ADVERTISEMENT

ಸೀಳು ತುಟಿ: ನಿಮಗೆಷ್ಟು ಗೊತ್ತು?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:45 IST
Last Updated 22 ಫೆಬ್ರುವರಿ 2019, 19:45 IST
   

ಕಳೆದ ವಾರ ಮಗುವೊಂದು ಸೀಳು ತುಟಿ ಹಾಗೂ ಅಂಗುಳ ಸಮಸ್ಯೆಯನ್ನು ಎದುರಿಸಿದ ಬಗೆಯನ್ನು ಅವರಮ್ಮ ನಿರೂಪಿಸಿದ್ದರು. ಈ ವಾರ ಸೀಳು ತುಟಿ ಹಾಗೂ ಅಂಗುಳವೆಂದರೇನು ಎಂದು ತಿಳಿಯೋಣ.

ಸಾಮಾನ್ಯವಾಗಿ ಇವೆರಡೂ ಜನ್ಮಜಾತ ದೋಷಗಳಾಗಿವೆ. ಮಗು ಹುಟ್ಟುವಾಗಲೇ ಸೀಳು ತುಟಿ ಅಂದರೆ ತುಟಿಯು ಮೂಗಿನಿಂದ ಬೇರ್ಪಡದೆ, ಅಂಟಿಕೊಂಡಂತೆ ಅಥವಾ ಮೂಗಿಗೆ ನುಗ್ಗಿದಂತೆ ಕಾಣಿಸುತ್ತದೆ. ಈ ಸಮಸ್ಯೆ ಇದ್ದವರಿಗೆ ಸೀಳು ಅಂಗುಳ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಅಂದರೆ ಬಾಯೊಳಗೆ ಇರುವ ಸೂರಿನ ಭಾಗ ಸೀಳಿರುತ್ತದೆ. ಇದು ಬಾಯಿಯ ಸ್ವರೂಪವನ್ನೇ ಬದಲಿಸುತ್ತದೆ. ಮೊದಲನೋಟಕ್ಕೆ ಇದು ಕುರೂಪವೆನಿಸಬಹುದು. ಆದರೆ ಆ ಮಗುವಿಗೆ ಹಾಲು ಹೀರಲು, ಊಟ ಮಾಡಲು ಹಾಗೂ ಮಾತಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಸೀಳು ತುಟಿ ಇದ್ದವರಿಗೆಲ್ಲ ಸೀಳು ಅಂಗುಳವಿರಲೇಬೇಕು ಎಂದೇನಿಲ್ಲ. ಕೆಲ ಮಕ್ಕಳಿಗೆ ಮಾತ್ರ ಎರಡೂ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಏನಿದು ಸೀಳು ತುಟಿ?

ADVERTISEMENT

ಸಾಮಾನ್ಯವಾಗಿ ಭ್ರೂಣಾವಸ್ಥೆಯಲ್ಲಿಯೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೀವ ಫಲಿತವಾದ ನಾಲ್ಕನೇ ವಾರದಿಂದ 7ನೇ ವಾರದ ಅವಧಿಯಲ್ಲಿ ದೇಹದ ಟಿಶ್ಯು ಹಾಗೂ ಜೀವಕೋಶಗಳು ತಲೆಯ ಎರಡೂ ಬದಿಯಿಂದ ಬೆಳೆದು ಮುಖದ ನಡುವಿನ ಭಾಗದಲ್ಲಿ ಬಂದು ಸೇರುತ್ತವೆ. ಮುಖದ ಆಕಾರ, ಸ್ವರೂಪ ನಿರೂಪಿತವಾಗುವುದು ಇದೇ ಅವಧಿಯಲ್ಲಿ. ಹೀಗೆ ಮುಖದ ನಡುವೆ ಬಂದು ಸೇರುವಾಗಲೇ ಬಾಯಿ, ತುಟಿಗಳ ರಚನೆಯಾಗುತ್ತದೆ. ಹುಟ್ಟುವ ಅವಧಿಯವರೆಗೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಹುಟ್ಟುವಷ್ಟರಲ್ಲಿ ತುಟಿಗಳು ಕೂಡಿಕೊಳ್ಳದೇ ನಡುವೆ ಬಿರುಕು ಕಾಣಿಸಿಕೊಳ್ಳಬಹುದು. ಆ ಬಿರುಕು ಸಣ್ಣದಾಗಿರಬಹುದು, ಅಥವಾ ಮೂಗಿಗೆ ನುಗ್ಗಿದಂತೆ ಕಾಣಿಸುವಷ್ಟು ಆಳವಾಗಿರಬಹುದು. ಸೀಳು ಒಂದೆಡೆ ಮಾತ್ರ ಕಾಣಿಸಿಕೊಳ್ಳಬಹುದು. ಇಲ್ಲವೇ ಮೂಗಿನ ಎರಡೂ ಹೊರಳೆಗಳಲ್ಲಿಯೂ ಕಾಣಿಸಬಹುದು. ಕೆಲವು ಮಕ್ಕಳಿಗೆ ಮಾತ್ರ ಸೀಳು ತುಟಿಯೊಂದಿಗೆ ಸೀಳು ಅಂಗುಳವೂ ಕಾಣಿಸಿಕೊಳ್ಳಬಹುದು.

ಸೀಳು ಅಂಗುಳವೆಂದರೆ..:

ಬಾಯಿ, ಜೀವಾಂಕುರವಾದ 6ರಿಂದ 9ನೇ ವಾರದ ಅವಧಿಯಲ್ಲಿ ರೂಪುಗೊಳ್ಳುತ್ತದೆ. ಗರ್ಭಾವಸ್ಥೆ ಪೂರ್ಣಗೊಳ್ಳುವ ಹೊತ್ತಿಗೆ ಬಾಯಿ ರಚಿಸುವ ಟಿಶ್ಯೂ ಕೂಡಿಕೊಳ್ಳದಿದ್ದಲ್ಲಿ ಈ ದೋಷ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲ ಮಕ್ಕಳಿಗಂತೂ ಈ ಪ್ರಕ್ರಿಯೆ ಆಗದೇ ಬಾಯಿಯ ಎರಡೂ ಕಡೆ ಸೀಳು ಕಂಡು ಬರುತ್ತದೆ. ಈ ಮಕ್ಕಳಿಗೆ ಮಾತನಾಡುವುದು ಕಷ್ಟವಾಗುತ್ತದೆ. ಕಿವಿ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶ್ರವಣದೋಷ ಕಾಣಿಸಬಹುದು.

(ಮುಂದುವರೆಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.