಟ್ಟದಲ್ಲೂ ಚರ್ಚೆಗೆ ಒಳಗಾಗುತ್ತಲೇ ಇವೆ. ಅವರನ್ನು ಎಷ್ಟು ಜನ ಪೂಜಿಸುವವರು ಇದ್ದಾರೋ ಅಷ್ಟೇ ಜನ ಟೀಕಿಸುವವರೂ ಇದ್ದಾರೆ. ಇಂತಹ ಸನ್ನಿವೇಶದಲ್ಲಿ ನೆಹರೂ ಅವರೇ ಬರೆದಿದ್ದ ಹಾಗೂ ಅವರ ಕುರಿತು ಬರೆಯಲಾದ who is Bharat Mata? ಎಂಬ ಕೃತಿ ‘ಯಾರು ಭಾರತ ಮಾತೆ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಬಂದಿದೆ.

ADVERTISEMENT

ಪುರುಷೋತ್ತಮ ಅಗರವಾಲ್‌ ಅವರು ಇಂಗ್ಲಿಷ್‌ನಲ್ಲಿ ಸಂಪಾದಿಸಿದ ಕೃತಿಯನ್ನು ಪ್ರೊ. ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನೇತಾರರಾದ ನೆಹರೂ, ‘ಭಾರತದ ಉದ್ದಗಲಕ್ಕೆ ಹರಡಿಕೊಂಡಿರುವ, ಕೋಟಿಗಟ್ಟಲೆ ಜನರೇ ಭಾರತ ಮಾತೆ, ಅವರ ಜಯವೇ ಭಾರತ ಮಾತೆಯ ಜಯ’ ಎಂದೊಮ್ಮೆ ಅಭಿಪ್ರಾಯಪಟ್ಟಿದ್ದರು. ಇಲ್ಲಿನ ಎಲ್ಲ ಬರಹಗಳ ಅಂತಃಸೆಲೆ ಕೂಡ ಅದೇ ಆಗಿದೆ.

ಭಾರತದ ಇತಿಹಾಸ, ಧರ್ಮ, ವಿಜ್ಞಾನ, ಸಂಸ್ಕೃತಿಗಳು ಇಲ್ಲಿನ ಬರಹಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಗಾಗಿವೆ. ನೆಹರೂ ಅವರು ಪ್ರಧಾನಿಯಾಗಿದ್ದಾಗ ಅವರನ್ನುಆರ್‌.ಕೆ. ಕಾರಂಜಿಯಾ ಅವರು ನಡೆಸಿದ ಅಪರೂಪದ ಸಂದರ್ಶನ, ನೆಹರೂ ಕುರಿತು ಮಹಾತ್ಮ ಗಾಂಧಿ ಅವರು ಬರೆದ ಬರಹ, ನೆಹರೂ ತೀರಿಹೋದಾಗ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಅರ್ಪಿಸಿ, ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡಿದ ಭಾಷಣ... ಹೀಗೆ ತುಂಬಾ ವಿಶಿಷ್ಟವಾದ ಲೇಖನಗಳಿಂದ ಕೃತಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಲೇಖಕರೇ ಹೇಳಿರುವಂತೆ ಕಳೆದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನೆಹರೂ ಅವರ ವ್ಯಕ್ತಿತ್ವದ ವಿರುದ್ಧ ಅಪಪ್ರಚಾರ ನಡೆಸಲಾ
ಯಿತು. ಅವರ ವ್ಯಕ್ತಿತ್ವಕ್ಕೆ ಕುಂದು ತಂದು ಭಾರತೀಯ ಮನಸ್ಸುಗಳಲ್ಲಿನ ಅವರ ಅಚ್ಚನ್ನು ತೆಗೆದುಹಾಕುವುದೇ ಈ ಪ್ರಚಾರದ ಉದ್ದೇಶವಾಗಿತ್ತು. ಅದಕ್ಕೆ ಪ್ರತಿಯಾಗಿ ನೆಹರೂ ಅಂದರೆ ಯಾರು ಎಂಬುದನ್ನು ತೋರಿಸಿಕೊಡುವುದು ಈ ಕೃತಿಯ ಉದ್ದೇಶ ಎಂದೂ ಅವರು ಸ್ಪಷ್ಟಪಡಿಸುತ್ತಾರೆ.

ನೆಹರೂ ಅವರ ಭಾರತೀಯ ವ್ಯಕ್ತಿತ್ವವನ್ನೂ ಇಲ್ಲಿನ ಬರಹಗಳು ಸಮರ್ಥವಾಗಿ ಎತ್ತಿ ತೋರುತ್ತವೆ. ಅವರ ಬಗೆಗಿನ ಪೂರ್ವಗ್ರಹಗಳನ್ನು ಹೋಗಲಾಡಿಸುವ ಪ್ರಯತ್ನವನ್ನಾಗಿ ಈ ಕೃತಿಯನ್ನು ನೋಡುವಂತೆ ಪ್ರೇರೇಪಿಸುತ್ತವೆ. ಅನುವಾದ ಸಮರ್ಥವಾಗಿ ಮೂಡಿಬಂದಿದೆಯಾದರೂ ಅಲ್ಲಲ್ಲಿ ಕಾಗುಣಿತ ದೋಷಗಳು ಕಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.